“ಗೊಂದಲಮಯ ಹೇಳಿಕೆಗಳು-ಪೂರ್ಣ ಪ್ರಮಾಣದ ತನಿಖೆ ಅಗತ್ಯ”

ಸಂಪುಟ: 
10
ಸಂಚಿಕೆ: 
03
Wednesday, 6 January 2016

ಪಠಾಣ್‍ಕೋಟ್ ವೈಮಾನಿಕ ನೆಲೆಯ ಮೇಲೆ ಭಯೋತ್ಪಾದಕ ದಾಳಿ:ಸಿಪಿಐ(ಎಂ) ಖಂಡನೆ

ಪಂಜಾಬಿನ ಪಠಾಣಕೋಟ್‍ನಲ್ಲಿರುವ ಭಾರತೀಯ ವಿಮಾನ ಪಡೆಯ ನೆಲೆಯ ಮೇಲೆ ಜನವರಿ 2ರ ಮುಂಜಾವಿನಲ್ಲಿ ಆರಂಭವಾದ ಭಯೋತ್ಪಾದಕ ದಾಳಿಯನ್ನು 36 ಗಂಟೆಗಳ ಕಾರ್ಯಾಚರಣೆÉಯ ನಂತರ ನಿಗ್ರಹಿಸಲಾಗಿದೆ ಎಂದು ಮಂಗಳವಾರದಂದು ಅಧಿಕೃತವಾಗಿ ಪ್ರಕಟಿಸಲಾಗಿದೆ. ಭಯೋತ್ಪಾದಕರ ವಿರುದ್ಧದ ಈ ಕಾರ್ಯಾಚರಣೆಯಲ್ಲಿ  ಏಳು ಮಂದಿ ರಕ್ಷಣಾ ಮತ್ತು ಭದ್ರತಾ ಸಿಬ್ಬಂದಿ ಅಸು ನೀಗಿದ್ದಾರೆ. ಎಲ್ಲ ಆರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ ಎಂದೂ ತಿಳಿಸಲಾಗಿದೆ. ಈ ಮೊದಲು ಜನವರಿ 2ರ ರಾತ್ರಿಯ ಮೊದಲೇ ಕಾರ್ಯಾಚರಣೆ ಮುಗಿದಿದೆ ಎಂದು ಪ್ರಕಟಿಸಲಾಗಿತ್ತು. ಆದರೆ ಕಾರ್ಯಾಚರಣೆ ನಾಲ್ಕನೇ ದಿನದ ವರೆಗೂ ಮುಂದುವರೆಯಿತು.

ಈ ಭಯೋತ್ಪಾದಕ ದಾಳಿಯನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ ಹಾಗೂ ತಮ್ಮ ಕರ್ತವ್ಯ ನೆರವೇರಿಸುತ್ತ ಪ್ರಾಣಾರ್ಪಣೆ ಮಾಡಿದ ಈ ಧೀರರ ಕುಟುಂಬಗಳಿಗೆ ಅದು ಹಾರ್ದಿಕ ಸಂತಾಪವನ್ನು ವ್ಯಕ್ತಪಡಿಸಿದೆ.

ಪಾಕಿಸ್ತಾನದೊಂದಿಗೆ ಮಾತುಕತೆಗಳನ್ನು ಪುನರಾರಂಭಿಸಿರುವ ನಿರ್ಣಯ ಕೈಗೊಂಡ ಬೆನ್ನ ಹಿಂದೆಯೇ ಈ ದಾಳಿ ಹೊಮ್ಮಿ ಬಂದಿದೆ. ಸಂವಾದದ ಪ್ರಕ್ರಿಯೆಯನ್ನು ಛಿದ್ರಗೊಳಿಸುವುದೇ ಇದರ ಆಶಯ ಎಂಬುದು ಸ್ವಯಂವೇದ್ಯ ಎಂದಿರುವ ಸಿಪಿಐ(ಎಂ) ಇಂತಹ ಛಿದ್ರಕಾರಿಗಳ ಹುನ್ನಾರಗಳನ್ನು ಸೋಲಿಸಬೇಕು, ಕೇಂದ್ರ ಸರಕಾರ ಸಂವಾದದ ಹಾದಿಯಲ್ಲಿ ಮುಂದುವರೆಯಬೇಕು ಎಂದು ಅಭಿಪ್ರಾಯ ಪಟ್ಟಿದೆ.

ಈ ಭಯೋತ್ಪಾದಕ ದಾಳಿಯನ್ನು ನಿರ್ವಹಿಸಿದ ರೀತಿಯ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ. ಈ ದಾಳಿ ಸಂಭವಿಸಬಹುದು ಎಂಬ ಬಗ್ಗೆ ಸಾಕಷ್ಟು ಗುಪ್ತಚರ ಮಾಹಿತಿಗಳನ್ನು ಒದಗಿಸಲಾಗಿತ್ತು, ಎಚ್ಚರವಾಗಿರಲೂ ಹೇಳಲಾಗಿತ್ತು ಎಂದು ತಿಳಿದು ಬಂದಿದೆ. ಆದರೂ ಭಯೋತ್ಪಾದಕ ತಂಡಕ್ಕೆ ವೈಮಾನಿಕ ನೆಲೆಯ ಆವರಣದಲ್ಲಿ ಪ್ರವೇಶಿಸುವುದು ಸಾಧ್ಯವಾಯಿತು. ಭಯೋತ್ಪಾದಕ ದಾಳಿಯನ್ನು ನಿಗ್ರಹಿಸಲು ನಾಲ್ಕು ದಿನಗಳು ಬೇಕಾದವು. ಈ ನಡುವೆ ಉನ್ನತ ಅಧಿಕಾರಸ್ಥರಿಂದ ಗೊಂದಲಕಾರಿ ಹೇಳಿಕೆಗಳು ಪರಿಸ್ತಿತಿಯನ್ನು ಮಸುಕುಗೊಳಿಸಿದವು. ಈ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ಆಗಬೇಕಾಗಿದೆ ಮತ್ತು ಈ ಘಟನೆಯಿಂದ ಪಾಠ ಕಲಿಯಬೇಕಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೋ ಹೇಳಿದೆ.