ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಹೋರಾಡುವ ತೀವ್ರಗೊಳಿಸಲು ಕರೆ

Friday, 1 January 2016

ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ನ ಉತ್ತರ ಕನ್ನಡ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಎಸ್.ಎಫ್.ಐ.ನ ಸಂಸ್ಥಾಪನಾ ದಿನಾಚರಣೆಯನ್ನು ಜಿಲ್ಲೆಯ ಕೆಲವೆಡೆ ಆಚರಿಸಲಾಯಿತು. ಕಾರವಾರದಲ್ಲಿ ನಡೆದ ಕಾರ್ಯಕ್ರಮಕ್ಕೆ ಎಸ್.ಎಫ್.ಐನ ಜಿಲ್ಲಾ ಸಂಚಾಲಕರಾದ ಗಣೇಶ ರಾಠೋಡ ಚಾಲನೆ ನೀಡಿದರು.

“ಶಿಕ್ಷಣಕ್ಕೆ ದೇಶದ ಆದಾಯದಲ್ಲಿ ಹೆಚ್ಚು ಹಣ ಮೀಸಲಿಡಲು ಆಗ್ರಹಿಸಿ, ದೇಶದ ವಿದ್ಯಾರ್ಥಿಗಳ ಧ್ವನಿಯಾಗಿ ದಿನನಿತ್ಯದ ಸಮಸ್ಯೆಗಳ ಬಗೆಹರಿಸಲು ಹೋರಾಟ ನಡೆಸುತ್ತಲೇ ಸ್ವಾತಂತ್ರ್ಯ ಪೂರ್ವ ಆಶೋತ್ತರಗಳನ್ನು ಈಡೇರಿಸಲು ನೈಜ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾಜವಾದಕ್ಕಾಗಿ, ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ಉಳಿವಿಗಾಗಿ ಪಣತೊಟ್ಟಿದೆ. ಈ ದಶಕದಲ್ಲಿ ಶಿಕ್ಷಣವನ್ನು ಡಬ್ಲ.ಟಿ.ಒ.ನ ಷರತ್ತುಗಳಿಗೆ ಒಳಪಡಿಸಲಾಗುತ್ತಿದ್ದು ಸರ್ಕಾರರೇತರ ಶಿಕ್ಷಣ ಸಂಸ್ಥೆಗಳಿಗೆ ಕುಮ್ಮಕ್ಕು ನೀಡಲಾಗುತ್ತಿದೆ. ಹಾಷ್ಟೆಲ್ ವಿದ್ಯಾರ್ಥಿಗಳು ಅಪೌಷ್ಟಿಕತೆಯಿಂದ ಬಳಲುವಂತಾಗಿದ್ದು, ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಎನ್ನುವುದು ದೂರದ ಮಾತಾಗಿದೆ ಎಂದು ಜಿಲ್ಲಾ ಸಂಚಾಲಕರಾದ ಗಣೇಶ ರಾಠೋಡರವರು ಹೇಳಿದರು.

ಎಸ್.ಎಫ್.ಐ ವಿದ್ಯಾರ್ಥಿ ಚಳುವಳಿಯ ಮಾಜಿ ರಾಜ್ಯ ಮುಖಂಡರು ಹಾಗೂ ಸಿಐಟಿಯುನ ಯಮುನಾ ಗಾಂವ್ಕರ್ ಮಾತನಾಡಿ “ವಿದ್ಯಾರ್ಥಿ ಚಳುವಳಿಗೆ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ನಡೆಸುವ ಹೋರಾಟದೊಂದಿಗೆ ದೇಶದ ಜನತೆಯನ್ನು ಕಾಡುವ ಸಾಮಾಜಿಕ ಪ್ರಶ್ನೆಗಳ, ಭ್ರಷ್ಟಾಚಾರದ ವಿರುದ್ಧ ಕೂಡ ಹೋರಾಡುವ ಜವಾಬ್ದಾರಿಯೂ ಇದೆ. ದೇಶದ ತುಂಬಾ ಐಕ್ಯತೆಗೆ ಸವಾಲಾಗಿ ಭಾಷಾಂಧತೆ, ಧರ್ಮಾಂಧತೆ ಬೆಳೆಯುತ್ತಿದೆ. ನಿರುದ್ಯೋಗಿ ಯುವಜನರನ್ನು ಹಲವಾರು ಕುಕೃತ್ಯಕ್ಕೆ ಬಳಸುವುದುದನ್ನು ಕಾಣುತ್ತೇವೆ. ಇಂಥ ಸಂದರ್ಭದಲ್ಲಿ ವಿದ್ಯಾರ್ಥಿ ಸಮುದಾಯ ಎಚ್ಚೆತ್ತ ಪ್ರಜ್ಞೆಯಾಗಬೇಕೆಂದರು.

ಸಿಐಟಿಯು ತಾಲೂಕಾ ಕಾರ್ಯದರ್ಶಿ ಮೋಹಿನಿ ನಮ್ಸೇಕರ್‍ರವರು ಮಹಿಳೆಯರ ಮತ್ತು ಮಕ್ಕಳ ಮೇಲೆ ಎಲ್ಲಾ ರೀತಿಯ ದೌರ್ಜನ್ಯಗಳ ವಿರುದ್ಧವೂ ನೀವು ಧ್ವನಿ ಎತ್ತಿ, ಕಾರ್ಮಿಕರ ಚಳುವಳಿಯ ಬೆಂಬಲವಿದೆ ಎಂದರು. ವಿದ್ಯಾರ್ಥಿನಿಯರ ಉಪಸಮಿತಿ ಮುಖಂಡರಾದ ಸೌಮ್ಯ ಕಾಂಬಳೆ ಮತ್ತು ಶ್ವೇತಾ ಪಿಳ್ಳೈ ಸಾಂದರ್ಭಿಕ ಮಾತನಾಡಿದರು.

ರಾಜಸ್ತಾನದ ಸಿತಾರ್ ಜಿಲ್ಲೆಯಲ್ಲಿ ಜರುಗಲಿರುವ ರಾಷ್ಟ್ರ ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ಹೋಗಲಿರುವ ಸಂಗಾತಿಗಳಿಗೆ ರೈತ ಸಂಘದ ತಾಲೂಕಾ ಕಾರ್ಯದರ್ಶಿ ಶ್ಯಾಮನಾಥ ನಾಯ್ಕ ಅಭಿನಂದಿಸಿದರು. ಪ್ರಾರಂಭದಲ್ಲಿ ಎಸ್.ಎಫ್.ಐ ಧ್ವಜಾರೋಹಣ ನಡೆಸಿ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಹೋರಾಡುವ, ದೇಶದ ಐಕ್ಯತೆ ಸೌಹಾರ್ದತೆಗೆ ದುಡಿಯುವ ಘೋಷಣೆ ಸ್ವೀಕರಿಸಿ ಎಸ್‍ಎಫ್‍ಐ ಸಂಘಟನೆಯ 45ನೇ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ನಡೆಸಿದರು.