ಸರ್ಕಾರಿ ಜಾಗ ಇದೆ-ಬಡವರಿಗೆ ಮನೆ ನಿವೇಶನ ನೀಡಿ

ಸಂಪುಟ: 
10
ಸಂಚಿಕೆ: 
02
Tuesday, 15 December 2015

ನಿವೇಶನ ರಹಿತರಿಗೆ ಮನೆ-ನಿವೇಶನ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ವತಿಯಿಂದ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಬಳ್ಕೂರು, ಕಿರಿಮಂಜೇಶ್ವರ, ನಾವುಂದ, ಮರವಂತೆ, ತ್ರಾಸಿ, ತಲ್ಲೂರು ಗ್ರಾಮಗಳಲ್ಲಿ ಸಮಾವೇಶ ನಡೆಸುವ ಮೂಲಕ ಸರ್ಕಾರವನ್ನು ಒತ್ತಾಯಿಸಿದರು. ಹೋರಾಟದ ಪೂರ್ವಭಾವಿಯಾಗಿ ನಡೆದ ಈ ಸಮಾವೇಶದಲ್ಲಿ ವಿವಿಧ ಗ್ರಾಮಗಳಲ್ಲಿ ಉಪಯೋಗವಾಗದೆ ಇರುವ ಸರ್ಕಾರಿ ಜಾಗವನ್ನು ಸಹ ಗುರುತಿಸಲಾಯಿತು ಮತ್ತು ಖಾಲಿ ಇರುವ ಸರ್ಕಾರಿ ಜಾಗದಲ್ಲಿ ಬಡವರಿಗೆ ನಿವೇಶನ, ಮನೆ ನೀಡಬೇಕೆಂದು ಸಮಾವೇಶ ನಡೆಸುವ ಮೂಲಕ ಆಗ್ರಹಿಸಿಲಾಯಿತು.

ಬಳ್ಕೂರು : ನಿವೇಶನ  ರಹಿತರಿಗೆ ಲಭ್ಯವಿರುವ ಸರಕಾರಿ ಜಮೀನು ಮಂಜೂರು ಮಾಡಲು ಆಗ್ರಹ

“ಬಳ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಜಮೀನು ಸ.ನಂಬ್ರ 196- ವಿಸ್ತೀರ್ಣ 11.00 ಎಕ್ರೆ, ಸ.ನಂಬ್ರ 188/1ಂ ವಿಸ್ತೀರ್ಣ 6.89 ಎಕ್ರೆ, ಸ.ನಂಬ್ರ 56/1ಂ ವಿಸ್ತೀರ್ಣ 5.17 ಎಕ್ರೆ, ಸ.ನಂಬ್ರ 66/2P1 ವಿಸ್ತೀರ್ಣ 6.19 ಎಕ್ರೆ, ಲಭ್ಯವಿರುವುದನ್ನು ಗುರುತಿಸಿ ಬಡ ನಿವೇಶನ ರಹಿತರಿಗೆ ಹಕ್ಕುಪತ್ರ ಮಂಜೂರು ಮಾಡಬೇಕೆಂದು” ತಾಲೂಕು ಕಾರ್ಯದರ್ಶಿ ವೆಂಕಟೇಶ ಕೋಣಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಬಳ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಳ್ಕೂರು ಹಳೇ ಗ್ರಾಮ ಪಂಚಾಯತ್ ಕಛೇರಿ ಬಳಿ ಡಿಸೆಂಬರ್-04, 2015ರಂದು ನಿವೇಶನ ರಹಿತರ ಬೃಹತ್ ಸಮಾವೇಶ ಉದ್ಘಾಟಿಸಿ ವೆಂಕಟೇಶ ಕೋಣಿ ಮಾತನಾಡಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಕೆ. ಶಂಕರ ಸಭೆಯಲ್ಲಿ ಮಾತನಾಡುತ್ತಾ ಕೃಷಿ ಕೂಲಿಕಾರರ ಸಂಘದ ತಾಲೂಕು ಸಮಿತಿ ಹಾಗೂ ನಿವೇಶನ ರಹಿತರ ಹೋರಾಟ ಸಮಿತಿಯ ನೇತೃತ್ವದಲ್ಲಿ ಫೆಬ್ರವರಿ ತಿಂಗಳಲ್ಲಿ ತಾಲೂಕು ತಹಶೀಲ್ದಾರ್ ಕಚೇರಿ ಎದುರು ಜರಗುವ ನಿವೇಶನ ರಹಿತರ ಭೂಮಿ ಹಕ್ಕಿನ ಹೋರಾಟಕ್ಕೆ ಕಾರ್ಮಿಕ ಸಂಘಟನೆ, ಸಿ.ಐ.ಟಿ.ಯು ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಹೇಳಿದರು. ಕೃಷಿ ಕೂಲಿಕಾರರ ಸಂಘದ ಮುಖಂಡರಾದ ಎಚ್. ನರಸಿಂಹ, ರಾಜೀವ ಪಡುಕೋಣೆ, ಸುರೇಶ ಕಲ್ಲಾಗರ ನಾಗರತ್ನ ನಾಡ, ಉಪಸ್ಥಿತರಿದ್ದರು.

ಕಿರಿಮಂಜೇಶ್ವರ : ನಿವೇಶನ ರಹಿತರಿಗೆ ಹಕ್ಕು ಪತ್ರ ನೀಡಬೇಕೆಂದು ಒತ್ತಾಯ

ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿಗಳ ನೇತೃತ್ವದಲ್ಲಿ ಡಿಸೆಂಬರ್-04, 2015ರಂದು ನಾಗೂರು ಶಾಂತೇರಿ ಕಾಮಾಕ್ಷಿ ಸಭಾ ಭವನದಲ್ಲಿ ಬಡ ನಿವೇಶನ ರಹಿತರ ಅರ್ಜಿದಾರರ ಬೃಹತ್ ಸಮಾವೇಶ ಯಶಸ್ವಿಯಾಗಿ ಜರುಗಿತು.

ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಯ ಅಧ್ಯಕ್ಷ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ರಾಜು ದೇವಾಡಿಗ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ “ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತ ಅರ್ಜಿದಾರರ ಅಂತಿಮ ಪಟ್ಟಿ ಮಂಜೂರಾತಿ ಪಡೆಯಲಾಗಿದ್ದು, ಇದೀಗ ಕಂದಾಯ ಇಲಾಖೆ ಸರಕಾರಿ ಜಮೀನು ಗುರುತಿಸಿ ನಿವೇಶನ ರಹಿತರಿಗೆ ಹಕ್ಕುಪತ್ರ ಮಂಜೂರು ಮಾಡಲು ಪ್ರಯತ್ನಿಸಲಾಗುವುದು” ಎಂದು ಹೇಳಿದರು.

ಕೃಷಿ ಕೂಲಿಕಾರರ ಸಂಘದ ತಾಲೂಕು ಕಾರ್ಯದರ್ಶಿ ವೆಂಕಟೇಶ ಕೋಣಿ, ಪ್ರಸ್ತಾವಿಕ ಭಾಷಣ ಮಾಡುತ್ತಾ ಕಿರಿಮಂಜೇಶ್ವರ ಗ್ರಾಮದ ಸರಕಾರಿ ಇಲಾಖೆ ಗುರುತಿಸಿದ ಸ.ನಂಬ್ರ 267 ರಲ್ಲಿ 31 ಎಕ್ರೆ ಸ್ಥಳವಿದ್ದು, ಸದ್ರಿ ಜಾಗದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಅಕೇಶಿಯಾ ಗಿಡ ನೆಡೆಸಲಾಗಿರುವುದನ್ನು ಈ ಕೂಡಲೇ ತೆರವುಗೊಳಿಸಿ, ಬಡನಿವೇಶನ ರಹಿತರಿಗೆ ಭೂಮಿ ಹಕ್ಕುಪತ್ರ ಕೊಡಲು ಕ್ರಮವಹಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು. ಇಲ್ಲವಾದಲ್ಲಿ ನಿವೇಶನ ರಹಿತರನ್ನು ಸಂಘಟಿಸಿ - ಕುಂದಾಪುರ ತಹಶೀಲ್ದಾರ್ ಕಛೇರಿ ಎದುರು ಹಕ್ಕುಪತ್ರ ಕೊಡುವ ಬಗ್ಗೆ ನಿರ್ಣಾಯಕ ಹೋರಾಟ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕೃಷಿ ಕೂಲಿಕಾರರ ಸಂಘದ ಮುಖಂಡರಾದ ಎಚ್. ನರಸಿಂಹ, ಶೀಲಾವತಿ, ನಾಗರತ್ನ ನಾಡ, ಪದ್ಮಾವತಿ ಶೆಟ್ಟಿ, ಕುಶಲ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ ಮತ್ತು ಕೃಷ್ಣ ಉಪಸ್ಥಿತರಿದ್ದರು.  ಸಂತೋಷ ಕೊನೆಯಲ್ಲಿ ವಂದಿಸಿ, ಕಾರ್ಯಕ್ರಮ ನಿರ್ವಹಿಸಿದರು.

ನಾವುಂದ : 2 ತಿಂಗಳೊಳಗೆ ಹಕ್ಕುಪತ್ರ ನೀಡಬೇಕೆಂದು ಒತ್ತಾಯ

ನಾವುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ಸಮಿತಿಗಳ ಆಶ್ರಯದಲ್ಲಿ ಬಡ ನಿವೇಶನ ರಹಿತ ಅರ್ಜಿದಾರರ ಬೃಹತ್ ಸಮಾವೇಶವು ನಾವುಂದ-ಮಸ್ಕಿಯ ಭಜನಾ ಮಂದಿರದ ಬಳಿ ಡಿಸೆಂಬರ್-04, 2015ರಂದು ಜರಗಿತು.

ಹಂಗಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ ಕಲ್ಲಾಗರ-ನಿವೇಶನ ರಹಿತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ ನಾವುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ 423 ಬಡನಿವೇಶನ ರಹಿತ ಅರ್ಜಿದಾರರಿಗೆ ಸರಕಾರಿ ಜಾಗ ಗುರುತಿಸಿ ನಿವೇಶನ ಹಕ್ಕುಪತ್ರ ಮಂಜೂರು ಮಾಡದ ಸರಕಾರದ ಜನವಿರೋದಿ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು. ಮತ್ತು ಮುಂದಿನ 2 ತಿಂಗಳೊಳಗೆ ಬಡ ನಿವೇಶನ ರಹಿತರಿಗೆ ಭೂಮಿ ಹಕ್ಕುಪತ್ರ ಮಂಜೂರು ಮಾಡದಿದ್ದಲ್ಲಿ - ನಿವೇಶನ ರಹಿತ ಅರ್ಜಿದಾರರೆಲ್ಲರನ್ನು ತಾಲೂಕಿನಾದ್ಯಂತ ಸಂಘಟಿಸಿ - ತಾಲೂಕು ತಹಶೀಲ್ದಾರ್ ಕಛೇರಿ ಎದುರು ಹಕ್ಕು ಪತ್ರಕ್ಕಾಗಿ ಒತ್ತಾಯಿಸಿ ಬೃಹತ್ ಪ್ರತಿಭಟನಾ ಸತ್ಯಾಗ್ರಹ ಮಾಡುವುದರ ಮೂಲಕ ನಿರ್ಣಾಯಕ ಹೋರಾಟಕ್ಕೆ ಅಣಿಯಾಗಬೇಕು ಎಂದು ಹೇಳಿದರು.

ಕೃಷಿ ಕೂಲಿಕಾರರ ಸಂಘದ ಕಾರ್ಯದರ್ಶಿ ವೆಂಕಟೇಶ ಕೋಣಿ, ಅಧ್ಯಕ್ಷ ರಾಜೀವ ಪಡುಕೋಣೆ, ಸಭೆಯಲ್ಲಿ ಮಾತನಾಡಿದರು. ನಾಗರತ್ನ ನಾಡ, ಶೀಲಾವತಿ, ಪದ್ಮಾವತಿ ಶೆಟ್ಟಿ, ಕುಶಲ ಮುಂತಾದವರು ಉಪಸ್ಥಿತರಿದ್ದರು.

ಮರವಂತೆ : ನಿವೇಶನದ ಹಕ್ಕುಪತ್ರಕ್ಕಾಗಿ ಸರಕಾರಿ ಜಾಗ ಗುರುತಿಸಲು ಒತ್ತಾಯಿಸಿ ಸಮಾವೇಶ

ಮರವಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಲಾಡ್ಯರು, ಶ್ರೀಮಂತರು, ರಾಜಕೀಯ ಧುರೀಣ ಸ್ಥಾಪಿತ ಹಿತಾಶಕ್ತಿಗಳು ಸರಕಾರಿ ಜಾಗವನ್ನು ಅನಧೀಕೃತವಾಗಿ ಅತಿಕ್ರಮಿಸಿ, ಅಕ್ರಮವಾಗಿ ಸ್ಥಳ ಸ್ವಾಧೀನತೆ ಹೊಂದಿರುವುದನ್ನು ಈ ಕೂಡಲೇ ತೆರವುಗೊಳಿಸಿ-ಬಡತನ ರಹಿತರಿಗೆ ಮಂಜೂರು ಮಾಡಲು ಕಂದಾಯ ಇಲಾಖೆ ಕ್ರಮವಹಿಸಬೇಕು ಎಂದು ಮರವಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿ ಅಧ್ಯಕ್ಷ ಮನ್ಸೂರ್ ಇಬ್ರಾಹಿಂ - ಸರಕಾರವನ್ನು ಒತ್ತಾಯಿಸಿದರು.

ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ಮತ್ತು ಮರವಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಆಶ್ರಯದಲ್ಲಿ ಡಿಸೆಂಬರ್- 05, 2015ರಂದು ಮರವಂತೆ ಸಾಧನಾ ಸಭಾಭವನದಲ್ಲಿ ಜರಗಿದ ನಿವೇಶನ ರಹಿತ ಅರ್ಜಿದಾರರ ಬೃಹತ್ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿಐಟಿಯು ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಟ ಶೆಟ್ಟಿ, ನಿವೇಶನ ರಹಿತರ “ಭೂಮಿ ಹಕ್ಕಿನ” ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿ ಮಾತನಾಡಿದರು. ಕೃಷಿ ಕೂಲಿಕಾರರ ಸಂಘದ ಮುಖಂಡರಾದ ರಾಜೀವ ಪಡುಕೋಣೆ, ಸುರೇಶ ಕಲ್ಲಾಗರ, ವೆಂಕಟೇಶ ಕೋಣಿ, ಶೇಖರ ಮರವಂತೆ ಗ್ರೇಶನ್‍ಕ್ರಾಸ್ತ, ಸದಾನಂದ ಪೂಜಾರಿ, ಬೇಬಿ ಗೌರಿಕೆರೆ ಮನೆ, ಶ್ಯಾಮಲ, ಸುಮತಿ, ಲಲಿತ ನಾಗರತ್ನ ನಾಡ, ಪದ್ಮಾವತಿ ಶೆಟ್ಟಿ, ಕುಶಲ, ಶೀಲಾವತಿ ಉಪಸ್ಥಿತರಿದ್ದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಮರವಂತೆ ಗ್ರಾಮ ಸಮಿತಿ ಹಾಗೂ ನಿವೇಶನ ರಹಿತರ ಹೋರಾಟ ಸಮಿತಿ ಕಾರ್ಯದರ್ಶಿ ವೆಂಕಟೇಶ್ ತೋಳಾರ್ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ಸಭೆಗೆ ವಂದಿಸಿದರು.

ತ್ರಾಸಿ : ಸರಕಾರಿ ಜಾಗ ಗುರುತಿಸಿ ಹಕ್ಕು ಪತ್ರಕ್ಕೆ ಒತ್ತಾಯಿಸಿ- ನಿವೇಶನ ರಹಿತರ ಸಮಾವೇಶ

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ಸಮಿತಿ ಹಾಗೂ ತ್ರಾಸಿ/ಹೊಸಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿಗಳ ಆಶ್ರಯದಲ್ಲಿ ನಿವೇಶನ ರಹಿತರ ಬೃಹತ್ ಸಮಾವೇಶವು ಡಿಸೆಂಬರ್-06, 2015ರಂದು ತ್ರಾಸಿ ಪ್ರವಾಸಿ ಮಂದಿರದ ವಠಾರದಲ್ಲಿ ಯಶಸ್ವಿಯಾಗಿ ಜರಗಿತು.

ಬಡ ನಿವೇಶನ ರಹಿತ ಅರ್ಜಿದಾರರ ಬೃಹತ್ ಸಮಾವೇಶವನ್ನು ತ್ರಾಸಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರೆನ್ಸಮ್ ಪಿರೇರಾ ಉದ್ಘಾಟಿಸಿ ಮಾತನಾಡುತ್ತಾ ತ್ರಾಸಿ/ ಹೊಸಾಡು ಗ್ರಾಮಗಳಲ್ಲಿ - ಸ್ವಂತ ಮನೆ, ಭೂಮಿ ಇಲ್ಲದ, ಬಾಡಿಗೆ ಮನೆಯಿರುವ, ಒಂದೇ ಮನೆಯ ಸೂರಿನಡಿಯಲ್ಲಿ 2-3 ಕುಟುಂಬ ಅನಿವಾರ್ಯ ಪರಿಸ್ಥಿತಿಯಲ್ಲಿ ವಾಸವಾಗಿರುವ ಬಡವರಿಗೆ ತ್ರಾಸಿ/ ಹೊಸಾಡು ಗ್ರಾಮಗಳಲ್ಲಿ ಸರಕಾರಿ ಸ್ಥಳ ಸ.ನಂಬ್ರ 112 ರಲ್ಲಿ ವಿಸ್ತೀರ್ಣ ಸುಮಾರು 20 ಎಕ್ರೆ ಹಾಗೂ ಸ.ನಂಬ್ರ 120/ಪಿ1 ವಿಸ್ತೀರ್ಣ 21.92 ಎಕ್ರೆಗಳನ್ನು ಗುರುತಿಸಿ ಬಡ ನಿವೇಶನ ರಹಿತರಿಗೆ ಮಂಜೂರು ಮಾಡುವುದಕ್ಕೆ ಸರಕಾರವನ್ನು ಒತ್ತಾಯಿಸುವುದಕ್ಕಾಗಿ ಪೆಬ್ರವರಿ ತಿಂಗಳಲ್ಲಿ ಕುಂದಾಪುರ ತಹಶೀಲ್ದಾರ್ ಕಛೇರಿ ಎದುರು ಜರಗುವ ನಿವೇಶನ ರಹಿತರ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಯಶಸ್ವಿಗೊಳಿಸಲು ರೆನ್ಸಮ್ಮಪಿರೇರಾ ಕರೆ ನೀಡಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಟ ಶೆಟ್ಟಿ- ನಿವೇಶನ ರಹಿತರ “ಭೂಮಿ ಹಕ್ಕಿನ” ಹೋರಾಟಕ್ಕೆ ಕಾರ್ಮಿಕ ಸಂಘಟನೆಗಳ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ಕೃಷಿ ಕೂಲಿಕಾರರ ಸಂಘದ ಮುಖಂಡರಾದ ಕೆ. ಶಂಕರ, ರಾಜೀವ ಪಡುಕೋಣೆ, ನಾಗರತ್ನ ನಾಡ, ಪದ್ಮಾವತಿ ಶೆಟ್ಟಿ, ಕುಶಲ, ಉಪಸ್ಥಿತರಿದ್ದರು. ಕೃಷಿ ಕೂಲಿಕಾರರ ಸಂಘದ ಕಾರ್ಯದರ್ಶಿ ವೆಂಟೇಶ ಕೋಣಿ ಪ್ರಸ್ತಾವಿಕ ಭಾಷಣ ಮಾಡಿದರು- ಹಾಗೂ ಕಾರ್ಯಕ್ರಮ ನಿರೂಪಿಸಿದರು.

ತಲ್ಲೂರು : ಗುರುತಿಸಿರುವ ಸರಕಾರಿ ಜಾಗ-ನಿವೇಶನ ರಹಿತರಿಗೆ ಮಂಜೂರು ಮಾಡಲು ಒತ್ತಾಯ

ಕುಂದಾಪುರ ತಾಲೂಕು ಪಂಚಾಯತ್ ವಸತಿ ಮತ್ತು ನಿವೇಶನ ಪ್ರಗತಿ ಪರಿಶೀಲನಾ ಸಭೆಯ ಅನುಪಾಲನಾ ವರದಿಯ ಪ್ರಕಾರ ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನಕ್ಕೆ ಅರ್ಹವಾದ ಜಾಗ ಗುರುತಿಸಿರುವುದನ್ನು ಈ ಕೂಡಲೇ ನಿವೇಶನ ರಹಿತರಿಗೆ ಮಂಜೂರು ಮಾಡಬೇಕು ಎಂದು ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ತಾಲೂಕು ಕಾರ್ಯದರ್ಶಿ ವೆಂಕಟೇಶ ಕೋಣಿ ಸರಕಾರವನ್ನು ಆಗ್ರಹಿಸಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ಹಾಗೂ ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿ ಆಶ್ರಯದಲ್ಲಿ ಡಿಸೆಂಬರ್-09, 2015ರಂದು ಮೂರ್ತೆದಾರರ ಸಭಾಭವನದಲ್ಲಿ ಜರುಗಿದ ನಿವೇಶನ ರಹಿತರ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು.

ಸಿಐಟಿಯು ತಾಲೂಕು ಅಧ್ಯಕ್ಷ ಎಚ್. ನರಸಿಂಹ ನಿವೇಶನ ರಹಿತರ ಸಮಾವೇಶದಲ್ಲಿ ಮಾತನಾಡುತ್ತಾ ಪೆಬ್ರವರಿ ತಿಂಗಳಲ್ಲಿ ಕುಂದಾಪುರ ತಹಶೀಲ್ದಾರ ಕಛೇರಿ ಎದುರು ಜರಗುವ “ಭೂಮಿ ಹಕ್ಕಿನ” ಹೋರಾಟಕ್ಕೆ ಕಾರ್ಮಿಕ ಸಂಘ ಸಿಐಟಿಯುನಿಂದ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಕೃಷಿ ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷ ರಾಜೀವ ಪಡುಕೋಣೆ, ಮಹಾಬಲ ವಡೇರ ಹೋಬಳಿ, ಚಂದ್ರ ಉಪ್ಪಿನಕುದ್ರು, ನಾಗರತ್ನ ನಾಡಾ, ಪದ್ಮಾವತಿ ಶೆಟ್ಟಿ, ಕುಶಲ, ಮತ್ತು ಮಾರ್ಕೊಡ ಮುಂತಾದವರು ಉಪಸ್ಥಿತರಿದ್ದು, ತಲ್ಲೂರು ಗ್ರಾಮ ಸಮಿತಿ ಅಧ್ಯಕ್ಷ ನಲ್ಲಿಕಟ್ಟೆ ಲಕ್ಷ್ಮಣ ಸಭೆಯ ಅಧ್ಯಕ್ಷತೆ ವಹಿಸಿದ್ದರು.

 

ವರದಿ : ವೆಂಕಟೇಶ ಕೋಣಿ