ಜಿಎಸ್‍ಟಿ ನೆನೆಗುದಿಗೆ ಬಿಜೆಪಿಯೇ ಕಾರಣ

ಸಂಪುಟ: 
10
ಸಂಚಿಕೆ: 
01
Sunday, 27 December 2015

ದೇಶದ ಆರ್ಥಿಕ್ಕೆ , ಆಮೂಲಕ ಜನತೆಗೆ ಸಮೃದ್ಧಿ ತರಬಲ್ಲ ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್‍ಟಿ) ಮಸೂದೆಯನ್ನು ಕಾಯ್ದೆಯಾಗಿ ಮಾಡಲು ಪ್ರತಿಪಕ್ಷಗಳು ಬಿಡುತ್ತಿಲ್ಲ ಎಂದು ಮೋದಿ ಸರಕಾರದ ಹಣಕಾಸು ಮಂತ್ರಿಗಳು ದಿನ ಬೆಳಗಾದರೆ ದೂಷಿಸುತ್ತಿರುತ್ತಾರೆ. ಆದರೆ ವಾಸ್ತವವಾಗಿ ಈಗಲೂ ಇದಕ್ಕೆ ಮೋದಿ ಸರಕಾರವೇ ಕಾರಣ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಹೇಳಿದ್ದಾರೆ.

ಸುಮಾರು ಒಂದು ದಶಕದ ಹಿಂದೆ ಮನಮೋಹನ್‍ಸಿಂಗ್ ನೇತೃತ್ವದ ಸರಕಾರ ಈ ಮಸೂದೆಯನ್ನು ಮಂಡಿಸಿತ್ತು. ಮೋದಿ ಸರಕಾರ ಬರುವ ವರೆಗೂ ಅದು ಕಾಯ್ದೆಯಾಗಿರದಿದ್ದರೆ ಅದಕ್ಕೆ ಬಿಜೆಪಿಯೂ ಪ್ರಮುಖ ಕಾರಣ. ಆಗ ಮೋದಿ ನೇತೃತ್ವದಲ್ಲಿದ್ದ  ಗುಜರಾತ್ ಸರಕಾರವೂ ಸೇರಿದಂತೆ ಬಿಜೆಪಿ ನೇತೃತ್ವದ ಸರಕಾರಗಳು ಇದನ್ನು ವಿರೋಧಿಸಿದ್ದವು. ಈಗ ಅಧಿಕಾರಕ್ಕೆ ಬಂದ ಮೇಲೆ ಅದರ ನಿಲುವು ಸಂಪೂರ್ಣ ಬದಲಾಗಿದೆ. ಏಕಿರಬಹುದು?

ಆ ಮಸೂದೆಯಲ್ಲಿ ಇದಕ್ಕೆ ಕಾರಣವೂ ಇತ್ತು. ವ್ಯಾಟ್(ಮೌಲ್ಯವರ್ಧಿತ) ತೆರಿಗೆ ಬಂದು ರಾಜ್ಯಗಳ ಆದಾಯದಲ್ಲಿ ಗಮನಾರ್ಹ ಕಡಿತವಾಗಿತ್ತು. ಈ ಜಿಎಸ್‍ಟಿï ಬಂದ ಮೇಲೆ ರಾಜ್ಯ ಸರಕಾರಗಳಿಗೆ ಇದ್ದಬದ್ದ ತೆರಿಗೆ ಆದಾಯವೂ ಇಲ್ಲದಂತಾಗುತ್ತದೆ. ಅವು ಕೇಂದ್ರದ ಉದಾರ ದಾನಕ್ಕೆ ಕೈಯೊಡ್ಡಿ ನಿಲ್ಲುವಂತಹ ಪರಿಸ್ಥಿತಿ ಉಂಟಾಗುತ್ತದೆ. ಇದನ್ನು ಮೋದಿ ಸರಕಾರ ಬದಲಿಸ ಬಯಸುತ್ತಿದೆಯೇ? ಅದಕ್ಕೆ ಮೋದಿ ಸರಕಾರದ ಬಳಿ ಏನಾದರೂ ಕ್ರಮಗಳಿವೆಯೇ? ಈ ಬಗ್ಗೆ ಮೋದಿ ಸರಕಾರ ಏನನ್ನೂ ಹೇಳುತ್ತಿಲ್ಲ. ರಾಜ್ಯ ಸರಕಾರಗಳ ಈ ಆತಂಕವನ್ನು ನಿವಾರಿಸಲು ಒಂದು ಸರ್ವಪಕ್ಷ ಸಭೆ ಕರೆದು ಚರ್ಚಿಸಿ ಎಂದು ಸಿಪಿಐ(ಎಂ) ಮತ್ತು ಎಡಪಕ್ಷಗಳು ಆಗ್ರಹಿಸುತ್ತ ಬಂದಿವೆ. ಇದೊಂದು ಗಂಭೀರ ಸಂಗತಿ, ಇದನ್ನು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತುಕತೆಯಿಂದ ಒಮ್ಮತಕ್ಕೆ ಬರಲು ಸಾಧ್ಯವಿಲ್ಲ. ಆದರೆ ಸದಾ ಜಿಎಸ್‍ಟಿ ಮಂತ್ರ ಜಪಿಸುವ ಸರಕಾರ ಅಂತಹ ಒಂದು ಸಭೆಯನ್ನು ಕರೆಯಲು ಹಿಂದೇಟು ಹಾಕುತ್ತಿದೆ, ಆಗಿನ ಪಶ್ಚಿಮ ಬಂಗಾಳದ ಎಡರಂಗ ಸರಕಾರದ ಹಣಕಾಸು ಮಂತ್ರಿ ಅಶೀಮ್ ದಾಸ್‍ಗುಪ್ತ ಅಧ್ಯಕ್ಷರಾಗಿದ್ದ ಸಮಿತಿ ಕೆಲವು ಶಿಫಾರಸುಗಳನ್ನು ಕೊಟ್ಟಿತು, ಅವುಗಳ ಗತಿಯೇನಾಗಿದೆ ಎಂದೂ ಸರಕಾರ ಹೇಳುತ್ತಿಲ್ಲ.

ಪ್ರಸಕ್ತ ಅಧಿವೇಶನ ಕೊನೆಗೊಳ್ಳುತ್ತಿದ್ದು ಈ ಅಧಿವೇಶನದಲ್ಲಿ ಅದನ್ನು ಪಾಸು ಮಾಡಿಕೊಳ್ಳಬೇಕೆಂಬ ಸರಕಾರದ  ಬಯಕೆ ಈಡೇರುವ ಲಕ್ಷಣಗಳಿಲ್ಲ. ಸ್ವತಃ ಸರಕಾರದ ಒಂದು ವಿಭಾಗವೇ ಇದಕ್ಕೆ ವಿರುದ್ಧವಾಗಿದೆ ಎಂದು ಹೇಳಲಾಗುತ್ತಿದೆ. ಅಂದರೆ ಸರಕಾರವೇ ಇದು ಕಾಯ್ದೆಯಾಗದಂತೆ ಮುತುವರ್ಜಿ ವಹಿಸಿದಂತೆ ಕಾಣುತ್ತದೆ, ಸರಕಾರದ ಕ್ರಮಗಳೇ ಅದು ಪಾಸಾಗದಂತೆ ಮಾಡುತ್ತಿವೆ ಎಂದು ಸೀತಾರಾಂ ಯೆಚುರಿ ಸಂದೇಹ ವ್ಯಕ್ತಪಡಿಸಿದ್ದಾರೆ.