ಡಬ್ಲ್ಯೂಟಿಓ ನೈರೋಬಿ ಸಭೆಯಲ್ಲಿ ಭಾರತದ ಹಿತಾಸಕ್ತಿ ಬಲಿ

ಸಂಪುಟ: 
10
ಸಂಚಿಕೆ: 
01
Sunday, 27 December 2015

ನೈರೋಬಿಯಲ್ಲಿ ನಡೆದ ವಿಶ್ವ ವ್ಯಾಪಾರ ಸಂಘಟನೆ-ಡಬ್ಲ್ಯುಟಿಒದ 10ನೇ ಮಂತ್ರಿಮಟ್ಟದ ಸಭೆ ಭಾರತದ ಮಟ್ಟಿಗೆ ನಿರಾಶಾದಾಯಕ, ಮಾತ್ರವಲ್ಲ, ಒಂದು ಹಿನ್ನಡೆ ಕೂಡ, ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶಕ್ಕೆ ಸಂಪೂರ್ಣವಾಗಿ ಕೈಕೊಟ್ಟಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಆಹಾರ ಭದ್ರತೆ ಕೋಟ್ಯಂತರ ಭಾರತೀಯರ ಹಸಿವಿನ ಅಗತ್ಯಗಳನ್ನು ಪೂರೈಸಲು ಅತ್ಯಗತ್ಯ. ಸಾರ್ವಜನಿಕ ದಾಸ್ತಾನು ಕಾರ್ಯಕ್ರಮಗಳು ಇದರ ಜೀವಾಳ. ಈ ಪ್ರಶ್ನೆಯ ಮೇಲೆ 162 ದೇಶಗಳು ಭಾಗವಹಿಸುವ ಈ ಸಭೆಯಲ್ಲಿ ಒಂದು ಪರಿಹಾರ ಸಿಗಬಹುದು ಎಂಬ ನಿರೀಕ್ಷೆಯೊಂದಿಗೆ ಭಾರತ ಈ ಮಾತುಕತೆಗಳಿಗೆ ಹೋಗಿತ್ತು. ಸಾಕಷ್ಟು ಸಂಪನ್ಮೂಲಗಳಿಲ್ಲದ, ಕಡಿಮೆ ಆದಾಯದ ಭಾರತದ ರೈತರನ್ನು ಮುಂದುವರೆದ ದೇಶಗಳ ಅತ್ಯಂತ ಹೆಚ್ಚು ಸಬ್ಸಿಡಿ ಪಡೆದ ಕೃಷಿ ಉತ್ಪನ್ನಗಳ ವ್ಯಾಪಕ ಆಮದಿನಿಂದ ರಕ್ಷಿಸಲು ಸುಂಕಪಟ್ಟಿಗಳ ಒಂದು ವಿಶೇಷ ರಕ್ಷಕ ವ್ಯವಸ್ಥೆಯ ಬಗ್ಗೆ ಪರಿಣಾಮಕಾರಿಯಾದ ಮತ್ತು ಪಾರದರ್ಶಕವಾದ ಒಪ್ಪಂದದ ಕರಡನ್ನು ಭಾರತ ಮುಂದಿಟ್ಟಿತ್ತು. ಇಂಡೋನೇಸ್ಯ ನೇತೃತ್ವದ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮೈತ್ರಿಕೂಟವಾದ ಜಿ-33 ಜತೆಗೂಡಿ ಇದನ್ನು ಮಂಡಿಸಲಾಗಿತ್ತು.  ಆದರೆ ಇ ಎರಡೂ ವಿಷಯಗಳಲ್ಲಿ ಭಾರತದ ಹಿತಗಳನ್ನು ರಕ್ಷಿಸುವ ಯಾವುದೇ ಭರವಸೆಯನ್ನು ಪಡೆಯುವುದರಲ್ಲಿ ಬಿಜೆಪಿ ಸರಕಾರ ಶೋಚನೀಯವಾಗಿ ಶರಣಾಗಿದೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.

ಅಲ್ಲದೆ  ದೋಹಾ ಅಭಿವೃದ್ಧಿ ಅಜೆಂಡಾದಲ್ಲಿ ಅಭಿವೃದ್ಧಿ ಹೊಂದುತ್ತಿರುವ  ದೇಶಗಳ ಹಿತ ಕಾಯುವ ಬಹಳೇನೂ ಅಂಶಗಳು ಇಲ್ಲದಿದ್ದರೂ, ರೈತರಿಗೆ ಸಬ್ಸಿಡಿಗಳನ್ನು ಕೊಡುವ ಬಗ್ಗೆ ಅಭಿವೃದ್ಧಿ ಹೊಂದಿರುವ ಮತ್ತು ಹೊಂದುತ್ತಿರುವ ದೇಶಗಳ ನಡುವೆ ಸಾಮ್ಯತೆ ತರುವಂತೆ ಮಾಡಬಹುದಾದ ಕೆಲವು ಅಂಶಗಳು ಇದ್ದವು. ಅವನ್ನೆಲ್ಲ ಈಗ ಬದಿಗೊತ್ತಿದಂತೆಯೇ ಆಗಿದೆ. ಸದ್ಯಕ್ಕೆ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ದೇಶಗಳು, ಭಾರತದಂತೆ ಕನಿಷ್ಟ ಬೆಂಬಲ ಬೆಲೆ ಎಂಬ ಬೆಲೆ ನಿಗದಿ ವ್ಯವಸ್ಥೆಯ ಮೂಲಕ ತಮ್ಮ ರೈತರಿಗೆ ಸಬ್ಸಿಡಿಗಳನ್ನು ಕೊಡದೆ, ನೇರವಾಗಿಯೇ ನಗದು ಸೌಲಭ್ಯಗಳು ಮತ್ತು ವರ್ಗಾವಣೆಗಳ ಮೂಲಕ ಭಾರೀ ಪ್ರಮಾಣದ ಸಬ್ಸಿಡಿಗಳನ್ನು ಕೊಡುತ್ತಿವೆ. ಬೆಲೆಗಳಿಗೆ ಸಂಬಂಧಪಟ್ಟ ಯಾವುದೇ ಸಬ್ಸಿಡಿಯನ್ನು ತೆಗೆದು ಹಾಕಬೇಕು, ಸದ್ಯಕ್ಕೆ ಅದರಲ್ಲಿ ಕಡಿತವನ್ನಾದರೂ ಮಾಡಬೇಕು ಎಂದು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಆದರೆ ಅತ್ತ ಅಮೆರಿಕಾ ತನ್ನ ರೈತರಿಗೆ 2014ರಲ್ಲಿ 140 ಬಿಲಿಯ(14000 ಕೋಟಿ) ಡಾಲರುಗಳಷ್ಟು ಸಬ್ಸಿಡಿಗಳನ್ನು ಕೊಟ್ಟಿದೆ. ಈಗ ಅವರು ಇಂತಹ ವಿಷಯಗಳ ಬಗ್ಗೆ ಚರ್ಚೆಯೇ ನಡೆಯದಂತೆ ಮಾಡುವ ಹವಣಿಕೆಯಲ್ಲಿ ಇರುವಂತೆ ಕಾಣುತ್ತದೆ.

ಹಿಂದಿನ ಯುಪಿಎ ಸರಕಾರ 2005ರ ಮಂತ್ರಿಗಳ ಮಟ್ಟದ ಸಭೆಯಲ್ಲಿ ಭಾರತದ ಹಿತಗಳನ್ನು ಬಿಟ್ಟುಕೊಟ್ಟಿತ್ತು. ಈ ಬಿಜೆಪಿ ಸರಕಾರ ದೋಹಾ ಅಭಿವೃದ್ಧಿ ಕಾರ್ಯಸೂಚಿಯ ಬಗ್ಗೆ ಪ್ರಸ್ತಾಪವನ್ನೆಲ್ಲ ಕಿತ್ತು ಹಾಕಿ ಅಂತಹ ಹಾಂಕಾಂಗ್ ಸಭೆಯ ಘೋಷಣೆಯ ಬಗ್ಗೆಯಷ್ಟೇ ಮಾತಾಡಿ ಬಹುರಾಷ್ಟ್ರೀಯ ಕಂಪನಿಗಳ ಲಾಭಗಳನ್ನು ಗರಿಷ್ಟ ಮಟ್ಟಕ್ಕೇರಿಸಿಕೊಳ್ಳುವ ಬಯಕೆಗಳಿಗೆ ಭಾರತದ ಹಿತಗಳನ್ನು ಒಪ್ಪಿಸಿ ಬಿಟ್ಟಿದೆ. ಹಿಂದೆ 1996ರಲ್ಲಿ ಸಿಂಗಾಪುರದ ಮಂತ್ರಿಗಳ ಮಟ್ಟದ ಶೃಂಗ ಸಭೆಯಲ್ಲಿ ಭಾರತದ ಒತ್ತಡದಿಂದಾಗಿ (ಆಗ ಸಂಯುಕ್ತ ರಂಗ ಸರಕಾರ ಇತ್ತು) ಹೂಡಿಕೆ ಕುರಿತ ಬಹುಪಕ್ಷೀಯ ಒಪ್ಪಂದವನ್ನು ಕೈಬಿಡಲಾಗಿತ್ತು. ಈಗ ಅದನ್ನು ಮತ್ತೆ ತರುವ ಅಪಾಯವೂ ಇದೆ ಎಂದು ಸಿಪಿಐ(ಎಂ) ಹೇಳಿದೆ.

ಬಿಜೆಪಿ ಸರಕಾರ ಅಮೆರಿಕಾದ ಒತ್ತಡಗಳಿಗೆ ಮತ್ತು ಅಭಿವೃದ್ಧಿ ಹೊಂದಿರುವ ದೇಶಗಳ ಹಿತಗಳಿಗೆ ಶರಣಾಗಿದೆ. ನಮ್ಮ ಜನಗಳ ಬದುಕು ಮತ್ತು ಜೀವನಾಧಾರಗಳು ಇದಕ್ಕೆ ಬೆಲೆ ತೆರಬೇಕಾಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದಿರುವ ಸಿಪಿಐ(ಎಂ) ಈ ಬಿಜೆಪಿ ಸರಕಾರ ಅಮೆರಿಕನ್ ಒತ್ತಡಗಳಿಗೆ ಶರಣಾಗಿರುವುದರ ವಿರುದ್ಧ ವ್ಯಾಪಕ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಜನತೆಗೆ ಕರೆ ನೀಡಿದೆ.