ಭಾರತವನ್ನು ದೋಷಿಯಾಗಿಸುವ ಪ್ಯಾರೀಸ್ ಒಪ್ಪಂದ

ಸಂಪುಟ: 
10
ಸಂಚಿಕೆ: 
01
Sunday, 27 December 2015

ಹವಾಮಾನ ಬದಲಾವಣೆಯ ಪ್ರಶ್ನೆ:
ಪ್ಯಾರಿಸ್ ಒಪ್ಪಂದ ಅತ್ಯಂತ ದೋಷಪೂರಿತ

ಪ್ರಧಾನ ಮಂತ್ರಿಗಳು ಪ್ಯಾರಿಸ್ ಹವಾಮಾನ ಒಪ್ಪಂದವನ್ನು ಒಂದು ಮಹಾ ಯಶಸ್ಸು ಎಂದು ಹಾಡಿ ಹೊಗಳಿದ್ದಾರೆ. ಡಿಸೆಂಬರ್ 16ರಂದು ಲೋಕಸಭೆಯಲ್ಲಿ ಪರಿಸರ ಮಂತ್ರಿಗಳು ಪ್ಯಾರಿಸ್‍ನಲ್ಲಿ ವಿಭಿನ್ನ ಮಟ್ಟದ ಹೊಣೆಗಾರಿಕೆ ಮತ್ತು ಸಮತ್ವ ಗಳಿಸುವಲ್ಲಿ ಭಾರತ ಸರಕಾರಕ್ಕೆ ಯಶಸ್ಸು ದೊರಕಿದೆ ಎಂದು ಹೇಳಿಕೊಂಡಿದ್ದಾರೆ. ಇದು ಅತ್ಯಂತ ಖೇದದ ಸಂಗತಿ, ಏಕೆಂದರೆ ಪ್ಯಾರಿಸ್ ಒಪ್ಪಂದ ವಾಯುಮಾಲಿನ್ಯ ಉಂಟು ಮಾಡುವ ಉತ್ಸರ್ಜನೆಗಳನ್ನು ಸುರಕ್ಷಿತ ಮಟ್ಟಗಳಿಗೆ ಇಳಿಸುವಲ್ಲಿಯೂ ಮತ್ತು ಪ್ರಸ್ತಾವಿತ ಅಂತರ್ರಾಷ್ಟ್ರೀಯ ಉತ್ಸರ್ಜನೆಯ ಹತೋಟಿ ವ್ಯವಸ್ಥೆಯಲ್ಲೂ ಅತ್ಯಂತ ದೋಷಪೂರಿತವಾಗಿದೆ. ಈ ಹಿಂದೆ ಅಮೆರಿಕಾದಂತಹ ಮುಂದುವರೆದ ದೇಶಗಳು ಮಾಡಿರುವ ಪರಿಸರ ಲೂಟಿಯನ್ನು ಉಪೇಕ್ಷಿಸಿ, ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳೇ ಹವಾಮಾನ ಬದಲಾವಣೆಯ ಸಮಸ್ಯೆ ಬಿಗಡಾಯಿಸುತ್ತಿರುವ ಪ್ರಮುಖ ಅಪರಾಧಿಗಳಾಗಿ ಕಾಣುವಂತೆ ಮಾಡಿದೆ, ಇದಕ್ಕೆ ಮುಂಬರುವ ದಿನಗಳಲ್ಲಿ ಭಾರತ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಸಿಪಿಐ(ಎಂ) ಎಚ್ಚರಿಸಿದೆ.

ಹವಾಮಾನ ಬದಲಾವಣೆಯ ಸಮಸ್ಯೆ ಇಡೀ ಮಾನವಕುಲಕ್ಕೆ ಬೆದರಿಕೆ ಒಡ್ಡಿರುವ ಜಾಗತಿಕ ಸಮಸ್ಯೆ. ಇದನ್ನು ಎದುರಿಸಲು ಎಲ್ಲ ದೇಶಗಳನ್ನು ಒಟ್ಟಿಗೆ ತರುವ ಒಂದು ಅಂತರ್ರಾಷ್ಟ್ರೀಯ ಒಪ್ಪಂದಕ್ಕಾಗಿ ಜಗತ್ತು ಹಲವು ವರ್ಷಗಳಿಂದ ಕಾತುರದಿಂದ ಕಾಯುತ್ತಿತ್ತು. ಆದರೆ ಕಳೆದ ವಾರ ಪ್ಯಾರಿಸ್‍ನಲ್ಲಿ ಆದ ಒಪ್ಪಂದ ಇದನ್ನು ನ್ಯಾಯಯುತವಾಗಿ ಎದುರಿಸಿಲ್ಲ.

ಇದರಲ್ಲಿ ವಿಶ್ವ ಸಂಸ್ಥೆ ಹವಾಮಾನ ಬದಲಾವಣೆ ಚೌಕಟ್ಟು ಸಮಾವೇಶ(ಯುಎನ್‍ಎಫ್‍ಸಿಸಿಸಿ) ಒಪ್ಪಿಕೊಂಡಿರುವ ಅಭಿವೃದ್ಧಿಶೀಲ ದೇಶಗಳು ಮತ್ತು ಅಭಿವೃದ್ಧಿ ಹೊಂದಿದ ದೇಶಗಳ ನಡುವೆ “ಸಾಮಾನ್ಯ, ಆದರೆ ವಿಭಿನ್ನೀಕರಿಸಿದ ಹೊಣೆಗಾರಿಕೆ”(ಸಿಬಿಡಿಆರ್) ಎಂಬುದಕ್ಕೆ ಪ್ಯಾರಿಸ್ ಒಪ್ಪಂದದಲ್ಲಿ ಬಾಯುಪಚಾರದ ಪ್ರಸ್ತಾಪವಷ್ಟೇ ಇದೆ. ವಾಸ್ತವವಾಗಿ ಅದು ಅಭಿವೃದ್ಧಿ ಹೊಂದಿರುವ ದೇಶಗಳು ಈ ಹಿಂದೆ ಮಾಡಿರುವ ಪರಿಸರ ಲೂಟಿಗೆ ಅವನ್ನು ಪ್ರಮುಖ ಹೊಣೆಗಾರರಾಗಿ ಮಾಡಿಲ್ಲ. ಈ ಮೂಲಕ ಅದು ಪರಿಸರವನ್ನು ಮಲಿನ ಮಾಡುವ ಉತ್ಸರ್ಜನೆಗಳನ್ನು ಕಡಿಮೆ ಮಾಡುವ ಹೊರೆಯನ್ನು ನ್ಯಾಯಯುತವಾಗಿ ಹಂಚಿಕೆಕೊಳ್ಳದಂತೆ ಮಾಡಿದೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.

ಅಮರಿಕಾದ ಹುನ್ನಾರದಂತೆ ಈ ಹಿಂದಿನ ವಾಯುಮಾಲಿನ್ಯದ ಅಂಶವನ್ನು ಸಂಪೂರ್ಣವಾಗಿ ಉಪೇಕ್ಷಿಸಲಾಗಿದೆ. ಈ ಮಾಲಿನ್ಯಕ್ಕೆ 75ಶೇ.ದಷ್ಟು ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಇತರ ಯುರೋಪಿನ ಅಭಿವೃದ್ಧಿ ಹೊಂದಿರುವ ದೇಶಗಳೇ ಕಾರಣ. ಈ ರೀತಿ ಹಿಂದಿನ ಉತ್ಸರ್ಜನೆಗಳನ್ನು ಉಪೇಕ್ಷಿಸಿ ಕೇವಲ ಭವಿಷ್ಯದ ಉತ್ಸರ್ಜನೆಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳೇ ಅವುಗಳ ಪ್ರಸಕ್ತ ಬೆಳವಣಿಗೆಯ ಹಂತದಿಂದಾಗಿ ಅಭಿವೃದ್ಧಿ ಹೊಂದಿರುವ ದೇಶಗಳಿಗಿಂತ ದೊಡ್ಡ ದೋಷಿಗಳಾಗಿ ಕಾಣುತ್ತವೆ. ಪ್ಯಾರಿಸ್ ಒಪ್ಪಂದದ ಚೌಕಟ್ಟು ಹವಾಮಾನ ಬದಲಾವಣೆಯ ಸಮಸ್ಯೆಯ ಹೊರೆಯನ್ನು ನಿರ್ಣಾಯಕವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಹೆಗಲಿಗೆ ದಾಟಿಸಿದೆ.

ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವಲ್ಲಿ, ಅದಕ್ಕೆ ಅನುಗುಣವಾದ ತಂತ್ರಜ್ಞಾನಗಳನ್ನು ಅಂಗೀಕರಿಸುವಲ್ಲಿ ನೆರವಾಗಲು ಅಭಿವೃದ್ಧಿಶೀಲ ದೇಶಗಳಿಗೆ ಹಣಕಾಸು ಮತ್ತು ತಂತ್ರಜ್ಞಾನಗಳ ನೆರವು ಒದಗಿಸುವ ಬಾಧ್ಯತೆ ಅಭಿವೃದ್ಧಿ ಹೊಂದಿರುವ ದೇಶಗಳ ಮೇಲಿದೆ. ಆದರೆ ಈ ಬಗ್ಗೆ ಪ್ಯಾರಿಸ್ ಒಪ್ಪಂದ ಜಾರಿ ಮಾಡಲಾಗದ ಹೇಳಿಕೆಗಳನ್ನಷ್ಟೇ ಹೊಂದಿದೆ.

ಭಾರತದ ಭವಿಷ್ಯದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಅಪಾರ ಮಿತಿಗಳನ್ನು ಹೇರುವ ಅಮೆರಿಕಾದ ಹುನ್ನಾರಗಳಿಗೆ ಭಾರತ ಸರಕಾರ ಮಣಿದಿರುವುದು ಅತ್ಯಂತ ಖೇದದ ಸಂಗತಿ ಎಂದು ಸಿಪಿಐ(ಎಂ) ಹೇಳಿದೆ.

ಮುಂಬರುವ ವರ್ಷಗಳಲ್ಲಿ ಭಾರತ ಈ ರೀತಿ ಅಮೆರಿಕಾದ ಹಿತಾಸಕ್ತಿಗಳಿಗೆ ಶರಣಾಗಿರುವುದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ವಿಶ್ವ ಸಾಮ್ರಾಜ್ಯಶಾಹಿಯ ಈ ಕಾರ್ಯತಂತ್ರವನ್ನು ಪ್ರತಿರೋಧಿಸಬೇಕು, ಅವರು ಬಯಸುವಂತೆ ಭಾರತ ಸರಕಾರ ಮಾಯು ಮಾಲಿನ್ಯ ಕಡಿಮೆ ಮಾಡುವ ಪ್ರತಿಜ್ಞೆಯನ್ನು ಕಾರ್ಪೊರೇಟ್ ಪರ ಅಭಿವೃದ್ಧಿಯನ್ನು ಪ್ರೋತ್ಸಾಹಿಸುವುದಕ್ಕೆ ಬಳಸದೆ, ಜನ-ಪರ ಅಭಿವೃದ್ಧಿಗೆ ಬಳಸುವಂತೆ, ಅದರಲ್ಲೂ ಭಾರತದ ವಂಚಿತ ವಿಭಾಗಗಳಿಗೆ ಹೆಚ್ಚಿನ ಇಂಧನಶಕ್ತಿ ಲಭ್ಯವಾಗುವಂತೆ ಒತ್ತಡಗಳನ್ನು ಹಾಕಬೇಕು ಎಂದು ಸಿಪಿಐ(ಎಂ) ಎಲ್ಲ ಪ್ರಗತಿಪರ ಶಕ್ತಿಗಳಿಗೆ ಕರೆನೀಡಿದೆ.