ನೈರೋಬಿಯಲ್ಲಿ ಭಾರತ ತನ್ನ ಹಿತಗಳನ್ನು ರಕ್ಷಿಸುವಲ್ಲಿ ಏಕೆ ವಿಫಲವಾಯಿತು-ಎಐಕೆಎಸ್

ಸಂಪುಟ: 
10
ಸಂಚಿಕೆ: 
01
Sunday, 27 December 2015

ಮೋದಿ ಸರಕಾರ ಉತ್ತರ ಕೊಡಬೇಕಾಗಿದೆ :

ಅಖಿಲ ಭಾರತ ಕಿಸಾನ್ ಸಭಾ ಡಬ್ಲ್ಯುಟಿಒನ ನೈರೋಬಿ ಘೋಷಣೆಯನ್ನು ಖಂಡಿಸಿದೆ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾರ್ವಜನಿಕ ದಾಸ್ತಾನು ವ್ಯವಸ್ಥೆ ಕೃಷಿ ಉತ್ಪನ್ನಗಳ ವ್ಯಾಪಾರವನ್ನು ವಿಕೃತ ಗೊಳಿಸುತ್ತದೆ ಎಂದು ಆಕ್ಷೇಪಿಸುತ್ತಿರುವ  ಅಮೆರಿಕಾ ಮುಂತಾದ ಅಭಿವೃದ್ಧಿ ಹೊಂದಿದ ದೇಶಗಳು ವಾಸ್ತವವಾಗಿ ತಮ್ಮ ದೇಶದ ರೈತರಿಗೆ ಭಾರೀ ಸಬ್ಸಿಡಿಗಳನ್ನು ನೀಡಿ  ತಾವೇ ಕೃಷಿ ಉತ್ಪನ್ನಗಳ ವ್ಯಾಪಾರವನ್ನು ವಿಕೃತಗೊಳಿಸುವುದನ್ನು ಚರ್ಚಿಸಲು ಸಿದ್ಧವಿಲ್ಲ. ನೈರೋಬಿ ಘೋಷಣೆ ಈ ಪ್ರಶ್ನೆಗಳನ್ನು ಪರಿಹರಿಸಿಲ್ಲ, ಬದಲಿಗೆ ದೋಹಾ ಅಭಿವೃದ್ಧಿ ಅಜೆಂಡಾವನ್ನು ಹೂತು ಬಿಟ್ಟಿದೆ ಮತ್ತು ಕಳೆದ ವರ್ಷ ಜಿನೇವಾದಲ್ಲಿ ಭಾರತದಂತಹ ದೇಶಗಳಿಗೆ ಬಹಳ ಮಹತ್ವದ್ದಾದ ಸಾರ್ವಜನಿಕ ದಾಸ್ತಾನು ವ್ಯವಸ್ಥೆಯ ಪ್ರಶ್ನೆಯನ್ನು ಪರಿಹರಿಸುವುದಾಗಿ ಕೊಟ್ಟ ಭರವಸೆಯನ್ನೂ ಪರಿಶೀಲಿಸಿಲ್ಲ ಎಂದಿರುವ ಎಐಕೆಎಸ್, ಮೋದಿ ಸರಕಾರ ತನ್ನ ಅಮೆರಿಕಾ-ಪರ ನಿಲುವುಗಳಿಂದಾಗಿ  ತನ್ನ ಕೈಗಳಿಗೆ ತಾನೇ ಬೇಡಿ ಹಾಕಿಕೊಂಡು, ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ನೇತೃತ್ವ ನೀಡಲಾರದೆ ಹೋಗಿದೆ  ಎಂದು ಕಟುವಾಗಿ ಟೀಕಿಸಿದೆ. ಇದರ ಒಂದು ಪರಿಣಾಮ ಎಂದರೆ ಹತ್ತಿ ಬೆಳೆಯುವ ದೇಶಗಳು ಅಮೆರಿಕಾದಿಂದ ಅನ್ಯಾಯಯುತ ಸ್ಪರ್ಧೆ ಮತ್ತು ಬೆಲೆದಮನಕ್ಕೆ ಒಳಗಾಗುತ್ತವೆ ಎಂದು ಅದು ಹೇಳಿದೆ.

ಈ ಸಭೆಯಲ್ಲಿ ಭಾರತದ ನಿಯೋಗಕ್ಕೆ ನೇತೃತ್ವ ನೀಡಿರುವ ಮಂತ್ರಿ ನಿರ್ಮಲಾ ಸೀತಾರಾಮನ್ ಈ ರೀತಿ ದೇಶದ ರೈತರ ಮತ್ತು ಒಟ್ಟಾರೆಯಾಗಿ ಜನತೆಯ ಹಿತಗಳನ್ನು ಕಾಪಾಡುವಲ್ಲಿ ವಿಫಲರಾಗಿರುವುದಕ್ಕೆ ಉತ್ತರ ನೀಡಬೇಕಾಗಿದೆ ಎಂದು ಎಐಕೆಎಸ್ ಹೇಳಿದೆ. ನರೇಂದ್ರ ಮೋದಿ ಸರಕಾರದ ಸಾಮ್ರಾಜ್ಯಶಾಹಿ-ಪರ ಧೋರಣೆಗಳನ್ನು ಪ್ರತಿಭಟಿಸಬೇಕು ಎಂದು ಅದು ರೈತಾಪಿ ಜನಗಳಿಗೆ ಕರೆ ನೀಡಿದೆ.

ಈ ಘೋಷಣೆ 2008ರ ತೀವ್ರ ಆರ್ಥಿಕ ಮತ್ತು ಹಣಕಾಸು ಬಿಕ್ಕಟ್ಟಿನಿಂದ ಚೇತರಿಗೆ ಬಹಳ ನಿಧಾನಗತಿಯಲ್ಲಿ ಸಾಗಿದೆ, ಅಸಮಾನವಾಗಿದೆ, ಇದರಿಂದಾಗಿ ಜಾಗತಿಕ ಆರ್ಥಿಕ ಬೆಳವಣಿಗೆ ಇಳಿದಿದೆ, ಕೃಷಿ ಮತ್ತು ಇತರ ಸರಕುಗಳ ಬೆಲೆಗಳನ್ನು ಕೆಳಕ್ಕೆ ದಬ್ಬಿದೆ, ಅಸಮಾನತೆಗಳನ್ನು, ನಿರುದ್ಯೋಗವನ್ನು  ಹೆಚ್ಚಿಸಿದೆ, ಅಂತರ್ರಾಷ್ಟ್ರೀಯ ವ್ಯಾಪಾರದ ವಿಸ್ತರಣೆ ಬಹಳ ನಿಧಾನವಾಗಿದೆ ಎಂದೆಲ್ಲವನ್ನು ನಿರ್ವಾಹವಿಲ್ಲದೆ ಒಪ್ಪಿಕೊಳ್ಳಲೇ ಬೇಕಾಗಿ ಬಂದಿದೆ. ಇವೆಲ್ಲ ವಿಶ್ವ ವ್ಯಾಪಾರ ಸಂಘಟನೆಯ ಜನ-ವಿರೋಧಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಪರವಾದ ಧೋರಣೆಗಳ ಫಲಿತಾಂಶ ಎಂದು ಅಖಿಲ ಭಾರತ ಕಿಸಾನ್ ಸಭಾ ಅಭಿಪ್ರಾಯ ಪಟ್ಟಿದೆ.