ಎಂಟು ವರ್ಷಗಳ ನಂತರ ಅಯೋಧ್ಯೆಗೆ ಕಲ್ಲು ತುಂಬಿದ ಟ್ರಕ್‍ಗಳು

ಸಂಪುಟ: 
10
ಸಂಚಿಕೆ: 
01
Sunday, 27 December 2015

ಕೋರ್ಟ್ ನಿರ್ದೇಶನದ ಉಲ್ಲಂಘನೆ ಎಂದು ಕ್ರಮ ಕೈಗೊಳ್ಳಬೇಕು    -  ಪ್ರಕಾಶ ಕಾರಟ್

ಕಳೆದ ವಾರ ರಾಜಸ್ತಾನದಿಂದ ಎರಡು ಟ್ರಕ್ಕುಗಳಲ್ಲಿ ಮರಳುಗಲ್ಲುಗಳು  ಅಯೋಧ್ಯಾ ತಲುಪಿ ದೇವಸ್ಥಾನ ನಿಮಾಣದ ಶಿಲಾಭಂಡಾರವನ್ನು ಸೇರಿವೆ. ವಿಶ್ವ ಹಿಂದೂ ಪರಿಷತ್ ನಡೆಸುವ ವರ್ಕಶಾಪ್ ದೇವಸ್ಥಾನ ಕಟ್ಟಲು ಕಲ್ಲುಗಳನ್ನು ಕೆತ್ತುವ ಕೆಲಸದಲಿ ತೊಡಗಿತ್ತು. ಈಗ ಎಂಟು ವರ್ಷಗಳ ಅಂತರದ ನಂತರ ಅಯೋಧ್ಯಾ ತಲುಪಿದ ಕಲ್ಲುಗಳ ಹೊಸ ಕಂತುಗಳನ್ನು ಬರಮಾಡಿಕೊಳ್ಳಲು ಸಮಾರಂಭಗಳನ್ನು ನಡೆಸಲಾಗಿದೆ. ಆರೆಸ್ಸೆಸ್ ಕೂಟ ತನ್ನ ರಾಮ ದೇವಸ್ಥಾನ ಅಜೆಂಡಾವನ್ನು ಎತ್ತಿ ನಿಲ್ಲಿಸಲು ನಿರ್ಧರಿಸಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಸಿಪಿಐ(ಎಂ)ನ ಹಿರಿಯ ಮುಖಂಡರಾದ ಪ್ರಕಾಶ ಕಾರಟ್ ಅಭಿಪ್ರಾಯ ಪಟ್ಟಿದ್ದಾರೆ.  
ವಿಹೆಚ್‍ಪಿ ನಡೆಸುವ ರಾಮಜನ್ಮಭೂಮಿ ನ್ಯಾಸ್‍ಗೆ ಮೋದಿ ಸರಕಾರ ಅಧಿಕಾರದಲ್ಲಿರುವುದರಿಂದ ದೇವಸ್ಥಾನ ಕಟ್ಟಲಾಗುವುದು ಎಂಬ  ‘ಸಕಾರಾತ್ಮಕ ಸಂಕೇತ’ಗಳು ಅವರಿಗೆ ದೊರೆತಿದೆಯಂತೆ.  ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತರು ಡಿಸೆಂಬರ್ 3ರಂದು “ಯಾವಾಗ, ಹೇಗೆ ಆ ದೇವಸ್ಥಾನ ಕಟ್ಟಲಾಗುವುದು ಎಂದು ಯಾರೂ ಹೇಳಲಾರರು, ಆದರೆ ನಾವು ಸಿದ್ಧರಾಗಿರಬೆಕು” ಎಂದು ಹೇಳಿರುವುದೇ ಆ ‘ಸಕಾರಾತ್ಮಕ  ಸಂಕೇತ’ ವಾಗಿರಬಹುದು ಎನ್ನುತ್ತಾರೆ ಪ್ರಕಾಶ ಕಾರಟ್ ತನ್ನ ಜೀವಮಾನದಲ್ಲಿ ದೇವಸ್ಥಾನÀ ಕಟ್ಟಲಾಗುವುದು ಎಂದೂ ಆರೆಸ್ಸೆಸ್ ಮುಖ್ಯಸ್ಥರು ಹೇಳಿದ್ದಾರಂತೆ.

ಅಯೋಧ್ಯೆಯಲ್ಲಿ ಮತ್ತೆ ಆರಂಭವಾಗಿರುವ ವಿಹೆಚ್‍ಪಿಯ ಹೊಸ ಚಟುವಟಿಕೆಗಳನ್ನು ಮತ್ತೊಮ್ಮೆ ದೇವಸ್ಥಾನದ ಪ್ರಶ್ನೆಯನ್ನು ರಾಜಕೀಯ ಉದ್ದೇಶದಿಂದ ಕೆದಕುವುದಕ್ಕೆ ನಡೆಸುತ್ತಿರುವ ತಯಾರಿ ಎಂದು ಕಾಣಬೇಕು. ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಗಳು 2017ರ ಆರಂಭದಲ್ಲಿ ನಡೆಯಬೆಕಾಗಿದೆ. ಅದಕ್ಕೆ ಕೋಮುವಾದದ ಗಡಿಗೆಯನ್ನು ಕದಡುವ ಅಗತ್ಯ ಆರೆಸ್ಸೆಸ್-ಬಿಜೆಪಿಗಿದೆ. ಅಗತ್ಯ ಬಿದ್ದರೆ ಅದರ ಕೆಳಗೆ ಉರಿ ಹಾಕಿ ಕುದಿಯುವಂತೆಯೂ ಮಾಡಬಹುದಲ್ಲ! ಬಿಹಾರ ಚುನಾವಣೆಗಳಲ್ಲಿ ಬಿಜೆಪಿಯ ಬೆಂಬಲ ಕ್ಷಯಗೊಳ್ಳುತ್ತಿರುವುದನ್ನು ಕಂಡ ಮೇಲೆ ಆರೆಸ್ಸೆಸ್ ತನ್ನ ಬತ್ತಳಿಕೆಯಲ್ಲಿರುವ ಕೋಮುವಾದಿ ಅಸ್ತ್ರಗಳನ್ನು ಸಿದ್ಧಗೊಳಿಸುತ್ತಿದೆ ಎಂದು ಪ್ರಕಾಶ ಕಾರಟ್ ಅಭಿಪ್ರಾಯ ಪಟ್ಟಿದ್ದಾರೆ.

ಅಯೋಧ್ಯಾ ವಿವಾದ ಸುಪ್ರಿಂ ಕೋರ್ಟಿನಲ್ಲಿದೆ. ಬಾಬ್ರಿ ಮಸೀದಿ ಇದ್ದ ಸ್ಥಳದಲ್ಲಿ ಯಥಾಸ್ಥಿತಿ ಕಾಪಾಡಬೇಕೆಂಬ ಕೋರ್ಟ್ ನಿರ್ದೇಶನ ಬಹಳ ಕಾಲದಿಂದ ಇದೆ. ದೇವಸ್ಥಾನ ಕಟ್ಟುವುದಕ್ಕಾಗಿ ಕಲ್ಲುಗಳನ್ನು ಸಂಗ್ರಹಿಸುವುದು ಈ ಕೋರ್ಟ್ ನಿರ್ದೇಶನದ ಉಲ್ಲಂಘನೆ ಎಂದು ಕಾಣಬೇಕಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿಗಳು ಜಿಲ್ಲಾ ಆಡಳಿತಕ್ಕೆ ಜಾಗರೂಕರಾಗಿರಬೇಕು ಎಂದು  ನಿರ್ದೇಶನ ನೀಡಿದ್ದಾರಂತೆ. ಅದರೆ ಇದಿಷ್ಟೇ ಸಾಲದು. ಜಿಲ್ಲಾ ಆಡಳಿತ ಕಲ್ಲುಗಳನ್ನು ಅಯೋಧ್ಯೆಗೆ ತರಿಸಿಕೊಳ್ಳುವುದು ಮುಂತಾದ ಯಾವುದೇ ಚಟುವಟಿಕೆಯನ್ನು ಯಥಾಸ್ಥಿತಿಯನ್ನು ಕದಡಲಿಕ್ಕಾಗಿ ಎಂದು ಪರಿಗಣಿಸಿ ತಡೆಯಬೇಕೆಂದು  ಉತ್ತರ ಪ್ರದೇಶ ಸರಕಾರ ನಿರ್ದೇಶನ ನೀಡಬೇಕು. ಕಿತಾಪತಿಯ ಯೋಜನೆಯನ್ನು ಮೊಳಕೆಯಲ್ಲೇ ಹಿಸುಕಿ ಹಾಕಬೇಕು ಎಂದು ಪ್ರಕಾಶ ಕಾರಟ್ ಹೇಳಿದ್ದಾರೆ.