ಪ್ರಶಸ್ತಿಯ ಪಟ್ಟಿಯಲ್ಲಿ ನನ್ನ ಹೆಸರು ಬೇಡ: ಜಗ್ಮತಿ ಸಂಗ್ವಾನ್

ಸಂಪುಟ: 
10
ಸಂಚಿಕೆ: 
01
Sunday, 27 December 2015

ಗ್ರಾಮೀಣ ಮಹಿಳೆಯರ ಪ್ರಜಾಪ್ರಭುತ್ವ ಹಕ್ಕನ್ನು ವಂಚಿಸುತ್ತಿರುವವರ ಪ್ರಶಸ್ತಿಯ ಪಟ್ಟಿಯಲ್ಲಿ ನನ್ನ ಹೆಸರು ಬೇಡ

ಹರ್ಯಾಣದಲ್ಲಿ ‘ಮರ್ಯಾದಾ ಹತ್ಯೆ’ಗಳ ವಿರುದ್ಧ ಮತ್ತು ಅದರಲ್ಲಿ ಖಾಪ್ ಪಂಚಾಯತ್‍ಗಳ ಪಾತ್ರದ ವಿರುದ್ಧ ಹಲವು ಹೋರಾಟಗಳನ್ನು ನಡೆಸಿರುವ ಈಗ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಜಗ್ಮತಿ ಸಂಗ್ವಾನ್ ಮಹಿಳಾ ಸಾಧಕಿಯೆಂದು ಮೋದಿ ಸರಕಾರ ನೀಡಬೇಕೆಂದಿದ್ದ ಸನ್ಮಾನವನ್ನು ನಿರಾಕರಿಸಿದ್ದಾರೆ.

ಡಿಸೆಂಬರ್ 10 ರ ಅಂತರ್ರಾಷ್ಟ್ರೀಯ ಮಾನವ ಹಕ್ಕುಗಳ ದಿನದ ವೇಳೆಗೆ ಕೇಂದ್ರ ಸರಕಾರದಿಂದ ಅವರಿಗೆ ಒಂದು ಪತ್ರ ಬಂತು. ‘ಸಾರ್ವಜನಿಕ ಜೀವನದಲ್ಲಿ ಮಹಿಳೆಯರು’ ಎಂಬ ವಿಧದಲ್ಲಿ ಗೌರವಿಸಲು 100 ಮಹಿಳಾ ಸಾಧಕಿಯರ ಪಟ್ಟಿ ತಯಾರಿಸಿದ್ದು ಅದರಲ್ಲಿ ಜಗ್ಮತಿಯವರ ಹೆಸರು ಇದೆ ಎಂದು ಅದರಲ್ಲಿ ತಿಳಿಸಲಾಗಿತ್ತು.

ಡಿಸೆಂಬರ್ 14ರಂದು ಜಗ್ಮತಿಯವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಂತ್ರಿ ಮನೇಕಾ ಗಾಂಧಿಗೆ ಪತ್ರ ಬರೆದು ತಾನು ಈಗ ಲಕ್ಷಾಂತರ ಸಹಯೋಗಿಗಳೊಂದಿಗೆ ಮಾಡುತ್ತಿರುವ ಕೆಲಸಕ್ಕೂ ಮೋದಿ ಸರಕಾರದ ಗುರಿಗಳಿಗೂ ಬಹಳಷ್ಟು ವೈರುಧ್ಯಗಳಿರುವುದರಿಂದ ಈ ಪ್ರಶಸ್ತಿಯ ಪ್ರಕ್ರಿಯೆಯಿಂದ ತನ್ನ ಹೆಸರನ್ನು ಕೈಬಿಡಬೇಕು ಎಂದು ನಯವಾಗಿ, ಆದರೆ ದೃಢವಾಗಿ ಕೋರುವ ಪತ್ರವನ್ನು ಬರೆದಿದ್ದಾರೆ. ಅವರು ಬರೆದ ಪತ್ರಿಕೆಯ ಒಕ್ಕಣಿಕೆ ಹೀಗಿದೆ:

“ನನ್ನ ಹೆಸರನ್ನು ಈ ಪ್ರಶಸ್ತಿಯ ಪ್ರಕ್ರಿಯೆಯಿಂದ ಹೊರ ತೆಗೆಯಬೇಕೆಂದು ನಿಮ್ಮನ್ನು ಅತ್ಯಂತ ವಿನಯದಿಂದ ಕೋರುತ್ತೇನೆ. ಹರ್ಯಾಣ ಸರಕಾರ ಪಂಚಾಯತು ಚುನಾವಣೆಗಳಲ್ಲಿ ಸ್ಪರ್ಧೆಗೆ ಶರತ್ತುಗಳನ್ನು ಹಾಕಿ 83% ಪರಿಶಿಷ್ಟ ಜಾತಿಗಳ ಮಹಿಳೆಯರು, 72% ಸಾಮಾನ್ಯ ವರ್ಗದ ಮಹಿಳೆಯರು, 71% ಪರಿಶಿಷ್ಟ ಜಾತಿಗಳ ಪುರುಷರು ಮತ್ತು 56% ಸಾಮಾನ್ಯ ವರ್ಗದ ಪುರುಷರನ್ನು, ಒಟ್ಟಾರೆಯಾಗಿ 67% ಸಾಮಾನ್ಯ ನಾಗರಿಕರನ್ನು ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸದಂತೆ ಮಾಡಿರುವ ನಿರ್ಣಯದ ಹಿನ್ನೆಲೆಯಲ್ಲಿ ಭಾರವಾದ ಹೃದಯದಿಂದ ನಾನಿದನ್ನು ನಿಮಗೆ ಬರೆಯುತ್ತಿದ್ದೇನೆ.

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು ಭಾಗವಹಿಸಲು ಸಾಧ್ಯವಾಗಿರುವುದು ಒಂದು ದೀರ್ಘವಾಗಿ ನಡೆದ ಹೋರಾಟ ಮತ್ತು ಹಕ್ಕೊತ್ತಾಯದಿಂದ ಎಂಬುದು ನಿಮಗೆ ಗೊತ್ತಿರಬಹುದು. ಆದರೆ ರಾಜ್ಯ ಸರಕಾರ ಕೈಗೊಂಡಿರುವ ಇಂತಹ ಒಂದು ನಿರ್ಣಯ ನಾವು ಇದುವರೆಗೆ ಸಾಧಿಸಿದ್ದಕ್ಕೆ ಕೇಡುಂಟು ಮಾಡುತ್ತದಷ್ಟೇ.

2015ರ ಬಜೆಟಿನಲ್ಲಿ ಕೇಂದ್ರ ಸರಕಾರ ಮಹಿಳಾ-ಸ್ನೇಹಿ ಕಾಯ್ದೆಗಳ ಅಡಿಯಲ್ಲಿ ಹಣ ನೀಡಿಕೆಯಲ್ಲಿ ಭಾರೀ ಕಡಿತ ಮಾಡಿರುವ ಬಗ್ಗೆ ನಿಮಗೂ ತಿಳಿದಿದೆ.

ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ದೈನಂದಿನ ಬದುಕು ಹೆಚ್ಚೆಚ್ಚು ಕಷ್ಟಕರವಾಗುತ್ತಿದೆ ಮತ್ತು ಕೇಂದ್ರ ಸರಕಾರ ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ ಇತರ ದುರ್ಬಲ ವಿಭಾಗಗಳನ್ನು ರಕ್ಷಿಸುವ ತನ್ನ ಹೊಣೆಗಾರಿಕೆಯಿಂದ ಹಿಂದೆ ಸರಿಯುತ್ತಿದೆ ಎಂದು ನಮಗೆ ಅನ್ನಿಸುತ್ತಿದೆ.

ಇಂತಹ ಪ್ರಸಕ್ತ ಸನ್ನಿವೇಶದಲ್ಲಿ ನನ್ನ ಸಂಘಟನೆಯ ಇತರ ಲಕ್ಷಾಂತರ ಕಾರ್ಯಕರ್ತರೊಂದಿಗೆ ನನ್ನ ಕೆಲಸಕ್ಕೂ ನಿಮ್ಮ ಸರಕಾರ ಸಾಧಿಸಬೇಕೆಂದಿರುವ ಗುರಿಗೂ ಸಂಪೂರ್ಣ ವೈರುಧ್ಯವಿದೆ ಎಂದು ನನಗನಿಸುತ್ತಿದೆ. ಆದ್ದರಿಂದ ಪ್ರಸಕ್ತ ಕಾಲಘಟ್ಟದಲ್ಲಿ ಸರಕಾರ ಕೊಡಮಾಡುವ ಯಾವುದೇ ಪ್ರಶಸ್ತಿಯಿಂದ ನನ್ನನ್ನು ದೂರವಿರಿಸಿಕೊಳ್ಳ ಬಯಸುತ್ತೇನೆ.”

ಭಾರತದ ಅತ್ಯಂತ ದೊಡ್ಡ ಮಹಿಳಾ ಸಂಘಟನೆಯಲ್ಲಿ ಬುಡಮಟ್ಟದಲ್ಲಿ ತೊಡಗಿರುವ ಒಬ್ಬ ಮಹಿಳೆಯಿಂದ ಇಂತಹ ಪತ್ರ ಕೇವಲ ಸಾಂಕೇತಿಕ ಕ್ರಿಯೆಗಳಲ್ಲಿ  ನಿಷ್ಣಾತರೆನಿಸಿಕೊಂಡಿರುವ, ಇಂತಹ ಪ್ರಶಸ್ತಿಗಳಿಂದಲೇ ಗೌರವ ಸಂಪಾದಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಮೋದಿ ಸರಕಾರಕ್ಕೆ ನೀಡಿರುವ ಒಂದು ಬಲವಾದ ಪೆಟ್ಟು ಎಂದು ‘ಕಮ್ಯುನಲಿಸಂ ಕೊಂಬಾಟ್’ ಪತ್ರಿಕೆ ಟಿಪ್ಪಣಿ ಮಾಡಿದೆ.