'ಕೀಳು ರಾಜಕೀಯಕ್ಕೆ ಭಗತ್‍ಸಿಂಗ್ ಹೆಸರನ್ನು ಎಳೆಯುತ್ತಿರುವ ಬಿಜೆಪಿ-ಆರೆಸ್ಸೆಸ್'

Saturday, 19 December 2015

ಸ್ವಂತ ‘ಹೀರೋ’ಗಳ ಕೃತಕ ಉತ್ಪಾದನೆಯ ಕೀಳು ರಾಜಕೀಯಕ್ಕೆ ಭಗತ್‍ಸಿಂಗ್ ಹೆಸರನ್ನು ಎಳೆಯುತ್ತಿರುವ  ಬಿಜೆಪಿ-ಆರೆಸ್ಸೆಸ್ - ಬೃಂದಾ ಕಾರಟ್ ಟೀಕೆ

ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಭಾಗವಹಿಸದ ಸಂಘ ಪರಿವಾರ ಆ ಕೊರತೆಯನ್ನು ತುಂಬಿಕೊಳ್ಳಲು ಭಗತ್‍ಸಿಂಗ್ ಅವರ ಹೆಸರನ್ನು ‘ಸ್ವಾಧೀನ’ ಪಡಿಸಿಕೊಳ್ಳುವ ಪ್ರಯತ್ನದಲ್ಲಿ ಇನ್ನೂ ಯಶಸ್ಸು ಪಡೆಯದಿರುವಾಗಲೇ ಆ ದೇಶಪ್ರೇಮಿಯ ಬಗ್ಗೆ ಅದಕ್ಕೆ ಗೌರವ-ಪ್ರೀತಿಯೇನೂ ಇಲ್ಲ ಎಂಬುದು ಬಹಿರಂಗವಾಗಿದೆ. ಚಂಡೀಗಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಹೀದ್ ಭಗತ್‍ಸಿಂಗ್ ಹೆಸರಿಡುವ ಪಂಜಾಬ್ ಮತ್ತು ಹರ್ಯಾಣ ವಿಧಾನಸಭೆಗಳ ಒಮ್ಮತದ ನಿರ್ಣಯವನ್ನು ಬುಡಮೇಲು ಮಾಡುವ, ಅದರ ಬದಲು ಒಬ್ಬ ಸ್ಥಳೀಯ ಆರೆಸ್ಸೆಸ್ ಪ್ರಚಾರಕನ ಹೆಸರಿಡುವ ಹರ್ಯಾಣದ ಮುಖ್ಯಮಂತ್ರಿಯ್ರ ಪ್ರಯತ್ನದಲ್ಲಿ ಮೋದಿ ಸರಕಾರವೂ ಶಾಮೀಲಾದಂತಿದೆ. ಇದನ್ನು ಎಡಪಕ್ಷಗಳ ಸಂಸತ್ ಸದಸ್ಯರು ಬಲವಾಗಿ ಪ್ರತಿಭಟಿಸಿದ್ದಾರೆ.

ಪ್ರಮುಖ ಕಟ್ಟಡಗಳು ಮತ್ತು ರಸ್ತೆಗಳಿಗೆ ಚಾರಿತ್ರಿಕ ವ್ಯಕ್ತಿಗಳ ಹೆಸರಿಟ್ಟು ದೇಶಕ್ಕಾಗಿ ಅವರು ನೀಡಿದ ಕಾಣಿಕೆಗಳಿಗೆ ಗೌರವ ನೀಡುವ ವಾಡಿಕೆಯಿದೆ. ಆದರೆ ಇವು ಹಲವು ವಿವಾದಗಳಿಗೂ ಎಡೆಮಾಡಿಕೊಟ್ಟಿವೆ-ಮುಖ್ಯವಾಗಿ ಹಿಂದಿನ ಕಾಂಗ್ರೆಸ್ ಸರಕಾರಗಳು ಇದನ್ನು ಗಾಂಧಿ-ನೆಹರೂ ಕುಟುಂಬಕ್ಕೆ ಸೀಮಿತಗೊಳಿಸಿದವು ಎಂಬ ಕಾರಣಕ್ಕಾಗಿ. ಆದರೆ ಬಿಜೆಪಿ-ಆರೆಸ್ಸೆಸ್ ಆಳ್ವಿಕೆಯಲ್ಲಿ ಈ ಆಕ್ಷೇಪಕಾರಿ ಆಚರಣೆ ಸಂಘ ಪರಿವಾರ ಉತ್ಪಾದಿಸಿರುವ ಅದರ ಕೃತಕ ‘ಹೀರೋ’ಗಳ ಹೆಸರಿಡುವ ಇನ್ನೊಂದು ಆಕ್ಷೇಪಕಾರಿ ಆಚರಣೆ ಆರಂಭವಾಗಿದೆ. ಚರಿತ್ರೆಯ ಮರುಲೇಖನದ ಹೆಸರಲ್ಲಿ ಇಲ್ಲದ ತಮ್ಮ ‘ಹೀರೋ’ಗಳನ್ನು ಸೃಷ್ಟಿಸಿ ದೇಶಕ್ಕಾಗಿ ನೇಣುಗಂಬವೇರಿದ ಭಗತ್‍ಸಿಂಗ್‍ರಂತಹ ದೇಶಪ್ರೇಮಿಗಳಿಗೆ ಅವಮಾನ ಮಾಡಲು ಸಾರ್ವಜನಿಕ ಹಣವನ್ನು ಮತ್ತು ಸರಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರಯತ್ನಗಳಿಗೆ  ಪೂರ್ಣ ವಿರಾಮ ಹಾಕಬೇಕಾಗಿದೆ, ಸರಕಾರ ಅದನ್ನು ಮಾಡದಿದ್ದರೆ, ಸಾರ್ವಜನಿಕ ಅಭಿಪ್ರಾಯವೇ ಇದನ್ನು ಮಾಡಬೇಕಾಗಿದೆ ಎಂದು ಸಿಪಿಐ(ಎಂ) ಹಿರಿಯ ಮುಖಂಡರಾದ ಬೃಂದಾ ಕಾರಟ್ ಹೇಳಿದ್ದಾರೆ.

ಪಂಜಾಬ್ ಮತ್ತು ಹರ್ಯಾಣದ ರಾಜಧಾನಿಯಾಗಿರುವ ಚಂಡೀಗಡದ ಹೊಸ ವಿಮಾನ ನಿಲ್ದಾಣಕ್ಕೆ ಅವಿಭಜಿತ ಪಂಜಾಬ್ ಪ್ರಾಂತದಲ್ಲಿ ಹುಟ್ಟಿ ದೇಶದ ಅತ್ಯಂತ ಪ್ರೀತಿಪಾತ್ರ ವ್ಯಕ್ತಿಯಾಗಿ ಜನಮಾನಸದಲ್ಲಿ ನೆಲೆಯಾಗಿರುವ ಶಹೀದ್ ಭಗತ್ ಸಿಂಗ್ ಅವರ ಹೆಸರಿಡುವಲ್ಲಿ ಸಂಘ ಪರಿವಾರ ಅನಗತ್ಯ  ಮತ್ತು ನಾಚಿಕೆಗೇಡೀ ವಿವಾದ ಈ ಪ್ರಯತ್ನಕ್ಕೆ ಇತ್ತೀಚಿನ ಉದಾಹರಣೆ; ಅವರ ಹೆಸರನ್ನು ದೇಶದ ಸ್ವಾತಂತ್ರ್ಯಕ್ಕಾಗಿ ತೊಟ್ಟು ರಕ್ತವಂತೂ ದೂರ, ಹನಿ ಬೆವರನ್ನೂ ಸುರಿಸದವರು ಅಲ್ಪತನದ ರಾಜಕೀಯ ನಡೆಸಲು ಎಳೆಯುತ್ತಿದ್ದಾರೆ ಎಂದು ಬೃಂದಾ ಕಾರಟ್ ಖೇದ ವ್ಯಕ್ತಪಡಿಸಿದ್ದಾರೆ.

ಈ ವಿವಾದವನ್ನು ಸೃಷ್ಟಿಸಿರುವುದು ಕೇಂದ್ರದ ಹಾಗೂ ಪಂಜಾಬ್ ಮತ್ತು ಹರ್ಯಾಣದ ಬಿಜೆಪಿ ಭಾಗವಹಿಸಿರುವ ಸರಕಾರಗಳು. ನಿಜಸಂಗತಿಗಳು ಹೀಗಿವೆ:

2009ರಲ್ಲಿ ಪಂಜಾಬ್ ವಿಧಾನಸಭೆ ಆಗ ಕಟ್ಟಬೇಕೆಂದಿದ್ದ ಚಂಡೀಗಡದ ಹೊಸ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಅವರ ಹೆಸರಿಡಬೇಕೆಂಬ ಒಮ್ಮತದ ಠರಾವನ್ನು ಅಂಗೀಕರಿಸಿತು. ಅದನ್ನು ಕೇಂದ್ರ ಸರಕಾರಕ್ಕೆ ತಿಳಿಸಲಾಯಿತು. ಒಂದು ವರ್ಷದ ನಂತರ ಹರ್ಯಾಣ ವಿಧಾನಸಭೆ ಕೂಡ ಅದನ್ನು ಅನುಮೋದಿಸಿ ಒಮ್ಮತದ ಠರಾವನ್ನು ಅಂಗೀಕರಿಸಿತು. ಈ ವಿಮಾನ ನಿಲ್ದಾಣ ಹರ್ಯಾಣ, ಪಂಜಾಬ್ ಸರಕಾರಗಳು ಮತ್ತು ಸಾರ್ವಜನಿಕ ವಲಯದ ‘ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರ’(ಎಎಐ)ದ  ಜಂಟಿ ಉದ್ದಿಮೆ. ಪಂಜಾಬ್ ಮತ್ತು ಹರ್ಯಾಣ ಸರಕಾರಗಳು ತಲಾ 24.5ಶೇ. ಪಾಲು ಹೊಂದಿದ್ದರೆ ಎಎಐ ಉಳಿದ 51ಶೇ. ಪಾಲು ಹೊಂದಿದೆ.

ಸೆಪ್ಟಂಬರ್ 2015ಲ್ಲಿ ಪ್ರಧಾನ ಮಂತ್ರಿಗಳು ಈ ಹೊಸ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು. ಆದರೆ ಅದಕ್ಕೆ ಹೆಸರು ಪ್ರಕಟಿಸಲಿಲ್ಲ. ಒಂದು ವಾರದ ಹಿಂದೆ ಲೋಕಸಭೆಯಲ್ಲಿ ಈ ಬಗ್ಗೆ ಎತ್ತಿದ  ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ನಾಗರಿಕ ವಿಮಾನಯಾನ ರಾಜ್ಯಮಂತ್ರಿಗಳು “...ನಂತರ ಬರೆದ ಪತ್ರದಲ್ಲಿ ಹರ್ಯಾಣದ ಮುಖ್ಯಮಂತ್ರಿಗಳು ಅಂತರ್ರಾಷ್ಟ್ರೀಯ ಟರ್ಮಿನಲ್‍ಗೆ ಡಾ.ಮಂಗಲ್ ಸೈನ್ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಚಂಡೀಗಡ ಎಂದು ಹೆಸರಿಡಬೇಕೆಂದು ಕೋರಿದರು. ಈ ಪ್ರಸ್ತಾವವನ್ನು ಸಂಬಂಧಪಟ್ಟ ಮಂತ್ರಾಲಯಗಳು ಹಾಗೂ ಪಂಜಾಬ್ ಮತ್ತು ಹರ್ಯಾಣದ ಸರಕಾರಗಳ ಸಮಾಲೋಚನೆಗಳೊಂದಿಗೆ ಪರೀಕ್ಷಿಸಲಾಯಿತು. ಆದರೆ ಹರ್ಯಾಣ ಮತ್ತು ಪಂಜಾಬ್ ನಡುವೆ ಒಮ್ಮತವಿಲ್ಲದ್ದರಿಂದ ವಿಮಾನ ನಿಲ್ದಾಣ ಟರ್ಮಿನಲ್‍ಗೆ ಹೆಸರಿಡಲಾಗಲಿಲ್ಲ” ಎಂದು ಹೇಳಿದ್ದಾರೆ.

ಇದು ಒಂದು ಸಂಪೂರ್ಣ ವಂಚಕ ವಿವರಣೆ ಎನ್ನುತ್ತಾರೆ ಬೃಂದಾ ಕಾರಟ್.  ಒಮ್ಮತವಿಲ್ಲದಿರುವುದು ಒಟ್ಟು 49ಶೇ. ಅಂದರೆ ಅಲ್ಪಮತದ ಪಾಲು ಹೊಂದಿರುವ ಎರಡು ಸರಕಾರಗಳ ನಡುವೆ. 51ಶೇ. ಅಂದರೆ ಮೆಜಾರಿಟಿ ಶೇರು ಇರುವುದು ಕೇಂದ್ರ ಸರಕಾರದ ಅಡಿಯಿರುವ ಎಎಐ ಬಳಿಯಲ್ಲಿ. ಈ ಅನಗತ್ಯ ವಿವಾದದಲ್ಲಿ ಅದರ, ಅಂದರೆ ಮೋದಿ ಸರಕಾರದ ಅಭಿಪ್ರಾಯವೇನು? ಎಲ್ಲರೊಡನೆಯೂ ಸಮಾಲೋಚನೆ ನಡೆಸಲಾಗಿದೆ ಎಂದರೆ ಉತ್ತರ ನೀಡಿದ ಮಂತ್ರಿಗಳ ಇಲಾಖೆಯೊಂದಿಗೂ ಸಮಾಲೋಚನೆ ನಡೆಸಲಾಗಿದೆ ಎಂದರ್ಥ. ಅದರ ಅಭಿಪ್ರಾಯವೇನು? ಈ ಬಗ್ಗೆ ಮಂತ್ರಿಗಳ ಉತ್ತರ ಮೌನವಾಗಿರುವುದು ಏಕೆ? ಆಮೂಲಕ ಒಮ್ಮತವಿಲ್ಲ ಎಂದು ಸಂಸತ್ತನ್ನು ತಪ್ಪು ದಾರಿಗೆಳÉದಿರುವುದು ಏಕೆ? ಇದು ಬೃಂದಾ ಕಾರಟ್ ಮತ್ತು ಇತರ ಎಲ್ಲ ಪ್ರಜಾಪ್ರಭುತ್ವವಾದಿಗಳ ಪ್ರಶ್ನೆ ಕೂಡ. ಪಂಜಾಬ್ ವಿಧಾನ ಸಭೆಯ ಠರಾವನ್ನು ಅಲ್ಲಿಯ ಸರಕಾರವೇನೂ ಬದಲಿಸಿಲ್ಲ. ಬಹುಮತದ ಶೇರು ಹೊಂದಿರುವ ಎಎಐ, ಅರ್ಥಾತ್ ನಾಗರಿಕ ವಿಮಾನಯಾನ ಇಲಾಖೆಗೂ ಒಪ್ಪಿಗೆಯಿದ್ದರೆ ಹರ್ಯಾಣದ ಆಕ್ಷೇಪಾರ್ಹ ಹಸ್ತಕ್ಷೇಪವನ್ನು ಪರಿಗಣಿಸಬೇಕಾಗಿಲ್ಲ. ಆದರೆ ಮೋದಿ ನೇತೃÀತ್ವದ ಕೇಂದ್ರ ಸರಕಾರ ಆರೆಸ್ಸೆಸ್ ಬೆಂಬಲಿತ ಹರ್ಯಾಣದ ಮುಖ್ಯಮಂತ್ರಿಯನ್ನು ಅಸಂತುಷ್ಟಗೊಳಿಸ ಬಯಸುವುದಿಲ್ಲ. ಸಮಸ್ಯೆಯಿರುವುದು ಇಲ್ಲಿಯೇ ಎನ್ನುತ್ತಾರೆ ಬೃಂದಾ ಕಾರಟ್.

ಯಾರಿದು ಡಾ.ಮಂಗಲ್ ಸೈನ್? 1977-79ರ ಸಣ್ಣ ಅವಧಿಯಲ್ಲಿ ಹರ್ಯಾಣದ ಉಪಮುಖ್ಯಮಂತ್ರಿಯಾದ ಒಬ್ಬ ಆರೆಸ್ಸೆಸ್ ಸಿದ್ಧಾಂತಿ. ಅವರು ಬಿಜೆಪಿಯ ರಾಜ್ಯ ಅಧ್ಯಕ್ಷರೂ ಆಗಿದ್ದವರು. ಹರ್ಯಾಣದ ಮುಖ್ಯಮಂತ್ರಿ ಖಟ್ಟರ್ ಅವರ ಪಕ್ಷದ ‘ಭವನ’ಕ್ಕೆ ಅವರ ಹೆಸರಿಡ ಬಯಸಿದ್ದರೆ ಅದು ಅವರ ಹಕ್ಕು. ಆದರೆ ಹರ್ಯಾಣ ವಿಧಾನ ಸಭೆಯ ಬೆನ್ನಹಿಂದೆ ಅದರ ಠರಾವನ್ನು ಬುಡಮೇಲು ಮಾಡುವ ಅಧಿಕಾರ ಈ ಮುಖ್ಯಮಂತ್ರಿಗೆ ಕೊಟ್ಟವರಾರು? ಒಬ್ಬ ಆರೆಸ್ಸೆಸ್ ಪ್ರಚಾರಕ ಮಾತ್ರವೇ ಭಗತ್ ಸಿಂಗ್‍ರವರ ಹೆಸರನ್ನು ಕೈಬಿಡುವ ಬಗ್ಗೆ ಯೋಚಿಸಲು ಸಾಧ್ಯ ಎಂದು ಬೃಂದಾ ಕಾರಟ್ ಹೇಳುತ್ತಾರೆ.

ಇದನ್ನೇ ಸ್ವಂತ ಹೀರೋಗಳ ಉತ್ಪಾದನೆ ಎನ್ನುವುದು, ತುಸು ಅವಕಾಶ ಸಿಕ್ಕರೂ ಇದನ್ನು ಮಾಡುವಲ್ಲಿ ಆರೆಸ್ಸೆಸ್-ಬಿಜೆಪಿ ಬಹಳ ನುರಿತವರು ಎಂದಿದ್ದಾರೆ ಬೃಂದಾ ಕಾರಟ್ ಎನ್‍ಡಿಟಿವಿ.ಕಾಂ ನಲ್ಲಿ ಡಿಸೆಂಬರ್ 17 ರಂದು ಪ್ರಕಟವಾದ ಅವರ ಲೇಖನದಲ್ಲಿ.

ಪೂರ್ಣಲೇಖನಕ್ಕೆ ನೋಡಿ: http://www.ndtv.com/opinion/when-the-bjp-tries-to-manufacture-heroes-1256137