ಒಂದು ವರ್ಷದಲ್ಲಿ ಆರನೇ ಬಾರಿಗೆ ಪೆಟ್ರೋಲ್-ಡೀಸೆಲ್ ಸುಂಕ ಏರಿಕೆ

Saturday, 19 December 2015

ಸಂಪೂರ್ಣ ಅರ್ಥ ಕಳಕೊಂಡ ‘ಬಜೆಟ್’ ಮತ್ತು ‘ಅಚ್ಛೇ ದಿನ್’

ಡಿಸೆಂಬರ್ 15ರಂದು ಪೆಟ್ರೋಲ್ ದರವನ್ನು ಲೀಟರಿಗೆ 50 ಪೈಸೆ ಮತ್ತು ಡೀಸೆಲ್ ದರವನ್ನು 46 ಪೈಸೆ ಕಡಿತ ಮಾಡಲಾಗಿದೆ ಎಂದು ತೈಲ ಮಾರಾಟ ಕಂಪನಿಗಳು ಪ್ರಕಟಿಸಿದವು. ಮರುದಿನವೇ ಮೋದಿ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕಗಳನ್ನು ಹೆಚ್ಚಿಸಿದೆ ಎಂಬ ಸುದ್ದಿ ಬಂತು. ವಾಸ್ತವವಾಗಿ ಸರಕಾರ ಅಬಕಾರೀ ಸುಂಕಗಳನ್ನು ಹೆಚ್ಚಿಸುತ್ತದೆ ಎಂದು ತಿಳಿದೇ ತೈಲ ಮಾರಾಟ ಕಂಪನಿಗಳು ದರ ಕಡಿತ ಪ್ರಕಟಿಸಿದ್ದವು ಎಂದು ವರದಿಯಾಗಿದೆ. ‘ಒಳ್ಳೆಯ ದಿನ’ಗಳ ‘ಒಳ್ಳೆಯ’ತನದ ನಿಜ ಸ್ವರೂಪವಿದು!

ಹಿಂದಿನ ಸರಕಾರ ಮತ್ತು ಈ ‘ಒಳ್ಳೆಯ ದಿನ’ಗಳ ಸರಕಾರವೂ ಪೆಟ್ರೋಲ್, ಡೀಸೆಲ್ ದರ ಏರಿಕೆಯಾದಾಗಲೆಲ್ಲ ಅದು ತನ್ನ ನಿರ್ಧಾರವಲ್ಲ, ತೈಲ ಕಂಪನಿಗಳ ನಿರ್ಧಾರ, ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆಗಳಿಗೆ ಅನುಗುಣವಾಗಿ ಮಾಡಿವೆ ಎಂದು ಹೇಳಿ ಅದನ್ನು ಪೂರ್ಣವಾಗಿ ಬಳಕೆದಾರರಿಗೆ ವರ್ಗಾಯಿಸಲಾಗುತ್ತಿತ್ತು, ಅವರ ಹೊರೆ ಕಡಿಮೆ ಮಾಡಲೆಂದು ಅಬಕಾರಿ ಸುಂಕಗಳನ್ನು ಇಳಿಸುತ್ತಿರಲಿಲ್ಲ. ಆದರೆ ಈಗ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗುವಾಗ ಅದರ ಪ್ರಯೋಜನವನ್ನು ಪೂರ್ಣವಾಗಿ ಬಳಕೆದಾರರಿಗೆ ವರ್ಗಾಯಿಸಲು ಬಿಡದೆ, ಅದರ ಒಂದು ಭಾಗವನ್ನು ಅಬಕಾರಿ ಸುಂಕಗಳನ್ನು ಹೆಚ್ಚಿಸಿ ಕಿತ್ತುಕೊಳ್ಳಲು ಹಿಂಜರಿಯುತ್ತಿಲ್ಲ.

ಡಿಸೆಂಬರ್ 16ರಂದು ಸರಕಾರ ಪೆಟ್ರೋಲ್ ಮೇಲೆ ಅಬಕಾರಿ ಸುಂಕದಲ್ಲಿ ಲಿಟರಿಗೆ 30 ಪೈಸೆಯಂತೆ ಹೆಚ್ಚಿಸಿದರೆ, ಡೀಸೆಲ್ ಅಬಕಾರಿ ಸುಂಕದಲ್ಲಿ ಲೀಟರಿಗೆ ರೂ.1.17ರ ಹೆಚ್ಚಳ ಮಾಡಿದೆ. ಈ ಮೂಲÀಕ ಸರಕಾರ ಬಳಕೆದಾರರಿಗೆ ಹೋಗಬೇಕಾದ ಕನಿಷ್ಟ 2500 ಕೋಟಿ ರೂ.ಗಳನ್ನು ತನ್ನ ಬಜೆಟ್ ಕೊರತೆಯನ್ನು ತುಂಬಿಸಿಕೊಳ್ಳಲು ಕಿತ್ತುಕೊಂಡಿದೆ. ಇದು ಕಳೆದ ಆರು ವಾರಗಳಲ್ಲಿ ಎರಡನೇ ಅಬಕಾರಿ ಸುಂಕ ಏರಿಕೆ. ನವಂಬರ್ 7ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕದಲ್ಲಿ ಪ್ರತಿ ಲೀಟರಿಗೆ ಅನುಕ್ರಮವಾಗಿ ರೂ. 1.60 ಮತ್ತು 30ಪೈಸೆ ಏರಿಸಿ 3200 ಕೋಟಿ ರೂ.ಗಳನ್ನು ಕಿತ್ತುಕೊಂಡಿತ್ತು.

ಕಳೆದ ಒಂದು ವರ್ಷದಲ್ಲಿ ಆರು ಬಾರಿ ಪೆಟ್ರೋಲ್, ಡೀಸೆಲ್ ಮೇಲೆ ಅಬಕಾರಿ ಸುಂಕಗಳನ್ನು ಏರಿಸಿ ಒಟ್ಟು ರೂ.28200 ಕೋಟಿ ರೂ.ಗಳನ್ನು ಸರಕಾರ ಜನರಿಂದ ಕಿತ್ತುಕೊಂಡಿದೆ ಎಂದು ಲೆಕ್ಕ ಹಾಕಲಾಗಿದೆ. ಏರಿಸಿದ ದಿನಾಂಕ, ಪ್ರತಿ ಲೀಟರ್‍ಗೆ ಏರಿಕೆ ಮತ್ತು ಇದರಿಂದ ಸರಕಾರ ಪಡೆದ ಆದಾಯ(ಕೋಟಿ ರೂ.ಗಳಲ್ಲಿ)ದ ವಿವರಗಳು ಹೀಗಿವೆ(ಕೃಪೆ: ದಿ ಟೆಲಿಗ್ರಾಫ್, ಕೊಲ್ಕತಾ, ಡಿ.17, 2015).

 
ಪೆಟ್ರೋಲ್
ಡೀಸೆಲ್
ಆದಾಯ
ನವಂಬರ್ 13, 2014
1.50
1.50
6000
ಡಿಸೆಂಬರ್ 2, 2014
2.25
1.00
4000
ಜನವರಿ 1, 2015
2.00
2.00
7000
ಜನವರಿ 16, 2015
2.00
2.00
5500
ನವಂಬರ್    7, 2015
1.60
0.40
3200
ಡಿಸೆಂಬರ್ 16, 2015
0.30
1.17
2500
 

ಈ ಏರಿಕೆಗಳಿಲ್ಲದಿದ್ದರೆ ಪೆಟ್ರೋಲ್ ದರ ಲೀಟರ್‍ಗೆ ರೂ.5.22 ಮತ್ತು ಡೀಸೆಲ್ ದರ ರೂ.2.84 ರಷ್ಟು ಕಡಿಮೆ ಇರುತ್ತಿತ್ತು. ಅಂದರೆ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ರೂ. 58.16 ಮತ್ತು ಡೀಸೆಲ್ ಬೆಲೆ ರೂ. 45.96 ಇರುತ್ತಿತ್ತು. ಈಗ ಅದು ಕೇವಲ ಸುಂಕ ಏರಿಕೆಗಳಿಂದಾಗಿಯೇ ಪೆಟ್ರೋಲಿಗೆ ರೂ.63.38 ಮತ್ತು ಡೀಸೆಲ್‍ಗೆ ರೂ. 48.80 ಇದೆ.

ತೈಲ ಕಂಪನಿಗಳು ದರ ಕಡಿತ ಪ್ರಕಟಿಸುವ ದಿನವೇ ಲೋಕಸಭೆಯ ಶೂನ್ಯವೇಳೆಯಲ್ಲಿ ತೈಲ ಬೆಲೆಗಳ ಪ್ರಶ್ನೆಯನ್ನು ಎತ್ತಿದ್ದ ಸಿಪಿಐ(ಎಂ) ಸದಸ್ಯ ಎಂ.ಬಿ.ರಾಜೇಶ್ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್‍ಗೆ 35 ಡಾಲರಿಗೆ ಇಳಿದಿರುವಾಗ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ 25 ರೂ. ಕಡಿತ ಮಾಡಬೇಕು ಎಂದು ಸರಕಾರವನ್ನು ಆಗ್ರಹಿಸಿದ್ದರು. ಅಂದರೆ ಬೆಂಗಳೂರಿನಲ್ಲಿ ಪೆಟ್ರೋಲ್‍ಗೆ ಲೀಟರ್‍ಗೆ ಸುಮಾರು 54 ರೂ., ಡೀಸೆಲ್‍ಗೆ 36ರೂ. ಆಗಬೇಕಿತ್ತು.

ಮೋದಿ ಸರಕಾರ ಬಂದಂದಿನಿಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳು(ಪ್ರತಿ ಲೀಟರ್ ರೂ.) ಹಾಗೂ ಕಚ್ಚಾ ತೈಲದ(ಪ್ರತಿ ಬ್ಯಾರೆಲ್‍ಗೆ ಡಾಲರುಗಳು) ಬೆಲೆಗಳ ವಿವರ ಹೀಗಿದೆ:

ದಿನಾಂಕ
ಪೆಟ್ರೋಲ್
ಡೀಸೆಲ್
ಕಚ್ಚಾತೈಲ
ಮೇ 13, 2014
78.27
61.33   
101.70
ಜುಲೈ 01, 2014
80.68
62.85
105.34
ಅಕ್ಟೋಬರ್ 01, 2014
74.42
64.07
90.73
ಜನವರಿ    18, 2015
64.72
52.49
48.85
ಎಪ್ರಿಲ್     02, 2015
66.05
53.15
49.14
ಜೂನ್     16, 2015
73.77
55.83
59.97
ಸೆಪ್ಟಂಬರ್  01, 2015
64.61
47.02
45.41
ಡಿಸೆಂಬರ್ 16, 2015
63.38
48.80
35.52
 
 
2015-16 ರ ಬಜೆಟಿನಲ್ಲಿ ಜನಸಾಮಾನ್ಯರಿಗೆ  ಕೊಡುತ್ತಿದ್ದ  ಸಬ್ಸಿಡಿಗಳಲ್ಲಿ ಭಾರೀ ಕಡಿತ ಮಾಡಿ ಬಜೆಟ್ ಕೊರತೆಯನ್ನು ಇಳಿಸಿಕೊಂಡಿದ್ದರೂ ಶ್ರೀಮಂತ ವಿಭಾಗಗಳಿಂದ ನೇರ ತೆರಿಗೆ ವಸೂಲಾತಿಯನ್ನು ನಿರೀಕ್ಷಿತ ಮಟ್ಟದಲ್ಲಿ ಮಾಡಲಾಗದ ತನ್ನ ವಿಫಲತೆಯನ್ನು ಮುಚ್ಚಿಕೊಳ್ಳಲು ಸರಕಾರ ಮತ್ತೆ ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕಗಳನ್ನು ಏರಿಸಿದೆ,  ಈ ರೀತಿ ಜನರಿಗೆ ದಕ್ಕಬೇಕಾಗಿದ್ದ ಬೆಲೆ ಇಳಿಕೆ ಲಭ್ಯವಾಗದಂತೆ ಮಾಡಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯ.
ಈ ಮೂಲಕ ‘ಬಜೆಟ್’ ಎಂಬುದು, ಜತೆಗೆ ‘ಅಚ್ಛೇ ದಿನ್’ ಎಂಬುದು ಎರಡೂ ಸಂಪೂರ್ಣವಾಗಿ ಅರ್ಥಹೀನವಾಗಿವೆ.