ಎತ್ತ ಹೋಯಿತು ‘ಗರಿಷ್ಟ ಆಳ್ವಿಕೆ, ಕನಿಷ್ಟ ಸರಕಾರ’ದ ಭರವಸೆ?

Friday, 18 December 2015

ದಿಲ್ಲಿ ಮುಖ್ಯಮಂತ್ರಿ ಕಚೇರಿ ಮೇಲೆ ಸಿಬಿಐ ದಾಳಿ  -  ಸೀತಾರಾಂ ಯೆಚುರಿ

ಸಿಬಿಐ ದಿಲ್ಲಿ ಮುಖ್ಯಮಂತ್ರಿಗಳ ಕಚೇರಿ ಮೇಲೆ ದಾಳಿ ಮಾಡಿದೆ. ಅವರ ಕಚೇರಿಯನ್ನು ಸೀಲ್ ಮಾಡಿ ಕಡತಗಳನ್ನು ಹುಡುಕಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಅವರ ಮುಖ್ಯ ಕಾರ್ಯದರ್ಶಿಯ ಮೇಲೆ ಭ್ರಷ್ಟಾಚಾರದ ಆಪಾದನೆಗಳಿದ್ದು ಆ ಸಂಬಂಧ ಈ ದಾಳಿ ನಡೆದಿದೆ ಎಂದು ಸಿಬಿಐ ಮತ್ತು ಮೋದಿ ಸರಕಾರದ ವಕ್ತಾರರು, ಬಿಜೆಪಿ  ಮುಖಂಡರು ಸಮಜಾಯಿಷಿ ನೀಡುತ್ತಿದ್ದಾರೆ.

ಒಬ್ಬ ಪ್ರಮುಖ ಅಧಿಕಾರಿಯ ಉನ್ನತ ಮಟ್ಟದ ಭ್ರಷ್ಟಾಚಾರದ ತನಿಖೆಯ ಭಾಗವಾಗಿ ಇದನ್ನು ನಡೆಸಲಾಗಿದೆ ಎಂಬ ತರ್ಕವನ್ನು ಒಪ್ಪಿಕೊಂಡರೂ ಕೂಡ ಚುನಾಯಿತ ಮುಖ್ಯಮಂತ್ರಿಗಳೊಡನೆ ಸಮಾಲೋಚನೆ ನಡೆಸುವುದು ಒತ್ತಟ್ಟಿಗಿರಲಿ, ಅವರಿಗೆ ಮಾಹಿತಿ ಕೂಡ ನೀಡದೆ ಇದು ಹೇಗೆ ನಡೆಯಲು ಸಾಧ್ಯ ಎಂಬುದು ಅರ್ಥವಾಗದ ಸಂಗತಿ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಹೇಳಿದ್ದಾರೆ. ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ಬಿಜೆಪಿ ಸರಕಾರಗಳಿರುವಲ್ಲಿ ಈ ಅಳತೆಗೋಲನ್ನು ಬಳಸಲಿಲ್ಲ ಏಕೆ?  ಆರೆಸ್ಸೆಸ್ ಪ್ರಚಾರಕರನ್ನು ರಾಜ್ಯಪಾಲರುಗಳಾಗಿ ನೇಮಿಸಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ರಾಜ್ಯ ಮುಖ್ಯಮಂತ್ರಿಗಳೊಡನೆ ಸಮಾಲೋಚನೆ ಕೂಡ ನಡೆಸುವುದಿಲ್ಲ, ಕೇವಲ ಅವರಿಗೆ ‘ಮಾಹಿತಿ’ ನೀಡಲಾಗುತ್ತಿದೆ. ‘ಗರಿಷ್ಟ ಗವರ್ನೆನ್ಸ್, ಕನಿಷ್ಟ ಗವರ್ನ್‍ಮೆಂಟ್’(ಗರಿಷ್ಟ ಆಳ್ವಿಕೆ, ಕನಿಷ್ಟ ಸರಕಾರ)ದ ಭರವಸೆ ಎತ್ತ ಹೋಗಿದೆ ಎಂದು ಯೆಚುರಿ ಪ್ರಶ್ನಿಸಿದ್ದಾರೆ.

ಸಿಪಿಐ(ಎಂ) ಪೊಲಿಟ್‍ಬ್ಯುರೊ ಇದು ಅತ್ಯಂತ ಖಂಡನೀಯ, ಇದರಲ್ಲಿ ರಾಜಕೀಯ ಉದ್ದೇಶದ ವಾಸನೆ ಬರುತ್ತಿದೆ, ಈ ರೀತಿಯ ಕೃತ್ಯ ಅಭೂತಪೂರ್ವ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ. ಸಿಬಿಐ ಹೇಳುವಂತೆ ಸಂಬಂಧಪಟ್ಟ ಅಧಿಕಾರಿಯ ಕಚೇರಿ ಮತ್ತು ಮುಖ್ಯಮಂತ್ರಿಗಳ ಕಚೇರಿ ಒಂದೇ ಮಹಡಿಯಲ್ಲಿತ್ತು ಎಂದಾದರೆ ಮುಖ್ಯಮಂತ್ರಿಗಳೊಡನೆ ಸಮಾಲೋಚನೆ ಏಕೆ ನಡೆಸಿಲ್ಲ ಎಂದು ಪೊಲಿಟ್‍ಬ್ಯುರೊ ಪ್ರಶ್ನಿಸಿದೆ. ಈ ದಾಳಿಯಿಂದ ಮೋದಿ ಸರಕಾರ ಬಿಜೆಪಿಯೇತರ ಚುನಾಯಿತ ಸರಕಾರಗಳ ಹಕ್ಕುಗಳು ಮತ್ತು ಘನತೆಯನ್ನು ಆಕ್ರಮಿಸಿಕೊಳ್ಳುವಲ್ಲಿ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಭಿಪ್ರಾಯ ಪಟ್ಟಿದೆ.