‘ಮಡೆ ಮಡೆ ಸ್ನಾನ’ ಅನಾಗರೀಕ ಪದ್ದತಿ ವಿರುದ್ಧ ಪ್ರತಿಭಟನೆ

Monday, 14 December 2015

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ‘ಮಡೆ ಮಡೆ ಸ್ನಾನ’ ಅನಾಗರೀಕ ಪದ್ದತಿಯ ರದ್ದುಗೊಳಿಸಬೇಕೆಂದು ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಬೆಂಗಳೂರಿನ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿರವರಿಗೆ ಮನವಿ ನೀಡಿದರು.

‘ಮಡೆ ಮಡೆ ಸ್ನಾನ’ ಒಂದು ಅನಾಗರೀಕ ಪದ್ದತಿ. ದಕ್ಷಿಣ ಕನ್ನಡ ಜಿಲ್ಲೆಯ ಮಲೆಕುಡಿಯ ಆದಿವಾಸಿ ದಲಿತರನ್ನು ದೇವರ ಮೇಲಿನ ನಂಬಿಕೆ ಹೆಸರಿನಲ್ಲಿ ಬ್ರಾಹ್ಮಣರು ತಿಂದ ಎಂಜಲು ಎಲೆಯ ಮೇಲೆ ಉರುಳು ಸೇವೆ ಮಾಡಿಸುವ ಮುಖಾಂತರ ಮೌಢ್ಯವನ್ನು ಮುಗ್ಧಜನರ ಮೇಲೆ ಏರಿದಂತಾಗಿದೆ. ಇಂತಹ ಅಮಾನವೀಯ ಸಂಪ್ರದಾಯಗಳನ್ನು ತೊಡೆದು ಹಾಕುವ ಜವಾಬ್ದಾರಿ ಸರ್ಕಾರದ ಮೇಲಿದೆ. ನಮ್ಮ ಸಂವಿಧಾನವು ಇಂತಹ ಅನಾಗರೀಕ ಪದ್ದತಿಯನ್ನು ಒಪ್ಪುವುದಿಲ್ಲ.

ವೈಜ್ಞಾನಿಕ ಬೆಳವಣಿಗೆಯ ಈ ಸನ್ನಿವೇಶದಲ್ಲಿ, ಇಂತಹ ಮೌಢ್ಯವನ್ನು ವಿರೋಧಿಸಿ ಉಡುಪಿಯಲ್ಲಿ ಪಂಕ್ತಿಭೇಧ, ದೇವದಾಸಿ ಪದ್ದತಿ, ಬೆತ್ತಲೆ ಸೇವೆ ಇವುಗಳ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿಯು ಒತ್ತಾಯಿಸಿದೆ.

ರಾಜ್ಯದ ಪ್ರಜ್ಞಾವಂತ ನಾಗರೀಕರು, ಪ್ರಗತಿಪರ ಮಠಾಧೀಶರು, ಸಾಹಿತಿಗಳು, ಬುದ್ದಿ ಜೀವಿಗಳು, ಚಿಂತಕರು, ಇದರ ವಿರುದ್ಧ ರಾಜ್ಯದಲ್ಲಿ ಹೋರಾಟ ನಡೆಸಿ ಮೌಢ್ಯವನ್ನು ತೊಡೆದು ಹಾಕಲು ಸರ್ಕಾರ ಕಾನೂನು ತರಬೇಕೆಂದು ಒತ್ತಾಯಿಸಿದ್ದು, ಇದೆಲ್ಲವನ್ನು ಗಮನಕ್ಕೆ ತೆಗೆದುಕೊಳ್ಳದ ಕೆಲ ಮೂಲಭೂತವಾದದ ಧಾರ್ಮಿಕವಾದಿಗಳು ಇಂತಹ ಅನಾಗರೀಕ ಸಂಪ್ರದಾಯಗಳನ್ನು ಪ್ರೋತ್ಸಾಹಿಸುತ್ತಿರುವುದು ಖಂಡನೀಯವಾಗಿದೆ.
2015ರ ಡಿಸೆಂಬರ್ 15-16ರಂದು ದಕ್ಷಿಣ ಕನ್ನಡದ ಕುಕ್ಕೆ ಸುಬ್ರಮಣ್ಯದಲ್ಲಿ ಈ ಉರುಳು ಸೇವೆಯನ್ನು ನಡೆಸುತ್ತಿರುವುದನ್ನು ವಿರೋಧಿಸಿ ರಾಜ್ಯದ ಹಲವು ಕಡೆ ಪ್ರತಿಭಟನೆಯನ್ನು ದಲಿತ ಹಕ್ಕುಗಳ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣ ಅರಳಹಳ್ಳಿ, ಕೃಷಿ ಕೂಲಿಕಾರರ ಸಂಘದ ರಾಜ್ಯ ಅಧ್ಯಕ್ಷರಾದ ನಿತ್ಯಾನಂದಸ್ವಾಮಿ, ಸಮಿತಿ ಪದಾಧಿಕಾರಿಗಳಾದ ಎನ್.ನಾಗರಾಜ್, ರಾಜಶೇಖರ ಮೂರ್ತಿ, ರೈತ ಮುಖಂಡರಾದ ಯು.ಬಸವರಾಜು, ಕಾರ್ಮಿಕ ಮುಖಂಡರು ಸೇರಿದಂತೆ ಹಲವರು ಭಾಗವಹಿಸಿದ್ದರು.