ಬುಡಕಟ್ಟು ಜನರ ಪ್ರತಿರೋಧಕ್ಕೆ ಮಣಿದು ಬಾಕ್ಸೈಟ್ ಗಣಿಗಾರಿಕೆ ಲೀಸ್ ರದ್ದು

ಸಂಪುಟ: 
9
ಸಂಚಿಕೆ: 
50
Sunday, 6 December 2015

ಆಂಧ್ರ ಪ್ರದೇಶದ ಜೆರ್ಲಾ ರಕ್ಷಿತ ಪ್ರದೇಶದಲ್ಲಿ ಬಾಕ್ಸೈಟ್ ಗಣಿಗಾರಿಕೆಗೆ ನೀಡಿದ್ದ ಲೀಸ್ ಆದೇಶವನ್ನು ಅಲ್ಲಿನ ತೆಲುಗುದೇಶಂ ನೇತೃತ್ವದ ಸರಕಾರ ರದ್ದುಗೊಳಿಸಿದೆ. ಇದಕ್ಕೆ ಕಾರಣವಾದದ್ದು ಆ ಪ್ರದೇಶದ ಬುಡಕಟ್ಟು ಜನರು ಹಾಗೂ ಸಿಪಿಐ(ಎಂ)ನ ರಾಜಿರಹಿತ ಹೋರಾಟ. ವಿಶಾಖಪಟ್ಟಣಂ ಜಿಲ್ಲೆಯ ಜೆರ್ಲಾದ 1212 ಹೆಕ್ಟೇರ್ ಪ್ರದೇಶದ ಬಾಕ್ಸೈಟ್ ಬ್ಲಾಕ್‍ಗಳಲ್ಲಿ ಗಣಿಗಾರಿಕೆ ಮಾಡಲು ಟಿಡಿಪಿ ಸರಕಾರ ಆಂಧ್ರಪ್ರದೇಶ ಖನಿಜ ನಿಗಮಕ್ಕೆ ಲೀಸ್ ಮಂಜೂರು ಮಾಡಿ ನವೆಂಬರ್ 5ರಂದು ಆದೇಶ ಹೊರಡಿಸಿತ್ತು.

ಆದೇಶ ಹೊರಬಿದ್ದ ದಿನವೇ ಸಿಪಿಐ(ಎಂ), ಆಂಧ್ರಪ್ರದೇಶ ಗಿರಿಜನ ಸಂಘಂ ಉಗ್ರ ವಿರೋ ಧ ವ್ಯಕ್ತಪಡಿಸಿತ್ತು. ಸರಕಾರದ ಕ್ರಮದ ವಿರುದ್ಧ ಬುಡಕಟ್ಟು ಜನಸಮೂಹ ಬಂಡಾಯವೆದ್ದಿತು. ಅನುಸೂಚಿತ ಪ್ರದೇಶಗಳು ಮತ್ತು ಇತರ ಜಿಲ್ಲೆಗಳ ಎಲ್ಲಾ ಮಂಡಲ ಕಚೇರಿಗಳ ಮುಂದೆ ನವೆಂಬರ್ 6ರಂದು ಸಿಪಿಐ(ಎಂ) ಧರಣಿಗಳನ್ನು ನಡೆಸಿತು. ಅದು ನೀಡಿದ ಬಂದ್ ಕರೆಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿತು. ಅನುಸೂಚಿತ ಪ್ರದೇಶಗಳಲ್ಲಿ ಜನಜೀವನ ಸ್ತಬ್ಧಗೊಂಡಿತು. ಬುಡಕಟ್ಟು ಜನರ ಹೋರಾಟವನ್ನು ಬೆಂಬಲಿಸಿ ವಿಶಾಖಪಟ್ಟಣಂನಲ್ಲಿ ಪಕ್ಷದ ಸ್ಥಳೀಯ ಘಟಕಗಳು ಮತ್ತು ಸಾಮೂಹಿಕ ಸಂಘಟನೆಗಳು ರ್ಯಾಲಿಗಳನ್ನು ನಡೆಸಿದವು. ಅನುಸೂಚಿತ ಪ್ರದೇಶಗಳ ಎಲ್ಲಾ 11 ಮಂಡಲಗಳಲ್ಲಿ ನವೆಂಬರ್ 10ರಿಂದ ನಡೆದ ಉಪವಾಸ ಸತ್ಯಾಗ್ರಹಕ್ಕೆ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

2000ನೆ ಇಸವಿಯಲ್ಲಿ ಟಿಡಿಪಿ ಸರಕಾರ ಬಾಕ್ಸೈಟ್ ಗಣಿಗಾರಿಕೆಗೆ ಮುಂದಾದಲಾಗಿನಿಂದಲೂ ಅದರ ವಿರುದ್ಧ ಬುಡಕಟ್ಟು ಜನರನ್ನು ಅಣಿನೆರೆಯಿಸುವಲ್ಲಿ ಸಿಪಿಐ (ಎಂ) ಮುಂಚೂಣಿಯಲ್ಲಿ ನಿಂತಿದೆ. ಸಿಪಿಐ (ಎಂ) ಮತ್ತು ಆದಿವಾಸಿ ಅಧಿಕಾರ ಮಂಚ್ ಆಶ್ರಯದಲ್ಲಿ ಅನೇಕ ಪ್ರತಿಭಟನಾ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಸಿಪಿಐ (ಎಂ) ಪಾಲಿಟ್‍ಬ್ಯೂರೋ ಸದಸ್ಯೆ ಬೃಂದಾ ಕಾರಟ್, ಸಂಸತ್ ಸದಸ್ಯರಾದ ಜಿತೇನ್ ಚೌ ಧರಿ, ಮಿಡಿಯುಮ್ ಬಾಬುರಾವ್, ಸುನ್ನಮ್ ರಾಜಯ್ಯ ಮತ್ತಿತರ ಹಿರಿಯ ನಾಯಕರು ಈ ಹೋರಾಟಗಳಲ್ಲಿ ಭಾಗವಹಿಸಿ ಸ್ಫೂರ್ತಿ, ಉತ್ಸಾಹ ತುಂಬಿದ್ದರು. ಅಂತೂ ಕೊನೆಗೂ ಸುದೀರ್ಘ ಹೋರಾಟಕ್ಕೆ ಮಣಿದ ರಾಜ್ಯ ಸರಕಾರವು ಖನಿಜ ನಿಗಮಕ್ಕೆ ನೀಡಿದ್ದ ಲೀಸ್ ಆದೇಶವನ್ನು ರದ್ದುಗೊಳಿಸಿತು.

ಕಾನೂನುಬಾಹಿರ ಹಾಗೂ ಅಸಾಂವಿಧಾನಿಕ

ಯಾವುದೇ ರಾಜ್ಯದಲ್ಲಿನ 5ನೇ ಅನುಸೂಚಿಯಲ್ಲಿ ಅನುಸೂಚಿತವಾದ ಬುಡಕಟ್ಟು ಪ್ರದೇಶಗಳಲ್ಲಿನ ಯಾವುದೇ ವಿಷಯಕ್ಕೆ ಸಂಬಂಧಿಸಿ ಅಲ್ಲಿನ ಸರಕಾರವು ಬುಡಕಟ್ಟು ಸಲಹಾ ಮಂಡಳಿಯ ಸಲಹೆ ಪಡೆಯಬೇಕೆಂದು ಸಂವಿಧಾನ ಹೇಳಿದೆ. ಸಂವಿಧಾನದ 244 (1) ವಿಧಿಯನ್ವಯ ರಾಜ್ಯಪಾಲರು ಈ ಸಲಹೆಯನ್ನು ಪಡೆಯಬೇಕು. 5ನೇ ಅನುಸೂಚಿಯಲ್ಲಿನ ಬುಡಕಟ್ಟು ಪ್ರದೇಶಗಳನ್ನು ಯಾವುದೇ ಖಾಸಗಿ ಸಂಸ್ಥೆಗೆ ನೀಡುವಂತಿಲ್ಲ ಎಂಬುದನ್ನು 1997ರ ಸಮತಾ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಕೂಡ ಎತ್ತಿಹಿಡಿದಿದೆ. ಆದರೆ ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲಂಘಿಸಿ ಆಂಧ್ರಪ್ರದೇಶ ಸರಕಾರ ಲೀಸ್ ಆದೇಶವನ್ನು ಹೊರಡಿಸಿತ್ತು. ಖನಿಜ ನಿಗಮವು ಯುಎಇಯ ರಸ್ ಅಲ್-ಖೈಮ್ ಮತ್ತು ಅನ್ರಕ್ ಜತೆ ಮಾಡಿಕೊಂಡ ಕರಾರಿನಲ್ಲಿ (ಎಂಓಯು)  ಕೇವಲ 1.50 ಶೇಕಡಾ ಶೇರು ಸಾರ್ವಜನಿಕರಿಗೆ ಸೇರುತ್ತದೆ, ಉಳಿದ 98.50 ಶೇರು ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳ ಕೈಯಲ್ಲಿರುತ್ತದೆ ಎಂದು ನಮೂದಿಸಲಾಗಿತ್ತು.

ಇದು 5ನೇ ಸೂಚಿಯಲ್ಲಿನ ಪ್ರದೇಶಗಳನ್ನು ಖಾಸಗಿಯವರಿಗೆ ನೀಡುವುದಲ್ಲದೆ ಇನ್ನೇನೂ ಅಲ್ಲ. ಇದು ಆಂಧ್ರಪ್ರದೇಶ ಅನುಸೂಚಿತ ಪ್ರದೇಶಗಳ ಭೂ ವರ್ಗಾವಣೆ ನಿಯಂತ್ರಣ ಕಾಯ್ದೆಯ ಖುಲ್ಲಂಖುಲ್ಲಾ ಉಲ್ಲಂಘನೆಯೂ ಆಗಿತ್ತು. 2013-14ನೇ ಸಾಲಿನ ಸಿಎಜಿ ವರದಿ ಈ ಎಂಓಯು ಅನ್ನು ರದ್ದುಪಡಿಸುವಂತೆ ಶಿಫಾರಸು ಮಾಡಿತ್ತು. ಪರಿಸರ ಮತ್ತು ಅರಣ್ಯ ಇಲಾಖೆ ಜೆ.ಸಿ. ಕಲಾ ನೇತೃತ್ವದ ಒಂದು ಸಮಿತಿಯನ್ನು ರಚಿಸಿ ವಿಶಾಖಪಟ್ಟಣಂ ಜಿಲ್ಲೆಯಲ್ಲಿನ ಬಾಕ್ಸೈಟ್ ಗಣಿಗಾರಿಕೆ ಬಗ್ಗೆ ಪರಿಶೀಲಿಸುವಂತೆ ಸೂಚಿಸಿತ್ತು. ಲೀಸ್ ಕೊಡುವುದಕ್ಕೂ ಮುಂಚೆ, ಉದ್ದೇಶಿತ ಗಣಿಗಾರಿಕೆ ಪ್ರದೇಶದ 10 ಕಿಮೀ ವ್ಯಾಪ್ತಿಯ ಪಂಚಾತಯ್‍ಗಳು  ಅಥವಾ ಗ್ರಾಮಸಭಾಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿತ್ತು.

ದ್ವಿಮುಖ ಧೋರಣೆ

ಬಾಕ್ಸೈಟ್ ಗಣಿಗಾರಿಕೆ ಲೀಸ್ ವಿಚಾರ ಆಳುವ ಟಿಡಿಪಿಯ ದಿಮುಖ ಧೋರಣೆಯನ್ನು ಬಯಲುಗೊಳಿಸಿದೆ. ಅದು ಪ್ರತಿಪಕ್ಷದಲ್ಲಿದ್ದಾಗ 2001ರಲ್ಲಿ ಅದರ ಅಧ್ಯಕ್ಷ, ಈಗಿನ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅಂದಿನ ಮುಖ್ಯಮಂತ್ರಿಗೆ ಪತ್ರ ಬರೆದು ಬಾಕ್ಸೈಟ್ ಗಣಿಗಾರಿಕೆಗೆ ವಿರೋಧವನ್ನು ವ್ಯಕ್ತಪಡಿಸಿದ್ದರು. ಜಗಮೋಹನ್ ರೆಡ್ಡಿ ನೇತೃತ್ವದ ವೈಎಸ್‍ಆರ್ ಕಾಂಗ್ರೆಸ್ ಪಕ್ಷ ಕೂಡ ಈಗ ಈ ಲೀಸ್ ಆದೇಶದ ವಿರುದ್ಧ ಹೋರಾಟಕ್ಕೆ ಇಳಿದಿತ್ತು. ಆದರೆ ಅದು ಬರೀ ರಾಜಕೀಯ ದೊಂಬರಾಟ ಎನ್ನುವುದು ಎಲ್ಲರಿಗೂ ಗೊತ್ತು. ಯಾಕೆಂದರೆ ಅದು ಈಗ ಅಧಿಕಾರದಲ್ಲಿ ಇಲ್ಲ. ಅಧಿಕಾರದಲ್ಲಿ ಇದ್ದಿದ್ದರೆ ಅದರ ನಿಲುವೇ ಬೇರೆ ಇರುತ್ತಿತ್ತು ಎನ್ನುವುದಲ್ಲಿ ಯಾವುದೇ ಸಂಶಯವಿಲ್ಲ.

ಏನೇ ಇರಲಿ, ಬಾಕ್ಸೈಟ್ ಗಣಿಗಾರಿಕೆ ಲೀಸ್ ಆದೇಶ ರದ್ದುಪಡಿಸಿರುವುದು ಸಿಪಿಐ (ಎಂ) ಮತ್ತು ಬುಡಕಟ್ಟು ಜನರ ನಿರಂತರ ರಾಜಿರಹಿತ ಹೋರಾಟಕ್ಕೆ ಸಂದ ಜಯವಾಗಿದೆ. ಇನ್ನು ಮುಂದೆಯೂ  ಯಾವತ್ತಾದರೂ ಗಣಿಗಾರಿಕೆಗೆ ಮತ್ತೆ ಅನುಮತಿ ಕೊಡಬಾರದು ಎನ್ನುವುದನ್ನು ಖಾತರಿಪಡಿಸಲು ಜಾಗೃತರಾಗಿದ್ದು ಹೋರಾಟಗಳನ್ನು ನಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

 

- ವಿಶ್ವಾಸ್