ಅರ್ಜೆಂಟಿನಾದಲ್ಲಿ ಎಡ ಅಭ್ಯರ್ಥಿಗೆ ಸೋಲು

ಸಂಪುಟ: 
9
ಸಂಚಿಕೆ: 
50
Sunday, 6 December 2015

ಲ್ಯಾಟಿನ್ ಅಮೆರಿಕದಿಂದ ಸುಮಾರು ಎರಡು ದಶಕಗಳ ನಂತರ ಕೆಟ್ಟ ಸುದ್ದಿಯೊಂದು ಬಂದಿದೆ. ಎಡ ಶಕ್ತಿಗಳು ದೇಶದಿಂದ ದೇಶಕ್ಕೆ ಜಯದ ಮೇಲೆ ಜಯಭೇರಿ ಬಾರಿಸುತ್ತಿದ್ದ ಪ್ರಕ್ರಿಯೆಯಲ್ಲಿ ಸಣ್ಣ ಹಿನ್ನಡೆ ಬಂದಿದೆ. ಅರ್ಜೆಂಟಿನಾದಲ್ಲಿ 13 ವರ್ಷಗಳ ಕಾಲ ಆಳಿದ ಎಡ ಶಕ್ತಿಗಳಿಗೆ ಸೋಲಾಗಿದೆ. ಮೊದಲನೇ ಸುತ್ತಿನಲ್ಲಿ ಮೊದಲ ಸ್ಥಾನದಲ್ಲಿದ್ದ ಪೆರೊನಿಸ್ಟ್ ಪಕ್ಷದ ನಾಯಕತ್ವದ ರಂಗದ ಅಭ್ಯರ್ಥಿ ಡೇನಿಯಲ್ ಸ್ಕಿಯಾಲಿ ಎರಡನೇ ಸುತ್ತಿನಲ್ಲಿ ಸಣ್ಣ ಅಂತರದಿಂದ ಸೋತಿದ್ದಾರೆ. ಬಲಪಂಥೀಯ ಅಭ್ಯರ್ಥಿ ಮಾರಿಶಿಯೊ ಮಾಕ್ರಿ ಅಧ್ಯಕ್ಷರಾಗಿ ಅಯ್ಕೆಯಾಗಿದ್ದಾರೆ.  ಮಾರಿಶಿಯೊ ಮಾಕ್ರಿ ಶೇ. 51.34 ಮತ ಗಳಿಸಿದರೆ, ಡೇನಿಯಲ್ ಸ್ಕಿಯಾಲಿ ಶೇ. 48.66 ಮತ ಗಳಿಸಿದ್ದಾರೆ. ಮೊದಲ ಸುತ್ತಿನಲ್ಲೇ ಆಯ್ಕೆಯಾಗುತ್ತಾರೆ ಎಂದು ನಿರೀಕ್ಷಿಸಲಾಗಿದ್ದ ಆಗ ಸ್ಕಿಯಾಲಿ ಶೇ. 37 ಮತ ಪಡೆದು ಮೊದಲ ಸ್ಥಾನದಲ್ಲಿ ಇದ್ದರು. ಮಾರಿಶಿಯೊ ಮಾಕ್ರಿ ಮೊದಲ ಸುತ್ತಿನಲ್ಲಿ ಶೇ. 34 ಮತ ಪಡೆದು ಸಣ್ಣ ಅಂತರದಿಂದ ಹಿಂದಿದ್ದರು.

ಆದರೂ ಪೆರೊನಿಸ್ಟ್ ಪಕ್ಷದ ಅಪಾರ ಜನಪ್ರಿಯತೆಯಿಂದಾಗಿ ಸ್ಕಿಯಾಲಿ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇತ್ತು. ಇದಕ್ಕೆ ಕಾರಣ ನವ-ಉದಾರವಾದದ ವಿರುದ್ಧ ಅರ್ಜೆಂಟಿನಾ ಲ್ಯಾಟಿನ್ ಅಮೆರಿಕದ ಹೋರಾಟದ ಮುಂಚೂಣಿಯಲ್ಲಿತ್ತು. ತೀವ್ರ ಆರ್ಥಿಕ ಬಿಕ್ಕಟ್ಟಿನ ನಂತರ ಐ.ಎಂ.ಎಫ್. ಸಾಲವನ್ನು ಹಿಂದಿರುಗಿಸಲು ನಿರಾಕರಿಸಿತ್ತು. ಕಳೆದ 13 ವರ್ಷಗಳಲ್ಲಿ ಅರ್ಜೆಂಟಿನಾ ಸರಕಾರ ಜನಪ್ರಿಯ ನವ-ಉದಾರವಾದಿ ವಿರೋಧಿ ನೀತಿಗಳನನು ಅನುಸರಿಸಿ ಜನಕಲ್ಯಾಣ ಸಾಧಿಸಿತ್ತು. ಮೊದಲು ಅಧ್ಯಕ್ಷರಾದ ನೆಸ್ಟರ್ ಕಿರ್ಚನರ್, ಅವರ ನಿಧನದ ನಂತರ ಅಧ್ಯಕ್ಷತೆ ವಹಿಸಿಕೊಂಡ ಕ್ರಿಸ್ಟಿನಾ ಫೆರ್ನಾಂಡಿಸ್ ಈ ನೀತಿಗಳನ್ನು ಜಾರಿ ಮಾಡಿ ಹೆಚ್ಚಿನ ಜನಪ್ರಿಯತೆ ಗಳಿಸಿದ್ದರು.

ಅಂಕಿ-ಅಂಶಗಳು ಲಭ್ಯವಿರುವ 2003-2013ರ ಅವಧಿಯಲ್ಲಿ ಬಡತನ ಶೇ. 70 ರಷ್ಟು ಕಡಿಮೆಯಾಗಿತ್ತು. ಕಡು ಬಡತನ ಶೇ. 80ರಷ್ಟು ಕಡಿಮೆಯಾಗಿತ್ತು. ನಿರುದ್ಯೋಗ ಶೇ. 17.2ರಿಂದ ಶೇ. 6.9ಕ್ಕೆ ಇಳಿದಿತ್ತು. ಆದರೆ ಈ ಎಲ್ಲಾ ಸಾಧನೆಗಳನ್ನು ಪ್ರಸಾರ ಮಾಡಿ ಅದರ ಹಿಂದಿರುವ ನೀತಿಗಳನ್ನು ಮುಂದುವರೆಸುವ ಬಗ್ಗೆ ಜನತೆಯನ್ನು ಒಪ್ಪಿಸುವ ಕೆಲಸದಲ್ಲಿ ಡೇನಿಯಲ್ ಸ್ಕ್ಯಿಯಾಲಿ ಹಿಂದೆ ಬಿದ್ದಿದ್ದಾರೆ ಮಾತ್ರವಲ್ಲ, ಈಗ ದೇಶವನ್ನು ತೀವ್ರವಾಗಿ ಬಾಧಿಸುತ್ತಿರುವ ಹಣದುಬ್ಬರದ ಸಮಸ್ಯೆಯನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ಸ್ಕಿಯಾಲಿ ಸ್ಪಷ್ಟ ಪಡೆಸಲಿಲ್ಲ. ಕೆಲವು ಜನ ಕಲ್ಯಾಣ ನೀತಿಗಳೇ ಹಣದುಬ್ಬರದ ಸಮಸ್ಯೆಗಳಿಗೆ ಕಾರಣ ಎಂದು ಮಾಧ್ಯಮಗಳು ಹಗಲು-ರಾತ್ರಿ ಪ್ರಸಾರ ಮಾಡುವ ಧೋರಣೆಗೆ ಪ್ರತಿ-ಪ್ರಚಾರ ಮಾಡುವಲ್ಲಿ ಸ್ಕಿಯಾಲಿ ಸೋತಿದ್ದಾರೆ, ಎಂಬುದು ವೀಕ್ಷಕರ ಅಭಿಪ್ರಾಯ.

ಅಧ್ಯಕ್ಷರಾಗಿ ಗೆದ್ದ ಮೇಲೆ ಮಾಕ್ರಿ ವೆನೆಜುವೇಲಾ-ವಿರೋಧಿ ಅಮೆರಿಕ-ಪರ ಹೇಳಿಕೆಗಳನ್ನು ನೀಡಿದ್ದಾರೆ. ಚವೇಝ್ ಕಟ್ಟಿ ಬೆಳೆಸಿದ ಲ್ಯಾಟಿನ್ ಅಮೆರಿಕನ್ ದೇಶಗಳ ವಾಣಿಜ್ಯ ಕೂಟ ‘ಮೆರ್ಕೊಸುರ್’ನಿಂದ, ಹಣದುಬ್ಬರ ಕಡಿಮೆ ಮಾಡಲು ಕೆಲವು ಜನಕಲ್ಯಾಣ ಯೋಜನೆಗಳನನು ಕಡಿತ ಅಥವಾ ಹಿಂತೆಗೆಯುವ ಬಗೆಗೂ ಮಾತನಾಡಿದ್ದಾರೆ. ಆದರೆ ಅರ್ಜೆಂಟಿನಾದ ಪಾರ್ಲಿಮೆಂಟಿನಲ್ಲಿ ಮಾಕ್ರಿ ಅವರ ಬಲಪಂಥೀಯ ರಂಗಕ್ಕೆ ಬಹುಮತ ಇಲ್ಲ. ಆದ್ದರಿಂದ ಕಳೆದ ಒಂದು ದಶಕದ ನೀತಿಗಳನ್ನು ಹಿಂತೆಗೆಯುವುದು ಅಷ್ಟು ಸುಲಭದ ಕೆಲಸವಲ್ಲ. ಜನಕಲ್ಯಾಣ ಯೋಜನೆಗಳ ಕಡಿತ, ಹಿಂತೆಗೆತ, ಮಿತವ್ಯಯದ ನೀತಿಗಳನ್ನು ಜಾರಿ ಮಾಡಲು ಸಹ ತೀವ್ರ ಪ್ರತಿರೋಧ ಬರಬಹುದು.

ಅಮೆರಿಕ ಎಡ ಸರಕಾರಗಳನ್ನು ಬುಡಮೇಲು ಮಾಡಲು ಆರ್ಥಿಕ ಬಿಕ್ಕಟ್ಟು ಸೃಷ್ಟಿಸಲು ಪಯತ್ನಗಳನ್ನು ನಡೆಸಿದೆ. ಚುನಾವಣೆ ನಡೆಯುವ ದೇಶಗಳಲ್ಲಿ ಎಡ ರಂಗಗಳು ಅಧಿಕಾರಕ್ಕೆ ಬರುವುದನ್ನು ತಡೆಗಟ್ಟಲು ತೀವ್ರ ಪಯತ್ನಗಳನ್ನು ನಡೆಸಿದೆ. ಬಲಪಂಥೀಯ ರಂಗಗಳಿಗೆ ಭಾರೀ ಹಣಕಾಸು ನೆರವು, ಪ್ರಚಾರ, ಎಡರಂಗದ ವಿರುದ್ಧ ಅಪಪ್ರಚಾರ ಇವುಗಳನ್ನೆಲ್ಲಾ ಮಾಡುತ್ತಾ ಮಧ್ಯಪ್ರವೇಶ ಮಾಡುತ್ತಿದೆ. ಬ್ರೆಜಿಲ್ ನಲ್ಲಿ ಎಡ ಅಧ್ಯಕ್ಷೆ ವಿರುದ್ಧ ಪದಚ್ಯುತಿಯ ಪ್ರಕ್ರಿಯೆಯನ್ನು ವಿರೋಧ ಪಕ್ಷಗಳೂ ಆರಂಭಿಸಿವೆ. ವೆನೆಜುವೇಲಾದಲ್ಲಿ ತೀವ್ರ ಆಹಾರ ಮತ್ತಿತರ ಅಗತ್ಯ ವಸ್ತುಗಳ ಪೂರೈಕೆ, ಬೆಲೆಏರಿಕೆ ಸೃಷ್ಟಿಸಿ ಮುಂಬರುವ ಚುನಾವಣೆಯಲ್ಲಿ ಸೋಲಿಸುವ ಹರಸಾಹಸ ಮಾಡುತ್ತಿದೆ.

ಈ ಎಲ್ಲದರ ಹಿನ್ನೆಲೆಯಲ್ಲಿ ಅರ್ಜೆಂಟಿನಾದ ಸೋಲು ಒಂದು ಎಚ್ಚರಿಕೆ ಗಂಟೆ. ಆದರೆ ಜನತೆ ಮತ್ತು ಎಡಶಕ್ತಿಗಳು ಗಾಬರಿ ಪಡಬೇಕಾಗಿಲ್ಲ. ಕಳೆದ ಎರಡು ದಶಕಗಳಲ್ಲಿ ಲ್ಯಾಟಿನ್ ಅಮೆರಿಕದಲ್ಲಿ ಸಾಕಷ್ಟು ಬದಲಾಗಿದೆ. ಕೆಲವೊಮ್ಮೆ ಜನರನ್ನು ದಾರಿ ತಪ್ಪಿಸಲು ಸಾಮ್ರಾಜ್ಯಶಾಹಿ ಶಕ್ತಿಗಳು ಸಫಲರಾಗಬಹುದು. ಆದರೆ ಜನ ತಮ್ಮ ತಪ್ಪನ್ನು ಅರಿತು ಬೇಗ ತಿದ್ದಿಕೊಳ್ಳುತ್ತಾರೆ. ಚಿಲಿಯಲ್ಲಿ ಇದೇ ರೀತಿ ಸೋಶಲಿಸ್ಟ್ (ಅವರೂ ಸ್ಕಿಯಾಲಿ ಥರ ದುರ್ಬಲರಾಗಿದ್ದರು)ಅಭ್ಯರ್ಥಿ ಕಳೆದ ಚುನಾವಣೆಯಲ್ಲಿ ಸೋತು, ಬಲಪಂಥೀಯ ಅಭ್ಯರ್ಥಿ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಸೋಶಲಿಸ್ಟ್ ಅಭ್ಯರ್ಥಿ ಭಾರಿ ಬಹುಮತದಿಂದ ಆಯ್ಕೆಯಾಗಿದ್ದಾರೆ. ನವ-ಉದಾರವಾದದ ವಿಷಫಲ ಉಂಡ ಲ್ಯಾಟಿನ್ ಅಮೆರಿಕದ ಜನತೆ ಅದರ ಪಾಠಗಳನ್ನು ಸುಲಭವಾಗಿ ಮರೆಯುವುದಿಲ್ಲ.