ಐಸಿಸ್ ಬೆಂಬಲಿಸುವ ಟರ್ಕಿಯ ಅಪಾಯಕಾರಿ ದಾಳಿ

ಸಂಪುಟ: 
9
ಸಂಚಿಕೆ: 
49
Sunday, 29 November 2015

ಸಿರಿಯಾ ಗಡಿಪ್ರದೇಶದಲ್ಲಿ ಐಸಿಸ್ ನೆಲೆಗಳ ವಿರುದ್ಧ ದಾಳಿ ಮಾಡುತ್ತಿದ್ದ ರಶ್ಯನ್ ಯುದ್ಧ ವಿಮಾನ ಉರುಳಿಸಿದ್ದು ಭಾರೀ ಅಪಾಯಕಾರಿ ಮತ್ತು ಗಂಭೀರ ಪರಿಣಾಮಗಳಿಗೆಡೆ ಮಾಡಬಹುದು. ಒಂದು ಕಡೆ ಪ್ಯಾರಿಸ್ ಭಯೋತ್ಪಾದಕ ಕೃತ್ಯಗಳ ನಂತರ ಐಸಿಸ್ ನಾಶ ಮಾಡಲು ಮೂಡಿದ್ದ ಒಂದು ಮಟ್ಟದ ಅಂತರ್ರಾಷ್ಟ್ರೀಯ ಐಕ್ಯತೆಯನ್ನು ದುರ್ಬಲಗೊಳಿಸುತ್ತದೆ, ಒಡೆಯುತ್ತದೆ. ಇನ್ನೊಂದು ಕಡೆ ರಶ್ಯಕ್ಕೆ ಪ್ರಚೋದನೆ ಮಾಡುವ ಮೂಲಕ ವ್ಯಾಪಕ ಸಂಘರ್ಷಕ್ಕೆ ಎಡೆ ಮಾಡಿಕೊಡಬಹುದು. ಟರ್ಕಿ ನಾಟೋ ಮಿಲಿಟರಿ ಕೂಟಕ್ಕೆ ಸೇರಿದ್ದು, ಟರ್ಕಿಯ ಈ ದಾಳಿ ರಶ್ಯದ ಮೇಲೆ ನಾಟೋ ಯುದ್ಧ ಸಾರಿದಂತಾಗಿದೆ. ರಶ್ಯ ಇದಕ್ಕೆ ಮಿಲಿಟರಿ ಪ್ರತಿದಾಳಿ ಮಾಡಲು ನಿರ್ಧರಿಸಿದರೆ ನಾಟೋ ಮತ್ತು ರಶ್ಯಗಳ ನಡುವಿನ ಈ ವರೆಗಿನ ಶೀತಲ ಸಮರ ‘ಮೂರನೇ ಮಹಾಯುದ್ಧ’ ಆಗಿ ತಿರುವು ಪಡೆಯುವ ಅಪಾಯ ಇದೆ.

ಟರ್ಕಿ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ರಶ್ಯನ್ ವಿಮಾನ ಉರುಳಿಸಿತ್ತು. ಐಸಿಸ್ ವಿರುದ್ಧ ಹೋರಾಡುವ ಕುರ್ದಿಶ್ ಪಡೆಗಳ ಮೇಲೆ ಟರ್ಕಿ ದಾಳಿ ನಡೆಸುತ್ತಿದೆ. ಮಾತ್ರವಲ್ಲ, ಐಸಿಸ್ ನಿಯಂತ್ರಿತ ಪ್ರದೇಶದ ತೈಲ ಟರ್ಕಿ ಮೂಲಕ ಕಳ್ಳ ಸಾಗಾಣಿಕೆಯಾಗಿ ಪೂರೈಕೆ ಆಗುತ್ತಿದ್ದು, ಇದು ಐಸಿಸ್ ನ ಆದಾಯದ ಪ್ರಮುಖ ಮೂಲಗಳಲ್ಲಿ ಒಂದು. ಈ ರೀತಿ ಟರ್ಕಿ ಐಸಿಸ್-ವಿರೋಧಿ ಅಂತರ್ರಾಷ್ಟ್ರೀಯ ಕೂಟದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ. ಟರ್ಕಿ ತನ್ನ ಈ ನೀತಿ ಬದಲಿಸದಿದ್ದರೆ, ತಕ್ಕ ಪ್ರತಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ರಶ್ಯ ಎಚ್ಚರಿಸಿದೆ.