ಪೋರ್ಚುಗಲ್: ಮೊದಲ ಬಾರಿಗೆ ಕಮ್ಯೂನಿಸ್ಟ್ ಪಕ್ಷ ಆಳುವ ಕೂಟದಲ್ಲಿ

ಸಂಪುಟ: 
9
ಸಂಚಿಕೆ: 
49
Sunday, 29 November 2015

ಪೋರ್ಚುಗಲ್‍ನಲ್ಲಿ ಎಡ-ನಡುಪಂಥೀಯ (ಸೋಶಲಿಸ್ಟ್, ಗ್ರೀನ್, ಕಮ್ಯನಿಸ್ಟ್, ಎಡ ಬ್ಲಾಕ್) ಪಕ್ಷಗಳ ಸರಕಾರ ರಚನೆಯಾಗಲಿದೆ.  ಇದೊಂದು ಚಾರಿತ್ರಿಕ ಘಟನೆ. ಮೊದಲ ಬಾರಿಗೆ ಪೋರ್ಚುಗಲ್‍ನಲ್ಲಿ ಕಮ್ಯುನಿಸ್ಟ್ ಪಕ್ಷ ಆಳುವ ಕೂಟದ ಭಾಗವಾಗಲಿದೆ.  ಅಕ್ಟೋಬರ್‍ನಲ್ಲಿ ನಡೆದ ಚುನಾವಣೆಯಲ್ಲಿ ಈ ನಾಲ್ಕು ಪಕ್ಷಗಳು ಸ್ಪಷ್ಟ ಬಹುಮತ ಪಡೆದಿದ್ದು ಸರಕಾರ ರಚನೆಗೆ ತಮ್ಮ ಹಕ್ಕೊತ್ತಾಯ ಮಂಡಿಸಿದ್ದವು. ಆಗ ಅಲ್ಲಿನ ಅಧ್ಯಕ್ಷ ಅದನ್ನು ತಿರಸ್ಕರಿಸಿ ಬಹುಮತ ಇಲ್ಲದ (ಹಿಂದಿನ ಆಳುವ ರಂಗ) ಬಲಪಂಥೀಯ ಕೂಟವನ್ನು ಸರಕಾರ ರಚಿಸಲು ಆಹ್ವಾನಿಸಿ ಸರಕಾರ ರಚನೆಯೂ ಆಯಿತು.

ಯುರೋ ಕೂಟಕ್ಕೆ ಮತ್ತು ಅದರ (ಮಿತವ್ಯಯ ಮುಂತಾದ) ನೀತಿಗಳಿಗೆ ವಿರೋಧವಿರುವ ಕಮ್ಯುನಿಸ್ಟ್, ಎಡ ಬ್ಲಾಕ್ ಇರುವ ಸರಕಾರ ಒಪ್ಪಲು ಸಾಧ್ಯವಿಲ್ಲ ಎಂಬುದು ಅವರ ನಿಲುವಾಗಿತ್ತು.  ಸರಕಾರ ರಚನೆಯಾದ ಮೇಲೆ ಸೋಶಲಿಸ್ಟ್ ಪಕ್ಷ/ಗ್ರೀನ್ ಪಕ್ಷ ಬಲಪಂಥೀಯ ಕೂಟ ಸೇರಬಹುದು ಅಥವಾ ಹೊರಗಿಂದ ಬೆಂಬಲ ಕೊಡಬಹುದು ಎಂಬುದು ಅವರ ನಿರೀಕ್ಷೆಯಾಗಿತ್ತು. ಆದರೆ ಅವರ ಎಣಿಕೆ ಹುಸಿಯಾಯಿತು. ಈ ನಾಲ್ಕೂ ಪಕ್ಷಗಳು ಒಗ್ಗಟ್ಟಾಗಿ ಉಳಿದು ಬಲಪಂಥೀಯ ಅಲ್ಪಸಂಖ್ಯಾತ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಅದನ್ನು ಉರುಳಿಸಿದವು. ಕೇವಲ 11 ದಿನ ಬಾಳಿದ ಈ ಸರಕಾರ ಪೋರ್ಚುಗಲ್‍ನ ಅತ್ಯಂತ ಕಡಿಮೆ ಅವಧಿಯ ಸರಕಾರ ಎಂಬ ರೆಕಾರ್ಡು ಮಾತ್ರ ಮಾಡಿತು.  ಅಧ್ಯಕ್ಷರು ಸೋಶಲಿಸ್ಟ್ ಪಕ್ಷದ ನಾಯಕ ಅಂಟೋನಿಯೋ ಕೊಸ್ತಾ ಅವರನ್ನು ಎಡ-ನಡುಪಂಥೀಯ ಕೂಟದ ಬೆಂಬಲದಿಂದ ಸರಕಾರ ರಚಿಸಲು ಆಹ್ವಾನ ಮಾಡಬೇಕಾಗಿ ಬಂದಿದೆ. ಕೋಸ್ತಾ ಅವರ ತಂದೆ ಗೋವಾ ಮೂಲದವರಾಗಿದ್ದು, ಅವರು ಮೂರು ಬಾರಿ ರಾಜಧಾನಿ ಲಿಸ್ಬನ್‍ನ ಜನಪ್ರಿಯ ಮೇಯರ್ ಆಗಿ (ಪತ್ರಿ ಬಾರಿ ಇನ್ನಷ್ಟು ಹೆಚ್ಚಿನ ಬಹುಮತದಿಂದ) ಆಯ್ಕೆಯಾಗಿದ್ದಾರೆ.

porchugal, ಕಮ್ಯುನಿಸ್ಟ್ ಪಕ್ಷ ಸೋಶಲಿಸ್ಟ್ ಪಕ್ಷದ ಜತೆ ಮಾತುಕತೆ ನಡೆಸಿ ಹೊಸ ಸರಕಾರದ ಕನಿಷ್ಟ ಕಾರ್ಯಕ್ರಮ ಏನಿರಬೇಕೆಂದು ನಿರ್ಧರಿಸಿವೆ. ಕನಿಷ್ಟ ವೇತನದ ಏರಿಕೆ, ಪೆನ್ಶನ್ ಸ್ತಂಭನ, ಸರಕಾರಿ ನೌಕರರ ವೇತನ ಕಡಿತ ಕ್ರಮ ವಜಾ, ಕಾರ್ಮಿಕರ ಸಾಮೂಹಿಕ ಚೌಕಾಶಿ ಮತ್ತು ಟ್ರೇಡ್ ಯೂನಿಯನ್ ಹಕ್ಕುಗಳ ಮೇಲೆ ವಿಧಿಸಿದ್ದ ನಿರ್ಬಂಧಗಳ ತೆರವು, ಸಾರಿಗೆ ಕ್ಷೇತ್ರದ ಖಾಸಗೀಕರಣ ಪ್ರಸ್ತಾವಕ್ಕೆ ತಡೆ, ಆರೋಗ್ಯ ಸೇವೆ ಸಾಮಾಜಿಕ ಭದ್ರತೆ ರಜಾ ಮುಂತಾದ ಕಡಿತಗೊಂಡ ಸೌಲಭ್ಯಗಳ ಪುನರಾರಂಭ, ಶ್ರೀಮಂತರು ಮತ್ತು ಕಂಪನಿಗಳ ಮೇಲೆ ತೆರಿಗೆ ಮೂಲಕ ಸಂಪನ್ಮೂಲ ಸಂಗ್ರಹ – ಮುಂತಾದವು ಕನಿಷ್ಟ ಕಾರ್ಯಕ್ರಮದಲ್ಲಿ ಇರುವ ಪ್ರಮುಖ ಅಂಶಗಳು.

ಪೋರ್ಚುಗಲ್ 2011ರಲ್ಲಿ 78 ಶತಕೋಟಿ ಬೇಲ್ ಔಟ್ ಕಾರ್ಯಕ್ರಮದ ಜತೆ ಬಂದ ಭಾರೀ ‘ಮಿತವ್ಯಯ’ (ಜನತೆಯ ಕಾರ್ಮಿಕರ ಕಲ್ಯಾಣ ಕ್ರಮಗಳ ಕಡಿತ)ದಿಂದ ಈಗಷ್ಟೆ ಜನ ಚೇತರಿಸಿಕೊಳ್ಳುತ್ತಿದ್ದು,  ಯುರೋ ಕೂಟದ ಸರಕಾರ ಈ ಬೆಳವಣಿಗೆಯನ್ನು ಆತಂಕದಿಂದ ಗಮನಿಸುತ್ತಿದೆ. ಹೊಸ ಪ್ರಧಾನಿ ಕೋಸ್ತಾ ತಮ್ಮ ಸರಕಾರ ಯುರೋ ವ್ಯವಸ್ಥೆಯಿಂದ ಹೊರಗೆ ಬರದೆ ಅಂತರ್ರಾಷ್ಟ್ರೀಯ ಒಪ್ಪಂದಗಳನ್ನು ಉಲ್ಲಂಘಿಸದೆ ಮಿತವ್ಯಯ-ವಿರೋಧಿ ‘ಸೋಶಲಿಸ್ಟ್’ ನೀತಿಗಳನ್ನು ಅನುಸರಿಸುವುದಾಗಿ ಹೇಳಿದ್ದಾರೆ. ಸಂಕೀರ್ಣ ಪರಿಸ್ಥಿತಿಗಳನ್ನು ನಿರ್ವಹಿಸಿರುವ ಕೋಸ್ತಾ ಇದನ್ನು ಹೇಗೆ ಜಾರಿ ಮಾಡುತ್ತಾರೆ ಎಂಬುದನ್ನು ಪೋರ್ಚುಗಲ್ ಮಾತ್ರವಲ್ಲ, ಯುರೋಪ್ ಮಾತ್ರವಲ್ಲ, ಇಡೀ ಜಗತ್ತಿನ ಜನ ಆಸಕ್ತಿಯಿಂದ ಗಮನಿಸುತ್ತಿದ್ದಾರೆ.