`ಯುಜಿಸಿ ಆಕ್ರಮಿಸಿ’: ಸಂಶೋಧನೆ ರಕ್ಷಿಸಲು ಹೀಗೊಂದು ಹೋರಾಟ

ಸಂಪುಟ: 
9
ಸಂಚಿಕೆ: 
49
Sunday, 29 November 2015

UGC`ಇಡೀ ದಿನ, ಇಡೀ ರಾತ್ರಿ – ಯುಜಿಸಿ ಆಕ್ರಮಿಸಿ’; ಭಾರತದಾದ್ಯಂತ ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‍ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅನುರಣಿಸುತ್ತಿರುವ ಜನಪ್ರಿಯ ಘೋಷಣೆ ಇದು. ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ನಿರ್ದೇಶನದನ್ವಯ ಎನ್‍ಇಟಿಯೇತರ (ನಾನ್-ಎನ್‍ಇಟಿ) ವಿದ್ಯಾರ್ಥಿ ವೇತನವನ್ನು ನಿಲ್ಲಿಸಲು ವಿಶ್ವ ವಿದ್ಯಾನಿಲಯಗಳ ಧನಸಹಾಯ ಆಯೋಗ (ಯುಜಿಸಿ) ನಿರ್ಧರಿಸಿರುವುದಕ್ಕೆ ಪ್ರತಿರೋಧವಾಗಿ ವಿದ್ಯಾರ್ಥಿಗಳ ಆಕ್ರೋಶ ಭುಗಿಲೆದ್ದಿದ್ದು ಯುಜಿಸಿ ಆಕ್ರಮಿಸಿ ಆಂದಳಲನ ರೂಪುಗೊಂಡಿದೆ. ವಿದ್ಯಾರ್ಥಿ ಸಮೂಹದ ತತ್‍ಕ್ಷಣದ ಆರ್ಥಿಕ ಬೇಡಿಕೆ ಫಲವಾಗಿ ಇದು ರೂಪುಗೊಂಡರು ವಾಸ್ತವದಲ್ಲಿ ಅದರ ಕಾಳಜಿ ಹಾಗೂ ಸ್ವರೂಪ ಇನ್ನೂ ವಿಸ್ತಾರದ್ದಾಗಿದೆ. ಈ ಹೋರಾಟ ಈಗ ಒಂದು ನಿರ್ದಿಷ್ಟ ನಿರ್ಧಾರದ ವಿರುದ್ಧದ ಹೋರಾಟವಾಗಿ ಉಳಿದಿಲ್ಲ. ಬದಲಾಗಿ, ಹಣಕಾಸು ಬಂಡವಾಳ ಮತ್ತು ಅದರ ಆದೇಶಗಳ ಕಪಿಮುಷ್ಟಿಯಿಂದ ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಲ್ಲಿನ ಸಂಶೋಧನೆಯನ್ನು ರಕ್ಷಿಸುವುದೇ ಈ ಹೋರಾಟದ ಅಜೆಂಡಾ ಆಗಿದೆ. ಯುಜಿಸಿಯ ನಿರ್ಧಾರದಿಂದಾಗಿ `ಸಂಶೋಧನೆ’  ಮತ್ತು `ಸಂಶೋಧನೆ ಸ್ಕಾಲರ್’ (ರೀಸರ್ಚ್ ಸ್ಕಾಲರ್) ಎಂಬ ಪರಿಕಲ್ಪನೆಯೇ ಅಪಾಯಕ್ಕೆ ಒಳಗಾಗಿದೆ.

ಯಾವುದೇ ಒಂದು ದೇಶದ ಬೆಳವಣಿಗೆ ಮತ್ತು ಸಮಾಜದ ಎಲ್ಲಾ ವಿಭಾಗಗಳ ಸಮಾನ ಅಭಿವೃದ್ಧಿ ಸಾಧಿಸಬೇಕಾದರೆ ದೇಶವು ತನ್ನ ಸಮಸ್ಯೆಗಳನ್ನು ಹಾಗೂ ಸಂಭಾವ್ಯ ಪರಿಹಾರಗಳನ್ನು ತಿಳಿದಿರಬೇಕು. ಸಮಾಜದ ಮತ್ತು ಅದೇ ರೀತಿ ವಿಜ್ಞಾನ-ತಂತ್ರಜ್ಞಾನದ ಸಮಸ್ಯೆಗಳ ವಿಚಾರಕ್ಕೂ ಇದು ಅನ್ವಯವಾಗುತ್ತದೆ. ಅದನ್ನು ಸಾಧಿಸುವಲ್ಲಿ, ಮಾನವಿಕಗಳು ಹಾಗೂ ವಿಜ್ಞಾನದಲ್ಲಿ ಮೂಲ ಸಂಶೋಧನೆ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಮಾನವಿಕಗಳು ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಮೂಲ ಸಂಶೋಧನೆಗಳನ್ನು ಮಾಡುವ ಮೂಲಕ ನಾವು ಹಸಿವು, ಬಡತನ, ಸಾಮಾಜಿಕ ಅನಿಷ್ಟಗಳು, ಆರೋಗ್ಯ ಸೇವೆ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಈ ರೀತಿಯ ಮೂಲ ಸಂಶೋಧನೆ ನಮ್ಮ ವಿವಿಗಳು ಮತ್ತು ಸಂಶೋಧನಾ ಸಂಸ್ಥೆಗಳ ಮೂಲ ಉದ್ದೇಶವಾಗಿದೆ. ಯಾವುದೇ ದೇಶ ಪ್ರಗತಿ ಸಾಧಿಸುವಲ್ಲಿ ವಿವಿಗಳ ಪಾತ್ರ ದೊಡ್ಡದು ಹಾಗೂ ಮಹತ್ವದ್ದಾಗಿದೆ. ವಿವಿಗಳು ಪದವಿ ನೀಡುವ ಕೇಂದ್ರಗಳು ಮಾತ್ರವೇ ಅಲ್ಲ; ದೇಶ ಕಟ್ಟುವವರನ್ನು ಅಭಿವೃದ್ಧಿಪಡಿಸುವ ಕೇಂದ್ರಗಳೂ ಹೌದು. ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಹೀಗೆಂದಿದ್ದಾರೆ:  “ಜ್ಞಾನದ ಸೃಷ್ಟಿ ವಿಶ್ವವಿದ್ಯಾನಿಲಯಗಳ ಉದ್ದೇಶ”. ಸರಿಯಾಗಿ ವ್ಯಾಖ್ಯಾನಿಸುವುದಾದರೆ, ವಿಶ್ವವಿದ್ಯಾನಿಲಯಗಳು ವಿಮರ್ಶೆಯ ಕೇಂದ್ರಗಳು, ಮತ್ತು ಪ್ರಭುತ್ವವನ್ನು ಹಾಗೂ ಯಥಾಸ್ಥಿತಿಯನ್ನು ಪ್ರಶ್ನಿಸುವುದು ಆ ಪ್ರಕ್ರಿಯೆಯ ಪ್ರಧಾನ ಅಂಶವಾಗಿರುತ್ತದೆ.

ಈ ಸಂಶೋಧನಾ ಸಂಸ್ಥೆಗಳು ಮತ್ತು ವಿವಿಗಳಲ್ಲಿ ಎಂಫಿಲ್ ಮತ್ತು ಪಿಎಚ್‍ಡಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡ ಸಾವಿರಾರು ಸಂಶೋಧನಾ ವಿದ್ವಾಂಸರು ಇರುತ್ತಾರೆ. ಸಂಶೋಧನಾ ಕಾರ್ಯವು ದೀರ್ಘಕಾಲೀನ ಪ್ರಕ್ರಿಯೆಯಾಗಿದ್ದು ಬಹಳಷ್ಟು ತಾಳ್ಮೆ ಮತ್ತು ಏಕಾಗ್ರತೆ ಅಗತ್ಯವಾಗಿರುವುದರಿಂದ ಈ ರೀಸರ್ಚ್ ಸ್ಕಾಲರ್‍ಗಳಿಗೆ ಬೆಂಬಲ ನೀಡುವುದು ಸರಕಾರದ ಕರ್ತವ್ಯವಾಗಿದೆ. ಈ ವಿದ್ಯಾರ್ಥಿಗಳು ಜೀವನದ ಈ ಕಾಲಘಟ್ಟದಲ್ಲಿ ತಮ್ಮ ಜೀವನೋಪಾಯದ ಬಗ್ಗೆ ಚಿಂತಿತರಾಗಿರುತ್ತಾರೆ. ಯಾಕೆಂದರೆ ಈ ಕಾರ್ಯಕ್ಕಾಗಿ ಅವರು ತಮ್ಮ ಕುಟುಂಬದಿಂದ ಹಣವನ್ನು ನಿರೀಕ್ಷಿಸುವಂತಿರುವುದಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ದುಡಿಯುವ ಆ ವಯಸ್ಸಿನಲ್ಲಿ ಅವರಿಗೆ ಬೆಂಬಲ ನೀಡುವ ಸ್ಥಿತಿಯಲ್ಲಿ ಈ ರೀಸರ್ಚ್ ಸ್ಕಾಲರ್‍ಗಳ ಬಹುತೇಕ ಕುಟುಂಬಗಳು ಇರುವುದಿಲ್ಲ ಎನ್ನುವುದು ಕಟು ವಾಸ್ತವ. ಹಾಗಾಗಿ ಸರಕಾರವೇ ಅವರಿಗೆ ಬೆಂಬಲ ನೀಡಬೇಕಾಗುತ್ತದೆ. ಆಗ ಮಾತ್ರವೇ ಅವರು ಪ್ರಾಮಾಣಿಕವಾಗಿ ಹಾಗೂ ನೈಜ ಸಂಶೋಧನೆಯಲ್ಲಿ ಹೃತ್ಪೂರ್ವಕವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ.

UGC ಈ ಉದ್ದೇಶಕ್ಕಾಗಿ ಯುಜಿಸಿ ಮತ್ತು ಸಿಎಸ್‍ಐಆರ್ ಕೊಡಮಾಡುವ ಫಲೋಶಿಪ್‍ಗಳಿಗೆ ವಿವಿಗಳಲ್ಲಿ ಅವಕಾಶವಿದೆ. ಇದು ಲಭ್ಯವಿರುವ ಎಲ್ಲಾ ಸ್ಕಾಲರ್‍ಶಿಪ್‍ಗಳ ಪೈಕಿ ಇದರ ಪಾಲೇ ಬಲು ದೊಡ್ಡದು. ಇದನ್ನು ಪಡೆಯಬೇಕಾದರೆ  ಜೆಆರ್‍ಎಫ್/ಎಸ್‍ಆರ್‍ಎಫ್‍ಗೆ ಎರಡು ವರ್ಷಕ್ಕೊಮ್ಮೆ ಸಿಎಸ್‍ಐಆರ್ ಮತ್ತು ತಯಜಿಸಿ ನಡೆಸುವ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕಾಗುತ್ತದೆ. ಆದರೆ ವಾಸ್ತವದಲ್ಲಿ ಈ ಪರೀಕ್ಷೆಗಳು ಹೇಗಿರುತ್ತವೆಯೆಂದರೆ `ಆಯ್ಕೆ’ ಆಗುವವರಿಗಿಂತ `ಎಲಿಮಿನೇಟ್’ ಆಗುವವರೇ ಜಾಸ್ತಿಯಿರುತ್ತಾರೆ. ಈ ಪ್ರಕ್ರಿಯೆಯೇ ಪ್ರಶ್ನಾರ್ಹವಾಗಿದೆ. ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದಕ್ಕಿಂತ ಹೆಚ್ಚಾಗಿ ಅವರನ್ನು ಸಂಶೋಧನೆಯ ಮುಖ್ಯವಾಹಿನಿಯಿಂದ ಹೊರಗೆ ತಳ್ಳುವುದೇ ಪರೀಕ್ಷೆಗಳ ಮುಖ್ಯ ಗುರಿ ಇರುವಂತಿದೆ. ಹೆಚ್ಚು ಹಣ ಕೊಟ್ಟು ಉತ್ತಮ ಕೋಚಿಂಗ್‍ಗೆ ಹೋಗುವ ಸಾಮಥ್ರ್ಯವಿರುವ ವಿದ್ಯಾರ್ಥಿಗಳಷ್ಟೇ ಪರೀಕ್ಷೆಯಲ್ಲಿ ಪಾಸಾಗುವ ಅವಕಾಶಗಳು ಹೆಚ್ಚು. ಈ ರೀತಿಯ ಪರೀಕ್ಷೆಗಳನ್ನು ಕ್ಲಿಯರ್ ಮಾಡಲಾಗದವರಿಗೆ ನಾನ್-ಎನ್‍ಇಟಿ ಫೆಲೋಶಿಪ್‍ಗಳು ಸ್ವಲ್ಪ ಮಟ್ಟಿಗಿನ ಪರಿಹಾರ ನೀಡುತ್ತವೆ. ಅವರಿಗೆ ಮಾಸಿಕ ಅನುದಾನದ ರೂಪದಲ್ಲಿ ಎಂಫಿಲ್‍ಗೆ ರೂ. 5000 ಮತ್ತು ಪಿಎಚ್‍ಡಿಗೆ ರೂ. 8000 ಸಿಗುತ್ತದೆ. ಈ ಮನುದಾನ ಪಿಎಚ್‍ಡಿಗೆ ನಾಲ್ಕು ವರ್ಷ ಕಾಲ ಹಾಗೂ ಎಂಫಿಲ್‍ಗೆ 18 ತಿಂಗಳ ಅವಧಿಗೆ ನೀಡಲಾಗುತ್ತದೆ. ಅದರ ಜತೆಯಲ್ಲಿ ಪುಸ್ತಕ, ಜರ್ನಲ್‍ಗಳ ಖರೀದಿ, ಮುದ್ರಣ, ಫೋಟೋಕಾಪಿ ಮತ್ತಿತರ ವೆಚ್ಚಕ್ಕೆಂದು ವಾರ್ಷಿಕ ತುರ್ತು ನಿಧಿಯನ್ನು ನೀಡಲಾಗುತ್ತದೆ. ಇದು ತಿಂಬಾ ಸಣ್ಣ ಮೊತ್ತವಾದರೂ ಅನೇಕ ರೀಸರ್ಚ್ ಸ್ಕಾಲರ್‍ಗಳಿಗೆ ಲೈಫ್‍ಲೈನ್‍ನಂತೆ ಸಹಾಯವಾಗುತ್ತದೆ.

ಇಂಥ ಸನ್ನಿವೇಶದಲ್ಲಿ, ಯುಜಿಸಿಯ ನಿರ್ಧಾರ ರೀಸರ್ಚ್ ಸ್ಕಾಲರ್ ಮತ್ತು ಭಾರತದಲ್ಲಿ ಸಂಶೋಧನೆ ಪ್ರಕ್ರಿಯೆಯ ಮೇಲೆಯೇ ದುಷ್ಪರಿಣಾಮ ಬೀರುತ್ತದೆ. ಈ ಹೊಸ ನಿರ್ಧಾರದಿಂದ ಮುಖ್ಯವಾಗಿ ಆರ್ಥಿಕ-ಸಾಮಾಜಿಕವಾಗಿ ತುಳಿತಕ್ಕೊಳಗಾದ ವಿಭಾಗಗಳ ವಿದ್ಯಾರ್ಥಿಗಳಿಗೆ ಹೆಚ್ಚು ಅನಾನುಕೂಲ ಆಗುತ್ತದೆ. ಮಹಿಳೆಯರಂತೂ ಇನ್ನೂ ಹೆಚ್ಚಿನ ಸಮಸ್ಯೆಗೆ ಒಳಗಾಗಿ, ಕೌಟುಂಬಿಕ ಬೆಂಬಲ ಇಲ್ಲದೆ ಸಂಶೋಧನಾ ಕ್ಷೇತ್ರವನ್ನೇ ತೊರೆಯುವ ಒತ್ತಡಕ್ಕೆ ಒಳಗಾಗುತ್ತಾರೆ. ಯುಜಿಸಿಯ ಅಂಕಿ ಅಂಶಗಳ ಪ್ರಕಾರ ಸದ್ಯ ದೇಶದಲ್ಲಿ ಸುಮಾರು 35000ಕ್ಕೂ ಹೆಚ್ಚು ಮಂದಿ ನಾನ್‍ಎನ್‍ಇಟಿ ಫೆಲೋಶಿಪ್‍ನಡಿ ಸಂಶೋಧನಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಯುಜಿಸಿಯ ಈ ನಿರ್ಧಾರ ಭಾರತವು ಭವಿಷ್ಯದಲ್ಲಿ ತನ್ನ ಸಂಭಾವ್ಯ ವಿದ್ವಾಂಸರನ್ನೇ ಕಳೆದುಕೊಳ್ಳುವ ಸ್ಥಿತಿಯನ್ನು ನಿರ್ಮಿಸಲಿದೆ.

ಯುಜಿಸಿಯ ಈ ತೀರ್ಮಾನ ಎನ್‍ಡಿಎ ಸರಕಾರದ ಆರ್ಥಿಕ ನೀತಿಗಳಿಗೆ ಅನುಗುಣವಾಗಿಯೇ ಇರುವುದು ಕಂಡುಬರುತ್ತದೆ. ಸಂಶೋಧನೆ ಮತ್ತು ಶಿಕ್ಷಣ ಸೇರಿದಂತೆ ಎಲ್ಲವನ್ನೂ ಮಾರುಕಟ್ಟೆಯ ನಿಯಂತ್ರಣಕ್ಕೆ ಒಳಪಡಿಸುವುದು ಅದರ ಉದ್ದೇಶವಾಗಿದೆ.

ಯುಜಿಸಿಯ ಈ ನಿರ್ಧಾರಕ್ಕೆ ವಿದ್ಯಾರ್ಥಿ ಸಮುದಾಯದ ವ್ಯಾಪಕ ವಿರೋ ಧ ವ್ಯಕ್ತವಾಗುತ್ತಿರುವಾಗಲೇ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಗೆ (ಸಿಎಸ್‍ಐಆರ್) ಸುತ್ತೋಲೆ ಕಳಿಸಿ ಅದರ ಪ್ರಯೋಗಾಲಯಗಳಿಗೆ ಬೇಕಾದ ಹಣವನ್ನು ಸ್ವತಃ ಸಿಎಸ್‍ಐಆರ್ ಕ್ರೋಡೀಕರಿಸಬೇಕು ಎಂದು ಸೂಚಿಸಿದೆ. ತಥಾಕಥಿತ ಡೆಹ್ರಾಡೂನ್ ಘೋಷಣೆಯ ಅನ್ವಯ `ಲಾಭಕ್ಕಾಗಿ ಸಂಶೋಧನೆ’ಗೆ ಯತ್ತು ನೀಡಲು ಸಭೆಯೊಂದರಲ್ಲಿ ಸೂಚಿಸಲಾಗಿದೆ. ಜೂನ್ 6ರ ಈ ಸಭೆಯಲ್ಲಿ ಆರ್‍ಎಸ್‍ಎಸ್ ಸಂಯೋಜಿತ ಸಂಘಟನೆಯೊಂದರ ಪ್ರತಿನಿಧಿಯೂ ಭಾಗವಹಿಸಿದ್ದು ಆತಂಕಕಾರಿ ಸಂಗತಿಯಾಗಿದೆ.

UGC ದೇಶದ ಭದ್ರಬುನಾದಿಗೆ ಸಹಕಾರಿಯಾಗುವ ಸಂಶೋಧನೆ ಕ್ಷೇತ್ರಕ್ಕೇ ಕೊಡಲಿಯೇಟು ಹಾಕುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ನೀತಿಯ ವಿರುದ್ಧ ವಿದ್ಯಾರ್ಥಿ ಸಮುದಾಯ ತಿರುಗಿ ಬಿದ್ದಿದೆ. ಸಂಶೋಧನೆ ಮತ್ತು ಪಿಜಿ ವಿದ್ಯಾರ್ಥಿಗಳು ಮಾತ್ರವೇ ಅಲ್ಲದೆ ಎಲ್ಲಾ ಕೋರ್ಸ್‍ಗಳು ಮತ್ತು ತರಗತಿಗಳ ವಿದ್ಯಾರ್ಥಿಗಳೂ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ರಾಜಧಾನಿ ದೆಹಲಿ ಪ್ರತಿಭಟನೆಯ ಕೇಂದ್ರಬಿಂದು ಆಗಿದ್ದು `ಯುಜಿಸಿ ಆಕ್ರಮಿಸಿ’ ಘೋಷಣೆಯು ಪ್ರತಿರೋ ಧದ ಸಂಕೇತವಾಗಿ ಹೊರಹೊಮ್ಮಿದೆ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತು ವಿದ್ಯಾರ್ಥಿ ಸಂಘನೆಗಳು ಒಂದೇ ವೇದಿಕೆ ಮೇಲೆ ಬರುತ್ತಿವೆ. ಎಬಿವಿಪಿಯ ಗೈರು ಮತ್ತು ಚಳವಳಿಯನ್ನು ಒಡೆಯಲು ಅದು ಯತ್ನಿಸಿದ್ದು ಸಹಜವೇ ಆದರೂ ವಿದ್ಯಾರ್ಥಿ ಸಮೂಹದ ಬಂಡಾಯವನ್ನು ಕಂಡು ಅದು ಕೂಡ ಕೇಂದ್ರ ಮಾನವ ಸಂಪನ್ಮೂಲ ಸಚಿವರ ಜತೆ ಒಂದು `ನಿಗದಿತ’ ಸಭೆಯನ್ನು ನಡೆಸುವ ಮೂಲಕ ಚಳವಳಿಯನ್ನು ದುರ್ಬಲಗೊಳಿಸಲು ಯತ್ನಿಸಿತು.

ಜೆಎನ್‍ಯುಎಸ್‍ಯು, ಎಸ್‍ಎಫ್‍ಐ, ಎಐಎಸ್‍ಎ, ಎಐಎಸ್‍ಎಫ್ ಮತ್ತು ಎಯಡಿಎಸ್‍ಓ ನೇತೃತ್ವದಲ್ಲಿ ಹೋರಾಟವನ್ನು ಮುಂದುವರಿಸಲು ನಿರ್ಧರಿಸಿದಾಗ ಎಬಿವಿಪಿಯವರು ಕೇಂದ್ರ ಸಚಿವರು ಕೆಲವು ಆಶ್ವಾಸನೆಗಳನ್ನು ನೀಡಿದ್ದಾರೆ ಎಂದು ಅಪಪ್ರಚಾರ ಆರಂಭಿಸಿದರು.

ಪೊಲೀಸ್ ದಬ್ಬಾಳಿಕೆ

ವಿದ್ಯಾರ್ಥಿಗಳ ಸಂಘಟಿತ ಆಂದೋಲನವನ್ನು ಪೊಲೀಸ್ ಬಲದ ಮೂಲಕ ದಮನಿಸುವ ಯತ್ನವೂ ನಡೆದಿದೆ. ದೆಹಲಿಯಲ್ಲಿ ಲಾಠಿಪ್ರಹಾರದಲ್ಲಿ ಎಸ್‍ಎಫ್‍ಐ ದೆಹಲಿ ರಾಜ್ಯ ಕಾರ್ಯದರ್ಶಿ ಸುನಂದಾ ಮತ್ತು ಹಲವು ರಾಜ್ಯ ಸಮಿತಿ ಸದಸ್ಯರು ತೀವ್ರವಾಗಿ ಗಾಯಗೊಂಡರು.

ಶಿಕ್ಷಕರ ಸಂಘಗಳು, ಅಕಾಡಿಮಿಶಿಯನ್‍ಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಹಲವು ರಾಜಕಾರಣಿಗಳು ಕೂಡ ಯುಜಿಸಿ ಮುಂದೆ ನಡೆಯುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಬಂದು ಸೌಹಾರ್ದ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಜಾತಿ, ಧರ್ಮ, ಭಾಷೆ, ವಸ್ತ್ರಸಂಹಿತೆ, ಆಹಾರ ಪದ್ಧತಿ ಮೊದಲಾದ ಹೆಸರಿನಲ್ಲಿ ಸಮಾಜವನ್ನು ಒಡೆಯಲು ಯತ್ನಿಸುತ್ತಿರುವ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿ ಸಮೂಹದ ಈ ಚಳವಳಿ ಒಗ್ಗಟ್ಟಿನ ಹೊಸದೊಂದು ಆಧ್ಯಾಯವನ್ನೇ ತೆರೆದಿದೆ.

ವಿಶ್ವಾಸ