Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಅವತಾರವಾದ ರಾಮ

ಸಂಪುಟ: 
9
ಸಂಚಿಕೆ: 
44
date: 
Sunday, 25 October 2015
ಚೋಮನ ದುಡಿ –81
ಜಿ.ಎನ್. ನಾಗರಾಜ್
ಧನ್ಯಾಸ್ತೇ ಪಿಬಂತಿ ಸತತಂ ಶ್ರೀರಾಮನಾಮಾಮೃತಂ

(ಸತತವಾಗಿ ರಾಮನಾಮವೆಂಬ ಅಮೃತವನ್ನು ಯಾರೂ ಕುಡಿಯುತ್ತಾರೋ ಅವರು ಧನ್ಯರು)  - ಗೋಸ್ವಾಮಿ ತುಲಸೀದಾಸರ ರಾಮಚರಿತ ಮಾನಸ

ವಾಲ್ಮೀಕಿ ರಾಮಯಣವೆಂದು ಪ್ರಚಲಿತವಾದ ರಾಮಾಯಣದಲ್ಲಿ ರಾಮಚಂದ್ರ ಕ್ಷತ್ರಿಯ ರಾಜವಂಶದ ಕುಡಿಯಾದ ಒಬ್ಬ ಮನುಷ್ಯ ಮಾತ್ರ. ಇಂದು ಲಭ್ಯವಿರುವ 24,000 ಶ್ಲೋಕಗಳ ರಾಮಾಯಣದಿಂದ ಪ್ರಕ್ಷಿಪ್ತವಾದ ಭಾಗಗಳನ್ನೆಲ್ಲ ಬೇರ್ಪಡಿಸಿ ರೂಪಿಸಿದ ಸುಮಾರು 12,000 ಶ್ಲೋಕಗಳ ಮೂಲ ರಾಮಾಯಣದಲ್ಲಿ ರಾಮ ದೇವರ ಅವತಾರವೆಂಬ ಸಣ್ಣ ಸೂಚನೆಯೂ ಇಲ್ಲ. ಇದನ್ನು ಹಿಂದೂ ಧರ್ಮದ ಸನಾತನಿಗಳು, ಸಂಪ್ರದಾಯವಾದಿಗಳೂ ಒಪ್ಪಿದ ಮಾತು. ನಂತರ ಸೇರ‍್ಪಡೆಯಾದ ಭಾಗಗಳೆಂದು ಶೋಧಿಸಲಾಗಿರುವ ಆದಿ ಪರ್ವದ ಬಹಳಷ್ಟು ಭಾಗಗಳು ಮತ್ತು ಉತ್ತರ ರಾಮಾಯಣದ ಭಾಗಗಳಲ್ಲಿ ರಾಮ ದೇವರ ಅವತಾರವೆಂದು ಬಿಂಬಿಸಲಾಗಿದೆ. ಈ ಭಾಗಗಳು ಕ್ರಿ.ಶ. ಮೂರರಿಂದ ನಾಲ್ಕನೆಯ ಶತಮಾನದ ವೇಳೆಗೆ ಈ ಭಾಗಗಳು ಸೇರಿಸಲ್ಪಟ್ಟಿವೆ. ರಾಮಚಂದ್ರ ಕೇವಲ ಮನುಷ್ಯನೆಂದು ಬಣ್ಣಿಸಲ್ಪಟ್ಟ ನಂತರ ಅವನನ್ನು ದೇವರ ಅವತಾರವೆಂದು ಬಿಂಬಿಸಿದ ಈ ನಡುವಣ ಅವಧಿಯಲ್ಲಿ ಈ ಬದಲಾವಣೆಗೆ ಕಾರಣವಾಗುವಂತಹ ಬಹಳ ಮಹತ್ವದ ಸಂಗತಿಗಳು ಭಾರತದಲ್ಲಿ ಜರುಗಿದವು.

ಬುದ್ಧ ಧರ್ಮ ಮತ್ತು ಜೈನ ಧರ್ಮಗಳು ಭಾರತದಲ್ಲಿ ಪ್ರಸಾರವಾದ ನಂತರ ಕ್ರಿ.ಪೂ. 300 ರ ಸುಮಾರಿಗೆ ಬುದ್ಧನ ಜಾತಕ ಕಥೆಗಳು ಮತ್ತು ಜೈನ ತೀರ‍್ಥಂಕರರ ಭವಾವಳಿಗಳ ಚರಿತೆಗಳು ಸಂಕಲನಗೊಂಡವು. ಜನಪ್ರಿಯವಾದವು. ಈ ಮಧ್ಯೆ ಅನೇಕ ರಾಜಕೀಯ ಬೆಳವಣಿಗೆಗಳೂ ಸಂಭವಿಸಿದವು. ಮೌರ‍್ಯರ ಆಡಳಿತ ಕೊನೆಗೊಂಡು ಶುಂಗರ ಆಡಳಿತ ಸ್ಥಾಪನೆಯಾಯಿತು. ಆಗಿನಿಂದಲೇ ಬೌದ್ಧ ಧರ್ಮಕ್ಕೆ ಬದಲಾಗಿ ವೈದಿಕ ಧರ್ಮವನ್ನು ಮತ್ತೆ ಜನಪ್ರಿಯಗೊಳಿಸುವ ಪ್ರಯತ್ನಗಳು ಆರಂಭವಾದುವು. ಮುಂದೆ ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ ಗುಪ್ತರ ಆಡಳಿತದಲ್ಲಿ ಮತ್ತಷ್ಟು ಪ್ರಖರವಾಗಿ ಈ ಕೆಲಸ ಮುಂದುವರೆಯಿತು. ದೇಶದ ವಿವಿಧ ಭಾಗಗಳಲ್ಲಿ ಇದ್ದ ಬುಡಕಟ್ಟುಗಳನ್ನು ಸೆಳೆಯಲು ಮತ್ತು ಬೌದ್ಧ ಧರ್ಮವನ್ನು ದುರ್ಬಲಗೊಳಿಸಲು ದಶಾವತಾರ ಕಲ್ಪನೆಯನ್ನು ರೂಪಿಸಲಾಯಿತು. ಬುಡಕಟ್ಟುಗಳನ್ನು ವಾನರರೆಂದು ಅವರು ಆರ್ಯ ಜನರ ಅಧೀನರೆಂದು ಬಿಂಬಿಸಿದ ರಾಮಾಯಣ ಈ ಕಾರ‍್ಯದಲ್ಲಿ ವಿಶೇಷವಾಗಿ ಉಪಯುಕ್ತವಾಯಿತು. ಬುದ್ಧನನ್ನೂ ವಿಷ್ಣುವಿನ ದಶಾವತಾರದಲ್ಲಿ ಒಬ್ಬನೆಂದು ಪಟ್ಟಿ ಮಾಡಿದ ಈ ಪುರಾಣ ಸೃಷ್ಠಿ ರಾಮನನ್ನು ಬಿಟ್ಟೀತೇ?

Ramayanaವಿವಿಧ ಪುರಾಣಗಳು ಮತ್ತು ಮಹಾಭಾರತದಲ್ಲಿಯೂ ರಾಮ ದೇವರ ಅವತಾರವೆಂದು ಬಿಂಬಿತವಾಯಿತು. ಮುಂದೆ ಭಾರತದ ವಿವಿಧ ಭಾಷೆಗಳಲ್ಲಿ ರಚನೆಯಾದ ಮತ್ತು ಆಯಾ ಪ್ರದೇಶಗಳಲ್ಲಿ ಜನಪ್ರಿಯವಾದ ರಾಮಾಯಣಗಳ ಕಾವ್ಯಗಳಲ್ಲಿ ಆದಿಯಿಂದ ಅಂತ್ಯದವರೆಗೂ ರಾಮನನ್ನು ದೇವರೆಂದೇ ಮತ್ತು ಅವನ ಎಲ್ಲಾ ನಡವಳಿಕೆ ಮತ್ತು ಕ್ರಿಯೆಗಳೂ ದೇವರ ಲೀಲೆಯೆಂದೇ ಬಿಂಬಿಸಿದವು. ತಮಿಳಿನಲ್ಲಿ ಹನ್ನೆರಡನೇ ಶತಮಾನದಲ್ಲಿ ರಚಿತವಾದ ಕಂಬ ರಾಮಾಯಣ, ಹದಿನೈದನೇ ಶತಮಾನದಲ್ಲಿ ಬಂಗಾಲದಲ್ಲಿ ರಚಿತವಾಗಿ ಪೂರ್ವ ಭಾರತದಲ್ಲಿ ಪ್ರಭಾವ ಬೀರಿದ ಕೃತ್ತಿವಾಸ ರಾಮಾಯಣ, ಹದಿನಾರನೇ ಶತಮಾನದಲ್ಲಿ ಅವಧಿ ಭಾಷೆಯಲ್ಲಿ ರಚಿತವಾದ ಉತ್ತರ ಭಾರತದಲ್ಲಿ ಜನ ಮಾನಸದ ಮೇಲೆ ಬಲವಾದ ಮತ್ತು ವ್ಯಾಪಕವಾದ ಪರಿಣಾಮ ಬೀರಿದ ತುಳಸೀ ದಾಸರ ರಾಮಚರಿತ ಮಾನಸ, ಈ ರಾಮ ಚರಿತ ಮಾನಸ ಕಾವ್ಯದ ಮೇಲೆ ಮತ್ತು ಇತರ ಕಾವ್ಯಗಳ ಮೇಲೆ ಪ್ರಭಾವ ಬೀರಿದ ಹದಿನೈದನೇ ಶತಮಾನದಲ್ಲಿಯೇ ರಚಿತವಾದದ್ದೆಂದು ಪರಿಗಣಿತವಾದ ಆಧ್ಯಾತ್ಮ ರಾಮಾಯಣ ಇವು ಮುಖ್ಯವಾದವು.

ಕಂಬ ರಾಮಾಯಣ ತಮಿಳುನಾಡು ಮಾತ್ರವಲ್ಲ ಕೇರಳ ಮತ್ತು ಮಲೇಷಿಯಾ, ಥೈಲ್ಯಾಂಡ್ ಮೊದಲಾದ ಆಗ್ನೇಯ ಏಷಿಯಾದ ದೇಶಗಳಲ್ಲಿ ವ್ಯಾಪಕ ಪ್ರಭಾವ ಬೀರಿದೆ. ತುಳಸೀದಾಸರ ರಾಮಚರಿತ ಮಾನಸದ ಮೇಲೆ ಕೂಡ ಈ ಕಾವ್ಯದ ಪ್ರಭಾವ ಇದೆಯೆಂದು ಗುರುತಿಸಲಾಗಿದೆ. ಅನೇಕ ರಾಮಾಯಣಗಳ ರಚನೆಗೆ ಸಾಮ್ರಾಟರುಗಳು ಕಾರಣವಾದಂತೆ ಚೋಳ ಸಾಮ್ರಾಟನ ಆದೇಶದಂತೆ ಈ ರಾಮಾಯಣವೂ ರಚಿಸಲ್ಪಟ್ಟಿತೆಂದು ಇತಿಹಾಸ ಹೇಳುತ್ತದೆ. ನಮ್ಮಾಳ್ವಾರರ ಶಿಷ್ಯರಾದ ಕಂಬರಿಂದ ಅವರ ವೈಷ್ಣವ ತತ್ವಗಳಿಗನುಗುಣವಾಗಿ ರಚಿಸ್ಪಟ್ಟಿದೆ. ಈ ಕಾವ್ಯದ ಮೊದಲ ಓದು ಶ್ರೀರಂಗದ ರಂಗನಾಥನ ದೇವಾಯದಲ್ಲಿಯೇ ಆಯಿತೆಂದು ಪ್ರತೀತಿ ಇದೆ.

ಕಂಬ ರಾಮಾಯಣದ ಹೆಸರೇ ಇರಾಮಾವತಾರಂ ಅಥವಾ ರಾಮಾವತಾರ. ಕಾವ್ಯದ ತುಂಬೆಲ್ಲಾ ರಾಮ ಸ್ತುತಿಯೇ. ರಾಮನು ಸರ್ವಶ್ಕ್ತ ಪರಮಾತ್ಮ. ಅವನು ಮಾಡಲಗದ ಕೆಲಸವೇ ಇಲ್ಲ. ರಾಮ ವಿಷ್ನುವಿನ ಅವತಾರವಾದರೆ ಸೀತೆ? ಅವಳು ಲಕ್ಷ್ಮಿಯ ಅಪರಾವತಾರವಾಗಬೇಕಲ್ಲವೇ? ಎಲ್ಲ ರಂಗಗಳಲ್ಲೂ ರಾಮನ ಶ್ರೇಷ್ಟತೆಯನ್ನು ಮೂಡಿಸುವತ್ತಲೇ ಕವಿಯ ಗಮನ. ರಾಮವತಾರದ ಉದ್ದೇಶವೇ ರಾವಣನ ಹತ್ಯೆ. ಅದಕ್ಕಾಗಿಯೇ ದಶರಥನ ಮಗನಾಗಿ ಹುಟ್ಟುವೆನೆಂದು ದೇವತೆಗಳಿಗೆ ಅಭಯ ನೀಡಿಯೇ ರಾಮನ ಜನ್ಮ. ರಾಮನ ಜನ್ಮ ಮಾತ್ರವೇ ಅಲ್ಲ. ಕಂಬರ ಪ್ರಕಾರ ಲಕ್ಷ್ಮಿ ಸೀತೆಯಾಗಿ ಜನ್ಮ ಧರಿಸಿದ್ದೂ ಕೂಡ ರಾಕ್ಷಸರ ಹತ್ಯೆಗಾಗಿಯೇ! ಹಾಗಾದರೆ ಸೀತೆಯ ಅಪಹರಣ ಮತ್ತೆಲ್ಲವೂ ಕೂಡ ಪೂರ್ವ ನಿಶ್ಚಿತವೇ. ರಾವಣ ಕೇವಲ ಈ ಪೂರ್ವ ನಿಶ್ಚಿತವಾದ ಘಟನೆಗಳ ಕೈ ಗೊಂಬೆಯಾಗಿ ಆಗಲೇ ಬೇಕಾದ ತನ್ನ ಹತ್ಯೆಗೆ ಕಾರಣ ಒದಗಿಸುವುದಷ್ಟೇ! ತಾನು ಸೀತೆಯನ್ನು ಅಪಹರಿಸುವುದಿಲ್ಲವೆಂದು ಗೋಗರೆದರೂ ಕೂಡ ಕಂಬರು ಅವನ ಕೈಯಲ್ಲಿ ಅದನ್ನು ಮಾಡಿಸಿಯೇ ತೀರಬೇಕು.

ವಾಲ್ಮೀಕಿ ರಾಮಾಯಣವೆಂದು ಪ್ರಚಲಿತವಾದ ರಾಮಾಯಣವನ್ನು ಕಂಬರು ತಮ್ಮ ಕಾವ್ಯದ ಮೂಲವನ್ನಾಗಿ ಸ್ವೀಕರಿಸಿದ್ದಾರೆ. ಆದರೆ ವಿವರಣೆಗಳನ್ನು ಕೊಡುವಾಗ ತಮಿಳುನಾಡಿನ ಭೌಗೋಳಿಕ ವರ್ಣನೆಗಳು, ಅವರ ಸಂಸ್ಕೃತಿ ಮೆರೆಯುತ್ತದೆ. ಹೀಗೆ ತಮಿಳು ಜನರ ಮನಸ್ಸಿಗೆ ಹಿತವಾಗುವಂತೆ ಕಾವ್ಯದ ರಚನೆಯಾಗಿದೆ. ಕಂಬರ ರಾಮಾಯಣ ತಮಿಳು ಜನರ ಮುಖ್ಯ ಪಾರಾಯಣ ಗ್ರಂಥವಾಯಿತು. ಅದರಲ್ಲೂ ವೈಷ್ಣವರಲ್ಲಿ. ಹೀಗೆ ದೇವಾಲಯಗಳಲ್ಲಿ ಮಾತ್ರವೇ ಅಲ್ಲ ಇತರ ಜಾನಪದ ನಾಟಕಗಳಿಗೂ ಆಧಾರವಾಯಿತು. ವೈಷ್ಣವರಲ್ಲಿ ತೆಂಕಲೈ ವಿಭಾಗದವರು ಸೀತೆ-ರಾಮರ ಸಂಬಂಧಕ್ಕೆ ಪರಮಾತ್ಮ -ಜೀವಾತ್ಮದ ನಡುವಣ ಸಂಬಂಧವನ್ನೂ ಆರೋಪಿಸುತ್ತಾರೆ.

ಕಂಬ ರಾಮಾಯಣ ತಮಿಳು ನಾಡಿನ ಜನಪದ ಪ್ರಸಂಗಗಳನ್ನು ಮಾತ್ರವೇ ಅಲ್ಲದೆ ಕೇರಳದ ಜಾನಪದ ಆಚರಣೆಗಳನ್ನೂ ವ್ಯಾಪಿಸಿದೆ. ಉದಾಹರಣೆಗೆ, ಮಲೆಯಾಳಿಗರ ನಡುವೆ ನಡೆಯುವ ಗೊಂಬೆಯಾಟದಲ್ಲಿ ಕಂಬ ರಾಮಾಯಣದ ತಮಿಳು ಕಾವ್ಯದ ಭಾಗಗಳನ್ನೂ ಹಾಗೆಯೇ ಉಚ್ಚರಿಸಲಾಗುತ್ತದೆ. ಕೇರಳದ ಪ್ರಧಾನ ದೇವತೆ ಭಗವತಿಯ ವಾರ್ಷಿಕ ಹಬ್ಬದ ಸಮಯದಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ರಾತ್ರಿಗಳ ಕಾಲ ರಾಮಾಯಣಾಧಾರಿತ ಬೊಂಬೆಯಾಟ ಸಾಗುತ್ತದೆ. ಭಗವತಿಯ ದೇವಾಲಯದ ದೀಪದಿಂದಲೇ ಬೊಂಬೆಯಾಟದ ರಂಗದ ದೀಪಗಳನ್ನೂ ಹೊತ್ತಿಸಿಕೊಳ್ಳಲಾಗುತ್ತದೆ. ಪ್ರತಿ ರಾತ್ರಿ ಬೊಂಬೆಯಾಟಕ್ಕೆ ನೆರವಾಗಿ ಕಾಣಿಕೆ ನೀಡುವವರಿಗೆ ದೇವಾಲಯದ ಪೂಜಾರಿ/ಪಾತ್ರಿ ಅವರ ಕಷ್ಟಗಳು ಪರಿಹಾರವಾಗಲೆಂದು ದೇವತೆಗೆ ಪ್ರಾರ್ಥನೆ ಸಲ್ಲಿಸುತ್ತಾನೆ. ಕಂಬ ರಾಮಾಯಣ ಅದರ ಕಥೆಗೇನೂ ಸಂಬಂಧವಿಲ್ಲದ ಕೇರಳದ ಭಗವತಿಯ ಜಾತ್ರೆಯ ಆಚರಣೆಯ ಭಾಗವಾಗಿ ಬಿಟ್ಟಿದೆ ಎಂದಮೇಲೆ ರಾಮನ, ಕೃಷ್ಣನ ದೇವಾಲಯಗಳನ್ನು ಬಿಟ್ಟೀತೇ. ಹೀಗೆ ರಾಮನನ್ನು ಅವತಾರವಾಗಿ ಮಾಡಿದ ಕಾವ್ಯ ಕೇವಲ ಕಾವ್ಯವಾಗಿ ಉಳಿಯದೇ ಧಾರ್ಮಿಕ ಆಚರಣೆಯಾಗಿ ಜನರನ್ನು ನಿರ್ಭಂಧಗೊಳಿಸುವ ಶಾಸ್ತ್ರ ಗ್ರಂಥದ ಸ್ಥಾನವನ್ನು ಪಡೆಯುತ್ತದೆ.

ಕೃತ್ತಿವಾಸನ ರಾಮಾಯಣ ಕಾವ್ಯವೂ ಕೂಡ ಹೀಗೆಯೆ ಬಂಗಾಲೀ ಜೀವನದ ವರ್ಣನೆಗಳ ಮೂಲಕ ರಾಮಾಯಣವನ್ನು ಸ್ಥಳೀಕರಿಸುತ್ತದೆ. ರಾಮ, ಸೀತೆಯರ ವಿವಾಹ ಬಂಗಾಲಿ ಮದುವೆಯ ತದ್ವತ್ ವರ್ಣನೆಯಾಗಿ ಬಿಡುತ್ತದೆ. ಕೇವಲ ಬಂಗಾಲದಲ್ಲಿ ಮಾತ್ರವೇ ಅಲ್ಲ ಒಡಿಶಾ, ಅಸ್ಸಾಮ್ ಗಳಲ್ಲಿಯೂ ಜನಪ್ರಿಯವಾಗುತ್ತದೆ.

ಆಧ್ಯಾತ್ಮ ರಾಮಾಯಣವೆಂಬ ಧಾರ್ಮಿಕ ಗ್ರಂಥ

ಭಾರತದ ಜನ ಮಾನಸದ ಮೇಲೆ ಪ್ರಭಾವ ಬೀರಿದ ರಾಮಾಯಣಗಳಲ್ಲಿ ಸಂಸ್ಕೃತದ ಆ ಧ್ಯಾತ್ಮ ರಾಮಾಯಣ ಒಂದು ಮುಖ್ಯ ಗ್ರಂಥ. ಏಕೆಂದರೆ ಭಾರತದ ಅತ್ಯಂತ ಜನಪ್ರಿಯವಾದ ಅವಧಿ ಭಾಷೆಯ ರಾಮಚರಿತ ಮಾನಸವೂ ಸೇರಿದಂತೆ ಅನೇಕ ಜನ ಭಾಷೆಗಳಲ್ಲಿ ರಚಿತವಾದ ರಾಮಾಯಣ ಕಾವ್ಯಗಳ ಮೇಲೆ ತನ್ನ ಅಚ್ಚೊತ್ತಿದೆ. ಇದು ಬ್ರಹ್ಮಾಂಡ ಪುರಾಣದ ಅರವತ್ತನೇ ಅಧ್ಯಾಯವಾಗಿ ಸಂಕಲನಗೊಂಡಿದ್ದರೂ ಕೂಡ ಒಂದು ಪ್ರತ್ಯೇಕ ಕಾವ್ಯವಾಗಿ ಪರಿಗಣಿಸಲಾಗಿದೆ. ರಾಮಾಯಣ ಕಾವ್ಯ 24,000 ಶ್ಲೋಕಗಳಷ್ಟು ವ್ಯಾಪಿಸಿದ್ದರೆ ಆಧ್ಯಾತ್ಮ ರಾಮಾಯಣ ಕೇವಲ 3,643 ಶ್ಲೋಕಗಳ ಗಾತ್ರದ್ದು. ರಾಮನನ್ನು ಭೂತ, ಭವಿಷ್ಯತ್ ಗಳೆಲ್ಲದರ ಅರಿವಿದ್ದ ಪರಮಾತ್ಮ, ಸರ್ವವ್ಯಾಪಿ, ಸರ್ವಶಕ್ತ ಎಂದು ನಿರೂಪಿಸುವುದಕ್ಕೇ ಕಾವ್ಯದ ಎಲ್ಲ ಗಮನ.

ಆದರೆ ಅಷ್ಟೇ ಅಲ್ಲ. ಇಡೀ ಕಾವ್ಯ ಶಿವ ರಾಮನ ಕಥಾನಕವನ್ನು ಪಾರ್ವತಿಗೆ ವರ್ಣಿಸಿದಂತೆ ರಚಿಸಲಾಗಿದೆ. ಕೃತಿಯ ಆರಂಭದಲ್ಲಿಯೇ ರಾಕ್ಷಸರ ಹಾವಳಿಯಿಂದ ಭಾದಿತರಾದ ದೇವತೆಗಳ ದಂಡನ್ನು ಕಟ್ಟಿಕೊಂಡು ಬ್ರಹ್ಮನೇ ವಿಷ್ಣುವನ್ನು ಪ್ರಾರ್ಥಿಸಿದನೆಂದೂ ಅವರೆಲ್ಲರ ಬೇಡಿಕೆಯ ಮೇರೆಗೆ ರಾಮನಾಗಿ ಹುಟ್ಟುವೆನೆಂದು ಭರವಸೆ ನೀಡಿದನೆಂದೂ ವಿವರಿಸಲಾಗಿದೆ. ಈ ಎಲ್ಲ ಕಥೆಗಳ ಸೃಷ್ಟಿ ವಿಷ್ಣು ಪಾರಮ್ಯವನ್ನು ಪ್ರತಿಷ್ಟಾಪಿಸುವುದೇ ಆಗಿದೆ. ಅವನು ಎಲ್ಲ ದೇವತೆಗಳಿಗಿಂತಲೂ, ತ್ರಿಮೂರ್ತಿಗಳಲ್ಲಿ ಕೂಡ ಅವನೇ ಶ್ರೇಷ್ಟನೆಂದು ಸಾರುವುದೇ ಈ ಚಿತ್ರಣಗಳ ಉದ್ದೇಶವಾಗಿದೆ. ಶಿವನ ಬಾಯಿಂದಲೇ ಈ ಮಾತುಗಳನ್ನು ಹೊರಡಿಸಲಾಗಿದೆ:

ಪಾರ್ವತಿ, ಶ್ರೀರಾಮನು ಪ್ರಕೃತಿಯಿಂದ ಭಿನ್ನ, ಸರ್ವವ್ಯಾಪಿ, ಆನಂದ ಸಾಗರ. ಸರ್ವೋಚ್ಛ ತತ್ವದ ಪ್ರತಿರೂಪವದ ಬ್ರಹ್ಮಾಂಡದ ಕಣ ಕಣದಲ್ಲಿಯೂ ಮಾಯಾ ಶಕ್ತಿಯನ್ನು ಆತನೆ ಹರಡಿದ್ದಾನೆ. ಶುದ್ಧಾತ್ಮ ಜ್ಞಾನ ಸಾಗರ. ಏರಿಳಿತಗಳಿಲ್ಲದವನು. ಅಜ್ಞಾನಕ್ಕೆ ಅವನೆಂದೂ ಬಲಿ ಬೀಳಲಾರ. ಅಜ್ಞಾನಕ್ಕೆ ಮೂಲಾಧಾರವಾದ ಮಾಯೆಯು ಆತನಿಗೆ ಅಧೀನ. ಆದರೂ ಅವನಿಗೆ ಅಜ್ಞಾನವೆಂದೂ ತಟ್ಟದು.

ದೇವಿ, ಎಲ್ಲರ ಆತ್ಮಗಳಲ್ಲೂ ಅಡಗಿರುವ ರಾಮನ ಕತೆಯನ್ನು ರಾಮನ ಬಾಯಿಂದಲೇ ನಾನು ಕೇಳಿರುತ್ತೇನೆ. ಮಾನವನ ಮೂರು ಈತಿ ಬಾಧೆಗಳನ್ನೂ, ಅಜ್ಞಾನದಿಂದ ಹುಟ್ಟಿ ಬಂದಿರುವ ಮರಣ ಭಯವನ್ನೂ ಅಡಗಿಸಿ, ದೀರ್ಘಾಯುಸ್ಸು, ಪುತ್ರಲಾಭ ಹಾಗೂ ಸಮೃದ್ಧಿಗಳನ್ನು ನೀಡುವಂತಹ ಅವನ ಚರಿತ್ರೆಯನ್ನು ಕೇಳು.

ಇನ್ನು ಬ್ರಹ್ಮನ ಬಾಯಿಂದ ಹೊರಡುವ ಮಾತುಗಳನ್ನು ಕೇಳಿ:

ಋಷಿ ಮುನಿಗಳು ಆರಾಧಿಸುವ ನಿನ್ನ ದರ್ಶನ ಭಾಗ್ಯ ದೊರಕಿ ನನ್ನ ಪಾಪಗಳು ದೂರಗೊಂಡವು. ವಿಶ್ವದ ಸೃಷ್ಠಿ ಕಾರ್ಯವನ್ನು ಕೈಗೊಂಡಿರುವ ನನ್ನಂತಹವನಿಗೆ ನನ್ನ ಕೆಲಸದ ಸಫಲತೆಗಾಗಿ ನಿನ್ನ ಆಶೀವಾಧ ಬಹಳ ಅಗತ್ಯ. ಈ ಮಾತುಗಳು ಅದರಲ್ಲಿಯೂ ಸ್ವತಃ ತ್ರಿಮೂತಿಗಳಿಂದ ಹೊರಡುವ ಮಾತುಗಳನ್ನು ನೋಡಿ. ಈ ಬ್ರಹ್ಮ, ಶಿವರು ವಿಷ್ಣುವಿನ ಸಾಮಾನ್ಯ ಭಕ್ತರಿಗಿಂತಲೂ ಕಡೆಯಾಗಿ ಕಾಣುತ್ತಾರೆ. ವಿಷ್ಣುವನ್ನು ಅವನ ರೂಪವಾದ ರಾಮನನ್ನು ಹೀಗೆ ಅಟ್ಟಕ್ಕೇರಿಸಲಾಗಿದೆ.

ಇಷ್ಟು ಸಾಲದೆಂಬಂತೆ ಆಧ್ಯಾತ್ಮ ರಾಮಾಯಣದಲ್ಲಿ ಹೆಜ್ಜೆ ಹೆಜ್ಜೆಗೂ ಕೂಡ ರಾಮನ ಕೀರ್ತನೆಯನ್ನು ಮಾಡಲಾಗಿದೆ. ವಸಿಷ್ಠ, ಭರದ್ವಾಜ, ಅಗಸ್ತ್ಯ, ಅತ್ರಿ ಮೊದಲಾದ ಮಹರ್ಷಿಗಳು ಪರಶುರಾಮನಂತಹ ಸ್ವತಃ ವಿಷ್ಣುವಿನ ಅವತಾರ ಕೂಡ ರಾಮನನ್ನು ಹಾಡಿ ಹೊಗಳಲು ನಿಯೋಜಿಸಲಾಗಿದೆ.