Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಭಾರತದ ರಾಮಾಯಣವೂ ಮತ್ತು ಇಲಿಯಡ್ ಎಂಬ ಗ್ರೀಕ್ ಕಾವ್ಯವೂ

ಸಂಪುಟ: 
9
ಸಂಚಿಕೆ: 
42
date: 
Sunday, 11 October 2015
ಚೋಮನ ದುಡಿ-80

ಜಿ. ಎನ್. ನಾಗರಾಜ್

ವಿಶ್ವದಲ್ಲಿ ಭಾರತದ ರಾಮಾಯಣ ಮತ್ತು ಮಹಾಭಾರತಗಳಿಗೆ ಸಂವಾದಿಯಾದ ಮಹಾಕಾವ್ಯಗಳೆಂದು ಪ್ರಖ್ಯಾತವಾಗಿರುವ ಕಾವ್ಯಗಳು ಗ್ರೀಸಿನ ಇಲಿಯಡ್, ಒಡಿಸ್ಸಿ ಎಂಬ ಮಹಾಕಾವ್ಯಗಳು. ವೈದಿಕ ದೇವ-ದೇವತೆಗಳಂತೆಯೇ ಗ್ರೀಕರ ಪುರಾಣ ಪ್ರಪಂಚವೂ ಅವರ ಸ್ನೇಹ ವೈರಗಳೂ, ಪ್ರೀತಿ, ಕಾಮಗಳೂ ವೈವಿಧ್ಯಮಯವಾಗಿದೆ. ಗ್ರೀಸಿನ ದೇವತೆಗಳ ನಡುವಣ ರಾಜಕೀಯವೂ ಕೂಡ ಮತ್ತು ಈ ಪ್ರಪಂಚದ ರಾಜ ಮಹಾರಾಜರುಗಳ ಕಾಳಗ, ಯುದ್ಧಗಳಲ್ಲಿ ಅವರು ಕೈಯಾಡಿಸುವ ರೀತಿಯೂ ಕೂಡ ಪರಸ್ಪರ ಹೋಲಿಕೆಯುಳ್ಳದ್ದಾಗಿದೆ. ಹೇಗೆ ರಾಮಾಯಣ, ಮಹಾಭಾರತಗಳು ಭಾರತದ ವಿವಿಧ ಭಾಷೆಗಳನ್ನು ಮತ್ತು ಭಾರತದ ಹೊರಗಿನ ಪ್ರದೇಶಗಳನ್ನೂ ಪ್ರಭಾವಿಸಿದೆಯೋ ಹಾಗೆಯೇ ಗ್ರೀಕ್ ಕಾವ್ಯ ಪುರಾಣಗಳು ಯುರೋಪನ್ನು ಮತ್ತು ಪಾಶ್ಚಿಮಾತ್ಯ ಸಾಹಿತ್ಯ ಮತ್ತು ಚಿಂತನೆಗಳನ್ನು ವ್ಯಾಪಿಸಿದೆ.

ಈ ಹಿನ್ನೆಲೆಯಲ್ಲಿ ಗ್ರೀಸ್ ದೇಶದ ಈ ಕಾವ್ಯದ ಜೊತೆ ಹೋಲಿಕೆ ರಾಮಾಯಣ ಮಹಾಕಾವ್ಯವನ್ನು ಭಾರತದ ಸಾಮ್ರಾಜ್ಯ ವಿಸ್ತರಣೆಯ ಮತ್ತು ರಾಜ ಕುಟುಂಬಗಳನ್ನು ಹಾಗೂ ಸಮಾಜವನ್ನು ವಿನ್ಯಾಸಗೊಳಿಸುವ ಸಾಧನವಾಗಿಸಿರುವುದರ ಬಗೆಗೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಳ್ಳಲು ಸಹಾಯಕವಾಗುತ್ತದೆ.

ಯೂರೋಪಿನ ದಕ್ಷಿಣ ಭಾಗದ ಗ್ರೀಸ್ ಎಂಬ ದೇಶದ ಕಾವ್ಯ ಪುರಾಣಗಳ ವಸ್ತುಗಳನ್ನು ಇಡೀ ಯೂರೋಪು ವಿಪುಲವಾಗಿ ಬಳಸಿಕೊಂಡಿದೆ. ಪಾಶ್ಚಿಮಾತ್ಯ ಭಾಷೆಗಳಲ್ಲಿ ಜನಜನಿತವಾದ ಅನೇಕ ಪದಗಳು ಮತ್ತು ನುಡಿಗಟ್ಟುಗಳು ಅಲ್ಲಿಂದ ನಮಗೂ ಕೂಡ ಹರಿದು ಬಂದಿರುವ ಅಟ್ಲಾಸ್, ನಾರ್ಸಿಸಿಸಂ, ಅಮೇಜಾನ್, ಪಂಡೋರಾಸ್ ಬಾಕ್ಸ್, ಈಡಿಪಸ್ ಕಾಂಪ್ಲೆಕ್ಸ್, ಹರ್ಕೂಲಿಯನ್ ಟಾಸ್ಕ್, ಗಾರ್ಡಿಯನ್ ನಾಟ್, ಹೈಡ್ರಾ ಹೆಡ್ ಮೊದಲಾದವು ಗ್ರೀಕ್ ಪುರಾಣ ಮೂಲದವು. ಇಂದು ಕೂಡ ರಂಗಭೂಮಿಯಲ್ಲಿ ಪ್ರಧಾನವಾಗಿರುವ ಟ್ರಾಜೆಡಿ, ಕಾಮಿಡಿ, ವ್ಯಂಗ್ಯ ನಾಟಕಗಳೆಂಬ ರೂಪಗಳ ಉಗಮ ಸ್ಥಾನವೂ ಕೂಡ ಗ್ರೀಸ್. ಜಗತ್ ಪ್ರಸಿದ್ಧ ಟ್ರಾಜೆಡಿಗಳ ಕತೃಗಳಾದ ಏಸ್ಕಿಲಸ್, ಯೂರಿಪಿಡೀಸ್, ಸೋಫೋಕ್ಲಿಸ್, ಕಾಮಿಡಿ ನಾಟಕಕಾರ ಅರಿಸ್ಟೋಫೆನಿಸ್ ಇವರು ಗ್ರೀಕರು. ಇದರ ಜೊತೆಗೆ ಲಿರಿಕ್, ಓಡ್, ಎಲಿಜಿಗಳೆಂಬ ಕಾವ್ಯ ರೂಪಗಳೂ ಕೂಡ ಗ್ರೀಸ್ ನ ಸಾಹಿತ್ಯ ಸಿದ್ಧಿಯ ಉದಾಹರಣೆಗಳು.

ಆದರೆ ಅಷ್ಟೇ ಅಲ್ಲ. ಜಗತ್ತಿನ ತತ್ವಶಾಸ್ತ್ರಕ್ಕೆ ಬುನಾದಿಯಾದ ವಿಚಾರಗಳನ್ನು ಪಸರಿಸಿದ ದೇಶಗಳಲ್ಲಿ ಗ್ರೀಸ್ ದೇಶವೂ ಒಂದು. ಸೋಕ್ರೆಟೀಸ್, ಪ್ಲೇಟೋ, ಎಪಿಕ್ಯೂರಸ್, ಅರಿಸ್ಟಾಟಲ್‌ರಂತಹ ತತ್ವಶಾಸ್ತ್ರಜ್ಞರು ಈ ದೇಶದವರು. ಗ್ರೀಸ್ ತತ್ವಶಾಸ್ತ್ರ ಪಾಶ್ಚಿಮಾತ್ಯ ತತ್ವಜ್ಞಾನದ ಬೆಳವಣಿಗೆಯನ್ನು ಇಂದೂ ಪ್ರಭಾವಿಸುತ್ತಿದೆ.

ಡೆಮಾಕ್ರಸಿ-ಪ್ರಜಾಪ್ರಭುತ್ವ ಎಂಬ ಪದ ಮತ್ತು ರಾಜಕೀಯದ ಮುಖ್ಯ ರೂಪದ ಉಗಮಕ್ಕೆ ಕೂಡ ಗ್ರೀಸ್ ಮೂಲ. ವಿಶ್ವದಲ್ಲಿ ಜ್ಞಾನದ ಮೂಲ ಮತ್ತು ಶಿಕ್ಞಣದ ಆಧಾರಗಳಾದ ಜೀವಶಾಸ್ತ್ರ, ಭೌತಶಾಸ್ತ್ರ, ಗಣಿತಶಾಸ್ತ್ರ ಎಂಬ ವಿಜ್ಞಾನಗಳೂ ಮತ್ತು ಇತಿಹಾಸ ರಚನೆಯ ಪದ್ಧತಿಯ ಆರಂಭಕ್ಕೂ ಕೂಡ ಗ್ರೀಕ್ ನಾಗರೀಕತೆ ಮೂಲಸ್ಥಾನವಾಗಿದೆ.

ಗ್ರೀಕ್ ಕಾವ್ಯ ಚಕ್ರವೂ, ಜಾನಪದ ಗಾಯಕರೂ

ಇಲಿಯಡ್ ಎಂಬ ಕಾವ್ಯವನ್ನು ಹೋಮರ್ ಕವಿ ಬರೆದನೆಂದು ಪ್ರಚಲಿತವಾಗಿದೆ. ಇದೇ ಕವಿ ಒಡಿಸ್ಸಿ ಎಂಬ ಮತ್ತೊಂದು ಮಹಾಕಾವ್ಯವನ್ನು ಕೂಡ ಬರೆದನೆಂದು ಪ್ರತೀತಿ. ಈ ಕಾವ್ಯಗಳು ಮೌಖಿಕ ಕಾವ್ಯವಾಗಿ ಹಲವು ಕಾಲ ಹರಿದು ಬಂದಿವೆ. ನಂತರ ಕ್ರಿ.ಪೂ. ಎಂಟನೆಯ ಶತಮಾನದಲ್ಲಿ ಲಿಖಿತ ರೂಪ ಪಡೆದಿವೆ. ಆ ಪ್ರಕಾರ ಇವು ಋಗ್ವೇದಕ್ಕಿಂತ ಸ್ವಲ್ಪ ಮಾತ್ರ ಈಚಿನವು. ಇತರ ವೇದಗಳು, ಬ್ರಾಹ್ಮಣಗಳಿಗೆ ಸಮಕಾಲೀನವಾದವು. ಉಪನಿಷತ್ತುಗಳು ಮತ್ತು ರಾಮಾಯಣ, ಮಹಾಭಾರತಕ್ಕಿಂತ ನಾಲ್ಕಾರು ಶತಮಾನ ಹಿಂದಿನವು. ಮತ್ತು ಇವೆಲ್ಲವುಗಳಿಗಿಂತ ಬಹಳ ಹಿಂದೆ ಲಿಖಿತ ರೂಪ ಪಡೆದವು. ಈ ಕಾವ್ಯಗಳು ಗ್ರೀಕ್ ಕಾವ್ಯ ಚಕ್ರವೆಂದು ಹೆಸರಾದ ಎಂಟು ಕಾವ್ಯಗಳ ಗುಚ್ಛದ ಭಾಗ. ಈ ಎಲ್ಲ ಕಾವ್ಯಗಳು ಕೂಡ ಮೌಖಿಕ ಕಾವ್ಯಗಳಾಗಿ ಹರಿದು ಬಂದವುಗಳೇ. ಈ ಕಾವ್ಯಗಳಲ್ಲಿ ಇಲಿಯಡ್, ಒಡಿಸ್ಸಿ ಎರಡೂ ಸರಿಸುಮಾರು ಪೂರ್ಣ ಪ್ರಮಾಣದಲ್ಲಿ ದೊರಕಿವೆ. ಉಳಿದವುಗಳು ಕೇವಲ ಛಿನ್ನಭಿನ್ನವಾಗಿ ದೊರಕಿವೆ. ಈ ಕಾವ್ಯಗಳು ಗ್ರೀಸ್ ಹಾಗೂ ಟ್ರೋಜನ್ ಸಮುದಾಯಗಳ ನಡುವಣ ಯುದ್ಧಕ್ಕೆ ಸಂಬಂಧಿಸಿದವು. ಪ್ರತಿಯೊಂದು ಕಾವ್ಯವೂ ಒಂದರ ನಂತರ ಒಂದರಂತೆ ಈ ಯುದ್ಧ ಮತ್ತು ಯುದ್ಧಾನಂತರ ಘಟನೆಗಳನ್ನು ವಿವರಿಸುತ್ತವೆ. ರಾಮಾಯಣ, ಮಹಾಭಾರತಗಳಂತೆ ಎರಡು ಬೇರೆಯೆ ಆದ ಕಥಾನಕಗಳಲ್ಲ. ಇವುಗಳಲ್ಲಿ ಎರಡನ್ನು ಹೋಮರ್ ಎಂಬ ಕವಿಯು ಬರೆದನೆಂದು ಉಳಿದವುಗಳನ್ನು ಬೇರೆ ಬೇರೆಯವರು ಬರೆದರೆಂದೂ ಪ್ರತೀತಿ.

ರಾಮಾಯಣದ ಕತೃ ವಾಲ್ಮೀಕಿಯ ಬಗೆಗಿನ ಐತಿಹ್ಯಗಳಂತೆಯೇ ಹೋಮರ್ ಕವಿಯ ಬಗ್ಗೆ ಹಲವು ಐತಿಹ್ಯಗಳಿವೆ. ಗ್ರೀಸ್ ದೇಶದ 19 ನಗರಗಳು ಹೋಮರ್ ತಮ್ಮವನೆಂದು ವಾದಿಸುತ್ತವೆ. ಹೋಮರ್ ಒಬ್ಬ ಅಂಧ ಜಾನಪದ ಹಾಡುಗಾರನೆಂದು ಬೀದಿಗಳಲ್ಲಿ, ಕ್ರೀಡಾ ಸ್ಫರ್ಧೆಗಳಲ್ಲಿ ಹಾಡುತ್ತಿದ್ದನೆಂದು ಐತಿಹ್ಯಗಳಿವೆ. ಹೀಗೆ ಅಂಧನಾಗಿರುವಾಗಲೇ ತನ್ನೆರಡೂ ಮಹಾಕಾವ್ಯಗಳನ್ನು ಹಾಡಿದನಂತೆ. ಗ್ರೀಸಿನ ಜನ ಅಂಧರನ್ನು ಹೋಮರ್ ಗಳು ಎಂದು ಕರೆಯುತ್ತಿದ್ದರಿಂದ ಅವನು ಹೋಮರ್ ಎಂದು ಹೆಸರಾದನೆಂದು ಪ್ರತೀತಿಗಳಿವೆ.

ಆದರೆ ಸಂಶೋಧನಕಾರರು ಹೋಮರಿಡೆ ಎಂಬ ಜಾನಪದ ಲಾವಣಿಕಾರರ ಗುಂಪನ್ನು ಆರಂಭಿಸಿದವನೆಂದೂ, ಅವರುಗಳು ಮೌಖಿಕ ಕಾವ್ಯಗಳನ್ನು ಹಾಡುತ್ತಿದ್ದರೆಂದೂ ಈ ಕಾವ್ಯಗಳು ಅಂತಹ ಲಾವಣಿಕಾರರ ತಂಡದಿಂದ ಹೊಮ್ಮಿದವೆಂದೂ ತಿಳಿಯಬಹುದಾದ ಸಾಧ್ಯತೆಗಳನ್ನು ಅನ್ವೇಷಿಸಿದ್ದಾರೆ. ನಿಜ ರಾಮಾಯಣದ ಅನ್ವೇಷಣೆಯ ಭಾಗವಾಗಿ ರಾಮಾಯಣದ ಕತೃವಿನ ಬಗೆಗೂ ಕೂಡ ಇಂತಹುದೇ ತೀರ್ಮಾನಕ್ಕೆ ಬರುವ ಸಾಧ್ಯತೆಗಳನ್ನು ಈ ಲೇಖನಮಾಲೆಯ ಹಿಂದಿನ ಲೇಖನಗಳಲ್ಲಿ ಚರ್ಚಿಸಲಾಗಿದೆ.

ದೇವರಾಗದ ಗ್ರೀಕ್ ವೀರರು ಮತ್ತು ಅವತಾರವಾದ ರಾಮ

ಇಲಿಯಡ್ ಎಂಬುದನ್ನು ಗ್ರೀಕ್ ಪ್ರಾಚೀನ ಕಾವ್ಯ ಗುಚ್ಛದ ಎರಡನೆಯ ಪುಷ್ಪವಾಗಿ ಕಾಣಲಾಗಿದೆ. ಈ ಕಾವ್ಯ ಕೂಡ ರಾಮಾಯಣದಂತೆಯೇ ಒಬ್ಬ ಹೆಣ್ಣಿನ ವಿಷಯಕ್ಕೆ ಸಂಬಂಧಿಸಿದುದು.

ಟ್ರೋಜನ್ ರಾಜ್ಯದ ರಾಜಕುಮಾರ ಪ್ಯಾರಿಸ್ ಒಮ್ಮೆ ಮೆನೆಲಿಯಸ್ ಎಂಬ ಸ್ಪಾರ್ಟಾದ (ಗ್ರೀಸಿನ ಒಂದು ಪ್ರದೇಶ) ರಾಜನೊಬ್ಬನ ಅರಮನೆಯಲ್ಲಿ ತಂಗಿದ್ದಾಗ ಅವನ ರಾಣಿ ಹೆಲೆನ್‌ಳಲ್ಲಿ ಅನುರಕ್ತನಾದ. ಅವಳೂ ಇವನನ್ನು ಪ್ರೇಮಿಸಿದಳು. ಒಮ್ಮೆ ಮೆನೇಲಿಯಸನು ಬೇರೆ ಸ್ಥಳಕ್ಕೆ ಹೋಗಿದ್ದಾಗ ಇಬ್ಬರೂ ಕೂಡ ಧನಕನಕಗಳೊಡನೆ ಅಲ್ಲಿಂದ ಪಲಾಯನ ಮಾಡಿದರು. ನಂತರ ಗ್ರೀಸಿನ ಮಹಾರಾಜನಾದ ಅಗಮೆಮ್ನಾನನ ಮೊರೆ ಹೊಕ್ಕು ಗ್ರೀಸಿನ ವೀರರನ್ನೆಲ್ಲ ಒಗ್ಗೂಡಿಸಿ ಹೆಲೆನಳನ್ನು ಪಡೆಯಲು ಟ್ರೋಜನ್ ನಗರದ ಮೇಲೆ ಮುತ್ತಿಗೆ ಹಾಕಿದರು. ಒಂಬತ್ತು ವರ್ಷಗಳ ದೀರ್ಘ ಕಾಲ ನಡೆದ ಯುದ್ದದಲ್ಲಿ ಗ್ರೀಸಿನ ವೀರರಾದ ಅಖಿಲೆಸ್, ಟ್ರೋಜನ್ ವೀರರಾದ ಹೆಕ್ಟರ್ ಮೊದಲಾದವರ ಪರಾಕ್ರಮ, ಗ್ರೀಸಿನ ನಾಯಕರೊಳಗಿನ ಮನಸ್ತಾಪಗಳು, ವಿರುದ್ದ ಪಡೆಗಳು ಮತ್ತು ವೀರರಿಗೆ ವಿವಿಧ ದೇವತೆಗಳು ನೀಡುವ ಬೆಂಬಲ, ದೇವತೆಗಳ ನಡುವಣ ಕಾರಾಸ್ಥಾನಗಳು ಮುಂತಾದವೆಲ್ಲ ವರ್ಣಿತವಾಗಿದೆ. ಕೊನೆಗೆ ಒಂದು ಮರದ ಕುದುರೆಯನ್ನು ತಯಾರಿಸಿ ಅದರ ಒಳಗೆ ಗ್ರೀಕ್ ವೀರರು ಕುಳಿತುಕೊಂಡು ಟ್ರೋಜನ್ ನಗರದ ಒಳ ಹೊಕ್ಕು ಆ ಸೈನ್ಯವನ್ನು ಸದೆ ಬಡಿದು ಇಡೀ ನಗರಕ್ಕೆ ಬೆಂಕಿ ಹಚ್ಚುತ್ತಾರೆ. ಗ್ರೀಕ್ ನಾಯಕರು ವಿಜಯಿಗಳಾಗಿ ಹೆಲೆನಳೊಡನೆ ಮರಳುತ್ತಾರೆ.

ಈ ಕತೆಯಲ್ಲಿ ರಾಮಾಯಣದೊಡನೆ ಸಾಮ್ಯದ ಅನೇಕ ಅಂಶಗಳಿವೆ. ಆದರೆ ಮುಖ್ಯ ಅಂಶವೆಂದರೆ ಹೆಲೆನ್ ಅಪಹರಿಸಲ್ಪಟ್ಟವಳಲ್ಲ. ತಾನೆ ತನ್ನ ಇಚ್ಛೆಯಂತೆ ತನ್ನ ಪತಿಯನ್ನು ಬಿಟ್ಟು ಪಲಾಯನವಾದವಳು. ಇಲಿಯಡ್ ಕೂಡ ಗ್ರೀಸಿನ ಜನ ಸಾಮಾನ್ಯರ ಬದುಕಿನತ್ತ ಇಣುಕಿಯೂ ನೋಡುವುದಿಲ್ಲ. ಗ್ರೀಕ್ ವೀರರು, ವಿವಿಧ ನಗರಗಳ ಅಧಿಪತಿಗಳು ಇವರುಗಳ ಬದುಕನ್ನು ಚಿತ್ರಿಸುತ್ತದೆ. ಅವರ ಕಾಳಗಗಳು, ಲೂಟಿಗಳು, ಅವುಗಳ ಹಂಚಿಕೆಯನ್ನು ವರ್ಣಿಸುತ್ತದೆ. ಈ ಲೂಟಿಯಲ್ಲಿ ಹೆಣ್ಣುಗಳೂ ಕೂಡ ಒಂದು ವಸ್ತು. ಅವರ ಯಾವ ಅಭಿಪ್ರಾಯಕ್ಕೂ ಇಲ್ಲಿ ಬೆಲೆಯೇ ಇಲ್ಲ. ಯಾರೂ ಬೇಕಾದರೂ ಅಪಹರಿಸಬಹುದು, ತಮಗೆ ಬೇಕಾದಂತೆ ಹಂಚಿಕೊಳ್ಳಬಹುದು, ಮರು ಹಂಚಿಕೆ ಮಾಡಿಕೊಳ್ಳಬಹುದು ಇತ್ಯಾದಿ. ಹೀಗೆ ವಿವಾಹ ಎಂಬುದೊಂದು ಇದ್ದರೂ ಅದು ಕೇವಲ ಶ್ರೀಮಂತರ ಹೆಣ್ಣುಗಳ ಮೇಲಿನ ಕಟ್ಟು ಪಾಡಷ್ಟೇ ಹೊರತು ಪುರುಷರಿಗೆ ಎಷ್ಟು ಮಾತ್ರಕ್ಕೂ ಅನ್ವಯಿಸುವುದಿಲ್ಲ. ನಮ್ಮ ಇಂದ್ರನಂತೆ ಗ್ರೀಕರ ಗಂಡು ದೇವತೆಗಳಿಗೂ ಈ ಅಂಶ ಅನ್ವಯಿಸುತ್ತದೆ. ಹೀಗೆ ಇಲಿಯಡ್ ಕೂಡ ರಾಜ್ಯಗಳ ಸ್ಥಾಪನೆಯ ಆರಂಭ ಕಾಲದ ಕಾವ್ಯ.

ಮೂಲ ರಾಮಾಯಣದಂತೆಯೇ ಕೂಡ ಇಲಿಯಡ್ ಮತ್ತು ಒಡಿಸ್ಸಿ ಕೂಡ ಜಾನಪದ ಹಾಡುಗಾರರಿಂದ ಉದ್ಭವಿಸಿದ ಕಾವ್ಯವೇ. ರಾಜ್ಯಗಳ ಆರಂಭಘಟ್ಟದ ಪರಿಸ್ಥಿತಿಯನ್ನು ಇವು ವಿವರಿಸುತ್ತವೆ. ಆದರೆ ರಾಮಾಯಣದಂತೆ ಜಾನಪದ ಕಾವ್ಯವನ್ನು ಆಸ್ಥಾನದ ಪಂಡಿತರು ಸಾಮ್ರಾಜ್ಯ ವಿಸ್ತರಣೆಯನ್ನು ಸಾಧಿಸಲು ಉದ್ದೇಶಪೂರ್ವಕವಾಗಿ ರಚಿಸಿದ ಕಾವ್ಯವಲ್ಲ. ಅದರಲ್ಲಿ ಪಾತಿವ್ರತ್ಯ, ಹಿರಿಯ ಮಗನಿಗೆ ರಾಜ್ಯಭಾರ ಇತ್ಯಾದಿ ಮೌಲ್ಯಗಳಾಗಿಲ್ಲ. ಹೆಲೆನಳನ್ನು ಪ್ರೀತಿಸಿದ ಪ್ಯಾರಿಸ್ ಆಗಲಿ ಅಥವಾ ಅವನ ಕುಟುಂಬವಾಗಲೀ ರಾಕ್ಷಸರೆಂದಾಗಲೀ ಚಿತ್ರಿತವಾಗಿಲ್ಲ. ಅವರ ನಡುವಣ ಕಾಳಗ ಒಳಿತು, ಕೆಡುಕಿನ ಶಕ್ತಿಗಳ ಕಾಳಗವೂ ಅಲ್ಲ. ಹೇಳುವುದಾದರೆ ಇದು ಹೆಚ್ಚು ಮಹಾಭಾರತದ ಕಥನ ರೀತಿಯನ್ನು ಹೋಲುತ್ತದೆ.

ಎಲ್ಲಕ್ಕಿಂತ ಮುಖ್ಯವಾದ ವಿಷಯವೆಂದರೆ ಈ ಕಾವ್ಯಗಳ ವೀರರು- ಅಖಿಲೆಸ್, ಅಗಮೆಮ್ನನ್, ಹೆಕ್ಟರ್ ಮುಂತಾದವರುಗಳು ಯಾವ ದೇವರ ಅವತಾರವೆಂದು ಈ ಕಾವ್ಯದಲ್ಲಾಗಲೀ ನಂತರವಾಗಲಿ ಬಿಂಬಿಸಲ್ಪಡುವುದಿಲ್ಲ. ಕೇವಲ ಮನುಜ ಮಾತ್ರರ, ಅಂದಿನ ವೀರರ, ಸಾಮಂತರ ಕುಟುಂಬಗಳ ಜೀವನ ಚಿತ್ರಣವಷ್ಟೇ ಎಂದು ಪರಿಗಣಿತವಾಗಿದೆ. ಕಾವ್ಯವನ್ನು ಅದರ ಜೀವನ ಚಿತ್ರಣ ಮತ್ತು ಕಾವ್ಯ ಗುಣಕ್ಕಾಗಿಯಷ್ಟೇ ಓದಿ ಸಂತಸ ಪಡಬಹುದಾಗಿದೆ.

ಅದರಿಂದಾಗಿ ಅಂದಿನ ದೇವಾನುದೆವತೆಗಳನ್ನು ವಿವರವಾಗಿ ಈ ಕಾವ್ಯಗಳು ಚಿತ್ರಿಸಿದರೂ ಕೂಡ, ಯೂರೋಪಿನ ಮೇಲೆ ಬೀರುವ ಪ್ರಭಾವ ಕೇವಲ ಸಾಹಿತ್ಯಿಕವಷ್ಟೇ ಹೊರತು ಧಾರ್ಮಿಕವಾಗಿ ಹಿಡಿತ ಸಾಧಿಸುವ ಒಂದು ಚೂರು ಸಾಧ್ಯತೆಯೂ ಇಲ್ಲ.

ಹೀಗಾಗಿ ಮೇಲೆ ವಿವರಿಸಿದಂತೆ ಯೂರೋಪಿನ ಮೇಲೆ ಆ ಮೂಲಕ ವಿಶ್ವದ ಮೇಲೆ ಗ್ರೀಕ್ ಸಂಸ್ಕೃತಿಯ ಅಪಾರ ಪ್ರಭಾವ ಮತೀಯ, ಧಾರ್ಮಿಕ ಕಾರಣಗಳಿಗಾಗಿ ಉಂಟಾದುದಲ್ಲ. ಅದಕ್ಕೆ ಬದಲಾಗಿ ವಿಚಾರಗಳು, ತತ್ವಶಾಸ್ತ್ರ, ವಿಜ್ಞಾನಗಳ ಮೂಲಕ ಅಂದರೆ ಧರ್ಮದ ಬದಲಾಗಿ ಬದುಕಿನ ಸಂಗತಿಗಳ ಮೂಲಕ ಪ್ರಾಮುಖ್ಯತೆಯ್ನು ಪಡೆದಿದೆ. ಭಾರತದಲ್ಲಿಯೂ ಅಂದಿನ ಗ್ರಂಥಗಳಲ್ಲಿ ಅಡಕವಾದ ವಿಜ್ಞಾನ, ತತ್ವಶಾಸ್ತ್ರ, ಕಲೆ, ಸಾಹಿತ್ಯ ನಮ್ಮ ಸಮಾಜವನ್ನು ಬೆಳೆಸಬಹುದಾದ ಸಾಧ್ಯತೆಯಿತ್ತು. ಆದರೆ ರಾಮಾಯಣವನ್ನು ಸಾಮ್ರಾಜ್ಯ ಸೇವಕನನ್ನಾಗಿ ಪರಿವರ್ತಿಸಿದ್ದರಿಂದ, ರಾಮನನ್ನು ಅವತಾರವಾಗಿ ಮಾರ್ಪಡಿಸಿದ್ದರಿಂದ ಈ ಅವಕಾಶಗಳಿಂದ ಭಾರತ ವಂಚಿತವಾಯಿತು. ಈ ಬಗ್ಗೆ ಮುಂದಿನ ಸಂಚಿಕೆಯಲ್ಲಿ ವಿವರವಾಗಿ ಪರಿಶೀಲಿಸೋಣ.