Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ದಲಿತರಿಗೆ, ಹಿಂದುಳಿದವರಿಗಿನ್ನೂ ದಕ್ಕದ ಮೀಸಲಾತಿ

ಸಂಪುಟ: 
9
ಸಂಚಿಕೆ: 
41
date: 
Sunday, 4 October 2015
ಚೋಮನದುಡಿ – 79
ಜಿ.ಎನ್. ನಾಗರಾಜು

ಆರೆಸ್ಸೆಸ್ ಅಧಿಪರು, ದೇಶದ ಸರ್ಕಾರಕ್ಕೆ ತಾವೇ ಅತಿ ದೊಡ್ಡ ಧಣಿಗಳೆಂದು ಭಾವಿಸಿರುವವರು ಯಾರಿಗೆ ಮತ್ತು ಎಷ್ಟು ಕಾಲ ಮೀಸಲಾತಿಯನ್ನು ಮುಂದುವರೆಸಬೇಕು ಎಂಬುದನ್ನು ಪರಾಮರ್ಶಿಸಬೇಕೆಂದು ಆದೇಶ ಕೊಟ್ಟಿದ್ದಾರೆ. ಆದರೆ ಅವರು ಬೇಕೆಂದೇ ಮರೆಸಲು ಪ್ರಯತ್ನಿಸುತ್ತಿರುವ ಒಂದು ಮುಖ್ಯ ಸಂಗತಿಯೆಂದರೆ ನಮ್ಮ ಸಂವಿಧಾನ ಬದ್ಧ ಮೀಸಲಾತಿ ನಿಜವಾಗಿ ಮೀಸಲಾತಿಯಲ್ಲ. ಎರಡು ಸಾವಿರ ವರ್ಷಗಳಿಂದ ದೇಶದಲ್ಲಿರುವ ವರ್ಣ-ಜಾತಿ ವ್ಯವಸ್ಥೆ ನಿಜವಾದ ಮೀಸಲಾತಿ. ಇಂತಹವರಿಗೆ ಇಂತಹುದೇ ಕೆಲಸವನ್ನು ಹುಟ್ಟಿನಿಂದಲೇ ಮೀಸಲು ಎಂದು ಧಾರ್ಮಿಕ ಕಟ್ಟಲೆಗಳ ಮೂಲಕ ವಿಧಿಸಿದ್ದು ಮೀಸಲಾತಿಯಲ್ಲವೆ? ಸಂವಿಧಾನದ ಇಂತಹ ಮೀಸಲಾತಿಯನ್ನು ಬೇಧಿಸಬೇಕೆಂದು ರೂಪಿಸಿದ ಸಾಧನ ಸಂವಿಧಾನ ಬದ್ಧ ಮೀಸಲಾತಿ ಕರೆದಿದ್ದಾರೆ. ಸಂವಿಧಾನ ಬದ್ಧ ಮೀಸಲಾತಿಯಲ್ಲಿ ಇಂತಹವರು ಇಂತಹುದೇ ಕೆಲಸ ಮಾಡಬೇಕೆಂದು ವಿಧಿಸಲಾಗಿದೆಯೇ? ಈ ಜಾತಿ ವ್ಯವಸ್ಥೆ ಎಂಬ ಮೀಸಲಾತಿಯನ್ನು ಸಾವಿರಾರು ವರ್ಷಗಳಿಂದ ಅನುಭವಿಸಲಾಗಿದೆ. ದೇಶದ ಸಾಮಾಜಿಕ ಹಾಗೂ ಆರ್ಥಿಕ ಜೀವನದ ದೊಡ್ಡ ಭಾಗದಲ್ಲಿ ಇನ್ನೂ ಈ ಮೀಸಲಾತಿ ಮತ್ತು ಅದರ ಪರಿಣಾಮಗಳನ್ನು ಅನುಭವಿಸಲಾಗುತ್ತಿದೆ. ಕೇವಲ ಕೆಲ ಅಂಶದಲ್ಲಿ ಮಾತ್ರ ಬೇಧಿಸಲಾದ ಈ ಮೀಸಲಾತಿಯನ್ನು ಮತ್ತೆ ಪುನಸ್ಥಾಪಿಸಲೆಂದು ಮಾಡುತ್ತಿರುವ ಪ್ರಯತ್ನವೇ ಭಾಗವತ್ ರವರ ಹೇಳಿಕೆಯ ಗುರಿ.

Chimanadudi’ಇನ್ನೆಷ್ಟು ವರ್ಷ ಮೀಸಲಾತಿ ಕೊಡಬೇಕ್ರಿ’ ಎಂಬ ಮಾತು ದೇಶದ ಹಲವು ಜನ ವಿಭಾಗಗಳಿಂದ ಕೇಳಿ ಬರುತ್ತಿದೆ. ಆದರೆ ಸ್ವತಂತ್ರ ಭಾರತದಲ್ಲಿ ಮೀಸಲಾತಿ ಜಾರಿಯಾಗಿ 65 ವರ್ಷಗಳಾದರೂ ದಲಿತರಿಗೆ ಹಿಂದುಳಿದವರಿಗೆ ಮೀಸಲಾತಿ ಇನ್ನೂ ದಕ್ಕಿಯೇ ಇಲ್ಲವೆಂಬ ವಾಸ್ತವ ನಮ್ಮೆದುರು ಹಲ್ಲು ಕಿಸಿದು ಅಣಕಿಸುತ್ತಿದೆ.

ಅದು ಹೇಗೆ ಎಂದು ಹಲವರು ಪ್ರಶ್ನೆ ಕೇಳಬಹುದು. ಮೀಸಲಾತಿ ವಿರೋಧಿಗಳಂತೂ ಉರಿದು ಬೀಳುತ್ತಾರೆ. ನಮ್ಮ ಅವಕಾಶಗಳನ್ನೆಲ್ಲಾ ಕಿತ್ತುಕೊಂಡಿದ್ದಾರೆ ಎಂಬುದು ಅವರ ಹಳಹಳಿ. ಅವರ ಸಿಟ್ಟಿರಲಿ ಮೀಸಲಾತಿ ಪರ ಇರುವವರೂ ನನ್ನ ಮಾತು ಒಪ್ಪುವ ಸಂಭವವಿಲ್ಲ. ಮೀಸಲಾತಿಯ ಪ್ರಯೋಜನವನ್ನು ಪಡೆದು ವಿವಿಧ ಅಧಿಕಾರಿ ಹುದ್ದೆ, ನೌಕರಿಗಳನ್ನು, ಶಿಕ್ಷಣ ಪಡೆದ ನಾವೇ ಇದ್ದೀವಲ್ಲ. ಹೀಗೆಲ್ಲಾ ಮಾಹಿತಿ ಸಹಿತ ನನ್ನ ಮೇಲಿನ ಮಾತನ್ನು ತಪ್ಪೆಂದು ಸಾಧಿಸಿ ತೋರಬಹುದು.

ಆದರೂ ನಾನು ದಲಿತ, ಹಿಂದುಳಿದ ಜಾತಿಗಳಿಗೆ ಮೀಸಲಾತಿ ದಕ್ಕಿಲ್ಲವೆಂದೇ ಸಾಧಿಸುತ್ತೇನೆ. ಈ ಕೆಳಗಿನ ಕೆಲ ಮಾಹಿತಿಯನ್ನು ಗಮನಿಸಿ:

* ಬೆಂಗಳೂರಿನ ಐಟಿ ಉದ್ಯೋಗಿಗಳ  ಬಗ್ಗೆ ನಡೆದ ಅಧ್ಯಯನಗಳಲ್ಲಿ ಅವರ ಜಾತಿ ವಿಂಗಡನೆ ಹೀಗಿದೆ-ಒಂದು ಅಧ್ಯಯನದ ಪ್ರಕಾರ ಸುಮಾರು ಶೇ. 70 ಕ್ಕಿಂತ ಹೆಚ್ಚು ಬ್ರಾಹ್ಮಣ, ಕ್ಷತ್ರಿಯ, ರಜಪೂತ, ವೈಶ್ಯ ಮೊದಲಾದ ಮೇಲ್ಜಾತಿಗಳು, ದಲಿತರು ಬಹಳ ಕಡಿಮೆ. ಮತ್ತೊಂದು ಅಧ್ಯಯನದಲ್ಲಿ ಶೇ.48 ರಷ್ಟು ಉದ್ಯೋಗಿಗಳು ಬ್ರಾಹ್ಮಣರು. ದಲಿತರು ಶೇ. 1, ಹಿಂದುಳಿದ ಜಾತಿಗಳು ಶೇ.3 ಮುಸ್ಲಿಮರು ಶೇ.2 ಭೂ ಒಡೆತನ ಪಡೆದ ಜಾತಿಗಳು ಶೇ.21 ಇಂತಹ ಅನೇಕ ರಂಗಗಳಲ್ಲಿ ಹಿಂದೆಂದೂ ಊಹಿಸಲಾಗದ ದೊಡ್ಡ ಪ್ರಮಾಣದ ಸಂಬಳ, ಸಾರಿಗೆಗಳನ್ನು ಪಡೆದ ಈ ವಿಭಾಗಗಳು ಇದು ತಮ್ಮ ವಿಶೇಷ ಮೆರಿಟ್‌ನ ಫಲ ಎಂದು ಅಹಂಕಾರವನ್ನು ಪ್ರದರ್ಶಿಸುತ್ತಿವೆ.

* ನಮ್ಮ ದೇಶದಲ್ಲಿ ಐಐಎಂ/ಐಐಟಿಗಳೆಂಬ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಭೋದಕ ಹುದ್ದೆಗಳಲ್ಲಿ ಮಾತ್ರವಲ್ಲ ಆ ಸಂಸ್ಥೆಗಳ ಗುಮಾಸ್ತರ ಹುದ್ದೆಗಳಲ್ಲಿ ಕೆಲಸ ಮಾಡುವುದಕ್ಕೂ ದಲಿತರಿಗೆ ಮೆರಿಟ್ ಇಲ್ಲವೆಂದು ಅಘೋಷಿತ ತೀರ್ಮಾನವಾಯಿತು. ಈ ತೀರ್ಮಾನಗಳ ಫಲವಾಗಿ ಐ.ಐ.ಟಿ. ಬಾಂಬೇಯಲ್ಲಿ ಒಬ್ಬರು ದಲಿತರು ಇರಲಿಲ್ಲ. ಮದ್ರಾಸ್ ಐಐಟಿಯಲ್ಲಿ 427 ಹುದ್ದೆಗಳಲ್ಲಿ ಕೇವಲ ಇಬ್ಬರು ಮಾತ್ರ ದಲಿತರು. 20 ಮಾತ್ರ ಹಿಂದುಳಿದ ಜಾತಿಗಳು, ಮುಸ್ಲಿಮರು ಒಬ್ಬರೂ ಇರಲಿಲ್ಲ. ಗುಮಾಸ್ತರಲ್ಲಿ ಕೂಡ ಒಬ್ಬರೂ ದಲಿತರಿಗೆ ಸ್ಥಾನವಿರಲಿಲ್ಲ. ಐಎಎಸ್ ಗಳನ್ನು ಉತ್ಪಾದಿಸುವ ಕಾರಖಾನೆಗಳಂತಿರುವ ಕೇಂದ್ರ ವಿಶ್ವ ವಿದ್ಯಾಲಯಗಳಲ್ಲಿಯೂ ಮೀಸಲಾತಿಯ ಹಲವು ಪ್ರಾಧ್ಯಾಪಕ/ಬೋಧಕ ಹುದ್ದೆಗಳನ್ನು ತುಂಬಲಾಗಿಲ್ಲ.

* ಸರ‍್ಕಾರದ ನೇಮಕಾತಿಗಳಲ್ಲಿ ಐಎಎಸ್ ಅಧಿಕಾರಿಗಳದು ಪ್ರಧಾನ ಪಾತ್ರವಾದರೆ, ಐಐಎಂ/ ಐಐಟಿಗಳ ಪದವೀಧರರು ಭಾರತದ ಬಹುರಾಷ್ಟ್ರೀಯ ಹಾಗೂ ದೇಶೀ ಕಾರ‍್ಪೋರೆಟ್‌ಗಳ ಆಢಳಿತಾಧಿಕಾರಿ/ ತಾಂತ್ರಿಕ ಅಧಿಕಾರಿಗಳ(ಜನರಲ್ ಮ್ಯಾನೆಜರ್, ಎಂಡಿ ಇತ್ಯಾದಿ) ಪಾತ್ರದಲ್ಲಿ  ತಮ್ಮ ಕಂಪನಿಗಳ ನೇಮಕಾತಿಗೆ ಮತ್ತು ನೇಮಕಾತಿ ನೀತಿಯನ್ನು ನಿರೂಪಿಸುವ ಹೊಣೆಗಾರಿಕೆ ಹೊಂದಿದ್ದಾರೆ. ಆದರೆ ಈ ಸಂಸ್ಥೆಗಳಲ್ಲಿ  1973 ರವರೆಗೂ ಎಸ್ಸಿ/ಎಸ್ಟಿ ಮೀಸಲಾತಿ ಇರಲಿಲ್ಲ. ಹಿಂದುಳಿದ ಜಾತಿಗಳಿಗೆ ದೇಶದಲ್ಲಿ 1989 ರಲ್ಲಿ ಮೀಸಲಾತಿ ಸಿಕ್ಕಿದರೂ ಈ ಸಂಸ್ಥೆಗಳಲ್ಲಿ 2006ರವರಿಗೂ ಈ ಮೀಸಲಾತಿಯೂ ದೊರಕಲಿಲ್ಲ. ಇಡೀ ದೇಶದ ಬೃಹತ್ ಪ್ರಮಾಣದ ಹುದ್ದೆಗಳ ನೇಮಕಾತಿಯಲ್ಲಿ ಸಾಮಾಜಿಕ ಅನ್ಯಾಯವೇ ನೀತಿಯಾಗುವುದಕ್ಕೆ ಅವಕಾಶ ಮಾಡಿಕೊಡಲಾಯಿತು.

* ದೇಶದ ದೇಶದ ಶೇ. 80 ಬಂಡವಾಳವನ್ನು ಹೊಂದಿರುವ ಸಾವಿರ ಅತಿ ದೊಡ್ಡ ಆಡಳಿತ ಮಂಡಳಿಗಳ ಇರುವವರ ಸಾಮಾಜಿಕ ನೆಲೆ ಈ ರೀತಿ ಇದೆ. : ಈ ಕಂಪನಿಗಳಲ್ಲಿ 9052 ಆಡಳಿತ ನಿರ್ದೇಶಕರಲ್ಲಿ 8387 ಜನರು ಅಂದರೆ ಶೇ. 92.6 ರಷ್ಟು ಮೇಲ್ಜಾತಿಯವರು. 4037 ಜನರು, ಶೇ 44.6 ರಷ್ಟು ಬ್ರಾಹ್ಮಣರು. 4167 ಜನರು ಶೇ.46.6 ರಷ್ಟು ವೈಶ್ಯರು, ಖತ್ರಿ ಮೊದಲಾದ ಇತರ ಮೇಲ್ಜಾತಿ ಜನರು ಶೇ.2.0 ಹಿಂದುಳಿದ ಜಾತಿಯ ಜನರು 343 ಶೇ.3.8 ಎಸ್ಸಿ ಮತ್ತು ಎಸ್ಟಿ-343 ಶೇ.3.5.

ಈ ಅಂಕಿ ಅಂಶಗಳನ್ನು ನೋಡಿದರೆ ದೇಶದಲ್ಲಿ ಇಂದು ನಿರ್ಮಾಣವಾಗುತ್ತಿರುವ ದೊಡ್ಡ ಪ್ರಮಾಣದ ಖಾಸಗಿ ಉದ್ಯೋಗಗಳಲ್ಲಿ ಸ್ಪಷ್ಟ ಮೇಲ್ಜಾತಿ ಮೀಸಲಾತಿ ಇದೆ. ಖಾಸಗಿಯೆಂದರೆ ಸಾಕು ಅದು ಅಘೋಷಿತ ಮೀಸಲಾತಿ ಎಂತಲೇ ಅರ್ಥ. ರಾಷ್ಟ್ರೀಕರಣವಾಗುವ ಮುನ್ನಾ ದಿನಗಳ ಬ್ಯಾಂಕುಗಳನ್ನು ನೋಡಿ ಒಂದೊಂದೂ ಒಂದೊಂದು ಜಾತಿಗೆ ಮೀಸಲು ಎನ್ನುವಂತೆ ಇದ್ದದ್ದು ರಹಸ್ಯವೇನಲ್ಲ. ಇನ್ನು 80ರ ದಶಕದಲ್ಲಿಯೆ ಆರಂಭವಾಗಿ 1991ರ ಜಾಗತೀಕರಣ ನೀತಿಗಳ ನಂತರ ಬೃಹದಾಕಾರವಾಗಿ ಬೆಳೆಯುತ್ತಿರುವ ಖಾಸಗೀಕರಣ ಜಾತಿ ವ್ಯವಸ್ಥೆಯ ಮೀಸಲಾತಿಯನ್ನು ವಿಸ್ತರಿಸಿದಂತಾಗಿದೆ. ಜಾತಿ ವಿರೋಧೀ ಮೀಸಲಾತಿಯನ್ನು ಕುಗ್ಗಿಸುವ, ನಾಶ ಮಾಡುವ ಮುಖ್ಯ ಸಾಧನವಾಗಿದೆ. ಈ ಕೆಳಗಿನ ಅಂಶಗಳನ್ನು ನೋಡಿ.

ಇಂದು ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಮತ್ತು ಸರ್ಕಾರಿ ಉದ್ದಿಮೆಗಳಲ್ಲಿ ಖಾಲಿ ಇರುವ ಹುದ್ದೆಗಳು ಹಲವು ಹತ್ತು ಲಕ್ಷಗಳಿಗಿಂತ ಹೆಚ್ಚು. ಅಂದಾಜು 50 ಲಕ್ಷದಷ್ಟು. ಅಂದರೆ 9 ಲಕ್ಷದಷ್ಟು ಎಸ್ಸಿ/ಎಸ್ಟಿ ಮೀಸಲಾತಿ ಹುದ್ದೆಗಳು. 16 ಲಕ್ಷ ಇತರ ಮೀಸಲಾತಿ ಹುದ್ದೆಗಳು. ಈ ಖಾಲಿ ಹುದ್ದೆಗಳ ಪರಿಣಾಮವಾಗಿ ಇಂದು ಸರ್ಕಾರಗಳಲ್ಲಿ ಒಟ್ಟು ಎಸ್ಸಿ/ಎಸ್ಟಿ ಉದ್ಯೋಗಿಗಳ ಸಂಖ್ಯೆ ಹಿಂದಿಗಿಂತ ಲಕ್ಷಗಟ್ಟಲೆ ಕಡಿಮೆಯಾಗುತ್ತಿದೆ. ಇನ್ನು ಸರ್ಕಾರೀ ಶಿಕ್ಷಣ, ಆರೋಗ್ಯ ಸಂಸ್ಥೆಗಳನ್ನು, ಹತ್ತಾರು ಸಾವಿರ ಜನರಿಗೆ ಉದ್ಯೋಗ ನೀಡುತ್ತಿದ್ದ ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸುವುದನ್ನು ಕುಗ್ಗಿಸಿರುವುದರಿಂದ ಕಳೆದುಕೊಂಡ ಹುದ್ದೆಗಳು ಮತ್ತೆ ಹತ್ತಾರು ಲಕ್ಷ.

ಈ ಬಗ್ಗೆ ಇನ್ನೂ ಮನವರಿಕೆಯಾಗದವರು ಈ ವಿಷಯವನ್ನು ಪರಿಗಣಿಸಿ. ಶೂದ್ರರಿಗೂ, ಮುಖ್ಯವಾಗಿ ದಲಿತರಿಗೂ ಶಿಕ್ಷಣ ವ್ಯಾಪಕವಾಗಿ ದೊರಕಲಾರಂಭಿಸಿದ್ದು ಸ್ವಾತಂತ್ರ್ಯಾನಂತರದ ಮೊದಲೆರಡು ದಶಕಗಳಲ್ಲಿ. ಆ ದಶಕಗಳಲ್ಲಿ ಸರ್ಕಾರೀ ಉದ್ಯೋಗಗಳು ಹೆಚ್ಚುತ್ತಿದ್ದಾಗ ಈ ಜನ ಸಮುದಾಯಗಳಿಂದ ಮೀಸಲಾತಿಯನ್ನು ತುಂಬುವಷ್ಟು ಅರ್ಜಿಗಳು ಬರದೆ ಖಾಲಿ ಬಿದ್ದದ್ದು ಮತ್ತು ಈ ಖಾಲಿ ಹುದ್ದೆಗಳನ್ನು ಮತ್ತೆ ಸಾಮಾನ್ಯ ಎಂದು ಪರಿಗಣಿಸಿ ಮೇಲ್ಜಾತಿಯವರಿಂದ ತುಂಬಿಕೊಂಡದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರಲ್ಲಿಯೂ ಕೂಡ ಅಧಿಕಾರಿಗಳ ಹುದ್ದೆಗಳಿಗೆ ಅಗತ್ಯವಾದ ಪದವೀಧರರು ದಲಿತರ ನಡುವೆಯಿಂದ ಹಲ ದಶಕಗಳ ಕಾಲ ಕಾಣಲಿಲ್ಲ. ಆಗ ಮೇಲ್ಜಾತಿಗಳ ಜನರೆ ಐಎಎಸ್ ಮತ್ತೆ ಗೆಜೆಟಡ್ ಹುದ್ದೆಗಳಲ್ಲಿ ತುಂಬಿಕೊಂಡರು. ಇವರ ಸೇವಾವಧಿ 30-35 ವರ್ಷಗಳು. 1985 ರಿಂದ 95 ರವರೆಗೂ ಇವರೇ ಸರ್ಕಾರೀ ನೇಮಕಾತಿಗಳನ್ನು ಮಾಡುವ ಅಧಿಕಾರಿಗಳು, ಶಾಲೆ ಕಾಲೇಜುಗಳ ಮುಖ್ಯಸ್ತರು. ಇವರಲ್ಲಿ ಬಹು ಸಂಖ್ಯಾತರು ಸ್ವಜಾತಿ ಮತ್ತು ಬಂಧು ಪ್ರೇಮವನ್ನು ಮೆರೆಯುತ್ತಿದ್ದವರು. ಇದು ದಲಿತರು ಮತ್ತು ಹಿಂದುಳಿದವರು ಮೀಸಲಾತಿ ಪಡೆಯಲು ದೊಡ್ಡ ತೊಡಕಾಯಿತು.

ಹೀಗೆ ಹೆಚ್ಚು ಉದ್ಯೋಗಗಳು ನಿರ್ಮಾಣವಾಗುತ್ತಿದ್ದಾಗ ದಲಿತ ಮತ್ತು ಹಿಂದುಳಿದವರ ನಡುವೆ ಸೂಕ್ತ ಅಭ್ಯರ್ಥಿಗಳಿರಲಿಲ್ಲ. ಆದ್ದರಿಂದ ಮೀಸಲಾತಿಯ ಸೌಲಭ್ಯವನ್ನು ಎರಡು ದಶಕಗಳ ಕಾಲ ಸರಿಯಾಗಿ ಪಡೆಯಲಾಗಲಿಲ್ಲ. ದಲಿತರು ಹೊಸ ಶಾಲೆಗಳ ಪ್ರಯೋಜನ ಪಡೆದು ಉದ್ಯೋಗಕ್ಕೆ ಬೇಕಾದ ಅರ್ಹತೆಯನ್ನು ಪಡೆಯುವ ವೇಳೆಗೆ ಅಂದರೆ 70-80 ರ ದಶಕಗಳಲ್ಲಿ ಸರ್ಕಾರಿ ಉದ್ಯೋಗಗಳ ನಿರ್ಮಾಣದ ವೇಗ ಕಡಿಮೆಯಾಯಿತು. 91 ರ ನಂತರವಂತೂ ಖಾಸಗಿಯದೇ ದರ್ಬಾರಾಯಿತು. ಸರ್ಕಾರೀ ಉದ್ಯೋಗಗಳ ಸಂಖ್ಯೆ ಬಹಳ ಕುಗ್ಗಿ ಹೋಯಿತು. ಹೀಗಾಗಿ ದಲಿತ, ಹಿಂದುಳಿದ ಜನರು ಉದ್ಯೋಗದ ಬಾಗಿಲು ತಟ್ಟುವ ಅರ್ಹತೆ ಸಂಪಾದಿಸುವ ವೇಳೆಗೆ ಉದ್ಯೋಗದ ಬಾಗಿಲು ಮುಚ್ಚಿ ಹೋಯಿತು. ಹೀಗೆ ದಲಿತರಿಗೆ ಹಿಂದುಳಿದವರಿಗೆ ಕೊನೆಗೂ ಮೀಸಲಾತಿ ದಕ್ಕದೆ ಹೋಯಿತು.

ಮೀಸಲಾತಿ ದಕ್ಕಿಸಿಕೊಳ್ಳುವುದಕ್ಕೆ ಮತ್ತೊಂದು ದೊಡ್ಡ ಅಡ್ಡಿ  ಅಂಕಗಳೇ ಮೆರಿಟ್ ಎಂಬ ಪೊಳ್ಳು ಕಲ್ಪನೆ. ಈ ಬಗ್ಗೆ ವಿವರಿಸಲು ಸ್ಥಳಾವಕಾಶದ ಕೊರತೆ. ಆದರೆ ದಲಿತರ ಮತ್ತು ಹಿಂದುಳಿದ ಜಾತಿಗಳ ನಿಜ ಮೆರಿಟ್ ಅನ್ನು ತುಳಿದು ಮೇಲ್ಜಾತಿ ಪರವಾದ ಪೊಳ್ಳು ಮೆರಿಟ್ ಅನ್ನು ಪ್ರತಿಷ್ಠಾಪಿಸಿದ್ದು ದಲಿತರಿಗೆ ಮೀಸಲಾತಿಯನ್ನು ದಕ್ಕಿಸಿಕೊಳ್ಳಲಾಗದ ಸ್ಥಿತಿಗೆ ಕಾರಣವಾಯಿತು.

ಮತ್ತೊಂದು ಅಂಶವೆಂದರೆ ನಮ್ಮ ದೇಶದಲ್ಲಿ ಅತಿ ಹೆಚ್ಚು ಉದ್ಯೋಗಗಳ ಆಧಾರ ಭೂಮಿ. ಭೂ ಒಡೆತನದಲ್ಲಿ ಮೀಸಲಾತಿ ಎಂದರೆ ಶೇ.18 ಅಥವ ಶೇ.23 ರಷ್ಟು ಭೂಮಿ ದಲಿತರ ಕೈ ವಶವಾಗಿದ್ದರೆ!  ಭೂಸುಧಾರಣೆ ದಲಿತರ ಪಾಲಿಗೆ ಮರೀಚಿಕೆಯಾಯಿತು. ಈ ಮುಖ್ಯ ವಿಷಯದಲ್ಲಿ ಕೂಡ ಮೀಸಲಾತಿ ದಕ್ಕಲಿಲ್ಲ.

ಈ ಸಂದರ್ಭದಲ್ಲಿ ಮತ್ತೊಂದು ಮುಖ್ಯ ವಿಷಯ ನೆನೆಪಿಸಿಕೊಳ್ಳೋಣ. ಡಾ. ಅಂಬೇಡಕರ್ ರವರು ಮೀಸಲಾತಿಯನ್ನು ಸಂವಿಧಾನದಲ್ಲಿ ಅಳವಡಿಸಿದಾಗ ಅದರ ಜೊತೆಗೆ ಅವರು ಮುಂದಿಟ್ಟದ್ದು ಪ್ರಭುತ್ವ ನಿಯಂತ್ರಿತ ಸಮಾಜವಾದ. ಕೃಷಿ ಮುಖ್ಯವಾದ ಉದ್ದಿಮೆಗಳು ಬ್ಯಾಂಕ್, ವಿಮೆ ಇವೆಲ್ಲಾ ನೇರವಾಗಿ ಸರ್ಕಾರದ ಸ್ವಾಮ್ಯದಲ್ಲಿರಬೇಕು ಉಳಿದವೂ ಕೂಡ ಸರ್ಕಾರದ ಅಧೀನದಲ್ಲಿರುವ ನಿಗಮಗಳಾಗಿರಬೇಕು. ಶಿಕ್ಷಣ ಮತ್ತು ಆರೋಗ್ಯಗಳಂತೂ ಸರ್ಕಾರದ್ದೇ ಪೂರ್ಣ ಹೊಣೆ.ಈ ಪ್ರಸ್ತಾಪಗಳನ್ನು ಗಣನೆಗೆ ತೆಗೆದುಕೊಂಡರೆ ಮೀಸಲಾತಿ ಸೌಲಭ್ಯ ಎಂಬುದು ಎಷ್ಟೊಂದು ವಿಸ್ತಾರವಾಗಿ ಬಿಡುತ್ತದೆ. ಯೋಚಿಸಿ. ಇಂತಹ ಮೀಸಲಾತಿ ಮಾತ್ರ ದಲಿತರಿಗೆ ದಕ್ಕುವ ಮೀಸಲಾತಿ. ಈಗಿನದು ದಕ್ಕದ ಮೀಸಲಾತಿ. ಆದ್ದರಿಂದಲೆ ಈಗ ಈ ಮೀಸಲಾತಿಯನ್ನು ದಕ್ಕಿಸಿಕೊಳ್ಳುವ ಪ್ರತಿ ಹೋರಾಟವನ್ನು ಆರಂಭಿಸಬೇಕಾಗಿದೆ. ಸರ್ಕಾರೀ ಹುದ್ದೆಗಳನ್ನು ಶೀಘ್ರವೆ ತುಂಬಿಕೊಳ್ಳಿ, ಸರ್ಕಾರೀ ರಂಗವನ್ನು ವಿಸ್ತರಿಸಿ ಕುಗ್ಗಿಸಬೇಡಿ. ಖಾಸಗೀ ರಂಗದಲ್ಲಿ ಮೀಸಲಾತಿ ನೀಡಿ ಎಂಬುದು ನಮ್ಮ ಕಾಳಗದ ಕರೆಯಾಗಬೇಕು. ಮೀಸಲಾತಿಯನ್ನು ಕುಗ್ಗಿಸಿ ಜಾತಿ ವ್ಯವಸ್ಥೆಯನ್ನು ಬಲ ಪಡಿಸುವ ಹುನ್ನಾರ ಪ್ರತಿಗಾಮಿ ಬಿಜೆಪಿಯದು ಅದಕ್ಕೆ ಪ್ರತಿಯಾಗಿ ಮೀಸಲಾತಿಯನ್ನು ವಿಸ್ತರಿಸುವ ಪ್ರಬಲ ಹೋರಾಟ ಚಿಮ್ಮಿ ಬರಬೇಕು.