Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ರಾಮಾಯಣದ ವರ್ಗ ಸ್ವರೂಪ

ಸಂಪುಟ: 
9
ಸಂಚಿಕೆ: 
40
date: 
Sunday, 27 September 2015
ಚೋಮನ ದುಡಿ 78
ಜಿ. ಎನ್. ನಾಗರಾಜ್
ರಾಮಾಯಣ ರಾಜ್ಯ, ಸಾಮ್ರಾಜ್ಯಗಳ ಅಧಿಪರಾಗಿ ರೂಪುಗೊಂಡಿದ್ದ ಆಳುವ ವರ್ಗದ ಅಗತ್ಯಗಳಿಗನುಸಾರವಾಗಿ ಸಮಾಜವನ್ನು ವಿನ್ಯಾಸಗೊಳಿಸಿತು ಎಂಬುದನ್ನು ನಾವು ಹಿಂದಿನ ಲೇಖನದಲ್ಲಿ ನೋಡಿದ್ದೇವೆ. ಒಂದು ಬುಡಕಟ್ಟು ಉಳಿದ ಬುಡಕಟ್ಟುಗಳನ್ನು ತನ್ನ ಅಧೀನಕ್ಕೊಳಪಡಿಸಿ ಅವರ ಮೇಲೆ ತನ್ನ ಆಳ್ವಿಕೆಯನ್ನು ಹೇರಲು ಶಕ್ಯವಾದರೆ ವರ್ಣ ವ್ಯವಸ್ಥೆಯ ಮೂಲಕ ಅವರನ್ನು ಕ್ಷತ್ರಿಯ ವರ್ಣವೆಂದು ಘೋಷಿಸಿ ಆ ಬುಡಕಟ್ಟಿಗೆ ತಲೆತಲಾಂತರ ಎಲ್ಲರನ್ನೂ ಆಳುವ ಹಕ್ಕನ್ನು ನೀಡುವುದು, ಆ ಬುಡಕಟ್ಟಿನ ಮುಖ್ಯಸ್ಥರನ್ನು ಸೂರ‍್ಯ ವಂಶ/ಚಂದ್ರ ವಂಶಕ್ಕೆ ಸೇರಿದವರೆಂದು ವರ್ಣಿಸಿ ಆ ಬುಡಕಟ್ಟಿನ ಕ್ಷತ್ರಿಯ ಎಂದು ಕರೆಯಲ್ಪಟ್ಟ ಇತರ ವಂಶಗಳಿಗೂ ಆಳುವ ಹಕ್ಕನ್ನು ನಿರಾಕರಿಸಿ ಒಂದೆರಡು ವಂಶಗಳಿಗೆ ತಲೆತಲಾಂತರ ಆಳುವ ಹಕ್ಕನ್ನು ನಿಗದಿಪಡಿಸುವುದು ಈ ತಂತ್ರದ ಒಂದು ಮುಖ್ಯ ಅಂಶ. ಇದು ರಾಮಾಯಣಕ್ಕಿಂತ ಮೊದಲೇ ಆಗಿದ್ದರೂ ಕೂಡ ರಾಮಾಯಣ ಈ ನಿಯಮವನ್ನು ಜನಪ್ರಿಯಗೊಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಸಾಮ್ರಾಜ್ಯದ ವಿಸ್ತರಣೆಗೆ ಇತರ ಜನ ಸಮುದಾಯಗಳನ್ನು ವಾನರರೆಂದು ಕರೆದುಬಿಟ್ಟರೆ ಆಯಿತು ಅವರನ್ನು ಕೊಳ್ಳುವ, ಆಳುವ ಹಕ್ಕು ತಂತಾನೆ ಪ್ರಾಪ್ತವಾಗಿಬಿಡುವ ಬಹು ದೊಡ್ಡ ಕುತಂತ್ರ ರಾಮಾಯಣದ್ದೇ ಆದ ಸಾಧನೆ. ಮಹಾಭಾರತದ ಜೊತೆ ತುಲನೆ ಮಾಡಿದರೆ ಈ ವಿಷಯ ಸ್ಪಷ್ಟವಾಗುತ್ತದೆ.

Ramayanaಮಹಾಭಾರತದಲ್ಲಿ ಸಾಮ್ರಾಜ್ಯ ವಿಸ್ತರಣೆ ಒಂದು ಪ್ರಧಾನ ಪ್ರಶ್ನೆಯಾಗಿಲ್ಲ. ಆದ್ದರಿಂದ ಜನ ಸಮುದಾಯಗಳನ್ನು ವಾನರರೆಂದು ಬಿಂಬಿಸುವ ಮತ್ತು ಅದನ್ನೇ ಒಂದು ಸಾಧನವಾಗಿ ಅವರಿಗೆ ಸ್ವತಂತ್ರ ಅಸ್ತಿತ್ವವನ್ನು ನಿರಾಕರಿಸುವ ಪ್ರಶ್ನೆಯೂ ಅದರಲ್ಲಿ ಉದ್ಭವಿಸಿಲ್ಲ. ಅಲ್ಲಿ ರಾಕ್ಷಸರೂ ಕೂಡ ಇದೇ ಆರ‍್ಯ ಕುಟುಂಬಗಳಿಗೆ ಸೇರಿದ ಕಂಸ, ಶಿಶುಪಾಲ, ಜರಾಸಂಧರೇ ಹೊರತು ಬೇರೆಯೇ ಶತ್ರು ಸಮುದಾಯವಲ್ಲ.(ಹಿಡಿಂಬ-ಹಿಡಿಂಬೆ, ಘಟೋತ್ಕಚರು, ಬಕಾಸುರರು ಮಾತ್ರ ಇದಕ್ಕೆ ಹೊರತು.) ಅರ್ಜುನ ಅನೇಕ ಪ್ರದೇಶಗಳನ್ನು ಸಂಚರಿಸಿ ಉಲೂಪಿ, ಚಿತ್ರಾಂಗದೆ ಮೊದಲಾದವರನ್ನು ಕೂಡಿದರೂ ಆ ಪ್ರದೇಶಗಳನ್ನು ಆರ್ಯ ಸಾಮ್ರಾಜ್ಯಗಳಿಗೆ ಅಧೀನಪಡಿಸುವ ಪ್ರವೃತ್ತಿ ಕಾಣುವುದಿಲ್ಲ.

ಆದರೆ ಸಮಾಜ ವಿನ್ಯಾಸ ಮಾತ್ರವೇ ಸಾಮ್ರಾಟರ ಅಧಿಕಾರವನ್ನು ಖಾತರಿಗೊಳಿಸದಾಯಿತು. ರಾಮಾಯಣ ರಚಿತವಾಗುತ್ತಿದ್ದ ಸಮಯದಲ್ಲಿ ಕಂಡ ನಂದರ, ಮೌರ‍್ಯರ ವಂಶಗಳಲ್ಲಿ ಮತ್ತಿನ್ನೆಷ್ಟೋ ರಾಜವಂಶಗಳಲ್ಲಿ ಪಟ್ಟಾಭೀಷೇಕಕ್ಕಾಗಿ ತಂದೆಯನ್ನೇ, ಅಣ್ಣ ತಮ್ಮಂದಿರನ್ನೆ ಕೊಲೆ ಮಾಡುವ ಕ್ರೌರ‍್ಯ ಸಾಮಾನ್ಯವಾಗಿತ್ತು. ಇಲ್ಲದಿದ್ದರೆ ಕಚ್ಚಾಟ ಮತ್ತು ಅದರಿಂದ ಸಾಮ್ರಾಜ್ಯದ ವಿಭಜನೆ. ಆದ್ದರಿಂದ ಸಾಮ್ರಾಜ್ಯಾಧಿಕಾರಕ್ಕೆ ಅನುಗುಣವಾಗಿ ರಾಜ ಕುಟುಂಬಗಳನ್ನು ವಿನ್ಯಾಸಗೊಳಿಸಬೇಕಾಯಿತು. ಅಂತಹ ಪ್ರಯತ್ನದ ಭಾಗವಾಗಿ ಪಿತೃ ವಾಕ್ಯ ಪರಿಪಾಲನ ಹಾಗೂ ಅಗ್ರಜ ಪಟ್ಟಾಭಿಷೇಕ ಎಂಬ ಮೌಲ್ಯಗಳನ್ನು ಅನುಲ್ಲಂಘನೀಯ ನಿಯಮಗಳನ್ನಾಗಿ ಪ್ರಚುರಪಡಿಸಲು ರಾಮಾಯಣವನ್ನು ಬಳಸಿಕೊಳ್ಳಲಾಯಿತು. ಆಗ ತಾನೆ ಬೇಟೆಗಾರಿಕೆಯನ್ನು ತೊರೆದು ಕೃಷಿಯನ್ನು ಕೈಗೊಳ್ಳುತ್ತಿದ್ದ ಬುಡಕಟ್ಟುಗಳ ನಡುವೆ ಜನಪ್ರಿಯವಾಗಿದ್ದ ಕಥಾನಕವೊಂದು ಜನರ ನಡುವೆ ಈ ಮೌಲ್ಯಗಳನ್ನು ಸ್ಥಾಪಿಸಲು ಹೆಚ್ಚು ಪ್ರಯೋಜನಕಾರಿಯಾಗುವುದೆಂದು ರಾಜಾಸ್ಥಾನದ ವಿದ್ವಾಂಸರಲ್ಲೊಬ್ಬರು ಕಂಡುಕೊಂಡರು. ಬುಡಕಟ್ಟು ಜಾನಪದ ಕಲಾವಿದರ ರಚನೆಯಾದ ಈ ನಿಜ ರಾಮಾಯಣದ ಕಥಾನಕದಲ್ಲಿ ಸಾಮ್ರಾಜ್ಯಗಳ ಬಗ್ಗೆ, ರಾಜವಂಶಗಳ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿಸಲು ಮತ್ತು ಅವರ ವಿಧೇಯತೆಯನ್ನು ಪಡೆಯಲು ಅವಶ್ಯವಾದ ಅಂಶಗಳನ್ನು ಸೇರಿಸಿ ವೈಭವೀಕರಿಸಲಾಯಿತು. ಇದೇ ಕಾವ್ಯದಲ್ಲಿ ಮೇಲೆ ಹೇಳಿದ ಪಿತೃ ವಾಕ್ಯ ಪರಿಪಾಲನ, ಅಗ್ರಜ ಪಟ್ಟಾಭಿಷೇಕ ಮೊದಲಾದವನ್ನು ಕಟ್ಟುನಿಟ್ಟಾಗಿ ಪಾಲಿಸಲು ಅನುಕೂಲವಾದ ಪ್ರಸಂಗಗಳನ್ನು ಸೇರಿಸಿ ಲಂಬಿಸಲಾಯಿತು. ಭರತನಿಗೆ ಪಟ್ಟ ದೊರಕಿಸಬೇಕೆಂದು ತಾಯಿಯ ಬಯಕೆ, ಭರತನಿಂದ ಪಟ್ಟದ ನಿರಾಕರಣೆ, ರಾಮನ ಪಾದುಕೆಗಳನ್ನು ತಲೆಯ ಮೇಲೆ ಹೊತ್ತು ಸಿಂಹಾಸನದ ಮೇಲಿಟ್ಟು ಆಳ್ವಿಕೆ ನಡೆಸಿದ್ದು ಈ ಎಲ್ಲ ಪ್ರಸಂಗಗಳು ಮತ್ತೆ ಮತ್ತೆ ಹಿರಿಯ ಮಗನಿಗೆ ಮಾತ್ರ ಪಟ್ಟಾಭಿಷೇಕ ಎಂಬುದು ಒಂದು ಧಾರ್ಮಿಕ ಕಟ್ಟಲೆಯನ್ನಾಗಿ ಸಮಾಜದ ಮುಂದಿಟ್ಟವು. ಈ ಪ್ರಕ್ರಿಯೆಯನ್ನು ಹಿಂದಿನ ಕೆಲ ಲೇಖನಗಳಲ್ಲಿ ವಿವರಿಸಲಾಗಿದೆ. ಹೀಗೆ ಸಾಮ್ರಾಜ್ಯಾಧಿಕಾರಕ್ಕೆ ಅಗತ್ಯವಾದ ಆಧಾರವಾಗಿ ರೂಪುಗೊಳಿಸಲಾಯಿತು.

ಹಿರಿಯಣ್ಣನಿಗೆ ವಿಧೇಯತೆಯೆಂಬ ಮೌಲ್ಯವನ್ನು ಜನಪ್ರಿಯಗೊಳಿಸುವುದರಲ್ಲಿ ಕೂಡ ರಾಮಾಯಣದ್ದೇ ಪ್ರಮುಖ ಪಾತ್ರ. ಮಹಾಭಾರತದಲ್ಲಿನ ಪಟ್ಟಾಧಿಕಾರ ಪ್ರಸಂಗಗಳನ್ನೆಲ್ಲ ಮನಸ್ಸಿಗೆ ತಂದುಕೊಂಡು ಯೋಚಿಸಿದರೆ ಈ ತಥ್ಯ ಒಡೆದು ಕಾಣುತ್ತದೆ. ಶಂತನುವಿನ ಎರಡನೆ ಮದುವೆಗಾಗಿ ಜ್ಯೇಷ್ಟ ಪುತ್ರ ಭೀಷ್ಮನ ಪಟ್ಟಾಧಿಕಾರವನ್ನು ಕಿತ್ತುಕೊಂಡದ್ದು, ಜ್ಯೇಷ್ಠ ಪುತ್ರನಾದ ಧೃತರಾಷ್ಟ್ರನ ಜ್ಯೇಷ್ಠ ಪುತ್ರನಾಗಿ ಸುಯೋಧನನಿಗೇ ಸಲ್ಲಬೇಕಾದ ಪಟ್ಟಾಧಿಕಾರವನ್ನು ಪ್ರಶ್ನಿಸುವುದಕ್ಕಾಗಿಯೇ ಇಡೀ ಮಹಾಭಾರತವನ್ನು ನಿಯೋಜಿಸಿರುವುದು ಮತ್ತು ತನ್ನ ತಂದೆಯ ತಮ್ಮನ ಮಕ್ಕಳಿಗೆ ರಾಜ್ಯದ ಪಾಲು ನೀಡದಿರುವುದನ್ನೇ ದೊಡ್ಡ ಅಪರಾಧವಾಗಿ ಬಿಂಬಿಸಿರುವುದು, ಧರ್ಮರಾಯನಿಗೆ ಅವನ ತಮ್ಮಂದಿರ ವಿಧೇಯತೆಯನ್ನು ಒಂದು ಅನಿವಾರ್ಯತೆಯಾಗಿ ಬಿಂಬಿಸಿದ್ದರೂ ಕೂಡ ಧರ್ಮರಾಯನನ್ನು ಸಪ್ಪೆ ವ್ಯಕ್ತಿತ್ವವನ್ನಾಗಿ ದುರ್ಬಲಗೊಳಿಸಿ, ಭೀಮ ಮತ್ತು ಅರ್ಜುನರನ್ನು ಅವನಿಗಿಂತ ವೀರರನ್ನಾಗಿ, ವಿವಿಧ ಆಯಾಮಗಳ ಸಂಕೀರ್ಣ ವ್ಯಕ್ತಿಗಳನ್ನಾಗಿ ಬೆಳೆಸಿರುವುದು, ಎಲ್ಲಕ್ಕಿಂತ ಮಿಗಿಲಾಗಿ ತಮ್ಮನಾದ ಕೃಷ್ಣನ ಮುಂದೆ ಅಣ್ಣ ಬಲರಾಮನಿಗೆ ಬೆಲೆಯೇ ಇಲ್ಲದಿರುವುದು ಮತ್ತು ಅವನು ತಮ್ಮನ ಆಜ್ಞಾಧಾರಕನಂತೆ ಚಿತ್ರಿತವಾಗಿರುವುದು ಹೀಗೆ ಹತ್ತು ಹಲವು ಉದಾಹರಣೆಗಳನ್ನು ನೀಡಬಹುದು.

ಹೀಗೆ ರಾಮಾಯಣವೇ ಸಾಮ್ರಾಜ್ಯಗಳ ಆಧಾರಭೂತ ಮೌಲ್ಯಗಳನ್ನು ಪಸರಿಸಿ ಅವುಗಳನ್ನು ಜನರನ್ನು ತಾವಾಗಿಯೇ ಒಪ್ಪಿಕೊಳ್ಳುವಂತೆ ಮಾಡುವುದರಲ್ಲಿ ಪರಿಣಾಮಕಾರಿಯಾಗಿದೆ. ಆ ಕಾರಣಕ್ಕಾಗಿಯೇ ಮಹಾಭಾರತಕ್ಕಿಂತ ರಾಮಾಯಣಾಧಾರಿತ ಕಾವ್ಯಗಳೇ ಭಾರತದ ವಿವಿಧ ಭಾಷೆಗಳಲ್ಲಿ ಹೆಚ್ಚುಬಾರಿ ರಚನೆಯಾಗಿರುವುದು ಕಾಣುತ್ತದೆ ಹಾಗೂ ವಿದೇಶಗಳಿಗೆ ಕೂಡ ವಿಸ್ತರಿಸಲು ಕಾರಣವಾಗಿದೆ.

ಆರಾಧನೆ, ವಿಧೇಯತೆ ಎಂಬ ಆಳುವ ವರ್ಗದ ಮೌಲ್ಯಗಳು

ಸಾಮ್ರಾಜ್ಯ ಜನ ಸಾಮಾನ್ಯರಿಂದ ಬಯಸುವ ಆರಾಧನೆ, ವಿಧೇಯತೆಯ ಅರ್ಥವೇನು? ಏಕ ವ್ಯಕ್ತಿ ಕೇಂದ್ರಿತವಾಗಿ ನಡೆಯುವ ನಿರಂಕುಶಾಧಿಕಾರಕ್ಕೆ ತನ್ನ ಆಜ್ಞೆಗಳಿಗೆ ಯಾರೇ ಆಗಲಿ ಎದುರಾಡುವುದು ಮತ್ತು ಅವರ ಅತೃಪ್ತಿಗಳನ್ನು ಅಭಿವ್ಯಕ್ತಿಸುವುದು ಆತಂಕಕ್ಕೆ ಕಾರಣವಾಗುತ್ತದೆ. ತಮ್ಮ ನಿರಂಕುಶ ಆಡಳಿತದಿಂದ ದಿನ ದಿನವೂ ಜನ ಸಮುದಾಯದಲ್ಲಿ ಅತೃಪ್ತಿಯನ್ನು ಸೃಷ್ಟಿಸುತ್ತಲೇ ಇರುತ್ತದೆ. ಜನರ ಬದುಕಿನಲ್ಲಿ ಹಲವಾರು ರೀತಿಯ ಅಲ್ಲೋಲ ಕಲ್ಲೋಲಗಳನ್ನು ಸೃಷ್ಟಿಸುತ್ತಲೇ ಇರುತ್ತದೆ.

ರಾಜನ ಆಕ್ರಮಣಕಾರಿ ಯುದ್ಧಗಳಿಗಾಗಿ ಸೈನ್ಯ ಹಾದು ಹೋದ ಪ್ರದೇಶದಲ್ಲಿ ರಾಜ ಪರಿವಾರಕ್ಕೆ, ಸೇನಾಧಿಕಾರಿಗಳ ವೈಭವಕ್ಕೆ ಅನುಕೂಲಗಳನ್ನು ಒದಗಿಸುವುದು, ಸೈನ್ಯಕ್ಕೆ ಆಹಾರ, ಅದರಲ್ಲಿನ ಪಶುಗಳಿಗೆ ಮೇವು, ಸೈನ್ಯಕ್ಕೆ ಬಿಟ್ಟಿ ಸೇವೆ, ಬೆಳೆ ಹಾನಿ ಇವುಗಳಿಂದ ಆಗುವ ಆರ್ಥಿಕ ಹಾನಿ, ಸೈನ್ಯಕ್ಕೆ ಬಲವಂತದಿಂದ ರೈತಾಪಿ ಯುವಕರನ್ನು ಸೆಳೆದೊಯ್ಯುವುದು, ರಾಜ-ಯುವರಾಜರುಗಳು, ಸೇನಾಧಿಕಾರಿಗಳ ಮನರಂಜನೆ ಮತ್ತು ಭೋಗಕ್ಕೆ ಹೆಣ್ಣುಗಳು, ಸೈನಿಕರಿಂದ ಅತ್ಯಾಚಾರಗಳು ಇತ್ಯಾದಿಗಳು ಇವು ಒಂದು ಕಡೆ ವಿವಿಧ ತೆರಿಗೆಗಳ ಹೇರಿಕೆ, ಬಲವಂತದ ವಸೂಲಿ ಮತ್ತೊಂದು ಕಡೆ ಜನ ಸಾಮಾನ್ಯರ ಬದುಕನ್ನು ಹಲವು ರೀತಿಯಲ್ಲಿ ಭಂಗ ಪಡಿಸಿ ನರಳುವಂತೆ ಮಾಡಿದಾಗ ಜನರ ಸಿಟ್ಟುಗೊಳ್ಳುವುದು ಮನುಷ್ಯ ಸಹಜ. ಇದು ಕೂಡಿ ರಾಜ್ಯಾಧಿಕಾರಕ್ಕೆ ಮುಳುವಾಗದಂತೆ ರಾಜನ ಬಗ್ಗೆ ಪೂಜ್ಯ ಭಾವನೆ ಮತ್ತು ವಿಧೇಯತೆ ಕಾರ‍್ಯ ನಿರ್ವಹಿಸುತ್ತದೆ. ರಾಮಾಯಣ ಈ ಭಾವನೆಗಳನ್ನು ಜನಮನದಲ್ಲಿ ಆಳವಾಗಿ ಬೇರೂರಿಸಲು ರಾಜರ ನಡುವಣ ಕಿತ್ತಾಟ, ಅವರ ದುಷ್ಟಗುಣಗಳನ್ನು, ಕಪಟತನವನ್ನು ಬಿಂಬಿಸುವ ಮಹಾಭಾರತಕ್ಕಿಂತ ದೊಡ್ಡ ಆಧಾರವಾಗಿದೆ.

ಆಳುವ ವರ್ಗಗಳ ಹಿತಕ್ಕನುಗುಣವಾಗಿ ಕುಟುಂಬದ ವಿನ್ಯಾಸ

ಆಳುವ ವರ್ಗಗಳ ಬಕಾಸುರ ಹಸಿವಿಗೆ ಜನ ಸಮುದಾಯಗಳನ್ನು, ಅವರ ಸ್ವತಂತ್ರ ಬದುಕಿನ ಕನಸುಗಳನ್ನು ಹೊಸಕಿ ತಮ್ಮ ಅಧಿಕಾರದ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುವ ಸಮಾಜ ವಿನ್ಯಾಸ ಮಾತ್ರವೇ ಸಾಕಾಗಲಿಲ್ಲ. ಸಮಾಜದ ಒಳಗಿನ ಪ್ರತಿ ವ್ಯಕ್ತಿಯನ್ನೂ ತನ್ನ ಅಧೀನಕ್ಕೊಳ ಪಡಿಸುವುದು ಅತ್ಯಗತ್ಯವಾಯಿತು. ಅದನ್ನು ಕೂಡ ಮಹಾಭಾರತ ಮತ್ತು 18 ಪುರಾಣಗಳೇ ಮೊದಲಾದ ಬೇರೆ ಯಾವುದೇ ರಚನೆಗಿಂತ ಪರಿಣಾಮಕಾರಿಯಾಗಿ ಸಾಧ್ಯ ಮಾಡಿದ್ದು ರಾಮಾಯಣದ ಮೂಲಕವೇ. ಆದ್ದರಿಂದಲೂ ಸಾಮ್ರಾಜ್ಯಗಳಿಗೆ ಭದ್ರ ಅಡಿಪಾಯ ಹಾಕುವುದರಲ್ಲಿ ರಾಮಾಯಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ.

ಸಾಮ್ರಾಜ್ಯಗಳು ಬಲವಾಗಬೇಕಾದರೆ ಜನ ಸಾಮಾನ್ಯರು ಹೆಚ್ಚು ತೆರಿಗೆ ಕೊಡುವ ಮತ್ತು ಸೈನ್ಯಕ್ಕೆ ಸೇರುವ ಸಾಧ್ಯತೆಗಳು ಕೂಡ ಹೆಚ್ಚಾಗಬೇಕು. ಇದಕ್ಕೆ ಒಂದು ಮೂಲಭೂತ ಅಗತ್ಯ ಕೂಡು ಅಥವಾ ಜಂಟಿ ಕುಟುಂಬಗಳು. ವಿಸ್ತಾರವಾದ ಪ್ರದೇಶವನ್ನು ಬೇಸಾಯ ಮಾಡುವ ಪಶು ಸಂಗೋಪನೆ ಮೊದಲಾದ ಬೇರೆ ಬೇರೆ ಕೆಲಸಗಳನ್ನು ಹಂಚಿಕೊಳ್ಳುವ, ಆ ಮೂಲಕ ಹೆಚ್ಚು ಹೆಚ್ಚು ಆದಾಯ ಗಳಿಸುವುದಕ್ಕೆ ಈ ಕೂಡು ಕುಟುಂಬಗಳು ನೆರವಾಗುತ್ತವೆ. ಆಧುನಿಕ ಕಾಲಕ್ಕೆ ಮುಂಚೆ ನೂರು, ಇನ್ನೂರು ಜನರ ಕುಟುಂಬಗಳು ಸಾಮಾನ್ಯವಾಗಿದ್ದವು. ಇಂದೂ ಕೂಡ ಅಲ್ಲಲ್ಲಿ ವಿಶೇಷವಾಗಿ ಇಂತಹ ಕುಟುಂಬಗಳು ಭಾರತದಲ್ಲಿ ಕಾಣ ಸಿಗುತ್ತವೆ. ಆ ಕುಟುಂಬಗಳಲ್ಲಿ ಅಣ್ಣ ತಮ್ಮಂದಿರು, ಅವರ ಮಕ್ಕಳುಗಳು ಅವರ ಪತ್ನಿಯರು ಇತ್ಯಾದಿ ಇಡೀ ಕುಟುಂಬ ದುಡಿದು ಕೃಷಿ ಮತ್ತಿತರ ಕೆಲಸಗಳನ್ನು ಕೈಗೊಂಡು ಕುಟುಂಬಕ್ಕೆ ಆದಾಯ ತರುತ್ತಿದ್ದವು. ಆದರೆ ಆಸ್ತಿಯ ಮತ್ತು ಆದಾಯದ ಮೇಲಿನ ಹಕ್ಕು ಕುಟುಂಬದ ಯಜಮಾನನಿಗೆ ಮಾತ್ರ ಅದು ತಂದೆಯೋ ಅಥವಾ ಹಿರಿಯಣ್ಣನೋ. ಇವುಗಳ ಜೊತೆಗೆ ಈ ಹಿರಿಯನ ಬಹು ಪತ್ನಿತ್ವ ಕೂಡ ದುಡಿಯುವುದಕ್ಕೆ ಹೆಚ್ಚಿನ ಕೈಗಳನ್ನು ಒದಗಿಸುತ್ತಿದ್ದವು.

ಇಂತಹ ಕುಟುಂಬಗಳಲ್ಲಿ ಯಜಮಾನನ ಯಜಮಾನಿಕೆಯ ಜೊತೆಗೇ ಅವನ ಹೆಂಡತಿಯ ಯಜಮಾನಿಕೆಯೂ ಸೇರಿ ಕುಟುಂಬದೊಳಗಿನ ಅಧಿಕಾರ ರಾಜಕಾರಣಕ್ಕೆ ಅಡಿಪಾಯವಾಗಿರುತ್ತಿತ್ತು. ಇದರಲ್ಲಿ ಕೆಲವರು ವೈಭೋಗವನ್ನು ಅನುಭವಿಸಿದರೆ ಉಳಿದವರು ಕುಟುಂಬದ ಭಾರವನ್ನು ಹೊತ್ತು ಮೂಗಿಗೆ ಕವಡೆ ಕಟ್ಟಿ ದುಡಿಯಬೇಕಾಗುತ್ತಿತ್ತು. ಅನೇಕ ರೀತಿಯ ಅನ್ಯಾಯಗಳಿಗೆ ತುತ್ತಾಗುತ್ತಾ, ಸಹಿಸಿಕೊಳ್ಳುತ್ತಾ ಇರಬೇಕಾಗಿತ್ತೇ ಹೊರತು ತಮ್ಮಂದಿರು/ಮಕ್ಕಳು ಬಾಯಿ ತೆಗೆಯುವಂತಿರಲಿಲ್ಲ. ತಂದೆಗೆ ಅಥವಾ ಹಿರಿಯಣ್ಣನಿಗೆ ಎದುರಾಡುವಂತಿರಲಿಲ್ಲ. ಹೆಂಗಸರಿಗಂತೂ ಗಂಡನ ಸೇವೆ ಮಾತ್ರ ಪಾತಿವ್ರತ್ಯದ ಮೌಲ್ಯ ವಿಧಿಸಿದ ಕಟ್ಟಲೆಯಾಗಿತ್ತೇ ಹೊರತು ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ನಿರಾಕರಿಸಲಾಗಿತ್ತು. ಯಜಮಾನ ಮತ್ತು ಯಜಮಾನತಿ ಕುಟುಂಬದ ಸದಸ್ಯರ ಅಭಿಪ್ರಾಯ ಕೇಳಬೇಕೆಂಬುದು ಒಂದು ಮೌಲ್ಯವಾಗಿರಲಿಲ್ಲ. ವಿಧೇಯತೆ ಮಾತ್ರ ದೊಡ್ಡ ಮೌಲ್ಯ. ರಾಜನಿಗೆ ವಿಧೇಯತೆ ಮತ್ತು ಕುಟುಂಬದ ಹಿರಿಯನಿಗೆ ವಿಧೇಯತೆ ಒಂದಕ್ಕೊಂದು ಪೋಷಕವಾದ ಶೋಷಣೆಯ ಸೂತ್ರ ರೂಪವಾದ ಮೌಲ್ಯಗಳು. ಈ ರೀತಿ ಆದಾಯದ ಮೇಲಿನ ಹಿಡಿತ ಒಬ್ಬ ವ್ಯಕ್ತಿಯಲ್ಲಿಯೇ ಕೇಂದ್ರಿಕೃತವಾಗುವುದು ಕೇವಲ ಕುಟುಂಬದ ಹಿರಿಯನಿಗೆ ಮಾತ್ರ ಅನುಕೂಲಕರವಾಗಿರಲಿಲ್ಲ. ಸಾಮ್ರಾಜ್ಯದ ಆದಾಯವನ್ನು ಹೆಚ್ಚಿಸಿಕೊಳ್ಳಲು ಅಡಿಪಾಯವಾಗಿಯೂ ಇತ್ತು. ಇಂತಹ ವ್ಯವಸ್ಥೆಯಿಂದ ಮಾತ್ರ ಸಾಮ್ರಾಟ ಹೆಚ್ಚು ತೆರಿಗೆ ವಿಧಿಸಿ ವಸೂಲಿ ಮಾಡಿಕೊಳ್ಳಲು ಹೆಚ್ಚು ಅನುಕೂಲಕರವಾಗಿತ್ತು. ಹೀಗೆ ರಾಮಾಯಣ ಹೇರಿದ ಕುಟುಂಬ ವಿನ್ಯಾಸ ಭಾರತವನ್ನು ಸಾವಿರಾರು ವರ್ಷಗಳ ಕಾಲ ಆಳಿದೆ. ಇಂದೂ ಪರಿಣಾಮ ಬೀರುತ್ತದೆ.

ಉದ್ದಿಮೆದಾರ ಕುಟುಂಬಗಳಿಗೆ ಕೂಡ ಸಹಾಯಕ

ರಾಮಾಯಣ ವಿಧಿಸಿದ ಕುಟುಂಬ ಮೌಲ್ಯ. ರಾಜ ಪ್ರಭುತ್ವಗಳಿಗೆ ಅಸ್ತಿತ್ವವಿಲ್ಲದ ಇಂದು ರಾಮಾಯಣದ ಸಾಮ್ರಾಜ್ಯ ವಿಸ್ತರಣಾ ವಿಧಾನಗಳು ಪ್ರಸ್ತುತವಲ್ಲ. ಭಾರತದ ಅನೇಕ ಪ್ರದೇಶಗಳಲ್ಲಿ ಕೂಡು ಕುಟುಂಬಗಳು ಕೂಡ ವಿಘಟಿತವಾಗುತ್ತಿದ್ದರೂ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಆದರೆ ಒಂದು ವಿಶೇಷ ಮತ್ತು ಪ್ರಧಾನ ಆದರೆ ಸಮಾಜ ವಿಜ್ಞಾನಿಗಳಿಂದ ಅಲಕ್ಷಿತವಾದ ವಲಯದಲ್ಲಿ ಕೂಡು ಕುಟುಂಬ ವ್ಯವಸ್ಥೆಯ ಇನ್ನೂ ಗಣನೀಯ ಹಿಡಿತ ಹೊಂದಿದೆ. ಅದು ಕಾರ‍್ಪೋರೇಟ್ ಉದ್ದಿಮೆ ಮತ್ತು ವಾಣಿಜ್ಯದ ವಲಯ. ಮುಖೇಶ್ ಅನಿಲ್ ಅಂಬಾನಿಗಳ ನಡುವಣ ಆಸ್ತಿ ವಿವಾದ ಅಥವಾ ಬಿರ‍್ಲಾ ಕುಟುಂಬದ ವಿವಾದಗಳಿಂದ ದೇಶದಲ್ಲೆಲ್ಲ ಸುದ್ದಿಯಾದರೂ ಈ ಕುಟುಂಬಗಳು ಲಕ್ಷಾಂತರ ಕೋಟಿ ಸಂಪತ್ತನ್ನು ಗಳಿಸುವುದರಲ್ಲಿ ಕೂಡು ಕುಟುಂಬದ ಮೌಲ್ಯಗಳ ಪಾತ್ರ ಗಣನೀಯವಾಗಿದೆ. ಹಾಗೆಯೇ ಹಳ್ಳಿಗಳಲ್ಲಿ ಬಹಳಷ್ಟು ಶ್ರೀಮಂತ ಕುಟುಂಬಗಳೂ ಕೂಡ ಒಂದು ಹಂತದವರೆಗಾದರೂ ಕೂಡು ಕುಟುಂಬಗಳಾಗಿ ಉಳಿದು ಉಳಿದೆಲ್ಲರ ಮೇಲೆ ಅಧಿಕಾರ ಚಲಾಯಿಸುವುದರಲ್ಲಿ ಕೂಡ ಈ ಮೌಲ್ಯಗಳು ಪಾತ್ರ ವಹಿಸಿವೆ.

ಆದ್ದರಿಂದಲೇ ಒಂದೆಡೆ ಹರಿಕಥೆ, ಪುರಾಣಗಳಲ್ಲಿ, ಧಾರ್ಮಿಕ ಉಪನ್ಯಾಸಗಳಲ್ಲಿ ಮಾತ್ರವಲ್ಲ ಕಾಲೇಜು, ವಿಶ್ವ ವಿದ್ಯಾಲಯಗಳಲ್ಲಿ ರಾಮಾಯಣದ ಸಾಹಿತಿಗಳ ಕಾವ್ಯ ಮತ್ತು ಬರಹಗಳಲ್ಲಿ ರಾಮಾಯಣದ ವೈಭವೀಕರಣ ನಡೆಯುತ್ತಿರುತ್ತದೆ. ಹಿಂದೆ ಉದಾಹರಿಸಲಾಗಿರುವ ಮಾಸ್ತಿಯವರ ಆದಿಕವಿ ವಾಲ್ಮೀಕಿ, ಡಿ.ವಿ.ಗುಂಡಪ್ಪನವರ ಬರಹಗಳು, ವಿ.ಸೀತಾರಾಮಯ್ಯನವರ ವಾಲ್ಮೀಕಿ ರಾಮಾಯಣ ಇತ್ಯಾದ್ಯನೇಕ ಕೃತಿಗಳು ಮರ‍್ಯಾದಾ ಪುರುಷೋತ್ತಮನನ್ನು ಕೊಂಡಾಡುವುದು, ರಾಮ-ಲಕ್ಷ್ಮಣರ ಪ್ರೇಮ, ಭರತನ ತ್ಯಾಗ, ಸೀತೆಯ ಪಾತಿವ್ರತ್ಯಗಳನ್ನು ಎತ್ತಿ ಹಿಡಿಯುವ ಮತ್ತು ಕೈಕೇಯಿ, ಮಂಥರೆ, ಶೂರ್ಪನಖಿ, ರಾವಣ ಮೊದಲಾದವರನ್ನು ಹೀಗಳೆಯುವ ಕೃತಿಗಳನ್ನು ರಚಿಸುವುದು ಇದಕ್ಕೆ ಉದಾಹರಣೆಯಾಗಿವೆ.

ಮತ್ತು ಸಿನೆಮಾಗಳಲ್ಲಿ ಪಾಳೆಯಗಾರೀ ಕೂಡು ಕುಟುಂಬದ ಮೌಲ್ಯಗಳ ವೈಭವೀಕರಣ- ವಿಷ್ಣು ವರ್ಧನನೇ ಅಣ್ಣ-ತಮ್ಮ, ತಂದೆ-ಮಗ ಎರಡೂ ಆಗಿ ನಟಿಸಿದ ಚಿತ್ರಗಳು, ರಾಜಕುಮಾರರ ಅನೇಕ ಚಿತ್ರಗಳು ಕನ್ನಡದಲ್ಲಿ ಇದಕ್ಕೆ ಉದಾಹರಣೆ. ತೆಲುಗು ಮತ್ತು ಹಿಂದಿಯಲ್ಲಂತೂ ಇಂತಹ ಚಿತ್ರಗಳು ಅನೇಕ. ಹಿಂದಿಯಲ್ಲಿ ಹಂ ಸಾಥ್ ಸಾಥ್ ಹೈ ಎಂಬ ಚಿತ್ರವಂತೂ ರಾಮಾಯಣದ ಆಧುನಿಕ ರೂಪವಾಗಿ ಕೂಡು ಕುಟುಂಬಗಳು ಉದ್ದಿಮೆದಾರರಿಗೆ ಎಷ್ಟೊಂದು ಮುಖ್ಯ ಎಂಬುದನ್ನು ಹೇಳುತ್ತದೆ.

ಒಟ್ಟಿನಲ್ಲಿ ರಾಮಾಯಣ ಕೇವಲ ಕಾವ್ಯವಾಗಿ ಉಳಿಯದೇ ಭಾರತೀಯ ಸಮಾಜವನ್ನು ಆಳುವವರಿಗೆ ಅಧಿನವಾಗಿ ರೂಪಿಸಿದ್ದು ಜಗತ್ತಿನ ಇತಿಹಾಸದಲ್ಲಿಯೇ ಒಂದು ವಿಶೇಷ ಫೆನಾಮಿನಾ. ಭಾರತದಲ್ಲಿ ಜನ ಸಮುದಾಯಗಳ ಅತೃಪ್ತಿಗಳು ಹೊರಬರದಂತೆ ಅದುಮಿಡುವುದರಲ್ಲಿ ಮತ್ತು ರಾಮಾಯಣದ ಕಥಾನಕಗಳನ್ನು ಕೇಳುತ್ತಾ ಜನ ಸಾಮಾನ್ಯರು ತಮ್ಮ ಕಷ್ಟಗಳನ್ನು ಮರೆಯುವಂತೆ ಮಾಡುವುದರಲ್ಲಿ ಅದರ ಪಾತ್ರ ಅಪರಿಮಿತ. ಈ ದೃಷ್ಠಿಕೋನದಿಂದ ರಾಮಯಣದ ವಿವಿಧ ಆಯಾಮಗಳ ಬಗ್ಗೆ ಇನ್ನೂ ಅಧ್ಯಯನಗಳು ನಡೆಯಬೇಕಾಗಿವೆ.

ಭಾರತದ ಸಮಾಜದ ಮೇಲೆ ’ರಾಮನ ಅವತಾರ ರಘುಕುಲ ಸೋಮನ ಅವತಾರ’ ವಾದದ್ದರ ಪರಿಣಾಮವೇನು? ಇಂದಿನ ರಾಜಕೀಯದಲ್ಲಿ ರಾಮ ವಹಿಸುತ್ತಿರುವ ಪಾತ್ರವೇನು ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.