Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಸಾಮ್ರಾಜ್ಯವೆಂದರೆ ಕಿತ್ತಾಟ, ಒಳಸಂಚುಗಳು, ಕೊಲೆಗಳು

ಸಂಪುಟ: 
9
ಸಂಚಿಕೆ: 
38
date: 
Sunday, 13 September 2015

ಚೋಮನದುಡಿ - 77

ಜಿ.ಎನ್. ನಾಗರಾಜ್

ರಾಮಾಯಣದ ರಚನೆಯಾಗುತ್ತಿದ್ದ ಕ್ರಿ.ಪೂ. 400 ರಿಂದ ಕ್ರಿ.ಶ. 400 ರವರೆಗಿನ ಸಮಯ ರಾಜ್ಯಗಳು ಸಾಮ್ರಾಜ್ಯಗಳಾಗುತ್ತಿದ್ದ ಕಾಲ. ಅದಕ್ಕನುಗುಣವಾಗಿಯೇ ಹಿಂದಿನ ಸಂಚಿಕೆಯಲ್ಲಿ ವಾನರ, ರಾಕ್ಷಸ ಕಲ್ಪನೆಗಳನ್ನು ಹುಟ್ಟು ಹಾಕಿದ್ದನ್ನು ಅಥವಾ ಬಳಸಿಕೊಂಡದ್ದನ್ನು ವಿವರಿಸಲಾಗಿದೆ. ಹೀಗೆ ವಿಸ್ತಾರವಾದ ಸಾಮ್ರಾಜ್ಯಗಳಿಗನುಗುಣವಾಗಿ ಹೆಚ್ಚಿದ ಅಧಿಕಾರ ವ್ಯಾಪ್ತಿ ಮತ್ತು ವಿಪರೀತ ಹೆಚ್ಚಿದ ರಾಜ್ಯಾದಾಯ, ಸಂಪತ್ತುಗಳು ಅಧಿಕಾರಕ್ಕಾಗಿ ಕಚ್ಚಾಟ, ಒಳಸಂಚುಗಳನ್ನೂ ಏರಿಸಿತು. ಕಟುಕತನ, ಕಗ್ಗೊಲೆಗಳ ಮಟ್ಟಕ್ಕೆ ಏರಿತು.

ಕ್ರಿ.ಪೂ. 400 ರಿಂದ ಕ್ರಿ.ಶ. 400 ರವರೆಗಿನ ಕಾಲಘಟ್ಟ ಭಾರತದ ಚರಿತ್ರೆಯ ಒಂದು ಮುಖ್ಯ ಘಟ್ಟ. ಈ ಘಟ್ಟದ ಕೆಲವು ಬೆಳವಣಿಗೆಗಳನ್ನು ನೋಡೋಣ. :
ಮಗಧದಲ್ಲಿ ನಂದ ವಂಶದ ಆಳ್ವಿಕೆ-ಕ್ರಿ.ಪೂ. 325
ಅಲೆಕ್ಸಾಂಡರನ ಧಾಳಿ – ಕ್ರಿ.ಪೂ. 327-325
ಚಂದ್ರಗುಪ್ತ ಮೌರ‍್ಯನ ಆಳ್ವಿಕೆ ಆರಂಭ-ಕ್ರಿ.ಪೂ. 322
ಬಿಂದುಸಾರನ ಆಳ್ವಿಕೆ – ಕ್ರಿ.ಪೂ. 298
ಅಶೋಕನ ಆಳ್ವಿಕೆ – ಕ್ರಿ.ಪೂ. 270
ಕೊನೆಯ ಮೌರ‍್ಯನನ್ನು ಕಿತ್ತೆಸೆದದ್ದು-ಕ್ರಿ.ಪೂ. 185
(ಶುಂಗವಂಶದ ಪುಷ್ಯಮಿತ್ರನಿಂದ)
ಚೋಳ, ಪಾಂಡ್ಯ ರಾಜ್ಯಗಳ ಸ್ಥಾಪನೆ-ಕ್ರಿ.ಪೂ. 250
ಶಾತವಾಹನ ವಂಶದ ಆಳ್ವಿಕೆ ಆರಂಭ-ಕ್ರಿ.ಪೂ. 100
ಶಕ ವಂಶದ, ಪಹ್ಲವ ಆಡಳಿತ – ಕ್ರಿ.ಪೂ. 50
ಶಕ ವರ್ಷಾರಂಭ – ಕ್ರಿ.ಶ. 78
ಕುಶಾನರ ಆಡಳಿತ ಆರಂಭ – ಕ್ರಿ.ಶ. 160
ಶಾತವಾಹನ ಆಡಳಿತದ ಕೊನೆ – ಕ್ರಿ.ಶ. 200

Ramayanaಭಾರತದ ಮೊತ್ತಮೊದಲ ಸಾಮ್ರಾಜ್ಯವೆಂದು ಹೆಸರಾದ ಮಗಧ ಸಾಮ್ರಾಜ್ಯ ಉದಯವಾಗಿದ್ದು, ಮೌರ‍್ಯ ಸಾಮ್ರಾಜ್ಯ ರೂಪುಗೊಂಡು ಖಿಲವಾಗಿದ್ದು ಈ ಕಾಲಘಟ್ಟದಲ್ಲಿಯೇ. ಮಗಧ ಸಾಮ್ರಾಜ್ಯದ ಮೊದಲ ಸಾಮ್ರಾಟ ಮಹಾ ಪದ್ಮ ನಂದ ಅಧಿಕಾರಕ್ಕೆ ಬಂದ ರೀತಿಯ ಬಗ್ಗೆ ವಿಧವಿಧವಾದ ಕಥೆಗಳಿವೆ. ಹಿಂದಿನ ರಾಜನ ಪಟ್ಟದ ರಾಣಿಯ ನೆರವಿನಿಂದಲೇ ಅವನನ್ನು ಕೊಂದು ಪಟ್ಟಕ್ಕೇರಿದವನು ಎಂಬುದೊಂದು. ಅವನ ಮಕ್ಕಳು ನವನಂದರೆಂದು ಹೆಸರಾದವರು ಒಬ್ಬೊಬ್ಬರೂ ಕೆಲವೇ ವರ್ಷಗಳ ಕಾಲ ಆಳಿದವರು. ಇವರು ಚಂದ್ರಗುಪ್ತನ ವಂಶವನ್ನು ನೆಲಮಾಳಿಗೆಯಲ್ಲಿ ಬಂಧಿಸಿಟ್ಟು ಉಪವಾಸ ಹಾಕಿ ನಾಶ ಮಾಡಲು ಪ್ರಯತ್ನಿಸಿದರು ಮತ್ತು ಅವನ ಸಂಬಂಧಿಗಳೆಲ್ಲಾ ಹೇಗೋ ಮಾಡಿ ಚಂದ್ರಗುಪ್ತನೊಬ್ಬ ಬದುಕುಳಿಯುವಂತೆ ಮಾಡಿದರು. ಅವನು ಚಾಣಕ್ಯನ ಸಹಾಯದಿಂದ ನಂದರನ್ನು ಮುಗಿಸಿ ಪಟ್ಟಕ್ಕೇರಿದವನು ಎಂಬ ಕಥೆ ಜನಜನಿತ. ಮುಂದಿನ ಮೌರ‍್ಯ ಅರಸುಗಳು ಸಿಂಹಾಸನದ ದಾರಿಯೂ ಹೀಗೆ ರಕ್ತಸಿಕ್ತವಾಗಿದೆ. ದೇವನಾಂಪಿಯನೆಂದು ಹೆಸರಾದ ಮುಂದೆ ಬುದ್ಧನ ಮಹಾ ಅನುಯಾಯಿಯಾದ ಅಶೋಕ ಪಟ್ಟಕ್ಕೇರಿದ ಕಥೆಯೇ ಬೀಭತ್ಸವಾಗಿದೆ. ಬುದ್ಧ ಗ್ರಂಥಗಳಲ್ಲಿನ ಒಂದು ಕಥೆಯ ಪ್ರಕಾರ ಅವನ ೯೯ ಸೋದರರನ್ನು ಕೊಚ್ಚಿ ಎಸೆದು ಪಟ್ಟಕ್ಕೇರಿದ ಎಂದು. ಹೆಚ್ಚು ಸಾಧ್ಯತೆಯುಳ್ಳ ಮತ್ತೊಂದು ಕಥೆ ತಂದೆಯ ಆಜ್ಞೆಯಂತೆ ತಕ್ಷಶಿಲೆಗೆ ಹೋಗಿದ್ದ ಹಿರಿಯಣ್ಣ ಸುಸೀಮಾ ರಾಜಧಾನಿ ಪಾಟಲೀಪುತ್ರಕ್ಕೆ ಬರುವ ಮೊದಲೇ ಪಟ್ಟಕ್ಕೇರಿದ ಅಶೋಕ ನಂತರ ಅವನನ್ನು ರಾಜಧಾನಿಗೆ ಪ್ರವೇಶ ಮಾಡುವ ಮೊದಲೇ ವಧಿಸಿದ. ಅವನು ಬೌದ್ಧ ಧರ‍್ಮಕ್ಕೆ ಒಲಿಯುವ ಮೊದಲು ಬಹಳ ಕ್ರೂರಿಯಾಗಿದ್ದ ಎಂಬುದಕ್ಕೂ ಹಲವು ಕಥೆಗಳಿವೆ. ಮೌರ‍್ಯ ಸಾಮ್ರಾಜ್ಯದ ಪತನಾನಂತರವಂತೂ ದೇಶದಲ್ಲಿ ವಿವಿಧ ಶಕರು, ಪಹ್ಲವರು, ಕುಶಾನರು(ಕಾನಿಷ್ಕನೆಂಬ ರಾಜನಿಂದ ಪ್ರಸಿದ್ಧವಾದದ್ದು.) ಮೊದಲಾದ ವಿದೇಶೀ ಸಮುದಾಯಗಳು ಪ್ರವೇಶಿಸಿದ ಮತ್ತು ಆಡಳಿತ ಮಾಡಿದ ಕಾಲಘಟ್ಟ. ಶುಂಗ ವಂಶದ ಪುಷ್ಯಮಿತ್ರ ಮಗಧವನ್ನು ಆಕ್ರಮಿಸಿದ ಕಾಲ. ಸೋದರರು ಮತ್ತು ದಾಯಾದಿಗಳ ನಡುವೆ ಅಧಿಕಾರಕ್ಕಾಗಿ ಕಚ್ಚಾಟ, ಕೊಲೆಗಳು ಮೊದಲಾದವು ಉತ್ತುಂಗಕ್ಕೇರಿದ ಕಾಲವೂ ಹೌದು. ದಕ್ಷಿಣ ಭಾರತದಲ್ಲಿ ಚೋಳರ, ಪಾಂಡ್ಯರ ಆಳ್ವಿಕೆ ಶಾತವಾಹನರ ಆಳ್ವಿಕೆಗಳು ಸ್ಥಾಪಿತವಾದ ಕಾಲವೂ ಹೌದು.

ಹೀಗೆ ಹಲವು ಹೊಸ ರಾಜ್ಯ, ಸಾಮ್ರಾಜ್ಯಗಳು ಸ್ಥಾಪನೆಯಾದ ಸಮಯದಲ್ಲಿಯೇ ರಾಮಾಯಣ, ಮಹಾಭಾರತಗಳು ರಚಿತವಾದುವು ಮತ್ತು ಜನಪ್ರಿಯವಾದುವು ಎಂಬುದು ಕೂಡ ಕೇವಲ ಕಾಕತಾಳಿಯವಲ್ಲ.

ಆರಂಭದ ಈ ರಾಜ್ಯಗಳನ್ನು ವಿಸ್ತಾರಗೊಳಿಸುವುದೆಂದರೆ ಒಂದು ಕೇಂದ್ರದಲ್ಲಿ ಆಡಳಿತ ಆರಂಭಿಸಿದವರು ಸುತ್ತ ಮುತ್ತಲಿನ ಬುಡಕಟ್ಟುಗಳು ವಾಸಿಸುತ್ತಿದ್ದ ಪ್ರದೇಶಗಳನ್ನು ಆಕ್ರಮಿಸುವುದೆಂದೇ ಅರ್ಥ. ಅಂತಹ ಸಮಯದಲ್ಲಿ ನಾವು ಮಾತ್ರ ನರರು ಅವರು ವಾನರರು, ರಾಕ್ಷಸರು ಎಂಬ ಪರಿಕಲ್ಪನೆ ಈ ಎಲ್ಲ ರಾಜರು, ಸಾಮ್ರಾಟರುಗಳಿಗೆ ಉಪಯೋಗಕ್ಕೆ ಬರುವಂತಹುದು.

ಸಾಮ್ರಾಜ್ಯದ ಉತ್ತರಾಧಿಕಾರ ಪ್ರಶ್ನೆ

ಈ ಸಾಮ್ರಾಜ್ಯಗಳನ್ನು ಯಾರು ಆಳುವುದು ಎಂಬುದನ್ನು ತೀರ್ಮಾನಿಸುವುದು ಹೇಗೆ? ಒಂದು ರಾಜ್ಯದಲ್ಲಿ ಇರುವ ದೊಡ್ಡ ಜನಸಂಖ್ಯೆ ಮತ್ತು ವಿವಿಧ ಜನ ಸಮುದಾಯಗಳ ನಡುವೆ ಆಳುವವರು ಯಾರು ಎಂಬುದನ್ನು ಋಗ್ವೇದದ ಕೊನೆಯ ಕಾಲಘಟ್ಟದಿಂದ ಆರಂಭವಾಗಿ ಯಜುರ‍್ವೇದ, ಉಪನಿಷತ್ತುಗಳು ಮತ್ತು ಧರ್ಮಸೂತ್ರಗಳ ಕಾಲಕ್ಕೆ ಗಟ್ಟಿಗೊಂಡ ವರ್ಣ ವ್ಯವಸ್ಥೆ ಒಂದು ಹಂತದವರೆಗೆ ತೀರ್ಮಾನಿಸಿ ಬಿಟ್ಟಿತ್ತು. ಆಳುವವರು ಕ್ಷತ್ರಿಯರು, ಬ್ರಾಹ್ಮಣರ ಸಹಾಯದೊಂದಿಗೆರಾಮಾಯಣದ ಕಾಲಕ್ಕೆ ನಿಶ್ಚಿತವಾಗಿತ್ತು. ಆ ಮೂಲಕ ಜನ ಸಮುದಾಯಗಳ ಬಹುತೇಕ ಜನರನ್ನು ಆಳುವ ಹಕ್ಕಿನಿಂದ ಹೊರಗೆಸೆಯಲಾಗಿತ್ತು. ಆದರೆ ಕ್ಷತ್ರಿಯ ವರ್ಣದ ವಂಶಗಳ ನಡುವೆ ಆಳುವ ಹಕ್ಕುಳ್ಳವರು ಯಾರು? ಈ ಪ್ರಶ್ನೆಗೆ ರಾಮಾಯಣ-ಮಹಾಭಾರತಗಳಲ್ಲಿ ವಿವಿಧ ಮನುಗಳು ಮೊದಲಾದ ಮಾನವ ಕುಲದ ಮೂಲ ಪುರುಷರಿಂದ ಉದ್ಭವವಾದ ಸೂರ‍್ಯ ವಂಶ, ಚಂದ್ರವಂಶಗಳು ಆಳುವ ಯೋಗ್ಯತೆಯುಳ್ಳವರು ಎಂಬುದನ್ನು ಸ್ಥಾಪಿಸಲು ಪ್ರಯತ್ನ ನಡೆದಿದೆ. ಸೂರ‍್ಯನ ಮಗನಾದ ವೈವಸ್ವತ ಮನುವೇ ರಾಮನ ವಂಶದ ಮೂಲ ಪುರುಷ ಆದ್ದರಿಂದ ಇವರ ಇಕ್ಷ್ವಾಕು ವಂಶ ಸೂರ‍್ಯ ವಂಶ. ಸೂರ‍್ಯನೆಂಬ ದೈವದ ಮೂಲವೇ ಆ ವಂಶಕ್ಕೆ ಆಳುವುದಕ್ಕೆ ತಾವು ಮಾತ್ರ ಯೋಗ್ಯರು ಎಂದು ಬಿಂಬಿಸುವುದಕ್ಕೆ ಅವಕಾಶ ಮಾಡಿಕೊಡುತ್ತದೆ ಎಂಬುದನ್ನು ಸ್ಥಾಪಿಸಲಾಗಿದೆ.

Chanakyaಆರ್ಯರು ಪ್ರಬಲವಾದ ರಾಜ್ಯಗಳನ್ನು ರಚಿಸಿದ ಗಂಗಾ ನದೀ ಬಯಲಿನಲ್ಲಿ ಪ್ರದೇಶದಲ್ಲಿ ಜಾರಿಗೆ ತಂದ ಈ ವ್ಯವಸ್ಥೆಯನ್ನು ದೇಶದ ಇತರೆಡೆಗಳಿಗೆ ಹಬ್ಬಿಸುವುದಕ್ಕೆ ರಾಮಾಯಣ ವಿವಿಧ ಭಾಷೆಗಳಲ್ಲಿ ಪಡೆದ ಮರುಹುಟ್ಟು ಮತ್ತು ಜನಪ್ರಿಯತೆ ಬಹಳ ಸಹಾಯಕವಾಯಿತು. ಅಂತಹ ಕಾಲಘಟ್ಟದಲ್ಲಿಯೇ ರಾಮಾಯಣದ ಬಾಲ ಕಾಂಡ ಮತ್ತು ಉತ್ತರ ಕಾಂಡಗಳಲ್ಲಿ ಶಂಬೂಕ ವಧೆ, ಬ್ರಾಹ್ಮಣರ ಮೇಲ್ಮೆಯನ್ನು ಬಿತ್ತರಿಸುವಂತಹ ಅನೇಕ ಆಖ್ಯಾನ, ಉಪಾಖ್ಯಾನಗಳು ಸೇರ‍್ಪಡೆಯಾದವು. ಆ ಸಮಯದಲ್ಲಿಯೇ ರಾಮ ದೇವರೆಂದು ಬಿಂಬಿಸುವ ಭಾಗಗಳೂ ಸೇರ‍್ಪಡೆಯಾದುವು. ಇದರಿಂದ ಭಾರತದ ಬೇರೆ ಬೇರೆ ಭಾಗಗಳಲ್ಲಿ ರಾಜ್ಯ, ಸಾಮ್ರಾಜ್ಯಗಳು ಸ್ಥಾಪನೆಯಾದ ಸಂದರ್ಭದಲ್ಲಿ ಆಲ್ಲಲ್ಲಿನ ಆಳುವ ವಂಶಗಳು ಮತ್ತು ಅವರ ಸಮೀಪ ಬಂಧುಗಳು ತಾವು ಕ್ಷತ್ರಿಯರು ಎಂದು ಬಿಂಬಿಸಿಕೊಂಡವು. ಅದೇ ಬುಡಕಟ್ಟಿನ ಇತರ ಸಾಮಾನ್ಯ ಜನರಿಂದ ಬೇರ್ಪಟ್ಟು ತಮ್ಮ ಉನ್ನತಿಕೆಯನ್ನು ತೋರ್ಪಡಿಸಿಕೊಂಡವು. ಈ ವಂಶಗಳನ್ನು ಕ್ಷತ್ರಿಯರೆಂದು ಬಿಂಬಿಸಲು ಬ್ರಾಹ್ಮಣರ ಸಹಾಯ ಮತ್ತು ಅವರ ಯಜ್ಞ, ಯಾಗಾದಿಗಳು ಮತ್ತಿತರ ಆಚರಣೆಗಳು ಬಹಳ ಸಹಾಯ ಮಾಡಿದವು. ಇಂತಹವುಗಳಿಗೆ ಮಾರು ಹೋಗುವುದಕ್ಕೆ ರಾಮಾಯಣ, ಮಹಾಭಾರತಗಳ ಜನಪ್ರಿಯತೆ ಬಹಳ ಸಹಾಯವಾಯಿತು. ಈ ರಾಜ ವಂಶಗಳನ್ನು ಸೂರ‍್ಯ ವಂಶದವರೆಂದು ಅಥವಾ ಚಂದ್ರ ವಂಶದವರೆಂದು ಬಿಂಬಿಸಲು ಪುರಾಣಗಳನ್ನು ಸೃಷ್ಠಿಸಲಾಯಿತು. ಅಷ್ಟಾದಶ ಪುರಾಣಗಳಲ್ಲಿ ಈ ರೀತಿ ಬಿಂಬಿಸಲ್ಪಟ್ಟ, ವಿವಿಧ ಪ್ರದೇಶಗಳಲ್ಲಿ ಆಳಿದ ರಾಜ ವಂಶಗಳ ದೊಡ್ಡ ಯಾದಿಯೇ ಇದೆ.

ಈ ರೀತಿ ಶೂದ್ರರೆಂದು ಪರಿಗಣಿಸಲ್ಪಟ್ಟ ಬುಡಕಟ್ಟು ಸಮುದಾಯಗಳಿಂದಲೇ ಬಂದ ಈ ಆಳುವ ವಂಶಗಳನ್ನು ಕ್ಷತ್ರಿಯರೆಂದು ಉನ್ನತೀಕರಿಸಲು ಅಶ್ವಮೇಧ ಯಾಗ ಒಂದು ಮುಖ್ಯ ಸಾಧನವಾಗಿದೆ. ರಾಮಾಯಣ, ಮಹಾಭಾರತಗಳಲ್ಲಿ ವಿವರಿಸಲಾದ ಅಶ್ವಮೇಧ ಯಾಗಗಳು ಜನರಲ್ಲಿ ಈ ಮೇಲ್ಮೆಯನ್ನು ಒಪ್ಪಿಕೊಳ್ಳುವಂತೆ ಮಾಡಲು ಸಹಕಾರಿಯಾಗಿವೆ.

ಶೂದ್ರ ರಾಜರನ್ನು ಕ್ಷತ್ರಿಯರನ್ನಾಗಿ ಮಾಡಿದ ಹಿರಣ್ಯ ಗರ್ಭ ಯಜ್ಞ

ಮುಂದೆ ಅಶ್ವಮೇಧವೂ ಕೂಡ ಬಹಳ ವೆಚ್ಚದ್ದೆಂದು ಕಂಡಾಗ ಮತ್ತೊಂದು ಯಜ್ಞವನ್ನು ಸೃಷ್ಠಿಸಲಾಯಿತು. ಹಿರಣ್ಯ ಗರ್ಭ ಯಜ್ಞವೆಂದು ಹೆಸರಾದ ಈ ಯಜ್ಞ ಬಹಳ ವಿಚಿತ್ರವಾಗಿದೆ. ರಾಜನ ಗಾತ್ರದ ಒಂದು ದೊಡ್ಡ ಚಿನ್ನದ ಪಾತ್ರೆಯನ್ನು ಮಾಡಿಸುವುದು ಮತ್ತು ರಾಜನನ್ನು ಅದರಲ್ಲಿ ತಾಯ ಗರ್ಭದಲ್ಲಿ ಶಿಶು ಇರುವಂತೆ ಕುಳ್ಳಿರಿಸಿ ಮುಚ್ಚಿ ಮಂತ್ರ ಘೋಷ ಮಾಡುವುದು ಮತ್ತು ವ್ರತಗಳನ್ನು ಕೈಗೊಳ್ಳುವಂತೆ ಮಾಡುವುದು, ಪೂಜೆಗಳನ್ನು ನಡೆಸುವುದು, ನಂತರ ಆ ಪಾತ್ರೆಯಿಂದ ರಾಜನು ಎದ್ದೇಳುವಂತೆ ಮಾಡಿ ಈಗ ರಾಜ ಕ್ಷತ್ರಿಯನಾದನೆಂದು ಮತ್ತು ಇಂತಹ ಸೂರ‍್ಯವಂಶದ ಅಥವಾ ಚಂದ್ರ ವಂಶದ ಕುಡಿಯೆಂದು ಘೋಷಿಸುವುದು. ಹೀಗೆ ರಾಜ ಹೊಸ ಹುಟ್ಟನ್ನು ಪಡೆಯುತ್ತಾನೆ ತನ್ನ ಶೂದ್ರ ತಾಯಿಯ ಹೊಟ್ಟೆಯಿಂದ ಹುಟ್ಟಿದ ಕಳಂಕ ದೂರವಾಗಿ ಕ್ಷತ್ರಿಯನಾಗಿ ಬಿಡುತ್ತಾನೆ. ಆ ಚಿನ್ನದ ದೊಡ್ಡ ಪಾತ್ರೆಯ ಜೊತೆಗೆ ಪುರೋಹಿತರಿಗೆ ಭೂರಿ ದಕ್ಷಿಣೆಗಳು ದೊರೆಯುತ್ತವೆ. ಇದೇ ಹಿರಣ್ಯ ಅಥವಾ ಚಿನ್ನದ ಗರ್ಭ. ಹೇಗಿದೆ ಈ ಹೊಸ ಯಜ್ಞ! ಯಾವ ವೇದಗಳಲ್ಲೂ ಕಾಣದ ಯಜ್ಞ! ಕರ್ನಾಟಕದ ಕೆಲವು ರಾಜರುಗಳೂ ಇಂತಹ ಹಿರಣ್ಯ ಯಜ್ಞ ಮಾಡಿದ್ದೇವೆಂದು ತಮ್ಮ ಶಾಸನಗಳಲ್ಲಿ ಘೋಷಿಸಿದ್ದಾವೆ.

ಲಾವೋಸ್, ಥೈಲ್ಯಾಂಡ್, ಜಾವ, ಸುಮಾತ್ರಗಳಲ್ಲಿ ಕೂಡ ರಾಮಾಯಣ ಇಂತಹುದೇ ಪಾತ್ರವನ್ನು ವಹಿಸಿದೆ. ಅಲ್ಲೆಲ್ಲಿಯೂ ಹೊಸ ರಾಜ್ಯಗಳು ಸ್ಥಾಪನೆಯಗುತ್ತಿದ್ದ ಸಮಯದಲ್ಲಿಯೇ ರಾಮಾಯಣವನ್ನು ಆಯಾ ಭಾಷೆಗಳಲ್ಲಿ ರಚಿಸಲಾಗಿದೆ. ಅದನ್ನು ಜನಪ್ರಿಯಗೊಳಿಸಲು ರಾಜರುಗಳು ಬಹಳ ದೊಡ್ಡ ಪ್ರಯತ್ನಗಳನ್ನೇ ಮಾಡಿದ್ದಾರೆ ಎಂಬುದನ್ನು ನೋಡಿದ್ದೇವೆ. ಆಯಾ ದೇಶಗಳಲ್ಲಿ ರಾಜತ್ವವನ್ನು ಜನರು ಒಪ್ಪಿಕೊಳ್ಳುವಂತೆ ಮಾಡುವುದರಲ್ಲಿ ರಾಮಾಯಣದ ಪಾತ್ರ ಭಾರತಕ್ಕಿಂತಲೂ ಢಾಳಾಗಿ ಎದ್ದು ಕಾಣುತ್ತದೆ. ಆ ದೇಶಗಳ ಇತಿಹಾಸದುದ್ದಕ್ಕೂ ಕೂಡ ರಾಮಾಯಣ ಈ ಪಾತ್ರವನ್ನು ವಹಿಸಿದೆ. ಅದು ರಾಮಾಯಣದ ಬೌದ್ಧ ರೂಪವಿರಲಿ ಅಥವಾ ವೈದಿಕ ರೂಪವಿರಲಿ ಈ ಪಾತ್ರವನ್ನು ವಹಿಸಿದೆ ಎಂಬುದು ಗಮನಾರ್ಹ. ಇತ್ತೀಚಿನ ಥೈಲ್ಯಾಂಡ್ ರಾಜರುಗಳು ತಮ್ಮನ್ನು ರಾಮ-1,2,3 ಎಂದು ಕರೆದುಕೊಳ್ಳುತ್ತಿರುವುದು ಮತ್ತು ಅವರ ರಾಜವಂಶದ ಬೌದ್ಧ ದೇವಾಲಯದಲ್ಲಿ ರಾಮಾಯಣದ ದೃಶ್ಯಗಳನ್ನು ಚಿತ್ರಿಸಿರುವುದು ಇದಕ್ಕೆ ಸ್ಪಷ್ಟ ಉದಾಹರಣೆ.

ರಾಮಾಯಣದ ಜನಪ್ರಿಯತೆಯ ಬಗ್ಗೆ ಅದೆಷ್ಟೋ ಸಂಶೋಧನೆಗಳು ಬಂದಿವೆ. ಆದರೆ ರಾಜ್ಯಗಳ ಸ್ಥಾಪನೆ ಮತ್ತು ರಾಜ ವಂಶಗಳು ರಾಮಾಯಣವನ್ನು ಜನಪ್ರಿಯಗೊಳಿಸಲು ವಹಿಸಿದ ಪಾತ್ರವನ್ನು ನಿರ್ಲಕ್ಷಿಸಲಾಗಿದೆ. ಇಲ್ಲದ ಕ್ಷತ್ರಿಯ ವಂಶಗಳನ್ನು ಸೃಷ್ಠಿಸಲು, ಬ್ರಾಹ್ಮಣ ಸಮುದಾಯಗಳನ್ನೂ ಉಂಟು ಮಾಡಲು, ಬುಡಕಟ್ಟು ಜೀವನದ ಸಮಾನತೆಯನ್ನು ನಾಶ ಮಾಡಿ ಮೇಲು ಕೀಳಿನ ವರ್ಣ ವ್ಯವಸ್ಥೆಯನ್ನು ಆಯಾ ಪ್ರದೇಶಗಳಲ್ಲಿ ಅಸ್ತಿತ್ವಕ್ಕೆ ತರಲು ರಾಮಾಯಣ ವಹಿಸಿದ ಪಾತ್ರದ ಬಗ್ಗೆ ಹೆಚ್ಚಿನ ಸಂಶೋಧನೆಗಳನ್ನು ಕೈಗೊಳ್ಳಬೇಕಾಗಿದೆ.