ಮೋದಿ ಸರಕಾರದ ವಿರುದ್ಧ ರೈತರ ಪ್ರತಿರೋಧಕ್ಕೆ ಎರಡನೇ ವಿಜಯ

date: 
Friday, 1 December 2017

ಜಾನುವಾರು ಮಾರಾಟ ನಿಷೇಧದ ಅಧಿಸೂಚನೆ ವಾಪಾಸ್ : ಜಾನುವಾರು ಮಾರುಕಟ್ಟೆ ತೆರೆಯಲು, ಜಾನುವಾರು ಸಾಗಾಣಿಕೆ ಸುರಕ್ಷಿತಗೊಳಿಸಲು ಎಐಕೆಎಎಸ್ ಆಗ್ರಹ

ಕೇಂದ್ರ ಸರಕಾರ ಜಾನುವಾರು ಮಾರುಕಟ್ಟೆಯಲ್ಲಿ ವಧೆಗಾಗಿ ಜಾನುವಾರುಗಳ ಮಾರಾಟವನ್ನು ನಿಷೇಧಿಸಿ ಹೊರಡಿಸಿದ ಅಧಿಸೂಚನೆಯನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಇದು ರೈತ-ವಿರೋಧಿ ಮೋದಿ ಸರಕಾರಕ್ಕೆ ರೈತರು ಒಡ್ಡಿರುವ ಪ್ರತಿರೋಧಕ್ಕೆ ಸಿಕ್ಕಿರುವ ಎರಡನೇ ವಿಜಯ ಎಂದು ಅಖಿಲ ಭಾರತ ಕಿಸಾನ್ ಸಭಾ( ಎಐಕೆಎಸ್)  ಹೇಳಿದೆ. ಈ ಹಿಂದೆ  ಮೋದಿ ಸರಕಾರ ತನ್ನ  ಕುಖ್ಯಾತ ಭೂಸ್ವಾಧೀನ ಮಸೂದೆಯನ್ನು ರೈತರ ದೇಶವ್ಯಾಪಿ ಪ್ರತಿಭಟನೆಯ ನಂತರ ಅದನ್ನು ಅಲ್ಲಿಗೇ ನಿಲ್ಲಿಸಲು ನಿರ್ಧರಿಸಿದಾಗ  ರೈತರು ಮೊದಲ ವಿಜಯ ಸಾಧಿಸಿದ್ದರು.

ಇದು ಭಾರತೀಯ ಸಂವಿಧಾನದಲ್ಲಿ ಪ್ರತಿಷ್ಟಾಪಿಸಲ್ಪಟ್ಟಿರುವ ಜಾತ್ಯತೀತ, ಪ್ರಜಾಸತ್ತಾತ್ಮಕ ಮತ್ತು ಸಮಾಜವಾದಿ ನೀತಿಗಳನ್ನು ಇನ್ನಷ್ಟು ಗಟ್ಟಗೊಳಿಸಲು ನೆರವಾಗುತ್ತದೆ ಎಂದು ಎಐಕೆಎಸ್ ಹೇಳಿದೆ. ಈ ಜಾನುವಾರು ಮಾರಾಟ ನಿಷೇಧದ ಹಿಂದಿರುವ ಕೋಮುವಾದಿ ಮನೋಭಾವದ ವಿರುದ್ಧ ಹೋರಾಟದ ಪರವಾಗಿ ಸಂಸತ್ತು, ನ್ಯಾಯಾಂಗ, ಕಾರ್ಯಾಂಗದಲ್ಲಿ ಮತ್ತು ಮಾಧ್ಯಮಗಳಲ್ಲಿ ಅವಿರತವಾಗಿ ನಿಂತು ಕೇಂದ್ರ ಸರಕಾರ ಅದನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹಾಕಿದ  ಎಲ್ಲ ಪ್ರಗತಿಪರ ಶಕ್ತಿಗಳನ್ನು ಅದು ಅಭಿನಂದಿಸಿದೆ.

ಕೇಂದ್ರ ಪರಿಸರ ಮಂತ್ರಾಲಯ ಈ ರೈತ-ವಿರೋಧಿ ನೋಟಿಫಿಕೇಶನ್ ಜಾರಿ ಮಾಡಿದಂದಿನಿಂದ ಎಐಕೆಎಸ್ ಇದರ ವಿರುದ್ಧ  ಎಡೆಬಿಡದೆ ಹೋರಾಟಗಳನ್ನು ಆರಂಭಿಸಿತು. ಅದರ ಕರೆಯ ಮೇರೆಗೆ ದೇಶದ ಎಲ್ಲ ಜಿಲ್ಲೆಗಳಲ್ಲಿ ಈ ಅಧಿಸೂಚನೆಯ ಪ್ರತಿಗಳನ್ನು ಸುಡಲಾಯಿತು. ಎಐಕೆಎಸ್ ‘ಭೂಮಿ ಅಧಿಕಾರ್ ಆಂದೋಲನ್’’ದ ಜತೆಗೂಡಿ ವಿವಿಧ ರಾಜ್ಯಗಳಲ್ಲಿ ಇದರ ವಿರುದ್ಧ ವ್ಯಾಪಕವಾದ ಪ್ರಚಾರಾಂದೋಲನ ನಡೆಸಿದವು.

ಸುಪ್ರಿಂ ಕೋರ್ಟಿನಲ್ಲಿ ಎಐಕೆಎಸ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಿಂದಾಗಿ ಈ ಅಧಿಸೂಚನೆಯ ಮೇಲೆ ರಾಷ್ಟ್ರವ್ಯಾಪಿ ತಡೆಯಾಜ್ಞೆ  ಬಂತು. ಇದು ಮೋದಿ ಸರಕಾರಕ್ಕೆ ಒಂದು ದೊಡ್ಡ ಆಘಾತವಾಗಿತ್ತು.

ಈ ಅಧಿಸೂಚನೆ ದೇಶದ ಮತ್ತು ಜನಗಳ ಐಕ್ಯತೆಯನ್ನು ದಮನ ಮಾಡುವ ಒಂದು ದೇಶ-ವಿರೋಧಿ ಕ್ರಮವಾಗಿತ್ತು. ದೇಶದ ಜನತೆ ಬ್ರಿಟಿಶ್ ವಸಾಹತುಶಾಹಿಯ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ತಿರಸ್ಕರಿಸಿದ ರಾಷ್ಟ್ರೀಯವಾದದ ಒಂದು ತಪ್ಪು ಪರಿಕಲ್ಪನೆಯನ್ನು, ಅಂದರೆ ಹಿಂದೂರಾಷ್ಟ್ರದ ಖೋಟಾ ರಾಷ್ಟ್ರೀಯವಾದವನ್ನು ಪ್ರಚಾರ ಮಾಡುತ್ತಿರುವ ಆರೆಸ್ಸೆಸ್ ಪ್ರೇರಿತ ಕ್ರಮ ಇದಾಗಿತ್ತು.

ಇದರ ವಿರುದ್ಧ ಹೋರಾಟ ಜನಗಳನ್ನು ಅವರ ನಂಬಿಕೆ, ಆಹಾರಕ್ರಮಗಳು ಮತ್ತು ಪಾರಂಪರಿಕ ಮೌಲ್ಯವ್ಯವಸ್ಥೆಯಲ್ಲಿನ ಭಿನ್ನತೆಗಳ ಆಧಾರದಲ್ಲಿ ಒಡೆದು ನಾಗರಿಕ ಸಮಾಜವನ್ನು ಕೋಮುಗ್ರಸ್ತಗೊಳಿಸುವ ಆರೆಸ್ಸೆಸ್-ಬಿಜೆಪಿ ಕೂಟದ ನೇತೃತ್ವದ ಕೇಂದ್ರ ಸರಕಾರದ ಬಚ್ಚಿಟ್ಟ ಅಜೆಂಡಾವನ್ನು ಹೊರೆಗೆಳೆಯುವಲ್ಲಿ ನೆರವಾಗಿದೆ. ಜಾನುವಾರು ಸಂಪತ್ತು ರೈತ ಕುಟುಂಬಗಳಿಗೆ ಅವರ 30%ದಷ್ಟು  ಆದಾಯವನ್ನು ಕೊಡುತ್ತದೆ. ಇದರಿಂದಾಗಿ ಈ ನಿಷೇಧ ಅವರ ಜೀವನಾಧಾರಗಳವನ್ನು ತೀವ್ರವಾಗಿ ತಟ್ಟಿತು. ಇಂತಹ ಅತ್ಯಂತ ಸಂವೇದನಾಶೂನ್ಯ ನಿರ್ಧಾರವನ್ನು, ಅದೂ ಭಾರತೀಯ ಕೃಷಿ ತೀವ್ರ ಬಿಕ್ಕಟ್ಟಿನಲ್ಲಿದ್ದಾಗ ಕೈಗೊಂಡದ್ದು ರೈತಾಪಿ ಜನಗಳ ಮೇಲಿನ ಒಂದು ನಗ್ನ ದಾಳಿಯಾಗಿತ್ತು. ಇದರ ವಿರುದ್ಧ ಬೇಸಾಯಗಾರರ ಸಮುದಾಯದಲ್ಲಿ ಎದ್ದು ಬಂದ ತೀವ್ರ ಆಕ್ರೋಶ ಅವರು ಆರೆಸ್ಸೆಸ್-ಬಿಜೆಪಿ ಕೂಟದ ವಿರುದ್ಧ ಒಟ್ಟುಗೂಡುವಂತೆ ಮಾಡಿತು.

ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದಂದಿನಿಂದ, ಇದುವರೆಗೆ ಇಬ್ಬರು ಡೈರಿ ರೈತರು- ಹರ್ಯಾಣದ ನೂಹ್ ಜಿಲ್ಲೆಯ ಪೆಹ್ಲೂ ಖಾನ್ ಮತ್ತು ರಾಜಸ್ತಾನದ ಭರತಪುರ್ ಜಿಲ್ಲೆಯ ಉಮರ್‌ಖಾನ್- ಸೇರಿದಂತೆ 30 ಮಂದಿಯನ್ನು ದೇಶದ ವಿವಿಧ ಭಾಗಗಳಲ್ಲಿ ಜನಜಂಗುಳಿಯ ಹಿಂಸಾಚಾರ ಬಲಿ ತೆಗೆದುಕೊಂಡಿದೆ. ಇವೆಲ್ಲ ಸಂಘ ಪರಿವಾರದ ಸಂಘಟನೆಗಳು ‘ಗೋರಕ್ಷಣೆ’ಯ ಮರೆಯಲ್ಲಿ ಹರಿಯಬಿಟ್ಟ ಹಿಂಸಾಚಾರಗಳು ಎಂದು ಎಐಕೆಎಸ್ ಅಭಿಪ್ರಾಯ ಪಟ್ಟಿದೆ.

ಪ್ರಧಾನ ಮಂತ್ರಿಗಳು ಎಂದೂ ಈ ಕ್ರೌರ್ಯದ ವಿರುದ್ಧ ದೃಢ ನಿಲುವು ತಳೆಯಲಿಲ್ಲ, ಈ ಅಪರಾಧಿಗಳನ್ನೆಲ್ಲ ಬಂಧಿಸಿ ನಾಡಿನ ಕಾನೂನು ಪ್ರಕಾರ ಶಿಕ್ಷಿಸುವಂತೆ ಮಾಡಲಿಲ್ಲ. ಬದಲಿಗೆ ಈ ಕೊಲೆಗಡುಕರನ್ನು ರಕ್ಷಿಸುವ ಪ್ರಯತ್ನ ನಡೆದಿದೆ, ದಾದ್ರಿಯ ಮಹಮ್ಮದ್ ಅಖ್ಲಾಕ್‌ನ ಕೊಲೆ ಮಾಡಿದವರಿಗೆ ಕೊಟ್ಟಂತೆ ಸಾರ್ವಜನಿಕ ವಲಯದ ಘಟಕಗಳಲ್ಲಿ ಉದ್ಯೋಗ ಕೊಟ್ಟು ಗೌರವಿಸಲಾಗಿದೆ. ಮೋದಿ ಆಳ್ವಿಕೆಯಲ್ಲಿ ಕ್ರಿಮಿನಲ್ ಗ್ಯಾಂಗ್‌ಗಳು ಮುಸ್ಲಿಮರು ಮತ್ತು ದಲಿತರ ಮೇಲೆ ದಾಳಿ ಮಾಡುತ್ತಿವೆ. ಮೋದಿ ರಾಜ್ಯದಲ್ಲಿ ಆರೆಸ್ಸೆಸ್ ಶಾಖೆಗಳು ದೇಶವನ್ನು ಆಳುತ್ತಿವೆ ಎಂದು ಜನ ಭಾವಿಸುವಂತಾಗಿದೆ. ಇಂತಹ ‘ಪ್ರಭುತ್ವ -ಪ್ರಾಯೋಜಿತ ಕಾನೂನುಹೀನತೆ’ ಈ ದೇಶದಲ್ಲಿ ಹಿಂದೆಂದೂ ಸಂಭವಿಸಿಲ್ಲ ಎಂದು ಎಐಕೆಎಸ್ ನೆನಪಿಸಿದೆ.

ಎಲ್ಲ ರಾಜ್ಯಸರಕಾರಗಳು ಜಾನುವಾರು ಮಾರುಕಟ್ಟೆಗಳನ್ನು ಮತ್ತೆ ತೆರೆದು, ಅವುಗಳು ಮುಕ್ತವಾಗಿ ಕೆಲಸ ಮಾಡಲು ಹಾಗೂ ಜಾನುವಾರುಗಳನ್ನು ಸುರಕ್ಷಿತವಾಗಿ ಸಾಗಿಸಲು ಅನುವು ಮಾಡಿಕೊಡಬೇಕು ಎಂದು ಕೇಂದ್ರ ಸರಕಾರ ಕಟ್ಟುನಿಟ್ಟಾದ ನಿರ್ದೇಶನ ನೀಡಬೇಕು, ಎಂದು ಎಐಕೆಎಸ್ ಆಗ್ರಹಿಸಿದೆ. ಜಾನುವಾರು ವಧಯ ಮೇಲೆ ನಿಷೇಧ ಹಾಕುವ ಶಾಸನ ತಂದಿರುವ ಬಿಜೆಪಿ ನೇತೃತ್ವದ ರಾಜ್ಯ ಸರಕಾರಗಳು ಕಾನೂನನ್ನು ತಿದ್ದುಪಡಿ ಮಾಡಿ ರೈತರಿಗೆ ಮಾರುಕಟ್ಟೆ ಬೆಲೆ ಕೊಟ್ಟು ಅವರ ಅನುತ್ಪಾದಕ ಜಾನುವಾರುಗಳನ್ನು ಪಡೆಯುವಂತೆ ಮಾಡುವ ಹಾಗೂ ಬೀಡಾಡಿ ಜಾನುವಾರುಗಳು ರೈತರ ಬೆಲೆಗಳನ್ನು ನಾಶಪಡಿಸದಂತೆ ಅವನ್ನು ರಕ್ಷಿಸಲು ಸಾರ್ವಜನಿಕ ಜಾನುವಾರು ಆಶ್ರಯಗಳನ್ನು ಕೊಡಬೇಕೆನ್ನುವ ತಿದ್ದುಪಡಿಯನ್ನು ಸೇರಿಸಬೇಕು ಎಂದೂ ಎಐಕೆಎಸ್ ಆಗ್ರಹಿಸಿದೆ.

ಗೋರಕ್ಷಣೆಯ ಹೆಸರಲ್ಲಿ ಅಡ್ಡಾಡುತ್ತಿರುವ ಕ್ರಿಮಿನಲ್ ಗ್ಯಾಂಗುಗಳ ಮೇಲೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕು, ಇಂತಹ ಕ್ರಿಮಿನಲ್ ಜನಜಂಗುಳಿಗೆ ಬಲಿಯಾದ ಎಲ್ಲರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ. ಪರಿಹಾರ ನೀಡಬೇಕು ಎಂದು ಎಐಕೆಎಸ್ ಆಗ್ರಹಿಸಿದೆ.