ಪದ್ಮಾವತಿ: ಸಂವಿಧಾನಿಕ ಹಕ್ಕು ಬುಡಮೇಲು ಮಾಡುವ ಪಡೆಗಳ ವಿರುದ್ಧ ಕ್ರಮಕೈಗೊಳ್ಳಿ

Friday, 24 November 2017

ಪೂರ್ವನಿರ್ಧಾರಿತ ದಿನದಂದು ‘ಪದ್ಮಾವತಿ’ ಚಲಚ್ಚಿತ್ರದ ಬಿಡುಗಡೆಯನ್ನು ತಡೆಯಲು ಶ್ರಿರಾಜಪೂತ ಕರ್ಣಿ ಸೇನಾ ಮತ್ತಿತರ ಬಲಪಂಥೀಯ ಕಾವಲುಕೋರ ಸಂಘಟನೆಗಳು ಒಡ್ಡಿರುವ ಬೆದರಿಕೆಗಳು ಮತ್ತು ಹರಿಯಬಿಟ್ಟಿರುವ ಹಿಂಸಾಚಾರವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘ(ಎಐಡಿಡಬ್ಲ್ಯುಎ) ಬಲವಾಗಿ ಖಂಡಿಸಿದೆ. ಇಂತಹ ಸಂವಿಧಾನ ಬಾಹಿರ ಸಂಘಟನೆಗಳು ನಡೆಸುತ್ತಿರುವ ‘ಗೂಂಡಾ ರಾಜ್ಯ’ದ ಸಮಾನಾಂತರ ವ್ಯವಸ್ಥೆಗೆ ಸಂವಿಧಾನಾತ್ಮಕವಾಗಿ ಚುನಾಯಿಸಲ್ಪಟ್ಟ ರಾಜ್ಯಸರಕಾರಗಳು ಪರಮಾನಂದದಿಂದ ಬಲಿ ಬೀಳುತ್ತಿರುವುದು ಇದನ್ನು ಇನ್ನಷ್ಟು ಉಲ್ಬಣಗೊಳಿಸುತ್ತಿದೆ ಎಂದು ಅದು ಖೇದ ವ್ಯಕ್ತಪಡಿಸಿದೆ.

ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ಥಾನ ಮತ್ತು ಪಂಜಾಬಿನ ರಾಜ್ಯಸರಕಾರಗಳು ಕರ್ಣಿ ಸೇನಾ ಸೂಚಿಸಿರುವ ಬದಲಾವಣೆಗಳನ್ನು ಒಳಗೊಳ್ಳದೆ ಈ ಚಿತ್ರದ ಪ್ರದರ್ಶನಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸಾರಿರುವುದು ಅತ್ಯಂತ ಆತಂಕದ ಸಂಗತಿ. ಸುಪ್ರಿಂ ಕೋರ್ಟ್ ಕೂಡ ಈ ಚಿತ್ರದ ಬಿಡುಗಡೆಯನ್ನು ನಿಲ್ಲಿಸಲು ನಿರಾಕರಿಸಿ ಈ ವಿಷಯದಲ್ಲಿ ತನ್ನ ತೀರ್ಮಾನವನ್ನು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ  ತಿಳಯಪಡಿಸಬೇಕು ಎಂದು ನಿರ್ದೇಶನ ನೀಡಿರುವಾಗ ಇಂತಹ ಕಾನೂನುಬಾಹಿರ ಮತ್ತು ಅಸಂವಿಧಾನಿಕ ಘೋಷಣೆಗಳು ಬಂದಿವೆ ಎಂಬ ಸಂಗತಿಯತ್ತ ಎಐಡಿಡಬ್ಲ್ಯುಎ ಗಮನ ಸೆಳೆದಿದೆ.

ಪಿತೃಪ್ರಧಾನ ವ್ಯವಸ್ಥೆಯನ್ನು ಬಲಪಡಿಸುವ ಪ್ರಯತ್ನ

‘ಪದ್ಮಾವತಿ’ ಒಂದು ಕಾಲ್ಪನಿಕ ಪೌರಾಣಿಕ ಪಾತ್ರ, ಇಂತಹ ಒಬ್ಬ ಮಹಿಳೆ ನಿಜವಾಗಿಯೂ ಇದ್ದಳೇ ಎಂದು ದೇಶದ ಪ್ರತಿಷ್ಠಿತ ಇತಿಹಾಸಕಾರರು ಪ್ರಶ್ನಿಸುತ್ತಾರೆ. ನಿಜ ಹೇಳಬೇಕೆಂದರೆ ‘ಪದ್ಮಾವತಿ’ಯ ಚಿತ್ರಣ ಹಲವು ಹಂತಗಳು ಮತ್ತು ನಿರೂಪಣೆಗಳ ಮೂಲಕ ಹಾದು ಬಂದಿದೆ. ಸಮಯ ಕಳೆದ ಹಾಗೆ ಇದು ರಜಪೂತರ ಈ ಕ್ಷತ್ರಿಯ ರಾಜಪ್ರಭುತ್ವ ವರ್ಗ ತನ್ನ ಆಳ್ವಿಕೆಗೆ ಒಳಪಟ್ಟವರ ಮೇಲೆ ಯಜಮಾನಿಕೆ ಮತ್ತು ಹತೋಟಿಯನ್ನು ಕಾಯ್ದುಕೊಳ್ಳುವುದಕ್ಕೆಂದೇ ರೂಪುಗೊಂಡ ಪಾಳೆಯಗಾರೀ ಮತ್ತು ಪಿತೃಪ್ರಧಾನ ಕಲ್ಪನೆಗಳನ್ನು ಬಿಂಬಿಸಲಾರಂಭಿಸಿತು.

‘ಹಿಂದುತ್ವ’ದ ಕಲ್ಪನೆಯಲ್ಲಿ ‘ಸ್ರೀತ್ವ’ ಎಂಬುದು ರಾಷ್ಟ್ರದ ಗೌರವದೊಂದಿಗೆ ತಳುಕು ಹಾಕಿಕೊಂಡಿದೆ. ಆದ್ದರಿಂದ ಇಂತಹ ಗುಂಪುಗಳ  ‘ಪದ್ಮಾವತಿ’ ಕುರಿತ ಚಿತ್ರಣ ಇಂತಹ ಸಂಪ್ರದಾಯಶರಣ ‘ಸ್ರೀತ್ವ’ವನ್ನು ಬಲಪಡಿಸುವ ರಾಷ್ಟ್ರತ್ವ ಮತ್ತು ನೈತಿಕತೆಯನ್ನು ಪ್ರೊತ್ಸಾಹಿಸುತ್ತಿದ್ದರೆ  ಅದರಲ್ಲಿ ಆಶ್ಚರ್ಯವೇನಿಲ್ಲ. ಇಂತಹ ಪಿತೃಪ್ರಧಾನ ವ್ಯವಸ್ಥೆಯ ಹತೋಟಿಯನ್ನು ಬಲಪಡಿಸುವ ಪ್ರಯತ್ನಗಳನ್ನು ಎಐಡಿಡಬ್ಲ್ಯುಎ ವಿರೋಧಿಸುತ್ತಲೇ ಬಂದಿದೆ. ಆದ್ದರಿಂದ ಆಯ್ಕೆಯ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿಯ ಬಹುತ್ವದ ಆಂದೋಲನಗಳ ಪರವಾಗಿ ಅದು ನಿಲ್ಲುತ್ತದೆ ಎಂದು ಈ ಕುರಿತ ಎಐಡಿಡಬ್ಲ್ಯುಎ ಹೇಳಿಕೆ ಸ್ಪಷ್ಟಪಡಿಸಿದೆ.

ಈ ಹಿನ್ನೆಲೆಯಲ್ಲಿ ಕರ್ಣಿ ಸೇನಾದ ಪ್ರಸಕ್ತ ಕೃತ್ಯಗಳು ಮತ್ತು ಅದಕ್ಕೆ ಬಿಜೆಪಿಯ ಚುನಾಯಿತ ಶಾಸಕರು ಮತ್ತು ಮಂತ್ರಿಗಳಿಂದ ಸಿಕ್ಕಿರುವ ಬೆಂಬಲ ಆಳುವ ವ್ಯವಸ್ಥೆ ಪ್ರಸಕ್ತ ರಾಜಕೀಯದಲ್ಲಿ ತನ್ನ ಪ್ರಾಬಲ್ಯವನ್ನು ವಿಸ್ತರಿಸಲು ಮಹಿಳಾ-ವಿರೋಧಿ ಮತ್ತು ಮತ್ತು ಮೇಲ್ಜಾತಿ ಸಂಘಟನೆಗಳೊಂದಿಗೆ ಹೇಗೆ ರಾಜಿ ಮಾಡಿಕೊಳ್ಳುತ್ತಿದೆ ಎಂಬುದನ್ನು ಎತ್ತಿ ತೋರಿದೆ ಎಂದು ಅಭಿಪ್ರಾಯ ಪಟ್ಟಿರುವ ಎಐಡಿಡಬ್ಲ್ಯುಎ , ಈ ಪ್ರಕ್ರಿಯೆಯಲ್ಲಿ ಅವರು ಚಿತ್ರದ ನಿರ್ದೇಶಕ ಮತ್ತು ಈ ಚಿತ್ರ ತಯಾರಿಕೆಯಲ್ಲಿ ಭಾಗವಹಿಸಿದ ನಟ-ನಟಿಯರ ಮೇಲೆ ದುಷ್ಟ ದಾಳಿಯನ್ನು ಹರಿಯಬಿಟ್ಟಿದ್ದಾರೆ; ಕಾಲ್ಪನಿಕ ಚಾರಿತ್ರ್ಯವಂತೆ (ಪದ್ಮಾವತಿ)ಗೆ ತದ್ವಿರುದ್ಧವಾಗಿ “ದುಡಿಯುವ ಮಹಿಳೆ”(ಇಲ್ಲಿ ಪದ್ಮಾವತಿ ಪಾತ್ರ ಮಾಡುವ ನಟಿ)ಯನ್ನು  “ಕೆಟ್ಟವಳು ಮತ್ತು ಚಾರಿತ್ರ್ಯಹೀನೆ” ಎಂದು ಬಿಂಬಿಸಲಾಗುತ್ತಿದೆ. ಹೀಗೆ ಮಾಡುವಾಗ ಅವರು ನಾಯಕ ನಟಿಯ ಗಂಭೀರ ಚಾರಿತ್ರ್ಯಹತ್ಯೆ ಮಾಡುತ್ತಿರುವುದನ್ನು, ಆಕೆಯ ಮೂಗು ಕೊಯ್ಯುವ ಮತ್ತು ಚಿತ್ರದ ನಟ-ನಟಿಯರೂ ಸೇರಿದಂತೆ ಚಿತ್ರತಂಡಕ್ಕೆ ಕೊಲೆ ಬೆದರಿಕೆ ಹಾಕುತ್ತಿರುವುದನ್ನು ಎಐಡಿಡಬ್ಲ್ಯುಎ ಬಲವಾಗಿ ಖಂಡಿಸಿದೆ.

ಮೇಲ್ಜಾತಿ ವೋಟ್‌ಬ್ಯಾಂಕ್

ಈ ಇಡೀ ವಿವಾದವನ್ನು ಆಳುವ ಪಕ್ಷ ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಜನಗಳ ಗಮನವನ್ನು ತನ್ನ ವಿಫಲತೆಗಳಿಂದ ಬೇರೆಡೆಗೆ ತಿರುಗಿಸಲು ಬಳಸುತ್ತಿದೆ ಎಂದೂ ಎಐಡಿಡಬ್ಲ್ಯುಎ ಅಭಿಪ್ರಾಯ ಪಟ್ಟಿದೆ. ಈ ಪ್ರತಿಭಟನೆಗಳು ದೇಶದ ಕಾರ್ಮಿಕರು ಮತ್ತು ರೈತರು ಕೇಂದ್ರ ಮತ್ತು ರಾಜ್ಯ ಸರಕಾರಗಳ ನವ-ಉದಾರವಾದಿ ಧೋರಣೆಗಳ ವಿರುದ್ಧ ಬಂಡೆದ್ದಿರುವ ಸಂದರ್ಭದಲ್ಲಿ ನಡೆಯುತ್ತಿವೆ ಎಂಬುದನ್ನು ಗಮನಿಸಬೇಕು ಎಂದಿರುವ ಅದು ಚುನಾವಣೆಗಳ ಸಮಯದಲ್ಲಿ ಬಿಜೆಪಿ ಮಾಡಬೇಕೆಂದಿರುವ ಕೋಮುವಾದಿ ಧ್ರುವೀಕರಣದ ಬುನಾದಿಯಾಗಿ ಮೇಲ್ಜಾತಿ ಹಿಂದೂ ‘ವೋಟ್ ಬ್ಯಾಂಕ್’ನ್ನು ಉಳಿಸಿಕೊಳ್ಳುವ ಗುರಿಯಿಟ್ಟುಕೊಂಡು ಇದನ್ನು ಮಾಡುತ್ತಿದೆ  ಎಂದು ವಿಶ್ಲೇಷಿಸಿದೆ. ತಾನೊಂದು ಮಹತ್ವದ ‘ವೋಟ್ ಬ್ಯಾಂಕ್’, ತನ್ನನ್ನು ಉಪೇಕ್ಷಿಸಲು ಸಾಧ್ಯವಿಲ್ಲ ಎಂದು ಕರ್ಣಿ ಸೇನಾ ಈಗಾಗಲೇ ಬಿಜೆಪಿಗೆ ನೆನಪಿಸಿದೆ ಎಂಬ ಸಂಗತಿಯತ್ತವೂ ಅದು ಗಮನ ಸೆಳೆದಿದೆ.

ಈ ಬಲಪಂಥೀಯ ಶಕ್ತಿಗಳು ಹರಿಯಬಿಟ್ಟಿರುವ ಈ ದುಷ್ಟ ಪ್ರವೃತ್ತಿಗಳ ವಿರುದ್ಧ ಸಾರ್ವಜನಿಕ ಮತ್ತು ರಾಜಕೀಯ ಒತ್ತಡಗಳನ್ನು ತರಬೇಕು, ಕಾನೂನುಬಾಹಿರ ಬೆದರಿಕೆಗಳನ್ನು ಹಾಕುತ್ತಿರುವವರನ್ನು ಮತ್ತು ಚಿತ್ರದ ಬಿಡುಗಡೆಗೆ ಅಡ್ಡಿಪಡಿಸುತ್ತಿರುವುದಕ್ಕೆ ಕಾರಣರಾದವರನ್ನು ಶಿಕ್ಷಿಸಲು ಕೂಡ ಸಾರ್ವಜನಿಕ ಮತ್ತು ರಾಜಕೀಯ ಒತ್ತಡಗಳನ್ನು ಕಟ್ಟಬೇಕು ಎಂದು ಎಐಡಿಡಬ್ಲ್ಯುಎ ಎಲ್ಲ ಪ್ರಗತಿಪರ ಮತ್ತು ಪ್ರಜಾಪ್ರಭುತ್ವ ಆಂದೋಲನಗಳಿಗೆ ಕರೆ ನೀಡಿದೆ.