ಸೋವಿಯೆಟ್ ಒಕ್ಕೂಟದ ಹತ್ತು ಅದ್ಭುತಗಳು

ಸಂಪುಟ: 
11
ಸಂಚಿಕೆ: 
47
Sunday, 12 November 2017

ಈ ವಾರ ನೂರು ವರ್ಷಗಳ ಹಿಂದೆ ನವೆಂಬರ್ 7 ರಂದು ನಡೆದ ಮೊದಲ ಸಮಾಜವಾದಿ ಕ್ರಾಂತಿ ನೆನಪು ಮಾಡಿಕೊಳ್ಳುವ ಸಮಯ. ಈ ದಿನ ನೆನಪಿಸಿಕೊಳ್ಳುವುದು ಅದರ ಚಾರಿತ್ರಿಕ ಮಹತ್ವಕ್ಕೆ ಮಾತ್ರವಲ್ಲ. 1917ರ ಕ್ರಾಂತಿಯ ನಂತರ ಸ್ಥಾಪಿತವಾದ ಸೋವಿಯೆಟ್ ಒಕ್ಕೂಟದ ಸಾಧನೆಗಳಿಗಾಗಿ, ಅವು ಜಗತ್ತಿನ ದುಡಿಯುವ ಜನತೆಯ ಜೀವನದ ಮೇಲೆ ಬೀರಿದ ಇನ್ನೂ ಬೀರುತ್ತಿರುವ ಪರಿಣಾಮಗಳಿಗಾಗಿ.  ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿಗೆ ಸೆಡ್ಡು ಹೊಡೆದು ಅವುಗಳ ಸತತ ದಾಳಿಗಳ ನಡುವೆ 74 ವರ್ಷಗಳ ಕಾಲ ಬೆಳೆದು ತೋರಿಸಿದ 10 ಪ್ರಮುಖ ಅದ್ಭುತ ಸಾಧನೆಗಳಿಗಾಗಿ, ಜಗತ್ತಿನ ಜನತೆಗೆ ಕೊಟ್ಟ  ಕೊಡುಗೆಗಳಿಗಾಗಿ ನಾವು ನೆನಪಿಸಿಕೊಳ್ಳಬೇಕು. ಈ ವಾರದಿಂದ ಆರಂಭಿಸಿ ಪ್ರತಿ ವಾರ ಒಂದೆರಡು ಅದ್ಭುತಗಳನ್ನು ನೆನಪಿಸಿಕೊಳ್ಳುತ್ತಾ ಹೋಗೋಣ

ಸೋವಿಯೆಟ್ ಒಕ್ಕೂಟದ ಹತ್ತು ಅದ್ಭುತ ಸಾಧನೆಗಳು, ಜಗತ್ತಿಗೆ ಕೊಡುಗೆಗಳು ಹೀಗಿವೆ :

  1.  ದುಡಿಮೆಗಾರರ ಪರಮಾಧಿಕಾರದ ಪ್ರಭುತ್ವದ ಕಾರ್ಯ ಸಾಧ್ಯತೆ ತೋರಿಸಿದ್ದು
  2.   ಎಲ್ಲರಿಗೂ ಶಿಕ್ಷಣ ಮತ್ತು ಉದ್ಯೋಗ - ಮೂಲಭೂತ ಹಕ್ಕಾಗಿ ಜಾರಿ
  3.   ಎಲ್ಲರಿಗೂ ಆರೋಗ್ಯದ ಮೂಲಭೂತ ಹಕ್ಕು(ಸಾರ್ವತ್ರಿಕ ಸಮಗ್ರ ಉಚಿತ ಆರೋಗ್ಯ ಸೇವೆ ಜಾರಿ)
  4.   ಮಹಿಳಾ ಸಮಾನತೆಗೆ ಸಮಗ್ರ ಸಾಮಾಜಿಕ-ಆರ್ಥಿಕ ಬುನಾದಿ
  5.   ಸಮೃದ್ಧ ಸಮಸಮಾಜದ ಯೋಜನಾಬದ್ಧ ಸಮಗ್ರ ಬೆಳವಣಿಗೆ
  6.   ಹಿಂದುಳಿದ ದೇಶದ ಕ್ಷಿಪ್ರ ಮತ್ತು ಸತತ ಕೈಗಾರಿಕೀಕರಣ
  7.   ಉಳುವವನೇ ಹೊಲದೊಡೆಯನಾದ ಭೂ-ಸುಧಾರಣೆ, ಕೃಷಿಯ ಸಮಗ್ರ ಅಭಿವೃದ್ಧಿ
  8.   ಮಾನವ ಕಲ್ಯಾಣಕ್ಕಾಗಿ ವಿಜ್ಞಾನ-ತಂತ್ರಜ್ಞಾನದ ಯೋಜಿತ ಬೆಳವಣಿಗೆ
  9.   ಬಹು ಭಾಷೆಗಳ ಧರ್ಮಗಳ ಸಂಸ್ಕೃತಿಗಳ ರಾಷ್ಟ್ರೀಯತೆಗಳ ಜನ ಒಟ್ಟಾಗಿ ಸಮನಾಗಿ ಬದುಕುವ ಒಕ್ಕೂಟ ದೇಶದ ಮಾದರಿ
  10.   ಫ್ಯಾಸಿಸಂ-ಸಾಮ್ರಾಜ್ಯಶಾಹಿ ವಿರುದ್ಧ ಸಮರದಲ್ಲಿ, ವಿಶ್ವಶಾಂತಿ ರಕ್ಷಣೆಗೆ ಮುಂಚೂಣಿ ಪಾತ್ರ

ಸೋವಿಯೆಟ್ ಸರಕಾರ ಜನತೆಯನ್ನು ಈ ಎಲ್ಲಾ ಸಾಧನೆಗಳಲ್ಲಿ ಎಲ್ಲಾ ನಾಗರಿಕರನ್ನು ಒಳಗೊಳ್ಳಲು ನಡೆಸಿದ ಪ್ರಚಾರದಲ್ಲಿ ಪೋಸ್ಟರ್ ಗಳ ಪಾತ್ರ ದೊಡ್ಡದು. ವಿಶೇಷವಾಗಿ ಸಾಕ್ಷರತೆ ಇನ್ನೂ ವ್ಯಾಪಕವಾಗಿರದ ಮೊದಲ ದಶಕಗಳಲ್ಲಿ. ಆದ್ದರಿಂದ ಪ್ರತಿಯೊಂದು ಅದ್ಭುತ ಸಾಧನೆ ಅದಕ್ಕೆ ಸಂಬಂಧಿತ ಪೋಸ್ಟರ್ ಜತೆ ಕೊಡಲಾಗುತ್ತದೆ.

ಜಗತ್ತಿನಲ್ಲೇ ಮೊದಲ ಬಾರಿಗೆ ಶೋಷಕ ವರ್ಗ ಅಲ್ಲದ ಒಂದು ವರ್ಗದ ಪ್ರಭುತ್ವ ಸ್ಥಾಪನೆ ಮತ್ತು ದುಡಿಮೆಗಾರರ ಪರಮಾಧಿಕಾರದ ಪ್ರಭುತ್ವದ ಕಾರ್ಯ ಸಾಧ್ಯತೆ ತೋರಿಸಿದ್ದು ಮತ್ತು ಅದಕ್ಕೊಂದು ಮಾದರಿ ರೂಪಿಸಿದ್ದು ಸೋವಿಯೆಟ್ ಒಕ್ಕೂಟದ ಅದ್ಭುತ ಸಾಧನೆಗಳಲ್ಲೇ ಪ್ರಮುಖವಾದದ್ದು. ಕಾರ್ಮಿಕರ ರೈತರ ಸೈನಿಕರ ಸೋವಿಯೆಟ್ (ಪಂಚಾಯತುಗಳು ಎನ್ನಬಹುದು) ಗಳಿಂದಲೇ ನಡೆದ ಕ್ರಾಂತಿಯಿಂದಲೇ ಹೊಮ್ಮಿದ ಹೊಸ ಕಾರ್ಮಿಕರ ಪ್ರಭುತ್ವ ಇದಾಗಿತ್ತು. ಕಾರ್ಖಾನೆ, ಕೃಷಿ ಫಾರ್ಮು, ಗಣಿಗಳು ಮತ್ತು ಎಲ್ಲಾ ಕೆಲಸದ ಸ್ಥಳಗಳಲ್ಲಿ ದುಡಿಮೆಗಾರರ ಚುನಾಯಿತ ಪ್ರತಿನಿಧಿಗಳಿಂದ ಸ್ವಯಮಾಡಳಿತ; ಯೋಜನೆ ಅದರ ಜಾರಿಯಲ್ಲಿ ಪಾತ್ರ; ಶಾಲೆ, ಆಸ್ಪತ್ರೆ ಮತ್ತಿತರ ಸಾಮಾಜಿಕ ಸೇವಾ ಸಂಘಟನೆಗಳ ಪ್ರಜಾಸತ್ತಾತ್ಮಕ ನಿರ್ವಹಣೆ; ಸ್ಥಳೀಯ ಸರಕಾರದಿಂದ ಹಿಡಿದು ಉನ್ನತ ಮಟ್ಟದ ವರೆಗೆ ಜನತೆಯ ಸೋವಿಯೆಟ್ ಗಳಿಂದ ಆಡಳಿತ; - ಗರಿಷ್ಟ ದುಡಿಮೆಗಾರರು ಸತತವಾಗಿ ಪಾಲುಗೊಳ್ಳುವ ಸಮಾಜವಾದಿ ಪ್ರಜಾಪ್ರಭುತ್ವದ ಈ ಹೊಸ ಮಾದರಿಯನ್ನು ಸೋವಿಯೆಟ್ ಒಕ್ಕೂಟ ತೋರಿಸಿಕೊಟ್ಟಿತು. ಜಗತ್ತಿನಲ್ಲೆ ಮೊದಲ ಬಾರಿಗೆ ದುಡಿಮೆಗಾರರಿಗೆ ಒಂದು ಹಕ್ಕಾಗಿ - ಕೆಲಸದ ಅವಧಿಯ ಮಿತಿ, ಕೌಶಲ್ಯ ಹೆಚ್ಚಿಸಿಕೊಳ್ಳಲು ತರಬೇತಿ, ಇಡೀ ಕುಟುಂಬಕ್ಕೆ ಉಚಿತ ವಸತಿ, ಆರೋಗ್ಯ ಸೇವೆ, ಮಕ್ಕಳಿಗೆ ಉಚಿತ ಶಿಕ್ಷಣ, ಉಚಿತ ಬಿಡುವು, ಆಟೋಟ, ಪ್ರವಾಸ  ಮುಂತಾದ ಕಲ್ಯಾಣ ಯೋಜನೆಗಳು; ನಿವೃತ್ತಿಯಾದ ಮೇಲೂ ಎಲ್ಲಾ ಸವಲತ್ತುಗಳು ಸೇರಿದ ಸಾಮಾಜಿಕ ಭದ್ರತೆ ಕ್ರಮಗಳನ್ನು - ಈ ಕಾರ್ಮಿಕರ ಪ್ರಭುತ್ವ ಜಾರಿ ಮಾಡಿತು.

ದುಡಿಮೆಗಾರರ ಹಕ್ಕುಗಳಾಗಿ ಜಾರಿಯಾದ ಈ ಕ್ರಮಗಳು ಇಡೀ ಜಗತ್ತಿನ ದುಡಿಮೆಗಾರರಿಗೆ ಈ ಹಕ್ಕುಗಳಿಗೆ ಹೋರಾಡಲು ಸ್ಫೂರ್ತಿ ಒದಗಿಸಿತು. ಅವುಗಳಲ್ಲಿ ಹಲವನ್ನು ಜಾರಿ ಮಾಡಿಸಲು ಬಂಡವಾಳಶಾಹಿ ವರ್ಗ ಮತ್ತು ಪ್ರಭುತ್ವಗಳ ಮೇಲೆ ಒತ್ತಡ ಹಾಕಿತು.  ಎರಡನೇ ಮಹಾಯುದ್ಧದ ನಂತರ ಅದರಲ್ಲೂ ಪೂರ್ವ ಯುರೋಪಿನಲ್ಲಿ ಕಾರ್ಮಿಕರ ಪ್ರಭುತ್ವಗಳ ಉದಯ ಮತ್ತು “ಕಮ್ಯುನಿಸಂನ ಪೆಡಂಭೂತ” ಪಶ್ಚಿಮ ಯುರೋಪಿಗೂ ಹಬ್ಬುವ ಭಯದಿಂದಾಗಿಯೇ ಸೋವಿಯೆಟ್ ಒಕ್ಕೂಟ ಕೊಟ್ಟ ಸವಲತ್ತುಗಳು ಕಲ್ಯಾಣ ಯೋಜನೆಗಳು ಮತ್ತು ಸಾಮಾಜಿಕ ಭದ್ರತಾ ಕ್ರಮಗಳನ್ನು ಬಂಡವಾಳಶಾಹಿ ದೇಶಗಳಲ್ಲೂ (ವಿಶೇóಷವಾಗಿ ಕಾರ್ಮಿಕರ ಚಳುವಳಿಗಳು ಪ್ರಬಲವಾಗಿದ್ದ ದೇಶಗಳಲ್ಲಿ) ಸಾರ್ವತ್ರಿಕವಲ್ಲದಿದ್ದರೂ,, ಸಮಗ್ರವಾಗಿ ಅಲ್ಲದಿದ್ದರೂ ಸಾಕಷ್ಟು ವ್ಯಾಪಕವಾಗಿ ಜಾರಿ ಮಾಡಬೇಕಾಯಿತು. ಬಾರತ ಸೇರಿದಂತೆ ಮೂರನೇ ಜಗತ್ತಿನ ದೇಶಗಳಲ್ಲೂ ಸಹ ಇವೆಲ್ಲದರ ಪ್ರಭಾವದಿಂದ ಅವು ಜಾರಿಗೆ ಬಂದವು. ಇಡೀ ಜಗತ್ತಿನ ಕಾರ್ಮಿಕರು ಇಂದೂ ಅನುಭವಿಸುತ್ತಿರುವ ಹಕ್ಕುಗಳು, ಸವಲತ್ತುಗಳು, ಕಲ್ಯಾಣ ಯೋಜನೆಗಳು, ಸಾಮಾಜಿಕ ಭದ್ರತಾ ಕ್ರಮಗಳ ಹಿಂದೆ ಸೋವಿಯೆಟ್ ಒಕ್ಕೂಟದ ದೊಡ್ಡ ಪಾಲು ಇದೆ ಎಂದು ಮರೆಯಬಾರದು.

ಉಚಿತ ಶಿಕ್ಷಣ ಮತ್ತು ಉದ್ಯೋಗವನ್ನು ಎಲ್ಲರಿಗೂ ಒದಗಿಸಿದ, ಶಿಕ್ಷಣ ಮತ್ತು ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕಾಗಿಸಿದ, ಹಾಗೂ ಅದನ್ನು ಹಲವು ದಶಕಗಳ ಕಾಲ ಪೂರ್ಣವಾಗಿ ಜಾರಿ ಮಾಡಿದ ಮೊದಲ ದೇಶ ಸೋವಿಯೆಟ್ ಒಕ್ಕೂಟ. 1936ರ ಸೋವಿಯೆಟ್ ಸಂವಿಧಾನದಲ್ಲಿ  ಜಗತ್ತಿನಲ್ಲೇ ಮೊದಲ ಬಾರಿಗೆ ಶಿಕ್ಷಣ ಮತ್ತು ಉದ್ಯೋಗದ ಹಕ್ಕನ್ನು ಮೂಲಭೂತ ಹಕ್ಕಾಗಿಸಲಾಯಿತು. ಇದು ಮುಂದೆ ಸಮಾಜವಾದಿ ದೇಶಗಳಿಗೆ ಮಾದರಿಯಾಯಿತು. ಅಭಿವೃದ್ಧ ಬಂಡವಾಳಶಾಹಿ ಮತ್ತು ಮೂರನೇಯ ಜಗತ್ತಿನ ದೇಶಗಳಲ್ಲಿ ಈ ಹಕ್ಕಿಗೆ ಹೋರಾಟಕ್ಕೆ ಸ್ಫೂರ್ತಿಯಾಯಿತು. ಈ ದೇಶಗಳಲ್ಲೂ ಅಷ್ಟು ಸಾರ್ವತ್ರಿಕ, ಸಮಗ್ರವಾಗಿ ಮತ್ತು ಮೂಲಭೂತ ಹಕ್ಕಾಗಿ ಅಲ್ಲದಿದ್ದರೂ ಆಂಶಿಕವಾಗಿಯಾದರೂ ಜಾರಿ ಮಾಡುವ ಒತ್ತಾಯ ಹೇರಿತು. ಹೆಚ್ಚಿನ ದೇಶಗಳಲ್ಲಿ ಸಾರ್ವತ್ರಿಕ ಉಚಿತ ಕಡ್ಡಾಯ ಶಾಲಾ ಶಿಕ್ಷಣದ ಗುರಿ  ಹಾಗೂ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ಸೋವಿಯೆಟ್ ಒಕ್ಕೂಟದ ಸಾಧನೆ ತಂದ ಒತ್ತಡದ ನೇರ ಫಲ. “ಅತ್ಯುತ್ತಮ ಶಿಕ್ಷಣ ವ್ಯವಸ್ಥೆ ಸೊವಿಯೆಟ್ ಗಳ ಅತ್ಯಂತ ಸಶಕ್ತ ಅಸ್ತ್ರ” ಎಂದು ಪಾಶ್ಚಿಮಾತ್ಯ ನಾಯಕರೊಬ್ಬರು ಉದ್ಗರಿಸಿದ್ದರಂತೆ. ಸೋವಿಯೆಟ್ ಶಿಕ್ಷಣ ಅದರಲ್ಲೂ ಗಣಿತ ಮತ್ತು ವಿಜ್ಞಾನ ಶಿಕ್ಷಣದಲ್ಲಿ ಸಾಧನೆ ಇಂದಿಗೂ ಜಗದ್ವಿಖ್ಯಾತ, ಮತ್ತು ಬಹಳ ಮಟ್ಟಿಗೆ ಇಂದಿಗೂ ಉಳಿದುಕೊಂಡಿದೆ.

ಕ್ರಾಂತಿ-ಪೂರ್ವ ಝಾರನ ರಶ್ಯಾದಲ್ಲಿ ಸಾಕ್ಷರತೆ ಪುರುಷರಲ್ಲಿ ಶೇ. 37.9 ಮತ್ತು ಮಹಿಳೆಯರಲ್ಲಿ ಶೇ. 12.5 ಇತ್ತು. ಕ್ರಾಂತಿ ಅತ್ಯುತ್ತಮ ಶಾಲೆ ಅಂತಾರೆ. ಕ್ರಾಂತಿ ರೈತ ಕಾರ್ಮಿಕರಲ್ಲಿ ಮಹಿಳೆಯರಲ್ಲಿ ವಿಜ್ಞಾನದ ಹಸಿವು ಹುಟ್ಟಿಸಿತ್ತು. ಕ್ರಾಂತಿಯ ನಂತರ ಬೊಲ್ಶೆವಿಕರ ಅತಿ ದೊಡ್ಡ ಆದ್ಯತೆ ಸಾಕ್ಷರತೆಯಾಗಿತ್ತು. ಹೊಸ “ಆಳುವ ವರ್ಗ”ವಾದ ರೈತ-ಕಾರ್ಮಿಕರ ರಾಜಕೀಯ ಪ್ರಜ್ಞೆ ಸಾಕ್ಷರತೆ ಇಲ್ಲದೆ ಸಾಧ್ಯವಿಲ್ಲ ಎಂದು ಬೊಲ್ಶೆವಿಕರಿಗೆ ತಿಳಿದಿತ್ತು.

ಸೋವಿಯೆಟ್ ಸರಕಾರ 1918ರಲ್ಲಿ ಸಾರ್ವತ್ರಿಕ ಕಡ್ಡಾಯ ಉಚಿತ ಶಿಕ್ಷಣ ತನ್ನ ಗುರಿ ಎಂದಿತು. 1919ರಲ್ಲಿ “ನಿರಕ್ಷರತೆಯ ನಿರ್ಮೂಲನ” ಆಂದೋಲನ ಆರಂಭಿಸಿತು. ನಿಗದಿತ ಪ್ರದೇಶವಾರು ವಲಯವಾರು ಕಾಲಮಿತಿಯೊಳಗೆ 8ರಿಂದ 50 ವಯಸ್ಸಿನ ಎಲ್ಲರ ಸಾಕ್ಷರತೆಯ ಯೋಜನೆ ಹಾಕಲಾಯಿತು. ಸಾಕ್ಷರತೆಗೆ ಶಿಕ್ಷಕರ ಮತ್ತು ಸ್ವಯಂಸೇವಕರ ಪಡೆಯನ್ನು ಯುದ್ಧೋಪಾದಿಯಲ್ಲಿ ರಚಿಸಲಾಯಿತು. ಕಾರ್ಮಿಕರಿಗೆ ಅತಿ ಹೆಚ್ಚಿನ ವೇಗವಾದ ಗುರಿಗಳನ್ನು ಕೊಡಲಾಯಿತು. 1924ರ ಹೊತ್ತಿಗೆ ಹೆಚ್ಚಿನ ಆದ್ಯತೆಯ ರೈಲ್ವೇ ಮತ್ತಿತರ ಕಾರ್ಮಿಕರ ಮತ್ತು ಕೆಂಪು ಸೈನಿಕರ ಪೂರ್ಣ ಸಾಕ್ಷರತೆ ಸಾಧಿಸಲಾಯಿತು. 1926ರ ಹೊತ್ತಿಗೆ ಸಾಕ್ಷರತೆ ಶೇ. 51ಕ್ಕೆ   (ಪುರುಷರಲ್ಲಿ ಶೇ. 66.5 ಮತ್ತು ಮಹಿಳೆಯರಲ್ಲಿ ಶೇ. 37.2), 1939ರ ಹೊತ್ತಿಗೆ ಶೇ. 89.7 ಕ್ಕೆ(ಪುರುಷರಲ್ಲಿ ಶೇ. 90.8ಮತ್ತು ಮಹಿಳೆಯರಲ್ಲಿ ಶೇ. 72.5)  ಏರಿತು. ಈ ಅವಧಿಯಲ್ಲಿ 5 ಕೋಟಿ ನಿರಕ್ಷರಿಗಳು, 4 ಕೋಟಿ ಅರೆ-ಸಾಕ್ಷರರು ಸಾಕ್ಷರರಾದರು.  ಮಧ್ಯೆ ಎರಡನೇ ಮಹಾಯುದ್ಧದಿಂದಾಗಿ ಪೂರ್ಣ ಸಾಕ್ಷರತೆಯ ಗುರಿಯ ಜಾರಿ ವಿಳಂಬವಾಗದರೂ 1950ರ ಹೊತ್ತಿಗೆ ಸಾಧಿಸಲಾಯಿತು. ಯುರೋಪಿನ ದೇಶಗಳು ಶತಮಾನಗಳ ಕಾಲ ಸಾಧಿಸಿದ್ದನ್ನು ದಶಕಗಳಲ್ಲಿ ಸಾಧಿಸಿದ್ದು ಸೋವಿಯೆಟ್ ಶಿಕ್ಷಣದ ಒಂದು ಅದ್ಭುತ.

ಸಾರ್ವತ್ರಿಕ ಕಡ್ಡಾಯ ಉಚಿತ ಶಿಕ್ಷಣದ ಜಾರಿ, ಯೋಜಿತ ಕ್ಷಿಪ್ರ ಕೈಗಾರಿಕಾ, ಕೃಷಿ, ವಿಜ್ಞಾನ- ತಂತ್ರಜ್ಞಾನ ಬಳಕೆ ಮತ್ತು ಬೆಳವಣಿಗೆಗಳಿಂದ ಎಲ್ಲರಿಗೂ ಉದ್ಯೋಗವನ್ನು 1930ರ ದಶಕದ ಮಧ್ಯಭಾಗದ ಹೊತ್ತಿಗೆ ಸಾಧಿಸಲಾಯಿತು.  1936ರಲ್ಲಿ ಕೊನೆಯ ಉದ್ಯೋಗ ವಿನಿಮಯ ಕೇಂದ್ರಗಳನ್ನು ಮುಚ್ಚಲಾಯಿತು. ಸೋವಿಯೆಟ್ ಒಕ್ಕೂಟ ಇದ್ದ 74 ವರ್ಷಗಳಲ್ಲೂ ಪೂರ್ಣ ಉದ್ಯೋಗ ಜಾರಿ ಯಲ್ಲಿತ್ತು.

ಮಾತೃಭಾಷೆ ಯಲ್ಲಿ (ರಶ್ಯನ್ ಅಲ್ಲದೆ ಇತರ ಭಾಷೆಗಳಲ್ಲಿ ಶಿಕ್ಷಣಕ್ಕೆ ವ್ಯವಸ್ಥೆ) ಶಿಕ್ಷಣ ಮೂಲಭೂತ ಹಕ್ಕಾಗಿ ಜಾರಿ ಮಾಡಿದ್ದು ಇನ್ನೊಂದು ಸೋವಿಯೆಟ್ ಅದ್ಭುತ.  ಜಾರಿಯ ಭಾಗವಾಗಿ ಲಿಪಿ ಇಲ್ಲದ 40 ಭಾಷೆಗಳಿಗೆ ಹೊಸ ಲಿಪಿ ರಚಿಸಲಾಯಿತು. 1924ರಲ್ಲಿ 25 ರಶ್ಯನೇತರ ಭಾಷೆಗಳಲ್ಲಿ 1934ರ ಹೊತ್ತಿಗೆ 104 ಭಾಷೆಗಳಲ್ಲಿ ಹೊಸ ಪಠ್ಯ ಪುಸ್ತಕಗಳನ್ನು ರಚಿಸಿ ಮುದ್ರಿಸಲಾಯಿತು.

1932-41 ಅವಧಿಯಲ್ಲಿ ಶಿಕ್ಷಣದಲ್ಲಿ ಹೂಡಿಕೆಯಲ್ಲಿ ತಲಾ 8 ಪಟ್ಟು ಹೆಚ್ಚಳ ಮಾಡಲಾಯಿತು. 1930ರ ದಶಕದಲ್ಲಿ ಕಡ್ಡಾಯ ಸಾರ್ವತ್ರಿಕ ಮಾಧ್ಯಮಿಕ ಶಿಕ್ಷಣ (7ನೇ ಕ್ಲಾಸಿನ ವರೆಗೆ) ಜಾರಿ ಮಾಡಲಾಯಿತು. ಮೂರನೇ ಯೊಜನೆ ಅವಧಿಯಲ್ಲಿ (1938-42) ಕಡ್ಡಾಯ ಹೈಸ್ಕೂಲ್ ಶಿಕ್ಷಣ ಜಾರಿಗೆ ಯೋಜಿಸಲಾಗಿತ್ತು. 2ನೇ ಮಹಾಯುದ್ಧದಿಂದಾಗಿ ಅದರಲ್ಲಿ ವಿಳಂಬವಾಗಿ 1950ರ ದಶಕದಲ್ಲಿ ಜಾರಿ ಮಾಡಲಾಯಿತು. 1970ರ ಹೊತ್ತಿಗೆ ರಾಷ್ಟ್ರೀಯ ಬಜೆಟಿನ ಶೆ, 12 (ಜಿಡಿಪಿಯ ಶೆ. 7) ಇತ್ತು.

ಉಚ್ಛ ಶಿಕ್ಷಣ ವ್ಯವಸ್ಥೆಯನ್ನೂ ಹಂತ ಹಂತವಾಗಿ ವಿಸ್ತರಿಸಲಾಯಿತು. ಅದೂ ಉಚಿತವಾಗಿತ್ತು. 1987ರ ಹೊತ್ತಿಗೆ 69 ವಿ.ವಿಗಳು ಸೇರಿದಂತೆ 896 ಉಚ್ಛ ಶಿಕ್ಷಣ ಸಂಸ್ಥೆಗಳು, ಅವುಗಳಲ್ಲಿ - 400 ಶಿಕ್ಷಕ-ತರಬೇತಿ, ಮೆಡಿಕಲ್, ಸಮಾಜ ವಿಜ್ಞಾನ, ಕಲಾ ಅಕಾಢೆಮಿಗಳು: 360 ವಿಜ್ಞಾನ -ತಂತಜ್ಞಾನ ಕೃಷಿ ಸಂಸ್ಥೆಗಳು ಮತ್ತು 60 ಪಾಲಿಟೆಕ್ನಿಕ್ ಗಳನ್ನು - ಸ್ಥಾಪಿಸಲಾಯಿತು. ಅವುಗಳಲ್ಲಿ ಒಟ್ಟು 50 ಲಕ್ಷ ವಿದ್ಯಾರ್ಥಿಗಳು(ಅರ್ಧ ಅರೆ-ಕಾಲಿಕ) ಅಧ್ಯಯನದಲ್ಲಿ ತೊಡಗಿದ್ದರು. ಪ್ರತಿ ವರ್ಷ 8.5 ಲಕ್ಷ ಪದವಿಧರರರು, 5 ಲಕ್ಷ ಸಂಶೋಧಕರು, 50 ಸಾವಿರ ವಿಶೇಷಜ್ಞರು ತಯಾರಾಗುತ್ತಿದ್ದರು.

“ನಿರಕ್ಷರತೆಯ ನಿರ್ಮೂಲನ” ಆಂದೋಲನದಲ್ಲಿ ಮಹಿಳೆಗೆ ಆದ್ಯತೆ ಕೊಡಲಾಗಿತ್ತು. ಶಿಕ್ಷಣದಲ್ಲಿ ಲಿಂಗ ಸಮಾನತೆಯನ್ನು 1950-60 ರ ದಶಕದ ಹೊತ್ತಿಗೆ ಸಾಧಿಸಲಾಗಿತ್ತು.  1987ರ ಹೊತ್ತಿಗೆ ಉಚ್ಛ ಶಿಕ್ಷಣದಲ್ಲಿ ಶೇ. 56 ಮಹಿಳೆಯರು (ಮೆಡಿಕಲ್ ನಲ್ಲಿ ಶೇ. 60, ಇಂಜಿನೀಯರಿಂಗ್ ಮತ್ತು ಇತರ ಕ್ಷೆತ್ರಗಳಲ್ಲಿ ಶೇ. 30-40) ಇದ್ದರು.

ಸೋವಿಯೆಟ್ ಶಿಕ್ಷಣದ ಅದ್ಭುತ ಸಾಧನೆಗಳನ್ನು ಈ ಮುಂದಿನ ಮಾಹಿತಿಯಿಂದ ತಿಳಿಯಬಹುದು - 1975ರ ಹೊತ್ತಿಗೆ ಜಗತ್ತಿನ 14 ರಲ್ಲಿ 1 ಸೋವಿಯೆಟ್ ನಾಗರಿಕ ಇದ್ದರೆ, 4 ರಲ್ಲಿ 1 ಪುಸ್ತಕ ಪ್ರಕಟಣೆ ಸೋವಿಯೆಟ್ ಒಕ್ಕೂಟದಲ್ಲಿ ಆಗುತ್ತಿತ್ತು. ಜತ್ತಿನ 4 ರಲ್ಲಿ ಒಬ್ಬ ಡಾಕ್ಟರ್, 3ರಲ್ಲಿ ಒಬ್ಬ ಸಂಶೋಧಕ ಸೋವಿಯೆಟ್ ಒಕ್ಕೂಟಕ್ಕೆ ಸೇರಿದ್ದ.

* ನಿರಕ್ಷರತೆಯ ನಿರ್ಮೂಲನ” ಕಾರ್ಯಕ್ರಮ ಆಂದೋಲನಗಳ ಪೋಸ್ಟರ್ ದೊಡ್ಡ ಪಾತ್ರ ವಹಿಸಿತ್ತು. ಹೆಚ್ಚಿನ ಇಂತಹ ಪೋಸ್ಟರ್ ಗಳಲ್ಲಿ (ಹೆಚ್ಚಾಗಿ ಬಡ ರೈತ) ಮಹಿಳೆಯ ಚಿತ್ರವನ್ನು ಉದ್ದೇಶಪೂರ್ವಕವಾಗಿ ಬಳಸಲಾಗುತ್ತಿತ್ತು. ಇಲ್ಲಿ ಕೊಟ್ಟ ಪೋಸ್ಟರ್ ನಲ್ಲಿ ಕೂಡಾ ಇದನ್ನು ಕಾಣಬಹುದು.