Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಬಿಜೆಪಿ ಪರಿವರ್ತನಾ ಯಾತ್ರೆ: “ಫ್ಲಾಪ್ ಶೋ”

ಸಂಪುಟ: 
11
ಸಂಚಿಕೆ: 
47
Sunday, 12 November 2017

ಸುಮಾರು 75 ದಿನಗಳಲ್ಲಿ ಪ್ರತಿ ದಿನ 3-4 ರಂತೆ ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳನ್ನೂ ತಲುಪುವ ಅಂದಾಜು 7,500 ಕಿ.ಮೀ.ಗಳನ್ನು ಕ್ರಮಿಸುವ ಗುರಿ ಹೊಂದಲಾಗಿದ್ದ ‘ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ” ಬಿಜೆಪಿಗೂ ರಾಜ್ಯ ರಾಜಕಾರಣಕ್ಕೂ ಒಂದು ಪ್ರಮುಖ ಬೆಳವಣಿಗೆಯಾಗಬೇಕಿತ್ತು. ಆದರೆ ನವೆಂಬರ್ 2 ರ ಉದ್ಘಾಟನಾ ಸಮಾರಂಭದಿಂದ ಹಿಡಿದು ಮೊದಲ 7 ದಿನಗಳ ಟ್ರೆಂಡ್ ನೋಡಿದರೆ ಪೂರ್ತಿ “ಫ್ಲಾಪ್ ಶೋ” ಆಗುವ ಎಲ್ಲಾ ಲಕ್ಷಣಗಳೂ ಕಾಣುತ್ತಿವೆ. ಮೊದಲ 8 ದಿನಗಳಲ್ಲಿ ತುಮಕೂರು, ಹಾಸನ, ಚಿಕ್ಕಮಗಳೂರು, ಕೊಡಗು? ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಪೂರ್ಣಗೊಂಡಿದೆ. ಹೆಚ್ಚಿನ ಕಡೆ ಯಾತ್ರೆ ಬಿಜೆಪಿ ಪರ ಸಕಾರಾತ್ಮಕ ಅಲೆ ಎಬ್ಬಿಸುವ ಬದಲು ಹಲವು ಅಧ್ವಾನಗಳ ಮೂಲಕ ನಕಾರಾತ್ಮಕವಾಗಿದೆ.

ಬೆಂಗಳೂರಿನ  ಹೊರವಲಯದಲ್ಲಿನ ತುಮಕೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಆವರಣದಲ್ಲಿ ಬೃಹತ್ ಉದ್ಘಾಟನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉದ್ಘಾಟಿಸಿದ ಈ ಸಮಾವೇಶದಲ್ಲಿ 3 ಲಕ್ಷ ಜನ ಸೇರಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಲ್ಲಿ ಅರ್ಧಕ್ಕೂ ಹೆಚ್ಚು ಖಾಲಿ ಕುರ್ಚಿಗಳು ಅಮಿತ್ ಶಾ ಮತ್ತು ಇತರ ನಾಯಕರನ್ನು ರೇಗಿಸುವಂತೆ ಅಣಕಿಸುವಂತಿದ್ದವು. ಡ್ರೋನ್ ಮೂಲಕ ತಯಾರಿಸಿದ ವಿಡಿಯೋ ಎಷ್ಟೇ ಎಡಿಟ್ ಮಾಡಿದರೂ ಸಮಾವೇಶಕ್ಕೆ ನಿರುತ್ಸಾಹದ ಪ್ರತಿಕ್ರಿಯೆಯನ್ನು ಸ್ಪಷ್ಟವಾಗಿಯೇ ಬಿಂಬಿಸಿತು.  ಬಿಜೆಪಿಯ ಮುಖವಾಣಿಯಂತೆ ವರ್ತಿಸುತ್ತಿರುವ ಹೆಚ್ಚಿನ ಕನ್ನಡ ಇಂಗ್ಲಿಷ್ ಪತ್ರಿಕೆ-ಟಿವಿ ವಾಹಿನಿಗಳೂ “ಖಾಲಿ ಕುರ್ಚಿ”ಗಳ ಬಗ್ಗೆ ವರದಿ ಮಾಡದೇ ಇರಲಾಗಲಿಲ್ಲ.

ಉದ್ಘಾಟನೆ ದಿನದಂದು ತಯಾರಿಸಲಾಗಿದ್ದ ರಾಶಿ ರಾಶಿ ಅನ್ನವನ್ನು ಚೆಲ್ಲಲಾಗಿದೆ. ಇದರ ಫೊಟೋಗಳು ಸಾಮಾಜಿ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಅಮಿತ್ ಶಾ ಮತ್ತು ಕೇಂದ್ರ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಕೆಂಡಾಮಂಡಲವಾಗಿ “ಆಂತರಿಕ ತನಿಖೆ”ಗೆ ಆಜ್ಞೆ ಮಾಡಿದ್ದರು. ಬೆಂಗಳೂರು ಉದ್ಘಾಟನಾ ಸಮಾವೇಶದಲ್ಲಿ ದಕ್ಷಿಣ ಕರ್ನಾಟಕದ 14 ಜಿಲ್ಲೆಗಳ ವಿಧಾನ ಸಭಾ ಕ್ಷೇತ್ರಗಳ ಪ್ರತಿಯೊಂದು ಬೂತ್ ನಿಂದ ಮೂವರಂತೆ ಬೈಕ್ ರ್ಯಾಲಿಯಲ್ಲಿ ಬರಲು ಯೋಜಿಸಲಾಗಿತ್ತು. ಅಷ್ಟು ಜನ ಬಂದರೋ ಇಲ್ಲವೋ ಗೊತ್ತಿಲ್ಲ. ಅಮಿತ್ ಶಾ ಬಯಸಿದಂತೆ (ಉತ್ತರ ಪ್ರದೇಶದ ಚುನಾವಣೆಗಳಲ್ಲಿ ಜಾರಿ ಮಾಡಿದಂತೆ) ಬೈಕ್ ರ್ಯಾಲಿಯಲ್ಲಿ ಬಂದ ಬೈಕ್ ಗಳನ್ನು ಮತ್ತು ಕಾರ್ಯಕರ್ತರನ್ನು ವೇದಿಕೆಯ ಬಳಿ ಪ್ರತ್ಯೇಕವಾಗಿ ಕೂರಿಸಿ ಅವರಲ್ಲಿ ಸ್ಫೂರ್ತಿ-ಉತ್ಸಾಹಗಳನ್ನೂ, ಜನರ ನಡುವೆ ಇಷ್ಟು ಬೂತ್ ಮಟ್ಟದ ಕಾರ್ಯಕರ್ತರಿದ್ದಾರೆ ಎಂಬ ಪ್ರಚಾರವನ್ನೂ ಮಾಡುವ ಯೋಜನೆಯಂತೂ ಜಾರಿಯಾಗಿರಲಿಲ್ಲ.

ಉದ್ಘಾಟನೆಯ ನಂತರ ಯಾತ್ರೆ ಮುಟ್ಟಿದ ತುಮಕೂರಿನಲ್ಲಿ ಅತ್ಯಂತ ಹೆಚ್ಚು ಅಧ್ವಾನಗಳಾದವು. ಸ್ಥಳೀಯ ಪದಾಧಿಕಾರಿಯನ್ನು ವಜಾಗೊಳಿಸಿದ್ದರಿಂದ ಅಲ್ಲಿ ಯಾತ್ರಾವಾಹನಗಳು ನಿಲ್ಲದೆ ಹೋದಾಗ ಬಾಣಸಂದ್ರದ ಅತೃಪ್ತ ಬಿಜೆಪಿ ಕಾರ್ಯಕರ್ತರೇ ಯಾತ್ರಾ ವಾಹನಗಳ ಮೇಲೆ ತೆಂಗಿನಕಾಯಿ ಒಗೆದು ವಾಹನಗಳಿಗೆ ಜಖಂ ಆಯಿತು. ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವುದು “ಬಿಜೆಪಿ ಪರಿವರ್ತನಾ ಯಾತ್ರೆಯಲ್ಲ ಕೆಜೆಪಿ ಪರಿವರ್ತನಾ ಯಾತ್ರೆ” ಎಂದು ತುಮಕೂರಿನ ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಆರೋಪಿಸಿ ಸಮಾವೇಶವನ್ನು ಬಹಿಷ್ಕರಿಸಿದರು. ಯಾತ್ರೆ ಅಂಗವಾಗಿ ಹಮ್ಮಿಕೊಳ್ಳುತ್ತಿರುವ ಸಮಾವೇಶದಲ್ಲಿ ಅಭ್ಯರ್ಥಿ ಹೆಸರನ್ನು ಯೆಡಿಯೂರಪ್ಪ ಪ್ರಕಟಿಸುತ್ತಿರುವುದು, ಸ್ಥಳೀಯ ಮಟ್ಟದಲ್ಲಿ ಆಕ್ರೋಶ ಗೊಂದಲ ಹುಟ್ಟಿಸುತ್ತಿದೆ. ಕ್ಷೇತ್ರವಾರು ಆಂತರಿಕ ಸಮೀಕ್ಷೆ ನಡೆಸಿ ಗೆಲ್ಲುವ ಅಭ್ಯರ್ಥಿಗೆ ಟಿಕೇಟು ಕೊಡುವ ಬಗ್ಗೆ ಹೈ ಕಮಾಂಡ್ ನಿರ್ಧರಿಸುತ್ತದೆ. ರಾಜ್ಯ ಅಧ್ಯಕ್ಷರಿಗಾಗಲಿ ಘಟಕಕ್ಕಾಗಲಿ  ಈ ಅಧಿಕಾರವಿಲ್ಲ.

ಟಿಕೆಟ್ ಆಕಾಂಕ್ಷಿಗಳು ತಮ್ಮ ಕ್ಷೇತ್ರವ್ಯಾಪ್ತಿಯ ಬೂತ್ ಗಳಲ್ಲಿ 10 ಜನರಿರುವ ಸಮಿತಿ ರಚಿಸಬೇಕು. ಯಾತ್ರೆ ವೇಳೆ ಕ್ಷೇತ್ರದಲ್ಲಿ ನಡೆಯುವ ಸಮಾವೇಶದ ಯಶಸ್ಸು ಬೂತ್ ಸಮಿತಿ ರಚನೆಯಲ್ಲಿ ಪ್ರಗತಿ ಮಾತ್ರ ಟಿಕೆಟ್ ನೀಡಿಕೆಗೆ ಮಾನದಂಡ. ಈ ಕೇಂದ್ರೀಯ ನಾಯಕರ ಸ್ಪಷ್ಟ ನಿರ್ದೇಶನಕ್ಕೆ ವ್ಯತಿರಿಕ್ತವಾಗಿ ಯೆಡಿಯೂರಪ್ಪ ಮತ್ತು ಶೋಭಾ ಏಕಪಕ್ಷೀಯವಾಗಿ ನಿರ್ಧರಿಸಿ ಅಭ್ಯರ್ಥಿ ಹೆಸರು ಘೋಷಣೆ ಮಾಡುತ್ತಿದ್ದಾರೆ. ಎಂದು ಸ್ಥಳೀಯ ನಾಯಕರು ಕೆಲವರು ಖಾಸಗಿಯಾಗಿ ಕೆಲವರು ಬಹಿರಂಗವಾಗಿಯೇ ದೂರುತ್ತಿದ್ದಾರೆ. ಹಾಸನದ ಸಮಾವೇಶದಲ್ಲಿ ಜಿಲ್ಲಾ ಉಪಾಧ್ಯಕ್ಷ ಪ್ರೀತಮ್ ಗೌಡ ಹೆಸರಿದ್ದ ಕವರ್ ಗಳಲ್ಲಿ ಮಹಿಳೆಯರಿಗೆ  ಸೀರೆ ವಿತರಿಸಲಾಯಿತು. ಇನ್ನೊಬ್ಬ ಬಿಜೆಪಿ ನಾಯಕನ ಕಂಪನಿಯ ಹೆಸರಿನ ಕೂಪನುಗಳನ್ನು ವಿತರಿಸಿ ಅದನ್ನು ಕೊಟ್ಟವರಿಗೆ ಹಣ ವಿತರಿಸಲಾಯಿತು ಎಂಬ ಆಪಾದನೆ ಕೇಳಿ ಬಂದಿದೆ. ಹಣ ಸೀರೆ ವಿತರಿಸಿದರೂ ಹೆಚ್ಚಿನ ಸಮಾವೇಶಗಳಲ್ಲಿ ನಿರೀಕ್ಷಿತ ಸಂಖ್ಯೆಯಲ್ಲಿ ಜನ ಸೇರಿಲ್ಲವೆಂದು ವರದಿಯಾಗಿದೆ. ಬಿಜೆಪಿಯ ಯಾವುದೇ ಕಾರ್ಯಕ್ರಮವನ್ನು ದೊಡ್ಡದಾಗಿ ವರದಿ ಮಾಡುವ ಪತ್ರಿಕೆ-ಟಿವಿ ವಾಹಿನಿಗಳು ಸ್ಥಳೀಯ ಸಮಾವೇಶದ ಬಗ್ಗೆ ವರದಿಗಳನ್ನೇ ಮಾಡದಿರುವುದು ಈ ಯಾತ್ರೆ “ಫ್ಲಾಪ್” ಆಗುತ್ತಿದೆ ಎಂಬುದನ್ನು ಎತ್ತಿ ತೋರಿಸುತ್ತಿದೆ.

ಇದಕ್ಕೆ ಕಾರಣಗಳೇನು ಎಂಬುದನ್ನು ವಿಶ್ಲೇಷಿಸುವುದು ಅಗತ್ಯ. ಸಾಮಾನ್ಯವಾಗಿ ಕೊಡುವ ಕಾರಣ ಯೆಡಿಯೂರಪ್ಪ ಅವರ ಯಜಮಾನಿಕೆಯ ಶೈಲಿ ಮತ್ತು ವ್ಯಾಪಕವಾಗಿರುವ ಗುಂಪುಗಾರಿಕೆ. ಇದನ್ನು ತೊಡೆಯಲು ಹೈ ಕಮಾಂಡ್ ತೆಗೆದುಕೊಂಡ ಕ್ರಮಗಳು ವಿಫಲವಾಗಿರುವುದು. ಗುಂಪುಗಾರಿಕೆಯಿಂದಾಗಿ ಪರಸ್ಪರ ಕಾಲೆಳೆಯಲು ಸಮಾವೇಶ ವಿಫಲ ಮಾಡುವ ಹಂತಕ್ಕೆ ಹೋಗಿರಬಹುದು. ಆದರೆ ಇದೊಂದೇ ಕಾರಣವಲ್ಲ. “ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ” ಎಂಬ ಹೆಸರನ್ನಾದರೂ ಸಾರ್ಥಕಗೊಳಿಸುವ ಏನೂ ಯಾತ್ರೆಯಲ್ಲಿ ಇರಲಿಲ್ಲ. “ನವ ಕರ್ನಾಟಕ” ಎಂದರೇನು? ಅದರ ನಿರ್ಮಾಣಕ್ಕೆ ಯಾವ ರೀತಿಯ “ಪರಿವರ್ತನೆ” ಹೇಗೆ ತರಲಾಗುತ್ತದೆ? ಎಂಬ ಬಗ್ಗೆ ಏನೂ ಇರಲಿಲ್ಲ.

ಆದ್ದರಿಂದ “ಪಶ್ಚಾತ್ತಾಪ ಯಾತ್ರೆ”, ಕಾಂಗ್ರೆಸ್-ಜೆಡಿ-ಎಸ್ ನವರನ್ನು “ಪರಿವರ್ತಿಸುವ ಯಾತ್ರೆ” “ಭ್ರಷ್ಟರನ್ನು ಶುದ್ಧರಾಗಿ ತೋರಿಸುವ ಯಾತ್ರೆ” ಇತ್ಯಾದಿಯಾಗಿ ಗೇಲಿಗೆ ಒಳಗಾಯಿತು.  ಕೇಂದ್ರದಲ್ಲಿ ಈಗಿನ ಬಿಜೆಪಿಯ ಮೂರುವರೆ ವರ್ಷಗಳ ಆಡಳಿತದ ವೈಖರಿ, ಹತ್ತು ದೊಡ್ಡ ಆಶ್ವಾಸನೆಗಳನ್ನು ಕೊಟ್ಟು ಒಂದನ್ನೂ ಪ್ರಾಮಾಣಿಕವಾಗಿ ಈಡೇರಿಸದೆ ಹೊಗಿದ್ದು ಜನರಲ್ಲಿ ಭ್ರಮ ನಿರಸನ ಉಂಟು ಮಾಡಿದೆ. ಹಿಂದಿನ ಬಿಜೆಪಿ ರಾಜ್ಯ ಸರಕಾರದ ರೆಕಾರ್ಡು ಸಹ ಭರವಸೆ ಹುಟ್ಟಿಸುವಂತಹುದಲ್ಲ. ಅಲ್ಲದೆ ರಾಜ್ಯದ ಪ್ರಮುಖ ವಿಷಯಗಳನ್ನು ಎತ್ತಿಕೊಳ್ಳದೆ ಕೋಮುವಾದಿ ಮತ್ತಿತರ ಅಸಂಭದ್ಧ ವಿಷಯಗಳತ್ತ ಗಮನ ತಿರುಗಿಸುವ ಬಿಜೆಪಿಯ ತಂತ್ರ ಸಹ ಜನರಿಗೆ ಜುಗುಪ್ಸೆ ಹುಟ್ಟಿಸುತ್ತಿದೆ. ವಿರೋಧಿ ಸರಕಾರಗಳಿಗೆ ಗವರ್ನರ್ ಬಳಸಿ ಕಿರುಕುಳ ಕೊಡುವ, ಇತರ ಪಕ್ಷಗಳನ್ನು ಒಡೆಯುವ, ಹಣ-ಅಧಿಕಾರದ ಆಮಿಷದ ಮೇಲೆ ನಾಯಕರನ್ನು ಎಳೆಯುವ ಮತ್ತಿತರ  ಕೊಳಕು ರಾಜಕಾರಣದಿಂದ ಜನ ರೋಸಿ ಹೋಗಿದ್ದಾರೆ. ಇದೇ ಬಿಜೆಪಿ ಪರಿವರ್ತನಾ ಯಾತ್ರೆ “ಫ್ಲಾಪ್ ಶೋ” ಆಗಲು ಪ್ರಮುಖ ಕಾರಣ ಎನ್ನಬಹುದು.

ಇದೇ ವೈಖರಿಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿ(ಎಸ್) ನ “ವಿಕಾಸ ಯಾತ್ರೆ” ಉದ್ಘಾಟಿಸಲಾಯಿತು. ಜೆಡಿ-ಎಸ್ ಚುನಾವಣಾ ಪ್ರಚಾರವನ್ನು “ಕುಮಾರ ಪರ್ವ-2018” ಎಂದು ಕರೆಯಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರ ಉದ್ಘಾಟನೆಗೆ ಆಯ್ಕೆ ಮಾಡಿದ್ದಕ್ಕೆ ಕಾರಣ ಅಲ್ಲಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬುದು. ಅಲ್ಲಿ ಮಾಡಲಾದ ಭಾಷಣಗಳು ಮತ್ತು ಆ ಮೇಲಿನ ಹೇಳಿಕೆಗಳಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಬದಲಿ ನೀತಿಗಳ ಬದಲಿ ರಾಜಕಾರಣದ ಯಾವುದೇ ಭರವಸೆಗಳೂ ಇರಲಿಲ್ಲ. “ಸಿದ್ದರಾಮಯ್ಯನವರು ಠೇವಣಿ ಕಳೆದುಕೊಳ್ಳುವಂತೆ ಮಾಡಿ” ಎಂಬುದು ಸಮಾವೇಶದ ಪ್ರಮುಖ ಘೋಷಣೆಯಾಗಿತ್ತು! ಬಿಜೆಪಿ ಕಾಂಗ್ರೆಸುಗಳ ಕಿತ್ತಾಟದಲ್ಲಿ ಯಾರಿಗೂ ಬಹುಮತ ಬರದೆ ತಾನು “ಕಿಂಗ್ ಮೇಕರ್” ಆಗಬಹುದು ಎಂಬುದಷ್ಟೇ ಅದರ ಸೀಮಿತ ದರ್ಶನವಿದ್ದಂತೆ ಕಾಣುತ್ತದೆ. ನವೆಂಬರ್ 8 ರಂದು ನೋಟು ನಿಷೇಧದ ವಾರ್ಷಿಕದ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದಾಗ ಜೆಡಿ-ಎಸ್ ಜಾಣಮೌನ ವಹಿಸಿತ್ತು. ಅದೇ ಅದರ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ.