ಪ್ಯಾರಡೈಸ್ ಪೇಪರ್ಸ್ ಬಿಚ್ಚಿಟ್ಟ ಸಿರಿವಂತರ ಸ್ವರ್ಗಗಳ ರಹಸ್ಯ

ಸಂಪುಟ: 
47
ಸಂಚಿಕೆ: 
11
date: 
Sunday, 12 November 2017
Image: 

ಸೂಪರ್ ಶ್ರೀಮಂತರು ಮತ್ತು ಕಾರ್ಪೊರೇಟ್‍ಗಳು ತೆರಿಗೆ ಆಶ್ರಯಧಾಮಗಳಲ್ಲಿ ಕಂಪೆನಿಗಳನ್ನು ಸ್ಥಾಪಿಸುವುದು, ಅವುಗಳಿಗೆ ಹಣವನ್ನು ವರ್ಗಾಯಿಸುವುದು  ಮತ್ತು ಕಪ್ಪು ಹಣವನ್ನು ಬಿಳಿ ಮಾಡುವುದು ಈ ಸಂರಚನೆಯ ಮೇಲೆ ಪ್ಯಾರಡೈಸ್ ಪೇಪರ್ಸ್ ಮತ್ತೊಮ್ಮೆ ಬೆಳಕು ಚೆಲ್ಲಿವೆ.

* ಪ್ರಕಾಶ್ ಕಾರಟ್

ಈಗ ಮಾಡಬೇಕಾದ್ದೆಂದರೆ, ಈಗ ಕಾನೂನುಬದ್ಧ ವ್ಯಾಪಾರ ಚಟುವಟಿಕೆ ಎಂದು ಅವಕಾಶ ಪಡೆದಿರುವ ತೆರಿಗೆ ಆಶ್ರಯಧಾಮಗಳನ್ನು ಬಳಸಿಕೊಳ್ಳುವುದನ್ನು ತಡೆಯಲು ಬಲವಾದ ಕ್ರಮಗಳನ್ನು ಕೈಗೊಳ್ಳುವುದು ತಪ್ಪಿತಸ್ಥರನ್ನು ಶಿಕ್ಷಿಸಲು ಮತ್ತು ತೆರಿಗೆ ತಪ್ಪಿಸಲು ಸಾಧ್ಯವಾಗುವಂತೆ ಮಾಡಿರುವ ಲೋಪದೋಷಗಳನ್ನು ಸರಿಪಡಿಸುವ  ಸೂಕ್ತ ಕಾನೂನುಗಳು ಮತ್ತು ನಿಯಂತ್ರಣ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ. ಆದರೆ ಕಾರ್ಪೊರೇಟ್ ಮತ್ತು ಅಂತಾರ್ರಾಷ್ಟ್ರೀಯ ಬಂಡವಾಳದ ಸೇವೆಗೆ ನಿಂತಿರುವ ಒಂದು ಸರಕಾರ ಇದನ್ನು ಮಾಡುತ್ತದೆ ಎಂದು ನಿರೀಕ್ಷಿಸುವುದು ಮೊದ್ದುತನವಾಗುತ್ತದೆ.

ತನಿಖಾ ಪತ್ರಕರ್ತರ ಅಂತಾರ್ರಾಷ್ಟ್ರೀಯ ಒಕ್ಕೂಟ (ಐಸಿಐಜೆ)ದ ತನಿಖೆಯ ಆಧಾರದಲ್ಲಿ ಬಿಡುಗಡೆ ಮಾಡಲಾಗಿರುವ ಪ್ಯಾರಡೈಸ್ ಪೇಪರ್‍ಗಳು ತೆರಿಗೆ ತಪ್ಪಿಸುವ ಆಶ್ರಯಧಾಮಗಳು, ಅಪಾರದರ್ಶಕ ಕಂಪೆನಿಗಳು ಮತ್ತು ಹಣಕಾಸು ವ್ಯವಹಾರಗಳ ಒಂದು ಸಂಕೀರ್ಣ ಜಾಲವು ಯಾವ ರೀತಿಯಲ್ಲಿ  ಬಹುರಾಷ್ಟ್ರೀಯ ಕಾರ್ಪೊರೇಟ್ (ಎಂಎನ್‍ಸಿ)ಗಳು ಮತ್ತು ಅಂತಾರ್ರಾಷ್ಟ್ರೀಯ ಹಣಕಾಸು ಬಂಡವಾಳದ ಅಗತ್ಯಗಳನ್ನು ಪೂರೈಸಲು ಬೆಳವಣಿಗೆ ಹೊಂದಿದೆ ಎನ್ನುವುದರ ಮೇಲೆ ಇನ್ನಷ್ಟು ಬೆಳಕು ಚೆಲ್ಲುತ್ತವೆ.

ಬೆರ್ಮುಡಾದಲ್ಲಿನ ಆಪಲ್‍ಬಿ ಮತ್ತು ಸಿಂಗಾಪುರದಲ್ಲಿನ ಏಷ್ಯಾಸಿಟಿ ಎಂಬ ಎರಡು ಕಂಪೆನಿಗಳ ಸೋರಿಕೆಯಾದ ಹಣಕಾಸು ದಾಖಲೆಗಳು ಹಾಗೂ ಜಗತ್ತಿನ 19 ತೆರಿಗೆ ತಪ್ಪಿಸುವ ಧಾಮಗಳ ಕಂಪೆನಿ ರಿಜಿಸ್ಟರ್‍ಗಳ 13.4 ಮಿಲಿಯ ದಾಖಲೆಗಳ ಪರಿಶೀಲನೆಯನ್ನು ಆಧರಿಸಿವೆ ಈ ಪ್ಯಾರಡೈಸ್ ಪೇಪರ್‍ಗಳು. ಇದಕ್ಕೂ ಮುಂಚೆ 18 ತಿಂಗಳ ಹಿಂದೆ, ಪನಾಮಾ ಪೇಪರ್‍ಗಳು ಪನಾಮಾದಲ್ಲಿನ ಒಂದು ಕಂಪೆನಿಯ ವ್ಯವಹಾರಗಳನ್ನು ಬಯಲಿಗೆಳೆದಿದ್ದವು. ಇದೀಗ ಪ್ಯಾರಡೈಸ್ ಪೇಪರ್‍ಗಳು ಜಗತ್ತಿನ ಅತಿ ಶ್ರೀಮಂತರು ತಮ್ಮ ತಮ್ಮ ದೇಶದಲ್ಲಿ ತೆರಿಗೆ ತಪ್ಪಿಸುವುದಕ್ಕಾಗಿ ಯಾವ ರೀತಿಯಲ್ಲಿ ಹಣವನ್ನು  ಅತಿ ತೆರಿಗೆ ಆಶ್ರಯಧಾಮಗಳಿಗೆ ವರ್ಗಾಯಿಸುತ್ತಾರೆ ಎನ್ನುವುದರ ಒಂದು ನಿಕಟ ನೋಟವನ್ನು ಕೊಡುತ್ತಿವೆ. ಎಂಎನ್‍ಸಿಗಳು ಮತ್ತು ಕಾರ್ಪೊರೇಟ್‍ಗಳು ಈ ತೆರಿಗೆ ಆಶ್ರಯತಾಣಗಳಲ್ಲಿ ಉಪ ಕಂಪೆನಿಗಳನ್ನು ತೆರೆಯುವ ಮೂಲಕ ಹೇಗೆ ಅಲ್ಲಿ ತಮ್ಮ ಲಾಭವನ್ನು ಒಯ್ದಿಡುತ್ತವೆ ಎನ್ನುವುದರ ಮೇಲೆ ಗಮನ ಕೇಂದ್ರೀಕರಿಸಿವೆ.

ಇದು ಹಣಕಾಸು ಬಂಡವಾಳ ಹೇಗೆ ಕಾರ್ಯಾಚರಿಸುತ್ತದೆ ಎನ್ನುವುದರ ಒಂದು ಹಾದಿ ತಪ್ಪಿದ ಪ್ರಕ್ರಿಯೆಯೇನಲ್ಲ. ಅದು ಜಾಗತೀಕರಣಗೊಂಡ ಹಣಕಾಸು ಬಂಡವಾಳದಲ್ಲೇ ಅಂತರ್ಗತ ವಾಗಿರುವಂತದ್ದು. ಆರ್ಥಶಾಸ್ತ್ರಜ್ಞ ಗೇಬ್ರಿಯಲ್ ಝುಕ್‍ಮ್ಯಾನ್ ಸಹಸಂಪಾದಕತ್ವದಲ್ಲಿ ಈ ವರ್ಷದ ಸೆಪ್ಟೆಂಬರ್‍ನಲ್ಲಿ ಪ್ರಕಟವಾದ ಒಂದು ವರದಿ ಹೇಳುವ ಪ್ರಕಾರ, ಜಗತ್ತಿನ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ದ ಅಂದರೆ 7.8 ಟ್ರಿಲಿಯನ್ ಡಾಲರ್ ಪೈಕಿ ಶೇಕಡಾ ಹತ್ತರಷ್ಟು ಆಯಾ ದೇಶಗಳಲ್ಲಿ ಇರದೆ ಅವನ್ನು ಸಾಗರದಾಚೆಗೆ ಸಾಗಿಸಿಡಲಾಗಿದೆ, ಕೇವಲ ಕಳೆದ ಒಂದು ವರ್ಷದಲ್ಲಿಯೇ ಎಂಎನ್‍ಸಿಗಳ 600 ಬಿಲಿಯ ಯೂರೋ ಲಾಭವನ್ನು ಸಾಗರದಾಚೆಗಿನ ತೆರಿಗೆ ಧಾಮಗಳಿಗೆ ವರ್ಗಾಯಿಸಲಾಗಿದೆ ಎನ್ನುತ್ತಾರೆ ಝುಕ್‍ಮ್ಯಾನ್.

ಅತಿ ಶ್ರೀಮಂತ ಮತ್ತು ದೊಡ್ಡ ಕಾರ್ಪೊರೇಟ್ ಕಂಪೆನಿಗಳು ಈ ರೀತಿಯಲ್ಲಿ ತೆರಿಗೆಯನ್ನು ವಂಚಿಸುವ ಮೂಲಕ ತಮ್ಮ ದೇಶದ ಖಜಾನೆಗೆ ತೆರಿಗೆ ಆದಾಯ ಬರುವುದನ್ನು ತಪ್ಪಿಸುತ್ತಾರೆ. ಈ ಆದಾಯದಿಂದಲೇÉ ಶಾಲೆಗಳು, ಆಸ್ಪತ್ರೆಗಳು ಮತ್ತು ನಾಗರಿಕರ ಇತರೆ ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ಸಿಗಬೇಕಾದ್ದು. ಅದನ್ನು ಅವರು ವಂಚಿಸುತ್ತಿದ್ದಾರೆ. ಇದು ಕಾನೂನು ಸಮ್ಮತವಾದುದು ಎನ್ನುವ ಮಾತ್ರಕ್ಕೆ ಅದು ಕಡಿಮೆ ಕೊಳಕಿನದ್ದಾಗಲಾರದು ಅದು ನವ-ಉದಾರವಾದಿ ಬಂಡವಾಳದ ಇಬ್ಬಗೆ ನೀತಿಗಳನ್ನು ಬಯಲು ಮಾಡುತ್ತದೆ- ಅಂದರೆ ಶ್ರೀಮಂತರು ತೆರಿಗೆ ತಪ್ಪಿಸಿಕೊಳ್ಳಲು ಅವಕಾಶ, ಅದೇ ಹೊತ್ತಿಗೆ ಕಷ್ಟಪಟ್ಟು ಒಂದು ಕನಿಷ್ಟ ಸಂಬಳವನ್ನು  ಸಂಪಾದಿಸಬೇಕಾದ ನಾಗರಿಕರು ತೆರಿಗೆಗಳನ್ನು ಕಟ್ಟಬೇಕು.

ಪ್ಯಾರಡೈಸ್ ಪೇಪರ್‍ಗಳು 714 ಭಾರತೀಯ ಕಂಪೆನಿಗಳು ಮತ್ತು ವ್ಯಕ್ತಿಗಳ ಹೆಸರುಗಳನ್ನು ಹೊರಗೆಡಹಿವೆ. ತೆರಿಗೆ ಧಾಮಗಳಲ್ಲಿ ಕಂಪೆನಿಗಳನ್ನು ಸ್ಥಾಪಿಸಲು ಹಾಗೂ ಹಣವನ್ನು ಕೂಡಿಡಲು ಈ ಎರಡು ಹಣಕಾಸು ಕಂಪೆನಿಗಳನ್ನು ಅವರು ಬಳಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿರುವವರ ಪೈಕಿ ಭಾರತದ ಅನೇಕ ದೊಡ್ಡ ಕಂಪೆನಿಗಳಿವೆ, ವಾಣಿಜ್ಯೋದ್ಯಮಿಗಳಿದ್ದಾರೆ ಹಾಗೂ ರಿಯಲ್ ಎಸ್ಟೇಟ್ ಕುಳಗಳೂ ಇದ್ದಾರೆ. ಅವರಲ್ಲಿ ಕೆಲವರು ಬಿಜೆಪಿಗೆ ಸೇರಿದವರಾಗಿದ್ದಾರೆ. ಹಿಂದಿನ ಪನಾಮಾ ಪೇಪರ್ಸ್‍ನಂತೆ ಪ್ಯಾರಡೈಸ್ ಪೇಪರ್ಸ್ ಮೋದಿ ಸರಕಾರದ ಕಪ್ಪು ಹಣದ ವಿರುದ್ಧದ ಹೋರಾಟದ ಮಿಥ್ಯೆಯನ್ನು ಪರಿಣಾಮಕಾರಿಯಾಗಿ ಒಡೆದು ಹಾಕಿಬಿಟ್ಟಿದೆ. ನೋಟುರದ್ಧತಿಗೆ ಒಂದು ವರ್ಷ ತುಂಬುವುದಕ್ಕೆ ಎರಡು ದಿನಗಳಿರುವಾಗ ಈ ಪೇಪರ್ಸ್ ಪ್ರಕಟವಾಗಿವೆ. ನೋಟುರದ್ಧತಿಯಿಂದ ಕಪ್ಪು ಹಣÀ ಸ್ಥಗಿತಗೊಂಡಿದೆ ಎಂಬ ಮೋದಿ ಸರಕಾರದ ಹೇಳಿಕೆ ಅಸಂಬದ್ಧ ಎನ್ನುವುದನ್ನು ಅವು ರುಜುವಾತು ಪಡಿಸಿವೆ. ಕಪ್ಪು ಹಣದ ಸೃಷ್ಟಿ, ವಿದೇಶದಲ್ಲಿ ಸಂಪತ್ತಾಗಿ ಅದರ ಪರಿವರ್ತನೆ, ಸಾಲ ನೀಡಿಕೆ  ಹಾಗೂ ಈ ಹಣಸ ಸುತ್ತು ಸಂಚಾರ- ಈ ಎಲ್ಲವೂ ಪ್ಯಾರಡೈಸ್ ಪೇಪರ್ಸ್‍ಗಳಿಂದ ಬಯಲಾಗಿದೆ.

ನೋಟುರದ್ಧತಿಯು ಈ ಪ್ರಕ್ರಿಯೆಯಲ್ಲಿ ಎಳ್ಳಷ್ಟ್ಟೂ ವ್ಯತ್ಯಾಸ ಮಾಡಿಲ್ಲ, ಅದು ಅಬಾಧಿತವಾಗಿ ನಡೆಯುತ್ತಿದೆ ಎನ್ನುವುದು ವಾಸ್ತವ ಸಂಗತಿ. ಮೋದಿ ಸರಕಾರ ಪನಾಮಾ ಪೇಪರ್ಸ್‍ನ ಪಟ್ಟಿಯಲ್ಲಿರುವವರ ಬಗ್ಗೆ ತನಿಖೆ ನಡೆಸಲು ವಿವಿÀಧ ತನಿಖಾ ಸಂಸ್ಥೆಗಳ ಒಂದು ಗುಂಪನ್ನು ನೇಮಿಸುವುದಾಗಿ ಪ್ರಕಟಿಸಿದೆ. ಅದು ಪ್ಯಾರಡೈಸ್ ಪೇಪರ್ಸ್‍ನಲ್ಲಿರುವ ಭಾರತೀಯರ ವಿವರಗಳ ತನಿಖೆಯನ್ನೂ ನಡೆಸುತ್ತದೆಯಂತೆ. ಅಂದರೆ ಪಟ್ಟಿಯಲ್ಲಿರುವವರು ಘೋಷಣೆ ಮಾಡದ ಕೆಲವು ಆದಾಯಕ್ಕೆ ತೆರಿಗೆ ಮತ್ತು ದಂಡ ವಿಧಿಸಲಾಗುತ್ತದೆ ಎಂದು ತಾನೇ ಇದರ ಅರ್ಥ. ಅದಕ್ಕಿಂತ ಹೆಚ್ಚೇನೂ ಅಲ್ಲ.

ತೆರಿಗೆ ಆಶ್ರಯಧಾಮಗಳಲ್ಲಿ ಕಂಪೆನಿಗಳನ್ನು ಸ್ಥಾಪಿಸುವುದು, ಅವುಗಳಿಗೆ ಹಣವನ್ನು ವರ್ಗಾಯಿಸುವುದು ಮತ್ತು ಕಪ್ಪು ಹಣವನ್ನು ಬಿಳಿ ಮಾಡುವುದು ಈ ಸಂರಚನೆಯ ಬಗ್ಗೆ ತನಿಖೆ ಮಾಡುವುದಿಲ್ಲ ಅಥವಾ ಅವುಗಳನ್ನು ಪ್ರಶ್ನಿಸುವುದೂ ಇಲ್ಲ. ಹಾಗೆ ಮಾಡುವುದೆಂದರೆ ಹಣಕಾಸು ಹೂಡಿಕೆದಾರರನ್ನು ಮತ್ತು ಕೊಳ್ಳೆ ಹೊಡೆಯುವ ದೈತ್ಯ ಹಣಕಾಸು ಬಂಡವಾಳದ ಬುಡಕ್ಕೇ ಸವಾಲು ಹಾಕಿದಂತೆ ಆಗುತ್ತದೆ.

ಈಗ ಮಾಡಬೇಕಾದ್ದೆಂದರೆ, ಈಗ ಕಾನೂನುಬದ್ಧ ವ್ಯಾಪಾರ ಚಟುವಟಿಕೆ ಎಂದು ಅವಕಾಶ ಪಡೆದಿರುವ ತೆರಿಗೆ ಆಶ್ರಯಧಾಮಗಳನ್ನು ಬಳಸಿಕೊಳ್ಳುವುದನ್ನು ತಡೆಯಲು ಬಲವಾದ ಕ್ರಮಗಳನ್ನು ಕೈಗೊಳ್ಳುವುದು ತಪ್ಪಿತಸ್ಥರನ್ನು ಶಿಕ್ಷಿಸಲು ಮತ್ತು ತೆರಿಗೆ ತಪ್ಪಿಸಲು ಸಾಧ್ಯವಾಗುವಂತೆ ಮಾಡಿರುವ ಲೋಪದೋಷಗಳನ್ನು ಸರಿಪಡಿಸುವ  ಸೂಕ್ತ ಕಾನೂನುಗಳು ಮತ್ತು ನಿಯಂತ್ರಣ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ. ತಪ್ಪಿತಸ್ಥರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡರೆ ಭವಿಷ್ಯದಲ್ಲಿ ಈ ರೀತಿಯ ಅಪರಾಧ ಮಾಡುವುದನ್ನು ತಡೆಯುವ ದಿಸೆಯಲ್ಲಿ ಎಚ್ಚರಿಕೆ ಗಂಟೆಯಾಗುತ್ತದೆ. ಆದರೆ ಮೋದಿ ಸರಕಾರ ಇವೆಲ್ಲವನ್ನು ಮಾಡುತ್ತದೆ ಎಂದು ನಿರೀಕ್ಷಿಸುವುದು ಮೊದ್ದುತನವಾಗುತ್ತದೆ.  ಇದು ಕಾರ್ಪೊರೇಟ್ ಮತ್ತು ಅಂತಾರ್ರಾಷ್ಟ್ರೀಯ ಬಂಡವಾಳದ ಸೇವೆಗೆ ನಿಂತಿರುವ ಒಂದು ಸರಕಾರ.

 

ಅನು: ವಿಶ್ವ