ಉತ್ತರ ಕನ್ನಡದ ಕೋಮುವಾದಿ ರಾಜಕೀಯ ಮತ್ತು ಅನಂತನ ಅವತಾರಗಳು

ಸಂಪುಟ: 
11
ಸಂಚಿಕೆ: 
47
Sunday, 12 November 2017

 

ಯಮುನಾ ಗಾಂವ್ಕರ್

ಚಾಕು, ಚೂರಿ ಇರಿತ, ಗಲಾಟೆ, ದೊಂಬಿ, ಶಾಂತಿ ಭಂಗ, ಪ್ರಚೋದನ ಕಾರಿ ಭಾಷಣ, ಕೋಮು ಗಲಭೆಗೆ ಸ್ಕೆಚ್ ಇವು ಪ್ರಮುಖವಾಗಿ ಇವರ ಮೇಲಿರುವ ಆರೋಪಗಳು. ಎಲ್ಲವೂ ಅನ್ಯ ಧರ್ಮೀಯರ ಮೇಲೆ ಎಗರಿ ಬಿದ್ದ ಕೇಸುಗಳೇ. ಹಾಗಾಗಿ 90 ರ ದಶಕದಲ್ಲಿ ಅನೇಕ ತಿಂಗಳು ತಲೆ ಮರೆಸಿಕೊಂಡ ಈ ಅಪರಾಧಿಯು.. ..ಜಿಲ್ಲೆಗೆ ಕಾಲಿಡದಂತೆ ಕೋರ್ಟು ಕೂಡ ಆದೇಶಿಸಿತ್ತು. ಅಂದು ಜಿಲ್ಲೆಯಲ್ಲಿ ನಡೆದ ಹಲವು ದರೋಡೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡ ಬಹುತೇಕರು ಇವರ ಶಿಷ್ಯರೇ ಆಗಿದ್ದರು. ಆಗ ಇದನ್ನು “ಹಾಯ್ ಬೆಂಗಳೂರು” ಪತ್ರಿಕೆ ವರದಿ ಮಾಡಿತ್ತು. ಚಿತ್ತರಂಜನ್ ಕೊಲೆ ಪ್ರಕರಣದಲ್ಲಿಯೂ ಭಟ್ಕಳದಲ್ಲಿ ಇವರ ಬಗ್ಗೆ ಪೋಷ್ಟರ್ ಗಳನ್ನು ಹಾಕಿರುವ ಬಗ್ಗೆ ಸುದ್ದಿ ಓದಿದ್ದು ನೆನಪಿದೆ. “ಆದರೆ ಈ ಎಲ್ಲ ಪ್ರಕರಣ ತನಗೆ ಮೆಡಲ್ ಇದ್ದಂತೆ” ಎಂದು ಹುಂಬತನದ ಉತ್ತರ ಇವರದ್ದು. ಇವರ ಕಾರಣದಿಂದಾಗಿಯೇ ಕಾರವಾರದ ಅಂಜುದೀವ್, ಚಂದಾವರ, ಯಲ್ಲಾಪುರ, ಶಿರಸಿ, ಭಟ್ಕಳಗಳು ಭಯದ ಬೇಗುದಿಯಲ್ಲಿರುವಂತಾಗಿದೆ.

ಉತ್ತರ ಕನ್ನಡ ಜಿಲ್ಲೆ ಸುಸಂಸ್ಕøತರ ಜಿಲ್ಲೆ ಎಂದು ಹೆಸರು ಪಡೆದದ್ದು ಈ ನೆಲದ ಮಣ್ಣಿನಲ್ಲಿ ಬೆರೆತ ಸೌಹಾರ್ದ ಪರಂಪರೆಯಿಂದ. ಉತ್ತರ ಕನ್ನಡ ಎಂದರೆ ಹಲವು ವಿಸ್ಮಯಗಳು.... ಕಾಡು, ಕಡಲು, ಬಯಲು ಸೀಮೆ, ಮಲೆನಾಡು, ನದಿ, ಜಲಪಾತಗಳ ಪ್ರಾಕೃತಿಕ ಸೌಹಾರ್ದ ಸಂಭ್ರಮದ ಸಾಲು ಸಾಲು... ಕವಿ ರವೀಂದ್ರನಾಥ ಟಾಗೋರರಿಗೆ ನೊಬೆಲ್ ಖ್ಯಾತಿ ತಂದ ಕೃತಿ ರಚನೆಗೆ ಕಾರಣವಾದ ಜಿಲ್ಲೆ “ದಕ್ಷಿಣದ ಕಾಶ್ಮೀರ”. ಭೋರ್ಗರೆಯುವ ಕಡಲು, ಬಗೆಬಗೆಯ ಬಣ್ಣದ ಮೀನುಗಳು, ಸಮೃದ್ಧ ಕಾಡು, ಕಾಡೊಳಗೆ ವನ್ಯಜೀವಿ ಕುಟುಂಬ, ಮನಸೆಳೆವ ಜಲಪಾತ, ಬೆವರಿಳಿಸಿ ಬೆಳೆವ ಭತ್ತ, ಅಡಿಕೆ, ತೆಂಗು, ಶೇಂಗಾ, ಕಲ್ಲಂಗಡಿ, ಕಬ್ಬು, ಜೋಳ, ಏಲಕ್ಕಿ, ಕಾಳು ಮೆಣಸು ಇತ್ಯಾದಿ.... ಕಾಡು ಕಡಲಿನ ಮಧ್ಯೆ ಅಲ್ಲಲ್ಲಿ ಆಟಿಕೆಯಂತೆ ಚೆಲ್ಲಾಪಿಲ್ಲಿ ಎಸೆದಿರುವ ಜನ ವಸತಿ ಪ್ರದೇಶಗಳ ಹಂಚಿಕೆ ಸಂಕಟವೂ ಹೌದು; ಸಂಭ್ರಮವೂ ಹೌದು.

ಮೀನುಗಾರರು, ಅಗಸರು, ಆಗೇರರು, ಮುಕ್ರಿಗಳು, ಕುಣಬಿಗರು, ಗೌಳಿಗರು, ಗೊಂಡರು, ಸಿದ್ದಿಗಳು, ಹಳ್ಳೇರರು, ದಲಿತರು, ಮೇದಾರರು, ಕೋಮಾರಪಂಥ, ಕೊಂಕಣಮರಾಠಾ, ಬ್ರಾಹ್ಮಣರು ಹೀಗೆ ಬಹುಜಾತಿ, ಕ್ರಿಶ್ಚಿಯನ್, ಮುಸ್ಲಿಂ, ಜೈನ್, ಬುದ್ಧರು, ಲಿಂಗಾಯತ ಹೀಗೆ ಬಹು ಧರ್ಮದವರ ಜಿಲ್ಲೆ. ಗುಮಟೆಪಾಂಗ್, ನಿಗ್ರೋ ಶ್ರಮಜೀವಿಯ ಡಮಾಮಿ, ಢೋಲ್, ಎಚ್ಚರಿಸುವ ಡೊಳ್ಳು ಕುಣಿತ, ಎಲ್ಲರ ಬೆಸೆಯುವ ಕೋಲಾಟ, ಕುಣಬಿಗರ ಪುಗಡಿ, ಉತ್ತರದ ಸಂಸ್ಕøತಿಯ ದಾಂಡೇರಾಸ್, ಗೌಳಿಗರ ಡಾನ್ಸ್, ಹೋಳಿ, ಮೊಹರಂ, ಬಕ್ರೀದ್, ಕ್ರಿಸ್ ಮಸ್, ದೀಪಾವಳಿ, ಚೌತಿ ಹೀಗೆ ಹಬ್ಬ ಮತ್ತು ಕುಣಿತ ಮೇಳೈಸಿದ ಬಹು ಸಾಂಸ್ಕøತಿಕತೆಗಳ ಜಿಲ್ಲೆ.

ಹಳೆಗನ್ನಡದ ಕವಿ ಪಂಪನ ಊರು ಮತ್ತು ಭಟ್ಟಾಕಳಂಕನ ಭಟ್ಕಳಕ್ಕೆ ಕಳಂಕ ತರುವ ಕೆಲಸ ಒಂದು ಹಿತಾಸಕ್ತಿಯಿಂದ ನಡೆಯುತ್ತಿದೆ. ಯಕ್ಷಗಾನ ಕವಿ ಸಾಂತಪ್ಪಯ್ಯ, ಭತ್ತಲೇಶ್ವರ ರಾಮಾಯಣ ಕಾವ್ಯ ಬರೆದ ಕವಿಯಿಂದ ಹಿಡಿದು ಆಧುನಿಕ ಘಟ್ಟದ ಸೂರಿ ವೆಂಕಟ್ರಮಣಶಾಸ್ತ್ರಿ, ಗೌರೀಶ ಕಾಯ್ಕಿಣಿ, ಸ. ಪ. ಗಾಂವ್ಕರ್, ಚಿತ್ತಾಲ ಸಹೋದರ ದ್ವಯರು, ದಿನಕರ ದೇಸಾಯಿ, ಗಿರಿ ಪಿಕಳೆ, ಜಿ.ಆರ್. ಪಾಂಡೇಶ್ವರರು, ಬಿ.ಎಚ್.ಶ್ರೀ, ಸು.ರಂ.ಎಕ್ಕುಂಡಿ, ಆರ್.ವಿ.ಭಂಡಾರಿ, ಜಿ.ಎಸ್. ಅವಧಾನಿ ಮುಂತಾದ ಮಹನೀಯರು ಕಟ್ಟಿ ಬೆಳೆಸಿದ ಸೌಹಾರ್ದ ಪರಂಪರೆ ಒಂದು ಗಟ್ಟಿಯಾದ ಸಹಬಾಳ್ವೆಯ ಸಾಂಸ್ಕøತಿಕ ಮನಸ್ಸನ್ನು ಸಿದ್ಧಪಡಿಸಿತ್ತು.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಜಾತಿ ಧರ್ಮ ಬೇಧವಿಲ್ಲದೇ ಹೋರಾಡುತ್ತಲೇ ಭೂಮಿ ಹಕ್ಕಿಗೆ ಕೆಂಬಾವುಟ ಹಿಡಿದು ಬೀದಿಗಿಳಿದ ಜಿಲ್ಲೆ. ದಕ್ಷಿಣದ ಬಾರ್ಡೊಲಿ. ಆದರೆ ಸೌಹಾರ್ದದ ಜಿಲ್ಲೆಯ ಹಸಿರು ಕಿತ್ತು ಮರುಭೂಮಿ ಮಾಡುವ ಸಂಘಪರಿವಾರದ ಮೇಲಾಟದ ಕಣವಾಗುತ್ತಿರುವುದು ತೀರಾ ದುಃಖದ ಸಂಗತಿ. ರಾಜಕೀಯವಾಗಿ ತೊಂಬತ್ತರ ದಶಕದ ತನಕವೂ ಸೌಹಾರ್ದದ ಕಣಜ. ಇಂಥ ಊರಿಗೆ “ಕೊಳ್ಳಿ ದೆವ್ವ”ದಂತೆ ವಕ್ಕರಿಸಿದ್ದು ಛಿದ್ರಕಾರಿ ಹಿಂದುತ್ವ..

ಇಲ್ಲಿ ಸಂಘಪರಿವಾರವು ಬಿಜೆಪಿಯೊಂದಿಗೆ ರಾಜಕೀಯ ಮೇಲಾಟದಲ್ಲಿ ಸೇರಿಕೊಂಡು ಜಿಲ್ಲೆಯ ಹಸಿರನ್ನು ಕಿತ್ತು ಮರುಭೂಮಿ ಮಾಡಲು ಹೊರಟಿದೆಯೇ? ಕೆಲವು ದಶಕಗಳ ಹಿಂದೆ ಜಿಲ್ಲೆಯಲ್ಲಿ ಆರ್.ಎಸ್.ಎಸ್ ತನ್ನ ಕಾರ್ಯಕರ್ತರನ್ನು ವೇತನ ನೀಡಿ ನೇಮಿಸಿಕೊಂಡು, ಎಲ್ಲಾ ಗ್ರಾಮಗಳಲ್ಲಿ ವಾರಾನ್ನಕ್ಕೆ ಉಳಿಸಿ, ಆ ಮನೆಯ ಸುತ್ತ ಆಟೋಟ ಮಾಡಿಸಿ, ಸಂಸ್ಕøತ ಸಂಭಾಷಣೆ, ಭಗವದ್ಗೀತೆ ಬಾಯಿಪಾಠ, ಲಕ್ಷಗೀತಾ ಯಜ್ಞ, ಪುರಾಣ ಪಠಣ ಮಾಡಿಸಿತು. ಅದರ ಮಧ್ಯೆಯೇ ಹಿಂದುತ್ವದ ದ್ವೇಷದ ಸಿದ್ಧಾಂತವನ್ನು ಪಸರಿಸಿತು. ಯಾವುದೇ ಪಕ್ಷಗಳಲ್ಲಿ ತನ್ನ ಕಾರ್ಯಕರ್ತರು ಇರುವಂತೆ ದೂರಗಾಮಿ ರಾಜಕೀಯ ಕಾರ್ಯ ಸಾಧಿಸಿತು. ಎಂಬತ್ತರ ದಶಕದಲ್ಲಿ ಬಿಜೆಪಿಯ ಸ್ಥಾಪನೆಯಾಗುತ್ತಲೇ, ಕರಾವಳಿಯ ಗುಂಟ ಮೊದಲು ವೈದ್ಯರನ್ನು – ಚಿತ್ತರಂಜನ್ ರಿಂದ ಕಾರವಾರದ ತುದಿಯಲ್ಲಿ ಪಿಕಳೆಯವರ ವರೆಗೆ- ತನ್ನ ತೆಕ್ಕೆಗೆ ತೆಗೆದುಕೊಂಡಿತು. ನಂತರದ ದಿನಗಳಲ್ಲಿ ಬೇರೆಪಕ್ಷದಲ್ಲಿ ತಾವು ಈಗಾಗಲೇ ಪಳಗಿಸಿದ, ಧನವಂತರನ್ನು ಅಥವಾ ಕೆಲವು ಜಾತಿಗಳ ಮುಖಂಡರನ್ನು, ಇತ್ತೀಚೆಗೆ ವಕೀಲರನ್ನು, ನಿವೃತ್ತ ಅಧಿಕಾರಿಗಳನ್ನು, ಮೀನುಗಾರ ಸಮುದಾಯದ ಮುಖಂಡರನ್ನು, ಪ್ರಬಲ ಮತದಾರ ಬ್ಯಾಂಕ್ ನಾಮಧಾರಿ ಸಮುದಾಯದ ನಾಯಕರನ್ನು ಹೀಗೆ ಬೇರೆ ಬೇರೆ ಸಮುದಾಯ/ಜಾತಿಗಳ ಸಮಾವೇಶವನ್ನು ನಡೆಸಿ ಅವರನ್ನು ತನ್ನತ್ತ ಸೆಳೆಯುತ್ತಿದೆ. ಇದಕ್ಕೆ ಪ್ರಬಲ ಸವಾಲು ಹಾಕಬೇಕಿದ್ದ ಕಾಂಗ್ರೆಸ್ ನಿಷ್ಕ್ರಿಯ ರಾಜಕಾರಣ, ಬಣಗಳ ಒಳಜಗಳದಲ್ಲಿ ತೊಡಗಿಕೊಂಡು ಕರಗಿಹೋಗುತ್ತಿದೆ.

ಭೂಮಿ ಹೋರಾಟದಲ್ಲಿ ಭೂಮಿ ಪಡೆದವರ ಮಕ್ಕಳು ತಮ್ಮ ಸ್ವಾಭಿಮಾನದ ಇತಿಹಾಸ ಅರಿಯದೇ ಅಂದಿನ ಭೂಮಾಲಕ ಪದ್ಧತಿಯ ವಕ್ತಾರರ ಜೊತೆಗೆ ಸೇರಿದ್ದಾರೆ. ಅಂದು ಸಾಮಾಜಿಕವಾಗಿ ತಮ್ಮನ್ನು ದಮನ ಮಾಡಿ, ಊರ ಹೊರಗಿಟ್ಟವರ ಜೊತೆಗೆ ಇಂದು ಉದ್ದದ ತಿಲಕವಿಟ್ಟು ಕೇಸರಿ ಬಾವುಟಕ್ಕೆ ಕೆಲವರು ಸೇರಿದ್ದಾರೆ. ಇಂಥ ದ್ವೇಷದ ಸಂಸ್ಕøತಿಯ ಸಂಘಕ್ಕೆ ಜಿಲ್ಲೆಯಲ್ಲಿ ಎಪ್ಪತ್ತು ವರ್ಷಗಳ ಇತಿಹಾಸವಿದ್ದರೂ ಹಿಂದೆಂದಿಗಿಂತಲೂ ಹೆಚ್ಚು ಪ್ರತಿಗಾಮಿಯಾದ ನಾಯಕತ್ವ ಈಗ ಸಿಕ್ಕಿದೆ. ಅವರೇ ಅನಂತ ಕುಮಾರ್ ಹೆಗಡೆ, ಕೇಂದ್ರ ಮಂತ್ರಿಗಳು.

“ಕೈಕಡಿ-ಕಾಲ್ ಕಡಿ, ಬೆಂಕಿ ಹಾಕು”
ಗಲಭೆಕೋರ ಅನಂತನ ರಾಜಕೀಯ ಹಿನ್ನೆಲೆ:

ಈಗ ನಲವತ್ತೊಂಬತ್ತಕ್ಕೆ ಕಾಲಿಡುತ್ತಿರುವ ಅನಂತಕುಮಾರ್ ರಾಜಕಾರಣ ಪ್ರವೇಶವಾಗಿದ್ದೇ ಹಿಂದುತ್ವದ ಸಂಘಟನೆಗಳ ಮೂಲಕ. ಪಿಯುಸಿ ತನಕ ಓದಿರುವ ಇವರು ಕೋರಿಯನ್ ಮಾರ್ಷಲ್ ಆಟ್ರ್ಸನ ಟ್ವೆಕಾಂಡೋ ಪಟುವೂ ಹೌದು. 1994 ರಲ್ಲಿ ಈದ್ಗಾದಲ್ಲಿ ನಡೆದ ಧ್ವಜ ಹಾರಿಸುವ ಹೋರಾಟದಲ್ಲಿ ಭಾಗವಹಿಸಿ ರಾಜಕೀಯ ಮುನ್ನೆಲೆಗೆ ಬಂದು ಚಿತ್ತರಂಜನ್ ಹತ್ಯೆಯ ಅನುಕಂಪನ್ನು ಜಿಲ್ಲೆಯಾದ್ಯಂತ ದ್ವೇಷಕ್ಕೆ ತಿರುಗಿಸಿ 1996 ರ 11 ನೇ ಲೋಕಸಭಾ ಚುನಾವಣೆಯಲ್ಲಿ ಗೆದ್ದರು. ಆಗ ಬಿಜೆಪಿಯ ಸಿದ್ಧಾಂತ ಒಪ್ಪಿ ಮತಹಾಕಿದವರು ಕಡಿಮೆ ಎಂದೇ ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಬಾಬರಿ ಮಸೀದಿ ಧ್ವಂಸಕ್ಕೆ ಜಿಲ್ಲೆಯ ಕರಸೇವಕರು ತೆರಳಲು ಭೂಮಿಕೆ ಸಿದ್ಧಪಡಿಸಿದ ಯುವ ನಾಯಕರಲ್ಲಿ ಇವರೂ ಒಬ್ಬರು. ಆದರೂ ಆಗ ಜಿಲ್ಲೆಯಲ್ಲಿ ತುಂಬಾ ಶಾಂತಿ ಸೌಹಾರ್ದ ನೆಲೆಸಿತ್ತು. ಇವರ ಬೇಳೆ ಬೇಯಲಿಲ್ಲ. ಹಾಗಾಗಿ ನಂತರದ ದಿನಗಳಲ್ಲಿ ಬಿಜೆಪಿಗರು ಭಟ್ಕಳವನ್ನೇ ಜಿಲ್ಲೆಯ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡರು. ಜಿಲ್ಲೆಯಾದ್ಯಂತ  ತಮ್ಮ ರಾಜಕಾರಣಕ್ಕೆ ಬಳಸಿ ಆ ಮೂಲಕ ಸತತ 5 ಬಾರಿ ಸಂಸದರಾದರು ವಿನಃ ಅಭಿವೃದ್ಧಿಯ ಕಾರಣಕ್ಕೆ ಅಲ್ಲ.

ಅಂದಿನ ಜಿಲ್ಲೆಯ ಪರಿಸ್ಥಿತಿ ಹೇಗಿತ್ತು?

ಅಂದು ಅನಂತ ದತ್ತಾತ್ರೇಯ ಹೆಗಡೆ ಎಂಬ ರೂಪವಂತ ಯುವಕ ಮನಸ್ಸಿನ ತುಂಬಾ ಅನ್ಯಧರ್ಮಗಳ ವಿರುದ್ಧ ನಂಜು ತುಂಬಿಕೊಂಡು ಲೋಕಸಭಾ ಚುನಾವಣೆಗೆ ಸಿದ್ಧವಾದ. ಆಗ ಉತ್ತರ ಕನ್ನಡದಲ್ಲಿ ಪರಿಸರ ಹೋರಾಟ ಜೋರಾಗಿತ್ತು, ಭಟ್ಕಳ ಗಲಭೆ ಹುಟ್ಟಿಹಾಕಲಾಗಿತ್ತು. ಕೈಗಾ ಅಣುವಿದ್ಯುತ್ ಕಟ್ಟಡದ ಗುಮ್ಮಟ ಕುಸಿದಿತ್ತು. ಜಿಲ್ಲೆಯ ಜನ ಮೂಲಸೌಕರ್ಯಗಳಾದ ರಸ್ತೆ, ಸೇತುವೆ, ವಿದ್ಯುತ್, ಉದ್ಯೋಗ, ಶಿಕ್ಷಣಕ್ಕಾಗಿ ಹಾತೊರೆಯುತಿದ್ದರು. ಹೊನ್ನಾವರದ ಊರೂರು ಸಂಪರ್ಕಿಸುವ ಶರಾವತಿ ನದಿಗೆ ಸೇತುವೆಗೆ ಹೋರಾಟ ನಡೀತಿತ್ತು. ಕಾಳಿ ಜಲ ವಿದ್ಯುತ್ ಯೋಜನೆಗೆ ಭೂಮಿ ಕಳಕೊಂಡ ಜೋಯಿಡಾ, ಯಲ್ಲಾಪುರ ಗ್ರಾಮೀಣ ಬಾಗದ ರೈತ ಸಂತೃಸ್ತರ ಪರಿಹಾರ, ಪುನರ್ವಸತಿ, ಪರ್ಯಾಯ ವ್ಯವಸ್ಥೆಗೆ ಹೋರಾಟ ಮುಗಿಲು ಮುಟ್ಟಿತ್ತು.

ಕೊಂಕಣ ರೈಲು ಕನಸು ನನಸಾಗುತ್ತಿದ್ದಾಗಲೇ ಅದಕ್ಕಾಗಿ ಭೂಮಿ ನೀಡಿದ ಕುಟುಂಬದ ಅಳಲು ಜೋರಿತ್ತು. ಸೀಬರ್ಡ ನೇವಲ್ ಬೇಸ್ ಪ್ರಾರಂಭವಾಗಿ ಮೀನುಗಾರರು ತಮ್ಮ ಸಾಂಪ್ರದಾಯಿಕ ಉದ್ಯೋಗದಿಂದ ವಂಚಿತರಾಗುತ್ತಿದ್ದರು. ಭೂ ರಹಿತ ಅರಣ್ಯ ಅತಿಕ್ರಮಣದಾರರು ತಮ್ಮ ಹಕ್ಕುಗಳಿಗೆ ಚಳುವಳಿಯ ಹಾದಿ ಹಿಡಿದಿದ್ದರು. ಪರಿಸರವಾದಿಗಳ ಕೂಗು ಇನ್ನೊಂದು ವೇದಿಕೆಯನ್ನು ಸಿದ್ಧಪಡಿಸಿತ್ತು. ಪ್ರಧಾನ ಸಮಸ್ಯೆಗಳ ಪರಿಹಾರಕ್ಕೆ ಧ್ವನಿಯಾಗದ ಬಿಜೆಪಿ- ಆರ್.ಎಸ್.ಎಸ್- ವಿಶ್ವ ಹಿಂದೂ ಪರಿಷತ್ತು ಈ ಹೋರಾಟಗಳ ದಿಕ್ಕನ್ನೇ ತ್ಪಪಿಸಿ ತಮ್ಮ ರಾಜಕೀಯ ಅಜೆಂಡಾ ಜಾರಿಗೊಳಿಸಲು ತಲ್ಲೀನರಾದರು. ಗಲಭೆಗಳ ಭಾಷಣಕ್ಕೆ ನಂಬರ್ ವನ್ ಮತ್ತು ಈಡೇರದ ಆಶ್ವಾಸನೆಗಳ ಸರದಾರ, ಅನಭಿವೃದ್ಧಿಯ ಉತ್ತರಕುಮಾರ “ಅನಂತ” ಸಂಸದರಾದರು.

ಈ ಮೇಲಿನ ಚಳುವಳಿಯ ಮುಖ್ಯ ಬೇಡಿಕೆ ಈಡೇರಿಸುವಲ್ಲಿ ನಮ್ಮ ಜಿಲ್ಲೆಯ ಅಂದಿನ ಕಾಂಗ್ರೆಸ್ ಎಂ.ಪಿ ದೇವರಾಯ ನಾಯ್ಕರಾಗಲೀ, ಅದಕ್ಕೂ ಮುಂಚೆ ಮುಖ್ಯಮಂತ್ರಿಗಳಾಗಿದ್ದ ಜಿಲ್ಲೆಯವರೇ ಆದ ಜನತಾದಳದ ರಾಮಕೃಷ್ಣ ಹೆಗಡೆಯವರೇ ಆಗಲಿ, ಜಿಲ್ಲೆಯ ದತ್ತು ಪುತ್ರರೆಂದೇ ಕರೆಯಿಸಿಕೊಂಡ ಕಾಂಗ್ರೆಸ್ ನ ಬಂಗಾರಪ್ಪನವರೇ ಆಗಲಿ ಸ್ಪಷ್ಟ ರಾಜಕೀಯ ಸೈದ್ಧಾಂತಿಕ ಕಣ್ಣೋಟದಿಂದ ಬಗೆಹರಿಸುವಲ್ಲಿ ವಿಫಲರಾದರು. ಕಾಂಗೈ ಮೇಲಿನ ದ್ವೇಷ ಮತ್ತು ಜನತೆಗೆ ಪರ್ಯಾಯ ರಾಜಕಾರಣ ಇಲ್ಲದೇ ಇರುವುದರಿಂದ, ಇದೆಲ್ಲದರ ಲಾಭವನ್ನು ಅಭಿವೃದ್ಧಿ ಪರ, ಮೂಲ ಸೌಕರ್ಯದ ಹೋರಾಟದ ಇತಿಹಾಸವೇ ಇಲ್ಲದ ಬಿಜೆಪಿ ಪರಿವಾರದವರು ಪಡೆಯಲು ಸುರಳೀತ ಮಾರ್ಗ ಸಿಕ್ಕಂತಾಯಿತು. ಅದರ ಪೂರ್ಣ ಲಾಭ ಅನಂತಕುಮಾರ್ ಗೆ ಸಿಕ್ಕಿತು. ಆಗಷ್ಟೇ ಈದ್ಗಾ, ಬಾಬ್ರಿ ಮಸೀದಿ ಪ್ರಕರಣ, ಚಿತ್ತರಂಜನ್ ಹತ್ಯೆ ಮತ್ತು ಆರ್.ಎಸ್.ಎಸ್ ನ ಕೋಮು ಪ್ರಚೋದಕ ಪ್ರಚಾರ ತಂತ್ರದಿಂದ ಫಲನೀಡಲು ಪ್ರಾರಂಭವಾಗಿತ್ತು.

ಜಿಲ್ಲೆಯಲ್ಲಿ ಮೂರು ಶಾಸಕರು ಬಿಜೆಪಿಗೆ ಹೊಂದಲು ಸಾಧ್ಯವಾಗಿತ್ತು. ಅದಕ್ಕಾಗಿ, ಅದಾಗಲೇ ಹತ್ತಾರು ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದ ಯಾವುದೇ ಕೋಮುಗಲಭೆಯಲ್ಲಿ ಸದಾ ಕ್ರಿಯಾಶೀಲವಾಗಿ ಇರುತ್ತಿದ್ದ ಜಿಲ್ಲೆಯ ಯುವಜನರನ್ನು ದ್ವೇಷದ ಭಾಷಣದ ಆಧಾರದಲ್ಲಿ ಎತ್ತಿಕಟ್ಟುವ ಕೌಶಲ್ಯಯುತ ಚಾಕಚಕ್ಯತೆಯ, ವಿಶೇಷವಾಗಿ ಜೈಲಿನಲ್ಲಿರಬೇಕಾದ ವ್ಯಕ್ತಿ ಸಂಸದರಾಗಿ ಆಯ್ಕೆಯಾಗಿದ್ದು ಶಾಂತಿಪ್ರಿಯ ಜಿಲ್ಲೆಯ ದುರಂತ. ಅದಾಗಿ ಇಪ್ಪತ್ತು ವರ್ಷಗಳ ಬಳಿಕ ಕೌಶಲ್ಯಾಭಿವೃದ್ಧಿ ಮಂತ್ರಿಗಳಾಗಿರುವುದು ಇನ್ನೊಂದು ದುರಂತವೇ ಸರಿ.

ಉತ್ತರ ಕನ್ನಡದಲ್ಲಿ “ಅಯೋಧ್ಯಾಕಾಂಡ” ಸೃಷ್ಟಿಗೆ ಶತಾಯಗತಾಯ ಪ್ರಯತ್ನಿಸಿದ ವಿಶ್ವಹಿಂದೂ ಪರಿಷತ್ತು. ಭಟ್ಕಳ ನೂರಾರು ಬಾರಿ ಕಫ್ರ್ಯೂ ಕಾಣುವಂತಾಯಿತು, ಉದ್ಯಮಿಗಳು ಊರು ಬಿಟ್ಟರು, ಹೆಣಗಳು ಬಿದ್ದವು, ಭೀಕರ ಗಾಯಗಳು, ಕೋಟ್ಯಾಂತರ ರೂಪಾಯಿ ಆಸ್ತಿಪಾಸ್ತಿ ನಷ್ಟವಾಯಿತು, ಪ್ರಾರ್ಥನಾ ಮಂದಿರಗಳು ಧ್ವಂಸವಾದವು. ಬಡವರ ತುತ್ತು ಚೆಲ್ಲಿ ಹೋಯಿತು. ಗಲಭೆ ಸೃಷ್ಟಿಸಿದವರು ಹಾಯಾಗಿ ಉಳಿದರು, ಬಡ ಹಿಂದುಳಿದ ಅಮಾಯಕರು ದೊಂಬಿಗೆ ಬಲಿಯಾದರು. ಲೂಟಿ ಮಾಡಿದರು, ಹಿಂದೂ ಕೋಮಿನವರಿಗೆ ಬುರ್ಖಾಹಾಕಿಸಿ ನಾಮಧಾರಿಗಳ ಮೇಲೆ ಹಲ್ಲೆ ಮಾಡಲಾಯಿತು, ಬಸ್ಸಿನಿಂದ ಮುಸ್ಲಿಂರನ್ನು ಎಳೆದಾಡಿ, ಆಭರಣ ಲೂಟಿ ಮಾಡಿ, ರಾಮರಾಮ ಹೇಳು ಎಂದು ಬಲವಂತ ಪಡಿಸಲಾಯಿತು. ವ್ಯವಸ್ಥಿತ ಹಲ್ಲೆ, ಪೂರ್ವನಿಯೋಜಿತ ಗಲಭೆಗಳನ್ನು ಸೃಷ್ಟಿಸುವಲ್ಲಿ ಆರ್.ಎಸ್.ಎಸ್ ನಿಸ್ಸೀಮ. ಅದಕ್ಕೇ ಪ್ರತಿಕ್ರಿಯೆಯಾಗಿ ಮುಸ್ಲಿಂ ಮೂಲಭೂತವಾದಿಗಳು ದಾಳಿಗಳಿಗೆ ಮುಂದಾದರು. ರಾಜಕೀಯ ಉದ್ದೇಶವಿಲ್ಲದೇ ಬಿಜೆಪಿ ಪರಿವಾರ ಇಂಥ ಗಲಭೆ ಸೃಷ್ಟಿಸಿಲ್ಲ. ಅಂದಿನ ಸಿ.ಎಂ ಬಂಗಾರಪ್ಪನವರ ಬಣದಲ್ಲಿ ಶಾಸಕರಾದ ಆರ್.ಎನ್. ನಾಯ್ಕ, ನಂತರ ಶಾಸಕರಾದ ಜೆ.ಡಿ ನಾಯ್ಕ ಕೂಡ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದರು.!

ಅದರ ಭೂಮಿಕೆಯನ್ನು ಹೇಗೆ ಸಿದ್ಧಪಡಿಸಲಾಗಿತ್ತು? ಹಿಂದು, ಅಂದು, ಇಂದು ಮುಂದು ಎಂದು ಹೇಳಿ ಮನೆಗೊಂದು ಕೇಸರಿ ಬಾವುಟ ಯೋಜನೆ, ಬ್ರಾಹ್ಮಣರೇತರರಿಗೆ ಉದ್ದ ತಿಲಕವಿಟ್ಟು ದೀಕ್ಷೆ, ಸಾಮೂಹಿಕ ಭೋಜನ, ಅಯೋಧ್ಯೆಯ ಘಟನೆ ಕುರಿತು ಸುಳ್ಳು ಸುದ್ದಿ ಹಬ್ಬಿಸುವುದು, ಶಸ್ತ್ರಾಸ್ತ್ರಗಳ ಸಂಗ್ರಹ (ಎರಡೂ ಬಣದಿಂದ) ಮಾಡಿಟ್ಟುಕೊಳ್ಳುವುದು ನಡೆಯಿತು. ಬಾಬ್ರಿ ಮಸೀದಿ ಬಿದ್ದಾಗ ಜಿಲ್ಲೆಯಲ್ಲಿ ಯಾವ ಹಿಂಸೆ ಮಾಡಿಸಲು ಆಗಿಲ್ಲವೂ ಅದನ್ನೆಲ್ಲ ಈಗ ಮಾಡಿಸಿದರು. ಸೌಹಾರ್ದ ಪರಂಪರೆಯ ತಿಳಿ ನೀರಿಗೆ ಕಲ್ಲೆಸೆದು ಷಡ್ಯಂತ್ರ ರೂಪಿಸಿದರು.

“ಅತಿ ಕಡಿಮೆ ಹಾಜರಾತಿಯ ಅನಂತ”

1996 ರಿಂದ 1998 ರವರೆಗೆ ಅಂದಿನ ಅನುದಾನ 4 ಕೋಟಿ ಜಿಲ್ಲೆಗೆ ಬರಬೇಕಿತ್ತು. ಆದರೆ ಇವರ ನಿಷ್ಕ್ರಿಯ ಅಭಿವೃದ್ಧಿ ದೃಷ್ಟಿಯಿಂದಾಗಿ ಆ ವರ್ಷಗಳಲ್ಲಿ ಆ ಹಣ ಉಪಯೋಗಕ್ಕೆ ಬಳಸಲೇ ಇಲ್ಲ. ಪಾಕಿಸ್ತಾನ್ ವಿರುದ್ಧ, ಮುಸ್ಲಿಂ-ಕ್ರಿಶ್ಚಿಯನ್ ವಿರುದ್ಧ ಮತ್ತು ಜಿಲ್ಲೆಯ ಶಾಂತಿ ಕದಡುವದು ಹೇಗೆ ಎಂದು ಸ್ಕೆಚ್ ಹಾಕಿಕೊಳ್ಳುವುದರಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಹಣ ತರಲು ಪುರಸೊತ್ತು ಆಗಿಲ್ಲ. 90 ರ ದಶಕಕ್ಕಿಂತ ಮೊದಲು ಸಂಸದರ ಅನುದಾನವಿರಲಿಲ್ಲ, ಪಿ.ವಿ. ನರಸಿಂಹರಾವ್ 1 ಕೋಟಿ ಅನುದಾನಕ್ಕೆ ನಂತರ ವಾಜಪೇಯಿ ಪ್ರಧಾನಿ ಆದಾಗ ವಾರ್ಷಿಕ 2 ಕೋಟಿ ಅನುದಾನದ ಘೋಷಣೆಯಾಯಿತು. ಆದರೆ ಅನಂತ ಕುಮಾರ ತನ್ನ ಸಂಸ್ಥೆಯ ಉದ್ಧಾರಕ್ಕೆ ತನ್ನ ಪಕ್ಷದ ಅಜೆಂಡಾ ಜಾರಿಗೆ ಮತ್ತು ತನ್ನ ವೈಯಕ್ತಿಕ ಚಹರೆಯನ್ನು ಉತ್ತಮ ಪಡಿಸಿಕೊಳ್ಳಲು ನಿರತರಾದರು ವಿನಃ ಜಿಲ್ಲೆಯ ಅಭಿವೃದ್ಧಿ ಕಡೆಗೆ ಲಕ್ಷವನ್ನೇ ಹಾಕಿಲ್ಲ.

ಈ ಸಂಸದರು ಇಷ್ಟು ವರ್ಷಗಳಲ್ಲಿ ಸಂಸತ್ತಿನ ಕಲಾಪಗಳಲ್ಲಿ ಎಷ್ಟು ಬಾಗವಹಿಸಿದ್ದಾರೆ? ಯಾವೆಲ್ಲ ಪ್ರಶ್ನೆಗಳನ್ನು ಕೇಳಿದ್ದಾರೆ? ಜಿಲ್ಲೆಯ ಅರಣ್ಯವಾಸಿ, ಬುಡಕಟ್ಟುಗಳ ಕುರಿತು ಇವರ ನಿಲುವೇನು? ಇಲ್ಲಿಯ ನಿರಾಶ್ರಿತರು ಹಸಿವೆಯಿಂದ ಬಳಲಿದಾಗ ಸಾಂತ್ವನ ಹೇಳಿದ್ದರೇ? ಭೂಮಿ ಪ್ರಶ್ನೆಯ ಇತ್ಯರ್ಥಕ್ಕೆ ಹಾಗೂ ಕಾನೂನು ಜನಪರ ತಿದ್ದುಪಡಿಗೆ ಏನಾದರೂ ಪ್ರಯತ್ನ ಮಾಡಿದ್ದರಾ? ಯಾವೆಲ್ಲ ಗಮನಸೆಳೆಯುವ ಪ್ರಶ್ನೆ ಎತ್ತಿದ್ದರು? ಸುತರಾಂ ಇಲ್ಲ. ಇವರು ವಿವಿಧ ಸಮಿತಿಗಳಲ್ಲಿ ಇಷ್ಟು ವರ್ಷ ಇದ್ದರು. ಆದರೆ ಜನರಿಗೆ ಗೊತ್ತಿಲ್ಲ. ಉದಾ: ವಿದೇಶಾಂಗ ವ್ಯವಹಾರ, ಕೃಷಿ, ಗೃಹ, ರಕ್ಷಣಾ, ಸಂಸದೀಯ ವ್ಯವಹಾರ ಸಮಿತಿಯಲ್ಲಿದ್ದರು. ಈಗ ವಿದೇಶಾಂಗ ವ್ಯವಹಾರ ಸಮಿತಿಯಲ್ಲಿದ್ದರು. ಸ್ಪೈಸ್ (ಸಾಂಬಾರ) ಮಂಡಳಿಯ ನಿರ್ದೇಶಕರಾಗಿದ್ದಾರೆ. ಇದು ಸ್ವಲ್ಪ ಗೊತ್ತಿದೆ. ಏಕೆಂದರೆ ಜಿಲ್ಲೆಯಲ್ಲಿ ಅನ್ನ ನೀಡುವ ಬೆಳೆ ಬಿಟ್ಟು, ವಾಣಿಜ್ಯ ಬೆಳೆ ಕೋಕಾ, ವೆನಿಲ್ಲಾ, ಅಗರ್ ಉಡ್ ಬೆಳೆಗೆ ಆದ್ಯತೆ ನೀಡಿದರು.!! ಆದರೆ ಸಂಸತ್ತಿನ ಕಲಾಪಗಳಲ್ಲಿ ಅತಿ ಕಡಿಮೆ ಬಾಗವಹಿಸಿದ ಖ್ಯಾತಿ ಆದರೆ ಫುಲ್ ಪೇಮೆಂಟ್ ಪಡೆದ ಖ್ಯಾತಿಯೂ ಇವರದ್ದೇ!!.

ಸಾಧನೆಯ ಪಟ್ಟಿ:

ಸಾಮರಸ್ಯ ಕೆಡಿಸಲು ಕೆಲಸ ಮಾಡುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಚಾಕು, ಚೂರಿ ಇರಿತ, ಗಲಾಟೆ, ದೊಂಬಿ, ಶಾಂತಿ ಭಂಗ, ಪ್ರಚೋದನ ಕಾರಿ ಭಾಷಣ, ಕೋಮು ಗಲಭೆಗೆ ಸ್ಕೆಚ್ ಇವು ಪ್ರಮುಖವಾಗಿ ಇವರ ಮೇಲಿರುವ ಆರೋಪಗಳು. ಎಲ್ಲವೂ ಅನ್ಯ ಧರ್ಮೀಯರ ಮೇಲೆ ಎಗರಿ ಬಿದ್ದ ಕೇಸುಗಳೇ. ಹಾಗಾಗಿ 90 ರ ದಶಕದಲ್ಲಿ ಅನೇಕ ತಿಂಗಳು ತಲೆ ಮರೆಸಿಕೊಂಡ ಈ ಅಪರಾಧಿಯು ಸಂಸದ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಎಂದು ತಿಳಿದ ಕೂಡಲೇ ಅಂದು ಹೆಚ್ಚು ಚಾಲ್ತಿಯಲ್ಲಿದ್ದ ಶಿರಸಿ ಮೂಲದ ಸ್ಥಳೀಯ ಪತ್ರಿಕೆ “ಮುನ್ನಡೆ” ಹೀಗೆ ಬರೆದಿತ್ತು-“ಇದೀಗ ನೂರೆಂಟು ಕ್ರಿಮಿನಲ್ ಆಪಾದನೆಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಅನಂತ ಕುಮಾರ ಎಂಬ ಮನುಷ್ಯನಲ್ಲದ ಕ್ರೂರಿಗೆ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡಿ ಚಾರಿತ್ರ್ಯವಂತರ ಪಕ್ಷ ಎಂಬುದರ ಸಮಾಧಿ ....... ತಣ್ಣಗಿನ ಈ ಜಿಲೆಯಲ್ಲಿ ಕೋಮುದಳ್ಳುರಿ ಎಬ್ಬಿಸಿದ ಹತ್ತಾರು ಪ್ರಕರಣಗಳು ಇವರ ಮೇಲಿದೆ” ಎಂದು. ಈ ವ್ಯಕ್ತಿಗೆ ಜಿಲ್ಲೆಗೆ ಕಾಲಿಡದಂತೆ ಕೋರ್ಟು ಕೂಡ ಆದೇಶಿಸಿತ್ತು. ಅಂದು ಜಿಲ್ಲೆಯಲ್ಲಿ ನಡೆದ ಹಲವು ದರೋಡೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡ ಬಹುತೇಕರು ಇವರ ಶಿಷ್ಯರೇ ಆಗಿದ್ದರು. ಆಗ ಇದನ್ನು “ಹಾಯ್ ಬೆಂಗಳೂರು” ಪತ್ರಿಕೆ ವರದಿ ಮಾಡಿತ್ತು. ಚಿತ್ತರಂಜನ್ ಕೊಲೆ ಪ್ರಕರಣದಲ್ಲಿಯೂ ಭಟ್ಕಳದಲ್ಲಿ ಇವರ ಬಗ್ಗೆ ಪೋಷ್ಟರ್ ಗಳನ್ನು ಹಾಕಿರುವ ಬಗ್ಗೆ ಸುದ್ದಿ ಓದಿದ್ದು ನೆನಪಿದೆ. “ಆದರೆ ಈ ಎಲ್ಲ ಪ್ರಕರಣ ತನಗೆ ಮೆಡಲ್ ಇದ್ದಂತೆ” ಎಂದು ಹುಂಬತನದ ಉತ್ತರ ಇವರದ್ದು. ಇವರ ಕಾರಣದಿಂದಾಗಿಯೇ ಕಾರವಾರದ ಅಂಜುದೀವ್, ಚಂದಾವರ, ಯಲ್ಲಾಪುರ, ಶಿರಸಿ, ಭಟ್ಕಳಗಳು ಭಯದ ಬೇಗುದಿಯಲ್ಲಿರುವಂತಾಗಿದೆ.

ಹೀಗೆ ತಣ್ಣಗಿದ್ದ ಶಾಂತಿಯ ಜಿಲ್ಲೆಯ ಕಾಡಿದ್ದು ಇವರ ಬಹುದೊಡ್ಡ ಸಾಧನೆ. ಇಷ್ಟೆಲ್ಲ ಆದ ಮೇಲೂ ಇವರು ಹೇಳುವುದು”ಅಕ್ಷರ ಮಾರಾಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವವರ ದೃಷ್ಟಿಯಲ್ಲಿ ನಾನು ಆರೋಪಿ” ಎಂದು ತನ್ನ ಕ್ರಿಮಿನಲ್ ತನವನ್ನು ಸಮರ್ಥಿಸಿಕೊಳ್ಳುತ್ತಾರೆ ಮಂತ್ರಿಯಾದ ಮೇಲೂ.

ಸೀಬರ್ಡ ನೌಕಾನೆಲೆ ತಾನು ಮಾಡಿಸಿದ್ದು ಎಂದರು, ಆದರೆ ಇದರ ಕಾರಣಕರ್ತರು ಬೇರೆಯೇ. ಆದರೆ ನಿರಾಶ್ರಿತರ ಗೋಳು ತಡೆಗಟ್ಟಬಹುದಾಗಿತ್ತು ಅದೂ ಆಗಿಲ್ಲ ಇವರಿಂದ. ಅಂಕೋಲಾ ಹುಬ್ಬಳ್ಳಿ ರೈಲು ತಂದೆ ಎಂದು ರೈಲು ಬಿಟ್ಟಿದ್ದೇ ಬಂತು, ಪ್ರಚಾರಕ್ಕಾಗಿ ಕಲ್ಲು ಹಾಕಿಸಿದ್ದೇ ಸಾಧನೆ. ಪರಿಸರವಾದಿಗಳ ಅಡ್ಡಗಾಲಿನಿಂದ ಅರ್ಧಕ್ಕೆ ನಿಂತಿದೆ ಎಂದು ಹೇಳುವ ಇವರು ಕೂಡ ಪರಿಸರವಾದದಿಂದಲೇ ಬಂದವರು ಮತ್ತು ಇವರಲ್ಲಿ ಬಹುತೇಕರು ಆರ್.ಎಸ್.ಎಸ್ ನವರೇ. ತಿಳಿ ಹೇಳಬಹುದಲ್ಲ?

1998-99 ರಲ್ಲಿ ಜಿಲ್ಲೆಯ ನಿರುದ್ಯೋಗಿಗಳ ಸಂಖ್ಯೆ 56,760 ಉದ್ಯೋಗ ವಿನಿಮಯ ಕಛೇರಿಯಲ್ಲಿ ದಾಖಲು ಮಾಡಿಕೊಂಡವರು. ಈಗ ಅದು 2 ಲಕ್ಷಕ್ಕೂ ಹೆಚ್ಚು. ಐದು ಅವಧಿ ಸಂಸದರಾದ ಇವರು ಯಾರಿಗೆ ಉದ್ಯೋಗ ಕೊಡಿಸಿದರು? ಅದಕ್ಕಾಗಿ ಯಾವೆಲ್ಲ ಹೋರಾಟ ಮಾಡಿದರು? ಯಾವೆಲ್ಲ ಯೋಜನೆ ತರಬೇಕೆಂದು ಕೇಂದ್ರಕ್ಕೆ ಒತ್ತಾಯಿಸಿದರು?

ಕೌಶಲ್ಯ ಮಂತ್ರಿಗಳು ಸುಳ್ಳು ಹೇಳುವುದರಲ್ಲಿ ಕೌಶಲ್ಯ ಬೆಳೆಸಿಕೊಂಡಿದ್ದಾರೆ ಎಂಬುದಂತೂ ಸತ್ಯ. ಸುಭಾಸ್ ಚಂದ್ರ ಬೋಸರ ಸಾವಿನ ವಿಚಾರದಲ್ಲಿ ಸುಳ್ಳು ಹರಿಬಿಟ್ಟರು. ನಂತರ ಯಾರೋ ಕ್ಲ್ಯಾರಿಫಿಕೇಶನ್ ಕೊಡುವ ಸಂದರ್ಭ ಬಂತು. ಈಗ ಟಿಪ್ಪು ಜಯಂತಿ ಕಾರ್ಯಕ್ರಮ ಕುರಿತು ಭಾರೀ ಗೌಜು ಗದ್ದಲ ಸೃಷ್ಟಿಯ ನಾಯಕತ್ವ ವಹಿಸಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಗೆ ಧಮಕಿ ಹಾಕಿದ್ದಾರೆ.

ಇತಿಹಾಸ, ಧರ್ಮ, ಸಂಪ್ರದಾಯ, ಸಂಸ್ಕøತಿ ರಾಷ್ಟ್ರೀಯತೆಯ ಬಗ್ಗೆ ಕಲ್ಪನೆ ಇಲ್ಲದವರು ನನ್ನನ್ನು ಆರೋಪಿ ಎನ್ನುತ್ತಾರೆ. ಎನ್ನುತ್ತಾ ತಾನು ಹಿಂದುತ್ವವಾದಿಯಲ್ಲ ರಾಷ್ಟ್ರೀಯವಾದಿ ಎಂದು ಹೇಳಿಕೆ ಕೊಟ್ಟರು. ಮತ್ತೊಂದು ದಿನ ರಾಷ್ಟ್ರೀಯವಾದ ಮತ್ತು ಹಿಂದುತ್ವ ಎರಡೂ ಒಂದೇ, ಅದನ್ನು ಭಿನ್ನವಾಗಿ ನೋಡುವವರು ಮೂರ್ಖರು ಎಂದು ಹೇಳಿ ತನ್ನ ತಾನೇ ಮೂರ್ಖನನ್ನಾಗಿಸಿಕೊಂಡರು!.

ಇವರು ಮತಾಂಧರೇ ಯಾಕೆಂದರೆ, ಇಸ್ಲಾಂ ಇರೋ ತನಕ ಭಯೋತ್ಪದನೆ ನಿಯಂತ್ರಣ ಸಾಧ್ಯವಿಲ್ಲ ಎಂದು ಹೇಳಿ ಒಂದು ಧರ್ಮದ ನಿರ್ನಾಮಕ್ಕೆ ಹೊರಡುವರಿವರು. ಭಯೋತ್ಪ್ಪಾದನೆಯನ್ನು ಸಾರಾಸಗಟು ಒಂದು ಧರ್ಮದ ತಲೆಗೆ ಅಂಟಿಸುವ ಇವರನ್ನು ಏನೆಂದು ಕರೆಯಬೇಕು?

ಕೌಶಲ್ಯ ಅಭಿವೃದ್ಧಿ ಮಂತ್ರಿಯಾಗಿ  ಗಿಮಿಕ್?:

ಸೆಪ್ಟೆಂಬರ್ 3 ರಂದು ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವರಾದ ಮೇಲೆ “ನನ್ನದು ಉದ್ಯೋಗ ಸೃಷ್ಟಿಸುವ ಖಾತೆ, ವರ್ಷಕ್ಕೆ 1.96 ಕೋಟಿ ಉದ್ಯೋಗ ಜನರಿಗೆ ನೀಡುವ ಖಾತೆ, ಅದೊಂದು ಸವಾಲು, ಇನ್ನು 25 ವರ್ಷಗಳಲ್ಲಿ ಭಾರತದ 67 % ಜನರ ಜೀವನ ಶೈಲಿ ಬದಲಾಗಲಿದೆ” ಎಂದರು. ಅಂದರೆ ಮುಂದಿನ 25 ವರ್ಷಗಳ ಕಾಲ ಜನ ಪೂರ್ಣ ಉದ್ಯೋಗಕ್ಕೆ ಕಾಯಬೇಕು, ಇವರೇ ಆರಿಸಿಬರಲಿದ್ದಾರೆ!. ಕೌಶಲ್ಯಾಭಿವೃದ್ಧಿಗೆ ವಿಶ್ವವಿದ್ಯಾಲಯ ಸ್ಥಾಪಿಸಲಿದ್ದಾರಂತೆ, ಇಂಡಿಯನ್ ಸ್ಕಿಲ್ ಡೆವೆಲೆಪ್ ಮೆಂಟ್ ಸರ್ವಿಸಸ್ (ಐ.ಎಸ್.ಡಿ.ಎಸ್) ಜಾರಿಗೊಳಿಸಲು ತೀರ್ಮಾನಿಸಿದ್ದಾರಂತೆ. ಅನಕ್ಷರಸ್ಥರಿಗೂ ಕೌಶಲ್ಯ ಪದವಿ ನೀಡಲಾಗುವುದೆಂದು ಆಸೆ ಹುಟ್ಟಿಸಿದ್ದಾರೆ.

ಮಾನವೀಯತೆಯ ಸ್ಯಾಂಪಲ್: ಮತಧರ್ಮ ದ್ವೇಷಿಗಳಿಂದ ಯಾವ ರೀತಿಯ ಮಾನವೀಯತೆ ನಿರೀಕ್ಷೆ? ಸಂಸದ ಮಂತ್ರಿ ಆಗುವ ಪೂರ್ವವೂ ಅದೇ ಜಾತಕ. ರಾತ್ರಿ ಹೊತ್ತು ಶಿರಸಿಯ ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ಮಾಡಿದ್ದು ದೇಶವೇ ನೋಡಿದೆ. ಮೊನ್ನೆಮೊನ್ನೆ ಮಂತ್ರಿಗಳಾದ ಮೇಲೆ ಧಾರವಾಡದ ಅಂಗವಿಕಲರ ಶಾಲೆಗೆ ಬರುತ್ತೇನೆಂದು ಹೇಳಿ ಸತಾಯಿಸಿ ಕೊನೆಗೂ ಹೋಗಲೇ ಇಲ್ಲವಂತೆ, ಆ ಎಲ್ಲಾ ಅಂಗವಿಕಲ ಮಕ್ಕಳು ಕಾದು ಕಾದು ಸುಸ್ತಾದರಂತೆ.

ಇನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಸುದ್ದಿಯ ಕುರಿತು: “ನಾನಿನ್ನು ಲೋಕಸಭೆಗೆ ಸ್ಪರ್ಧಿಸುವುದಿಲ್ಲ” ಎಂದು ಆಗಾಗ ಹೇಳುತ್ತಿದ್ದಾರೆ. ಇವರು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅಪರಾವತಾರದಂತೆ! ಅದಕ್ಕೇಂದೇ ಆರ್.ಎಸ್.ಎಸ್ ವ್ಯವಸ್ಥಿತವಾಗಿ ಇವರನ್ನು ಬೆಳೆಸಿದೆ. ಸಜ್ಜನರ ಪಕ್ಷ, ಸುಸಂಸ್ಕøತರ ನಾಯಕತ್ವ, ಭಿನವಾದ ಪಕ್ಷ ಎಂದು ಹೇಳಿಕೊಂಡು ತನ್ನೊಳಗೆ ಕ್ರಿಮಿನಲ್ ತನವನ್ನು ಮುಚ್ಚಿಟ್ಟುಕೊಳ್ಳುತ್ತಿದೆ, ವಿವಿಧ ಹಗರಣದಲ್ಲಿ ಭಾಗಿಯಾಗಿ ಜೈಲು ಸೇರುವವರಿಗೆ ರಕ್ಷಣೆ ಕೊಟ್ಟು ಕಾಯುವ ಕಾವಲುಗಾರ ಪಕ್ಷವಾಗಿದೆ. ಲೈಂಗಿಕ ಹಗರಣದಲ್ಲಿ ಭಾಗಿಯಾದವರಿಗೆ ಸಂಸ್ಕøತಿ ರಕ್ಷಣೆಯ ಪಟ್ಟಕೊಡುತ್ತಾರೆ. ಮಕ್ಕಳ ಮತ್ತು ಮಹಿಳೆಯರ ಮಾರಾಟ ಜಾಲದಲ್ಲಿದ್ದವರಿಗೆ ರಾಷ್ಟ್ರೀಯ ನಾಯಕತ್ವ ಕೊಡುತ್ತಾರೆ.

ತಮ್ಮ ವಿಚಾರ ಒಪ್ಪದವರನ್ನು ಈ ಲೋಕ ಬಿಟ್ಟು ಕಳಿಸ್ತಾರೆ. ಕಮ್ಯುನಿಷ್ಟರನ್ನು ಕೊಚ್ಚಿ ಕೊಲೆ ಮಾಡುತ್ತಾರೆ. ಅಂಥವರೇ ದೇಶಭಕ್ತರಾಗಿರುವ ಇವರ ಪಕ್ಷದಲ್ಲಿ ಕ್ರಿಮಿನಲ್ ಹಿಂದುತ್ವದ ಹಿನ್ನೆಲೆಯ ಮತಾಂಧರೊಬ್ಬರು ಮುಖ್ಯಮಂತ್ರಿ ಅಭ್ಯರ್ಥಿ ಆದರೆ ಆಶ್ಚರ್ಯವೇನಿದೆ? ಪ್ರತಿಬಾರಿ ಚುನಾವಣೆಗೆ ನಿಂತಾಗಲೂ “ತನಗೆ ಅಲ್ಪಸಂಖ್ಯಾತರ ಓಟ್ ಬೇಡ” ಅಭಿವೃದ್ಧಿಗಿಂತ ಮತಧರ್ಮವೇ ಮೇಲು, ಎನ್ನುವ ಕಟ್ಟರ್ ಆರ್.ಎಸ್.ಎಸ್ ನವರನ್ನು ಈ ಹುದ್ದೆಗೆ ತರಬಹುದು. ಪೋಲಿಸರು ಯಾವತ್ತಿಗೂ ನಿಯತ್ತಿನ ನಾಯಿಗಳು, ಎಂದು ಜರೆಯುತ್ತಾ, ನನ್ನ ವಿರುದ್ಧ ಕೇಸ್ ಹಾಕಿ ಏನ್ ಹರ್ಕೊಂಡ್ರಿ ಎಂದು ಕಾನೂನು ಕೈಗೆತ್ತಿಕೊಳ್ಳುವ ಬಹುತೇಕ ಅಸಂವಿಧಾನಿಕ ಅಸಂಸದೀಯ ಪದಪ್ರಯೋಗ ಕುಶಲನಿಗೆ ಮುಖ್ಯಮಂತ್ರಿ ಅಭ್ಯರ್ಥಿತನ ಸುಲಭವಾಗಿ ದಕ್ಕಬಹುದು, ಅದೇ ಅರ್ಹತೆಯೂ ಆಗಬಹುದು. ಪ್ರಜಾವಾಣಿಯಲ್ಲಿ ಇತ್ತೀಚೆಗೆ ಈ ಕುರಿತು ಸುದ್ದಿ ಬಂದಾಗ ನಿಜಕ್ಕೂ ಆತಂಕವಾಯಿತು. ಈಗಂತೂ ಜಿಲ್ಲೆಯ 6 ಕ್ಷೇತ್ರ ಮತ್ತು ಬೆಳಗಾವಿಗೆ ಸೇರಿದ ಕೆನರಾ ಕ್ಷೇತ್ರದ 2 ಶಾಸಕ ಸ್ಥಾನ ತಾವೇ ಗೆಲ್ಲುತ್ತೇವೆಂಬ ಅಹಂಕಾರದಲ್ಲಿದ್ದಾರೆ.

ಟಿಪ್ಪು ಜಯಂತಿಗೆ ಧಮಕಿ

ಜಿಲ್ಲೆಯ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಥಮ ಹುತಾತ್ಮ ಟಿಪ್ಪುವನ್ನು ಅವಮಾನಿಸಿ ಧರ್ಮಾಂಧನೆಂದು ಹೇಳಿ ಸಮಾರಂಭಕ್ಕೆ ಧಮಕಿ ಹಾಕಿರುವುದು ಮತ್ತು ಶಾಂತಿ ಸೌಹಾರ್ದತೆಯನ್ನು ಕೆಡವಲು ತನ್ನ ಉದ್ರೇಕಕಾರಿ ಮಾತಿನ ಮೂಲಕ ಸಂವಿಧಾನ ಉಲ್ಲಂಘಿಸಿದ್ದಾರೆ. ತನ್ನ ಸಚಿವ ಸ್ಥಾನದ ಗಂಭೀರತೆಯನ್ನು ಮರೆತು ಓರ್ವ ಧಾರ್ಮಿಕ ವಕ್ತಾರರಂತೆ ಮಾತನಾಡಿದ್ದಾರೆ. ಜೊತೆಗೆ ರಾಜ್ಯದ ಬಿಜೆಪಿ ನಾಯಕರು ಸರದಿಯಂತೆ ಉದ್ರೇಕಕಾರಿ ಹೇಳಿಕೆ ಕೊಟ್ಟು ಜನತೆಯ ಸೌಹಾರ್ದತೆಯನ್ನು ಮುರಿಯುವ ಪ್ರಯತ್ನ ಮಾಡುತ್ತಿದ್ದಾರೆ. ಟಿಪ್ಪು ಜಯಂತಿಗೆ ಧಿಕ್ಕಾರ ಕೂಗುವ ನಮ್ಮ ಉತ್ತರ ಕನ್ನಡ ಜಿಲ್ಲೆಯ ಕೇಂದ್ರ ಮಂತ್ರಿ ಅನಂತಕುಮಾರ್ ಹೆಗಡೆಯವರು ಬಳಸಿದ ಧಮಕಿ ಹಾಕುವ ಮಾತು “ತಾಕತ್ತಿದ್ದರೆ” ಎನ್ನುವ ಶಬ್ದದಿಂದಲೇ ತಿಳಿಯುತ್ತದೆ ಇವರಿಗೆ ಇನ್ನೊಂದು ವಿಚಾರವನ್ನಾಗಲಿ ಭಾರತದ ಬಹುಸಂಸ್ಕøತಿಯ ಆಚರಣೆಗಳನ್ನಾಗಲಿ ಸಹಿಸುವ ಗೌರವಿಸುವ ಮನೋಭಾವ ಇಲ್ಲದ ಧರ್ಮಾಂಧ ಪ್ರತಿಕ್ರಿಯೆ ಎಂಬುದು ಸಾಬೀತು ಆಗುತ್ತದೆ.