ಸಾಮಾಜಿಕ ನ್ಯಾಯದ ಹೋರಾಟಕ್ಕೆ ಹೊಸ ಹುಮ್ಮಸ್ಸು

ಸಂಪುಟ: 
11
ಸಂಚಿಕೆ: 
47
date: 
Sunday, 12 November 2017

ನಾಗರಾಜ ನಂಜುಂಡಯ್ಯ

ದಲಿತ್ ಶೋಷಣ ಮುಕ್ತಿ ಮಂಚ್‍ನ 2ನೇ ರಾಷ್ಟ್ರೀಯ  ಸಮ್ಮೇಳನ

ತಮಿಳುನಾಡಿನ ಮಧುರೈ ನಗರದಲ್ಲಿ ನವೆಂಬರ್ 4 ರಿಂದ 6 ರ ವರೆಗೆ ದಲಿತಾ ಶೋಷಣ ಮುಕ್ತಿ ಮಂಚ್ (ಡಿಎಸ್‍ಎಂಎಂ) ನ 2ನೇ ಅಖಿಲ ಭಾರತ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯಿತು. ಒಟ್ಟು 452 ಪ್ರತಿನಿಧಿಗಳು ಇದರಲ್ಲಿ 55 ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದರು. ಕರ್ನಾಟಕದಿಂದ 32 ಪ್ರತಿನಿಧಿಗಳು ಅದರಲ್ಲಿ 10 ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಡಿಎಸ್‍ಎಂಎಂ ನ ಉದ್ಘಾಟನಾ ಸಮಾವೇಶÀವು 2014 ರಲ್ಲಿ ನವದೆಹಲಿಯಲ್ಲಿ ನಡೆದಾಗ 9 ರಾಜ್ಯಗಳಲ್ಲಿ ಮಾತ್ರ ಇದರ ಸದಸ್ಯ ಸಂಘಟನೆಗಳಿದ್ದವು. ಇದರಲ್ಲಿ ನಮ್ಮ ರಾಜ್ಯ ‘ದಲಿತ ಹಕ್ಕುಗಳ ಸಮಿತಿ’ (ಡಿಹೆಚ್‍ಎಸ್) ಕೂಡ ಒಂದಾಗಿತ್ತು. ಇದೀಗ ಈ 2ನೇ ಸಮ್ಮೇಳನದಲ್ಲಿ 22 ರಾಜ್ಯಗಳಿಂದ ಡಿಎಸ್‍ಎಂಎಂ ಗೆ ವಿವಿಧ ಬಗೆಯ ‘ದಲಿತ’ ಸಂಘಟನೆಗಳು ಸದಸ್ಯರಾಗಿರುವುದು ದೇಶಾದಾದ್ಯಂತ ಡಿಎಸ್‍ಎಂಎಂ ನ ವಿಸ್ತರಣೆಗೆ ಸಿಕ್ಕಿರುವ ಮಹತ್ವವಾಗಿದೆ.

ಡಿಎಸ್‍ಎಂಎಂ ಒಂದು ಜಾತಿಯ ವೇದಿಕೆಯಲ್ಲ. ಈ ವೇದಿಕೆಯ ಆರಂಭವಾಗಿರುವುದು “ಭಾರತ ದೇಶದಲ್ಲಿನ ಪಾಳೇಯಗಾರಿ ವ್ಯವಸ್ಥೆಯ ಭಾಗವಾಗಿರುವ ಜಾತಿ ಪದ್ಧತಿ. ಜಾತಿ-ತಾರತಮ್ಯ ಹಾಗೂ ಅಸ್ಪøಶ್ಯತಾ ಆಚರಣೆಗಳನ್ನು ನಿರ್ಮೂಲನೆ ಮಾಡುವುದಾಗಿದೆ ಎಂಬ ಸ್ವಷ್ಟವಾದ ಕಾರ್ಯಯೋಜನೆ ಹಾಗೂ ಕಾರ್ಯತಂತ್ರದ ಆಧಾರದಲ್ಲಿ. ನಮ್ಮ ದೇಶದಲ್ಲಿನ ಜಾತಿ ಪದ್ಧತಿಯು ಮೂಲತಃ ವರ್ಗ ಶೋಷಣೆ ಮತ್ತು ಜಾತಿದಮನ ಎರಡು ಅಂಶಗಳನ್ನು ಹೊಂದಿರುವುದರಿಂದ `ಜಾತಿ ಪದ್ಧತಿಯ ನಿರ್ಮೂಲನೆ’ ಡಿಎಸ್‍ಎಂಎಂ ನ ಮೂಲ ಉದ್ದೇಶವಾಗಿದೆ. ಈ ಉದ್ದೇಶಕ್ಕಾಗಿ ಯಾರಾದರೂ ವ್ಯಕ್ತಿಗಳು, ಸಂಘಟನೆಗಳು ಹೋರಾಟದಲ್ಲಿ ಈಗಾಗಲೇ ತಮ್ಮನ್ನು ತೊಡಗಿಸಿಕೊಂಡಿದ್ದರೆ, ಅಂತಹವರು ಡಿಎಸ್‍ಎಂಎಂ ನ ಸದಸ್ಯರಾಗಬಹುದು.

ಹೀಗೆ ಸ್ವಷ್ಟವಾದ ಕಾರ್ಯಯೋಜನೆಯೊಂದಿಗೆ ಮೂರು ವರ್ಷಗಳ ಹಿಂದೆ ಆರಂಭವಾದ ಈ ವೇದಿಕೆಯೊಂದಿಗೆ ಈಗಾಗಲೇ ದೇಶದಾದ್ಯಂತ ಸಾಕಷ್ಟು ಸಂಘಟನೆಗಳು ಆಕರ್ಷಿಸುತ್ತಿರುವುದು ಈ 2ನೇ ಸಮ್ಮೇಳನದ ಪ್ರಮುಖ ವಿಚಾರವಾಗಿತ್ತು. ಮೂರು ವರ್ಷಗಳ ಹಿಂದೆ ತೆಗೆದುಕೊಂಡ ನಿರ್ಣಯಗಳ ಆಧಾರದಲ್ಲಿ ನಡೆಸಿದ ಕಾರ್ಯ-ಚಟುವಟಿಕೆಗಳು, ಹೋರಾಟಗಳ ಕುರಿತಂತೆ, ವಿಮರ್ಶೆ ಮಾಡಿಕೊಂಡು, ಇದರಿಂದ ಕಲಿತ ಹೊಸ-ಹೊಸ ಪಾಠಗಳನ್ನು ತನ್ನ ಸೈದ್ಧಾಂತಿಕ ಉದ್ದೇಶಗಳ ಹಿನ್ನೆಲೆಯಲ್ಲಿ ಮೈಗೂಡಿಸಿಕೊಳ್ಳಲು ಈ ಸಮ್ಮೇಳನವು ಹೆಚ್ಚು ಆದ್ಯತೆ ಒದಗಿಸಿತು.

ಡಿಎಸ್‍ಎಂಎಂ ತನ್ನ ಸೈದ್ಧಾಂತಿಕ ಮುನ್ನೋಟದ ಹಾದಿಯ ಕಡೆ ಹೆಜ್ಜೆಯಿಡಲು ಈ 2ನೇ ಸಮ್ಮೇಳನವು ಸುಮಾರು 20 ಕ್ಕೂ ಹೆಚ್ಚು ನಿರ್ಣಯಗಳನ್ನು ಅಂಗೀಕರಿಸಿತು.

ಉದ್ಘಾಟನಾ ಸಮಾರಂಭ :

ಸಮ್ಮೇಳನವನ್ನು ಸಂವಿಧಾನದ ಶಿಲ್ಪಿ ಡಾ|ಬಿ.ಆರ್. ಅಂಬೇಡ್ಕರ್‍ರವರ ಮೊಮ್ಮಗ ಡಾ|ಪ್ರಕಾಶ್ ಅಂಬೇಡ್ಕರ್ ರವರು ಉದ್ಘಾಟಿಸಿದ್ದು ಮಹತ್ವಪೂರ್ಣವಾಗಿತ್ತು. ಅಂಬೇಡ್ಕರ್ ರವರ ವಂಶಜರು ಬದುಕಿರುವಾಗಲೇ, ಅವರನ್ನು ಕೋಮುವಾದಿಗಳು ಹೈಜಾಕ್ (ಅಪಹರಿಸಿ) ಮಾಡುತ್ತಿರುವ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ, ಭಾರತ ದೇಶದಲ್ಲಿ ದಲಿತರಿಗೆ ಒಂದು ಸ್ವಾಭಿಮಾನದ ಬದುಕನ್ನು ಪಡೆಯುವಲ್ಲಿ ಡಾ| ಅಂಬೇಡ್ಕರ್ ರವರ ಪಾತ್ರವನ್ನು ಯಾರೂ ಅಲ್ಲೆ ಗೆಳೆಯಲಾರರು. ಸಂವಿಧಾನವು ದಲಿತರಿಗೆ ಕೊಟ್ಟ ರಾಜಕೀಯ ಸಮಾನತೆಯನ್ನು ಮತದಾನಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಆದರೆ ಆರ್ಥಿಕ ಸಮಾನತೆಯ ಮೂಲಭೂತವಾಗಿರುವ ಭೂಮಿ ಹಂಚಿಕೆಯ ವಿಚಾರದಲ್ಲಿ 70 ವರ್ಷಗಳಿಂದ ವಂಚಿಸಲಾಗುತ್ತಿದೆ ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ಪ್ರಕಾಶ್ ಅಂಬೇಡ್ಕರ್ ನೆನಪಿಸಿದರು.

ನಮ್ಮ ದೇಶದ ಮಾರ್ಕ್ಸ್ ವಾದಿಗಳು ಹಾಗೂ ದಲಿತ ಚಳುವಳಿಗಳು ಸೇರಿ ಹೋರಾಟ ಮಾಡಬೇಕೆಂಬ ತಮ್ಮ ಹಂಬಲದ ಬಗ್ಗೆ ವಿವರಿಸುತ್ತಾ, ಡಿಎಸ್‍ಎಂಎಂ ನ ಕಾರ್ಯವನ್ನು ತುಂಬು ಹೃದಯದಿಂದ ಅಭಿನಂದಿಸಿದರು. ತಮ್ಮ ಭಾಷಣದ ಉದ್ದಕ್ಕೂ ಆರ್‍ಎಸ್‍ಎಸ್ ಹಾಗೂ ಸಂಘ ಪರಿವಾರದ ಗುಂಪುಗಳಿಂದ ಕಳೆದ 2014 ರಿಂದೀಚೆಗೆ ದಲಿತರು ಅಲ್ಪ ಸಂಖ್ಯಾತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಗುಜರಾತಿನ ಉನಾ ಪ್ರಕರಣದಿಂದ ಮೊದಲುಗೊಂಡು, ಮುಂಬೈ ನಗರದಲ್ಲಿ ಅಂಬೇಡ್ಕರ್ ರವರ ಭವನ ನಾಶಗೊಳಿಸಿದ್ದು, ದಾದ್ರಿ ಪ್ರಕರಣ, ರೋಹಿತ್ ವೆಮುಲಾ ಪ್ರಕರಣ ಹೀಗೆ ಇವೆಲ್ಲದಕ್ಕೂ ಬಿಜೆಪಿಯ ಪ್ರತಿಗಾಮಿ ಕೋಮುವಾದವೇ ಕಾರಣವೆಂದು ಬಲವಾಗಿ ಪ್ರತಿಪಾದಿಸಿದರು.

‘ಸಂವಿಧಾನ’ವೋ ಅಥವಾ ‘ಮನುವಾದ’ವೋ?

ಪ್ರಸಕ್ತ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯು, ಆರ್‍ಎಸ್‍ಎಸ್ ನ ಅಜೆಂಡಾಗಳನ್ನು ಜಾರಿಗೊಳಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿರುವುದರ ಬಗ್ಗೆ ಉದಾಹರಣೆಗಳ ಮೂಲಕ ಪ್ರಕಾಶ್ ಅಂಬೇಡ್ಕರ್ ರವರು ತಮ್ಮ ಉದ್ಘಾಟನಾ ಬಾಷಣದಲ್ಲಿ ತಿಳಿಸಿಕೊಟ್ಟರು.

ಆರ್‍ಎಸ್‍ಎಸ್ ಗೆ ಸಂವಿಧಾನ ಬೇಕಾಗಿಲ್ಲ, ಬದಲಿಗೆ ಮನುವಾದ ಅದರ ನಿಜವಾದ ಜೀವಾಳ. ಮನುವಾದ’ದ ಹೆಸರಿನಲ್ಲಿ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ನಾಶಗೊಳಿಸುವ ಸಂಚು ನಡೆಸುತ್ತಿದೆ. ಇದರ ಬಗ್ಗೆ ಎಚ್ಚರದಿಂದರಬೇಕೆಂದರು. ರಾಷ್ಟ್ರದ ಸಾಂಸ್ಕøತಿಕ ಚಟುವಟಿಕೆಗಳು ಮನುಸ್ಮøತಿಯಂತೆ ನಡೆಯಬೇಕೆಂಬ, “ಹಿಂದೂ ರಾಷ್ಟ್ರದ” ಹಂಬಲದೊಂದಿಗೆ ತನ್ನ ಆಡಳಿತದಲ್ಲಿ ಆರ್‍ಎಸ್‍ಎಸ್ ನವರನ್ನೆ ತುಂಬುತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಅಂಬೇಡ್ಕರ್ ರವರ ಸಂವಿಧಾನದ ಆಶಯಗಳನ್ನು ನಾಶಮಾಡುವುದೇ ಇದರ ಮೂಲ ಉದ್ದೇಶವಾಗಿದೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿದ್ದ ವಿಡುತಲೈ ಚಿರುತೈಗಲ್ (ಬಿಡುಗಡೆ ಚಿರುತೆಗಳು) ನ ಅಧ್ಯಕ್ಷರಾದ ‘ತೋಲರ್‍ಗಳ್ ತಿರುಮವಲ್ಲವಂ’ ರವರು ಮಾತನಾಡುತ್ತಾ, ಮಾಕ್ರ್ಸ್‍ವಾದ ಮತ್ತು ಅಂಬೇಡ್ಕರ್‍ವಾದದಲ್ಲಿ ಸಮಾನತೆ, ಆರ್ಥಿಕತೆಯ ವಿಚಾರದಲ್ಲಿ ಸಾಮ್ಯತೆಯಿರುವುದರಿಂದ ಈ ಎರಡು ಚಳುವಳಿಗಳು ಐಕ್ಯತೆಯೊಂದಿಗೆ ಹೋರಾಟ ನಡೆಸಿದರೆ, ರಾಜಕೀಯ ಅಧಿಕಾರ ಹಿಡಿಯಲು ಕಷ್ಟವಿಲ್ಲ. ಆ ನಿಟ್ಟಿನಲ್ಲಿ ಆಲೋಚಿಸಬೇಕೆಂದರು. ಡಿಎಸ್‍ಎಂಎಂ ನ ಈ ಸಮ್ಮೇಳನ ಚಿಂತಿಸಬೇಕೆಂದರು. ಬಡತನ ನಿರ್ಮೂಲನೆ ನಿಮ್ಮಿಂದ ಮಾತ್ರ ಸಾಧ್ಯವೆಂದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ, ಡಿಎಸ್‍ಎಂಎಂ ನ ರಾಷ್ಟೀಯ ಸಂಚಾಲಕರಾದ ಕೆ. ರಾಧಾಕೃಷ್ಣನ್ ಮಾತನಾಡಿ, ಕಳೆದ ಮೂರು ವರುಷಗಳಲ್ಲಿನ ಡಿಎಸ್‍ಎಂಎಂ ನ ನಿರ್ದೇಶನಗಳ ಆಧಾರದಲ್ಲಿ ವಿವಿಧ ರಾಜ್ಯಗಳು ನಡೆಸಿರುವ ಹೋರಾಟಗಳು ಪ್ರಮುಖವಾಗಿ ತಮಿಳುನಾಡು, ಆಂಧ್ರ, ತೆಲಂಗಾಣ, ಕರ್ನಾಟಕ ರಾಜ್ಯಗಳಲ್ಲಿ ದೇವಸ್ತಾನ ಪ್ರವೇಶ, ಭೂಮಿಯ ಪ್ರಶ್ನೆ ಕುರಿತಂತೆ ನಡೆಸಿರುವ ಹೋರಾಟಗಳು ಆಯಾ ಪ್ರದೇಶದ ದಲಿತ ಸಮುದಾಯದವರನ್ನೂ ನಮ್ಮ ಡಿಎಸ್‍ಎಂಎಂ ನ ಕಡೆ ಆಕರ್ಷಿಸುವಲ್ಲಿ ಯಶಸ್ವಿಯಾಗಿರುವ ಬಗ್ಗೆ ತಿಳಿಸಿದರು. ಸ್ವಾಗತ ಸಮಿತಿಯ ಪರವಾಗಿ ಸಾಮ್ಯೂಲ್ ರಾಜ್ ರವರು ಆರಂಭದಲ್ಲಿ ಸ್ವಾಗತಿಸಿದರು. ಸ್ವಾಮಿನಾಥನ್ ವಂದಿಸಿದರು.

ಕಾರ್ಯ ವಿಮರ್ಶೆಯ ಮತ್ತು ರಾಜ್ಯಗಳಲ್ಲಿನ ಚಟುವಟಿಕೆಗಳ ವರದಿ ಮಂಡನೆ

ಎರಡನೆ ದಿನ, ಡಿಎಸ್‍ಎಂಎಂನ ಸಂಚಾಲಕರಾದ ಕೆ. ರಾಧಾಕೃಷ್ಣನ್ ರವರು ವರದಿಯನ್ನು ಮಂಡಿಸಿದರು. ವರದಿಎರಡು ಬಾಗಗಳಾಗಿ ತಯಾರಾಗಿತ್ತು. ಮೊದಲನೆ ಭಾಗದಲ್ಲಿ ಮೂರು ವರ್ಷಗಳ ‘ಕಾರ್ಯ ವರದಿ ಅಥವಾ ಕೆಲಸದ ವರದಿಯಾಗಿತ್ತು. ಎರಡನೆ ಭಾಗ ರಾಜ್ಯಗಳು ನಡೆಸಿದ್ದ ಪ್ರಮುಖ ಹೋರಾಟಗಳು ಹಾಗೂ ಚಟುವಟಿಕೆಗಳು, ಇದರ ಮೇಲೆ 26 ಪ್ರತಿನಿಧಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು. ಕರ್ನಾಟಕದ ಪ್ರತಿನಿಧಿಗಳ ಪರವಾಗಿ ಎನ್. ನಾಗರಾಜ ರವರು ಚರ್ಚೆಯಲ್ಲಿ ಭಾಗವಹಿಸಿದ್ದರು.

ಕೆಲಸದ ವಿಮರ್ಶೆಯ ವರದಿಯ ಮೇಲಿನ ಚರ್ಚೆಯಲ್ಲಿ ಮೂಡಿ ಬಂದ ಪ್ರಮುಖ ಅಂಶಗಳಲ್ಲಿ ತಮಿಳುನಾಡು ಅಸ್ಪøಶ್ಯತಾ ನಿವಾರಣಾ ವೇದಿಕೆ, ಆಂಧ್ರ ಮತ್ತು ತೆಲಂಗಾಣದ ಕುಲ ವಿಲಕ್ಷಣ ಪೋರಾಟಂ ಸಮಿತಿ, ಕರ್ನಾಟಕದ ದಲಿತ ಹಕ್ಕುಗಳ ಸಮಿತಿಯ ಹೋರಾಟಗಳು ಪ್ರಮುಖವಾಗಿ ಪ್ರತಿನಿಧಿಗಳ ಗಮನ ಸೆಳೆದವು. ಅದೇ ರೀತಿ, ಉತ್ತರ ಭಾರತದ ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಉತ್ತರಕಾಂಡ, ಛತ್ತೀಸ್‍ಗರ್, ಮಧ್ಯಪ್ರದೇಶಗಳಲ್ಲಿ ಡಿಎಸ್‍ಎಂಎಂ ನ ರಾಜ್ಯ ಸಮಿತಿಗಳು ಆರಂಭಗೊಂಡಿರುವುದು ಮೆಚ್ಚುಗೆಗೆ ಪಾತ್ರವಾಯಿತು.

ಕೇರಳ, ತ್ರಿಪುರ ಹಾಗೂ ಪಶ್ಚಿಮ ಬಂಗಾಳದಲ್ಲಿ ಹಾಗೂ ಹಿಮಾಚಲ ಪ್ರದೇಶಗಳಲ್ಲಿನ ಚಟುವಟಿಕೆಗಳು ದಲಿತರ ಮಧ್ಯೆ ಎಡಪಕ್ಷಗಳ ಮೇಲೆ ಪ್ರಮುಖವಾಗಿ ಸಿಪಿಐ(ಎಂ) ಪಕ್ಷದ ಮೇಲಿನ ಆರೋಪಗಳನ್ನೂ ಬುಡಮೇಲು ಮಾಡುತ್ತಿರುವುದು ಚರ್ಚೆಯಲ್ಲಿ ಮೂಡಿ ಬಂದವು.

ಕೇರಳ ರಾಜ್ಯದಲ್ಲಿ ‘ಇತ್ತೀಚೆಗೆ ದೇವಸ್ಥಾನಗಳಿಗೆ ದಲಿತ ಅರ್ಚಕರನ್ನೂ ನೇಮಕ ಮಾಡಿದ್ದು ಎಲ್ಲರ ಮೆಚ್ಚಿಗೆಗೆ ಪಾತ್ರವಾಯಿತು. ಮಾತ್ರವಲ್ಲದೆ, ಜಾತಿ ವಿನಾಶದ ಡಿಎಸ್‍ಎಂಎಂ ನ ಮೂಲ ಉದ್ದೇಶದ ದಿಕ್ಕಿನಡೆ ದಿಟ್ಟ ಹೆಜ್ಜೆಯಾಗಿದೆ. ಸಂವಿಧಾನದಲ್ಲಿನ ‘ಮೀಸಲಾತಿ’ಯ ನಿಜವಾದ ಅರ್ಥವನ್ನು ಪಿಣರಾಯಿ ವಿಜಯನ್ ಆಡಳಿತ ಎತ್ತಿ ಹಿಡಿದಿದೆ. ಇದು ಇತರೆ ರಾಜ್ಯಗಳಿಗೆ ಮಾದರಿಯಾಗಲಿ ಎಂಬ ಆಶಯವು ಭಾಗವಹಿಸಿದ್ದ ಪ್ರತ್ರಿನಿಧಿಗಳಲ್ಲಿ ಮೂಡಿ ಬಂದಿತ್ತು.

ಚರ್ಚೆಗೆ ಸು. ಶ್ರೀನಿವಾಸ್‍ರಾವ್ ಉತ್ತರಿಸಿದ ನಂತರ ಅಂಗೀಕರಿಸಲ್ಪಟಿತ್ತು. ಈ ಮಧ್ಯೆ ಸೌಹಾರ್ದ ಸಂಘಟನೆಗಳಾದ, ಬಿಎಸ್‍ಎನ್‍ಎಲ್, ವಿಮೆ, ಬ್ಯಾಂಕ್ ಹಾಗೂ ಆದಿವಾಸಿ ಸಮನ್ವಯ ಸಮಿತಿಯಿಂದ ಎಸ್.ವೈ. ಗುರುಶಾಂತ್ ಶುಭಕೋರಿ ಮಾತನಾಡಿದರು. ಡಿಎಸ್‍ಎಂಎಂ ನ ಕೇಂದ್ರದ ಪರವಾಗಿ ಬಿ.ವಿ. ರಾಘವುಲು ಮಾತನಾಡಿ, ಹಲವು ಅಂಶಗಳಿಗೆ ಸ್ಪಷ್ಟನೆ ನೀಡಿದರು. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯ ಅಗತ್ಯತೆ, ಬಡ್ತಿಯಲ್ಲಿ ಮೀಸಲಾತಿ, ಅಂತರಜಾತಿಯ ವಿವಾಹ ಹಾಗೂ ಭೂಮಿಯ ಪ್ರಶ್ನೆಯ ಕುರಿತಂತೆ ಮಾತನಾಡಿದರು.

ಸುಮಾರು 20 ಕ್ಕೂ ಹೆಚ್ಚು ನಿರ್ಣಯಗಳನ್ನು  ಅಂಗೀಕರಿಸಲಾಯಿತು.

 1.  ದಲಿತರ ಭೂಮಿಯನ್ನು ಗುಜರಾತ್, ಹರಿಯಾಣ, ಉತ್ತರ ಪ್ರದೇಶ್, ರಾಜಸ್ತಾನ, ಛತ್ತೀಸ್‍ಗರ್ - ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸ್ವಾಧೀನ ಪಡಿಸಿಕೊಂಡು ಅನ್ಯಾಯವೆಸಗಿರುವ ಬಗ್ಗೆ ಹಾಗೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಂದಿರುವ ಕ್ರೂರ-ಕಠಿಣ ಭೂಸ್ವಾದೀನ ಸುಗ್ರಿವಾಜ್ಞೆಯನ್ನು ಹಿಂಪಡೆಯಬೇಕೆಂಬ ಪ್ರಮುಖ ನಿರ್ಣಯ.
   
 2.  ನವ-ಉದಾರವಾದದ ದುಷ್ಪರಿಣಾಮದಿಂದ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ ಮತ್ತು ಇದರ ವಿರುದ್ಧ ಹೆಚ್ಚುತ್ತಿರುವ ಹೋರಾಟಗಳ ಬಗ್ಗೆ.
   
 3.  ಕೋಮುವಾದಿ ಮತ್ತು ಜಾತಿವಾದಿ ಶಕ್ತಿಗಳಿಂದ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ಹಿಮ್ಮೆಟಿಸುವ - ಹೋರಾಟ ಕುರಿತಂತೆ.
   
 4.  ಅಸ್ಪøಶ್ಯತೆ ಹಾಗೂ ಜಾತಿ-ತಾರತಮ್ಯದ ವಿರುದ್ಧ ಸರ್ಕಾರದ ವತಿಯಿಂದಲೇ ‘ಒಂದು ಯೋಜನಾ ಬದ್ಧವಾದ’ ಚಾಲನೆಗಾಗಿ ಒತ್ತಾಯಿಸುವ ನಿರ್ಣಯ.
   
 5. ದಲಿತ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಸೂಕ್ತ ಕಾನೂನು ಪರಿಪಾಲನೆಗಾಗಿ ಒತ್ತಾಯಿಸಿ.
   
 6.  ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆಯನ್ನು ಬಲಪಡಿಸುವ ಕುರಿತಂತೆ.
   
 7.  ಬಡ್ತಿಯಲ್ಲಿ ಮೀಸಲಾತಿ ಹಾಗೂ ಖಾಸಗೀ ಕ್ಷೇತ್ರದಲ್ಲಿ ಮೀಸಲಾತಿ ಅಗತ್ಯತೆ ಕುರಿತಂತೆ.
   
 8.  ದೇವದಾಸಿ ಮಹಿಳೆಯರ ಕುಟುಂಬಗಳಿಗೆ - ಪುರ್ನವಸತಿ ಕಲ್ಪಿಸುವ ಕುರಿತಂತೆ.
   
 9.  ಸಫಾಯಿ ಕರ್ಮಚಾರಿಗಳಿಗೆ - ಹಕ್ಕುಗಳನ್ನು ಒತ್ತಾಯಿಸಿ.
   
 10.  ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ ಖಂಡಿಸಿ, ಚಲನ ಚಿತ್ರ ಕಲಾವಿದರಾದ ಪ್ರಕಾಶ್ ರಾಯ್ ಮತ್ತು ಕಮಲ್ ಹಾಸನ್ ರವರ ಮೇಲೆ ಇತ್ತೀಚೆಗೆ ಕೊಲೆಯ ಬೆದರಿಕೆ ಖಂಡಿಸಿ.
   
 11.  ಪರಿಶಿಷ್ಟ ಜಾತಿ ಉಪಯೋಜನೆ (ಎಸ್‍ಸಿ/ಎಸ್‍ಪಿ) ಹಾಗೂ ಟಿ.ಎಸ್.ಪಿ ಕಾಯಿದೆಯನ್ನು ಕೇಂದ್ರದಲ್ಲಿ ಅನುಷ್ಠಾನಕ್ಕೆ ತರಬೇಕೆಂಬ ಒತ್ತಾಯ.

ಹೀಗೆ ಪ್ರಮುಖವಾದ 20 ಕ್ಕೂ ಹೆಚ್ಚು ನಿರ್ಣಯಗಳನ್ನು ಮಂಡಿಸಿ, ಹಲವು ಸೂಕ್ತ ತಿದ್ದುಪಡಿಗಳೊಂದಿಗೆ ಸಮ್ಮೆಳನವು ಅಂಗೀಕರಿಸಿತು. ಕರ್ನಾಟಕದ ಪ್ರತಿನಿಧಿUಳ ಪರವಾಗಿ (1) ಬಡ್ತಿಯಲ್ಲಿ ಮೀಸಲಾತಿ, (2) ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಹಾಗೂ (3) ದೇವದಾಸಿ ಮಹಿಳೆಯರ ಕುಟುಂಬಗಳಿಗೆ ಪುನರ್ ವಸತಿ ಒದಗಿಸುವ ಮೂರು ನಿರ್ಣಯಗಳನ್ನು ಮಂಡಿಸಲಾಯಿತು.

ಬಹಿರಂಗ ಸಭೆ

ಕೊನೆಯ ದಿನ ಸುಮಾರು 6 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ ಮೆರವಣಿಗೆಯನ್ನು ಎರ್ಪಡಿಸಲಾಗಿತ್ತು. ಮಧುರೈ ನಗರದ ಸಾಮೂಹಿಕ ಸಂಘಟನೆಗಳು, ಸಾಮಾನ್ಯ ಜನ ಸಾಮಾನ್ಯರು ಹೆಚ್ಚಾಗಿ ಭಾಗವಹಿಸಿದ್ದ ಈ ಮೆರವಣಿಗೆ ತುಂಬ ಅರ್ಥ ಪೂರ್ಣ ಸಂದೇಶವನ್ನು ರವಾನಿಸುವಲ್ಲಿ ಪ್ರಮುಖವಾಗಿತ್ತು. ಈ ದೇಶದ ದಲಿತರು ಅನುಭವಿಸುತ್ತಿರುವ ಜಾತಿ ದಮನ ಹಾಗೂ ಅಸ್ಪøಶ್ಯತಾ ಆಚರಣೆಗಳನ್ನು ತೊಡೆದು ಹಾಕುವಲ್ಲಿ ಮಧುರೈ ನಗರದ ಸಾಮಾನ್ಯ ಜನ ಸಮುದಾಯವು ನಿಮ್ಮೊಂದಿಗೆ ನಾವು ಇದ್ದೇವೆ, ಜೊತೆಗೂಡಿ ಈ ಅಮಾನವೀಯ ಆಚರಣೆಗಳನ್ನು ನಿರ್ಮೂಲನೆ ಮಾಡೋಣ ಎಂಬ ಪ್ರಬಲವಾದ ಸಂದೇಶವನ್ನು ದೇಶದ ಪಾಳೇಯಗಾರಿ ಮೌಲ್ಯಗಳನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿರುವ, ಆರ್‍ಎಸ್‍ಎಸ್ ಹಾಗೂ ಸಂಘಪರಿವಾರದವರಿಗೆ ಹಾಗೂ ಪ್ರಬಲ ಕೋಮಿನ ಸಮುದಾಯಗಳಿಗೆ ಈ ಮೆರವಣಿಗೆ ಎಚ್ಚರಿಕೆಯ ಗಂಟೆಯನ್ನು ರವಾನಿಸಿತು. ಮಧುರೈನ ಸಾಮೂಹಿಕ ಹಾಗೂ ವರ್ಗ ಸಂಘಟನೆಗಳಿಗೆ ಅಭಿನಂದನೆಗಳನ್ನೂ ಸಲ್ಲಿಸಲೇಬೇಕು.

ಮೆರವಣಿಗೆಯ ನಂತರ ಬಹಿರಂಗ ಸಭೆಯನ್ನು ಉದ್ದೇಶಿಸಿ, ಕೇರಳದ ಮುಖ್ಯಮಂತ್ರ್ರಿ ಪಿಣರಾಯಿ ವಿಜಯನ್ ಮಾತನಾಡಿದರು. ನಾವೆಲ್ಲ ಹೆಮ್ಮೆ ಪಡುವಂತ ಗಣ್ಯರು ಡಾ| ಅಂಬೇಡ್ಕರ್ ರವರು, ಅವರೊಬ್ಬ ರಾಷ್ಟ್ರನಾಯಕರಾಗಿದ್ದರು, ಅವರ ಮೊಮ್ಮಗ ಡಾ| ಪ್ರಕಾಶ್ ಅಂಬೇಡ್ಕರ್ ರವರು ಡಿಎಸ್‍ಎಂಎಂ ನ ಈ ಸಮ್ಮೇಳನ ಉದ್ಘಾಟಿಸಿದ್ದು ಅರ್ಥಪೂರ್ಣವಾಗಿದೆ. ಸಂವಿಧಾನದ ಆಶಯಗಳು, ಅದರಲ್ಲಿರುವ ಮೀಸಲಾತಿ ಸವಲತ್ತುಗಳು ಇಂದು, ಪ್ರಸಕ್ತ ನರೇಂದ್ರಮೋದಿ ಸರ್ಕಾರ ನಾಶಗೊಳಿಸಲು ಪ್ರಯತ್ನಿಸುತ್ತಿದೆ. ಆ ನಿಟ್ಟಿನಲ್ಲಿ ದಲಿತರು ಒಂದಾಗಿ ದೊಡ್ಡ ಚಳುವಳಿಗೆ ಧುಮುಕಲು ಇದು ಸಕಾಲವಾಗಿದೆ. ಡಿಎಸ್‍ಎಂಎಂ ಆ ಕೆಲಸ ಮಾಡಬೇಕಾದ ದೊಡ್ಡ ಸವಾಲನ್ನು ಹೊಂದಿದೆ ಎಂದರು.

ಕೇರಳದಲ್ಲಿ ಹಾಗೂ ತ್ರಿಪುರ ರಾಜ್ಯಗಳಲ್ಲಿನ ಸಿಪಿಐ(ಎಂ) ನೇತೃತ್ವದ ಎಡ ಪಕ್ಷಗಳ ಸರ್ಕಾರಗಳು ದಲಿತರಿಗೆ - ಸಂವಿಧಾನ ಬದ್ಧವಾಗಿರುವ ಎಲ್ಲಾ ಸವಲತ್ತುಗಳನ್ನು ಪ್ರಮುಖವಾಗಿ ಭೂಮಿ ಹಂಚಿಕೆ, ವಸತಿ ಹಾಗೂ ಉದ್ಯೋಗಗಳಲ್ಲಿ ಮೀಸಲಾತಿ ಒದಗಿಸುವ ನಿಟ್ಟಿನಲ್ಲಿ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಕೇರಳದಲ್ಲಿ ದೇವಸ್ಥಾನಗಳಲ್ಲಿ ದಲಿತ ಅರ್ಚಕರನ್ನು ನೇಮಿಸಿರುವುದು ಸಂವಿಧಾನದ ಆಶಯವಾಗಿದೆ ಎಂದರು.

ಪ್ರಸ್ತುತ ದೇಶದ ರಾಜಕೀಯವು ತುಂಬ ಅಪಾಯಕಾರಿ ಹಂತವನ್ನು ತಲುಪುತ್ತಿದೆ. ಬಿಜೆಪಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ನಿಯಂತ್ರಣ ಹೊಂದಿದೆ. ಆರ್‍ಎಸ್‍ಎಸ್ ನೀತಿಗಳನ್ನು ಜಾರಿ ಮಾಡುವ ಕೆಲಸವೇ ಕೇಂದ್ರದ ಬಿಜೆಪಿಯದ್ದು. ಆರ್‍ಎಸ್‍ಎಸ್ ನೀತಿಗಳು ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ. ಅದು ಸಂವಿಧಾನವನ್ನು ಎಂದಿಗೂ ಒಪ್ಪುವುದಿಲ್ಲ, ಬದಲಿಗೆ ಮನುಸ್ಮøತಿಯೆ ಅದರ ಮೂಲ ತತ್ವವಾಗಿದೆ. ಆದ್ದರಿಂದ - ಪ್ರಜಾಪ್ರಭುತ್ವ, ಜಾತ್ಯಾತೀತೆಯನ್ನು ಕಗ್ಗೋಲೆ ಮಾಡುತ್ತದೆ. ಕೇರಳದಲ್ಲಿ ಅದರ ಆಟ ನಡೆಯಲು ಎಂದಿಗೂ ಬಿಡುವುದಿಲ್ಲ ಎಂದರು.

ನಾರಾಯಣಗುರು, ಪೆರಿಯಾರ್, ಅಂಬೇಡ್ಕರ್ ರವರು ದೇಶದಲ್ಲಿ ಬೇರೂರಿರುವ ಪಾಳೇಯಗಾರಿ ಮೌಲ್ಯಗಳನ್ನು ನಿರ್ಮೂಲನೆ ಮಾಡಲು ಹೊರಟ ಸಾಮಾಜಿಕ ಚಳುವಳಿಗಳ ಪ್ರಮುಖರು. ಅವರ ಈ ಹೋರಾಟವನ್ನು ಮುಮದುವರಿಸುವ ನಿಟ್ಟಿನಲ್ಲಿ ಕೆಂಪು-ನೀಲಿ ಒಂದಾಗಬೇಕು. ಈ ನಿಟ್ಟಿನಲ್ಲಿ ಡಿಎಸ್‍ಎಂಎಂ ನ ಈ ಸಮ್ಮೇಳನವು ಮಹತ್ವಪೂರ್ಣ ನಿರ್ಣಯಗಳನ್ನೂ ತೆಗೆದುಕೊಂಡಿದೆ ಎಂಬ ಭರವಸೆ ನನಗಿದೆ ಎಂದು ತಮ್ಮ ಭಾಷಣ ಮುಗಿಸಿದರು.

ಒಟ್ಟಾರೆಯಾಗಿ ಸಮ್ಮೇಳನದಲ್ಲಿ ಭಾಗವಹಿಸಿದ್ದ ನನ್ನನ್ನು ಒಳಗೊಂಡಂತೆ, ಕರ್ನಾಟಕದಿಂದ ಭಾಗವಹಿಸಿದ್ದ 32 ಪ್ರತಿನಿಧಿಗಳಲ್ಲಿ ಹೊಸ ಉತ್ಸಾಹ ತುಂಬುವಲ್ಲಿ ಡಿಎಸ್‍ಎಂಎಂ ನ 2 ನೇ ಅಖಿಲ ಭಾರತ ಸಮ್ಮೇಳನವು ಯಶಸ್ವಿಯಾಗಿದೆ.

ಪದಾಧಿಕಾರಿಗಳು ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಆಯ್ಕೆ

ಇದುವರೆವಿಗೂ ಕೇಂದ್ರದ ಮಟ್ಟದಲ್ಲಿ ‘ಸಂಚಾಲನ ಸಮಿತಿ’ ಕಾರ್ಯ ನಿರ್ವಹಿಸುತ್ತಿತು. ಈ ಸಮ್ಮೇಳನವು ಪದಾಧಿಕಾರಿಗಳು ಹಾಗೂ ಕೇಂದ್ರೀಯ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಿತು.

22 ರಾಜ್ಯಗಳನ್ನು ಒಳಗೊಂಡ, 52 ಸದಸ್ಯರ ಕೇಂದ್ರೀಯ ಕಾರ್ಯಕಾರಿ ಸಮಿತಿಯನ್ನು ಆಯ್ಕೆಮಾಡಿತು. ಕರ್ನಾಟಕದಿಂದ ಗೋಪಾಲಕೃಷ್ಣ ಅರಳಹಳ್ಳಿ ಹಾಗೂ ಎನ್. ನಾಗರಾಜ್ ಆಯ್ಕೆಗೊಂಡರು. 13 ಸದಸ್ಯರ ಪದಾಧಿಕಾರಿಗಳು ಒಮ್ಮತದಿಂದ ಆಯ್ಕೆಗೊಂಡರು

ಅಧ್ಯಕ್ಷರು : ಕೆ. ರಾಧಾಕೃಷ್ಣ, ಕೇರಳ.  ಪ್ರಧಾನ ಕಾರ್ಯದರ್ಶಿ : ರಾಮಚಂದ್ರಡೋಮ್, ಪ. ಬಂಗಾಳ. ಖಜಾಂಚಿ : ಜಿ. ಮಮತ, ದೆಹಲಿ. ಗೋಪಾಲಕೃಷ್ಣ ಅರಳಹಳ್ಳಿಯವರು ಒಬ್ಬ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಇತರ ಉಪಾಧ್ಯಕ್ಷರೆಂದರೆ ಸುಭಾಷೀಣಿ ಅಲಿ, ಸುಧನ್ ದಾಸ್, ಶೈಲೆಂದ್ರ ಕಾಂಬ್ಳೆ ಮತ್ತು ರಾಂಕುಮಾರ್ ಬೇಹ್ಪಾಲ್‍ಪುರಿಯ ವಿ. ಶ್ರೀನಿವಾಸರಾವ್, ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಸ್ಯಾಮುವೆಲ್ ರಾಜ್, ಸ್ಕೈಲಾಬ್ ಬಾಬು, ಆಂದ್ರ ಮಲ್ಯಾದ್ರಿ ಮತ್ತು Àನಾಥುಪ್ರಸಾದ್ ಕಾರ್ಯುದರ್ಶಿಗಳಾಗಿ ಆಯ್ಕೆಗೊಂಡ ಇತರರು. ಕಾಂ. ಬಿ.ವಿ. ರಾಘವುಲು ರವರು ಕೇಂದ್ರೀಯ ಕಾರ್ಯಕಾರಿ ಸದಸ್ಯರಾಗಿ ಆಯ್ಕೆಯಾದರು.