ನವಂಬರ್ 20 ರಂದು ಕಿಸಾನ್ ಮುಕ್ತಿ ಸಂಸದ್-ಎಐಕೆಎಸ್‍ಸಿಸಿ

ಸಂಪುಟ: 
11
ಸಂಚಿಕೆ: 
44
Sunday, 22 October 2017

ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‍ಸಿಸಿ) ನವದೆಹಲಿಯ ಸಂಸತ್ ಮಾರ್ಗದಲ್ಲಿ ಒಂದು ‘ಕಿಸಾನ್ ಮುಕ್ತಿ ಸಂಸತ್ತು’ ನಡೆಸುವುದಾಗಿ ಪ್ರಕಟಿಸಿದೆ. ರೈತರ ಸಾಲ ಮನ್ನಾ ಮತ್ತು ಬೇಸಾಯದ ವೆಚ್ಚದ ಒಂದೂವರೆ ಪಟ್ಟಿನ ದರದಲ್ಲಿ ರೈತರ ಬೆಳೆಗಳ ಖರೀದಿಯ ಬೇಡಿಕೆಯ ಕುರಿತಂತೆ ಇದನ್ನು ನಡೆಸಲಾಗುತ್ತದೆ. ಈ ಕಿಸಾನ್ ಮುಕ್ತಿ ಸಂಸದ್‍ನಲ್ಲಿ ಈ ಕುರಿತು ಒಂದು ಮಸೂದೆಯನ್ನು ಅಂಗೀಕರಿಸಲಾಗುವುದು, ಅದನ್ನು ಸಂಸತ್ತಿನಲ್ಲಿ ಪಾಸು ಮಾಡಬೇಕು ಎಂದು ಆಗ್ರಹಿಸಿ ಸರಕಾರಕ್ಕೆ ಕಳಿಸಲಾಗುವುದು ಎಂದು ಎಐಕೆಎಸ್‍ಸಿಸಿ ಹೇಳಿದೆ.

ಈ ಮಸೂದೆಯನ್ನು ಎಲ್ಲ ರಾಜಕೀಯ ಪಕ್ಷಗಳಿಗೂ ಮತ್ತು ಅವುಗಳ ಸಂಸದೀಯ ಪ್ರತಿನಿಧಿಗಳಿಗೂ ಕಳಿಸಲಾಗುವುದು. ಇದನ್ನು ಬೆಂಬಲಿಸುವ ಲಿಖಿತ ಆಶ್ವಾಸನೆ ನೀಡುವ ಸಂಸದೀಯ ಪ್ರತಿನಿಧಿಗಳನ್ನು ಮಸೂದೆ ಪಾಸಾದ ನಂತರ ಕಿಸಾನ್ ಮುಕ್ತಿ ಸಂಸದನ್ನು ಉದ್ದೇಶಿಸಿ ಮಾತಾಡಲು ಆಹ್ವಾನಿಸಲಾಗುವುದು ಎಂದು ಅದು ಹೇಳಿದೆ.

ಅಕ್ಟೋಬರ್ 14 ರಂದು ಎಐಕೆಎಸ್‍ಸಿಸಿಯ ಸಂಯೋಜಕರಾದ ಬಿ ಎಂ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳ ಶೋಚನೀಯ ಸ್ಥಿತಿಯನ್ನು ಸಮಾಜ ಮತ್ತು ದೇಶದ ಮುಂದಿಡಲು ಕೂಡ ನಿರ್ಧರಿಸಲಾಯಿತು. 20 ರಾಜ್ಯಗಳ 180 ರೈತ ಸಂಘಟನೆಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು.

ಈ ಸಂಘಟನೆಗಳ ಮುಖಂಡರು ನಡೆಸಿದ ಪತ್ರಿಕಾ ಸಮ್ಮೇಳನದಲ್ಲಿ ಇದುವರೆಗೆ ದೇಶದ 14 ರಾಜ್ಯಗಳಲ್ಲಿ ಸಂಚರಿಸಿರುವ ‘ಕಿಸಾನ್ ಮುಕ್ತಿ ಯಾತ್ರಾ’ಗಳ ಅನುಭವಗಳನ್ನು ಹಂಚಿಕೊಳ್ಳಲಾಯಿತು. ಅಕ್ಟೋಬರ್ 29 ರಂದು ಕೊಲ್ಕತಾದಿಂದ ಆರಂಭವಾಗುವ ಪೂರ್ವ ಭಾರತ ಕಿಸಾನ್ ಮುಕ್ತಿ ಯಾತ್ರಾ ಪಶ್ಚಿಮ ಬಂಗಾಲ, ಒಡಿಶಾ, ಝಾರ್ಖಂಡ್ ಮತ್ತು ಬಿಹಾರ ಮೂಲಕ ಸಂಚರಿಸಲಿದೆ. ಗುವಾಹಾಟಿಯಿಂದ ಈಶಾನ್ಯ ಭಾರತ ಯಾತ್ರೆ ನವಂಬರ್ 12 ರಂದು ಹೊರಡುತ್ತದೆ. ಮತ್ತು ನವಂಬರ್ 10 ರಿಂದ 14 ರವರೆಗೆ ಮತ್ತೊಂದು ಜಾಥಾ ಪಂಜಾಬ್ ಮತ್ತು ಹರ್ಯಾಣದಲ್ಲಿ ಸಂಚರಿಸಲಿದೆ.