ಐಸಿಡಿಎಸ್: ನಗದು ವರ್ಗಾವಣೆ, ಪ್ಯಾಕೇಜ್ ಬಗ್ಗೆ ನಿಲುವು ಸ್ಪಷ್ಟಪಡಿಸಿ

ಸಂಪುಟ: 
11
ಸಂಚಿಕೆ: 
44
Sunday, 22 October 2017

ಜನಗಳನ್ನು ತಪ್ಪುದಾರಿಗೆಳೆಯುವುದನ್ನು ನಿಲ್ಲಿಸಬೇಕು-ಅಂಗನವಾಡಿ ನೌಕರರ ಒಕ್ಕೂಟ

ಅಕ್ಟೋಬರ್ 12 ರಂದು ಕೇಂದ್ರ ಸರಕಾರದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ಒಂದು ‘ಸ್ಪಷ್ಟೀಕರಣ’ ಹೇಳಿಕೆ ನೀಡಿದೆ. ಐಸಿಡಿಎಸ್ (ಸಮಗ್ರೀಕೃತ ಮಕ್ಕಳಳ ಅಭಿವೃದ್ಧಿ ಯೋಜನೆ)ಯ ಅಡಿಯಲ್ಲಿರುವ ಪೂರಕ ಪೌಷ್ಟಿಕಾಂಶ ಕಾರ್ಯಕ್ರಮವನ್ನು ಕಳಚಿ ಹಾಕುವ ಮತ್ತು ಅದರ ಬದಲಿಗೆ ಶರತ್ತುಬದ್ಧ ನಗದು ವರ್ಗಾವಣೆ(ಸಿಸಿಟಿ) ತರುವ ಬಗ್ಗೆ ಮಂತ್ರಾಲಯ ಯೋಚಿಸುತ್ತಿದೆ ಎಂದು ಮಾಧ್ಮಮಗಳಲ್ಲಿ ಪ್ರಕಟವಾಗಿರುವ ಸುದ್ದಿಗಳು ನಿಜಸಂಗತಿಗಳನ್ನು ಆಧರಿಸಿಲ್ಲ ಎಂದು ಈ ಹೇಳಿಕೆ ತಿಳಿಸುತ್ತದೆ.

ಹಾಗಿದ್ದರೆ ಸ್ವತಃ ಮಂತ್ರಿಗಳು ಸಪ್ಟಂಬರ್ 19 ರಂದು 130 ಜಿಲ್ಲೆಗಳ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತ ಅಂಗನವಾಡಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸಿ 20 ವರ್ಷಗಳಾಗಿವೆ, ಆದ್ದರಿಂದ ಪೌಷ್ಟಿಕಾಂಶ ಪ್ಯಾಕೇಟುಗಳನ್ನು ಅಂಚೆ ಕಚೇರಿಗಳ ಮೂಲಕ ತಲುಪಿಸಿ ಮಂತ್ರಾಲಯ ಸೂಚಿಸಿರುವುದಾಗಿ ಹೇಳಿದ್ದೇಕೆ? ಈ ಮಂತ್ರಾಲಯದ ಕಾರ್ಯದರ್ಶಿಗಳು ಐಸಿಡಿಎಸ್ ಅಡಿಯಲ್ಲಿ ನೇರ ನಗದು ವರ್ಗಾವಣೆಯ ಬಗ್ಗೆ ಯೋಚಿಸಲಾಗುತ್ತಿದೆ, ಈ ಬಗ್ಗೆ ಬೇಗನೇ ಒಂದು ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದೇಕೆ ಹೇಳಿದರು?

ಇದು ಅಖಿಲ ಭಾರತ ಅಂಗನವಾಡಿ ನೌಕರರು ಮತ್ತು ಸಹಾಯಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ.ಆರ್ ಸಿಂಧು ಈ ಕುರಿತ ಪ್ರತಿಕಾ ಹೇಳಿಕೆಯಲ್ಲಿ ಕೇಳಿರುವ ಪ್ರಶ್ನೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ಈ ಎರಡೂ ಹೇಳಿಕೆಗಳನ್ನು ನಿರಾಕರಿಸಿಲ್ಲ. ವಾಸ್ತವವಾಗಿ ಈ ಎರಡು ಹೇಳಿಕೆಗಳಿಗೆ ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಾರ್ಯಕರ್ತರಿಂದ ವ್ಯಾಪಕ ಪ್ರತಿಭಟನೆಗಳು ಬಂದ ಹಿನ್ನೆಲೆಯಲ್ಲಿ ಮೇಲೆ ಹೇಳಿದ ಅಕ್ಟೋಬರ್ 12ರ ‘ಸ್ಪಷ್ಟೀಕರಣ’ ಹೇಳಿಕೆ ಬಂದಿದೆ. ಆದರೆ ಇದರಲ್ಲಿ ಮೇಲೆ ಹೇಳಿರುವ ಎರಡು ಪ್ರಶ್ನೆಗಳಿಗೂ ಉತ್ತರ ಸಿಗುತ್ತಿಲ್ಲ.

ಒಂದೇ ಸಮಯದಲ್ಲಿ ವಿಭಿನ್ನ ಹೇಳಿಕೆಗಳನ್ನು ನೀಡಿ ಜನಗಳ ದಾರಿ ತಪ್ಪಿಸುವದು ಆಳುವ ಮಂದಿಯ ಕಾರ್ಯತಂತ್ರವಾಗಿದೆ. ಇಲ್ಲಿ ಮಂತ್ರಿಗಳು ಮತ್ತು ಇಲಾಖಾ ಕಾರ್ಯದರ್ಶಿಗಳ ಈ ಹೇಳಿಕೆಗಳಿಲ್ಲದೆ, ಜತೆಗೆ ಕೆಲವು ರಾಜ್ಯಗಳಿಗೆ ಮನೆಗೆ ಒಯ್ಯುವ ರೇಶನ್ ಬದಲು ಶರತ್ತು ಬದ್ಧ ನಗದು ವರ್ಗಾವಣೆಯ ಪದ್ಧತಿಯನ್ನು ಪರೀಕ್ಷಾರ್ಥ ಆರಂಭಿಸಬೇಕೆಂದು ಹೇಳಲಾಗಿದೆ. ಕೆಲವು ರಾಜ್ಯ ಸರಕಾರಗಳು ಇದನ್ನು ಆಧಾರ್‍ನೊಂದಿಗೆ ಜೋಡಿಸುವ ನಿರ್ದೇಶನಗಳನ್ನೂ ನೀಡಿವೆ.

ಆದ್ದರಿಂದ ಮಂತ್ರಾಲಯ ನಗದು ವರ್ಗಾವಣೆ(ನೇರ ಅಥವ ಶರತ್ತುಬದ್ಧ) ಮತ್ತು ಐಸಿಡಿಎಸ್‍ನಲ್ಲಿ ಪ್ಯಾಕ್ ಆದ ಆಹಾರ ಒದಗಿಸುವ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು, ಈ ಬಗ್ಗೆ ‘ಅಂತಿಮ ನಿರ್ಣಯ’ವನ್ನು ಯಾರು ಯಾವಾಗ ಕೈಗೊಳ್ಳುತ್ತಾರೆ ಎಂಬುದನ್ನು ತಿಳಿಸಬೇಕು, ಜನಗಳಲ್ಲಿ ಗೊಂದಲ ಹುಟ್ಟಿಸುವುದನ್ನು ನಿಲ್ಲಿಸಬೇಕು ಎಂದು ಸಿಂಧು ಅವರು ಆಗ್ರಹಿಸಿದ್ದಾರೆ. ಈ ನಡುವೆ ಐಸಿಡಿಎಸ್‍ನ್ನು ದುರ್ಬಗೊಳಿಸುವ ತಂತ್ರಗಳ ವಿರುದ್ಧ ಹೋರಾಟವನ್ನು ತೀವ್ರಗೊಳಿಸಬೇಕು ಎಂದು ಸಂಘಟನೆಯ ಘಟಕಗಳಿಗೆ ಕರೆ ನೀಡಿದ್ದಾರೆ.