Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ನಿವೇಶನಕ್ಕೆ ಆಗ್ರಹಿಸಿ, ಉಡುಪಿ ನಗರ ಸಭೆ ಎದುರು ಪ್ರತಿಭಟನೆ

ಸಂಪುಟ: 
11
ಸಂಚಿಕೆ: 
44
date: 
Sunday, 22 October 2017
Image: 

ಉಡುಪಿ ನಗರಸಭೆ ವ್ಯಾಪ್ತಿಯ ಬಡ ನಿವೇಶನ ರಹಿತರಿಗೆ ನಿವೇಶನ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘ ಉಡುಪಿ ತಾಲೂಕು ಸಮಿತಿ ನೇತೃತ್ವದಲ್ಲಿ  ನಗರ ಸಭೆ ಕಛೇರಿ ಎದುರು ಅಕ್ಟೋಬರ್ 19ರಂದು ಧರಣಿ ಮುಷ್ಕರ ನಡೆಸಲಾಯಿತು. ಬನ್ನಂಜೆಯಲ್ಲಿ ಸೇರಿದ ನಿವೇಶನ ರಹಿತ ಪ್ರತಿಭಟನಾಕಾರರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಘೋಷಣೆ ಕೂಗಿದರು. ಈಗಾಗಲೇ ವಿಳಂಬವಾಗಿದ್ದು ಈ ಕೂಡಲೇ ನಿವೇಶನದ ಹಕ್ಕು ಪತ್ರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೃಷಿಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಬಡವರಿಗೆ ನಿವೇಶನ ನೀಡುವಂತೆ ಕಳೆದ ನಾಲ್ಕು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಆದರೆ ನಗರ ಸಭೆ ಮಾತ್ರ ಈ ವಿಷಯದಲ್ಲಿ ಸಂಪೂರ್ಣ ನಿರ್ಲಕ್ಷ ವಹಿಸಿದೆ. ಅರ್ಹ ಫಲಾನುಭವಿಗಳ ಅಂತಿಮ ಪಟ್ಟಿ ಸಿದ್ಧಪಡಿಸಲಾಗಿದೆ. ಆದರೆ ಹಕ್ಕುಪತ್ರ ನೀಡಲು ಮಾತ್ರ ಕ್ರಮ ಕೈಗೊಂಡಿಲ್ಲ. ನಗರಸಭಾ ವ್ಯಾಪ್ತಿಯ 76 ಬಡಗುಬೆಟ್ಟು, ಶಿವಳ್ಳಿ, ಪುತ್ತೂರು, ಹಾಗೂ ಹೆರ್ಗ ಗ್ರಾಮಗಳಲ್ಲಿ ಗುರುತಿಸಲಾಗಿರುವ ಜಾಗದಲ್ಲಿ ಈಗಾಗಲೇ ನಿಗದಿಪಡಿಸಿದ 600 ಮಂದಿಗೆ ಕೂಡಲೇ ಹಕ್ಕು ಪತ್ರ ನೀಡಲು ಕ್ರಮ ವಹಿಸಬೇಕು. ಅಪಾರ್ಟ್‍ಮೆಂಟ್ ಮಾದರಿಯಲ್ಲಿ ನಗರ ಆಶ್ರಯ ಮನೆಗಳನ್ನು ನಿರ್ಮಿಸಿ ವಿತರಿಸಲು ಯೋಜನೆಗಳನ್ನು ನಗರಸಭೆ ರೂಪಿಸಿಲ್ಲ. ಒಂದು ವೇಳೆ ಪ್ಲ್ಯಾಟ್ ಬದಲು ಭೂಮಿಯೇ ಬೇಕು ಎನ್ನುವವರಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆ ಮಾಡಬೇಕು ಎಂದು ಹೇಳಿದರು.

ಉಡುಪಿ ಮತ್ತು ಕಾಪು ಹೋಬಳಿ ವ್ಯಾಪ್ತಿಯಲ್ಲಿ ಸರಕಾರಿ ಸ್ಥಳವನ್ನು ಅನಧೀಕೃತವಾಗಿ ಆಕ್ರಮಿಸಿಕೊಂಡಿರುವ ಒಟ್ಟು 687.73 ಎಕ್ರೆ ಜಮೀನು (ಉಡುಪಿ ತಹಶೀಲ್ದಾರ್ ನೀಡಿದ ಲಿಖಿತ ದಾಖಲೆಯಲ್ಲಿರುವಂತೆ) ಕೂಡಲೇ ತೆರವುಗೊಳಿಸಿ ಬಡನಿವೇಶನ ರಹಿತರಿಗೆ ಭೂಮಿ ಹಕ್ಕು ಪತ್ರ ಮಂಜೂರು ಮಾಡಬೇಕು. ಉಡುಪಿ ನಗರಸಭೆ ವ್ಯಾಪ್ತಿಯೂ ಸೇರಿದಂತೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 911 ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡುವ ಬಗ್ಗೆ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ತೀರ್ಮಾನಿಸಲಾಗಿತ್ತು. ಅದರಂತೆ ನಿವೇಶನ ನೀಡಬೇಕು.

ಪುತ್ತೂರು ಗ್ರಾಮದಲ್ಲಿ ಸುಮಾರು 2 ಎಕ್ರೆ ಜಮೀನನ್ನು ನಿವೇಶನ ಉದ್ದೇಶಕ್ಕಾಗಿ, ಕುಂದಾಪುರ ಉಪವಿಭಾಗಾಧಿಕಾರಿ ಅವರು ಮಂಜೂರು ಮಾಡಿದ ಸರಕಾರಿ ಜಾಗ ವರ್ಷ 3 ಕಳೆದರೂ ಅದನ್ನು ನಿವೇಶನಗಳಾಗಿ ಪರಿವರ್ತಿಸುವ ಕೆಲಸ ಇನ್ನೂ ಆಗಿಲ್ಲ. ಈಗಲಾದರೂ ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವೆಂಕಟೇಶ ಕೋಣಿ ಸ್ಥಳೀಯಾಡಳಿತವನ್ನು ಒತ್ತಾಯಿಸಿದರು.

ಈ ಎಲ್ಲಾ ಬೇಡಿಕೆ ಈಡೇರಿಸುವುದಕ್ಕಾಗಿ ತಾಲೂಕು ಮಟ್ಟದ ಅಧಿಕಾರಿಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು, ಭೂಮಾಪನಾ ಅಧಿಕಾರಿಗಳ ಸಮ್ಮುಖದಲ್ಲಿ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳ ಜತೆ ಜಂಟಿ ಸಭೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು.

ನಿವೇಶನ ರಹಿತ ಪ್ರತಿಭಟನಾಕಾರರ ಬೇಡಿಕೆ ಈಡೇರಿಸಲು ನಡೆದ ಪ್ರತಿಭಟನಾ ಹೋರಾಟಕ್ಕೆ ಬೆಂಬಲ ಸೂಚಿಸಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿದರು. ಸಿದ್ಧರಾಮಯ್ಯ ಅವರ ಸರಕಾರ ಅನ್ನಭಾಗ್ಯ, ಶಾಧಿಭಾಗ್ಯ ಸೇರಿದಂತೆ ಹಲವು ಭಾಗ್ಯಗಳನ್ನು ನೀಡಿದೆ. ಆದರೆ ಬಹುಮುಖ್ಯವಾದ ಬಡವರಿಗೆ ನಿವೇಶನ ನೀಡುವ ಕೆಲಸವನ್ನು ಮಾತ್ರ ಮಾಡಿಲ್ಲ ಎಂದು ಹೇಳಿದರು.

ಸಮಾವೇಶಕ್ಕೆ ನಗರಸಭೆಯಿಂದ ಅಡ್ಡಗಾಲು : ಆರೋಪ

ಬನ್ನಂಜೆ ನಾರಾಯಣ ಗುರು ಹಾಲ್‍ನಲ್ಲಿ ನಡೆಸಲು ಉದ್ದೇಶಿಸಿದ ಉಡುಪಿ ನಗರ ಸಭೆ ವ್ಯಾಪ್ತಿಯ ನಿವೇಶನ ರಹಿತರ ಸಮಾವೇಶಕ್ಕೆ ಅವಕಾಶ ನೀಡದಂತೆ ಉಡುಪಿ ನಗರಸಭೆ ಹುನ್ನಾರ್ ನಡೆಸಿದೆ. ಎರಡು ವಾರದ ಹಿಂದೆ ಹಾಲ್‍ನಲ್ಲಿ ಅವಕಾಶ ನೀಡುವಂತೆ ಕೇಳಿಕೊಂಡಿದ್ದೇವು. ಆದರೆ ನಗರಸಭೆ ಇದಕ್ಕೆ ಅಡ್ಡಗಾಲು ಹಾಕಿ ಹಾಲ್‍ನಲ್ಲಿ ಸಮಾವೇಶಕ್ಕೆ ಅವಕಾಶ ಕಲ್ಪಿಸದಂತೆ ಮಾಡಿದೆ. ಹೀಗಾಗಿ ಇಂದಿನ ಸಮಾವೇಶವನ್ನು ರದ್ದುಪಡಿಸಿ, ಕೇವಲ ಧರಣಿಯನ್ನು ನಡೆಸಲಾಯಿತು. ಜನವಿರೋಧಿ ನಗರಸಭೆ ಆಡಳಿತ ವಿರುದ್ಧ ಕೃಷಿಕೂಲಿಕಾರರ ಸಂಘದ ಉಡುಪಿ ತಾಲೂಕು ಕಾರ್ಯದರ್ಶಿ ಕವಿರಾಜ ತೀವ್ರವಾಗಿ ಖಂಡಿಸಿದರು.

ಡಿಸೆಂಬರ್ ಒಳಗೆ ನಿವೇಶನ ಹಂಚಿಕೆ: ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 595 ನಿವೇಶನ ರಹಿತರ ಪಟ್ಟಿಯನ್ನು ಸಿದ್ದಪಡಿಸಲಾಗಿದ್ದು, ಈಗಾಗಲೇ ಹೆರ್ಗಾ ಹಾಗೂ ಶಿವಳ್ಳಿ ಗ್ರಾಮದಲ್ಲಿ ಗುರುತಿಸಿರುವ 11 ಎಕ್ರೆ ಜಾಗದಲ್ಲಿ ಡಿಸೆಂಬರ್ ಅಂತ್ಯದೊಳಗೆ ನಿವೇಶನ ಹಂಚಿಕೆ ಮಾಡಿ ಹಕ್ಕು ಪತ್ರ ನೀಡಲಾಗುವುದು ಎಂದು ನಗರಸಭೆ ಕಂದಾಯ ಅಧಿಕಾರಿ ಚಂದ್ರ ಪೂಜಾರಿ ತಿಳಿಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕೆ.ಶಂಕರ, ಕೃಷಿಕೂಲಿಕಾರರ ಸಂಘದ ಮುಖಂಡರಾದ ಎಚ್. ವಿಠಲ ಪೂಜಾರಿ, ಯು. ದಾಸಭಂಡಾರಿ, ಕವಿರಾಜ ಎಸ್. ರಾಜೀವ ಪಡುಕೋಣೆ, ಉಮೇಶ್ ಕುಂದರ್, ಜಯ ಐರೋಡಿ, ನಾಗರತ್ನ ನಾಡ, ನಳಿನಿ ಎಸ್. ಪದ್ಮಾವತಿ ಶೆಟ್ಟಿ, ರಾಮ ಕಾರ್ಕಡ, ಮಾಧವ ಸಾಲಿಗ್ರಾಮ, ಕುಶಲ, ಮುಂತಾದವರು ಹೋರಾಟದ ನೇತೃತ್ವ ವಹಿಸಿದ್ದರು.

 

ವರದಿ : ವೆಂಕಟೇಶ ಕೋಣಿ