ಸೇವಾಭದ್ರತೆ ಮತ್ತು ಸಮಾನ ವೇತನಕ್ಕಾಗಿ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಧರಣಿ

ಸಂಪುಟ: 
11
ಸಂಚಿಕೆ: 
44
Sunday, 22 October 2017

ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಕಾಲೇಜುಗಳಲ್ಲಿ ಕಳೆದ ಹತ್ತಾರು ವರ್ಷಗಳಿಂದ ಅಡುಗೆ, ಕಾವಲು, ಸ್ವಚ್ಛತೆ, ಮುಂತಾದ ಕೆಲಸಗಳನ್ನು ಮಾಡುತ್ತಾ ಬಂದಿರುವ ‘ಡಿ’ ವರ್ಗದ ಹೊರಗುತ್ತಿಗೆ ನೌಕರರು ತಾವು ನಿವೃತ್ತಿ ವಯಸ್ಸು ತಲುಪುವವರೆಗೆ ಕೆಲಸ ಮಾಡಲು ಸೇವಾ ಭದ್ರತೆಯನ್ನು ಒದಗಿಸಬೇಕೆಂದೂ, ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದೂ ಹಾಗೂ ನೌಕರರ ವೇತನವನ್ನು ಗುತ್ತಿಗೆದಾರರ ಮೂಲಕ ನೀಡುವ ಬದಲು ಸಂಬಂಧ ಪಟ್ಟ ಇಲಾಖೆಗಳ ಮೂಲಕ ನೇರವಾಗಿ ನೌಕರರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕೆಂದು ಒತ್ತಾಯಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಹೊರಗುತ್ತಿಗೆ ನೌಕರರು ಇದೇ ಅಕ್ಟೋಬರ್ 16 ರಂದು ಬೆಂಗಳೂರಿಗೆ ಆಗಮಿಸಿ, ರೈಲು ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಸ್ವಾತಂತ್ರ್ಯ ಉದ್ಯಾನದ ಎದುರಿನ ರಸ್ತೆಗಳಲ್ಲಿ ಧರಣಿ ನಡೆಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.

ಧರಣಿಯನ್ನು ಉದ್ಘಾಟಿಸಿ ನೌಕರರ ಸಂಘದ ಅಧ್ಯಕ್ಷ ನಿತ್ಯಾನಂದಸ್ವಾಮಿ ಮಾತನಾಡುತ್ತಾ ಸರ್ಕಾರಿ ಹಾಸ್ಟೆಲುಗಳಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ/ಹೊರಗುತ್ತಿಗೆ ನೌಕರರನ್ನು ನೇಮಕಾತಿ ನಿಯಮಾವಳಿಯನ್ನು ಸೂಕ್ತವಾಗಿ ತಿದ್ದುಪಡಿ ಮಾಡಿಯಾದರೂ ಕಾಯಂ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರಲ್ಲದೆ ಗುತ್ತಿಗೆದಾರರ ವಂಚನೆಯಿಂದ ಮುಕ್ತಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಎಲ್ಲಾ ಹೊರಗುತ್ತಿಗೆ ನೌಕರರನ್ನು ಕಾಯಂ ಮಾಡಲು ಕಾನೂನು ಅಡ್ಡಿ ಬರುತ್ತಿದ್ದರೆ ಅವರಿಗೆ ಸೇವಾ ಭದ್ರತೆ ಹಾಗೂ ಕಾಯಂ ನೌಕರರಂತೆ ಸಮಾನ ವೇತನ ನೀಡಬೇಕೆಂದು ಆಗ್ರಹಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಭೀಮಶೆಟ್ಟಿ ಯಂಪಳ್ಳಿ ಮಾತನಾಡಿ ಸಮಾಜ ಕಲ್ಯಾಣ ಮತ್ತು ವಿಶೇಷವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲುಗಳ ಹೊರಗುತ್ತಿಗೆ ನೌಕರರಿಗೆ ಪ್ರತಿತಿಂಗಳು ಸರಿಯಾಗಿ ವೇತನ ನೀಡದೆ ಸತಾಯಿಸುತ್ತಿರುವುದನ್ನು ಖಂಡಿಸಿದರಲ್ಲದೆ ಕ್ಷುಲ್ಲಕ/ಸುಳ್ಳು ಆರೋಪ ಹೊರಿಸಿ ಕೆಲಸದಿಂದ ತೆಗೆದು ಹಾಕಲಾದ ಎಲ್ಲಾ ಹೊರಗುತ್ತಿಗೆ ನೌಕರರಿಗೆ ಮರಳಿ ಕೆಲಸ ನೀಡಬೇಕೆಂದು ಆಗ್ರಹಿಸಿದರು, ಆರಂಭದಲ್ಲಿ ಸಂಘದ ಸಹ ಕಾರ್ಯದರ್ಶಿ ಕೆ. ಹನುಮೇಗೌಡ ಎಲ್ಲರನ್ನು ಸ್ವಾಗತಿಸಿದರು. ಎಸ್.ಎಫ್.ಐ. ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುರಾಜ ದೇಸಾಯಿ ಮತ್ತು ಡಿ.ವೈ.ಎಫ್.ಐ. ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಪೂಜಾರ್ ಮಾತನಾಡಿ ಹಾಸ್ಟೆಲ್ ನೌಕರರ ಹೋರಾಟಕ್ಕೆ ತಮ್ಮ ಸಂಘಟನೆಗಳ ಬೆಂಬಲವನ್ನು ಘೋಷಿಸಿದರು.

ಸಂಜೆ ಸುಮಾರು 7 ಗಂಟೆಗೆ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಶ್ರೀ ಲಕ್ಷ್ಮಿ ನಾರಾಯಣರವರು ಧರಣಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿದರಲ್ಲದೆ ಮನವಿಯನ್ನು ಸ್ವೀಕರಿಸಿ ಬೇಡಿಕೆಗಳ ಕುರಿತು ಚರ್ಚಿಸಲು ಒಂದು ಸಭೆಯನ್ನು ಕರೆಯುವ ಭರವಸೆಯನ್ನು ನೀಡಿದರು. ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲದ ಅಧಿವೇಶನದ ಮೊದಲೇ ಸಭೆ ಕರೆಯದಿದ್ದರೆ ‘ಬೆಳಗಾವಿ ಚಲೋ’ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಇದರೊಂದಿಗೆ ಸಾಮೂಹಿಕ ಧರಣಿಯನ್ನು ಹಿಂಪಡೆಯಲಾಯಿತು.

 

ವರದಿ: ಭೀಮಶೆಟ್ಟಿ ಯಂಪಳ್ಳಿ