Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ವಿಕಾಸದ ಹುಸಿಮಂತ್ರಕ್ಕೆ ಇನ್ನು ಹಣ್ಣು ಉದುರಲಾರದೆಂಬ ಭೀತಿ ಆವರಿಸುತ್ತಿದೆಯೇ?

ಸಂಪುಟ: 
11
ಸಂಚಿಕೆ: 
44
date: 
Sunday, 22 October 2017
Image: 

ಅಕ್ಟೋಬರ್ 12 ರಂದು ಮುಖ್ಯ ಚುನಾವಣಾ ಆಯುಕ್ತರು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗಳ ದಿನಾಂಕ ಪ್ರಕಟಿಸಿದರೂ, ಆ ವೇಳೆಗೇ  ನಡೆಯಬೇಕಾದ ಗುಜರಾತ್ ಚುನಾವಣೆಗಳ ದಿನಾಂಕವನ್ನು ಪ್ರಕಟಿಸದಿರುವುದು ಬಹಳಷ್ಟು ಅನುಮಾನಗಳನ್ನು ಸೃಷ್ಟಿಸಿದೆ ಎಂಬ ವ್ಯಾಪಕ ಟೀಕೆ ಪತ್ರಿಕೆಗಳಲ್ಲಿ ಮರುದಿನವೇ ಪ್ರಕಟವಾದ ಸುದ್ದಿಗಳಿಂದ ಸಾಬೀತಾಗಿದೆ.

ಬಿಜೆಪಿ ಆಳ್ವಿಕೆಯ ವಡೋದರ ಮಹಾನಗರಸಭೆ ಮರುದಿನವೇ ಸಭೆ ಕರೆದು ಮುಖ್ಯಮಂತ್ರಿಗಳಿಂದ 780 ಕೊಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳ ಬೃಹತ್ ಇವೆಂಟನ್ನು ಯೋಜಿಸಿತು.. ಅಹಮದಾಬಾದ್ ಮುನಿಸಿಪಲ್ ಕಾರ್ಪೊರೇಷನ್ ತನ್ನ ಸ್ಥಾಯೀ ಸಮಿತಿಯ ಸಭೆಯನ್ನು ವಿಸ್ತರಿಸಿ 530 ಕೋಟಿ ರೂ.ಗಳ ಪ್ರಾಜೆಕ್ಟ್‍ಗಳನ್ನು ಹತ್ತು ನಿಮಿಷಗಳಲ್ಲಿ ಮಂಜೂರು ಮಾಡಿದೆ. ಮರುದಿನ ‘ಶಹರೀ ಗರೀಬ್ ಕಲ್ಯಾಣ್ ಮೇಲಾ’ ದಲ್ಲಿ ಒಟ್ಟು 4103 ಫಲಾನುಭವಿಗಳಲ್ಲಿ 3262 ಮಂದಿಗೆ ಚೆಕ್‍ಗಳು, ನಿಧಿಗಳು ಮತ್ತು ಬಾಂಡ್‍ಗಳನ್ನು ವಿತರಿಸಲಾಗಿದೆ.

ದೀಪಾವಳಿ ಸಂದರ್ಭದಲ್ಲಿ ಶ್ರೀ ಶ್ರೀ ರವಿಶಂಕರ್ ಆರ್ಟ್ ಆಫ್ ಲಿವಿಂಗ್‍ನ ಲಕ್ಷ್ಮಿ ಪೂಜೆ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳಿಗೆ ಸೇವೆಗಳನ್ನು ಒದಗಿಸಲು ವಡೋದರಾ ನಗರ ಸಭೆ ನಿರ್ಧರಿಸಿತಂತೆ.

ಈ ನಡುವೆ ಗುಜರಾತಿನ  ಮುಖ್ಯಮಂತ್ರಿಗಳು ಈ ಹಿಂದೆ ಕಾಂಗ್ರೆಸ್ ಸರಕಾರ ಸಹ ಚುನಾವಣಾ ಆಯೋಗವನ್ನು ದುರುಪಯೋಗ ಪಡಿಸಿಕೊಂಡಿತ್ತು ಎಂದಿದ್ದಾರೆ. ಅಂದರೆ ಈಗ ತಾನೂ ಅದನ್ನೇ ಮಾಡುತ್ತಿರುವುದು ಎಂದು ಅರ್ಥೈಸಬಹುದೇನೋ. ಗುಜರಾತ್ ಚುನಾವಣೆಗಳನ್ನು ಅಕ್ಟೋಬರ್ 25ರಂದು ಪ್ರಕಟಿಸಬಹುದು ಎಂದು ಅಲ್ಲಿನ ಸಚಿವಾಲಯದ ಮೂಲಗಳಿಂದ ಹೇಳಲಾಗುತ್ತಿದೆ. ಅಂದು ಗುಜರಾತಿನಲ್ಲಿ ಲಾಭ ಪಂಚಮಿ ದಿನ, ಅಂದರೆ ದೀಪಾವಳಿ ಮರುದಿನದಿಂದ ಆರಂಭವಾಗುವ ಗುಜರಾತೀ ಹೊಸ ವರ್ಷದಲ್ಲಿ ಮುಚ್ಚುವ ಅಂಗಡಿಗಳು ಅಂದಿನಿಂದ ಹೊಸ ವರ್ಷದ ವ್ಯವಹಾರವನ್ನು ಆರಂಭಿಸುವ ‘ಶುಭದಿನ’ವಂತೆ.

ಈ ಬಾರಿಯ ಗುಜರಾತ್ ವಿಧಾನಸಭಾ ಚುನಾವಣೆಗಳ ಇನ್ನೊಂದು ವಿಶೇಷತೆಯೆಂದರೆ ಹಿಂದೆ ಮೋದಿಯವರ ಏಕಾಂಗಿ ಚುನಾವಣಾ ಪ್ರಚಾರ ಆಗಿರುತ್ತಿತ್ತು. ಆದರೆ ಯೋಗಿ ಆದಿತ್ಯನಾಥ ಮತ್ತು ಉಮಾಭಾರತಿ ಮುಂತಾದ ರಾಜ್ಯದ ಹೊರಗಿನ ಭಾರೀ ಕುಳಗಳನ್ನು ಕಣಕ್ಕಿಳಿಸಲಾಗುವುದಂತೆ.

20 ವರ್ಷಗಳ ‘ಮಾದರಿ’ ಆಳ್ವಿಕೆಯ ನಂತರ ಇಷ್ಟೆಲ್ಲ ಕಸರತ್ತುಗಳು ಬೇಕೇ, ಸಂಘ ಪರಿವಾರಕ್ಕೆ ‘ಅಚ್ಛೇ ದಿನ್’ಗಳ ನೋಟುರದ್ಧತಿ, ಜಿಎಸ್‍ಟಿ ಇತ್ಯಾದಿಗಳ ವಿಫಲತೆಯ, ವಿಕಾಸದ ಹುಸಿಮಂತ್ರಕ್ಕೆ ಇನ್ನು ಹಣ್ಣು ಉದುರಲಾರದೆಂಬ ಭೀತಿ ಆವರಿಸಿದೆಯೇ, ಎಂಬ ಪ್ರಶ್ನೆ ಕೇಳಲಾಗುತ್ತಿದೆ.