ಪಣಜಿಗೆ ಪುಣೆಗಿಂತ ದಿಲ್ಲಿ ಹೆಚ್ಚು ಅನುಕೂಲ ಎಂದ ಕೇಂದ್ರ ಸರಕಾರ, ಗೋವಾ ಸಿಎಂ ಗೆ ಮುಖಭಂಗ

ಸಂಪುಟ: 
11
ಸಂಚಿಕೆ: 
44
date: 
Sunday, 22 October 2017

ಪರಿಸರ ಸಂಬಂಧಿ ವ್ಯಾಜ್ಯಗಳನ್ನು ತ್ವರಿತವಾಗಿ ಪರಿಹರಿಸಲೆಂದು ಸ್ಥಾಪಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‍ಜಿಟಿ) ವಲಯವಾರು ಪೀಠಗಳನ್ನು ರಚಿಸಿದ್ದು ಗೋವಾ(ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳು), ಮಹಾರಾಷ್ಟ್ರ ಮತ್ತು ಗುಜರಾತ್ ಪಶ್ಚಿಮ ವಲಯ ಪೀಠದ ವ್ಯಾಪ್ತಿಗೆ ಬರುತ್ತವೆ. ಆದರೆ ಅದರಲ್ಲಿ ಗೋವಾವನ್ನು ಮಾತ್ರ ಹೆಕ್ಕಿ 2000ಕಿ.ಮೀ. ದೂರದ ದಿಲ್ಲಿ ಪೀಠಕ್ಕೆ ವರ್ಗಾಯಿಸಿ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯ ಹೊರಡಿಸಿದ್ದ ಅಧಿಸೂಚನೆಯನ್ನು ಮುಂಬೈ ಹೈಕೋರ್ಟಿನ ಗೋವಾ ಪೀಠ ಈಗ ರದ್ದು ಮಾಡಿದೆ.

ಗೋವಾಕ್ಕೆ ಪುಣೆಗಿಂತ ದಿಲ್ಲಿಗೆ ವಿಮಾನ ಸಂಪರ್ಕ ಚೆನ್ನಾಗಿದೆ, ಮತ್ತು ದಿಲ್ಲಿಯಲ್ಲಿ ಗೋವಾ ಸರಕಾರಕ್ಕೆ ಕೆಲಸ ಮಾಡುವ ವಕೀಲರ ದೊಡ್ಡ ತಂಡವೇ ಇದೆ ಎಂಬ ಕಾರಣ ಕೊಟ್ಟು  ಹಿಂದೆ ರಕ್ಷಣಾ ಮಂತ್ರಿಯೂ ಆಗಿದ್ದ ಮುಖ್ಯಮಂತ್ರಿ ಮನೋಹರ ಪರಿಕ್ಕರ್‍ರವರ ಒತ್ತಡದಿಂದ ಈ ಅಧಿಸೂಚನೆ ಬಂದಿತ್ತು, ಆದ್ದರಿಂದ ಇದು ಪರಿಕ್ಕರ್‍ರವರಿಗೆ ಆಗಿರುವ ವೈಯಕ್ತಿಕ ಮುಖಭಂಗ ಎನ್ನಲಾಗಿದೆ. ಗೋವಾದಲ್ಲಿ ಪರಿಸರ ವ್ಯಾಜ್ಯಗಳನ್ನು ನಿರುತ್ಸಾಹಗೊಳಿಸಲಿಕ್ಕಾಗಿಯೇ ಈ ಅಧಿಸೂಚನೆ ತರಲಾಗಿದೆ ಎಂದು ಇದರ ವಿರುದ್ಧ 24ಕ್ಕೂ ಹೆಚ್ಚು ಅರ್ಜಿಗಳು ಹೈಕೋರ್ಟಿನಲ್ಲಿ ದಾಖಲಾಗಿದ್ದವು.

“ರಾಜ್ಯ ಸರಕಾರವಾಗಲೀ, ಪರಿಸರ ಮತ್ತು ಅರಣ್ಯ ಮಂತ್ರಾಲಯವಾಗಲೀ ಯಾವುದೇ ಘಟ್ಟದಲ್ಲಿ ಮಾಡದ ಒಂದು ಕೆಲಸವೆಂದರೆ ಪರಿಸರ ಕಾನೂನುಗಳಿಂದ ಅತಿ ಹೆಚ್ಚು ರಕ್ಷಣೆ ಬೇಕಾಗಿರುವವರ ದನಿಯನ್ನು ಕೇಳದೇ ಇದ್ದದ್ದು” ಎಂದು ಈ ತೀರ್ಪು ನೀಡಿರುವ ನ್ಯಾಯಾಧೀಶರು ಹೇಳಿರುವುದಾಗಿ ವರದಿಯಾಗಿದೆ.

ಯಾವುದೇ ಸರಕಾರ ತನ್ನ ಅನುಕೂಲತೆಯ ನೆಪದಲ್ಲಿ ಒಂದು ನ್ಯಾಯಮಂಡಳಿಯನ್ನು ಸಾವಿರಾರು ಕಿ.ಮೀ. ದೂರ ಹಾಕಿ ಇದು ಎಲ್ಲರ ಒಳಿತಿಗಾಗಿ ಎಂದು ಹೇಳಿಕೊಳ್ಳುವುದು ವಿಲಕ್ಷಣವೇ ಸರಿ. ಅದು ಖಂಡಿತಾ ಎಲ್ಲರ ಒಳಿತಿಗಾಗಿ ಅಲ್ಲ ಎಂದ ನ್ಯಾಯಾಧೀಶರು ನ್ಯಾಯದ ಲಭ್ಯತೆ ಕೂಡ ಸಂವಿಧಾನದ ಕಲಮು 21 ರ ಒಂದು ಅಂಶ ಎಂದಿದ್ದಾರೆ. ಪರಿಸರದ ಪ್ರಶ್ನೆಗಳು ಒಂದು ಒಳ್ಳೆಯ ನಾಳೆಗಾಗಿ ಹೋರಾಟ ತಾನೇ, ಹಾಗಿರುವಾಗ ಅದನ್ನು ನಾಡಿನ ಅತಿ ಬಡವರ ಹಿತಗಳನ್ನು ಕಡೆಗಣಿಸಿ ಕೇವಲ ಉಳ್ಳವರ ಅಗತ್ಯಕ್ಕಾಗಿ ದೂರದ ಸ್ಥಳಗಳಿಗೆ ಹೋಗುವಂತೆ ಮಾಡುವುದು ಸರಿಯಲ್ಲ ಎಂದು ತೀರ್ಪು ಸಾಕಷ್ಟು ಖಾರವಾಗಿಯೇ ಹೇಳಿದೆ.

ಆದರೂ ಗೋವಾ ಮುಖ್ಯಮಂತ್ರಿಗಳು ಈ ತೀರ್ಪನ್ನು ಸುಪ್ರಿಂ ಕೊರ್ಟಿನಲ್ಲಿ ಪ್ರಶ್ನಿಸುತ್ತೇವೆ, ಪುಣೆ ನಮಗೆ ತಲೆನೋವು, ದಿಲ್ಲಿಯಲ್ಲಿ ನಮ್ಮ ವಕೀಲರುಗಳಿದ್ದಾರೆ, ದಿಲ್ಲಿ ನಮಗೆ ಒಳ್ಳೆಯದು ಎಂದು ಭಂಡತನದಿಂದ ಹೇಳಿದ್ದಾರಂತೆ. ಬಿಜೆಪಿ ಮುಖ್ಯಮಂತ್ರಿಯ ಈ ‘ನಾವು’ನಲ್ಲಿ ಜನಸಾಮಾನ್ಯರು ಇಲ್ಲ ಎಂಬುದು ಸ್ಪಷ್ಟ.