ಜಾತಿ ಸಂವೇದನೆ ಅಪಾಯಕಾರಿ - ಪ್ರೊ. ಕೆ.ದೊರೈರಾಜ್ ಆತಂಕ

ಸಂಪುಟ: 
11
ಸಂಚಿಕೆ: 
44
Sunday, 22 October 2017

ದೇಶದಲ್ಲಿ ಮನುಷ್ಯ ಸಂವೇದನೆಗಿಂತ ಜಾತಿ ಸಂವೇದನೆ ಹೆಚ್ಚಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಪ್ರಗತಿಪರ ಚಿಂತಕ ಕೆ.ದೊರೈರಾಜ್ ತಿಳಿಸಿದರು. ತುಮಕೂರು ನಗರದ ಎಂ.ಜಿ.ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದಲಿತ ಹಕ್ಕುಗಳ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ದಲಿತರ ಸಮಾವೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜದಲ್ಲಿ ಜಾತಿ ಸಂವೇದನೆ ಹೆಚ್ಚಾಗಿ ಮಾನವ ಸಂವೇದನೆ ಕಡಿಮೆಯಾಗಿದೆ. ಹೀಗಾಗಿ ಮಹಿಳೆಯರು ಮತ್ತು ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ದಲಿತರು ಹಾಗೂ ದಲಿತ ಮಹಿಳೆಯ ಮೇಲೆ ದೌರ್ಜನ್ಯ ನಡೆದರೆ ದಲಿತರೇ ಪ್ರತಿಭಟನೆ ನಡೆಸಬೇಕಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ದಲಿತ ಮಹಿಳೆಯ ಮೇಲೆ ಹಲ್ಲೆ ನಡೆದರೆ ಮಹಿಳೆಯರೆಲ್ಲರೂ ಹೋರಾಟ ಮಾಡಬೇಕು. ದಲಿತರ ಮೇಲೆ ದೌರ್ಜನ್ಯ ನಡೆದಾಗಲೂ ದಲಿತೇತರರು ಪ್ರತಿಭಟನೆ ನಡೆಸಿದಾಗ ಮಾನವ ಸಂವೇದನೆ ಮೂಡಲು ಸಾಧ್ಯ. ಮನುಷ್ಯ ಸಂವೇದನೆ ಇರುವವರೆಲ್ಲರೂ ದೌರ್ಜನ್ಯದ ವಿರುದ್ದದ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಾಜದಲ್ಲಿ ಬೇರೂರಿರುವ ಜಾತಿ ವ್ಯವಸ್ಥೆಯ ಬೇರುಗಳನ್ನು ಸಡಿಲಗೊಳಿಸಲು ಎಲ್ಲಾ ಸಂಘಟನೆಗಳು ಸಂಘಟಿತವಾಗಿ ಹೋರಾಟ ಮಾಡಬೇಕು. ದಲಿತೇತರರು ಮಾನವ ಹಕ್ಕುಗಳೆಂದು ಪರಿಗಣಿಸಿ ಹೋರಾಟಕ್ಕೆ ಬರಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ದಲಿತ ಸಂಘಟನೆಗಳು ಅಧಿಕಾರ ಹಿಡಿಯಬೇಕೆಂದು ಬಯಸುತ್ತಿವೆ. ಯಾಕೆಂದರೆ ಇದುವರೆಗೂ ನಡೆದಿರುವ ಹೋರಾಟವನ್ನು ಗಮನಿಸಿರುವ ದಲಿತರು ಭ್ರಮನಿರಸಗೊಂಡಿದ್ದು ಅಧಿಕಾರ ಹಿಡಿಯುವ ಪ್ರಯತ್ನ ನಡೆಸುತ್ತಿದ್ದು ಸಮಾನ ಮನಸ್ಕ ಸಂಘಟನೆಗಳ ಜೊತೆಗೆ ಸೇರಿ ಹೋರಾಟ ನಡೆಸುತ್ತಿವೆ ಎಂದರು.

ಪೌರಕಾರ್ಮಿಕರು ಘನತೆಯಿಂದ ಕೆಲಸ ಮಾಡುವ ಪರಿಸ್ಥಿತಿಯನ್ನು ನಿರ್ಮಾಣ

ಮಾಡಲು ನಾಗರಿಕರು ಮತ್ತು ಸರ್ಕಾರಗಳು ವಿಫಲವಾಗಿವೆ. ಹಾಗೆಯೇ ಗುತ್ತಿಗೆ ಪೌರಕಾರ್ಮಿಕರನ್ನು ಕಾಯಂಗೊಳಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ದಲಿತರಿಗೆ ಭೂಮಿ ನೀಡಿರುವ ಕುರಿತು ಸರ್ಕಾರ ಶ್ವೇತ ಹೊರಡಿಸಬೇಕು ಎಂದು ಆಗ್ರಹಿಸಿದರು.

ಖಾಸಗೀಕರಣದ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಶುಲ್ಕ ವಿಧಿಸುತ್ತಿರುವುದರಿಂದ ದಲಿತರು ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಉದ್ಯೋಗ ಹಿಡಿಯಲು ಅವಕಾಶ ಸಿಗುತ್ತಿಲ್ಲ. ಭೂಮಿಯ ಹಂಚಿಕೆ ಮಾಡುತ್ತಿಲ್ಲ. ಹಲವು ವರ್ಷಗಳಿಂದ ದಲಿತರಿಗೆ ಭೂಮಿ ನೀಡುವಂತೆ ಮನವಿ ಮಾಡುತ್ತ ಬಂದರೂ ಸರ್ಕಾರ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಟೀಕಿಸಿದರು.

ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಮಾತನಾಡಿ ರಾಜ್ಯದಲ್ಲಿ 35 ಸಾವಿರ   ಮುಜರಾಯಿ ದೇವಾಲಗಳಿವೆ. ಇಷ್ಟೊಂದು ದೇವಾಲಯಗಳಿದ್ದರೂ ಇದುವರೆಗೂ ದಲಿತ ಅರ್ಚಕರನ್ನು ನೇಮಕ ಮಾಡಿಲ್ಲ. ಹಿಂದೆ ಸರ್ಕಾರ ಸಂಸ್ಕøತ ವಿವಿಗಳಲ್ಲಿ ವಿದ್ಯಾಭ್ಯಾಸ   ಮಾಡಿದವರಿಗೆ ಅರ್ಚಕ ಹುದ್ದೆ ನೀಡಲಾಗುವುದು ಎಂದು ಆದೇಶ ಹೊರಡಿಸುವ ಮೂಲಕ   ಅಸ್ಪøಶ್ಯತೆಯನ್ನು ಆಚರಿಸುತ್ತಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ದಲಿತರಿಗೆ ದೇವಸ್ಥಾನ ಪ್ರವೇಶ ಸಾಧ್ಯವಾಗಿಲ್ಲ. ದೇವಾಲಯಗಳಲ್ಲಿ ದಲಿತ ಅರ್ಚಕರ ನೇಮಕ ಮಾಡಿಲ್ಲ. ಉದ್ಯೋಗದ ಪ್ರಶ್ನೆಯ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಮಂತ್ರಗಳನ್ನು ಹೇಳುವ ದಲಿತರಿಗೆ ಅರ್ಚಕರನ್ನಾಗಿ ನೇಮಕ ಮಾಡಬೇಕು. ಸಂಸ್ಕøತ ದೇವಭಾಷೆ ಎಂದು ಹೇಳುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿದರು.

ಬಡ್ತಿ ಮೀಸಲಾತಿ ಸಂಬಂಧ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ರಾಜ್ಯಪಾಲರಿಗೆ ಕಳಿಸಿದರೆ ಎರಡು ಬಾರಿ ಅದಕ್ಕೆ ಅಂಕಿತ ಹಾಕದೆ ತಿರಸ್ಕರಿಸಿದ್ದಾರೆ. ಬಡ್ತಿ ಮೀಸಲಾತಿ ಪ್ರಶ್ನೆ ಬರುತ್ತಿದ್ದಂತೆಯೇ ಮೇಲ್ವರ್ಗದವರಿಗೆ ಕಣ್ಣು ಕೆಂಪಾಗುತ್ತಿವೆ. ಸಂಪುಟದ ಸಹದ್ಯೋಗಿಗಳೇ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಮುಖ್ಯಮಂತ್ರಿಗಳು ಬಡ್ತಿ ಮೀಸಲಾತಿ ಪರವಾಗಿದ್ದು ಈ ಸಂಬಂಧ ಬೆಳಗಾವಿ ಅಧಿವೇಶನದಲ್ಲಿ ಹೋರಾಟ ನಡೆಸಿ ಇದು ಜಾರಿಗೆ ಬರುವಂತೆ ನೋಡಿಕೊಳ್ಳಬೇಕಾಗಿದೆ ಎಂದರು.

ದಲಿತ ಹೋರಾಟಗಳು ಸ್ಥಗಿತಗೊಂಡಿವೆ. ಶಕ್ತಿ ಕಳೆದುಕೊಂಡಂತೆ ಕಾಣಿಸುತ್ತಿದೆ. ಇದರ ಚಲಶೀಲತೆಗೊಳ್ಳುವಂತೆ ಮಾಡಲು ದಲಿತ ಹಕ್ಕುಗಳ ಸಮಿತಿ ಶ್ರಮಿಸಬೇಕಾಗಿದೆ. ಸಮಾನತೆ, ಸ್ವಾಭಿಮಾನದ ಪ್ರಶ್ನೆಯಾಗಿ ಹೋರಾಟ ಮುಂದುವರಿಯಬೇಕು. ಹಿರಿಯ ದಲಿತ ಐಎಎಸ್ ಅಧಿಕಾರಿಗಳು ಕೂಡ ಜಾತಿ ವ್ಯವಸ್ಥೆ ಹೋಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾಗಿ ನಾವು ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಲು ಅಂತರ್‍ಜಾತಿ ವಿವಾಹ ಮಾಡುತ್ತಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಈ. ಶಿವಣ್ಣ, ಸಹ ಸಂಚಾಲಕಿ ಎಸ್.ಡಿ.ಪಾರ್ವತಮ್ಮ, ಸದಸ್ಯರಾದ ಲಕ್ಷ್ಮಣ್, ದರ್ಶನ್ ಹಾಜರಿದ್ದರು.

 

ವರದಿ: ಎಸ್.ರಾಘವೇಂದ್ರ