Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

20 ಕೋಟಿ ಹಸಿದ ಹೊಟ್ಟೆಗಳ ನೋವುಗಳಿಗೆ ಮನದ ಮಾತಲ್ಲಿ ಪ್ರವೇಶವಿಲ್ಲ

ಸಂಪುಟ: 
11
ಸಂಚಿಕೆ: 
44
date: 
Sunday, 22 October 2017
Image: 

ಇತ್ತೀಚೆಗೆ ಪ್ರಕಟವಾಗಿರುವ ‘ಜಾಗತಿಕ ಹಸಿವಿನ ಸೂಚ್ಯಂಕ’(ಜಿಹೆಚ್‍ಐ)ದ ಪಟ್ಟಿಯಲ್ಲಿ ಕಳೆದ ವರ್ಷ 120 ದೇಶಗಳಲ್ಲಿ 97ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ 100ನೇ ಸ್ಥಾನಕ್ಕೆ ಇಳಿದಿದೆ. ನಮ್ಮ ಹೆಚ್ಚಿನ ನೆರೆಯ ದೇಶಗಳಿಗಿಂತ  ಕೆಳಗಿನ ಸ್ಥಾನದಲ್ಲಿದೆ.  ಆದರೆ ‘ವ್ಯವಹಾರವನ್ನು ಸುಲಭಗೊಳಿಸುವ ಸೂಚ್ಯಂಕ’ದಲ್ಲಿ ಭಾರತದ ಸ್ಥಾನವನ್ನು ಮೇಲಕ್ಕೇರಿಸುವ  ಗೀಳು ಹಚ್ಚಿಕೊಂಡಿರುವ ಅಚ್ಛೇ ದಿನ್‍ಗಳಲ್ಲಿ ಹಸಿವಿನ ಸೂಚ್ಯಂಕದ ಬಗ್ಗೆ ಪ್ರಸ್ತಾಪ ಕೂಡ ‘ಮನಕೀ ಬಾತ್’, ನೀತಿ ಆಯೋಗದ ಅಜೆಂಡಾಗಳಿಗೆ ಇನ್ನೂ ಬಂದಿರುವಂತೆ ಕಾಣುತ್ತಿಲ್ಲ. ಆದರೆ ತದ್ವಿರುದ್ಧವಾದ ಪ್ರಕ್ರಿಯೆಗಳು ಬಹಳಷ್ಟು ಕಾಣುತ್ತಿವೆ.

ಹಸಿವಿನ ಸೂಚ್ಯಂಕವನ್ನು ತಯಾರಿಸಿರುವ ಅಂತರ್ರಾಷ್ಟ್ರೀಯ ಆಹಾರ ಧೋರಣೆ ಸಂಶೋಧನಾ ಸಂಸ್ಥೆ(ಐಎಪ್‍ಪಿಆರ್‍ಐ)ಯ ವರದಿಯ ಪ್ರಕಾರ ಕಳೆದ ಏಳು ವರ್ಷಗಳಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ ಜನಗಳ ಪ್ರಮಾಣ 16% ದಿಂದ 14%ಕ್ಕೆ ಇಳಿದಿದೆ. ಇದರ ಆಧಾರದಲ್ಲಿ ಲೆಕ್ಕ ಹಾಕಿದರೆ ಭಾರತದಲ್ಲಿ ಹಸಿದಿರುವವರ ಸಂಖ್ಯೆ 2007ರಲ್ಲಿ 19.7 ಕೋಟಿ ಇದ್ದದ್ದು ಈಗ ಕನಿಷ್ಟ 20 ಕೋಟಿಯಾಗಿದೆ. ಭಾರತದಲ್ಲಿ ಅಪೌಷ್ಟಿಕತೆಯ ಪ್ರಮಾಣ 15%.

ನಿಜ, ಇದೇನು ಅಚ್ಚೇದಿನ್‍ಗಳ ಕಾರಣದಿಂದಾಗಿ ಅಲ್ಲವಲ್ಲ ಎಂದು  ಕೇಳಬಹುದು. ಆದರೆ ಆಬಗ್ಗೆ ಅತೀವ ಕಾಳಜಿಯಂತೂ ಇರಬೇಕಲ್ಲ- ಅದೂ ಮಾತಿನ ಮಂಟಪ ಕಟ್ಟುತ್ತಿರುವ ಈ ದಿನಗಳಲ್ಲಿ. ಆದರೂ ಈ ಅಂಕಿ-ಅಂಶಗಳನ್ನು ನೋಡಿ:

ಈ ವರದಿ ಕಲೆ ಹಾಕಿರುವ ಅಂಕಿ-ಅಂಶಗಳ ಪ್ರಕಾರ ಅಪೌಷ್ಟಿಕತೆಯ ದುಷ್ಪರಿಣಾಮ ಮಕ್ಕಳಲ್ಲಿ ಎದ್ದು ಕಾಣುತ್ತಿದೆ. ಭಾರತದ ಮಕ್ಕಳಲ್ಲಿ ‘ಕೃಶತೆ’ ಅಂದರೆ ಮಕ್ಕಳ ತೂಕ ಅವರ ಎತ್ತರಕ್ಕೆ ಅನುಗುಣವಾಗಿರದೆ ಕಡಿಮೆಯಿರುವುದು, ಭಾರತದ ಸುಮಾರು 9.7 ಕೋಟಿ ಮಕ್ಕಳಲ್ಲಿ ಕಾಣುತ್ತಿದೆ. 2006-10ರಲ್ಲಿ ಇದರ ಪ್ರಮಾಣ 20% ಇದ್ದದ್ದು 2012-16ರಲ್ಲಿ 21%ಕ್ಕೆ ಏರಿದೆ. ಅಪೌಷ್ಟಿಕತೆಯ ಇನ್ನೊಂದು ಮಾಪಕವಾದ ‘ಕುಂಠಿತತೆ’ ಅಂದರೆ ವಯಸ್ಸಿಗೆ ಅನುಗುಣವಾದ ದೈಹಿಕ ಬೆಳವಣಿಗೆ ಇಲ್ದಿರುವುದು. ಇದು ಭಾರತದ 38.4% ಮಕ್ಕಳಲ್ಲಿ ಕಾಣುತ್ತಿದೆ.

ಇತ್ತೀಚೆಗೆ ವೈದ್ಯಕೀಯ ಪತ್ರಿಕೆ ‘ಲಾನ್ಸೆಟ್’ನಲ್ಲಿ ಪ್ರಕಟವಾದ ಇನ್ನೊಂದು ಅಧ್ಯಯನದ ಪ್ರಕಾರ 58% ಬಾಲಕರು ಮತ್ತು 50% ಬಾಲಕಿಯರ ದೇಹದ ತೂಕ ಇರಬೇಕಾದ್ದಕ್ಕಿಂತ ಕಡಿಮೆಯಿದೆ.

ಜಗತ್ತಿನ ಹಸಿದ ಜನಗಳಲ್ಲಿ ಕಾಲುಭಾಗ ಭಾರತದಲ್ಲಿದ್ದಾರೆ. ಆದರೆ ಭಾರತವನ್ನು ಜಗತ್ತಿನಲ್ಲಿ ಒಂದು ಬಲಿಷ್ಟ ರಾಷ್ಟ್ರವನ್ನಾಗಿ ಮಾಡುವ ಮಹತ್ವಾಕಾಂಕ್ಷೆ ಹೊತ್ತಿರುವವರಿಗೆ ಈ 20 ಕೋಟಿ ಹಸಿದ ಭಾರತೀಯರಿಗೆ ಎರಡು ಹೊತ್ತು ಅನ್ನ ಸಿಗುವಂತೆ ಮಾಡುವುದು ತುರ್ತಿನ ಪ್ರಶ್ನೆಯಾಗಿ ಕಾಣುತ್ತಿಲ್ಲ. ಬದಲಾಗಿ ಪ್ರಜಾಪ್ರಭುತ್ವ ಆಂದೋಲನದ ಸತತ ಹೋರಾಟಗಳಿಂದಾಗಿ ಈ ದಿಕ್ಕಿನಲ್ಲಿ ಕೆಲವಾದರೂ ಪ್ರಯತ್ನಗಳು ನಡೆದಿದೆ. ಐಸಿಡಿಎಸ್, ಮಧ್ಯಾಹ್ನದ ಊಟ, ಆಹಾರಭದ್ರತೆಯ ಕಾಯ್ದೆ, ಮನರೇಗ ಕಾಯ್ದೆ ಇತ್ಯಾದಿ ಬಂದಿವೆ. ಆದರೆ ಅವೆಲ್ಲವನ್ನೂ ಮತ್ತಷ್ಟು ಬಲಪಡಿಸುವ ಬದಲು ಈ ಅಚ್ಛೇದಿನ್‍ಗಳಲ್ಲಿ ದುರ್ಬಲಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ.

ಇವಕ್ಕೆಲ್ಲ ಕೊಡಲಾಗುತ್ತಿರುವ ಸಬ್ಸಿಡಿಗಳಲ್ಲಿ ಕಡಿತ ಮಾಡಲು ಸೋರಿಕೆಯನ್ನು ತಡೆಯುವ ಹೆಸರಿನಲ್ಲಿ ಇವನ್ನೆಲ್ಲ ‘ಆಧಾರ್’ನೊಂದಿಗೆ ಜೋಡಿಸಲು ಶತಪ್ರಯತ್ನ ನಡೆಸುತ್ತಿದೆ. ಈಬಗ್ಗೆ ಸುಪ್ರಿಂ ಕೋರ್ಟ್ ಸರಕಾರದ ಸೌಲಭ್ಯಗಳಿಗೆ ಆಧಾರವನ್ನು ಶರತ್ತಾಗಿ ಮಾಡಬಾರದು ಎಂದು ನೀಡಿರುವ ಮಧ್ಯಂತರ ಆದೇಶದ ಪರಿವೆಯೂ ಈ ಅಳುವ ಮಂದಿಗಿದ್ದಂತಿಲ್ಲ. ಇದರ ಒಂದು ತಲ್ಲಣಕಾರಿ ಪರಿಣಾಮ ಈ ವಾರದ ಒಂದು ಘಟನೆಯಲ್ಲಿ ಬಯಲಾಗಿದೆ.

ಅನ್ನ...ಅನ್ನ ..ಎಂದು ಕೇಳುತ್ತಲೇ ಕಣ್ಣು ಮುಚ್ಚಿದ ಸಂತೋಷಿ!

ಝಾರ್ಖಂಡ್‍ನ ಸಿಮ್‍ದೇಗಾ ಜಿಲ್ಲೆಯ ಕರಿಮಾತಿ ಎಂಬ ಹಳ್ಳಿಯಲ್ಲಿ ಸಂತೋಷಿ ಕುಮಾರಿ ಎಂಬ 11ವರ್ಷದ ಬಾಲಕಿ ಒಂದು ತುತ್ತು ಕೊಡಮ್ಮಾ ಎನ್ನುತ್ತಲೇ ಪ್ರಾಣ ಕಳಕೊಂಡಿರುವ ದಾರುಣ ಘಟನೆ ವರದಿಯಾಗಿದೆ. ಭೂಮಿ, ಉದ್ಯೋಗ ಅಥವ ಬೇರಾವುದೇ  ನಿಯಮಿತ ಆದಾಯ ಇಲ್ಲದ ಈಕೆಯ ಕುಟುಂಬ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಸಬ್ಸಿಡಿ ರೇಶನ್‍ಗೆ ಅರ್ಹವಾಗಿದೆ. ಆದರೆ ಅವರ ರೇಶನ್ ಕಾರ್ಡ್ ಆಧಾರ್‍ಗೆ ಲಗತ್ತಿಸಿಲ್ಲ(ಲಗತ್ತಿಸಿದೆ ಎಂದು ತಾಯಿ ಹೇಳುತ್ತಾಳೆ) ಎಂಬ ಕಾರಣಕ್ಕೆ ರದ್ದಾಗಿತ್ತು. ತಂದೆ ಮಾನಸಿಕ ಕಾಯಿಲೆಗೆ ಗುರಿಯಾಗಿದ್ದು, ತಾಯಿಗೆ ಮನರೇಗದಲ್ಲೂ ಉದ್ಯೋಗ ದೊರೆಯದೆ ಅಲ್ಲಿ-ಇಲ್ಲಿ ಕೂಲಿ ನಾಲಿ ಮಾಡಿಕೊಂಡು, ಶಾಲೆಯಲ್ಲಿ ಕೊಡುವ ಮಧ್ಯಾಹ್ನ ಊಟ ಬಳಸಿಕೊಂಡು ಮಕ್ಕಳ ಹೊಟ್ಟೆಗಾದರೂ ಏನಾದರೂ ಬೀಳುತ್ತಿತ್ತು. ಆದರೆ ದುರ್ಗಾಪೂಜೆ ರಜೆಗಳಿಂದಾಗಿ ಆ ಆಸರೆಯೂ ಇಲ್ಲದಾಯಿತು. ಸತತ ಎಂಟು ದಿನ ಏನೂ ತಿನ್ನಲು ಸಿಗದೆ ಆಕೆಯ ಪ್ರಾಣ ಬಿಟ್ಟಳು ಎಂದು ವರದಿಯಾಗಿದೆ. ನಿಜ, ಆಡಳಿತ ಆಕೆ ಮಲೇರಿಯಾದಿಂದ ಸತ್ತಳು ಎನ್ನುತ್ತಿದೆಯಂತೆ. ಈಗ ಸ್ವತಃ ಅಲ್ಲಿಯ ಮುಖ್ಯಮಂತ್ರಿಗಳೇ ಕುಟುಂಬಕ್ಕೆ 50,000 ರೂ. ಪರಿಹಾರ ಕೊಡುವಂತೆ ಮತ್ತು ಈ ಬಗ್ಗೆ ತನಿಖೆ ನಡೆಸುವಂತೆ ಹೇಳಿದ್ದಾರಂತೆ.

ಆದರೆ ಅವರ ಸರಕಾರ ಇಂತಹ 11 ಲಕ್ಷ ರೇಶನ್ ಕಾರ್ಡ್‍ಗಳನ್ನು ರದ್ದು ಮಾಡಿದೆ. ಆ ಬಗ್ಗೆ ತನಿಖೆ ನಡೆಸುವಂತೆ ಕಾಣುತ್ತಿಲ್ಲ. ಈ ಮಧ್ಯೆ ‘ಆಧಾರ್‍ನಿಂದಾಗಿ ಸರಕಾರದ ಖಜಾನೆಗೆ 9 ಬಿಲಿಯ ಡಾಲರ್ ಉಳಿತಾಯವಾಗಿದೆ ಎಂದು ಇದರ ಶಿಲ್ಪಿ ನಂದನ್ ನೀಲೇಕಣಿ ಹೇಳಿದ್ದಾರೆ” ಎಂದು ಸರಕಾರೀ ಅಧಿಸೂಚನೆಯೆಂಬ ಸಂದೇಶ ಹಲವರ ಇ-ಮೇಲ್ ಗಳಿಗೆ ಬಂದಿದೆ(GovernmentNotification<info@mc.shiningindiaa.com)! ಅಂದರೆ ಸುಮಾರು 55000 ಕೋಟಿ ರೂ.ಗಳು! ಡಾಲರುಗಳಲ್ಲಿರುವ ‘ರಾಷ್ಟ್ರವಾದಿ’ಗಳ ಈ ಸಂದೇಶ ಯಾರಿಗಾಗಿ, ಯಾರ ಪ್ರಾಣ ಹೀರಿ?