Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಮಳೆಗೆ ಕೊಚ್ಚಿ ಹೋದ “ನಗರಾಭಿವೃದ್ಧಿ”

ಸಂಪುಟ: 
11
ಸಂಚಿಕೆ: 
44
Sunday, 22 October 2017

ಹಲವು ವರ್ಷಗಳ ಬರದ ನಂತರ ಕಳೆದ ಎರಡು ತಿಂಗಳುಗಳಲ್ಲಿ ಸುರಿದ ಮಳೆ ಸಂತೋಷ ತರಬೇಕಾಗಿತ್ತು. ಆದರೆ ಪ್ರಕೃತಿಯ ಏರು-ಪೇರುಗಳು ಸೇರಿದಂತೆ ಪ್ರಕೋಪಗಳನ್ನು ಗಣನೆಗೆ ತೆಗೆದುಕೊಳ್ಳದ ಯೋಜನೆಯ ಅಭಾವ ಮತ್ತು ಹಲವು ಇತರ ಸಮಸ್ಯೆಗಳಿಂದಾಗಿ ಇದು ಒಂದು ಬೃಹತ್ ಸಮಸ್ಯೆಯಾಗಿ ಬಿಟ್ಟಿದೆ.  ಅದರಲ್ಲೂ ಬೆಂಗಳೂರು ಮಳೆಗೆ ತತ್ತರಿಸಿ ಹೋಗಿದೆ. ಪ್ರತಿ ವರ್ಷ ಸಣ್ಣ ಮಳೆಗೂ ಬೆಂಗಳೂರಿನಲ್ಲಿ ತಗ್ಗು ಪ್ರದೇಶಗಳಲ್ಲಿ ಗುಡಿಸಲುಗಳಿಗೆ ನೀರು ನುಗ್ಗುವುದು ಸಾಮಾನ್ಯ. ಆದರೆ ಈ ಬಾರಿಯ ಮಳೆಗೆ ಗುಡಿಸಲುಗಳಷ್ಟೇ ಅಲ್ಲ, ದೊಡ್ಡ ದೊಡ್ಡ ಅಪಾರ್ಟಮೆಂಟುಗಳೂ ಜಲಾವೃತಗೊಂಡಿವೆ. ಇದರಲ್ಲಿ ಮಾನವ ನಿರ್ಮಿತ ತಪ್ಪುಗಳೇ ಜಾಸ್ತಿ.

ಗುಡಿಸಲು, ಕೊಳೆಗೇರಿಗಳಷ್ಟೇ ಅಲ್ಲ ದೊಡ್ಡ ದೊಡ್ಡ ಅಪಾರ್ಟಮೆಂಟುಗಳಿರುವ ಪ್ರದೇಶಗಳೂ ಕೆರೆಗಳಾಗಿದ್ದವು. ಹಲವು ಕಡೆ ನೀರನ್ನು ದಿನವೀಡಿ ಪಂಪ್ ಮಾಡಿ ತೆಗೆಯಬೇಕಾಯಿತು. ಹಲವರು ಮನೆ ಬಿಟ್ಟು ಬೇರೆ ಕಡೆಗೆ ಹೋಗಬೇಕಾಯಿತು. ಮಳೆನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಹಲವು ಸಾವು-ನೋವುಗಳು ಸಂಭವಿಸಿವೆ. ಹಲವು ಕಟ್ಟಡಗಳು ಶಿಥಿಲವಾಗಿ ಅಪಾಯಕಾರಿಯಾಗಿವೆ. ಸತತ ಮಳೆಯಿಂದ ರಸ್ತೆಯಲ್ಲಿ ಗುಂಡಿಗಳು ಬಿದ್ದು, ಕತ್ತಲಲ್ಲಿ ಅಥವಾ ತುಂಬಿದ ನೀರಿನಿಂದ ಗೊತ್ತಾಗದೆ ಹಲವು ಗುಂಡಿಗಳು ಮಾನವ ಬಲಿ ತೆಗೆದುಕೊಂಡಿವೆ. ಮಳೆ ಬಂದ ಸಂಜೆಗಳಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಗಳಾಗಿವೆ.

ಇದಕ್ಕೆಲ್ಲ ಕಾರಣ, ನೆಲಕ್ಕೆ ಬಿದ್ದ ನೀರು ಇಂಗಲು ಅಥವಾ ಸರಾಗವಾಗಿ ಹರಿದು ಹೋಗಲು ಸಮರ್ಪಕ ವ್ಯವಸ್ಥೆಯೇ ಇಲ್ಲದಿರುವುದು. ರಾಜಕಾಲುವೆಗಳೆಲ್ಲ ಒತ್ತುವರಿಯಾಗಿವೆ. ಮೋರಿಗಳು, ಕಿರು ಕಾಲುವೆಗಳನ್ನು ತೊಟ್ಟಿಗಳೆಂದು ಭಾವಿಸಿ ಕಸ ಎಸೆಯುವ ಜಾಗಗಳಾಗಿವೆ. ಸಣ್ಣ ಪುಟ್ಟ ಮೋರಿಗಳಲ್ಲಿ ಹೂಳು, ಕಸ ತುಂಬಿಕೊಂಡಿವೆ. ಕೆರೆಗಳನ್ನು ಮುಚ್ಚಿ ಬೇರೆ ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆ.  ಜಲ ಸಂಗ್ರಹವಾಗಲು ಅವಕಾಶವನ್ನೇ ಕೊಟ್ಟಿಲ್ಲ. ಇಡೀ ನಗರವನ್ನೇ ಕಾಂಕ್ರೀಟ್ ಕಾಡಾಗಿ ಪರಿವರ್ತಿಸಿದ್ದರ ಪರಿಣಾಮ ಇದು. ಭಾರತೀಯ ವಿಜ್ಞಾನ ಮಂದಿರದ ಸಂಶೋಧಕರ ವರದಿಯ ಪ್ರಕಾರ ಬೆಂಗಳೂರಿನ ಭೂಪ್ರದೇಶದ ಶೇ 78ರಷ್ಟು ಭಾಗ ಕಾಂಕ್ರೀಟೀಕರಣವಾಗಿದೆ. ಅಂದರೆ ಕಟ್ಟಡಗಳು, ಸಿಮೆಂಟ್ ಮೇಲ್ಮೈ, ಟಾರ್ ರಸ್ತೆ, ಫುಟ್ಪಾತುಗಳು ಮಣ್ಣಿನ ನೆಲವನ್ನು ಮುಚ್ಚಿಬಿಟ್ಟಿವೆ. ನೀರು ಇಂಗಲು ಜಾಗವೇ ಕಡಿಮೆಯಾಗಿದೆ. ಕಡ್ಡಾಯ ಮಳೇನೀರು ಕೊಯ್ಲು ಯೋಜನೆ ಬರಿಯ ಕಾಗದದ ಮೇಲಿದೆಯಷ್ಟೇ. ಸಣ್ಣ ಮಳೆಯನ್ನೇ ತಡೆದುಕೊಳ್ಳದ ಈ ನಗರವನ್ನು ಇನ್ನು ದೊಡ್ಡ ಮಳೆ ಮುಳುಗಿಸದೇ ಬಿಡುತ್ತದಾ? ರಾಜಕಾಲುವೆಗಳನ್ನು ಸುಸ್ಥಿತಿಯಲ್ಲಿ ಇಡಬೇಕಾಗಿತ್ತು. ಮೋರಿಗಳಲ್ಲಿನ ಹೂಳನ್ನು ತೆಗೆಸಿ ಸ್ವಚ್ಛ ಮಾಡಬೇಕಾಗಿತ್ತು. ಮುಖ್ಯವಾಗಿ ಈ ಕೆಲಸ ಬೇಸಿಗೆಯಲ್ಲೇ ನಡೆಯಬೇಕಾಗಿತ್ತು. ಆದರೆ ಎಂದಿನಂತೆ ಮಳೆ ನೀರು ನಗರವನ್ನೇ ಮುಳುಗಿಸಿದ ನಂತರ ಹೂಳು ತೆಗೆಯುವ ಕೆಲಸ ನಡೆದಿದೆ.  

ಬೆಂಗಳೂರಲ್ಲಿ ರಸ್ತೆ ನಿರ್ಮಾಣಕ್ಕೆ, ಗುಂಡಿ ಮುಚ್ಚಲಿಕ್ಕೆ ಕೋಟಿಗಟ್ಟಲೆ ಹಣ ಖರ್ಚಾಗಿದೆ. ಗುಂಡಿ ಮುಚ್ಚುವುದಕ್ಕಾಗಿಯೇ ಪ್ರತಿ ವರ್ಷ ಕೋಟಿಗಟ್ಟಲೆ ಹಣ ಖರ್ಚಾಗಿದೆ. 2017-18ನೇ ಸಾಲಿನಲ್ಲಿ ಹೀಗೆ ಮೀಸಲಿಟ್ಟ ಹಣ ರೂ. 48 ಕೋಟಿ. ಹೋದ ಸಾಲಿನ ಬಜೆಟ್ನಲ್ಲಿ ಗುಂಡಿ ಮುಚ್ಚಲು ರೂ. 14.85 ಕೋಟಿ, ಪ್ರಮುಖ ರಸ್ತೆಗಳ ದುರಸ್ತೆಗೆ ರೂ. 31 ಕೋಟಿ, ಯಂತ್ರಗಳ ಸಹಾಯದಿಂದ ಗುಂಡಿ ಮುಚ್ಚಲು ರೂ. 6.31 ಕೋಟಿ ತೆಗೆದಿಡಲಾಗಿತ್ತು. ಬೆಂಗಳೂರು ಮಹಾ ನಗರದಲ್ಲಿನ ದೊಡ್ಡ, ಮಧ್ಯಮ ಮತ್ತು ಸಣ್ಣ ರಸ್ತೆಗಳ ಒಟ್ಟು ಉದ್ದವೇ 14,118 ಕಿ.ಮೀ.ಗಳಷ್ಟಿದೆ. ಈ ಸಲ ರಸ್ತೆ ನಿರ್ಮಾಣ-ನಿರ್ವಹಣೆಗೆ ರೂ. 4 ಸಾವಿರ ಕೋಟಿ ಇಡಲಾಗಿದೆ. ಇದು ಬಜೆಟಿನ ಶೇ. 45ರಷ್ಟು. ಆದರೂ ಗುಂಡಿಗಳಿಗೇನೂ ಕೊರತೆ ಇಲ್ಲ. ಹೋದ ವರ್ಷ 4 ಸಾವಿರ ಗುಂಡಿಗಳಿದ್ದವು; ಈ ಸಲ ದುಪ್ಪಟ್ಟು ಆಗಿದೆಯಂತೆ. ಮುಖ್ಯ ಮತ್ತು ಉಪ ರಸ್ತೆಗಳಲ್ಲಿ 9400 ಗುಂಡಿಗಳು ಲೆಕ್ಕಕ್ಕೆ ಸಿಕ್ಕಿವೆಯಂತೆ.  ಕೆಲಸದ ಕಳಪೆ ಗುಣಮಟ್ಟ ಮತ್ತು ಬಹುಶಃ ಕೆಲಸ ಮಾಡದೆ ಕಾಮಗಾರಿ ಹಣ ಪಾವತಿ ಆಗುವ ಭ್ರಷ್ಟಾಚಾರದಿಂದಾಗಿಯೇ ಈ ಬೃಹತ್ ಸಮಸ್ಯೆ ಎದುರಾಗಿರುವುದು.  ಈ ಗುಂಡಿಗಳಿಂದಾಗಿ ಬೆನ್ನುಮೂಳೆಗೆ ಹಾನಿ ಸೇರಿದಂತೆ ಹಲವು ಬಗೆಯ ಮೂಳೆ ಮುರಿತ, ನೋವುಗಳನ್ನು ಅನುಭವಿಸುತ್ತಿರುವಂತಹ ಸರಾಸರಿ 25 ಪ್ರಕರಣಗಳು ಬೆಂಗಳೂರಿನ ಆಸ್ಪತ್ರೆಗಳಲ್ಲಿ ತಿಂಗಳಿಗೆ ವರದಿಯಾಗುತ್ತಿವೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಈ ಮಹಾನಗರದಲ್ಲಿ ವಾಹನಗಳನ್ನು ಬಳಸುವ ಬಹಳಷ್ಟು ಜನರ ಬೆನ್ನು, ಮೂಳೆ ನೋವಿಗೆ ಮುಖ್ಯ ಕಾರಣವೇ ಗುಂಡಿಗಳಿಂದ ತುಂಬಿದ ರಸ್ತೆಗಳು.

ಕಳಪೆ ಕಾಮಗಾರಿ, ಭ್ರಷ್ಟಾಚಾರಗಳಷ್ಟೇ ಅಲ್ಲ, ಮಳೆ ಮತ್ತು ಚರಂಡಿಯ ನೀರು ಹರಿದು ಹೋಗದೆ ರಸ್ತೆ ಮೇಲೆ ನಿಲ್ಲುವುದು ಕೂಡ ಗುಂಡಿ ಬೀಳಲು ಪ್ರಮುಖ ಕಾರಣ. ಅಂದರೆ ನಮ್ಮ ರಸ್ತೆಗಳ ವಿನ್ಯಾಸ ಸರಿ ಇಲ್ಲ. ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲ. ಟಾರ್ ಮೇಲೆ ನೀರು ನಿಂತರೆ ರಸ್ತೆ ಕಿತ್ತುಕೊಂಡು ಬರುತ್ತದೆ. ರಸ್ತೆ ಕಾಮಗಾರಿಯಲ್ಲಿ ತೊಡಗಿಕೊಂಡ ಸಾಮಾನ್ಯ ಕಾರ್ಮಿಕನಿಗೂ ಈ ವಿಷಯ ಗೊತ್ತು. ಆದರೆ ಎಂಜಿನಿಯರುಗಳಿಗೆ, ಕಂಟ್ರಾಕ್ಟರುಗಳಿಗೆ ಮತ್ತು ಅವರ ಮೇಲೆ ನಿಗಾ ಇಡಬೇಕಾದ ಜನಪ್ರತಿನಿಧಿಗಳಿಗೆ ಮಾತ್ರ ಹೀಗೆ ನೀರು ಹರಿದು ಹೋಗುವುದು ಬೇಕಿಲ್ಲ. ಗುಂಡಿ ಬಿದ್ದಷ್ಟು, ಪದೇ ಪದೇ ದುರಸ್ತಿ ಆದಷ್ಟೂ ಅವರ ಜೇಬು ತುಂಬುತ್ತದೆ. ಗುಂಡಿ ಮುಚ್ಚಲು ಪಾಲಿಕೆ ಈಗ ಮೈಕ್ರೊ ಮಿಲ್ಲಿಂಗ್ ಮೆಷಿನ್ ತರಿಸಿದೆ. ಈ ಯಂತ್ರವು ರಸ್ತೆಯ ಇಕ್ಕೆಲಗಳನ್ನು ಕತ್ತರಿಸಿ ಸ್ವಲ್ಪ ಇಳಿಜಾರು ಮಾಡಿ ನೀರು ಹರಿದು ಹೋಗುವಂತೆ ಮಾಡುತ್ತದೆ. ಇನ್ನಾದರೂ ಮೂಲದಲ್ಲಿಯೇ ಗುಣಮಟ್ಟದ ರಸ್ತೆಗಳನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು. ಆಗಮಾತ್ರ ಸಣ್ಣ ಮಳೆಗೂ ದೊಡ್ಡ ದೊಡ್ಡ ಗುಂಡಿಗಳು ಸೃಷ್ಟಿಯಾಗುವುದನ್ನು ತಪ್ಪಿಸಬಹುದು.

ಮಳೆಗಾಲದಲ್ಲಿ ಮಳೆ ಬರುವುದು ಸಹಜ. ಅದು ಪ್ರಕೃತಿ ನಿಯಮ. ಮಳೆ ಯಾವಾಗ, ಎಷ್ಟು ಸುರಿಯಬಹುದು ಎಂಬುದನ್ನು ಅಂದಾಜು ಮಾಡುವಷ್ಟು ಈಗ ವಿಜ್ಞಾನ ಮುಂದುವರಿದಿದೆ. ಆದರೂ ಮಳೆ ವಿಕೋಪ ಎದುರಿಸಲು ಕಷ್ಟವಾಗುತ್ತಿದೆ. ನಗರಗಳ ಬೆಳವಣಿಗೆ ವ್ಯವಸ್ಥಿತವಾಗಿ, ಯೋಜನಾಬದ್ಧವಾಗಿ ಇರಬೇಕು. ಆದರೆ ಭ್ರಷ್ಟಗೊಂಡಿರುವ ಆಡಳಿತಶಾಹಿ, ದುರಾಸೆ ನಗರಗಳ ಯೋಜಿತ ಬೆಳವಣಿಗೆಯನ್ನು ಬುಡಮೇಲು ಮಾಡುತ್ತಿವೆ. ಇವೆಲ್ಲದರ ಮೂಲ ಕಾರಣ ಕಳೆದ 2-3 ದಶಕಗಳಲ್ಲಿ ರಾಜ್ಯ ಸರಕಾರ ಮತ್ತು ಬಿಬಿಎಂಪಿ ಗಳಲ್ಲಿ ಹಿಡಿತ ಸಾಧಿಸಿ ಪ್ರಬಲವಾಗಿರುವ ರೀಯಲ್ ಎಸ್ಟೇಟ್ ಮಾಫಿಯಾ. ಈ ಮಾಫಿಯಾ ಬೂಜ್ರ್ವಾ ಪಕ್ಷಗಳ ರಾಜಕಾರಣಿಗಳು, ಅಧಿಕಾರಿಗಳು, ಕಂಟ್ರಾಕ್ಟರುಗಳು, ರೀಯಲ್ ಎಸ್ಟೇಟ್ ಉದ್ಯಮಿಗಳ ದುಷ್ಟಕೂಟ. ಇದ್ದ ಬದ್ದ ನಗರ ಯೋಜನೆಗಳನ್ನು ನೀತಿಗಳನ್ನು ತಮ್ಮ ಸೂಪರ್ ಲಾಭಕ್ಕಾಗಿ ಈ ಮಾಫಿಯಾ ತಿರುಚುತ್ತದೆ.

ಮಳೆ ನೀರಿನ ಇಂಗುವಿಕೆ, ಸರಾಗ ಹರಿಯುವಿಕೆಗೆ ಕಾಯಂ ವ್ಯವಸ್ಥೆ ಮಾಡಬೇಕು. ಕೆರೆ, ಕಾಲುವೆ ಒತ್ತುವರಿಯನ್ನು ಮುಲಾಜಿಲ್ಲದೆ ತೆರವು ಗೊಳಿಸಬೇಕು. ಕಾಲುವೆಗಳ ಹೂಳೆತ್ತುವ ಕೆಲಸವನ್ನು ಬೇಸಿಗೆಯಲ್ಲಿಯೇ ಮುಗಿಸಬೇಕು. ಬೆಂಗಳೂರಿನಂತಹ ನಗರದಲ್ಲಿ ಸುರಿಯುವ ಮಳೆ ಬದುಕನ್ನೇ ಏರುಪೇರು ಮಾಡದಂತೆ ತಡೆಯುವುದು ಸಾಧ್ಯವಿದೆ. ಇದಕ್ಕೆ ಎಲ್ಲಾ ಆಯಾಮಗಳನ್ನು ಗಮನಿಸುವ ದೂರಗಾಮಿ ನಗರ ಯೋಜನೆ ರಚಿತವಾಗಬೇಕು. ಇದರಲ್ಲಿ ನಾಗರಿಕರ ಪಾಲುಗೊಳ್ಳುವಿಕೆ ಇರಬೇಕು. ಇದಕ್ಕಾಗಿ ನಾಗರಿಕ ಸಂಘಟನೆಗಳ ಸಂಘಟಿತ ಚಳುವಳಿಯ ಶಕ್ತಿಯ ಒತ್ತಡ ಬೇಕು ಮತ್ತು ಅದಕ್ಕೆ ಈ ದುಷ್ಟಕೂಟದ ಗೋಣು ಮುರಿಯುವ ರಾಜಕೀಯ ಹೊಡೆತ ಕೊಡಲು ಸಾಧ್ಯವಾಗಬೇಕು.