ಸೌಂದರ್ಯ, ಪ್ರೀತಿಯ ಸಂಕೇತ ತಾಜ್ ಮಹಲ್

ಸಂಪುಟ: 
11
ಸಂಚಿಕೆ: 
44
date: 
Sunday, 22 October 2017
Image: 

ವಕ್ರ ಬುದ್ಧಿಯ ಹಿಂದೂತ್ವವಾದಿಗಳು

ಮೊಘಲ್ ಅವಧಿಯ ಇತಿಹಾಸ ಮತ್ತು ಅದಕ್ಕೆ ಸಂಬಂಧಿಸಿದ ಸ್ಮಾರಕಗಳಿಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಆರ್‍ಎಸ್‍ಎಸ್ ನೇರ ದಾಳಿ ಇತಿಹಾಸವನ್ನು ಪುನಃ ಬರೆಯುವ ಹಾಗೂ ‘ಭವ್ಯ ಹಿಂದೂ ಇತಿಹಾಸ’ಕ್ಕೆ ವಿರುದ್ಧವಾದ ಪ್ರತಿಯೊಂದು ಕಣವೂ ಅನಿಷ್ಟ, ಅದನ್ನು ಮರೆಗೊಳಿಸಬೇಕು ಎಂದು ಬಿಂಬಿಸುವ ಜಗತ್ತಿನ ಬಗ್ಗೆ ವಕ್ರ ಮತ್ತು ಮತಾಂಧ ದೃಷ್ಟಿಯ ಒಂದು ಎದ್ದು ಕಾಣುವ ಉದಾಹರಣೆಯಾಗಿದೆ. ಕಟ್ಟಾ ಹಿಂದೂತ್ವವಾದಿಗಳ ದುರದೃಷ್ಟವೆಂದರೆ ತಾಜ್ ಮಹಲ್ ವಿರುದ್ಧದ ಅವರ ಬಡಬಡಿಕೆಯನ್ನು ಕೇಳುವವರಿಲ್ಲ.

ಪ್ರಕಾಶ ಕಾರಟ್

ಉತ್ತರ ಪ್ರದೇಶದ ಈಗಿನ ಆಳುವ ಮಂದಿಯದ್ದು ಮಧ್ಯಯುಗೀನ ಮನೋಚಾಳಿ. ಅದಕ್ಕೆ ಜಗತ್ತಿನ ಅತ್ಯಂತ ಸುಂದರ ಕಟ್ಟಡಗಳಲ್ಲಿ ಒಂದೆನಿಸಿರುವ ತಾಜ್ ಮಹಲ್ ಕುರಿತ ಅವರ ಧೋರಣೆಗಿಂತ ಬೇರೆ ಸಾಕ್ಷಿ ಬೇಕಾಗಿಲ್ಲ. ತಾಜ್ ಮಹಲ್ ಕುರಿತ ಈ ಅಪಪ್ರಚಾರವನ್ನು ಸ್ವತಃ ಮುಖ್ಯಮಂತ್ರಿ ಆದಿತ್ಯನಾಥ ಅವರೇ ಆರಂಭಿಸಿದ್ದರು. ತಾಜ್ ಮಹಲ್ ಮತ್ತು ಅಂಥ ಇನ್ನೂ ಅನೇಕ ಮೊಘಲ್ ಸ್ಮಾರಕಗಳು ಭಾರತೀಯ ಸಂಸ್ಕøತಿಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ಅವರು ಹೇಳಿದ್ದರು. ಅದಾದ ನಂತರ ಉತ್ತರ ಪ್ರದೇಶದ ಪ್ರವಾಸೋದ್ಯಮ ಇಲಾಖೆ ತಾನು ಪ್ರಕಟಿಸಿದ ರಾಜ್ಯದ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯಿಂದ ತಾಜ್ ಮಹಲ್‍ಅನ್ನು ಕೈಬಿಟ್ಟಿತ್ತು. ಅದರ ಬದಲು ಆದಿತ್ಯನಾಥ ಮಹಂತ ನಾಗಿರುವ ಗೋರಖಪುರ ಸೇರಿದಂತೆ ಹಿಂದೂ ಧಾರ್ಮಿಕ ಸ್ಥಳಗಳನ್ನು ಮಾತ್ರ ಅದು ಪಟ್ಟಿಯಲ್ಲಿ ಸೇರಿಸಿತ್ತು. 

ಇಲಾಖೆಯ ಈ ನಿರ್ಧಾರವನ್ನು ಸಮರ್ಥಿಸುವ ಭರದಲ್ಲಿ ರಾಜ್ಯದ ಬಿಜೆಪಿ ಶಾಸಕ ಸಂಗೀತ್ ಸೋಮ್, 2013ರಲ್ಲಿ ಮುಜಫರ್‍ಪುರದಲ್ಲಿ ನಡೆದ ಹಿಂಸಾಚಾರಗಳಿಗೆ ಪ್ರಚೋದನೆ ನೀಡಿದ ಕುಖ್ಯಾತಿಯ ಈತ ಅಸಂಬಧ್ಧವಾಗಿ ತಾಜ್ ಮಹಲ್ ಕಟ್ಟಿದ ಷಾಹ ಜಹಾನ್ ತನ್ನ ತಂದೆಯನ್ನು ಜೈಲಿಗೆ ಹಾಕಿದ್ದ ಹಾಗೂ ಹಿಂದೂಗಳನ್ನು ಹಿಂಸಿಸಿದ್ದ, ಆದ್ದರಿಂದ ಇಂಥ ಇತಿಹಾಸವನ್ನು ನಮ್ಮದಲ್ಲ ಎನ್ನಬೇಕು ಎಂದರು.  ಸಂಗೀತ್ ಸೋಮ್, ಷಾಹ ಜಹಾನ್ ಮತ್ತು ಔರಂಗಜೇಬ್ ನಡುವೆ ಗೊಂದಲ ಮಾಡಿಕೊಂಡಿದ್ದಾರೆ. ಯಾಕೆಂದರೆ, ತಂದೆಯನ್ನು ಸೆರೆಮನೆಗೆ ತಳ್ಳಿದ್ದು ಔರಂಗಜೇಬ್.

ಈ ಅಸಹ್ಯಕರ ಸೋಮ್ ಹೇಳಿಕೆ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಆದಿತ್ಯನಾಥ ಡ್ಯಾಮೇಜ್ ಸೀಮಿತಗೊಳಿಸುವ ಪ್ರಯತ್ನಕ್ಕೆ ಇಳಿದಿದ್ದಾರೆ. ತಾಜ್ ಮಹಲ್ ಕಟ್ಟಿದ್ದು ಭಾರತದ ಪುತ್ರರು ಮತ್ತು ಶ್ರಮಿಕರ ‘ಬೆವರು ಮತ್ತು ರಕ್ತದಿಂದ’ ಎಂದು ಅವರು ಹೇಳಿದ್ದಾರೆ. ಅಲ್ಲದೆ ಈ ಸ್ಮಾರಕದ ಸಂರಕ್ಷಣೆಗೆ ಉತ್ತರ ಪ್ರದೇಶ ಸರಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದೂ ಅವರು ಹೇಳಿದ್ದಾರೆ. 

ಮೊಘಲ್ ಕಾಲದ ಐತಿಹಾಸಿಕ ಸ್ಮಾರಕಗಳಿಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಆರ್‍ಎಸ್‍ಎಸ್ ತಮ್ಮ ತಂತ್ರಗಳನ್ನು ಬದಲಾಯಿಸಿ ಕೊಂಡಿವೆ. ತಾಜ್ ಮಹಲ್ ಮೂಲತಃ ಒಂದು ಹಿಂದೂ ದೇವಾಲಯವಾಗಿತ್ತು ಎಂದು ಆರ್‍ಎಸ್‍ಎಸ್ ಮೊದಲಿಗೆ ಹೇಳಿತ್ತು. ಪಿ.ಎನ್. ಓಕ್ ಎಂಬುವವರು ಜೀವಮಾನ ಪರ್ಯಂತ ಹೀಗೆಂದು ಪ್ರಚಾರ ಮಾಡುತ್ತ ಬಂದಿದ್ದರು. ಈ ರೀತಿಯಾಗಿ ಮುಸ್ಲಿಂ ಸ್ಮಾರಕಗಳು ಮತ್ತು ಮಸೀದಿಗಳನ್ನು ಮೂಲತಃ ಹಿಂದೂ ಸ್ಥಳಗಳು ಎಂದು ಹೇಳುವುದು ಹಿಂದೂತ್ವ ಪ್ರಚಾರಕರ ಚಟವಾಗಿ ಬಿಟ್ಟಿದೆ. ರಾಮ ಜನ್ಮ ಸ್ಥಳ ಎಂದು ಹೇಳಿ ರಾಮ ಮಂದಿರವನ್ನು ಕಟ್ಟಲೆಂದು ಬಾಬರಿ ಮಸೀದಿಯನ್ನು ನಾಶ ಮಾಡಿದ್ದು ಇಂತಹ ಪ್ರಚಾರದಲಲಿ ಎದ್ದು ಕಂಡಿರುವಂತದ್ದು.

ಈಗ ಅಧಿಕಾರಾರೂಢವಾಗಿರುವ ಬಿಜೆಪಿ ಮತ್ತು ಆರ್‍ಎಸ್‍ಎಸ್ ಮೊಘಲ್ ಅವಧಿಯ ಇತಿಹಾಸ ಮತ್ತು ಅದಕ್ಕೆ ಸಂಬಂಧಿಸಿದ ಸ್ಮಾರಕಗಳಿಗೆ ಸಂಬಂಧಿಸಿದಂತೆ ನೇರ ದಾಳಿಗೆ ಇಳಿದಿವೆ. ಅವುಗಳು ಭಾರತೀಯ ಸಂಸ್ಕøತಿಗೆ ಪರಕೀಯವಾಗಿವೆ ಹಾಗೂ ಹಿಂದೂ ನಾಗರಿಕತೆಗೆ ಒಂದು ಕಪ್ಪು ಚುಕ್ಕೆ ಎಂದು ಬಣ್ಣಿಸಲಾಗುತ್ತಿದೆ.

ಇದು ಇತಿಹಾಸವನ್ನು ಪುನಃ ಬರೆಯುವ ಹಾಗೂ ‘ಭವ್ಯ ಹಿಂದೂ ಇತಿಹಾಸ’ಕ್ಕೆ ವಿರುದ್ಧವಾದ ಪ್ರತಿಯೊಂದು ಕಣವೂ ಅನಿಷ್ಟ, ಅದನ್ನು  ಮರೆಗೊಳಿಸಬೇಕು ಎಂದು ಬಿಂಬಿಸುವ ದೊಡ್ಡ ಯೋಜನೆಯ ಭಾಗವಾಗಿದೆ, ತಾಜ್ ಮಹಲ್ ಅನ್ನು ಹೀಗಳೆಯುವ ಈ ಪ್ರಕ್ರಿಯೆ ಜಗತ್ತಿನ ಬಗ್ಗೆ ವಕ್ರ ಮತ್ತು ಮತಾಂಧ ದೃಷ್ಟಿಯ ಒಂದು ಬಹುದೊಡ್ಡ ಎದ್ದು ಕಾಣುವ ಉದಾಹರಣೆಯಾಗಿದೆ. ಈ ರೀತಿಯ ಕುರುಡು ದೃಷ್ಟಿಕೋನದಿಂದಾಗಿ ಉತ್ತರ ಪ್ರದೇಶ ರಾಜ್ಯದ ಪ್ರತಿಷ್ಠೆಗೆ ಧಕ್ಕೆ ಬರುತ್ತದೆ ಹಾಗೂ ಜನರ ದೃಷ್ಟಿಯಲ್ಲಿ ಬಿಜೆಪಿ ಅಪಹಾಸ್ಯಕ್ಕೀಡಾಗುತ್ತದಷ್ಟೇ.

ಕಟ್ಟಾ ಹಿಂದೂತ್ವವಾದಿಗಳ ದುರದೃಷ್ಟವೆಂದರೆ ತಾಜ್ ಮಹಲ್ ವಿರುದ್ಧದ ಅವರ ಬಡಬಡಿಕೆಯನ್ನು ಒಪ್ಪಲು ಯಾರೂ ಸಿದ್ಧರಿಲ್ಲ. ತಾಜ್ ಮಹಲ್ ಜಗತ್ತಿನೆಲ್ಲೆಡೆಯ ಹಾಗೂ ಭಾರತದ ಕೋಟ್ಯಂತರ ಜನರನ್ನು ಆಕರ್ಷಿಸುತ್ತಲೇ ಇರುತ್ತದೆ. ಇದೊಂದು ಅನುಪಮ ಸೌಂದರ್ಯ ಹಾಗೂ ಪ್ರೀತಿಯ ಸ್ಮಾರಕ ಎಂಬ ತಾಜ್ ಮಹಲ್‍ನ ನಿಜವಾದ ಮೌಲ್ಯವನ್ನು ಈ ಜನರು ಅರಿತಿದ್ದಾರೆ.          

ಅನು: ವಿಶ್ವ