150 ವರ್ಷ ಹಳೆಯ “ಕ್ಯಾಪಿಟಲ್” ಈಗ ಯಾಕೆ ಓದಬೇಕು?

ಸಂಪುಟ: 
11
ಸಂಚಿಕೆ: 
44
Sunday, 22 October 2017

ವಸಂತರಾಜ ಎನ್.ಕೆ.

19ನೇ ಶತಮಾನದ ಇಂಗ್ಲೆಂಡಿನ ಸಮಾಜ, ಆರ್ಥಿಕತೆಯ ಬಗ್ಗೆ ಬರೆದ 2000 ಪುಟಗಳ 3 ಸಂಪುಟಗಳ “ಕ್ಯಾಪಿಟಲ್” ಈಗ ಯಾಕೆ ಓದಬೇಕು? ಸಾಮಾಜಿಕ, ಆರ್ಥಿಕ, ತಂತ್ರಜ್ಞಾನ ಮುಂತಾದ ಹಲವು ಕ್ಷೇತ್ರಗಳಲ್ಲಿ ಗುರುತು ಸಿಗದಂತೆ ಬದಲಾದ ಸಂಕೀರ್ಣವಾದ ಇಂದಿನ ಪರಿಸ್ಥಿತಿ ಅರ್ಥೈಸಲು ಹೇಗೆ ಅದು ಸಹಾಯಕವಾದೀತು? ಈ ಪ್ರಶ್ನೆ ಸೆಪ್ಟೆಂಬರ್ 14, 1867ರಂದು ಪ್ರಕಟವಾದ “ಕ್ಯಾಪಿಟಲ್” ಸಂಪುಟ 1ರ 150ನೇ ವಾರ್ಷಿಕವನ್ನು ಜಗತ್ತಿನಾದ್ಯಂತ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕೇಳಲಾಗುತ್ತಿದೆ. ಈ ಸಂದರ್ಭದಲ್ಲಿ “ಕ್ಯಾಪಿಟಲ್” ಸಂಪುಟ 1ರ ಕನ್ನಡ ಅನುವಾದ ಮಾಡಿಸಿ ಪ್ರಕಟಿಸಲು  ಮುಂದಾಗಿರುವ ನವಕರ್ನಾಟಕ ಮತ್ತು ಕ್ರಿಯಾ ಸಂಸ್ಥೆಗಳಿಗೂ ಈ ಪ್ರಶ್ನೆ ಕೇಳಲಾಗಿತ್ತು.  ಕಾರ್ಲ್ ಮಾಕ್ರ್ಸ್ ಅವರ ಬಂಡವಾಳಶಾಹಿ ಪದ್ದತಿಯ ಈ ಸಮಗ್ರ ಅಧ್ಯಯನ ಎತ್ತಿ ತೋರಿಸಿದ ಅದರ ಹಲವು ಪ್ರಮುಖ ಲಕ್ಷಣಗಳು, ಇಂದು ಬಂಡವಾಳಶಾಹಿ ಎಷ್ಟೇ ಬದಲಾಗಿದ್ದರೂ ಅದನ್ನು ಅರ್ಥೈಸಲು ಸಹಾಯಕವಾಗಿವೆ ಎಂಬುದು ಆಶ್ಚರ್ಯಕರ, ಆದರೂ ನಿಜ. “ಕ್ಯಾಪಿಟಲ್”ನಲ್ಲಿ ಹಲವು ಹಂತಗಳಲ್ಲಿ ಕಾಣಬರುವ ಮಾಕ್ರ್ಸ್ ಒಳನೋಟಗಳು ಇಂದಿಗೂ ಪ್ರಸ್ತುತ. ಇಂದಿನ ಬಂಡವಾಳಶಾಹಿಯ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲಿಕ್ಕೂ ಸಹಾಯಕ. ಈ ಲೇಖನ ಅರ್ಥಶಾಸ್ತ್ರಜ್ಞ  ಮತ್ತು ಜೆ.ಎನ್.ಯು. ಪ್ರಾಧ್ಯಾಪಕರಾದ ಪ್ರೊ. ಜಯತಿ ಘೋಷ್ ಮತ್ತು ಸಿ.ಪಿ. ಚಂದ್ರಶೇಖರ್ ಅವರ ಇತ್ತೀಚಿನ ಲೇಖನ/ಭಾಷಣಗಳ ಮೇಲೆ ಆಧಾರಿತವಾಗಿದೆ. 

ಕಳೆದ 150 ವರ್ಷಗಳಲ್ಲಿ ಬಂಡವಾಳಶಾಹಿ ವ್ಯವಸ್ಥೆ ಹಲವು ಮಜಲುಗಳನ್ನು ಹಾದು ಬಂದಿದೆ.  ಅವುಗಳಲ್ಲಿ ಎರಡು ಪ್ರಮುಖ ಮಜಲುಗಳಲ್ಲಿ ಮೊದಲನೇಯದು, ಕಡಿಮೆ ನಿರುದ್ಯೋಗದಲ್ಲಿ ವೇಗವಾದ ಬೆಳವಣಿಗೆ ಸಾಧಿಸಿದ 1930ರ ದಶಕದ ಮಹಾಕುಸಿತದ ನಂತರದಿಂದ 1960ರ ದಶಕದ ವರೆಗೆ ಮುಂದುವರೆದ, ಕೇನ್ಸ್ ಪ್ರಣೀತ ಪ್ರಭುತ್ವ ಮಧ್ಯಪ್ರವೇಶದ ನಿಲುಮೆ ಆಧಾರಿತ ಬಂಡವಾಳಶಾಹಿಯ “ಸುವರ್ಣ ಯುಗ”. ಎರಡನೇಯದು 1970ರ ದಶಕದಲ್ಲಿ ಆರಂಭವಾಗಿ ಈಗಲೂ ಮುಂದುವರೆಯುತ್ತಿರುವ “ಹಣಕಾಸು ಬಂಡವಾಳದ ಯುಗ”. ಈ ಎರಡೂ ಮಜಲುಗಳಲ್ಲಿ ಬಂಡವಾಳಶಾಹಿ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುವ “ಕ್ಯಾಪಿಟಲ್”ನಲ್ಲಿ ಮಾಕ್ರ್ಸ್ ಗುರುತಿಸುವ ಅದರ ಪ್ರಮುಖ ಲಕ್ಷಣಗಳು ಯಾವುವು? ಬಂಡವಾಳದ ವಿಶಿಷ್ಟತೆ, ಬಂಡವಾಳದ ಆದಿಮ ಸಂಚಯ, ಸರಕು ಮೂಢಾರಾಧನೆ, ಬಂಡವಾಳದ ಚಲನಶೀಲತೆ, ಸಾಲದ ಪಾತ್ರ, ಬಂಡವಾಳದ ಕೇಂದ್ರೀಕರಣ ಮತ್ತು ಅಸಮಾನ ಬೆಳವಣಿಗೆ, ಸಂಘರ್ಷ ವೈರುಧ್ಯ ಮತ್ತು ಬಿಕ್ಕಟ್ಟುಗಳು - ಬಂಡವಾಳಶಾಹಿ ವ್ಯವಸ್ಥೆಯ ಇಂತಹ ಪ್ರಮುಖ ಲಕ್ಷಣಗಳು. ಅವುಗಳ ಬಗ್ಗೆ ಮಾಕ್ರ್ಸ್ ಏನು ಹೇಳಿದ್ದಾರೆ ಮತ್ತು ಇವತ್ತು ಅವು ಯಾಕೆ ಪ್ರಸ್ತುತ ಎಂಬುದನ್ನು ಸ್ವಲ್ಪ ವಿವರವಾಗಿ ನೋಡಿದರೆ “ಕ್ಯಾಪಿಟಲ್”ನ್ನು ಇಂದಿಗೂ ಯಾಕೆ ಓದಬೇಕು ಎನ್ನುವುದು ಸ್ಪಷ್ಟವಾದೀತು.

ಬಂಡವಾಳದ ವಿಶಿಷ್ಟತೆಗಳೇನು?

ಬಂಡವಾಳಶಾಹಿ ವ್ಯವಸ್ಥೆಯ ಸಾರವಾದ ಬಂಡವಾಳ ಎಂದರೇನು? ಅದರ ವಿಶಿಷ್ಟತೆಗಳೇನು? ಬಂಡವಾಳ ಎಂದರೆ ಸಂಪನ್ಮೂಲದ ಒಂದು ರೂಪ ಮಾತ್ರವಲ್ಲ. ಶ್ರಮ, ಭೂಮಿಗಳಂತೆ ಉತ್ಪಾದನೆಯ ಒಂದು ಅಂಶ ಮಾತ್ರವಲ್ಲ. ಅದಕ್ಕೆ ಬದಲಾಗಿ ಬಂಡವಾಳ ಒಂದು ನಿರ್ದಿಷ್ಟ ಚಾರಿತ್ರಿಕ ಪರಿಸ್ಥಿತಿಯಲ್ಲಿ ನಿರ್ದಿಷ್ಟ ಉತ್ಪಾದನಾ ಸಂಬಂಧಗಳ ಅಭಿವ್ಯಕ್ತಿ. ಉದಾಹರಣೆಗೆ ಕಾರ್ಮಿಕ ಒಂದು ಮಗ್ಗವನ್ನು ಬಳಸಿ ಮಾರುಕಟ್ಟೆಯಲ್ಲಿ ಲಾಭಕ್ಕಾಗಿ ಮಾರುವ ಬಟ್ಟೆ ತಯಾರಿಸಿದರೆ, ಆ ಮಗ್ಗ ಬಂಡವಾಳವಾಗುತ್ತದೆ. ಅದೇ ಮಗ್ಗ ರೈತ ಕುಟುಂಬವೊಂದರಲ್ಲಿ ತಮ್ಮ ಬಳಕೆಗೆ ಬಟ್ಟೆ ತಯಾರಿಸಲು ಬಳಸಿದರೆ ಬಂಡವಾಳ ಆಗುವುದಿಲ್ಲ. ಉತ್ಪಾದನಾ ಸಾಧನವೊಂದು ಉತ್ಪಾದನಾ ಪ್ರಕ್ರಿಯೆಯಲ್ಲಿ ಅಡಕವಾಗಿರುವ ಸಾಮಾಜಿಕ ಸಂಬಂಧದಿಂದಾಗಿ ಬಂಡವಾಳವಾಗುತ್ತದೆ.  

ಇದು ಮಾಲಿಕ ಮತ್ತು ಕಾರ್ಮಿಕರ ನಡುವೆ ಇರುವ ಸಾಮಾಜಿಕ ಸಂಬಂಧ. ಇದರಿಂದ ಮಾತ್ರವೇ ಬಂಡವಾಳಶಾಹಿ ಉತ್ಪಾದನೆ ಸಾಧ್ಯವಾಗುತ್ತದೆ. ಇದಕ್ಕೆ ಕಾರ್ಮಿಕ ಎರಡು ಅರ್ಥದಲ್ಲಿ “ಸ್ವತಂತ್ರ”ನಾಗಿರಬೇಕಾಗುತ್ತದೆ.  ಮೊದಲನೇಯದಾಗಿ ಆತ ತನ್ನ ಶ್ರಮಶಕ್ತಿಯನ್ನು ಮಾರಲು “ಸ್ವತಂತ್ರ”ನಾಗಿರಬೇಕು. ಅಂದರೆ ಯಾವುದೇ ಮಾಲಕನ ಜೀತದಾಳು ಆಗಿರಬಾರದು ಮತ್ತು ಆತ ಕೂಲಿ ಕೆಲಸ ಮಾಡುವುದನ್ನು ತಡೆಯಬಲ್ಲ ಇತರ ಸಾಮಾಜಿಕ-ಆರ್ಥಿಕ ಅಂಶಗಳಿಂದಲೂ “ಸ್ವತಂತ್ರ”ನಾಗಿರಬೇಕು. ಎರಡನೇಯದಾಗಿ ಆತ ಬದುಕುಳಿಯಲು ಕೂಲಿಕೆಲಸ ಮಾಡಲು “ಸ್ವತಂತ್ರ”ನಾಗಿರಬೇಕು. ಅಂದರೆ ಆತ ಯಾವುದೇ ಉತ್ಪಾದನಾ ಸಾಧನಗಳ ಒಡೆತನ ಇಲ್ಲದೆ ಕೂಲಿಕೆಲಸ ಮಾಡದೆ ಬದುಕುಳಿಯಲಾರ ಎಂಬ ಪರಿಸ್ಥಿತಿ ಇರಬೇಕು. ಆಗ ಶ್ರಮವೂ ಮಾರುಕಟ್ಟೆಯಲ್ಲಿ ಸಾಮಾಜಿಕವಾಗಿ ನಿರ್ಧಾರಿತವಾಗುವ ಬದುಕುಳಿಯುವ ಕನಿಷ್ಟ ಮಾನದಂಡಗಳ ಮೇಲೆ ಆಧಾರಿತವಾದ ಮೌಲ್ಯಕ್ಕೆ ಮಾರಾಟವಾಗುವ ಒಂದು ಸರಕು ಆಗುತ್ತದೆ. ಅದನ್ನು ಮಾರುವವರು ಸ್ವತಂತ್ರರಂತೆ ಕಾಣಬಹುದು. ಕೆಲವು ಅಂಶಗಳಲ್ಲಿ ಸ್ವತಂತ್ರರೂ ಆಗಿರಬಹುದು.  ಆದರೆ ಕೆಲಸ ಸಿಕ್ಕಿದರೆ ಮಾತ್ರ ಬದುಕುಳಿಯಬಲ್ಲರು. ಅವರ ಶ್ರಮಕ್ಕೆ ಬಂಡವಾಳದ ಸೇವೆಯ ಅವಕಾಶವಿದ್ದರೆ ಮಾತ್ರ ಅವರಿಗೆ ಕೆಲಸ ಸಿಗುತ್ತದೆ, ಎಂಬುದು ಈ ಸರಕಿನ ವಿಚಿತ್ರ ಸ್ವಭಾವ.

ಮಾಕ್ರ್ಸ್ ಲೇವಾದೇವಿಗಾರನ ಮತ್ತು ವ್ಯಾಪಾರಿ ಬಂಡವಾಳವನ್ನು ವಿವಿಧ ಸಮಾಜಗಳಲ್ಲಿ ಹಣ ಇರುವಷ್ಟು ಕಾಲದಿಂದಲೂ ಇದ್ದ “ಓಬೀರಾಯನ ಕಾಲದ” ಬಂಡವಾಳದ ರೂಪವಾಗಿ ಕಾಣುತ್ತಾರೆ. ಕೈಗಾರಿಕಾ ಬಂಡವಾಳದ ಜತೆ ಕರಗಿ ಬೆಸೆದುಕೊಳ್ಳುವವರೆಗೆ, ಸಮಾಜೋ-ಆರ್ಥಿಕ ಸಂಬಂಧಗಳನ್ನು ಬದಲಾಯಿಸುವ ಶಕ್ತಿ ಅವುಗಳಿಗಿರಲಿಲ್ಲ. ಈಗ “ಹಣಕಾಸು ಬಂಡವಾಳ” ಎಂದು ಕರೆಯುವ ಬಂಡವಾಳವನ್ನು ಮಾಕ್ರ್ಸ್ ಪ್ರತ್ಯೇಕವಾಗಿ ಗುರುತಿಸಲಿಲ್ಲ. ಬಂಡವಾಳಶಾಹಿಯ ಏಕಸ್ವಾಮ್ಯ ಮಜಲು ಮತ್ತು ಹಣಕಾಸು ಸಂಸ್ಥೆಗಳ ಬಲಗಳಿಂದಾಗಿ, ಬಂಡವಾಳಶಾಹಿಯ ಸ್ವರೂಪವನ್ನೇ ಬದಲಾಯಿಸಿದ “ಹಣಕಾಸು ಬಂಡವಾಳ”ದ ಉದಯವನ್ನು ಆ ಮೇಲಿನ ಮಾಕ್ರ್ಸ್‍ವಾದಿಗಳು ಗುರುತಿಸುತ್ತಾರೆ. 

ಮಾಕ್ರ್ಸ್ ಗುರುತಿಸಿದ ಬಂಡವಾಳಶಾಹಿ ವ್ಯವಸ್ಥೆಯ ಸಾರವಾದ ಬಂಡವಾಳದ ವಿಶಿಷ್ಟತೆಗಳು ಈಗಲೂ ಅದರ ವಿಶ್ಲೇಷಣೆಗೆ ಬೇಕಾದ ಚೌಕಟ್ಟು ಒದಗಿಸುತ್ತವೆ.

ಬಂಡವಾಳದ ಆದಿಮ ಸಂಚಯ

ಉತ್ಪಾದನಾ ಸಾಧನಗಳು ಕೆಲವೇ ಕೆಲವರ ಕೈಯಲ್ಲಿ ಕೇಂದ್ರೀಕೃತವಾಗುವುದರಿಂದಾಗಿಯೇ ಬಂಡವಾಳಕ್ಕೆ ಉತ್ಪಾದನೆಯಲ್ಲಿ ಅದರ ಪಾತ್ರ ನಿರ್ವಹಿಸಲು ಸಾಧ್ಯವಾಗುವುದು. ಆದರೆ ಈ ಕೇಂದ್ರೀಕರಣ ಆಗುವುದಾದರೂ ಹೇಗೆ? ಇದನ್ನು ಹಿಂದೆ ಉತ್ಪಾದನಾ ಸಾಧನಗಳನ್ನು ಹೊಂದಿದ್ದ ರೈತರು ಮತ್ತು ಕಸುಬುದಾರರಿಂದ ಅವನ್ನು ಕಸಿದುಕೊಂಡಿರಬೇಕು. 

ಇಂತಹ ಕಿತ್ತುಕೊಳ್ಳುವಿಕೆ (ಅಥವಾ ಬಂಡವಾಳದ ಆದಿಮ ಸಂಚಯ) ಅತ್ಯಂತ ಹಿಂಸಾತ್ಮಕ ಪ್ರಕ್ರಿಯೆಯಾಗಿತ್ತು. ಮೇಲೆ ಹೇಳಿದ ಕಾರ್ಮಿಕರ ಎರಡು ಬಗೆಯ “ಸ್ವಾತಂತ್ರ್ಯ”ವನ್ನು ಬಲಾತ್ಕಾರವಾಗಿ ಸಾಧಿಸಲಾಗಿತ್ತು ಎಂದು ಮಾಕ್ರ್ಸ್ ಹೇಳುತ್ತಾರೆ. ಉತ್ಪಾದಕರನ್ನು ಕೂಲಿ-ಕೆಲಸಗಾರರನ್ನಾಗಿ ಪರಿವರ್ತಿಸುವ ಚಾರಿತ್ರಿಕ ಪಯಣದಲ್ಲಿ ಅವರನ್ನು ಜೀತದಿಂದ ಮತ್ತು ಅವರ ಗಿಲ್ಡ್ ಗಳ ಸಂಕೋಲೆಗಳಿಂದ ಬಿಡುಗಡೆ ಮಾಡುವ ಭಾಗವನ್ನು ಮಾತ್ರ ಬೂಜ್ರ್ವಾ ಇತಿಹಾಸಕಾರರು ನೋಡುತ್ತಾರೆ. ಆದರೆ ಈ ಬಿಡುಗಡೆಯಾದವರು ತಮ್ಮನ್ನು ತಾವೇ ಮಾರಿಕೊಳ್ಳುವ ಸ್ಥಿತಿಗೆ ಬಂದಿದ್ದು, ಅವರ ಉತ್ಪಾದನಾ ಸಾಧನ(ಭೂಮಿ ಇತ್ಯಾದಿ)ಗಳನ್ನು ಮತ್ತು ಪಾಳೆಯಗಾರಿ ವ್ಯವಸ್ಥೆಯಲ್ಲಿ ಬದುಕುಳಿಯಲು ಇದ್ದ ಸವಲತ್ತುಗಳನ್ನು ಕಿತ್ತುಕೊಂಡಾಗ ಮಾತ್ರ ಎಂಬ ಇನ್ನೊಂದು ಭಾಗ ಅವರಿಗೆ ಕಾಣುವುದಿಲ್ಲ. ಉತ್ಪಾದಕರ ಉತ್ಪಾದನಾ ಸಾಧನಗಳನ್ನು ಬಲಾತ್ಕಾರವಾಗಿ ಕಿತ್ತುಕೊಂಡ ಕತೆಯನ್ನು ಬೆಂಕಿ ಮತ್ತು ರಕ್ತದಕ್ಷರಗಳಲ್ಲಿ ಮನುಕುಲದ ಚರಿತೆಯಲ್ಲಿ ಬರೆಯಲಾಗಿದೆ. ಶ್ರಮಿಕ ತನ್ನ ಶ್ರಮದಿಂದ ಮಾಡಿಕೊಂಡ ಖಾಸಗಿ ಆಸ್ತಿಯ ನಾಶ ಅಥವಾ ಶ್ರಮಿಕನ ಆಸ್ತಿ ಕಿತ್ತುಕೊಳ್ಳುವಿಕೆ, ಬಂಡವಾಳಶಾಹಿ ಉತ್ಪಾದನೆ ಮತ್ತು ಬಂಡವಾಳಶಾಹಿ ಆಸ್ತಿಗೆ ಅಗತ್ಯ ಪೂರ್ವಶರತ್ತುಗಳು ಎಂದು ಮಾಕ್ಸ್ ್ “ಕ್ಯಾಪಿಟಲ್” ಗ್ರಂಥದಲ್ಲಿ ಮನಮಿಡಿಯುವಂತೆ ಹೇಳುತ್ತಾರೆ.

ಬಂಡವಾಳಶಾಹಿ ವ್ಯವಸ್ಥೆಯ ಅಸಮಾನ ಬೆಳವಣಿಗೆಯಿಂದಾಗಿ, ಬಂಡವಾಳದ ಆದಿಮ ಸಂಚಯ ಬರಿಯ ಇತಿಹಾಸದ ಸಂಗತಿ ಮಾತ್ರವಲ್ಲ. ಇಂದಿನ ವಾಸ್ತವವೂ ಆಗಿದೆ. ಇದು ಮೂರನೇ  ಜಗತ್ತಿನಲ್ಲಿ ಹೆಚ್ಚು ನಿಜ. ಭಾರತದಲ್ಲಿ “ಜಾಗತೀಕರಣ”ದ ಕಾಲು ಶತಮಾನದಲ್ಲಿ ನಡೆಯುತ್ತಿರುವುದು ಇದೇ. ಒಂದು ಕಡೆ ರೈತರ ಮತ್ತು ಸಣ್ಣ ಉತ್ಪಾದಕರ ಉತ್ಪಾದನಾ ಸಾಧನಗಳನ್ನು (ಭೂಮಿ ಇತ್ಯಾದಿ) ಕಿತ್ತುಕೊಂಡು ಅವನ್ನು ಕಾರ್ಪೊರೆಟ್ ಕಂಪನಿಗಳಿಗೆ ಕೊಡುತ್ತಿರುವುದು ಬಂಡವಾಳದ ಆದಿಮ ಸಂಚಯವೇ. ಅದೇ ರೀತಿಯಾಗಿ ಸಾರ್ವಜನಿಕ ಒಡೆತನದಲ್ಲಿದ್ದ ಮತ್ತು ಸಾಮಾಜಿಕ ಸಂಪನ್ಮೂಲಗಳಿಂದ ಕಟ್ಟಿದ ಸಾರ್ವಜನಿಕ ಕ್ಷೇತ್ರದ ಉದ್ಯಮಗಳನ್ನು, ಸಾಮಾಜಿಕ ಸಂಪನ್ಮೂಲಗಳಾದ ನದಿಗಳು ಗಣಿಗಳು ಕಾಡುಗಳನ್ನು ಖಾಸಗಿ ಬಂಡವಾಳಗಾರರಿಗೆ ಮೂರು ಕಾಸಿಗೆ ಮಾರುತ್ತಿರುವುದನ್ನು ಅರ್ಥ ಮಾಡಿಕೊಳ್ಳಲೂ ಮಾಕ್ರ್ಸ್ “ಕ್ಯಾಪಿಟಲ್” ಗ್ರಂಥದಲ್ಲಿ ಮಂಡಿಸಿದ “ಬಂಡವಾಳದ ಆದಿಮ ಸಂಚಯ”ದ ಪರಿಕಲ್ಪನೆ ಸಹಾಯಕವಾಗುತ್ತದೆ.

ಸರಕು ಮೂಢಾರಾಧನೆ

ಪಾಳೆಯಗಾರಿ ವ್ಯವಸ್ಥೆಯಂತೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಮಿಗುತಾಯ ಮೌಲ್ಯವನ್ನು ಕಿತ್ತುಕೊಳ್ಳುವುದಿಲ್ಲ. ಬಂಡವಾಳಶಾಹಿ ವ್ಯವಸ್ಥೆ ಆರ್ಥಿಕ ಒಪ್ಪಂದಗಳ, ಮಾರುಕಟ್ಟೆಯಲ್ಲಿ ಸರಕು ಸೇವೆಗಳ ಸ್ವ-ಇಚ್ಛೆಯಿಂದ ಮಾಡುವ ವಿನಿಮಯಗಳ ಆಧಾರದ ಮೇಲೆ ನಡೆಯುತ್ತದೆ. ಇದು ವ್ಯಕ್ತಿಗಳ ವಿವೇಕಯುತ ಆಯ್ಕೆಯಂತೆ ಕಾಣುತ್ತದೆ. ಆದರೆ ನಿಜವಾಗಿಯೂ ಇದು ಸಾಮಾಜಿಕ ಭ್ರಮೆಯ ಮೇಲೆ ಆಧಾರಿತವಾಗಿರುತ್ತದೆ. ಮಾಕ್ರ್ಸ್ ಇದನ್ನು “ಸರಕು ಮೂಢಾರಾಧನೆ” ಎಂದು  ಕರೆಯುತ್ತಾರೆ.  ವ್ಯಕ್ತಿಗಳ ನಡುವಿನ ಸಂಬಂಧದಲ್ಲಿ ವಸ್ತುಗಳ, ಸರಕುಗಳ ಮತ್ತು ಹಣಗಳ ನಡುವಿನ ಸಂಬಂಧ ಮಧ್ಯವರ್ತಿಯ ಪಾತ್ರ ನಿರ್ವಹಿಸುತ್ತದೆ. 

ಸರಕು ಎಂದರೆ ಬರಿಯ ವಸ್ತುಗಳಲ್ಲ. ಸರಕುಗಳಿಗೆ ಎರಡು ವಿಶಿಷ್ಟ ಮತ್ತು ಪ್ರತ್ಯೇಕವಾದ ಗುಣಗಳಿವೆ. ಒಂದು ಮಾನವನ ಅಗತ್ಯಗಳನ್ನು ಪೂರೈಸುವ ಅದರ ಬಳಕೆಯ ಮೌಲ್ಯ. ಅದನ್ನು ಇನ್ನೊಂದು ಸರಕು ಅಥವಾ ಹಣಕ್ಕೆ ಬದಲಾಗಿ ವಿನಿಮಯ ಮಾಡಿಕೊಳ್ಳುವ ವಿನಿಮಯದ ಮೌಲ್ಯ ಇನ್ನೊಂದು. ಎರಡು ಗುಣಗಳಿಗೂ ಸಂಬಂಧವಿಲ್ಲ. ವಿನಿಮಯದ ಪ್ರಕ್ರಿಯೆ ಮತ್ತು ಮೌಲ್ಯ, ಸರಕಿನ ಆಂತರಿಕ ಗುಣಲಕ್ಷಣದ ಮೇಲೆ ಅವಲಂಬಿಸಿರುವುದಿಲ್ಲ. ಅದರ ಹೊರಗಿನ ಅಂಶಗಳ ಮೇಲೆ ಅವಲಂಬಿಸಿರುತ್ತದೆ. ಕೆಲವೊಮ್ಮೆ ವಿರುದ್ಧವಾದ ಸರಕಿನ ಈ ಗುಣಲಕ್ಷಣಗಳಿಂದಾಗಿ, ಅವುಗಳ ನಡುವೆ ಗೊಂದಲ ಹುಟ್ಟಿಸುವ ಅಥವಾ ಅವನ್ನು ಒಂದೇಯಾಗಿ ನೋಡುವ ಸಾಧ್ಯತೆ ಉಂಟಾಗುತ್ತದೆ. ಮೌಲ್ಯ ಶ್ರಮದ ಫಲ ಎಂದು ಅರಿಯದೆ ಮೌಲ್ಯ ಸರಕಿನ ಆಂತರಿಕ ಗುಣ ಲಕ್ಷಣವೆಂದು ಪರಿಗಣಿಸಿದಾಗ, ಸರಕು ಮೂಢಾರಾಧನೆ ಹುಟ್ಟಿಕೊಳ್ಳುತ್ತದೆ. ಚಾರಿತ್ರಿಕವಾಗಿ ನಿರ್ದಿಷ್ಟ ಸಾಮಾಜಿಕ ಸಂಬಂಧಗಳನ್ನು ಮರೆತು, ಸರಕುಗಳ ವಿನಿಮಯ ಮತ್ತು ಮಾರುಕಟ್ಟೆ-ಆಧಾರಿತ ಸಂಬಂಧಗಳಂತೆ ಎಲ್ಲವನ್ನೂ ನೋಡುವುದೇ “ಸಹಜ” ಎಂಬ ಧೋರಣೆಯೇ ಸರಕು ಮೂಢಾರಾಧನೆ.   

ಇನ್ನೂ ವಿಶಾಲವಾಗಿ ನೋಡುವುದಾದರೆ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಖಾಸಗಿ ಆಸ್ತಿ ಕೇಂದ್ರಬಿಂದು ಆಗಿರುವುದರಿಂದ ಹೊಮ್ಮುವ ಭ್ರಮೆಯೇ ಸರಕು ಮೂಢಾರಾಧನೆ. ಕೆಲಸ, ಪರಸ್ಪರ ನಡವಳಿಕೆ, ಸಾಮಾಜಿಕ ವಾಸ್ತವವನ್ನು ಮತ್ತು ಬದಲಾವಣೆಯನ್ನು ಗ್ರಹಿಸುವ ರೀತಿ ಎಲ್ಲವನ್ನೂ ಈ ಭ್ರಮೆ ನಿರ್ಧರಿಸುತ್ತದೆ. ಹೆಚ್ಚೆಚ್ಚು ಸರಕುಗಳನ್ನು ಹೊಂದುವ ಉತ್ಕಟ ಆಸೆ, ಭೌತಿಕ ಬೇಕುಗಳ ಹಿಂದೆ ಓಡುವ ಚಟ, ವಿವಿಧ ಸರಕುಗಳನ್ನು ಹೊಂದುತ್ತಾ ಹೋಗುವುದೇ ಮಾನವ ಜೀವನದ ಉನ್ನತಿಯ ಹಾದಿ ಎಂಬ ಧೋರಣೆ - ಇವೆಲ್ಲಾ ಸರಕು ಮೂಢಾರಾಧನೆಯ ವಿವಿಧ ರೂಪಗಳು ಎನ್ನಬಹುದು. ಸರಕು ಭ್ರಮೆಯನ್ನು ವಾಸ್ತವ ಭೌತಿಕ ಮತ್ತು ಮಾನವ ಪರಿಸ್ಥಿತಿಯ ನಿಜವೆಂದು ತಿಳಿಯುವ ಸಮಾಜೋ-ಆರ್ಥಿಕ ವಿಶ್ಲೇಷಣೆಗಳೂ ಸರಕು ಮೂಢಾರಾಧನೆಯ ರೂಪಗಳೇ.

ಸರಕು ಮೂಢಾರಾಧನೆಯ ಪರಿಕಲ್ಪನೆ ಇಂದಿಗೂ ಭಾರತ ಸೇರಿದಂತೆ ಬಂಡವಾಳಶಾಹಿ ಅಧಿಪತ್ಯದಲ್ಲಿರುವ ಸಮಾಜಗಳಲ್ಲಿ ಕೊಳ್ಳುಬಾಕ ಸಂಸ್ಕøತಿ, ಮಾನವ ಸಂಬಂಧಗಳ ವಿಘಟನೆ, ಒಬ್ಬಂಟಿತನ ಮುಂತಾದ ಸಾಮಾಜಿಕ ಸಾಂಸ್ಕøತಿಕ ವಿದ್ಯಮಾನಗಳನ್ನು ಅರ್ಥೈಸಲು ಅಗತ್ಯ ಚೌಕಟ್ಟು ಒದಗಿಸುತ್ತದೆ.

ಬಂಡವಾಳಶಾಹಿಯ ಚಲನಶೀಲತೆ

ತನ್ನನ್ನು ಮತ್ತು ತಾನು ಇರುವ ಸಮಾಜವನ್ನು ಸತತವಾಗಿ ಬದಲಾಯಿಸುತ್ತಾ ಹೋಗುವುದು, ಬಂಡವಾಳದ ಸ್ವಭಾವ. “ಬಂಡವಾಳಿಗರ ವರ್ಗ ಸತತವಾಗಿ ಉತ್ಪಾದನಾ ಸಾಧನಗಳನ್ನು ಕ್ರಾಂತಿಕಾರಕವಾಗಿ ಬದಲಾಯಿಸುತ್ತಾ ಹೋಗದೇ, ಆ ಮೂಲಕ ಉತ್ಪಾದನಾ ಸಂಬಂಧಗಳನ್ನು ಮತು ಇಡೀ ಸಮಾಜದಲ್ಲಿನ ಸಂಬಂಧಗಳನ್ನು ಬದಲಾಯಿಸುತ್ತಾ ಹೋಗದೆ ಇರಲಾರದು.. .. ..ಸತತವಾಗಿ ಉತ್ಪಾದನಾ ಸಾಧನಗಳಲ್ಲಿ ಕ್ರಾಂತಿಕಾರಕ ಬದಲಾವಣೆ, ಸಾಮಾಜಿಕ ಪರಿಸ್ಥಿತಿಗಳನ್ನು ಎಡೆಬಿಡದೆ ಕದಡುತ್ತಾ ಹೋಗುವುದು, ಎಂದೂ ಮುಗಿಯದ ಅನಿಶ್ಚಿತತೆ, ತಲ್ಲಣಗಳು ಹಿಂದಿನ ಎಲ್ಲಾ ವ್ಯವಸ್ಥೆಗಳಿಗಿಂತ ಬಂಡವಾಳಶಾಹಿ ವ್ಯವಸ್ಥೆಯನ್ನು ವಿಶಿಷ್ಟವಾಗಿಸುತ್ತದೆ. ಎಲ್ಲಾ ಸ್ಥಿರವಾದ, ಬಹಳ ಕಾಲ ಹೆಪ್ಪುಗಟ್ಟಿದ ಸಂಬಂಧಗಳು ಮತ್ತು ಅವುಗಳ ಜತೆ ಸಾಲಾಗಿ ಬರುವ ಪ್ರಾಚೀನವಾದ ಮಾನ್ಯ ಪೂರ್ವಗ್ರಹಗಳು ಮತ್ತು ಅಭಿಪ್ರಾಯಗಳನ್ನು ಅದು ಗುಡಿಸಿ ಹಾಕಿಬಿಡುತ್ತದೆ. ಎಲ್ಲಾ ಹೊಸ ಸಂಬಂಧಗಳು ಗಟ್ಟಿಯಾಗುವ ಮೊದಲೇ ಹಳೆಯದಾಗುತ್ತವೆ. ಎಲ್ಲಾ ಗಟ್ಟಿಯಾಗಿರುವುದು ಕರಗಿ ಆವಿಯಾಗುತ್ತವೆ..” ಎಂದು ಮಾಕ್ರ್ಸ್ ಹೇಳುತ್ತಾರೆ. 

ಬಂಡವಾಳದ ಚಲನಶೀಲತೆ ಹಲವು ಹಿಂದೆಂದೂ ಕಾಣದ ಮತ್ತು ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಜಗವ್ಯಾಪಿ ಉತ್ಪಾದನೆ, ತ್ವರಿತ ಗತಿಯಲ್ಲಿ ಸುಧಾರಿತ ಮತ್ತು ಹೊಸ ಹೊಸ ತಂತ್ರಜ್ಞಾನಗಳ ಅವಿಷ್ಕಾರ, ಹಾಗೂ ಅಗಾಧ ಉತ್ಪಾದನಾ ಶಕ್ತಿಗಳ ಸೃಷ್ಟಿ, ಸಂಪರ್ಕ ಸಾಧನಗಳ ಅಪಾರ ವಿಸ್ತರಣೆ, ನಗರೀಕರಣ, ಆರ್ಥಿಕ ವ್ಯವಹಾರಗಳಲ್ಲಿ ಮಾತ್ರವಲ್ಲ ಬೌದ್ಧಿಕ ಮತ್ತು ಸೃಜನಶೀಲ ಕ್ಷೇತ್ರಗಳಲ್ಲಿ ಕೂಡಾ ದೇಶಗಳ ನಡುವೆ ಹೆಚ್ಚಿದ ಕೊಡು-ಕೊಳ್ಳು ಸಂಬಂಧ - ಇವು ಕೆಲವು ಪರಿಣಾಮಗಳು. ಅದು ಬಂಡವಾಳ ಕಾರ್ಖಾನೆ ಉತ್ಪಾದನಾ ವ್ಯವಸ್ಥೆಯಿಂದ ಮುಂದುವರೆದು ಹೊಸ ಉತ್ಪಾದನಾ ಸಂಘಟನೆಗಳು ಮತ್ತು ಆರ್ಥಿಕ ಸಂಸ್ಥೆಗಳು ಮತ್ತು ಕಾನೂನು ವ್ಯವಸ್ಥೆಗಳನ್ನು ಹುಟ್ಟಿಹಾಕುತ್ತದೆ. ಇಂದಿನ ಹಣಕಾಸು ಬಂಡವಾಳದ ಯುಗದಲ್ಲಂತೂ ಉತ್ಪಾದನಾ ಸಂಘಟನೆಗಳು ಮತ್ತು ಆರ್ಥಿಕ ಸಂಸ್ಥೆಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಮಾಕ್ರ್ಸ್ ಬಂಡವಾಳಶಾಹಿ ಉತ್ಪಾದನೆಯ ಮೂರು “ಮೂಲ ವಸ್ತುಸ್ಥಿತಿ”ಗಳನ್ನು ಗುರುತಿಸುತ್ತಾರೆ - (1) ಕೆಲವೇ ಕೈಗಳಲ್ಲಿ ಉತ್ಪಾದನಾ ಸಾಧನಗಳ ಕೇಂದ್ರೀಕರಣದಿಂದಾಗಿ, ಅವು ಉತ್ಪಾದನೆಯಲ್ಲಿ ತೊಡಗಿದ ಶ್ರಮಿಕರ ಆಸ್ತಿಯಂತೆ ಕಾಣದೆ ಸಾಮಾಜಿಕ ಉತ್ಪಾದನಾ ಸಾಮಥ್ರ್ಯದಂತಾಗುವುದು (2) ಸಹಕಾರ, ಶ್ರಮ ವಿಭಜನೆ ಮತ್ತು ಪ್ರಾಕೃತಿಕ ವಿಜ್ಞಾನದ ಜತೆ ಶ್ರಮದ ಸೇರಿಸುವಿಕೆಗಳಿಂದ, ಸಾಮಾಜಿಕ ಶ್ರಮವಾಗಿ ಶ್ರಮದ ಸಂಘಟನೆ (3) ವಿಶ್ವ ಮಾರುಕಟ್ಟೆಯ ನಿರ್ಮಾಣ. ಈ ಮೂರನೇಯ ಲಕ್ಷಣ ಬಂಡವಾಳಶಾಹಿ ವ್ಯವಸ್ಥೆಯ ಸತತವಾಗಿ ಅದ್ದೂರಿಗೊಳಿಸುತ್ತಾ ವಿಸ್ತರಿಸುವ, ಹಿಂದಿನ ಉತ್ಪಾದನಾ ವ್ಯವಸ್ಥೆಗಳನ್ನು ನಾಶಗೊಳಿಸುವ, ತಂತ್ರಜ್ಞಾನ ಮತ್ತು ಸಂಸ್ಥೆಗಳನ್ನು ಬದಲಾಯಿಸುತ್ತಾ ಹೋಗುವ ಪ್ರವೃತ್ತಿಯ ಸಹಜ ಪರಿಣಾಮ. ಆದರೆ ಜಾಗತೀಕರಣದ ಬೆಳವಣಿಗೆ ಸಹ, ಜಗತ್ತಿನಲ್ಲಿ ದೇಶಗಳಲ್ಲಿ, ದೇಶಗಳಲ್ಲಿ ಪ್ರದೇಶಗಳಲ್ಲಿ, ಅಸಮಾನವಾಗಿ ಆಗುತ್ತದೆ. ವಿಶ್ವ ಮಾರುಕಟ್ಟೆಯ ನಿರ್ಮಾಣವೇ ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಬಂಡವಾಳಶಾಹಿ ವಿಸ್ತಾರವಾಗುತ್ತಾ ಹೋದಂತೆ, ಬಂಡವಾಳಶಾಹಿ-ಪೂರ್ವ ಅಥವಾ ಬಂಡವಾಳಶಾಹಿ-ಅಲ್ಲದ ವ್ಯವಸ್ಥೆಗಳನ್ನು ನಾಶ ಮಾಡಿ ವಶಪಡಿಸುವ ಅವಕಾಶ ಕಡಿಮೆಯಾಗುತ್ತದೆ.

ಇಂದಿನ ಬಂಡವಾಳಶಾಹಿಯ ಚಲನೆಗಳಲ್ಲಿ ಮೇಲೆ ಹೇಳಿದ ಬಂಡವಾಳಶಾಹಿಯ ಚಲನಶೀಲತೆಯ ಮೂರು “ಮೂಲ ವಸ್ತುಸ್ಥಿತಿ”ಗಳು ಪ್ರಮುಖ ಪಾತ್ರವಹಿಸುತ್ತಿರುವುದನ್ನು ಕಾಣಬಹುದು.

ಸಾಲದ ಪಾತ್ರ

ಮಾಕ್ರ್ಸ್ ಕಾಲದಲ್ಲಿ ಹಣಕಾಸು ಪ್ರಮುಖವಾಗಿ ಬ್ಯಾಂಕಿಂಗ್‍ಗೆ, ಅದರಲ್ಲೂ ಕೈಗಾರಿಕೆಗೆ ಸಾಲ ಕೊಡುವುದಕ್ಕೆ  ಸೀಮಿತವಾಗಿತ್ತು. ಆಧುನಿಕ ಬ್ಯಾಂಕುಗಳು ಇನ್ನೂ ಉದಯವಾಗುತ್ತಿದ್ದವು ಅಷ್ಟೇ. ಹಣಕಾಸು ಹಾನಿಯ ಸಾಧ್ಯತೆಯನ್ನು ವಿವಿಧ ರೀತಿಗಳಲ್ಲಿ ಮಾರುವೇಷ ತೊಡಿಸುವ ಮತ್ತು ಸಾರ್ವಜನಿಕ ನಿಯಂತ್ರಣದ ಕಣ್ತಪ್ಪಿಸುವ, ಇಂದಿನ ವಿಚಿತ್ರವಾದ ಹುಲುಸಾಗಿ ಬೆಳೆದಿರುವ ಜಟಿಲ ಹಣಕಾಸು ಮಾರುಕಟ್ಟೆಗಳು, ಆಗ ಇನ್ನೂ ಇರಲಿಲ್ಲ. ಆದರೂ ಬಂಡವಾಳಶಾಹಿಯ ಉತ್ಪಾದನಾ ಸಾಮಥ್ರ್ಯವನ್ನು ಹೆಚ್ಚಿಸುವ ಮತ್ತು ಅದನ್ನು ಇನ್ನಷ್ಟು ಬಿಕ್ಕಟ್ಟಿಗೆ ತಳ್ಳುವಲ್ಲಿ ಸಾಲದ ಪಾತ್ರವನ್ನು ಮಾಕ್ರ್ಸ್ ಸೂಕ್ಷ್ಮವಾಗಿ ಗಮನಿಸಿದ್ದರು. ಅಗತ್ಯಕ್ಕಿಂತ ಹೆಚ್ಚಿನ ಉತ್ಪಾದನೆ ಮತ್ತು ವ್ಯಾಪಾರದಲ್ಲಿ ವಿಪರೀತ ಜೂಜಾಟಕ್ಕೆ ಸಾಲದ ವ್ಯವಸ್ಥೆಯೇ ಸನ್ನೆಕೋಲು. ಏಕೆಂದರೆ ಪುನರುತ್ಪಾದನೆಯ ಪ್ರಕ್ರಿಯೆಯನ್ನು ಇಲ್ಲಿ ಅದರ ಕೊನೆಯ ಮಿತಿಗೆ ಎಳೆಯಲಾಗಿದೆ. ಸಾಮಾಜಿಕ ಬಂಡವಾಳದ ನಿರ್ವಹಣೆಯನ್ನು ಅದರ ಒಡೆತನ ಇರದ ಜನ ಮಾಡುವುದೇ ಇದಕ್ಕೆ ಮುಖ್ಯ ಕಾರಣ. ಖಾಸಗಿ ಬಂಡವಾಳದ ಒಡೆಯನಾದ ಬಂಡವಾಳದಾರ ತಾನೇ ಅದನ್ನು ನಿರ್ವಹಿಸಿದಾಗ ಅದರ ಮಿತಿಯನ್ನು ಜಾಗ್ರತೆಯಿಂದ ನಿರ್ವಹಿಸುತ್ತಾನೆ. ಆದ್ದರಿಂದ ಸಾಲದ ವ್ಯವಸ್ಥೆ ಒಂದು ಕಡೆ, ಉತ್ಪಾದನಾ ಶಕ್ತಿಗಳ ಭೌತಿಕ ಬೆಳವಣಿಗೆಯನ್ನು ಬೆಳವಣಿಗೆಗೆ ವೇಗವರ್ಧಕವಾಗಿರುತ್ತದೆ. ಇನ್ನೊಂದು ಕಡೆ ಅದೇ, ವೈರುಧ್ಯಗಳ ಉಗ್ರ ಸ್ಫೋಟಕ್ಕೂ ವೇಗವರ್ಧಕವಾಗಿರುತ್ತದೆ ಎಂದು ಮಾಕ್ರ್ಸ್ ಮಾರ್ಮಿಕವಾಗಿ ಗಮನ ಸೆಳೆದಿದ್ದಾರೆ.

ಮಾಕ್ರ್ಸ್ “ಕಲ್ಪಿತ ಬಂಡವಾಳ”ದ ಪಾತ್ರವನ್ನು ಗಮನಿಸಿದ್ದು, ಬಡ್ಡಿ ಹುಟ್ಟಿಸುವ ಬಂಡವಾಳದ ಅನಿವಾರ್ಯ ಪರಿಣಾಮ ಇದು ಎಂದು ಪರಿಗಣಿಸಿದ್ದರು. “ಕಲ್ಪಿತ ಬಂಡವಾಳ” ಭೌತಿಕ ಬಂಡವಾಳದಿಂದ ಸ್ವತಂತ್ರವಾಗಿರುತ್ತದೆ. ಒಡೆತನದ ಕಾಗದ ಪತ್ರದಲ್ಲಿ ಮಾತ್ರ ಇರುತ್ತದೆ. ಇದನ್ನು ಹಣಕಾಸು ಮಾರುಕಟ್ಟೆಗಳಲ್ಲಿ ಮಾರಬಹುದು, ಕೊಳ್ಳಬಹುದು. ಇಂತಹ ಕಲ್ಪಿತ ಬಂಡವಾಳದ ಹೆಚ್ಚಳದಿಂದ ನಿಜವಾದ ಬಂಡವಾಳ ಶೇಖರಣೆಗೆ ಸಹಾಯಕವಾಬಹುದು. ಅದರ ಸ್ವಾಯತ್ತ (ವಾಸ್ತವಕ್ಕೆ ಸಂಬಂಧವಿಲ್ಲದ ಲಂಗು ಲಗಾಮಿಲ್ಲದ) ವಿಸ್ತರಣೆ, ಬಿಕ್ಕಟ್ಟು ಉಂಟು ಮಾಡಬಹುದು ಅಥವಾ ಬಿಕ್ಕಟ್ಟನ್ನು ಹೆಚ್ಚಿಸಬಹುದು. ಮಾಕ್ರ್ಸ್ ಅವರ ಈ ಒಳನೋಟವನ್ನು ಬಳಸಿ ಸಾಲ ಮತ್ತು ಹಣಕಾಸು ಮಾರುಕಟ್ಟೆಗಳ ಸುಗ್ಗಿ-ಕುಸಿತ ಪ್ರವೃತ್ತಿಯನ್ನು ಹಲವು ಅರ್ಥಶಾಸ್ತ್ರಜ್ಞರು ವಿವರಿಸಿದ್ದಾರೆ.

ಅವರ ಈ ಒಳನೋಟದಿಂದಾಗಿ ಹಣಕಾಸು ವಂಚನೆ ಹೇಗೆ ವ್ಯವಸ್ಥೆಯ ಅವಿಭಾಜ್ಯ ಭಾಗವಾಗುತ್ತದೆ ಮತ್ತು ಇಡೀ ವ್ಯವಸ್ಥೆ ಆರ್ಥಿಕವಾಗಿ ಇದರಿಂದ ವಿಶಿಷ್ಟವಾಗಿ ಬದಲಾಗುತ್ತಾ ಹೋಗಬಹುದು ಎಂದು ಮಾಕ್ರ್ಸ್ ಅವರಿಗೆ ಗಮನಿಸಲು ಸಾಧ್ಯವಾಗಿತ್ತು. ಸಾಲದ ವ್ಯವಸ್ಥೆ ಒಂದು ಕಡೆ ಇತರರ ಶ್ರಮದ ಶೋಷಣೆಯಿಂದ ಬಂಡವಾಳಶಾಹಿ ಉತ್ಪಾದನೆಗೆ ಉತ್ತೇಜನೆ ಕೊಡುತ್ತದೆ. ಇನ್ನೊಂದು ಕಡೆ ಅಗಾಧ ಪ್ರಮಾಣದ ಜೂಜಾಟ ಮತ್ತು ವಂಚನೆಗೆ ಎಡೆ ಮಾಡಿಕೊಡುತ್ತದೆ. ಕಡಿಮೆಯಾಗುತ್ತಾ ಹೋಗುವ ಸಂಖ್ಯೆಯ ಕೆಲವೇ ಕೆಲವರು ಸಾಮಾಜಿಕ ಸಂಪತ್ತನ್ನು ತಮ್ಮ ಸ್ವಂತಕ್ಕೆ ಬಳಸಿಕೊಳ್ಳುತ್ತಾರೆ. ಇದು ಇನ್ನೊಂದು ಉತ್ಪಾದನಾ ವಿಧಾನಕ್ಕೂ ಬದಲಾಗಬಹುದು. ಈ ಸಂದಿಗ್ಧ ಸ್ವರೂಪದಿಂದಾಗಿ, ಸಾಲ ವ್ಯವಸ್ಥೆಯ ವಕ್ತಾರ ವಂಚಕ ಮತ್ತು ಹರಿಕಾರ ಎರಡೂ ಪಾತ್ರಗಳ ವಿಚಿತ್ರ ಮಿಶ್ರಣವಾಗಿರುತ್ತಾನೆ ಎಂಬ ಮಾಕ್ರ್ಸ್ ಉದ್ಗಾರ ಇಂದಿನ ಹಣಕಾಸು ಬಂಡವಾಳ ಯುಗದ ಭವಿಷ್ಯ ನುಡಿದಂತಿದೆ.

ಬಂಡವಾಳದ ಕೇಂದ್ರೀಕರಣ ಮತ್ತು ಅಸಮಾನ ಬೆಳವಣಿಗೆ

ಬಂಡವಾಳದ ಶೇಖರಣೆ ಉತ್ಪಾದಕತೆ ಹೆಚ್ಚಿಸುತ್ತದೆ. ಆದರೆ ಅದರ ಜತೆಗೆ ಬರುವ ಬೆಳವಣಿಗೆ ಅಸಮಾನವೂ ಆಗಿರುತ್ತದೆ. ಬಂಡವಾಳದ ಕೇಂದ್ರೀಕರಣ ಹಲವು ಬಂಡವಾಳಗಳ ನಡುವೆ ಅಡಕವಾಗಿ ಇರುವ ವೈಷಮ್ಯವನ್ನು ವ್ಯಕ್ತಪಡಿಸುತ್ತದೆ. ಬಂಡವಾಳದ ಶೇಖರಣೆ ಉತ್ಪಾದನಾ ಸಾಧನಗಳ ಮತ್ತು ಶ್ರಮಿಕರ ಮೇಲಿನ ನಿಯಂತ್ರಣದ ಕೇಂದ್ರೀಕರಣ ಮಾತ್ರವಲ್ಲ, ವೈಯಕ್ತಿಕ ಬಂಡವಾಳಗಳ ನಡುವಿನ ವಿಕರ್ಷಣೆ ಸಹ. ಅದು ಈಗಾಗಲೇ ರೂಪಿತವಾದ ಬಂಡವಾಳಗಳ ಕೇಂದ್ರೀಕರಣ. ಬಂಡವಾಳಗಳ ವೈಯಕ್ತಿಕ ಸ್ವಾತಂತ್ರ್ಯದ ನಾಶ, ಒಬ್ಬ ಬಂಡವಾಳದಾರ ಇನ್ನೊಬ್ಬ ಬಂಡವಾಳದಾರನಿಂದ ಬಂಡವಾಳ ಕಿತ್ತುಕೊಂಡು, ಸಣ್ಣ ಬಂಡವಾಳಗಳೆಲ್ಲಾ ಸೇರಿ ದೊಡ್ಡ ಬಂಡವಾಳವಾಗಿ ಬದಲಾಗುವ ಪ್ರಕ್ರಿಯೆ. ಬಂಡವಾಳ ಒಂದು ಕೈಯಲ್ಲಿ ದೊಡ್ಡದಾಗಿ ಬೆಳೆಯುತ್ತಿದೆ ಎಂದರೆ ಹಲವು ಕೈಗಳು ತಮ್ಮ ಬಂಡವಾಳವನ್ನು ಕಳೆದುಕೊಂಡಿವೆ ಎಂದರ್ಥ., ಎಂದು ಮಾಕ್ರ್ಸ್ ಈ ಪ್ರಕ್ರಿಯೆಯನ್ನು ನಿರೂಪಿಸುತ್ತಾರೆ.

ಅಸಮಾನ ಬೆಳವಣಿಗೆಯಿಂದಾಗಿ ಬಂಡವಾಳಶಾಹಿ ಸತತವಾಗಿ ಅಸಮತೋಲನದ ಸ್ಥಿತಿಯಲ್ಲಿ ಇರುತ್ತದೆ. ಇದು ಬಂಡವಾಳಶಾಹಿಯಡಿ ಹುಟ್ಟಿ ಬೆಳೆಯುವ ಎಲ್ಲಾ ಸಾಮಾಜಿಕ ಮತ್ತು ಆರ್ಥಿಕ ಸಂಬಂಧಗಳಿಗೂ ಅದರ ಹಲವು ಆಯಾಮಗಳಿಗೂ ಅನ್ವಯಿಸುತ್ತದೆ. ಉತ್ಪಾದಕ ಶಕ್ತಿಗಳ ತ್ವರಿತ ಬೆಳವಣಿಗೆಗೂ, ಅದು ಉತ್ಪಾದಿಸುವ ಉತ್ಪನ್ನಗಳಿಗೆ ಇರುವ ಬೇಡಿಕೆಗೂ ಯಾವುದೇ ತಾಳಮೇಳ ಇರುವುದಿಲ್ಲ. ಇದು (ಹಾಕಿದ ಬಂಡವಾಳದ ಮೇಲೆ ಲಾಭ ಅಥವಾ ಕನಿಷ್ಟ ನಷ್ಟ ಆಗದಿರುವ) “ಗಳಿಸುವ ಬಿಕ್ಕಟ್ಟಿ”ಗೆ ಹಾದಿ ಮಾಡಿಕೊಡುತ್ತದೆ. ಅದೇ ರೀತಿ ಸ್ಥಿರ ಮತ್ತು ಚರ ಬಂಡವಾಳದ ವಿಸ್ತರಣೆಯ ಅನುಪಾತದಲ್ಲಿ ವಿಷಮತೆ ಲಾಭದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ವಿವಿಧ ಆರ್ಥಿಕ ಕ್ಷೇತ್ರಗಳ ನಡುವೆ ಸಹ ಅಸಮಾನತೆ ಹೆಚ್ಚುತ್ತಾ ಹೋಗುತ್ತದೆ. ಬಂಡವಾಳದ ಕೇಂದ್ರೀಕರಣದ ಪ್ರವೃತ್ತಿಯಿಂದಾಗಿ ಪ್ರಾದೇಶಿಕ ಅಸಮಾನತೆ ಸಹ ಹೆಚ್ಚುತ್ತಾ “ಅಭಿವೃದ್ಧ” ಮತ್ತು “ಕಡಿಮೆ ಅಭಿವೃದ್ಧ ಅಥವಾ ಅಭಿವೃದ್ಧಿ ಹೊಂದದ” ಪ್ರದೇಶಗಳು ರೂಪಿತವಾಗುತ್ತವೆ. ವಿನಿಮಯದ ಮಾಧ್ಯಮವಾಗಿ ಮತ್ತು ಮೌಲ್ಯವನ್ನು ಅಳೆಯುವ ಸಾಧನವಾಗಿ ಹಣದ ಎರಡು ರೂಪಗಳ ನಡುವೆಯೂ ಹೊಂದಾಣಿಕೆ ಇರುವುದಿಲ್ಲ. ಇವುಗಳ ನಡುವೆ ಹೊಂದಾಣಿಕೆಯ ಅಭಾವ,  ಸಾಲ ಮತ್ತು ಹಣಕಾಸು ವ್ಯವಸ್ಥೆಯ ವಿಸ್ತರಣೆಯಿಂದ ಮತ್ತಷ್ಟು ಹೆಚ್ಚಾಗಿ ಬಿಕ್ಕಟ್ಟಿಗೆ ತಿರುಗುವ ಪ್ರವೃತ್ತಿ ಹೊಂದಿರುತ್ತವೆ.

ಕಳೆದ 150 ವರ್ಷಗಳಲ್ಲಿ (ಅದರಲ್ಲೂ ಕಳೆದ 30 ವರ್ಷಗಳಲ್ಲಿ) ಇನ್ನಷ್ಟೂ ಘೋರವಾಗಿರುವ ಅಸಮಾನತೆಯ ವಿವಿಧ ಮುಖಗಳ ಮೂಲವನ್ನು ಮಾಕ್ರ್ಸ್ ಆಗಲೇ ನಿರೂಪಿಸಿದ್ದಾರೆ. ಹಲವು ಆಯಾಮಗಳಲ್ಲಿ ಅಗಾಧವಾಗಿ ಹೆಚ್ಚುತ್ತಿರುವ ಅಸಮಾನತೆ ಈಗ ಮಾಕ್ರ್ಸ್‍ವಾದಿಗಳಲ್ಲದ ಅರ್ಥಶಾಸ್ತ್ರಜ್ಞರ ಮತ್ತು ಇತರ ಸಮಾಜ ವಿಜ್ಞಾನಿಗಳ ಪ್ರಮುಖ ಕಾಳಜಿಯಾಗಿದೆ. ಅವರೆಲ್ಲ ಈ ಬಗ್ಗೆ ಮಾಕ್ರ್ಸ್ ವಿಶ್ಲೇಷಣೆಯನ್ನು ಅಧ್ಯಯನ ಮಾಡುತ್ತಿದ್ದಾರೆ.

ಸಂಘರ್ಷ, ವೈರುಧ್ಯಗಳು ಮತ್ತು ಬಿಕ್ಕಟ್ಟುಗಳು

ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಮತ್ತು ಸತತವಾಗಿರುವ ಬಿಕ್ಕಟ್ಟಿನ ಪ್ರವೃತ್ತಿ ಇದೆ ಎಂಬುದು ಮಾಕ್ರ್ಸ್ ಅವರ ವಿಶ್ಲೇಷಣೆಯ ಪ್ರಮುಖ ಅಂಶ. ಈ ವ್ಯವಸ್ಥೆಯಲ್ಲಿ ಹಲವು ಹಂತಗಳ ಸಂಘರ್ಷ, ವೈರುಧ್ಯಗಳು ಇವೆ. ಅವುಗಳಲ್ಲಿ ಎಲ್ಲವೂ ಮರುಕಳಿಸುವ ಬಿಕ್ಕಟ್ಟಿಗೆ ಅಥವಾ ವಿಸ್ತರಣೆಗೆ ಕಾರಣವಾಗದೆ ಇರಬಹುದು. ಬಂಡವಾಳದ ಚಲನಶೀಲತೆಯಿಂದಾಗಿ ಅದು ದೇಶಗಳೊಳಗೆ ಮತ್ತು ದೇಶಗಳ ನಡುವೆ, ಕಾರ್ಮಿಕರು ರೈತರುಗಳನ್ನು ಹೆಚ್ಚೆಚ್ಚು ಬಡತನಕ್ಕೆ ತಳ್ಳುತ್ತಿರುತ್ತದೆ. ಇನ್ನೊಂದು ಕಡೆ ತಾನು ಬೃಹದಾಕಾರದಲ್ಲಿ ಶ್ರೀಮಂತಿಕೆಯಿಂದ ಬೆಳೆಯುತ್ತಿರುತ್ತದೆ. ಇದು ಸಹಜವಾಗಿಯೇ ವರ್ಗ ಸಂಘರ್ಷಗಳನ್ನು ಉಂಟು ಮಾಡುತ್ತದೆ. ಇದು ಬಂಡವಾಳಶಾಹಿಯ ಅಡಿಯಲ್ಲಿ ಸಾಮಾಜಿಕ ಮತ್ತು ಭೌತಿಕ ಜೀವನದ ಆವಶ್ಯಕ ಮತ್ತು ಸತತವಾದ ಅಂಶವಾಗಿರುತ್ತದೆ. ಬಂಡವಾಳಶಾಹಿ ಮತ್ತು ಕಾರ್ಮಿಕ ವರ್ಗದೊಳಗೂ, ಒಬ್ಬ ಬಂಡವಾಳದಾರನನ್ನು ಇನ್ನೊಬ್ಬ ಬಂಡವಾಳದಾರನ ವಿರುದ್ಧ, ಒಬ್ಬ ಕಾರ್ಮಿಕನನ್ನು ಇನ್ನೊಬ್ಬ ಕಾರ್ಮಿಕನ ವಿರುದ್ಧ ಎತ್ತಿ ಕಟ್ಟುವ ಆಂತರಿಕ ಸಂಘರ್ಷಗಳನ್ನೂ ವ್ಯವಸ್ಥೆ ಹುಟ್ಟು ಹಾಕುತ್ತದೆ. ಆದ್ದರಿಂದ ಈ ವ್ಯವಸ್ಥೆಯಲ್ಲಿ ಎಲ್ಲರಿಗೂ ಬದುಕುಳಿಯಲು ಸತತ ಸಂಘರ್ಷದಲ್ಲಿ ಇರಬೇಕಾಗುತ್ತದೆ. ಆದ್ದರಿಂದ ವ್ಯಕ್ತಿವಾದ, ಸಂಘರ್ಷ ಮತ್ತು ಪೈಪೋಟಿ ಈ ವ್ಯವಸ್ಥೆಯನ್ನು ನಡೆಸುವ ಇಂಜಿನ್ ಆಗಿರುತ್ತದೆ. ಎಂದು ಮಾಕ್ರ್ಸ್ ವಿವರಿಸುತ್ತಾರೆ.

ಅದೇ ಸಮಯದಲ್ಲಿ, ಬಂಡವಾಳಗಳ ನಡುವೆ ಸಹ ಇರುವ ವ್ಯಕ್ತಿವಾದ ಮತ್ತು ಪೈಪೋಟಿ, ಮಾರುಕಟ್ಟೆಯ ಅರಾಜಕತೆ ಮತ್ತು ಬಿಕ್ಕಟ್ಟಿನತ್ತ ಅನಿವಾರ್ಯ ಪ್ರವೃತ್ತಿಯನ್ನು ಸೃಷ್ಟಿ ಮಾಡುತ್ತವೆ. ವೈಯಕ್ತಿಕ ಬಂಡವಾಳಗಳ ಹೆಚ್ಚಿನ ಲಾಭಕ್ಕಾಗಿನ ನಡಾವಳಿಯ ವಿಧಾನದಿಂದಲೇ, ಮಾರುಕಟ್ಟೆಯ ಅಗತ್ಯಕ್ಕಿಂತ ಹೆಚ್ಚು ಉತ್ಪಾದನೆ (ಸಮಾಜದ ಎಲ್ಲರ ಮಾನವ ಅಗತ್ಯಗಳು ಪೂರ್ಣವಾಗಿ ಪೂರೈಕೆಯಾಗದಿರುವಾಗಲೂ) ಈ ವ್ಯವಸ್ಥೆಯ ಗುಣಲಕ್ಷಣವಾಗಿರುತ್ತದೆ. ಇದರಿಂದಾಗಿ ಬಂಡವಾಳ ಶೇಖರಣೆಯ ಪ್ರಕ್ರಿಯೆ ಯಾವತ್ತೂ ಸುಗಮವಾಗಿರುವುದಿಲ್ಲ. ಅದರಲ್ಲಿ ವಿಪರೀತ ಏರುಪೇರು ಮಾತ್ರವಲ್ಲ, ಆಗಾಗ ಬಿಕ್ಕಟ್ಟುಗಳಿರುತ್ತವೆ. ಭಾಗಶಃ ಹೆಚ್ಚಿನ ಆರ್ಥಿಕ ಬೆಳವಣಿಗೆ ಮತ್ತು ತಂತ್ರಜ್ಞಾನದ ಪ್ರಗತಿ ಸಾಧಿಸುವಲ್ಲಿ ಬಂಡವಾಳಶಾಹಿಯ ಯಶಸ್ಸಿನ ಪರಿಣಾಮವಾಗಿಯೇ ಇದು ಆಗುತ್ತದೆ. ಜನಸಂಖ್ಯೆಗೆ ಹೋಲಿಸಿದರೆ ಬಂಡವಾಳಶಾಹಿ ಉತ್ಪಾದನಾ ವಿಧಾನದಲ್ಲಿ ದಂಗುಬಡಿಸುವ ರೀತಿಯಲ್ಲಿ ಬೆಳೆಯುವ, ಜನಸಂಖ್ಯೆಯ ಏರಿಕೆಯ ದರಕ್ಕಿಂತಲೂ ಹೆಚ್ಚಿನ ದರದಲ್ಲಿ (ಅದರ ಭೌತಿಕ ಸಾರ ಮಾತ್ರವಲ್ಲ) ಏರುವ ಉತ್ಪಾದಕತೆ, ಅದರ ಬುಡದ ಜತೆಗೆ ಹೊಂದಾಣಿಕೆಯಿಲ್ಲದೆ ವೈರುಧ್ಯ ಹೊಂದಿರುತ್ತದೆ. ಆಸ್ತಿ ಮತ್ತು ಆದಾಯಗಳ ಕೇಂದ್ರೀಕರಣದಿಂದಾಗಿ ಸಣ್ಣದಾಗುತ್ತಾ ಹೋಗುವ ಜನವಿಭಾಗಕ್ಕೆ ಮಾತ್ರ ಈ ಉತ್ಪಾದಕತೆ ಕೆಲಸ ಮಾಡುತ್ತದೆ. ಹೆಚ್ಚುತ್ತಿರುವ ಬಹುಸಂಖ್ಯಾತ ಜನವಿಭಾಗಕ್ಕೆ ಇದು ಅರ್ಥಹೀನವಾಗಿರುತ್ತದೆ. ಇದು ಹಿಗ್ಗುತ್ತಿರುವ ಬಂಡವಾಳ ತನ್ನ ಮೌಲ್ಯ ಹೆಚ್ಚಿಸುವ ಪರಿಸ್ಥಿತಿಗೆ ವೈರುಧ್ಯ ಹೊಂದಿರುತ್ತದೆ. ಆದ್ದರಿಂದ ಬಿಕ್ಕಟ್ಟು ಉಂಟಾಗುತ್ತದೆ. ಎಂದು ಮಾಕ್ರ್ಸ್ ಬಿಕ್ಕಟ್ಟು ಉಂಟಾಗುವ ಬಗೆಯನ್ನು ವಿಶ್ಲೇಷಿಸುತ್ತಾರೆ.

ಆಗಾಗ ಮರುಕಳಿಸುವ ಈ ಬಿಕ್ಕಟ್ಟುಗಳು ಬಂಡವಾಳಶಾಹಿ ವ್ಯವಸ್ಥೆಯ ಚಲನೆಯಲ್ಲಿ ಅಡಕವಾಗಿರುವ ವೈರುಧ್ಯಗಳನ್ನು ಪರಿಹರಿಸುವ ಒಂದು, ಬಹುಶಃ ಕಟುವಾದ ಮತ್ತು ಹಿಂಸಾತ್ಮಕ ವಿಧಾನ. ಬಿಕ್ಕಟ್ಟಿನಲ್ಲಿ ಅಡಕವಾಗಿರುವ ಅಸಮತೋಲನ, ಪ್ರಮುಖವಾಗಿ ಬೇಡಿಕೆಗಿಂತ (ಮಾನವ ಅಗತ್ಯಕ್ಕಿಂತ ಅಲ್ಲ) ಹೆಚ್ಚಿನ ಉತ್ಪಾದನೆಯದ್ದು. ಆದ್ದರಿಂದ ಇಂತಹ ಬಿಕಟ್ಟಿನಲ್ಲಿ ಸಾಮಾನ್ಯವಾಗಿ ಆಗ ಇರುವ ಗಮನಾರ್ಹ ಪ್ರಮಾಣದ ಉತ್ಪನ್ನಗಳು ಮತ್ತು ಉತ್ಪಾದಕ ಶಕ್ತಿಗಳು ನಾಶವಾಗುತ್ತವೆ. ಬೆಲೆ ಕುಸಿತದಿಂದ ಉಂಟಾಗುವ ಬಿಕ್ಕಟ್ಟಿನ (ಇದು ಬಿಕ್ಕಟ್ಟಿನ ಒಂದು ರೂಪ ಮಾತ್ರ) ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂದು ಮಾಕ್ರ್ಸ್ ಹೀಗೆ ವಿವರಿಸಿದ್ದಾರೆ: ಪೂರ್ವನಿಯೋಜಿತ ಬೆಲೆಗಳ ಸಂಬಂಧಗಳು ಪುನರುತ್ಪಾದನೆಯ ಪ್ರಕ್ರಿಯೆಯನ್ನು ನಿರ್ಣಯಿಸುತ್ತವೆ. ಆದ್ದರಿಂದ ಸಾರ್ವತ್ರಿಕ ಬೆಲೆ ಕುಸಿತದಿಂದ ಪುನರುತ್ಪಾದನೆಯ ಪ್ರಕ್ರಿಯೆ ನಿಂತು ಹೋಗಿ ಗೊಂದಲಕ್ಕೆ ಒಳಗಾಗುತ್ತದೆ. ಈ ಸ್ಥಗಿತತೆ ಮತ್ತು ಗೊಂದಲ, ಪಾವತಿಯ ಮಾಧ್ಯಮವಾಗಿ ಹಣದ ಪಾತ್ರವನ್ನು ನಿಷ್ಕ್ರಿಯಗೊಳಿಸುತ್ತದೆ. ಹಣದ ಬೆಳವಣಿಗೆ ಬಂಡವಾಳದ ಬೆಳವಣಿಗೆ ತಳುಕು ಹಾಕಿಕೊಂಡಿದ್ದು, ಬೆಲೆಗಳ ಸಂಬಂಧಗಳ ಮೇಲೆ ಆಧಾರಿತವಾಗಿರುತ್ತದೆ. ನಿರ್ದಿಷ್ಟ ತಾರೀಕುಗಳಲ್ಲಿ ಆಗಬೇಕಾಗಿದ್ದ ಹಣದ ಪಾವತಿಗಳು ಆಗದೆ, ಇದು ನೂರಾರು ಕಡೆ ಆಗಿ ಸರಣಿ ಪರಿಣಾಮವನ್ನು ಬೀರುತ್ತದೆ. ಸರಣಿ ರೂಪದಲ್ಲಿ ಹಣ ಪಾವತಿ ಆಗದೆ, ಸಾಲದ ವ್ಯವಸ್ಥೆ ಕುಸಿದು ಬಿದ್ದು ಗೊಂದಲ ಇನ್ನಷ್ಟು ಹೆಚ್ಚುತ್ತದೆ. ಇದರಿಂದ ಬಲಾತ್ಕಾರದ ಅಪಮೌಲ್ಯವಾಗಿ, ಉತ್ಪಾದನೆ ಸ್ಥಗಿತಗೊಂಡು, ಪುನರುತ್ಪಾದನೆಯ ಪ್ರಕ್ರಿಯೆ ಅಸ್ತವ್ಯಸ್ತವಾಗುತ್ತದೆ. ಕೊನೆಗೆ ಪುನರುತ್ಪಾದನೆ ನಿಂತು ಹೋಗಿ ತೀವ್ರ ಬಿಕ್ಕಟ್ಟಿಗೆ ದಾರಿ ಮಾಡಿಕೊಡುತ್ತದೆ. 

ಮಾಕ್ರ್ಸ್ ಅವರಿಗೆ ಬಂಡವಾಳಶಾಹಿ ಬಿಕ್ಕಟ್ಟು ಯಾವತ್ತೂ ಬರಿಯ “ಆರ್ಥಿಕ” ಅಥವಾ “ಹಣಕಾಸಿನ” ಬಿಕ್ಕಟ್ಟು ಆಗಿರಲಿಲ್ಲ. ಬದಲಾಗಿ ಅವು ನಿಜವಾದ ಅಸಮತೋಲನಗಳು, ಹೊಂದಾಣಿಕೆಯಿಲ್ಲದ ಅನುಪಾತಗಳು ಹಾಗೂ ಅಸಮಾನ ಬೆಳವಣಿಗೆಯ ಪ್ರತಿಫಲನಗಳು. ಇವು ಬಂಡವಾಳಶಾಹಿ ಶೇಖರಣೆಯ ಮೂಲಭೂತ ಲಕ್ಷಣಗಳು. ನಿಜವಾಗಿಯೂ ಅಸಮಾನ ಉತ್ಪಾದನಾ ಶಕ್ತಿಗಳ ಬೆಳವಣಿಗೆಯ ಪರಿಣಾಮವಾಗಿರುವ ಇದು ವಿನಿಮಯದ ಅಥವಾ (ಇಂದಿನ ನುಡಿಕಟ್ಟಿನಲ್ಲಿ) ಹಣಕಾಸು ಬಿಕ್ಕಟ್ಟಿನಂತೆ ತೋರುತ್ತದೆ ಅಷ್ಟೇ.   

ಬಂಡವಾಳಶಾಹಿ ಬಿಕ್ಕಟ್ಟು ಬಗ್ಗೆ ಮಾಕ್ರ್ಸ್ ವಿಶ್ಲೇಷಣೆಯ ಮಹತ್ವ 2008ರ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಹಿಂದೆಂದೂ ಕಾಣದಂತೆ ಕಂಡು ಬಂತು. ಇದ್ದಕ್ಕಿದ್ದ ಹಾಗೆ ಮಾಕ್ರ್ಸ್ “ಕ್ಯಾಪಿಟಲ್” ಮಾರಾಟ ಏರಲಾರಂಭಿಸಿತು. ಬ್ಯಾಂಕುಗಳ ನಿರ್ದೇಶಕರು, ಕಾರ್ಪೊರೆಟ್ ಧಣಿಗಳು, ಬೂಜ್ರ್ವಾ ಅರ್ಥಸಾಸ್ತ್ರಜ್ಞರು, ರಾಜಕಾರಣಿಗಳು “ಕ್ಯಾಪಿಟಲ್” ಬಗ್ಗೆ ಮಾತನಾಡಲಾರಭಿಸಿದರು. ಬಂಡವಾಳಶಾಹಿ ಬಿಕ್ಕಟ್ಟಿನ ಬಗ್ಗೆ ಮಾಕ್ರ್ಸ್ ವಿಶ್ಲೇಷಣೆ ಬಗ್ಗೆ ಅವರೆಲ್ಲ ಕುತೂಹಲಿಗಳಾಗಿದ್ದರು. ಇಂದಿನ ಬಿಕ್ಕಟ್ಟು ವಿಶ್ಲೇಷಣೆಗೆ ಪರಿಹಾರಕ್ಕೆ “ಕ್ಯಾಪಿಟಲ್”ನಲ್ಲಿ ಉತ್ತರ ಹುಡುಕಲಾರಂಭಿಸಿದ್ದರು. ಅವರಿಗೆ ಅಲ್ಲಿ ಉತ್ತರ ಸಿಕ್ಕಿತೋ ಇಲ್ಲವೋ, 150 ವರ್ಷ ಹಳೆಯ “ಕ್ಯಾಪಿಟಲ್” ಈಗ ಯಾಕೆ ಓದಬೇಕು? ಎಂಬ ಪ್ರಶ್ನೆಗಂತೂ ಇದರಲ್ಲಿ ಉತ್ತರವಿದೆ.

ಕಾರ್ಲ್ ಮಾಕ್ರ್ಸ್ ಅವರ ಬಂಡವಾಳಶಾಹಿ ಪದ್ದತಿಯ ಈ ಸಮಗ್ರ ಅಧ್ಯಯನ ಎತ್ತಿ ತೋರಿಸಿದ ಅದರ ಹಲವು ಪ್ರಮುಖ ಲಕ್ಷಣಗಳು, ಇಂದು ಬಂಡವಾಳಶಾಹಿ ಎಷ್ಟೇ ಬದಲಾಗಿದ್ದರೂ ಅದನ್ನು ಅರ್ಥೈಸಲು ಸಹಾಯಕವಾಗಿವೆ ಎಂಬುದು ಆಶ್ಚರ್ಯಕರ, ಆದರೂ ನಿಜ. “ಕ್ಯಾಪಿಟಲ್”ನಲ್ಲಿ ಹಲವು ಹಂತಗಳಲ್ಲಿ ಕಾಣಬರುವ ಮಾಕ್ರ್ಸ್ ಒಳನೋಟಗಳು ಇಂದಿಗೂ ಪ್ರಸ್ತುತ. ಇಂದಿನ ಬಂಡವಾಳಶಾಹಿಯ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲಿಕ್ಕೂ ಸಹಾಯಕ, ಎಂದು ಮೇಲಿನ ನಿರೂಪಣೆಯಿಂದ ಸಿದ್ಧವಾಗುತ್ತದೆ.