ಸ್ವಾತಂತ್ರ್ಯ ದಿನದ ಭಾಷಣ: ಬೂಟಾಟಿಕೆಯ ಭವ್ಯ ಪ್ರದರ್ಶನ

ಸಂಪುಟ: 
37
ಸಂಚಿಕೆ: 
11
date: 
Sunday, 3 September 2017
Image: 

ಸ್ವಾತಂತ್ರ್ಯ ದಿನ ಪ್ರಧಾನ ಮಂತ್ರಿಗಳು ಕೆಂಪು ಕೋಟೆಯಿಂದ ನೀಡಿದ ಉಪದೇಶಗಳಲ್ಲಿ ಬೂಟಾಟಿಕೆಯೇ ತುಂಬಿತ್ತು. ಅವರ ಭಾಷಣ ಈ ಉಪದೇಶಗಳು ಮತ್ತು ಅವುಗಳ ವಾಸ್ತವ ಆಚರಣೆಗಳ ನಡುವೆ ಅಗಾಧ ಅಂತರವಿದೆ ಎಂಬುದನ್ನು ತೋರಿಸುತ್ತದೆ. ಮೇ 2014ರಲ್ಲಿ ಅವರು ಮತ್ತು ಅವರ ಪಕ್ಷ ನೀಡಿದ ವಿವಿಧ ಭರವಸೆಗಳ ಈಡೇರಿಕೆಯ ಬಗ್ಗೆ ಚಕಾರವಿಲ್ಲ. ನಿಜ ಹೇಳಬೇಕೆಂದರೆ, ಅಚ್ಛೇ ದಿನ್’ ಮಂತ್ರವನ್ನು ಹೊರಗೆಸೆದು 2019 ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟ ‘2022ರ ವೇಳೆಗೆ ’ನವಭಾರತ’ದ ಮತ್ರೋಚ್ಚಾರಣೆ ಆರಂಭವಾಗಿದೆ.

ಪ್ರಕಾಶ್ ಕಾರಟ್

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಾತಂತ್ರ್ಯ ದಿನದ ಭಾಷಣ ಒಂದು ಪಕ್ಕಾ ಪ್ರಚಾರದ ತುಣುಕು-ವಾಸ್ತವದೊಂದಿಗೆ ಕೊಂಡಿ ಕಳಚಿಕೊಂಡಿರುವುದು ಮತ್ತು ಕೆಲವು ವಿಷಯಗಳಲ್ಲಿ ಬೂಟಾಟಿಕೆ ತುಂಬಿ ಕೊಂಡಿರುವುದೇ ಅದರ ವಿಶಿಷ್ಟತೆ.

ಕಾಶ್ಮೀರದ ವಿಷಯದಲ್ಲಿ ಇದು ಎದ್ದು ಕಾಣುತ್ತದೆ. ‘ಗಾಲಿ’ ಅಥವ ‘ಗೋಲಿ’(ದೂಷಣೆ ಅಥವ ಬಂದೂಕು)ಗಳಿಂದ ಆ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ, ಬದಲಿಗೆ ಕಾಶ್ಮೀರಿಗಳನ್ನು ಆಲಿಂಗಿಸಿಕೊಳ್ಳುವುದರಿಂದ ಮಾತ್ರ ಸಾಧ್ಯ ಎಂಬ ಅವರ ಬುದ್ಧಿವಾದವಂತೂ ಬೂಟಾಟಿಕೆಯ ಪರಾಕಾಷ್ಠೆ. ಕಾಶ್ಮೀರ ಕಣಿವೆ ಕ್ಷೋಭೆಯಿಂದ ತುಂಬಿದೆ. ಜನತೆಯ ನಡುವಿನ ಅಸಂತುಷ್ಟಿಯನ್ನು ಎದುರಿಸಲು ಕೇಂದ್ರ ಸರಕಾರದ ಏಕೈಕ ನಿಲುವು ಎಂದರೆ ಬಲಪ್ರಯೋಗ ಮಾತ್ರ. ರಾಜಕೀಯ ಸಂವಾದ ಆರಂಭಿಸುವ ಒಂದಾದರೂ ಮುತುವರ್ಜಿ ಮೋದಿ ಸರಕಾರದ ಕಡೆಯಿಂದ ಬರಲಿಲ್ಲ.

ತದ್ವಿರುದ್ಧವಾಗಿ ಕಾಶ್ಮ್ಮೀರಿ ಜನಗಳ ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ ದಾಳಿ ನಡೆಸುವ, ಜಮ್ಮು ಮತ್ತು ಕಾಶ್ಮೀರಕ್ಕೆ ಕೊಟ್ಟ ವಿಶೇಷ ಸ್ಥಾನಮಾನವನ್ನು ಅಳಿಸಿ ಹಾಕುವ ಕ್ರಮಗಳನ್ನೇ ಒಂದಾದ ಮೇಲೊಂದರಂತೆ ಕೈಗೊಳ್ಳಲಾಗಿದೆ. ಖಾಯಂ ನಿವಾಸಿಗಳನ್ನು ಕುರಿತಂತೆ ಶಾಸನ ಮಾಡುವ ಹಕ್ಕನ್ನು ರಾಜ್ಯ ಶಾಸನಸಭೆಗೆ ಕೊಟ್ಟಿರುವ ಸಂವಿಧಾನದ ಕಲಮು 35ಎ ಗೆ ಸುಪ್ರಿಂ ಕೋರ್ಟಿನಲ್ಲಿ ಸವಾಲು ಇದಕ್ಕೊಂದು ಉದಾಹರಣೆ. ವಾಸ್ತವದಲ್ಲಿ ದಮನಚಕ್ರ ನಡೆಸುತ್ತಲೇ ಸೋದರತ್ವದ ಮತ್ತು ಪ್ರೀತಿಯ ಉಪದೇಶ ನೀಡುವುದು ಆರೆಸ್ಸೆಸ್ ಕುರುಹಾಗಿರುವÀ ಇಬ್ಬಂದಿತನದ ಎಂದಿನ ಮಾದರಿಯಲ್ಲೇ ಇದೆ.

ಪ್ರಧಾನ ಮಂತ್ರಿಗಳು ತನ್ನ ನೋಟುರದ್ಧತಿ ಕ್ರಮವನ್ನು ಅಲಂಕರಿಸಿ ತೋರಿಸುವ ಪ್ರಯತ್ನವನ್ನು ನಡೆಸಿದ್ದಾರೆ, ಅದರ ಮೂಲಕ ಕಪ್ಪು ಹಣವನ್ನು ಹೊರಗೆಳೆಯಲು ಭಾರೀ ಯಶಸ್ಸು ಸಿಕ್ಕಿದೆ ಎಂಬ ದಾವೆ ಹೂಡಿದ್ದಾರೆ. ಅವರ ಪ್ರಕಾರ ಬ್ಯಾಂಕಿಂಗ್ ವ್ಯವಸ್ಥೆಯ ಹೊರಗಿದ್ದ 3ಲಕ್ಷ ಕೋಟಿ ರೂ. ಈಗ ನೋಟು ರದ್ಧತಿಯಿಂದಾಗಿ ಬ್ಯಾಂಕಿಂಗ್ ವ್ಯವಸ್ಥೆಯೊಳಕ್ಕೆ ಬಂದಿದೆ. ಬ್ಯಾಂಕ್‍ಗಳಲ್ಲಿ ಠೇವಣಿಯಾಗಿರುವ 1.75ಲಕ್ಷ ಕೋಟಿ ರೂ.ಗಳು ಮತ್ತು 18 ಲಕ್ಷ ಮಂದಿಯ ಮೇಲೆ ಸರಕಾರ ಕಣ್ಣಿಟ್ಟಿದೆಯಂತೆ. ಈ ಎಲ್ಲ ಅಂದಾಜುಗಳಿಗೆ ಆಧಾರ ಏನು ಎಂದೇನೂ ಅವರು ಹೇಳಿಲ್ಲ.

ಇವೆಲ್ಲ ಸಂದೇಹಾಸ್ಪದ ದಾವೆಗಳು. ಇದುವರೆಗೂ ರಿಝರ್ವ್ ಬ್ಯಾಂಕ್ ಬ್ಯಾಂಕುಗಳಿಗೆ ನೋಟುರದ್ಧತಿಯಿಂದ ಬಂದ ಕರೆನ್ಸಿ ನೋಟುಗಳ ಒಟ್ಟು ಮೊತ್ತ ಎಷ್ಟು ಎಂದು ಹೇಳಲು ನಿರಾಕರಿಸಿದೆ. ಇದರ ಫಲಿತಾಂಶವಾಗಿ ಎಷ್ಟು ಕಪ್ಪು ಹಣವನ್ನು ಹೊರಗೆಳೆಯಲಾಗಿದೆ3 ಎಂಬುದರ ಯಾವುದೇ ಅಂದಾಜನ್ನು ರಿಝರ್ವ್ ಬ್ಯಾಂಕ್ ಆಗಲೀ, ಹಣಕಾಸು ಇಲಾಖೆಯಾಗಲೀ ಕೊಟ್ಟಿಲ್ಲ. ಪ್ರಧಾನ ಮಂತ್ರಿಗಳು 1.25 ಕೋಟಿ ರೂ. ಕಪ್ಪು ಹಣ ಪತ್ತೆ ಮಾಡಲಾಗಿದೆ ಎಂದು ಕೊಟ್ಟಿರುವ ಮೊತ್ತ ನೋಟುರದ್ಧತಿಯ ನಂತರದ್ದಲ್ಲ, ಬದಲಿಗೆ ಕಳೆದ ಮೂರುವರ್ಷಗಳಲ್ಲಿ  ಸರಕಾರ  ಹೊರತಂದಿದ್ದೇನೆ ಎಂದು ಹೇಳಿಕೊಂಡ ಮೊತ್ತವಷ್ಟೇ.

ವಾಸ್ತವ ಸಂಗತಿಯೆಂದರೆ, ಚಲಾವಣೆಯಲ್ಲಿದ್ದ 86% ಕರೆನ್ಸಿ ನೋಟುಗಳನ್ನು ಇದ್ದಕ್ಕಿದ್ದಂತೆ ರದ್ದು ಮಾಡಿದ್ದು ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಅತ್ಯಂತ ಹಾನಿಕಾರಕ ಪರಿಣಾಮ ಬೀರಿದೆ. ಇತ್ತೀಚೆಗೆ ವಿಡುಗಡೆ ಮಾಡಿದ ಆರ್ಥಿಕ ಸರ್ವೆಯ ಎರಡನೇ ಸಂಪುಟ ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಒಂದು ಅತ್ಯಂತ ನಿರುತ್ತೇಜಕರ ಚಿತ್ರವನ್ನು ಕೊಡುತ್ತದೆ.

ಪ್ರಧಾನ ಮಂತ್ರಿಗಳು ನಂಬಿಕೆಯ ಹೆಸರಲ್ಲಿ ಹಿಂಸಾಚಾರದ ವಿರುದ್ಧ ಮಾತಾಡಿದರು. ಇದು  ‘ಗೋರಕ್ಷಕರು’ ಹಲವರನ್ನು ಬಡಿದು ಸಾಯಿಸಿರುವ ಬಗ್ಗೆ  ಹೇಳಿರುವಂತದ್ದು ಎಂಬುದು  ವೇದ್ಯ. ಆದರೆ ಇಲ್ಲಿಯೂ ಈ ಮಾತು ವಾಸ್ತವವಾಗಿ ಏನೇನೂ ಕ್ರಿಯೆಗಳಿದಿಲ್ಲ. ಸ್ವಾತಂತ್ರ್ಯ ದಿನದ ಕೆಲವೇ ದಿನಗಳ ಹಿಂದೆ ಗುಜರಾತಿನ ವಡೋದರಾದಲ್ಲಿ ಒಂದು ಸತ್ತ ದನದ ಚರ್ಮ ತೆಗೆದದ್ದಕ್ಕೆ ಒಬ್ಬ ತಾಯಿ ಮತ್ತು ಮಗನನ್ನು ಅಮಾನುಷವಾಗಿ ಥಳಿಸಲಾಯಿತು. ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಪೋಲೀಸ್ ಮತ್ತು ಆಡಳಿತ ಕಾನೂನುಬದ್ಧ ಜಾನುವಾರುÀ ವ್ಯವಹಾರದಲ್ಲಿ ಅಥವ ಮಾಂಸ ಮಾರಾಟದಲ್ಲಿ ತೊಡಗಿರುವವರ ವಿರುದ್ಧ ವರ್ತಿಸುತ್ತವೆ, ಆದರೆ ಕಾವಲುಕೋರ ಹಿಂಸಾಚಾರಿಗಳನ್ನು ರಕ್ಷಿಸಲು ಸಾಧ್ಯವಾದದನ್ನೆಲ್ಲ ಮಾಡುತ್ತವೆ.

ನರೆಂದ್ರ ಮೋದಿಯವರಿಗೆ ಮೇ 2014ರಲ್ಲಿ ಅವರು ಮತ್ತು ಅವರ ಪಕ್ಷ ನೀಡಿದ ವಿವಿಧ ಭರವಸೆಗ¼ ಈಡೇರಿಕೆಯ- ಪ್ರತಿವರ್ಷ ಎರಡು ಕೋಟಿ ಉದ್ಯೋಗ ನಿರ್ಮಾಣ ಮತ್ತು ರೈತರಿಗೆ ಉತ್ಪಾದನಾ ಖರ್ಚಿನ ಒಂದೂವರೆ ಪಟ್ಟಿಗೆ ಕಡಿಮೆಯಿಲ್ಲದಂತೆ ಫಲದಾಯಕ ಬೆಲೆ ನೀಡುವುದರ- ಬಗ್ಗೆ ಹೇಳಲು ಏನೂ ಇರಲಿಲ್ಲ.

ನಿಜ ಹೇಳಬೇಕೆಂದರೆ, ಅ’ಚ್ಛೇ ದಿನ್’ ಮಂತ್ರವನ್ನು ಹೊರಗೆಸೆದು 2019 ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು ಹೊಸದೊಂದು ಮಂತ್ರೋಚ್ಛಾರಣೆ ಆರಂಭ ಮಾಡಲಾಗಿದೆ. 2022ರೊಳಗೆ, ಅಂದರೆ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ವೇಳೆಗೆ ‘ನವಭಾರತ’ದ ಭರವಸೆಯನ್ನು ಜನಗಳಿಗೆ ತೋರಿಸಲಾಗುತ್ತಿದೆ. ಐದು ವರ್ಷಗಳಲ್ಲಿ ಒಂದು ‘ನವಭಾರತ’ದ ದಾವೆ ಈಡೇರುತ್ತದೆ ಎಂದು ಹೇಳಲು ಸಾಧ್ಯವಾಗಬೇಕಾದರೆ ಅತ್ಯುನ್ನತ ಮಟ್ಟದ ಹುಸಿ ಆತ್ಮವಿಶ್ವಾಸವೇ ಬೇಕು. ಇದು ವಾಸ್ತವದಿಂದ ಬಹಳ ದೂರವಿದ್ದಾಗ ಮಾತ್ರ ಸಾಧ್ಯ.

ಸ್ವಾತಂತ್ರ್ಯದ 70ನೇ ವಾರ್ಷಿಕೋತ್ಸವದ ಆಚರಣೆ ಗೋರಖಪುರದ ಬಿಆರ್‍ಡಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ 65 ಮಕ್ಕಳ ಸಾವಿನ ದುರಂತದ ಕರಿನೆರಳಿನಲ್ಲಿ ನಡೆದಿದೆ. ಆಗಸ್ಟ್ 15 ರ ಹಿಂದಿನ ವಾರದಲ್ಲಿ ಈ ದುರಂತ ಸಂಭವಿಸಿತು. ಪ್ರಧಾನ ಮಂತ್ರಿಗಳು ದುಃಖತಪ್ತ ಕುಟುಂಬಗಳಿಗಾದ ನಷ್ಟಕ್ಕೆ ಸಂತಾಪವನ್ನೇನೋ  ವ್ಯಕ್ತಪಡಿಸಿದರು. ಆದರೆ ಉತ್ತರಪ್ರದೇಶzಲ್ಲಿ ಮತ್ತು ದೇಶದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ದುಸ್ಥಿತಿ ಐದು ವರ್ಷಗಳಲ್ಲಿ ‘ನವಭಾರತ’ದ ನಿರೀಕ್ಷೆಯನ್ನು ಹುಸಿಗೊಳಿಸುತ್ತಿದೆ. ಸಾರ್ವಜನಿಕ ಆರೋಗ್ಯದ ಮೇಲೆ ಜಾಗತಿಕವಾಗಿ ಸರಾಸರಿ ಜಿಡಿಪಿಯ 5.99% ದಷ್ಟು ಖರ್ಚು ಮಾಡಲಾಗುತ್ತಿದೆ. ಆದರೆ ಭಾರತದಲ್ಲಿ ಇದು ಕೇವಲ 1.2%. 2017ರ ರಾಷ್ಟ್ರೀಯ ಆರೋಗ್ಯ ಧೋರಣೆ ಕೂಡ ಸಾರ್ವಜನಿಕ ಆರೋಗ್ಯದ ಮೇಲಿನ ಖರ್ಚು 2025ರ ವೇಳೆಗೆ 2.5% ವಾಗುವ ಗುರಿಯನ್ನಷ್ಟೇ ಇಟ್ಟುಕೊಂಡಿದೆ.

ಇಡೀ ದೇಶಕ್ಕೆ ಇಷ್ಟೊಂದು ಮಕ್ಕಳ ಸಾವುಗಳುÀ ಮಾತ್ರವೇ ಅಲ್ಲ, ಉತ್ತರಪ್ರದೇಶದ ಆದಿತ್ಯನಾಥ ಸರಕಾರದ ನಿರ್ಲಕ್ಷ್ಯ ಕೂಡ ಭಾರೀ ಆಘಾತವನ್ನುಂಟು ಮಾಡಿವೆ. ಗೋರಖಪುರ ಆಸ್ಪತ್ರೆಯಲ್ಲಿ ಮಕ್ಕಳ ಸಾವುಗಳು ಮುಂದುವರೆಯುತ್ತಿದ್ದಾಗಲೇ, ಆದಿತ್ಯನಾಥ  ರಾಜ್ಯದಲ್ಲಿ ಒಂದು ಭವ್ಯ ಜನ್ಮಾಷ್ಟಮಿ ಆಚರಣೆಗೆ ಕರೆ ನೀಡಿದರು. ಪೋಲೀಸರು ಕೂಡ ಸುಯೋಗ್ಯ ರೀತಿಯಲ್ಲಿ ಜನ್ಮಾಷ್ಟಮಿ ಆಚರಿಸುವಂತೆ ಆದೇಶವನ್ನೂ ಕೊಟ್ಟರು. ಈ ನಿರ್ದೇಶನದ ಪ್ರಕಾರ ಪೋಲಿಸ್ ಮಹಾ ನಿರ್ದೇಶಕರು ಇಡೀ ಪೋಲೀಸ್ ಪಡೆಗೆ ಸೂಕ್ತ ಸೂಚನೆಗಳನ್ನು ಕೂಡ ಕೊಟ್ಟರು.

ಇಲ್ಲೊಂದು ದ್ವಿವಿಧ ಅಪಹಾಸ್ಯವಿದೆ- ಗೋರಖಪುರದ ಮಕ್ಕಳು ಮತ್ತು ಅವರ ಕುಟುಂಬಗಳ ಸಂಕಟಗಳ ಬಗ್ಗೆ ಭಂಡ ನಿರ್ಲಕ್ಷ್ಯ ಮತ್ತು ಒಂದು ಮತೀಯ ಹಬ್ಬವನ್ನು ಬಳಸಿಕೊಂಡು ಅದನ್ನು ಪೋಲಿಸ್ ಪಡೆ ಅಧಿಕೃತವಾಗಿ ಆಚರಿಸುವಂತೆ ಮಾಡಿ ಸಂವಿಧಾನಿಕ ಮೌಲ್ಯಗಳನ್ನು ಬುಡಮೇಲು ಮಾಡುವುದು. ಹೀಗೆ ಸ್ವಾತಂತ್ರ್ಯ ದಿನ ಮೋದಿಯವರು ಕೆಂಪು ಕೋಟೆಯಿಂದ ನೀಡುವ ಉಪದೇಶಗಳು ಮತ್ತು ಅವುಗಳ ವಾಸ್ತವ ಆಚರಣೆಗಳ ನಡುವೆ ಅಗಾಧ ಅಂತರವಿದೆ ಎಂಬುದನ್ನು ತೋರಿಸುತ್ತದೆ.