ತ್ರಿಪುರ ಮುಖ್ಯಮಂತ್ರಿಗಳ ಸ್ವಾತಂತ್ರ್ಯ ದಿನದ ಭಾಷಣದ ಸೆನ್ಸಾರ್

ಸಂಪುಟ: 
11
ಸಂಚಿಕೆ: 
37
Sunday, 3 September 2017

ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸುವ ಕ್ರಮ-ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡನೆ

ದೂರದರ್ಶನ ಮತ್ತು ಆಕಾಶವಾಣಿ ತ್ರಿಪುರದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್‍ರವರ ಸ್ವಾತಂತ್ರ್ಯ ದಿನದ ಭಾಷಣವನ್ನು ಪ್ರಸಾರ ಮಾಡಲು ನಿರಾಕರಿಸಿರುವುದನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ.

ಈ ಸಂದರ್ಭದ ಅವರ ಭಾಷಣವನ್ನು ದೂರದರ್ಶನ ಮತ್ತು ಆಕಾಶವಾಣಿ ಮುದ್ರಿಸಿಕೊಂಡಿತ್ತು. ಆದರೆ ನಂತರ ಅದನ್ನು ಮುದ್ರಿಸಿಕೊಂಡಂತೆ ಪ್ರಸಾರ ಮಾಡಲು ಸಾಧ್ಯವಿಲ್ಲ, ಅದನ್ನು ‘ಪುನರ್ರೂಪಿಸಬೇಕು’ ಎಂದು ಅವರಿಗೆ ತಿಳಿಸಿದವು.

ಇದು ಒಬ್ಬ ಮುಖ್ಯಮಂತ್ರಿ ಸ್ವಾತಂತ್ರ್ಯ ದಿನದಂದು ತನ್ನ ರಾಜ್ಯದ ಜನಗಳನ್ನು ಉದ್ದೇಶಿಸಿ ಮಾತಾಡುವ ಹಕ್ಕಿನ ಸಾರಾಸಗಟು ಉಲ್ಲಂಘನೆಯಾಗಿದೆ. ಇದು ತುರ್ತುಪರಿಸ್ಥಿತಿಯ ದಿನಗಳನ್ನು ನೆನಪಿಸುತ್ತದೆ. ಅದಕ್ಕಿಂತಲೂ ಮುಂದೆ ಹೋಗಿ ಒಂದು ರಾಜ್ಯದ ಚುನಾಯಿತ ಮುಖ್ಯಮಂತ್ರಿಗಳ ಬಾಯಿಯನ್ನೇ ಮುಚ್ಚಿಸುವ ಪ್ರಯತ್ನ ಮಾಡಿದೆ. ಕೇಂದ್ರ ಸರಕಾರ ಇಂತಹ ಸೆನ್ಸಾರ್‍ಶಿಪ್ ಮೂಲಕ ದೂರದರ್ಶನ/ ಆಕಾಶವಾಣಿ ಮತ್ತು ಪ್ರಸಾರ ಭಾರತಿಯ ಸ್ವಾಯತ್ತತೆಯನ್ನು ತುಳಿದು ಹಾಕಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಟೀಕಿಸಿದೆ.

ಈ ಪ್ರಸಾರವನ್ನು ನಿಷೇಧಿಸಲು ಹೊಣೆಗಾರರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅದು ಆಗ್ರಹಿಸಿದೆ. ಮೋದಿ ಸರಕಾರ ಪ್ರಸಾರ ಭಾರತಿಯನ್ನು ಸಮಾಚಾರ ಮತ್ತು ಪ್ರಸಾರ ಮಂತ್ರಾಲಯದ ಒಂದು ವಿಭಾಗದಂತೆ ಕಾಣುವುದನ್ನು ನಿಲ್ಲಿಸಬೇಕು ಎಂದು ಅದು ಹೇಳಿದೆ.

ಅತ್ತ ಸಹಕಾರಿ ಒಕ್ಕೂಟತತ್ವ ಎಂಬ ಜಪ, ಇತ್ತ ಮುಖ್ಯಮಂತ್ರಿಯ ದನಿ ಅಡಗಿಸಲು ಚಮಚಾಗಳಿಗೆ ಸೂಚನೆ-ಯೆಚುರಿ

ಈ ಕ್ರಮವನ್ನು ಬಲವಾಗಿ ಟೀಕಿಸುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿಯವರು ದೂರದರ್ಶನ ಬಿಜೆಪಿ ಅಥವ ಆರೆಸ್ಸೆಸ್‍ನ ಸ್ವಂತ ಆಸ್ತಿಯಲ್ಲ, ತ್ರಿಪುರ ಮುಖ್ಯಮಂತ್ರಿಗಳ ಭಾಷಣವನ್ನು ಪ್ರಸಾರ ಮಾಡಲು ಅದು ನಿರಾಕರಿಸಿರುವುದು ಪ್ರಜಾಪ್ರಭುತ್ವ-ವಿರೋಧಿ ಮತ್ತು ಕಾನೂನುಬಾಹಿರ ಎಂದು ಹೇಳಿದ್ದಾರೆ. ಪ್ರಧಾನ ಮಂತ್ರಿಗಳು ಸಹಕಾರಿ ಒಕ್ಕೂಟ ತತ್ವದ ಜಪ ಮಾಡುತ್ತಾರೆ, ಇನ್ನೊಂದೆಡೆಯಲ್ಲಿ  ಮುಖ್ಯಮಂತ್ರಿಗಳೂ ಸೇರಿದಂತೆ ಪ್ರತಿಪಕ್ಷಗಳವರ ದನಿಗಳು ಜನತೆಗೆ ತಲುಪದಂತೆ ಮಾಡಬೇಕೆಂದು ತನ್ನ ಚಮಚಾಗಳಿಗೆ ಸೂಚನೆ ನೀಡುತ್ತಾರೆ. ಇದು ಸರ್ವಾಧಿಕಾರಶಾಹಿಯಲ್ಲದೆ, ಅಘೋಷಿತ ತುರ್ತು ಪರಿಸ್ತಿತಿಯಲ್ಲದೆ ಇನ್ನೇನು ಎಂದು ಅವರು ಪ್ರಶ್ನಿಸಿದ್ದಾರೆ. ಇದರ ವಿರುದ್ಧ ಸಿಪಿಐ(ಎಂ), ತ್ರಿಪುರಾದ ಜನತೆ ಮತ್ತು ನಮ್ಮ ಎಲ್ಲನಾಗರಿಕರು ಹೋರಾಡುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.