Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಆದಿವಾಸಿಗಳಿಗೆ, ಬುಡಕಟ್ಟುಗಳಿಗೆ ಸ್ವಾತಂತ್ರ್ಯದ ‘ಅರ್ಥ ಮತ್ತು ಅನುಭವ’ ಈಗಲೂ ದೊರೆಯುತ್ತಿಲ್ಲ : ಪ್ರೊ. ದೇವಿ

ಸಂಪುಟ: 
11
ಸಂಚಿಕೆ: 
37
Sunday, 3 September 2017

ಧಾರವಾಡದಲ್ಲಿ “ದಲಿತ-ಬುಡಕಟ್ಟು ಮಹಾಕಾವ್ಯ: ಹಾಡು ಮತ್ತು ಅರ್ಥ”

- ಡಾ. ವಿಠ್ಠಲ ಭಂಡಾರಿ, ಕೆರೆಕೋಣ

ಮಹಾಕಾವ್ಯಗಳೆಂದರೆ ತಟ್ಟನೆ ನೆನಪಾಗೋದು ರಾಮಾಯಣ, ಮಹಾಭಾರತ; ಮಹಾಕಾವ್ಯಗಳ ನಾಯಕರೆಂದರೆ ರಾಮ, ಕೃಷ್ಣ, ಅರ್ಜುನ, ಧರ್ಮರಾಯ; ಮಹಾಕಾವ್ಯದ ಲಕ್ಷಣ ಎಂದರೆ ಅಷ್ಟಾದಶ ವರ್ಣನೆ, ಸಂಸ್ಕøತ ಭೂಯಿಷ್ಟ ಭಾಷಾ ಪ್ರಯೋಗ. ಮಹಾಪುರುಷರ ಯುದ್ಧೋನ್ಮಾದದ ವಿವರ; ಕಾವ್ಯದ ನಾಯಕನೆಂದರೆ ದೇವಾಂಶ ಸಂಭೂತ, ಪ್ರತಿನಾಯಕನೆಂದರೆ ದೈವ ವಿರೋದಿ;ü ಸಾವನ್ನು ಎದುರು ನೊಡವವನು; ಕಾವ್ಯದ ನಾಯಕಿ ಎಂದರೆ ನಾಯಕನ ವ್ಯಕ್ತಿತ್ವದ ಪ್ರವರ್ಧಮಾನಕ್ಕೆ ಪೂರಕ ಪಾತ್ರ: ರಥ ಏರು ಎಂದರೆ ಏರುವವಳು. ಬೆಂಕಿಗೆ ಹಾರು ಎಂದರೆ ಹಾರುವವಳು. ಕಾಡಿಗೆ ನಡೆ ಎಂದರೆ ನಡೆಯುವವಳು; ಸ್ವಂತ ವ್ಯಕ್ತಿತ್ವವೇ ಇಲ್ಲದ ಬೆದುರು ಬೊಂಬೆ ....... ಇದೆಲ್ಲವೂ ಮಹಾಕಾವ್ಯದ ಕುರಿತು ನಮ್ಮಲ್ಲಿರುವ ಸಿದ್ಧ ಉತ್ತರಗಳು. ಇವುಗಳನ್ನು ಇಟ್ಟುಕೊಂಡೇ ಕೂದಲು ಸೀಳುವ ಕೆಲಸ ಮಾಡುತ್ತಿದ್ದೇವೆ. ಇವುಗಳಲ್ಲಿಯೇ ಜೀವ ಪರವಾದ ಆಲೋಚನೆಗಳಿಗಾಗಿ ಹುಡುಕಾಡುತ್ತೇವೆ. ಈ ಕಾಲಕ್ಕೆ ಬೇಕಾದ ತರ್ಕವನ್ನು ಕಟ್ಟಿ ಕೊಡಲು ಹೆಣಗಾಡುತ್ತೇವೆ.

ಮಹಾಕಾವ್ಯಗಳ ಸಿದ್ಧ ಚೌಕಟ್ಟನ್ನು ಒಡೆಯುವ ಬುಡಕಟ್ಟು ಮಹಾಕಾವ್ಯಗಳು

ಆದರೆ ಮಹಾಕಾವ್ಯದ ಮೀಮಾಂಸೆಯನ್ನು ತಿರಸ್ಕರಿಸಿ ಆವರೆಗಿನ ಸ್ಥಾಪಿತ ಪುರಾಣ ಮೌಲ್ಯ/ಜೀವನ ಮೌಲ್ಯಗಳನ್ನು ಅಲ್ಲಗಳೆದು, ಏಕಮುಖಿ ಚಿಂತನೆಯ ವ್ಯಾಖ್ಯಾನವನ್ನೇ ತಿರಸ್ಕರಿಸಿ ಸಾವಿರದ ಸಂಸ್ಕøತಿ/ವೈವಿದ್ಯವನ್ನು ನಮ್ಮೆದುರು ನಮ್ಮದೆ ಜನಪದ ಮಟ್ಟಿನಲ್ಲಿ ತೆರೆದು ಕೊಳ್ಳುವ ಹತ್ತಾರು ಬುಡಕಟ್ಟು ಮಹಾಕಾವ್ಯಗಳು ಇದ್ದೂ ಇಲ್ಲದಂತೆ ಇವೆ. ಕರ್ನಾಟಕದ ಬಹುಭಾಗದಲ್ಲಿ ಇಂತಹ ಮಹಾಕಾವ್ಯ ಜನಪರ ಅಧ್ಯಯನಕಾರರ ಅಧ್ಯಯನ ಸಂಗತಿಯಾಗಿದೆಯೇ ಹೊರತು ಜನಮಾನಸದ ಸ್ಕೃತಿಯ ಭಾಗವೇ ಆಗಿಲ್ಲ.

ನಾಡಿನ ತುಂಬಾ ಎಷ್ಟೊಂದು ಮಹಾಕಾವ್ಯಗಳಿವೆ. ಮಲೆಮಾದೇಶ್ವರನ ಕಾವ್ಯ, ಮಂಟೇಸ್ವಾಮಿ ಮಹಾಕಾವ್ಯ, ಜುಂಜಪ್ಪನ ಕಾವ್ಯ, ಬಿಳಿಗಿರಿರಂಗನ ಕಾವ್ಯ, ಗಾಮೋಕ್ಕಲ ಕಾವ್ಯ, ಜಾನಪದ ಮಹಾಭಾರತಗಳು ...... ಒಂದೇ ಎರಡೇ?. ನೂರಾರು ಕಾವ್ಯಗಳು........ ಬದುಕು ಕಟ್ಟುವ ಕಥನಗಳು: ಬದುಕಿನ ಅರ್ಥ ಬಿಚ್ಚಿಡುವ ಜೋಳಿಗೆಗಳು...... ಬದುಕಿಗೆ ಹೊಸ ಅರ್ಥಕೊಡುವ ಜನಪದದ ತತ್ವಜ್ಞಾನಗಳವು. ಇಲ್ಲಿ ಬಹಿರಂಗ ಯುದ್ಧಗಳಿಲ್ಲ. ಎಲ್ಲವೂ ಅಂತರಂಗದ ಅವಲೋಕನವೇ: ಇಲ್ಲಿ ರಾಜ್ಯದ ವಿಸ್ತರಣೆ ಇಲ್ಲ. ರಾಜ್ಯದ ಗಡಿಯನ್ನು ಮೀರುವ ಪ್ರಕ್ರಿಯೆ, ಇಲ್ಲಿ ಭೂಮಿಯ ಹಕ್ಕುದಾರಿಕೆ ಇಲ್ಲ. ಭೂಮಿಯಲ್ಲಿ ಒಟ್ಟಾಗಿ ಬೆಳೆತೆಗೆವ, ನೇಗಿಲ ಮೊನೆಗೆ ಕಬ್ಬಿಣದ ಶೋಧದ ಕತೆ ಇದೆ.

ಇಲ್ಲಿ ಕ್ಷತ್ರಿಯ ಕುಮಾರರಾದ ರಾಮ, ಲಕ್ಷ್ಮಣ, ಅರ್ಜುನ, ಭೀಮರಿಲ್ಲ. ಭಂಗಿ ಸೇದುತ್ತಾ ತಿರುಗುವ ಹೊಲೆಯನೆಂದು ಕರೆಯಲಾಗುವ ಮಂಟೆಸ್ವಾಮಿ, ಮಾದಿಗ ಮಲೆಮಾದೇಶ್ವರ, ದನಕಾಯುವ ಅನಾಥ ಮೈಲಾರ ಲಿಂಗ, ಗೊಲ್ಲದ ಜುಂಜಪ್ಪ ಬುದುಕಿನ ಪ್ರೀತಿ ಹರಡುತ್ತಾ ಅಡ್ಡಾಡುವವರು. ರಾಮ ಹೇಳಿದಾಗ ಬೆಂಕಿಗೆ ಹಾರುವ ಸೀತೆಯರಿಲ್ಲ; ಬದಲಾಗಿ ಪಾತಿವ್ರತ್ಯ ಕಾಪಾಡಿಕೊಳ್ಳುತ್ತೇನೆಂದು ಭಾಷೆಕೊಡು ಎಂದು ಕೇಳಿದಾಗ ಅವನನ್ನು ತಿರಸ್ಕರಿಸುವ ಹೆಂಡತಿ ಸಂಕಮ್ಮನಂತವರೇ ಇದ್ದಾರೆ. ಒಟ್ಟಾಗಿ ಮಹಾಕಾವ್ಯದ ಸಿದ್ಧ ಚೌಕಟ್ಟನ್ನು, ಒಡೆದು ಹಾಕುವ ಇಂತಹ ದಲಿತ-ಬುಡಕಟ್ಟು ಮಹಾಕಾವ್ಯಗಳನ್ನು ಪಕ್ಕಕ್ಕೆ ತಳ್ಳುವ ಕ್ರಿಯೆ ಕೂಡ ಉದ್ದೇಶ  ಪೂರ್ವಕವೇ ಆಗಿದೆ; ಇದು ಈ ನಾಡಿನ ಸಾಂಸ್ಕøತಿಕ ರಾಜಕಾರಣದ ಒಂದು ಭಾಗವೇ ಆಗಿದೆ.

ಈ ಹಿನ್ನೆಲೆಯಲ್ಲಿ ಜೀವ ವಿರೋಧಿ ಸಿದ್ಧ ಮಾದರಿಯನ್ನು ಒಡೆಯುತ್ತಾ ನಮ್ಮ ನಡುವೆ ಇರುವ ಪರ್ಯಾಯ ಮಾದರಿಗಳನ್ನು ಶೋಧಿಸುತ್ತಾ ಹೋಗುವ “ಸಮುದಾಯ ಕರ್ನಾಟಕದ”ದ ಆಶಯದ ಭಾಗವಾಗಿ ಕಳೆದರಡು ವರ್ಷದಿಂದ ದಲಿತ-ಬುಡಕಟ್ಟು ಮಹಾಕಾವ್ಯವನ್ನು ಚರ್ಚೆಯ ಮುಖ್ಯನೆಲೆಗೆ ತರಲು ಪ್ರಯತ್ನಿಸುತ್ತಿದೆ. ಏಕ ದೇವತೆ, ಏಕಭಾಷೆ, ಏಕ ಆಹಾರ, ಏಕ ಉಡುಪು, ಏಕಸಂಸ್ಕೃತಿಯ ಜಪ ಒಂದೆಡೆ ನಡೆಯುತ್ತಿದೆ. ಈ ನಾಡಿನ ಮುಖ್ಯ ಅಸ್ಮಿತೆಯಾದ ಬಹು ದೇವತೆ, ಬಹು ಸಂಸ್ಕೃತಿ , ಬಹು ಭಾಷೆಯ ನೆಲೆಗಳನ್ನು ಪರಿಚಯಿಸುವ ಭಾಗವಾಗಿ ಧಾರವಾಡದಲ್ಲಿ ಸಮುದಾಯದ ಕರ್ನಾಟಕವು “ದಲಿತ-ಬುಡಕಟ್ಟು: ಹಾಡು ಮತ್ತು ಅರ್ಥ” ಕಾರ್ಯಕ್ರಮವನ್ನು ತುಂಬಿದ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಸಿತು. ಅಂತಾರಾಷ್ಟ್ರೀಯ ಬುಡಕಟ್ಟಿನ ದಿನ, ಕ್ವಿಟ್ ಇಂಡಿಯಾದ 75ನೇ ವರ್ಷದ ದಿನ ಮತ್ತು ನಾಗಾಸಾಕಿಯ ಮೇಲೆ ಬಾಂಬ್ ಹಾಕಿದ ನೋವಿನ ದಿನ...ದ ನೆಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಲೆ ಮಾದೇಶ್ವರ ಕಾವ್ಯ ಮತ್ತು ಮಂಟೆಸ್ವಾಮಿ ಕಾವ್ಯ, ಗೊಂದಲಿಗರ ಕಾವ್ಯ, ಚೌಡಿಕೆ ಪದ ಮತ್ತು ಅರ್ಜುನ ಜೋಗಿ ಆಖ್ಯಾನವನ್ನು ಪ್ರದರ್ಶಿಸಲಾಯಿತು. ನಂತರ ಹಕ್ಕಿ-ಪಿಕ್ಕಿ ಬುಡಕಟ್ಟಿನ ಬದುಕು ಬವಣೆ ಕುರಿತು ಸಾಕ್ಷ ಚಿತ್ರವನ್ನು ಪ್ರದರ್ಶಿಸಲಾಯಿತು.

ಸಾಮ್ರಾಜ್ಯಶಾಹಿ ಮತ್ತು ಆದಿವಾಸಿಗಳು

ಚೌಡಿಕೆ ಪದದ ವಾದ್ಯವನ್ನು ನುಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡರೆ ಉದ್ಘಾಟನಾ ಮಾತನ್ನು ಪೊ.ಜಿ.ಎನ್ ದೇವಿಯವರು ಆಡಿದರು. “ಅಗಷ್ಟ 9 ಅಂತಾರಾಷ್ಟ್ರೀಯ ಆದಿವಾಸಿ ದಿನ ಮತ್ತು ಅಂದೇ ಕ್ವಿಟ್ ಇಂಡಿಯಾ ಆಂದೋಲನವೂ ಪ್ರಾರಂಭವಾಯಿತು. ನಮಗೆ ಪೂರ್ಣ ಸ್ವಾತಂತ್ರ್ಯ ಸಿಗಬೇಕೆಂಬುದೇ ಕ್ವಿಟ್ ಇಂಡಿಯಾ ಆಂದೋಳನದ ಉದ್ದೇಶ. ಆದರೆ ಸ್ವ್ವಾತಂತ್ರ್ಯ ಬಂದು 70 ವರ್ಷಗಳು ಸಂದರೂ ನಮ್ಮಲ್ಲಿ ಸಾಕಷ್ಟು ಆದಿವಾಸಿ, ಬುಡಕಟ್ಟುಗಳಿಗೆ ಸ್ವಾತಂತ್ರ್ಯದ ಅರ್ಥ ಮತ್ತು ಅನುಭವ ಈಗಲೂ ದೊರೆತಿಲ್ಲ. ಇದೊಂದು ದುಃಖದ ವಿಚಾರ. ಜಗತ್ತಿನ ಎಲ್ಲಾ ದೇಶಗಳಲ್ಲೂ ಆದಿವಾಸಿಗಳಿಲ್ಲ. ಜರ್ಮನ್ ಇಟಲಿ ಫ್ರಾನ್ಸ್ ಮುಂತಾದ ದೇಶಗಳಲ್ಲಿ ಆದಿವಾಸಿಗಳಿಲ್ಲ. ಯುರೋಪ್ ದೇಶಗಳು ಎಲ್ಲೆಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿದ್ದಾರೋ ಅಲೆಲ್ಲ ಆದಿವಾಸಿಗಳನ್ನು ಕಾಣಬಹುದು. ಆದಿವಾಸಿಗಳೇ ಹೆಚ್ಚಿದ್ದಲ್ಲಿ ಅಲ್ಲಿಯ ಭೂಮಿಯನ್ನು ವಶಪಡಿಸಿಕೊಳ್ಳುವುದು ವಸಾಹತುಗಳಿಗೆ ಕಷ್ಟವಾಗಿತ್ತು. ಆದರೆ ರಾಜಾ ಮಾತ್ರ ಇದ್ದರೆ ಅವನೊಬ್ಬನೊಡನೆ ಕರಾರು ಮಾಡಿಕೊಂಡರಾಯಿತು. ಹೀಗಾದಾಗ ಭೂಮಿ ಮತ್ತು ಸಂಪತ್ತನ್ನು ಕಬಳಿಸುವುದು ಸುಲಭವಾಗುತ್ತಿತ್ತು.

ಯುರೋಪಿಯನ್ ದೇಶಗಳು ಯಾವಾಗ ಬೇರೆ ದೇಶಗಳ ಮೇಲೆ ಆಕ್ರಮಣ ಶುರು ಮಾಡಿದರೋ ಅಲ್ಲೆಲ್ಲ ರಾಜರು, ರಾಜ್ಯಗಳಂಥ ಸಂಸ್ಥೆಗಳು ಅಸ್ತಿತ್ವದಲ್ಲಿ ಇತ್ತೋ ಅಲ್ಲೆಲ್ಲ ನಿರ್ದಿಷ್ಟ ಒಂದು ಕರಾರನ್ನು ಅವರೊಡನೆ ಮಾಡಿಕೊಂಡು ಇಡೀ ರಾಜ್ಯವನ್ನೇ ತಮ್ಮ ವಶಕ್ಕೆ ಪಡೆದರು. ಆದರೆ ವಿಶ್ವದಲ್ಲಿ ಇನ್ನೂ ಅನೇಕ ದೇಶಗಳಿದ್ದವು. ಅಲ್ಲೆಲ್ಲ ಇಂಥ ರಾಜ್ಯ ವವ್ಯಸ್ಥೆ ನಿರ್ಮಾಣವಾಗಿರಲಿಲ್ಲ. ಅಂಥ ಜನರ ಜೊತೆಗೆ ಹೇಗೆ ವ್ಯವಹರಿಸಬೇಕೆಂದು ಈ ಫ್ರಾನ್ಸ ಜರ್ಮನ್ ಇಂಗ್ಲೆಂಡ್ ಗೆ ಅರ್ಥವಾಗಿರಲಿಲ್ಲ. ಸಂಕ್ಷಿಪ್ತವಾಗಿ ಹೇಳ ಬೇಕೆಂದರೆ ಆರ್ಥಿಕ ದೃಷ್ಟಿಕೋನದಲ್ಲಿ ಪ್ರತ್ಯೇಕ ನೋಟ ಹೊಂದಿದವರು ಈ ವಿಶ್ವದಲ್ಲಿದ್ದರು. ಅವರು ಈ ಜಗತ್ತನ್ನು ನೋಡುವ ದೃಷ್ಟಿಕೋನವೇ ಬೇರೆಯದಾಗಿತ್ತು.

ಅವರು ಎಲ್ಲರೂ ಸಮಾನರು ಎಂದುಕೊಂಡಿದ್ದರು. ಒಂದು ಕಡೆ ರಾಜ ಇನ್ನೊಂದು ಕಡೆ ಪ್ರಜೆ ಎಂಬ ತಿಳಿವಳಿಕೆ ಬೇಡವೇ ಬೇಡ ಎಂದುಕೊಂಡ ಯಾವ ಜನರಿದ್ದರೋ ಅಂಥವರ ಜೊತೆ ಯುರೋಪ್ ದೇಶಗಳ ಸಾಮ್ರಾಜ್ಯಶಾಹಿಗೆ ಈ ಜನರ ಭೂಮಿ ಹೇಗೆ ಕಿತ್ತುಕೊಳ್ಳುವುದು ಎಂಬ ಸಮಸ್ಯೆ ಎದುರಾಗಿತ್ತು. ಆದ್ದರಿಂದ ಇಂಗ್ಲೆಂಡ್ ಫ್ರೆಂಚ್ ಜರ್ಮನ್ ರು ಇಂಥ ಜನರನ್ನು, ರಾಜ ಶಾಹಿ ಅಲ್ಲದ ಸಮತಾವಾದಿಗಳು ಏನಿದ್ರಲ್ಲ ಅವರಿಗೆ, ಆದಿವಾಸಿ ಎಂದು ಇಂಡಿಜಿನಸ್ ಜನ ಎಂದು ಹೆಸರು ಕೊಟ್ಟುಬಿಟ್ಟರು. ಯಾವ ದೇಶದಲ್ಲಿ ಖಂಡಿತ ರಾಜ, ರಾಜ ವ್ಯವಸ್ಥೆಯೇ ಇರಲಿಲ್ಲವೋ ಅಲ್ಲಿ ಆದಿವಾಸಿಗಳನ್ನು ಅಕ್ಷರಶಃ ನಿರ್ನಾಮ ಮಾಡಿದರು, ಓಡಿಸಿದರು, ಕೊಂದುಹಾಕಿದರು. ಹೀಗೆ ರಾಜನೇ ಇಲ್ಲದ ಸಮಾಜ ವ್ಯವಸ್ಥೆಯಲ್ಲಿ ಹೇಗೆ ವ್ಯವಹರಿಸುವುದು ? ಹೇಗೆ ಭೂಮಿ ಪಡೆಯುವುದು ಎಂದು ಅರ್ಥವಾಗದೇ ಅವರನ್ನು ಛಿದ್ರಮಾಡಿದರು. ರಾಜ ಇದ್ದಲ್ಲಿ ಕರಾರು ಮಾಡಿಕೊಂಡು ಹಸ್ತಲಾಘವ ಮಾಡಿಕೊಂಡರು.

ಬ್ರಿಟಿಶರ ವಿರುದ್ಧ ಆದಿವಾಸಿ ಹೋರಾಟ

'ನಮ್ಮ ದೇಶದಲ್ಲಿ ಕೆಲವು ಜಾತಿಗಳು ಇದ್ದವು, ಕೆಲವು ಬುಡಕಟ್ಟುಗಳಿದ್ದವು. ಭಾರತದ ಜಾತಿ ವ್ಯವಸ್ಥೆಯಲ್ಲಿ ಶ್ರೇಷ್ಟರೆಂಬ ಮೇಲ್ಜಾತಿಗಳ ಜೊತೆಗೆ ಕರಾರು ಮಾಡಿಕೊಂಡರು. ಇಲ್ಲಿಯ ಬುಡಕಟ್ಟುಗಳನ್ನು ಊರ ಹೊರಗಿಟ್ಟರು. ಅವರ ಭೂಮಿಯನ್ನೆಲ್ಲ ವಶಕ್ಕೆ ಪಡೆದು ಅದನ್ನು ಸರ್ಕಾರದ ಭೂಮಿ ಎಂದು ಮಾಡಿಕೊಂಡರು. ತಮ್ಮನ್ನು ಆಳುವ ಪರಮಾಧಿಕಾರಕ್ಕೆ ಭೂಮಿಯನ್ನು ಬಿಟ್ಟುಕೊಟ್ಟಿದ್ದರಿಂದ ಮೂಲ ಮಾಲಿಕತ್ವ ಬೇರೆಯವರಿಗೆ ಹೋಯಿತು. ಈಗ ಅವರು ಗೇಣಿದಾರರಾಗಿ ಉಳಿಯುವಂತೆ ಆಯಿತು.

1863 ರಲ್ಲಿ ಇಂಥ ಜನರ ಯಾದಿ ತಯಾರಿ ಆಯಿತು. 1883-84 ರಲ್ಲಿ ಇಂಥ ಭೂಮಿ ಹೊಂದಿದವರ ಮೇಲೆ ಆಡಳಿತಾತ್ಮಕ ಕ್ರಮ ವಹಿಸಲು ಪ್ರಾರಂಭಿಸಿದರು. ಇಂಗ್ಲೆಂಡಿನ ಅರಣ್ಯ ಇಲಾಖೆ ಆ ದೇಶದಲ್ಲಿ ಇರಲಿಲ್ಲ. ಅದು ಇಲ್ಲಿಯೇ ಪ್ರಾರಂಭವಾಯಿತು. ಎಲ್ಲ ಭೂಮಿಯನ್ನೂ ಅರಣ್ಯ ಇಲಾಖೆಗೆ ವಹಿಸಿ ಕೊಡಲಾಯಿತು. ಈ ಅರಣ್ಯ ಇಲಾಖೆಯಿಂದ ಆದಿವಾಸಿ ಜನರು ದಬಾಳಿಕೆ ಒಳಗಾಗಿ ಬದುಕುವಂತಾಯಿತು. ಇವರ ಪೂರ್ವಜರು ಸಾವಿರಾರು ವರ್ಷಗಳಿಂದ ಈ ಭೂಮಿಯಲ್ಲಿ ವಾಸಿಸುತ್ತಿದ್ದರೂ ಅವರ ಮಾಲಿಕತ್ವದ ಈ ಜಮೀನುಗಳೆಲ್ಲ ಕಿತ್ತುಕೊಂಡ ಬ್ರಿಟಿಷರು ಅರಣ್ಯ ಇಲಾಖೆಗೆ ಕೊಟ್ಟರು. ಹಾಗೆ ಅರಣ್ಯ ಇಲಾಖೆಯ ದಮನಕಾರಿ ನೀತಿ ಪ್ರಾರಂಭವಾಯಿತು.

ಕಾರ್ಮಿಕರ ಹಕ್ಕುಗಳಿಗಾಗಿ ನಡೆದ ಹೋರಾಟ ಮೇ ದಿನ ಎಂದು ಪ್ರಸಿದ್ಧವಾದ ಸಮಯದಲ್ಲೇ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಕೆನಡಾ ಮುಂತಾದೆಡೆಗಳಲ್ಲಿ ಬುಡಕಟ್ಟು ಜನರ ಹೊಸ ಸಂಘರ್ಷವೂ ಶುರುವಾಯಿತು. ಭಾರತದಲ್ಲಿ ಆದಿವಾಸಿ ಹೋರಾಟ ಹದಿನೇಳನೇ ಶತಮಾನದಲ್ಲಿ ಶುರುವಾಯಿತು. ಬ್ರಿಟಿಷರಿಗೆ ಎದುರಾಗಿ ಇದು ಪ್ರಾಂರಂಭವಾಗಿರುವುದು ತಂಟ್ಯಾ ಭೀಮ್, ಉಮಾಜಿ ನಾಯ್ಕ ಮುಂತಾದವರು ಬ್ರಿಟಿಷರ ವಿರುದ್ಧ ಹೋರಾಡಿದರು. ಈ ಇತಿಹಾಸ ಎಲ್ಲೂ ಕೂಡ ದಾಖಲಾಗಿಲ್ಲ.

ಈ ಆದಿವಾಸಿಗಳು ತಮ್ಮ ಭೂಮಿ ಉಳಿಸಿಕೊಳ್ಳಲು ಆರ್ಥಿಕ ಪರ್ಯಾಯ ನೀತಿ ಎಂದರೆ ಜೀವನದ ಬಹುಮೂಲ್ಯ ಸಮಾನತಾ ಸಮಾಜದ ಆರ್ಥಿಕತೆಯ ರಕ್ಷಣೆಗೆ ಹೋರಾಡಿದರು. ಕೇವಲ ಭೂಮಿಗಾಗಿ ಅಲ್ಲ; ಸಮಾನತೆಯ ರಕ್ಷಣೆಗೆ ಹೋರಾಡಿದರು. ಇದನ್ನು ಎಲ್ಲರೂ ಮರೆತುಬಿಡುತ್ತಾರೆ.

ಆದಿವಾಸಿ ದಿನ : ಪ್ರಜಾಪ್ರಭುತ್ವದ ಅರ್ಥ ವಿಸ್ತಾರದ ದಿನ

1996 ರಲ್ಲಿ ವಿಶ್ವಸಂಸ್ಥೆಯು ವಿಶ್ವದ ಎಲ್ಲ ಆದಿವಾಸಿಗಳಿಗೆ ಒಂದು ಸ್ವತಂತ್ರ ಸಮುದಾಯದ ಮಾನ್ಯತೆ ನೀಡಲು ತೀರ್ಮಾನಿಸಿತು. ಅಂದಿನಿಂದ ಅಗಷ್ಟ 9 ಆದಿವಾಸಿ ದಿನವಾಗಿ ಆಚರಿಸಲಾಗುತ್ತದೆ. 1993 ರಲ್ಲಿ ಈ ಪ್ರಸ್ತಾಪವನ್ನು ವಿಶ್ವಸಂಸ್ಥೆಯಲ್ಲಿ ಇಟ್ಟಾಗ ಅಮೇರಿಕಾ, ಆಸ್ಟ್ರೇಲಿಯಾ ಕೆನಡಾ ಭಾರತ ದೇಶಗಳು ವಿರೋಧಿಸಿದ್ದವು. ಆದರೆ ಆಸ್ಟ್ರೇಲಿಯಾ ಪ್ರಧಾನಿ “ಎಲ್ಲ ಜನರ ಪರವಾಗಿ ಆದಿವಾಸಿ ಜನರ ಕ್ಷಮೆ ಕೇಳುವೆ’ ಎಂದರು. ಆದರೆ ನಮ್ಮ ದೇಶದಲ್ಲಿ ಅಂಥದ್ದು ಆಗಲೇ ಇಲ್ಲ.

ಭಾರತದಲ್ಲಿ ಅದೇ ವೇಳೆ ಆದಿವಾಸಿಗಳ ಅರಣ್ಯ ಹಕ್ಕುಗಳ ಕುರಿತು ಪ್ರಸ್ತಾಪ ಬಂತು. ಆ ಚರ್ಚೆಯಲ್ಲಿ ನಾನು ಅತ್ಯಂತ ಹತ್ತಿರದಿಂದ ಪಾಲ್ಗೊಂಡಿದ್ದೇನೆ. ಅಲ್ಲಿ ಏನೆಲ್ಲ ಸಂಘರ್ಷಗಳು ನಡೆದವು ನನಗೆ ಗೊತ್ತು. ಅರಣ್ಯ ಭೂಮಿಯಲ್ಲಿ ನೆಲೆಸಿದ ಬುಡಕಟ್ಟುಗಳಿಗೆ ಹಕ್ಕು ನೀಡಲು ಅರಣ್ಯ ಇಲಾಖೆ ವಿರೋಧಿಸಿತು. ಆದರೆ ಕಾನೂನು ಪಾಸಾಯಿತು. ಆದರೆ ಭೂಮಿ ಹಕ್ಕಿನ ಜೊತೆಗೆ ಅವರಿಗೆ ಸಾಂಸ್ಕøತಿಕ ಹಕ್ಕು ನೀಡುವ ಬಗ್ಗೆ ಯೋಚಿಸಲಾಗಿಲ್ಲ ಎಂಬುದು ದುಃಖದ ಸಂಗತಿ. ಇದೊಂದು ಕನಿಷ್ಟ ಹಕ್ಕು ಹೊರತೂ ಅಂತಿಮವಾದ ಹಕ್ಕಲ್ಲ.

ಭಾರತದಲಿ ಬೋಡೋ ಸಂತಾಲ್ ಆದಿವಾಸಿ ಭಾಷೆಗಳನ್ನು ಬಿಟ್ಟರೆ ಉಳಿದ ಬುಡಕಟ್ಟು ಭಾಷೆಗಳಿಗೆ ರಕ್ಷಣೆ ಇಲ್ಲ, ಮಾನ್ಯತೆ ಇಲ್ಲ, ಶೆಡ್ಯೂಲ್‍ನಲ್ಲಿ ಸೇರಿಸಿಲ್ಲದ ಕಾರಣ ಸಂವಿಧಾನದ ಮಾನ್ಯತೆ ಕೊಡಲಾಗಿಲ್ಲ. ಆದಿವಾಸಿಗಳಿಗೆ ಪ್ರತ್ಯೇಕ ಧರ್ಮವಿದೆ. ಜನ ಗಣತಿಯಲ್ಲಿ ಇವರ ಬಾಷೆಯನ್ನು ಗುರ್ತಿಸಿಲ್ಲ, ಧರ್ಮಕ್ಕೆ ಬೆಲೆ ಕೊಟ್ಟಿಲ್ಲ. ಉತ್ತರದ ಹಿಮಾಲಯ ಮತ್ತು ಈಶಾನ್ಯದಲ್ಲಿ ಅವರಿಗೆ ಮೂರು ಪ್ರತ್ಯೇಕ ಧರ್ಮವಿದೆ. ಅವರು ಬದುಕುವ ರೀತಿ ಜೀವನ ಲಕ್ಷಣ, ಭಾಷೆ ಅವರದೇ ಆದ ಜ್ಞಾನ ಶಿಸ್ತು ಮತ್ತು ಸ್ವತಂತ್ರ ಅಸ್ತಿತ್ವಕ್ಕೆ ಮಾನ್ಯತೆ ಕೊಡಲಾಗಿಲ್ಲ. ಇವರ ಬಾಷೆಗೂ ಬದುಕಿಗೂ ಸಂಬಂಧವಿದೆ. ಆದರೆ ನಮ್ಮ ದೇಶದಲ್ಲಿ ಅದಕ್ಕೆಲ್ಲ ಮಾನ್ಯತೆ ಸಿಕ್ಕಿಲ್ಲ. ನಮ್ಮ ಸಂಸ್ಕೃತಿಯ ಭಾಗವಾಗಿ ದೇವರನ್ನು ನೋಡುವ ಕ್ರಮ ಭಿನ್ನವಾಗಿದೆ.

ಭಗವಾನ್ ದಾಸ್ ಪಟೇಲ ರವರ ಮಹಾಭಾರತ, ಮಂಟೇಸ್ವಾಮಿ, ಮಲೆಮಾದೇಶ್ವರ ಕಾವ್ಯ ಇರಬಹುದು, ಛತ್ತಿಸಗಡದ ಭರ್ತನಿ ಇವರೆಲ್ಲ ಇರಬಹುದು ಹಾಗೂ ಇತ್ತೀಚೆಗೆ ಓರಿಸ್ಸಾದಲ್ಲಿ 3 ಆದಿವಾಸಿ ಮಹಾಕಾವ್ಯಗಳು ದೊರೆತದ್ದು ಇರಬಹುದು ಅವೆಲ್ಲವೂ ಕೂಡ ನಮ್ಮ ಮಹತ್ವದ ಸಾಂಸ್ಕøತಿಕ ಪರಂಪರೆಯ ಭಾಗವಾಗಿವೆ. ಇದರಲ್ಲಿ ನಮ್ಮದೇ ಆದ ಭಾಷೆ ಇದೆ, ಒಂದು ಅರ್ಥಶಾಸ್ತ್ರ ಇದೆ, ವಿಶ್ವವನ್ನು ನೋಡುವ ಪ್ರತ್ಯೇಕ ದೃಷ್ಟಿಕೋನವಿದೆ. ಈ ಎಲ್ಲಾ ವಿಷಯಗಳನ್ನು ನೆನಪು ಮಾಡಿಕೊಳ್ಳಲು, ಈ ನೆನಪುಗಳನ್ನು ಮುಂದಕ್ಕೆ ಒಯ್ಯಲು ಈ ದಿನದ ಆಚರಣೆಯಾಗುತ್ತಿದೆ. ಈ ದಿನ ಪ್ರಜಾಪ್ರಭುತ್ವ್ಕಕೆ ವಿಸ್ತಾರ ಅರ್ಥ ಕೊಡುವ ಮತ್ತು ಭೂಮಿ ಜೊತೆ ಸಂಬಂಧ ರೂಪಿಸುವ ವಿಶ್ವವನ್ನು ರಕ್ಷಿಸುವ ದಿನದ ಮಹತ್ವವಿದೆ. ಬೇರೆಯವರ ವೇದನೆಗಳನ್ನು ಅರ್ಥ ಮಾಡಿಕೊಳ್ಳುವ ಸಂವೇದನೆಯ ದಿನವೂ ಹೌದು.” ಎಂದು ಪ್ರೊ. ಜಿ ಎನ್ ದೇವಿ ವಿವರವಾಗಿ ಮಾತನಾಡಿದರು.

ನೆಲೆಗೊಳ್ಳುವ ಪೂರ್ವದ ಸ್ಥಿತಿ ಘರ್ಷಣೆ ಹೇಳುವ ಬುಡಕಟ್ಟು ಮಹಾಕಾವ್ಯಗಳು

ಕಾರ್ಯಕ್ರಮದ ಆಶಯ ಭಾಷಣ ಮಾಡಿದ ಕನ್ನಡ ವಿ ವಿ ಯ ಮಾಜಿ ಕುಲಪತಿಗಳಾದ ಪ್ರೊ. ಹಿ. ಚಿ ಬೋರಲಿಂಗಯ್ಯ ಮಾತನಾಡಿ “ಭಾರತದಾದ್ಯಂತ ಅನೇಕ ಬುಡಕಟ್ಟುಗಳು ತಮ್ಮದೇ ಆದ ರಾಮಾಯಣ ಮಹಾಭಾರತಗಳನ್ನು ಹಾಡಿಕೊಳ್ಳುತ್ತಿದ್ದರಾದರೂ ಸ್ಥಾಪಿತ ಮೌಲ್ಯಗಳಿಗೆ ಅವು ವಿರುದ್ಧವಾಗಿದ್ದುದರಿಂದಾಗಿ ಅವುಗಳನ್ನು ಮಾನ್ಯ ಮಾಡಲಿಲ್ಲ. ಮಹಾಕಾವ್ಯವೆಂದರೆ ಅದು ನೂರಾರು ಘಟನೆಗಳ ಮೊತ್ತವಾದ್ದರಿಂದ ಅಕ್ಷರ ಬಲ್ಲವನು ಮಾತ್ರ ಅಂಥದ್ದನ್ನು ರಚಿಸಬಲ್ಲೆನೆಂಬ ತಿಳುವಳಿಕೆಯೂ ಈ ನಿರ್ಲಕ್ಷಕ್ಕೆ ಕಾರಣವಿರಬಹುದು. ಇಡೀ ಭಾರತಕ್ಕೆ ಒಂದು ಸಂಸ್ಕøತಿ ಇದೆ, ಅದೇ “ಭಾರತೀಯ ಸಂಸ್ಕøತಿ” ಎಂಬ ಏಕಮುಖೀ ಚಿಂತನೆ ಈ ಅಭಿಪ್ರಾಯಕ್ಕೆ ಕಾರಣವಾಗಿರಬಹುದು. ಆದರೆ, ಈಗ ಒಂದು ದೇಶಕ್ಕೆ ಒಂದೇ ಸಂಸ್ಕøತಿ ಎಂಬುದಿರುವುದಿಲ್ಲ, ಅದರಲ್ಲೂ ಭಾರತದಂಥ ದೇಶ ಬಹುಮುಖೀ ಸಂಸ್ಕøತಿಯನ್ನು ಪ್ರತಿನಿಧಿಸುವ ಒಂದು ಸಂಕೀರ್ಣ ಭೂಪ್ರದೇಶವಾಗಿದ್ದು ಕೆಲವರು ಊಹಿಸುವಂಥ ಒಂದೇ ಸಂಸ್ಕøತಿ ಇರಲು ಸಾಧ್ಯವಿಲ್ಲ ಎಂಬ ತಿಳುವಳಿಕೆ ಗಟ್ಟಿಗೊಳ್ಳುತ್ತಿದೆ.” ಎಂದರು.

ಮುಂದುವರಿದು “ಇಡೀ ರಾಮಾಯಣ ಒಂದು ಸಾಮ್ರಾಜ್ಯದ ವಿಸ್ತರಣೆಗೆ ಸಂಬಂಧಿಸಿದ್ದು. ರಾಮನ ಪಯಣವೇ ಸಾಮ್ರಾಜ್ಯ ವಿಸ್ತರಣೆಯ ತವಕದಿಂದ ಕೂಡಿದ್ದು. ಮಹಾಭಾರತ ಅಂಥ ಒಂದು ಸಾಮ್ರಾಜ್ಯವನ್ನು ಹಂಚಿಕೊಳ್ಳುವ ತವಕಕ್ಕೆ ಸಂಬಂಧಿಸುತ್ತದೆ. ಒಂದು ಕಡೆ ನೆಲೆಗೊಂಡು ಒಂದು ನಾಗರೀಕತೆಯನ್ನು ಕಟ್ಟಿದ ನಂತರದ ಸ್ಥಿತಿಯನ್ನು ರಾಮಾಯಣ ಮಹಾಭಾರತಗಳು ಹೇಳುತ್ತವೆ. ಆದರೆ ಈ ಮೌಖಿಕ ಮಹಾ ಕಾವ್ಯಗಳಲ್ಲಿನ ಮೂಲತಃ ಅಲೆಮಾರಿಗಳೂ ಭೈರಾಗಿಗಳೂ ಆದ ಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಮೈಲಾರರು ಒಂದು ಕಡೆ ನೆಲೆಗೊಳ್ಳುವ ತವಕದಲ್ಲಿ ಇರುವವರು. ಹೀಗಾಗಿ ಈ ಮಹಾಕಾವ್ಯಗಳ ವಸ್ತುವೇ ಒಂದು ಕಡೆ ನೆಲೆಗೊಳ್ಳುವ ಪೂರ್ವದ ಸ್ಥಿತಿಯನ್ನೂ ಮತ್ತು ಆ ಸಂದರ್ಭದ ಘರ್ಷಣೆಗಳನ್ನೂ ಹೇಳುವಂಥದ್ದು. ಇರುವುದನ್ನು ವೈಭವಿಸುವ ಲಿಖಿತ ಮಹಾಕಾವ್ಯಗಳು ಕಾವ್ಯ ಸತ್ಯದ ಕಡೆಗೆ ಹೆಚ್ಚು ಗಮನ ಕೊಟ್ಟರೆ, ಇಲ್ಲದಿರುವುದಕ್ಕೆ ತುಡಿಯುವ ಜನಪದ ಮಹಾಕಾವ್ಯಗಳು ಜೀವನದ ಸತ್ಯಕ್ಕೆ ಹೆಚ್ಚು ಒತ್ತು ಕೊಟ್ಟಿವೆ ಎನ್ನಿಸುತ್ತದೆ.

ಹನ್ನೇರಡನೇ ಶತಮಾನದ ಕಾಲಕ್ಕೆ ಅತ್ಯಂತ ಪ್ರಗತಿಪರವಾಗಿದ್ದ ಆ ಗುಂಪು ನಂತರ ಕ್ರಮೇಣ ಒಂದು ಜಾತಿಯಾಗಿ ಮಾರ್ಪಟ್ಟು, ಕೆಲವು ಕಟ್ಟುಪಾಡುಗಳನ್ನು ವಿಧಿಸಿಕೊಂಡು, ತನ್ನ ಕಂದಕವನ್ನು ತಾನೇ ತೋಡಿಕೊಳ್ಳತೊಡಗಿದಾಗ ಇದರಿಂದ ಬೇಸತ್ತ ಕೆಳವರ್ಗದ ಕೆಲವು ನಾಯಕರು ಆ ಒಕ್ಕೂಟದಿಂದ ಸಿಡಿದು ತಮ್ಮ ತಮ್ಮ ದಾರಿಗಳನ್ನು ತಾವು ಹಿಡಿದಂತೆ ಕಾಣುತ್ತದೆ. ಶರಣರ ಜನಪರ ಚಳುವಳಿಯ ಮೂಲಕ ಚರಿತ್ರೆಯಲ್ಲಿಯೇ ಮೊದಲ ಬಾರಿಗೆ ಬೀದಿಗೆ ಬಂದ ಕೆಳವರ್ಗದ ಜನ ನಂತರದ ಅನಿರೀಕ್ಷಿತ ಸೋಲಿನಿಂದಾಗಿ ಹತಾಶರಾಗಿ ತಮ್ಮ ತಮ್ಮ ದಾರಿಗಳನ್ನು ತಾವು ಹಿಡಿದಂತೆ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ಮಾದೇಶ್ವರ ಮತ್ತು ಮಂಟೆಸ್ವಾಮಿಯವರನ್ನು ನಾವು ನೋಡಬೇಕಾಗಿದೆ.” ಎಂದರು.

ಬುಡಕಟ್ಟು ಮಹಾಕಾವ್ಯಗಳು ಪಠ್ಯಗಳಾಗಲಿ

ಸ್ವಾಗತ ಸಮಿತಿ ಅಧ್ಯಕ್ಷರಾದ ಕವಿವಿ ನಿವೃತ್ತ ಪ್ರಾಧ್ಯಾಪಕರಾದ ಡಾ. ಕೆ.ಆರ್. ದುರ್ಗಾದಾಸ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಎಸ್. ದೇವೇಂದ್ರಗೌಡ ಕಾರ್ಯಕ್ರಮ ನಿರೂಪಿಸಿದರು. ರಾಜ್ಯಾಧ್ಯಕ್ಷ ಅಚ್ಯುತ್ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಘಟಕದ ಅಧ್ಯಕ್ಷ ಗಂಗಾಧರ ಗಾಡದ ಉಪಸ್ಥಿತರಿದ್ದರು.

ಮೊದಲ ಗೋಷ್ಠಿಯಲ್ಲಿ ಮೈಸೂರಿನ ಕಲಾವಿದ ಗುರುರಾಜ ಮತ್ತು ಸಂಗಡಿಗರು ಮಂಟೇಸ್ವಾಮಿ ಮತ್ತು ಮಲೆಮಾದೇಶ್ವರ ಮಹಾಕಾವ್ಯಗಳ ಆಯ್ದ ಭಾಗಗಳನ್ನು ಪ್ರಸ್ತುತಪಡಿಸಿದರು. ಡಾ. ಹಿ.ಚಿ.ಬೋರಲಿಂಗಯ್ಯ ಅವರು ಮಹಾಕಾವ್ಯದ ಅರ್ಥ ವಿವರಣೆ ನೀಡಿದರು. ಎರಡನೇ ಗೋಷ್ಠಿಯಲ್ಲಿ ಬಾಗಲಕೋಟೆಯ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ್ ಮತ್ತು ಸಂಗಡಿಗರು ಗೊಂದಲಿಗರ ಹಾಡುಗಳನ್ನು ಮತ್ತು ಮುಧೋಳದ ಕಲಾವಿದೆ ಯಲ್ಲವ್ವ ಗಾಜರ ಹಾಗೂ ಸಂಗಡಿಗರು ಚೌಡಕಿ ಪದಗಳನ್ನು ಪ್ರಸ್ತುತಪಡಿಸಿದರೆ ಡಾ. ಕೆ.ಆರ್. ದುರ್ಗಾದಾಸ ಪದಗಳ ಅರ್ಥ ವಿವರಣೆ ನೀಡಿದರು.

ಸಮಾರೋಪ ಭಾಷಣ ಮಾಡಿದ ಉದಯ ಟಿವಿಯ ಹಿರಿಯ ಪತ್ರಕರ್ತ ಡಾ. ಜಗದೀಶ ಕೊಪ್ಪ ಮಾತನಾಡಿ “ ಭಾರತೀಯ ಸಂಸ್ಕøತಿ ಒಳಗೊಂಡಿರುವ ಬುಡಕಟ್ಟು ಮಹಾಕಾವ್ಯಗಳಲ್ಲಿಯ ಸಂದೇಶ ತತ್ವ ವಿಚಾರಗಳನ್ನು ಯುವ ಜನತೆಗೆ ತಿಳಿಸುವಂತಾಗಬೇಕು. ಮುಂದಿನ ಪಿಳಿಗೆಗೆ ಮುಂದುವರೆಯಲು ಬುಡಕಟ್ಟು ಮಹಾಕಾವ್ಯಗಳನ್ನು ಪಠ್ಯವಾಗಿಸಬೇಕು. ಮಾನವೀಯ ಮೌಲ್ಯಗಳನ್ನು ಕಟ್ಟಿಕೊಡುವ ಕೆಲಸವಾಗಲಿ” ಎಂದರು.

ಕರ್ನಾಟಕ ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಹುಸೇನ ಖಾನ ಅಧ್ಯಕ್ಷತೆ ವಹಿಸಿದ್ದರು. ಡಾ. ವಿಠ್ಠಲ ಭಂಡಾರಿ ಸ್ವಾಗತಿಸಿದರು. ಧಾರವಾಡ ಘಟಕದ ಕಾರ್ಯದರ್ಶಿ ಬಿ.ಐ.ಈಳಿಗೇರ ವಂದಿಸಿದರು. ರಂಜಿತಾ ಜಾಧವ ಕಾರ್ಯಕ್ರಮ ನಿರ್ವಹಿಸಿದರು. ನಂತರ ವಿನೋಧ ರಾಜ್ ಅವರ “ಹಕ್ಕಿ-ಪಿಕ್ಕಿ” ಬುಡಕಟ್ಟು ಜನಾಂಗದ ಸಾಕ್ಷ ಚಿತ್ರವನ್ನು ಪ್ರದರ್ಶಿಸಲಾಯಿತು.

ಭಿನ್ನ ಕಲಾತ್ಮಕ ಅನುಭವ- ವಾಸುದೇವ ಉಚ್ಚಿಲ

  • ‘ಬುಡಕಟ್ಟು ಕಾವ್ಯ’ ‘ಆಖ್ಯಾನ ವ್ಯಾಖ್ಯಾನ’ ಕಾರ್ಯಕ್ರಮವನ್ನು 2 ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ಹಮ್ಮಿಕೊಂಡಿತ್ತು.  ಜನಪದ ಕಾವ್ಯಗಳ ಓದು ಕೊಡುವ ಅನುಭವಕ್ಕಿಂತಲೂ, ಅವನ್ನು ಹಾಡುವ ಪ್ರದರ್ಶಿಸುವ ದಲಿತ-ಬುಡಕಟ್ಟು ಸಮುದಾಯಗಳ ನಿರೂಪಣೆಗಳು ಭಿನ್ನ ಕಲಾತ್ಮಕ ಅನುಭವವಾಗಿರುತ್ತದೆ ಎಂಬುದು ಶಿವಮೊಗ್ಗದ ಪ್ರೇಕ್ಷಕರಂತೆ ಧಾರವಾಡದ ಪ್ರೇಕ್ಷಕರ ಅನುಭವವೂ ಬಂದಿತು. ಪ್ರೊ.ಗಣೇಶ ದೇವಿ ಮತ್ತು ಪ್ರೊ.ಬೋರಲಿಂಗಯ್ಯ ಅವರ ಉಪನ್ಯಾಸಗಳು  ಮುಂದೆ ನಡೆದ ಜಾನಪದ ಕಲಾವಿದರು ನಿರೂಪಿಸಿದ ಆಖ್ಯಾನ-ವ್ಯಾಖ್ಯಾನಗಳನ್ನು ಅರ್ಥಮಾಡಿಕೊಳ್ಳಲು ಉತ್ತಮ ಭೂಮಿಕೆ ಒದಗಿಸಿತು.
  • ಈಗಲೂ ಬೇರೆ ಭಾಷೆಗಳ ಜೊತೆ ಹೋಲಿಸಿದರೆ ಕನ್ನಡದಲ್ಲೇ ಹೆಚ್ಚು ಜನಪದ ಮಹಾಕಾವ್ಯಗಳಿದ್ದು, 19 ಮಹಾಕಾವ್ಯಗಳು ಈಗಾಗಲೇ ಮುದ್ರಣಗೊಂಡಿವೆ. ಅಭಿಜಾತ ಮಹಾಕಾವ್ಯಗಳ ಜೊತೆಗೇನೇ ಇವೂ ಹುಟ್ಟಿ ಅಸ್ತಿತ್ವದಲ್ಲಿವೆ - ಪ್ರೊ. ಹಿ.ಚಿ. ಬೋರಲಿಂಗಯ್ಯ
  • ಸಮುದಾಯ ಕರ್ನಾಟಕದ ಕಾರ್ಯದರ್ಶಿ ದೇವೇಂದ್ರಗೌಡ, ರಾಜ್ಯ ಸಮಿತಿಯ ವಿಠಲ ಭಂಡಾರಿ, ರಂಜಿತಾ ಇವರುಗಳ ವಿಶೇಷ ಪರಿಶ್ರಮದಿಂದ ಕಾರ್ಯಕ್ರಮ ಜನಮೆಚ್ಚುಗೆ ಗಳಿಸಿತು. ಧಾರವಾಡದ 6 ಕಾಲೇಜುಗಳ ಸಾಹಿತ್ಯ ವಿದ್ಯಾರ್ಥಿಗಳು, ಜಿಲ್ಲೆಯ ಸಾಂಸ್ಕøತಿಕ ಆಸಕ್ತರು ನಾಲ್ಕುನೂರು ಜನ ಸೇರಿ ಭಾಗವಹಿಸುವಲ್ಲಿ ಸಂಘಟಕರ ಪರಿಶ್ರಮವನ್ನು ಮೆಚ್ಚಲೇ ಬೇಕಾಗಿದೆ.
  • ಹಕ್ಕಿಪಿಕ್ಕ ಬುಡಕಟ್ಟಿನ ಕುರಿತು ವಿನೋದರಾಜ್ ಅವರು ನಿರ್ದೇಶಿಸಿರುವ ಮಧುಭೂಷಣ ನಿರ್ಮಿಸಿದ “ಸಿಕ್ಕಿದ್ರೆ ಶಿಕಾರಿ ಇಲ್ದಿದ್ರೆ ಬಿಕಾರಿ” ಎಂಬ 90 ನಿಮಿಷಗಳ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಅಲೆಮಾರಿ ಸಮುದಾಯವೊಂದು ನಾಗರಿಕ ಸಮಾಜದ ಮಧ್ಯೆ ಕನಿಷ್ಟ ಅಗತ್ಯೆಗಳಿಗಾಗಿಯೂ ಪಡಿಪಾಟಲು ಅನುಭವಿಸುತ್ತಿರುವ ವಿವರ ಚಿತ್ರಣಗಳು ಇಂಥದೇ ಇತರ ದಲಿತ-ಬುಡಕಟ್ಟು ಸಮುದಾಯಗಳ ಬಗ್ಗೆ ಚಿಂತಿಸುವಂತೆ ಮಾಡುವ ಮೂಲಕ, ಇಡೀ ಬುಡಕಟ್ಟು ಉತ್ಸವಕ್ಕೆ ಉತ್ತಮ ಸಮಾಪ್ತಿ ನೀಡಿದೆ.