ಸ್ಫೂರ್ತಿದಾಯಕ ಆಹೋರಾತ್ರಿ ಸ್ವಾತಂತ್ರೋತ್ಸವ ಸತ್ಯಾಗ್ರಹ

ಸಂಪುಟ: 
11
ಸಂಚಿಕೆ: 
37
Sunday, 3 September 2017

ಸೆಪ್ಟಂಬರ್ 14ರ ಕಾರ್ಮಿಕರ ಮಹಾನಡಿಗೆ ಪೂರಕವಾಗಿ ಜಾಥಾಗಳ ನಂತರ ಆಗಸ್ಟ್ 14ರ ಸಂಜೆ 6 ಗಂಟೆಯಿಂದ ಬೆಳಿಗ್ಗೆ ಆಗಸ್ಟ್ 15ರ 6 ಗಂಟೆಯವರೆಗೆ ಆಹೋರಾತ್ರಿ ಸ್ವಾತಂತ್ರೋತ್ಸವ ಸತ್ಯಾಗ್ರಹವು ಕಾರ್ಮಿಕರಲ್ಲಿ ಸ್ಪೂರ್ತಿಯನ್ನು ತುಂಬಿದೆ. ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಕಾರ್ಮಿಕರ ಬದುಕಿಗೆ ಬರದ ಸ್ವಾತಂತ್ರ್ಯಕ್ಕಾಗಿ ಈ ಸತ್ಯಾಗ್ರಹವನ್ನು ನಡೆಸಲಾಗಿತ್ತು. ಮೊದಲ ಬಾರಿಗೆ ರಾಜ್ಯದ 85 ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ನಡೆದಿರುವ ಈ ಸ್ವಾತಂತ್ರೋತ್ಸವ ಸತ್ಯಾಗ್ರಹದಲ್ಲಿ ಒಟ್ಟು 19 ಸಾವಿರ ಕಾರ್ಮಿಕರು ಭಾಗವಹಿಸಿದ್ದರು.

“ಸಂವಿಧಾನದ ಆಶಯಗಳಾದ ಸಮಾನತೆ, ಸಹಬಾಳ್ವೆಯ ತತ್ವಗಳು ಇಂದಿಗೂ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಸ್ವಾತಂತ್ರ್ಯ ನಂತರದ 70 ವರ್ಷಗಳಲ್ಲಿ ಆಳಿದ ಸರ್ಕಾರಗಳು ಸಂವಿಧಾನದಲ್ಲಿ ಅಡಕವಾಗಿರುವ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಪ್ರಜಾಪ್ರಭುತ್ವ ದೇಶದ ಎಂಬ ಆಶಯವನ್ನು ಬಾಯಿಬಡಿಕೆಗೆ ಸೀಮಿತಗೊಳಿಸಿದ್ದಾರೆ. ಚುನಾಯಿತ ಜನಪ್ರತಿನಿಧಿಗಳು ಜನರಿಗಾಗಿ ಕೆಲಸ ಮಾಡದೇ, ದೊಡ್ಡ ಬಂಡವಾಳದಾರರ ಚೇಲಾಗಳಾಗಿದ್ದಾರೆ.”

- ನ್ಯಾಯಮೂರ್ತಿ ವಿ. ಗೋಪಾಲಗೌಡ (ಬೆಂಗಳೂರಿನಲ್ಲಿ)

 

ಈ ಅಹೋರಾತ್ರಿ ಸತ್ಯಾಗ್ರಹದಲ್ಲಿ ಬೆಂಗಳೂರು ಸೇರಿದಂತೆ ಬುದ್ಧಿಜೀವಿಗಳು ಪ್ರಗತಿಪರರು, ಕಲಾವಿದರು ಪಾಲ್ಗೊಂಡಿದ್ದರು. ತುಮಕೂರು, ಮೈಸೂರು, ಹಾಸನ, ಬಳ್ಳಾರಿಗಳಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಅಲ್ಲಿಯ ಪ್ರಗತಿಪರರು, ಕಲಾವಿದರು ಪಾಲ್ಗೊಂಡಿದ್ದಾರೆ. ಸತ್ಯಾಗ್ರಹದಲ್ಲಿ ಗಮನಿಸಬೇಕಾದ ಪ್ರಮುಖ ಅಂಶಗಳೆಂದರೆ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಮತ್ತು ಮಹಿಳೆಯರು ಸೇರಿದಂತೆ ರಾತ್ರಿಯಿಡೀ ಎಲ್ಲಾ ವಿಭಾಗಗಳ ಕಾರ್ಮಿಕರು ಭಾಗವಹಿಸಿದ್ದು. ಪ್ರತಿ ವರ್ಷ ಕೋಮುಗಲಭೆ ಸೃಷ್ಟಿಸುವ ಸಿಂಧಗಿ ಮತ್ತು ಇಂಡಿಗಳಲ್ಲಿ; ಕೋಮುವಾದಿ, ಭಾಷೆ, ಗಡಿ ಸಮಸ್ಯೆಗಳಿರುವ ಬೆಳಗಾಂನ ಗೋಕಾಕ, ಚಿಕ್ಕೋಡಿ, ರಾಯಬಾಗ, ಸವದತ್ತಿ, ರಾಮದುರ್ಗಾ ಮತ್ತು ನಿಪ್ಪಾಣಿ ಮತ್ತು ಕೊಡಗಿನಲ್ಲಿ; ಕಲಾವಳಿ ಪ್ರದೇಶಗಳಲ್ಲೊಂದಾದ ಉತ್ತರ ಕನ್ನಡ ಜಿಲ್ಲೆಯ 10 ತಾಲ್ಲೂಕುಗಳಲ್ಲಿ; ಹೊಸ ಪ್ರದೇಶಗಳಾದ ಶಿವಮೊಗ್ಗ, ಚಾಮರಾಜನಗರ, ಹಾವೇರಿ, ದಾವಣಗೆರೆ ಜಿಲ್ಲಾ ಕೇಂದ್ರಗಳಲ್ಲಿ; ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳಾದ ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ಯಾದಗಿರಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ - ಕಾರ್ಯಕ್ರಮ ನಡೆದಿದೆ. ಹಾಗೆಯೇ ಮೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ತಾಲ್ಲೂಕು ಕೇಂದ್ರಗಳಲ್ಲಿ ರಾತ್ರಿಯಿಡೀ ಕಾರ್ಯಕ್ರಮ ನಡೆದಿದೆ. ಸುರಿವ ಮಳೆಯಲ್ಲೂ ಮೈಸೂರು, ಹುಣಸೂರುಗಳಲ್ಲಿ ಸತ್ಯಾಗ್ರಹ ನಡೆದಿದೆ.

“ಭಾರತದ ಎಪ್ಪತ್ತನೇ ಸ್ವಾತಂತ್ರ್ಯೋತ್ಸವದ ಮೇಲೆ ಗೋರಖಪುರದ ಮಕ್ಕಳ ಸಾವಿನ ಸೂತಕದ ನೆರಳು ಬಿದ್ದಿದೆ”

- ಜಿ. ರಾಜಶೇಖರ, ಲೇಖಕರು-ಚಿಂತಕರು (ಉಡುಪಿಯಲ್ಲಿ)

 

ವಿವಿಧ ಕೇಂದ್ರಗಳಲ್ಲಿ ವೈವಿಧ್ಯಮಯವಾಗಿ ಕಾರ್ಯಕ್ರಮಗಳು ನಡೆದಿವೆ. ಬೆಂಗಳೂರಿನ ಮುಖ್ಯ ಕಾರ್ಯಕ್ರಮದಲ್ಲಿ ನಾಟಕ, ಹಾಡುಗಳು, ಪವಾಡ ರಹಸ್ಯ ಬಯಲು ಇತ್ಯಾದಿ; ತುಮಕೂರಿನಲ್ಲಿ ವಿಚಾರ ಗೋಷ್ಟಿ, ಕವಿಗೋಷ್ಟಿ; ಮಂಡ್ಯದಲ್ಲಿ ಸಂಜೆ ಪಂಜಿನ ಮೆರವಣಿಗೆ, ಕಲಬುರ್ಗಿಯಲ್ಲಿ ಮಧ್ಯರಾತ್ರಿ ಪಂಜಿನ ಮೆರವಣಿಗೆ, ಹೊಸಪೇಟೆಯಲ್ಲಿ ರಾತ್ರಿಯಿಡೀ ಸಂಗೀತ, ನೃತ್ಯ, ಕರಾಟೆ ಪ್ರದರ್ಶನ ಇತ್ಯಾದಿ - ಹೀಗೆ ವೈವಿಧ್ಯಮಯವಾಗಿ ನಡೆದಿವೆ. ಹೆಚ್ಚಿನ ಕೇಂದ್ರಗಳಲ್ಲಿ ಗೋರಖಪುರದ ಆಸ್ಪತ್ರೆಯಲ್ಲಿ ಕ್ರಿಮಿನಲ್ ನಿರ್ಲಕ್ಷದಿಂದ ಸಾವನ್ನಪ್ಪಿದ ಮಕ್ಕಳಿಗೆ ಸಂತಾಪಸೂಚಕವಾಗಿ ಮೌನ ಆಚರಿಸಲಾಯಿತು. ಹಲವು ಕಡೆ ಸುರಿದ ಮಳೆಯನ್ನು, ಜಿಲ್ಲಾಧಿಕಾರಿಗಳ ಪೋಲಿಸ್ ಅಧಿಕಾರಿಗಳ ಅನುಮತಿ ನಿರಾಕರಣೆಯನ್ನು ಲೆಕ್ಕಿಸದೆ ಕಾರ್ಯಕ್ರಮ ನಡೆದಿದೆ. ಕೆಲವು ಕೇಂದ್ರಗಳಿಂದ ಬಂದ ವಿವರವಾದ ವರದಿಗಳು ಇಲ್ಲಿವೆ :

ಬೆಂಗಳೂರು: ಬೆಂಗಳೂರಿನ ಟೌನ್‍ಹಾಲ್ ಮುಂದೆ ಜಮಾವಣೆಗೊಂಡ ಸಾವಿರಾರು ಕಾರ್ಮಿಕರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರು ಸತ್ಯಾಗ್ರಹವನ್ನು ಉದ್ಘಾಟಿಸಿದರು.

ಮೋದಿ 2019ರಲ್ಲಿ ಮತ್ತೆ ಅಧಿಕಾರ ಹಿಡಿಯುವೆ ಎನ್ನುವುದೇ ಒಂದು ದೊಡ್ಡ ಪವಾಡವಾಗಿದೆ. ಅಂತಹ ಪವಾಡವನ್ನು ಬಯಲು ಮಾಡುವ ಕೆಲಸ ನಮ್ಮ ಮುಂದಿದೆ. ದೇಶದಲ್ಲಿ ವಿರೋಧಿ ಶಕ್ತಿಗಳ ಹೋರಾಟದ ಅಸ್ತ್ರವನ್ನು ಮರೆತಂತಿದೆ. ಎಡಪಕ್ಷಗಳನ್ನು ಹೊರತುಪಡಿಸಿ. ಅದೇ ಕೆಟ್ಟ ರಾಜಕಾರಣ ಮಾಡಲು ಮುಂದಾಗುತ್ತಿದ್ದಾರೆ. ಮತ್ತೊಂದು ಸ್ವಾತಂತ್ರ್ಯ ಹೋರಾಟದ ಕಾಲ ಸನ್ನಿಹಿತವಾಗುತ್ತಿದೆ. ಹಿಂದೆ ಹೇಗೆ ಸ್ವಾತಂತ್ರ್ಯ ಚಳುವಳಿಯಲ್ಲಿ ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ದೊಡ್ಡ ಪಡೆ ಹೋರಾಟದಲ್ಲಿ ಧುಮಕಿತೋ ಹಾಗೇಯೇ ಇಂದು ಸಹ ಕಾರ್ಮಿಕರು-ವಿದ್ಯಾರ್ಥಿಗಳು ಮಾಡುವುದು ಅಗತ್ಯವಾಗಿದೆ.”

- ಕೆ..ಮರುಳಸಿದ್ದಪ್ಪ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರು (ಬೆಂಗಳೂರಿನಲ್ಲಿ) (ವಿವಿಧ ಮೂಲಗಳಿಂದ)

 

ಕಾರ್ಯಕ್ರಮದಲ್ಲಿ ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್‍ಸೇನ್,  ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಮರುಳಸಿದ್ದಪ್ಪ, ಚಿಂತಕರಾದ ಜಿ.ಕೆ.ಗೋವಿಂದರಾವ್, ಜಿ.ರಾಮಕೃಷ್ಣ, ಬರಹಗಾರ್ತಿ ಡಾ.ವಿಜಯಾ, ಎನ್‍ಎಸ್‍ಡಿ ಬೆಂಗಳೂರು ನಿರ್ದೇಶಕರಾದ ಸಿ,ಬಸವಲಿಂಗಯ್ಯ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ವಸುಂಧರಾ ಭೂಪತಿ, ಕಾತ್ಯಾಯನಿ ಚಾಮರಾಜ್‍ರವರು ಮಾತನಾಡಿದರು.

ಮಧ್ಯರಾತ್ರಿ 12 ಗಂಟೆಗೆ ಸಿಐಟಿಯುವಿನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾದ ತಪನ್‍ಸೇನ್‍ರವರು ಧ್ವಜಾರೋಹಣ ನೆರವೇರಿಸಿದರು.

ಚಿತ್ರ ನಿರ್ದೇಶಕ ಬಿ.ಸುರೇಶ, ಪ್ರೋ.ಚಂದ್ರಪ್ಪ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷರಾದ ಜಿ.ಸಿ.ಬಯ್ಯಾರೆಡ್ಡಿ, ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರಾಜ್ಯ ಪದಾಧಿಕಾರಿಗಳಾದ ವಿಜೆಕೆ ನಾಯರ್, ಆರ್.ಶ್ರೀನಿವಾಸ್,  ಪಿ.ಕೆ.ಪರಮೇಶ್ವರ್, ಕೆ.ಎನ್.ಉಮೇಶ್, ಎನ್.ಪ್ರತಾಪ್‍ಸಿಂಹ, ಹೆಚ್.ಎನ್.ಗೋಪಾಲಗೌಡ, ಬಿ.ವಿ.ರಾಘವೇಂದ್ರ, ಜಿಲ್ಲಾ ಮುಖಂಡರಾದ ಬಿ.ಎನ್.ಮಂಜುನಾಥ್, ಪಿ.ಮುನಿರಾಜು, ಟಿ.ಲೀಲಾವತಿ,  ಮತ್ತಿತರರು ಭಾಗವಹಿಸಿದ್ದರು.

ಅಂದಿನ ದಾಖಲೆ ಧಾರಾಕಾರ ಮಳೆಯಲ್ಲೂ ಸಹ ಕಾರ್ಮಿಕರು ಉತ್ಸಾಹದಿಂದ ಭಾಗವಹಿಸಿದ್ದರು. ಭೂಮ್ತಾಯಿ ಬಳಗವು ಹೋರಾಟದ ಹಾಡುಗಳು, ಬಿಜಿವಿಎಸ್‍ನಿಂದ ಪವಾಡ ರಹಸ್ಯ ಬಯಲು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಸತತ 16 ದಿನಗಳ ಕಾಲ ಇಡೀ ರಾಜ್ಯವ್ಯಾಪಿ ಜಾಥಾದಲ್ಲಿ ಭಾಗವಹಿಸಿದ್ದ ನಾಟಕ ತಂಡವು `ನಿದ್ದೆಯು ನಮಗಿಲ್ಲ ಎದ್ದೇಳಿ’ ಎಂಬ ನಾಟಕವನ್ನು ಪ್ರದರ್ಶಿಸಿದರು.

ತುಮಕೂರು: ಸತ್ಯಾಗ್ರಹದ ಭಾಗವಾಗಿ ಸ್ವಾತಂತ್ರ ಭಾರತದ 70 ವರ್ಷಗಳ ಸಾಧನೆ 4 ಸವಾಲುಗಳು ಎಂಬ ವಿಚಾರ ಮಂಥನ ಗೋಷ್ಠಿ ನಡೆಯಿತು. ಪ್ರೋ.ಕೆ.ದೊರೈರಾಜು, ಸಿ.ಯತಿರಾಜು, ಪ್ರೋ.ಜಿ.ಎಂ.ಶ್ರೀನಿವಾಸ್, ಡಾ.ಓ.ನಾಗರಾಜು, ಕೊಟ್ಟೂರು ಶಂಕರ್, ಜಿ.ಕಮಲ ವಿಚಾರಗಳನ್ನು ಮಂಡಿಸಿದರು. ಅಧ್ಯಕ್ಷತೆ ಸೈಯದ್ ಮುಜೀಬ್ ವಹಿಸಿದ್ದರು.
ನಂತರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಜಾ.ಹ.ರಮಾಕುಮಾರಿ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಡಾ.ಸೊ.ಮು.ಭಾಸ್ಕರಾಚಾರ್ಯ, ಈಚನೂರು ಇಸ್ಮಾಯಿಲ್, ಬಿಳಿಗೆರೆ ಕೃಷ್ಣಮೂರ್ತಿ, ರಿಜ್ವಾನ್ ಷಾ ಹೊರಕೆರೆ, ನಿತ್ಯಾತೀತಾ, ಕೆ.ಇ.ಸಿದ್ಧಯ್ಯ, ಡಾ. ಅರುಂತಿ, ಸಂತೋಷ ಮಡೆನೂರ ಕವನ ವಾಚಿಸಿದರು. ಈ ಮಧ್ಯೆ ಸತ್ಯಾಗ್ರಹದ ಸ್ಥಳಕ್ಕೆ ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾದ ತಪನ್‍ಸೇನ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿಸುಂದರಂ ಅವರು ಆಗಮಿಸಿ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು.

ಧಮಕಿಗೆ ಜಗ್ಗದ ಕಾರ್ಮಿಕರು

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿ ಸತ್ಯಾಗ್ರಹದ ಸ್ಥಳಕ್ಕೆ ಬಂದ ತಾಲ್ಲೂಕು ದಂಡಾಧಿಕಾರಿಯ ಧಮಕಿ ಹಾಕಿ ಕಾರ್ಯಕ್ರಮವನ್ನು ಅಡ್ಡಿ ಮಾಡಿದರು. ಇದ್ಯಾವುದಕ್ಕೂ ಜಗ್ಗದ ಕಾರ್ಮಿಕರು ಮೈಕ್ ಕಿತ್ತು ಹಾಕಿದರೂ ಸಹ ಸತ್ಯಾಗ್ರಹವನ್ನು ಮುಂದುವರಿಸಿದರು. ತಿಪ್ಪೇಸ್ವಾಮಿ, ನಿಂಗಣ್ಣ, ಮತ್ತಿತರರು ಭಾಗವಹಿಸಿದ್ದರು.