ಬಯಲಾಯಿತು `ದೇವಮಾನವ'ರೊಂದಿಗೆ ಬಿಜೆಪಿ ಸಂಬಂಧ

ಸಂಪುಟ: 
37
ಸಂಚಿಕೆ: 
11
date: 
Sunday, 3 September 2017
Image: 

ಪ್ರಕಾಶ್ ಕಾರಟ್
 

ಬಿಜೆಪಿ ಸರಕಾರಗಳು ಮತ್ತು ಆರ್‍ಎಸ್‍ಎಸ್ ಸಂಘಟನೆಗಳ ಕೃಪಾಪೋಷಣೆಯೊಂದಿಗೆ ಈ ದೇವಮಾನವರು ಧಾರ್ಮಿಕತೆಯನ್ನು ವಾಣಿಜ್ಯ-ವ್ಯಾಪಾರ ಉದ್ದೇಶಗಳಿಗೆ ತುಂಬಾ ಲಾಭದಾಯಕವಾಗಿ ಮಿಳಿತಗೊಳಿಸುತ್ತಾರೆ. ಅವರಿಗೆ ಸಿಗುವ ರಾಜಕೀಯ ಬೆಂಬಲವೇ ಅವರು ತಾವು ಕಾನೂನಿಗೆ ಅತೀತರಾದವರು ಎಂಬಂತೆ ವರ್ತಿಸಲು ಕಾರಣವಾಗಿದೆ.

ಎಲ್ಲಾ  ಹೊಲಸು  ಸನ್ನಿವೇಶಗಳ  ಕಾರ್ಮೋಡಗಳ  ನಡುವೆಯೂ, ಗುರ್ಮಿತ್ ಸಿಂಗ್-ಡೇರಾ ಸಚ್ಚಾ ಸೌದಾ ಪ್ರಕರಣದಿಂದ ಒಂದು  ಬೆಳ್ಳಿರೇಖೆ  ಹೊಮ್ಮಿದೆ - ಬಿಜೆಪಿ ಮತ್ತು ಢೋಂಗಿ  ಗುರುಗಳು  ಹಾಗೂ  ಬಾಬಾಗಳ ನಡುವಿನ ವಂಚಕ ಸಂಬಂಧವನ್ನು ಬಯಲುಗೊಳಿಸಿದ್ದೇ ಆ ಉತ್ತಮ ಬೆಳವಣಿಗೆಯಾಗಿದೆ.

ಅತ್ಯಾಚಾರ ಆರೋಪಗಳ ಮೇಲೆ `ದೇವಮಾನವ' ಗುರ್ಮಿತ್ ಸಿಂಗ್‍ಗೆ ಶಿಕ್ಷೆಯಾಗಿರುವುದು ಮತ್ತು ಆತನ ಬೆಂಬಲಿಗರು ಪಂಚಕುಲಾ ಮತ್ತಿತರರ ಸ್ಥಳಗಳಲ್ಲಿ ನಡೆಸಿರುವ ಹಿಂಸಾಚಾರಗಳು ಬಿಜೆಪಿ ಮತ್ತು ಈ ರೀತಿಯ ಆಧ್ಯಾತ್ಮಿಕ ಮುಕ್ತಿ  ಕೊಡಿಸುವುದಾಗಿ ಹೇಳುವ ಢೋಂಗಿ ಬಾಬಾಗಳ ನಡುವಿನ ರಾಜಕೀಯ ಸಖ್ಯವನ್ನು ಅನಾವರಣಗೊಳಿಸಿದೆ.

2014ರ ಅಕ್ಟೋಬರ್‍ನಲ್ಲಿ ನಡೆದ ಅಸೆಂಬ್ಲಿ ಚುನಾವಣೆಗಳಲ್ಲಿ ಬಿಜೆಪಿಗೆ ಮತ ನೀಡುವಂತೆ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ತನ್ನ ಬೆಂಬಲಿಗರಿಗೆ ಕರೆ ನೀಡಿದ್ದ. ಇದಕ್ಕೆ ತಕ್ಕಂತೆ ಋಣಿಯಾಗಿದ್ದ ಬಿಜೆಪಿ, ಗುರ್ಮಿತ್ ಸಿಂಗ್ ಮತ್ತು ಡೇರಾವನ್ನು ಹಾಡಿ ಹೊಗಳಿತ್ತು. 47 ಬಿಜೆಪಿ ಶಾಸಕರ ಪೈಕಿ 19 ಮಂದಿ ಆತನನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದರು. ಹರ್ಯಾಣದ  ಮನೋಹರಲಾಲ್  ಖಟ್ಟರ್  ಸಂಪುಟದ ಇಬ್ಬರು  ಸಚಿವರು ತಮ್ಮ ಶಾಸಕರ ನಿಧಿಯಿಂದ ಡೇರಾದ ಚಟುವಟಿಕೆಗಳಿಗೆ ಅನುದಾನಗಳನ್ನು ನೀಡಿದ್ದರು.  ಚುನಾವಣೆ  ಪ್ರಚಾರದ ವೇಳೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಬಾಬಾನನ್ನು ಹೊಗಳಿದ್ದರು.

ಆದ್ದರಿಂದ ದೇವಮಾನವನ ಜೊತೆಗಿನ ಈ ಮೈತ್ರಿಯ ಫಲವಾಗಿಯೇ ನ್ಯಾಯಾಧೀಶರ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಡೇರಾದ ಸಾವಿರಾರು ಜನರು ಪಂಚಕುಲಾದಲ್ಲಿ ಬಂದು ಸೇರಲು ಖಟ್ಟರ್ ಸರಕಾರ ಮಾನಮರ್ಯಾದೆಯಿಲ್ಲದೆ ಅವಕಾಶ ಕಲ್ಪಿಸಿತು. ಜನರು ಜಮಾಯಿಸುವುದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳಲು ಅದು ನಿರಾಕರಿಸಿತು.

ಅದರ ಈ ಕರ್ತವ್ಯಲೋಪದ ಫಲವಾಗಿ 38 ಜನರ ಪ್ರಾಣ ಬಲಿಯಾಯಿತು. ಅಪಾರ ಪ್ರಮಾಣದಲ್ಲಿ ಸರಕಾರಿ ಮತ್ತು ಖಾಸಗಿ ಆಸ್ತಿಪಾಸ್ತಿ ನಾಶವಾಯಿತು. ರಾಜಿನಾಮೆ ನೀಡುವಂತೆ ಬಿಜೆಪಿ ಖಟ್ಟರ್‍ಗೆ ಸೂಚಿಸುವುದಿಲ್ಲ, ಯಾಕೆಂದರೆ ಆ ಪಕ್ಷ ಚುನಾವಣೆಗಳಲ್ಲಿ ಬಾಬಾನ ಬೆಂಬಲ ಯಾಚಿಸಿತ್ತು.

ಅದೇನೇ ಇರಲಿ. ಗುರ್ಮಿತ್ ಸಿಂಗ್ ಜೊತೆಗಿನ ಸಂಬಂಧ ಒಂದು ಪ್ರತ್ಯೇಕ ಪ್ರಕರಣವಲ್ಲ. ಈ ಮೊದಲು ಅನೇಕ ಸಂದರ್ಭಗಳಲ್ಲಿ ಕಾಂಗ್ರೆಸ್ ಪಕ್ಷ ಕೂಡ ಬಾಬಾ ಬೆಂಬಲ ಕೋರಿತ್ತು ಎನ್ನುವುದು ಸತ್ಯ. ಆದರೆ ಇಂಥ ಹೊಸ ಯುಗದ ಗುರು ಮತ್ತು ಬಾಬಾಗಳೊಂದಿಗೆ ಬಿಜೆಪಿ-ಆರ್‍ಎಸ್‍ಎಸ್ ಕೂಟ ಸಾವಯವ  ಸಂಪರ್ಕ ಹೊಂದಿದೆ. ಬಿಜೆಪಿ-ಆರ್‍ಎಸ್‍ಎಸ್ ಜೊತೆ ಸಂಪರ್ಕವಿರುವ ಇಂಥ ಅನೇಕ ದೇವಮಾನವರು ಮತ್ತು ಅವರ ಸಾಮ್ರಾಜ್ಯಗಳನ್ನು ದೇಶದಾದ್ಯಂತ ಕಾಣಬಹುದು.

ಗುಜರಾತ್‍ನಲ್ಲಿ  ಬಿಜೆಪಿ  ಬೆಂಬಲದೊಂದಿಗೆ ಪ್ರವರ್ಧಮಾನಕ್ಕೆ ಬಂದ ಇನ್ನೊಬ್ಬ  ಕುಖ್ಯಾತ  ದೇವಮಾನವ  ಅಸಾರಾಮ್ ಬಾಪು. ಆತ ಮೊದಲು ಗುಜರಾತ್‍ನಲ್ಲಿ  ಆಶ್ರಮ  ಸ್ಥಾಪಿಸಿ ನಂತರ  ತನ್ನ  ಜಾಲವನ್ನು ದೇಶದಾದ್ಯಂತ ವಿಸ್ತರಿಸಿದ. ಆತ ಬಿಜೆಪಿಯ ಕಟ್ಟಾ ಬೆಂಬಲಿಗನಾಗಿದ್ದು ಅತ್ಯಾಚಾರ ಆರೋಪದ ಮೇಲೆ ತನ್ನ ಮಗನೊಂದಿಗೆ 2013ರಿಂದ ಜೈಲಿನಲ್ಲಿದ್ದಾನೆ.

ಬಿಜೆಪಿ ಆಡಳಿತದಡಿಯಲ್ಲಿ ಬೆಳೆಯುತ್ತಿರುವ ಇತರ ಪ್ರಮುಖ `ಬಾಬಾಗಳು' ಮತ್ತು `ಗುರುಗಳು' ಎಂದರೆ ರಾಮದೇವ್ ಮತ್ತು ಶ್ರೀ ಶ್ರೀ ರವಿಶಂಕರ್.  ಯೋಗ ಗುರು ಎಂದು ಹೇಳಿಕೊಳ್ಳುವ ರಾಮದೇವ್ ಒಬ್ಬ ದೊಡ್ಡ ವಾಣಿಜ್ಯೋದ್ಯಮಿಯಾಗಿದ್ದಾನೆ. ಬಿಜೆಪಿ ಆಡಳಿತದ ರಾಜ್ಯ ಸರಕಾರಗಳು ಮತ್ತು ಕೆಲವು ಕಾಂಗ್ರೆಸ್ ಸರಕಾರಗಳ  ಕೃಪಾಶೀರ್ವಾದಿಂದ ಆತ  ತನ್ನ ಆಶ್ರಮಗಳು, ಯೋಗ ಸಂಸ್ಥೆಗಳು ಮತ್ತು ಪತಂಜಲಿ ಉತ್ಪನ್ನಗಳಿಗಾಗಿ ಉತ್ತರಾಖಂಡ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಜಾರ್ಖಂಡ್, ರಾಜಸ್ತಾನ ಮತ್ತು ಅಸ್ಸಾಂನಲ್ಲಿ ಸಾವಿರಾರು ಎಕರೆ ಜಮೀನನ್ನು ಬಾಚಿಕೊಂಡಿದ್ದಾನೆ.  ಸೌಂದರ್ಯವರ್ಧಕಗಳು ಮತ್ತು ಇತರ ವಸ್ತುಗಳನ್ನು ತಯಾರಿಸುವ ಆತನ  ಪತಂಜಲಿ  ಸಂಸ್ಥೆಯ ವಹಿವಾಟು 2016-17ರಲ್ಲಿ 10,561 ಕೋಟಿ ರೂಪಾಯಿ ಆಗಿತ್ತು. ನರೇಂದ್ರ ಮೋದಿಯ ಕಟ್ಟಾ ಬೆಂಬಲಿಗನಾದ ರಾಮದೇವ್ ತನ್ನ ಸತ್ಸಂಗಗಳಲ್ಲಿ  ಹಿಂದೂತ್ವ  ಮೌಲ್ಯಗಳನ್ನು ಪ್ರತಿಪಾದಿಸುತ್ತಾನೆ.

ಈ ಗುರುಗಳು ಮತ್ತು ದೇವಮಾನವರು ಕಾನೂನಿನ ಯಾವುದೇ ಭಯವಿಲ್ಲದೆ ಹೇಗೆ ವರ್ತಿಸುತ್ತಾರೆ ಎನ್ನುವುದಕ್ಕೆ  ರವಿಶಂಕರ್‍ರ  ಆರ್ಟ್  ಆಫ್ ಲಿವಿಂಗ್ 2016ರ ಮಾರ್ಚ್‍ನಲ್ಲಿ ನಡೆಸಿದ ವಿಶ್ವ  ಸಂಸ್ಕøತಿ ಉತ್ಸವದ ವೇಳೆ ಅವರು ನಡೆದುಕೊಂಡ ರೀತಿಯೇ ಸಾಕ್ಷಿಯಾಗಿದೆ.  ಯಮುನಾ ನದಿ ದಡದ ಮೇಲೆ ನಡೆದ ಈ ಉತ್ಸವ ಪ್ರವಾಹ ಪ್ರಸ್ತಭೂಮಿಯಲ್ಲಿ  ಜೀವ ಪರಿಸರ ಮತ್ತು ಜೀವ ವೈವಿಧ್ಯ ವ್ಯವಸ್ಥೆಗೆ ಇನ್ನಿಲ್ಲದಂತೆ ಹಾನಿ ಮಾಡಿತ್ತು. ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಮೇಲೆ ಹಸಿರು ಪೀಠ  ಐದು ಕೋಟಿ ರೂಪಾಯಿ ದಂಡ ವಿಧಿಸಿದರೂ ಆ  ನಿರ್ಧಾರವನ್ನು  ರವಿಶಂಕರ್  ಪ್ರಶ್ನಿಸಿದ  ಹಾಗೂ ದಂಡ  ಏನಾದರೂ ವಿಧಿಸಬೇಕಿದ್ದರೆ ಅದು ಹಸಿರು ಪೀಠದ ವಿರುದ್ಧ  ಎಂದು ದುರಹಂಕಾರದಿಂದ ಹೇಳಿದ. ಸ್ವತಃ ನರೇಂದ್ರ ಮೋದಿಯೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ತನಗೆ ಸರಕಾರದ ಬೆಂಬಲ ಸಿಕ್ಕೇ ಸಿಗುತ್ತದೆ ಇದೆ ಎಂಬುದು ಆತನ ಲೆಕ್ಕಾಚಾರವಾಗಿತ್ತು.

ಇತ್ತ ದಕ್ಷಿಣದಲ್ಲಿ, ಇಶಾ ಫೌಂಡೇಶನ್‍ನ ಜಗ್ಗಿ ವಾಸುದೇವ ಕೊಯಮತ್ತೂರಿನಲ್ಲಿ ಸುತ್ತಮುತ್ತಲ ಹಳ್ಳಿಗಳ ಜಮೀನನ್ನು ಅತಿಕ್ರಮಿಸಿ ಆಶ್ರಮವನ್ನು ಸ್ಥಾಪಿಸಿದ್ದ. ಆ ಜಮೀನನ್ನು ವಾಪಸ್ ಪಡೆಯಲು ದೊಡ್ಡ ಹೋರಾಟವೇ ನಡೆಯಿತು. ಆದರೆ ಹೋರಾಟದ ಬೆನ್ನಲ್ಲೇ ಆದಿಯೋಗಿ ಶಿವನ ಬೃಹತ್ ಮೂರ್ತಿ ಉದ್ಘಾಟನೆಗೆಂದು ಪ್ರಧಾನಿ ಆ ಆಶ್ರಮಕ್ಕೆ ಭೇಟಿ ನೀಡಿದರು. ಈ ಸಾಲಿನಲ್ಲಿ ಬರುವ ಇನ್ನೊಂದು ಹೆಸರು ಮಾತಾ ಅಮೃತಾನಂದಮಯಿ. ಆಕೆ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿಕೊಂಡಿದ್ದು ಆಕೆಗೆ ಆರ್‍ಎಸ್‍ಎಸ್‍ನ ಪೂರ್ಣ ಬೆಂಬಲವಿದೆ.

ಬಿಜೆಪಿ ಸರಕಾರಗಳು ಮತ್ತು ಆರ್‍ಎಸ್‍ಎಸ್ ಸಂಘಟನೆಗಳ ಕೃಪಾಪೋಷಣೆಯೊಂದಿಗೆ ಈ ದೇವಮಾನವರು ಧಾರ್ಮಿಕತೆಯನ್ನು ವಾಣಿಜ್ಯ-ವ್ಯಾಪಾರ ಉದ್ದೇಶಗಳಿಗೆ ತುಂಬಾ ಲಾಭದಾಯಕವಾಗಿ ಮಿಳಿತಗೊಳಿಸುತ್ತಾರೆ. ಅವರಿಗೆ ಸಿಗುವ ರಾಜಕೀಯ ಬೆಂಬಲವೇ ಅವರು ತಾವು ಕಾನೂನಿಗೆ ಅತೀತರಾದವರು ಎಂಬಂತೆ ವರ್ತಿಸಲು ಕಾರಣವಾಗಿದೆ.

ಎಲ್ಲಾ  ಹೊಲಸು  ಸನ್ನಿವೇಶಗಳ  ಕಾರ್ಮೋಡಗಳ  ನಡುವೆಯೂ, ಗುರ್ಮಿತ್ ಸಿಂಗ್-ಡೇರಾ ಸಚ್ಚಾ ಸೌದಾ ಪ್ರಕರಣದಿಂದ ಒಂದು  ಬೆಳ್ಳಿರೇಖೆ  ಹೊಮ್ಮಿದೆ - ಬಿಜೆಪಿ ಮತ್ತು ಢೋಂಗಿ  ಗುರುಗಳು  ಹಾಗೂ  ಬಾಬಾಗಳ ನಡುವಿನ ವಂಚಕ ಸಂಬಂಧವನ್ನು ಬಯಲುಗೊಳಿಸಿದ್ದೇ ಆ ಉತ್ತಮ ಬೆಳವಣಿಗೆಯಾಗಿದೆ.
 

     ಅನು: ವಿಶ್ವ