ರಾಜ್ಯ ಬರಗಾಲ ಪೀಡಿತ ಎಂದು ಘೋಷಿಸಿ! ಬರ ಪರಿಹಾರಕ್ಕೆ ಕ್ರಮವಹಿಸಿ

ಸಂಪುಟ: 
11
ಸಂಚಿಕೆ: 
34
Sunday, 13 August 2017

ಮುಂಗಾರು ಮಳೆ ವೈಫಲ್ಯದ ಹಿನ್ನೆಲೆಯಲ್ಲಿ ಪ್ರಾಂತ ರೈತ ಸಂಘದ ಒತ್ತಾಯ

ಕರ್ನಾಟಕದಲ್ಲಿ ಮುಂಗಾರು ಮಳೆಯು ಸಂಪೂರ್ಣವಾಗಿ ವಿಫಲವಾಗಿದ್ದು ರಾಜ್ಯವನ್ನು ಮತ್ತೊಂದು ಭೀಕರ ಬರಗಾಲದೆಡೆಗೆ ತಳ್ಳಿದೆ. ಹಿಂದಿನ ವರ್ಷಕ್ಕಿಂತಲೂ ಈ ಭಾರಿ ಹೆಚ್ಚು ಹಾನಿಕಾರಕವಾಗಿದೆ. ಕಳೆದ 46 ವರ್ಷಗಳಲ್ಲಿ ಕಂಡು ಬರದ ಭೀಕರವಾದುದೆಂದು ಹೇಳಲಾಗುತ್ತಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಮಾತ್ರವೇ ಅಲ್ಲಾ, ನೀರಾವರಿ ಪ್ರದೇಶದಲ್ಲಿಯೂ ಕೂಡಾ ಮಲೆನಾಡು ಪ್ರದೇಶದಲ್ಲಿನ ಮಳೆಯ ಕೊರತೆಯಿಂದಾಗಿ, ನದಿಗಳ ಆನೆಕಟ್ಟುಗಳಲ್ಲಿನ ನೀರು ಈ ದಿನದವರೆಗೂ ಲಭ್ಯವಾಗದೇ ಶೇ 90 ಭಾಗ ಬಿತ್ತನೆಯಾಗಿಲ್ಲ. ನದಿಗಳಲ್ಲಿ ನೀರು ಹರಿಯದೇ ಹೋದುದರಿಂದ ನದಿ ನೀರಿನ ಆಶ್ರಯದ ಏತ ನೀರಾವರಿ, ಪಿಕ್-ಅಪ್ ಗಳು ಕಾರ್ಯನಿರ್ವಹಿಸುತ್ತಿಲ್ಲ.

ಕಳೆದ ಅವಧಿಯಲ್ಲಿ ಬತ್ತಿಹೋದ ಬೋರ್‍ವೆಲ್‍ಗಳು, ಬಾವಿಗಳಲ್ಲಿ ಅಂತರ್ಜಲ ಕಂಡು ಬರುತ್ತಿಲ್ಲ. ಬದಲಿಗೆ, ಇರುವವುಗಳು ಕೂಡಾ ಬತ್ತಿ ಹೋಗುತ್ತಿವೆ. ದೊಡ್ಡ ದೊಡ್ಡ ನಗರಗಳು, ಪಟ್ಟಣಗಳ ಕುಡಿಯುವ ನೀರಿನ ಭವಣೆ ಬೆಳೆಯುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ನೀರಿನ ಅಭಾವ ಮತ್ತು ಜಾನುವಾರುಗಳ ಮೇವಿನ ಅಭಾವ ತೀವ್ರಗೊಳ್ಳುತ್ತಿದೆ. ಕೂಲಿಕಾರರು, ರೈತರು, ಕಸುಬುದಾರರು ಕೆಲಸವಿಲ್ಲದೇ ಕಂಗಾಲಾಗಿದ್ದಾರೆ. ಹಲವೆಡೆ ಉದ್ಯೋಗ ಖಾತ್ರಿಯ ಕೆಲಸವು ಇಲ್ಲದೇ, ಕಳೆದ ಭಾರೀ ವಲಸೆ ಹೋದವರಿನ್ನೂ ವಾಪಾಸು ಬರದಿರುವಾಗ, ಮಳೆಯರಾಯನ ಕೃಪೆಗಾಗಿ ಸಲ್ಲಿಸಿದ ಹಲವು ರೀತಿಯ ಪ್ರಾರ್ಥನೆಗಳೂ ಫಲಿಸದಾದಾಗ, ನಿರಾಸೆಯಿಂದ ಮತ್ತಷ್ಠು ಜನರು ಗ್ರಾಮಗಳನ್ನು ತೊರೆದು ನಗರಗಳನ್ನು ಸೇರುವ ಕಡೆ ಮುಖ ಮಾಡುತ್ತಿದ್ದಾರೆ.

ಆರಂಭದಲ್ಲಿ ಮಳೆ ಸುರಿದ ಈಶಾನ್ಯ ಕರ್ನಾಟಕದ ಮೂಲೆಯ ಜಿಲ್ಲೆಗಳಲ್ಲಿ ಬಿತ್ತನೆಯಾದ ಪ್ರದೇಶವು ಕಳೆದ ಒಂದೂವರೆ ತಿಂಗಳಲ್ಲಿ ಅಗತ್ಯ ವಾಡಿಕೆಯ ಮಳೆಯನ್ನು ಕಾಣದೇ ಬೆಳೆಯು ಒಣಗಿ ಆರ್ಥಿಕ ನಷ್ಠವನ್ನು ಉಂಟುಮಾಡಿದೆ.

ರಾಜ್ಯದ ಕಾವೇರಿ, ತುಂಗಭದ್ರ, ಮಲಪ್ರಭಾ, ಘಟಪ್ರಭಾ ಮುಂತಾದ ಬಹುತೇಕ ಆಣೆಕಟ್ಟುಗಳು ಸಮಯಕ್ಕೆ ಅಗತ್ಯವಿರುವಷ್ಠು ಭರ್ತಿಯಾಗದೇ ಇರುವುದರಿಂದ ಕುಡಿಯುವ ನೀರನ್ನು ಉಳಿಸಿಕೊಂಡು ಉಳಿದ ನೀರಿನಲ್ಲಿ ಮುಂದೆ ಮಳೆ ಬರಬಹುದೆಂಬ ನಿರೀಕ್ಷೆಯಿಟ್ಟುಕೊಂಡಿದ್ದರೂ, ಹೆಚ್ಚು ನೀರನ್ನು ಬೇಡುವ ಬೆಳೆಗಳನ್ನು ನಾಟಿ ಮಾಡದಂತೆ ಸರಕಾರ ನೀರಾವರಿ ಪ್ರದೇಶದ ರೈತರಿಗೆ ಮನವಿ ಮಾಡುತ್ತಿದೆ. ಕಾವೇರಿ ಕಣಿವೆಯ ರಾಜ್ಯಗಳ ನಡುವಿ ಸಮಸ್ಯೆ ಮರಳಿ ಉಲ್ಬಣಗೊಳ್ಳುವÀ ಸಂಭವವಿದೆ.

ಈ ಸ್ಥಿತಿಯಿಂದಾಗಿ, ಒಂದೆಡೆ ತಮ್ಮ ಸಾಲಬಾಧೆಯ ನಿವಾರಣೆಗೆ ಸರಕಾರದಿಂದ ಅಗತ್ಯ ನೆರವು ದೊರೆಯದೇ, ಮತ್ತೊಂದೆಡೆ ಮರಳಿ ಮಳೆಯ ವಿಫಲತೆಯಿಂದಾಗಿ ಸಾಲದ ಮತ್ತು ಬದುಕಿನ ಹೊರೆಯನ್ನಿಳಿಸಿಕೊಳ್ಳಲಾಗದೇ ರೈತರು ಆತ್ಮಹತ್ಯೆಗಳಿಗೆ ತಳ್ಳಲ್ಪಡುತ್ತಿದ್ದಾರೆ. ರಾಜ್ಯ ಸರಕಾರ 50,000 ರೂಗಳ ಸಹಕಾರಿ ಬ್ಯಾಂಕುಗಳ ಸಾಲಮನ್ನಾದ ಘೊಷಣೆಯ ನಂತರವೂ ರೈತರು, ಕೂಲಿಕಾರರ ಆತ್ಮಹತ್ಯೆಗಳು ಹೆಚ್ಚುತ್ತಿವೆ. 

ಒಟ್ಟಾರೇ, ಈ ಎಲ್ಲದರ ಪರಿಣಾಮವಾಗಿ ಈ ಭಾರಿ ಕೃಷಿ ಉತ್ಪಾದನೆ ದೊಡ್ಡ ಪ್ರಮಾಣದಲ್ಲಿ ಕುಸಿಯಲಿದೆ. ರೈತರು, ಕೂಲಿಕಾರರು ಮತ್ತು ಕಸುಬುದಾರರು ತಮ್ಮ ಕುಟುಂಬಗಳ ಅಗತ್ಯ ಆದಾಯದಿಂದ ವಂಚಿತರಾಗಲ್ಲಿದ್ದಾರೆ. ಜೀವನೋಪಯಕ್ಕಾಗಿ ಇದ್ದ-ಬದ್ದ ಸಣ್ಣ-ಪುಟ್ಟ ಆಸ್ತಿಗಳನ್ನು ಗ್ರಾಮೀಣ ಶ್ರೀಮಂತರಿಗೆ ಮಾರಾಟ ಮಾಡುವ ಒತ್ತಡಕ್ಕೊಳಗಾಗಿದ್ದಾರೆ. ಈ ಪರಿಸ್ತಿತಿಯು ದಲಿತರು ಮತ್ತು ಹಿಂದುಳಿದ ವರ್ಗ ಹಾಗೂ ಜನಸಮುದಾಯಗಳು ಮತ್ತು ಮಹಿಳೆಯರು ಮತ್ತಷ್ಟು ದೌರ್ಜನ್ಯವನ್ನು ಎದುರಿಸುವಂತಾಗಿದೆ.

ರಾಜ್ಯದಲ್ಲಿ ಉಂಟಾಗಿರುವ ಈ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇದುವರೆಗೆ ಏನೊಂದು ಕ್ರಮ ಕೈಗೊಳ್ಳದಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ ಬಲವಾಗಿ ಖಂಡಿಸಿದೆ. ಅದೇ ರೀತಿ, ಎರಡೂ ಸರಕಾರಗಳು ಕೂಡಲೇ ರಾಜ್ಯವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಹಾಗೂ ತಕ್ಷಣವೇ ಬರಗಾಲ ಪರಿಹಾರ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ಅಗತ್ಯ ನೆರವಿನ ಕ್ರಮವಹಿಸಬೇಕೆಂದು ಒತ್ತಾಯಿಸಿದೆ.

ಬೆಳೆನಷ್ಠ - ಉದ್ಯೋಗ ನಷ್ಠ ಪರಿಹಾರ ಒದಗಿಸಿ

ಬರಗಾಲದ ಹಿನ್ನೆಲೆಯಲ್ಲಿ ಉಂಟಾದ ಬೆಳೆಹಾನಿಗೆ ತಲಾ ಎಕರೆಗೆ ಕನಿಷ್ಠ 25,000 ರೂಗಳನ್ನು ನೀಡಬೇಕು  ಹಾಗೂ ಉದ್ಯೋಗದ ಹಾನಿಯನ್ನು ತುಂಬಿಕೊಡಲು, ಮುಂಬರುವ ದಿನಗಳಲ್ಲಿ ಬರಗಾಲದ ಹಿನ್ನೆಲೆಯಲ್ಲಿ ವಿಶೇಷವಾಗಿ ಕನಿಷ್ಠ 200 ದಿನಗಳ ಕಾಲ ಉದ್ಯೋಗ ಖಾತ್ರಿ ಕೆಲಸವನ್ನು ಪ್ರತಿಯೊಬ್ಬ ರೈತ-ಕೂಲಿಕಾರ-ಕಸುಬುದಾರರಿಗೆ ಒದಗಿಸಬೇಕು ಇಲ್ಲವೇ ಕನಿಷ್ಠ 25,000 ರೂಗಳನ್ನು ತಲಾ ರೈತ-ಕೂಲಿಕರರಿಗೆ-ಕಸುಬುದಾರರಿಗೆ ನೀಡಬೇಕು.

ನೀರಾವರಿ ಪ್ರದೇಶದ ರೈತರು ಕೂಡಾ ಕನಿಷ್ಠ ಆದಾಯ ನೀಡಬಲ್ಲ ಅಥವಾ ಕಡಿಮೆ ಹಾನಿ ಮಾಡಬಲ್ಲ ಹೆಚ್ಚು ನೀರನ್ನು ಬೇಡುವ ವಾಣಿಜ್ಯ ಬೆಳೆಗಳಾದ ಭತ್ತ, ಕಬ್ಬು, ಹತ್ತಿ, ಮೆಣಸಿನಕಾಯಿ ಮುಂತಾಗಿ, ನೀರಿನ ಅಭಾವದಿಂದ ಬೆಳೆಯಲಾಗದೆಂದು ಸರಕಾರ ಹೇಳಿದಲ್ಲಿ, ಕಡಿಮೆ ನೀರನ್ನು ಬೇಡುವ ಜೋಳ, ರಾಗಿ, ಸಜ್ಜೆ, ನವಣೆ, ಅಕ್ಕಡಿಕಾಳು ಮುಂತಾದ ಬೆಳೆಗಳನ್ನು ಬೆಳೆಯುವುದೇ ಆದಲ್ಲಿ, ಈ ಬೆಳೆಗಳ ಬದಲಾವಣೆಯಿಂದುಂಟಾಗುವ ಆದಾಯದ ವ್ಯತ್ಯಾಸದ ಹಾನಿಯನ್ನು ಸರಕಾರಗಳು ತುಂಬಿಕೊಡಬೇಕು. ನೀರಿನ ಕೊರತೆಯಿಂದಾಗಿ ನೀರಾವರಿ ಪ್ರದೇಶದ ಕಾಲುವೆ ಮುಂಭಾಗ ಮತ್ತು ಕೊನೆ ಭಾಗದ ರೈತರ ನಡುವೆ ನೀರಿಗಾಗಿ ಸ್ಪರ್ಧೆ ಎರ್ಪಟ್ಟು ಕೊನೆ ಭಾಗದ ರೈತರಿಗೆ ನೀರು ದೊರೆಯದೆ ಉಂಟಾಗುವ ಬೆಳೆ ಹಾನಿಯನ್ನು ತುಂಬಿಕೊಡಬೇಕು.

ಅದೇ ರೀತಿ, ನಿರಂತರವಾಗುತ್ತಿರುವ ಬರಗಾಲಗಳ ಹಿನ್ನೆಲೆಯಲ್ಲಿ, ರೈತರು, ಕೂಲಿಕಾರರು, ಕಸುಬುದಾರರ ಖಾಸಗಿ ಹಾಗೂ ಸಾಂಸ್ತಿಕ ಸಾಲವು ಸೇರಿದಂತೆ ಎಲ್ಲ ಸಾಲವನ್ನು ಮನ್ನಾ ಮಾಡಬೇಕು.  ದಲಿತರು, ಹಿಂದುಳಿದ ವರ್ಗದ ಜನರು ಪಡೆದ ಎಲ್ಲ ಇಲಾಖಾವಾರು ಸಹಾಯಧನದೊಂದಿಗೆ ಪಡೆದ ಎಲ್ಲ ಸಾಲವನ್ನು ಮನ್ನಾ ಮಾಡಬೇಕು. ಸ್ತ್ರೀಶಕ್ತಿ/ಸ್ವಶಕ್ತಿ ಸಂಘಗಳಿಂದ ಪಡೆದ ಮಹಿಳೆಯರೆಲ್ಲರ ಸಾಲವನ್ನು ಮನ್ನಾ ಮಾಡಬೇಕು. ಶಾಲಾ/ ಕಾಲೇಜುಗಳ ಉನ್ನತ ವ್ಯಾಸಂಗದ ಶುಲ್ಕಗಳನ್ನು ಮತ್ತು ಉನ್ನತ ವ್ಯಾಸಂಗದ ಖಾಸಗೀ ಹಾಸ್ಟೆಲ್‍ಗಳ ಬಿಲ್‍ಗಳನ್ನು ಸರಕಾರಗಳು ವಹಿಸಿಕೊಳ್ಳಬೇಕು. ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್‍ಗಳನ್ನು ನೀಡಬೇಕು.

ಬರಗಾಲ ನಿವಾರಣೆಯಾಗುವವರೆಗೆ, ಗ್ರಾಮಗಳ ಎಲ್ಲಾ ಬಡವರಿಗೆ ಉಚಿತವಾಗಿ ಅಗತ್ಯವಾದ ಎಲ್ಲಾ ಪಡಿತರ/ರೇಷನ್ನನ್ನು ಒದಗಿಸಬೇಕು ಮತ್ತು ರಾತ್ರಿ ವೇಳೆಯಲ್ಲೂ ಅಂಗನವಾಡಿ ಮತ್ತು ಪಾಠಶಾಲೆಗಳಲ್ಲಿ ಬಿಸಿಯೂಟ ನೀಡುವುದಕ್ಕೆ ಕ್ರಮವಹಿಸಬೇಕು.