‘ಭಾರತದಿಂದ ತೊಲಗಿ’ ‘ಕ್ವಿಟ್ ಇಂಡಿಯ’ ಚಳುವಳಿ: ರಾಜ್ಯಸಭೆಯಲ್ಲಿ ಸೀತಾರಾಮ್ ಯೆಚುರಿ

ಸಂಪುಟ: 
34
ಸಂಚಿಕೆ: 
11
date: 
Sunday, 13 August 2017
Image: 

‘ಭಾರತದಿಂದ ತೊಲಗಿ’ ಎಂಬುದನ್ನು ನವ-ಉದಾರವಾದಿ ಸುಧಾರಣೆಗಳ ತೊಲಗಿಸಿ, ಕೋಮುವಾದವ ತೊಲಗಿಸಿ ಎಂದು ಹೇಳುವುದರೊಂದಿಗೆ ಆಚರಿಸೋಣ.

1942ರ ‘ಕ್ವಿಟ್ ಇಂಡಿಯ’ (ಭಾರತದಿಂದ ತೊಲಗಿ) ಚಳುವಳಿಯ 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಸೀತಾರಾಮ್ ಯೆಚುರಿಯವರ ಭಾಷಣದಿಂದ ಆರಿಸಿದ ಭಾಗ

....ನಾವಿಂದು ಕ್ವಿಟ್ ಇಂಡಿಯಾ ಚಳುವಳಿಯ  75ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೇವೆ ಮತ್ತು ಭವಿಷ್ಯದತ್ತ ನೋಡುತ್ತಿದ್ದೇವೆ. ಹೊರಗೆ, ಪ್ರಧಾನ ಮಂತ್ರಿಗಳು ತನ್ನ ‘ಮನ್‍ಕೀ ಬಾತ್’ನಲ್ಲಿ ..ಅವರು ಶಿರೋನಾಮೆಯನ್ನು ಅವರೇ ಆರಿಸಿದ್ದರು. ಅಲ್ಲಿ ಅವರೆಂದರು “1942 ರಿಂದ 1947, ಇವು ನಿರ್ಣಾಯಕ ವರ್ಷಗಳು, ಅದರಿಂದಾಗಿ 2017ರಿಂದ 2022, ಆ ಗುರಿಯನ್ನು ಸಾಧಿಸೋಣ.”

ಏನದು ಆ ಗುರಿ? 1947ರಲ್ಲಿ ನಾವು ಸ್ವತಂತ್ರರಾದೆವು. ನಮಗೆಲ್ಲರಿಗೂ ಹೆಮ್ಮೆಯಿದೆ. ನಾವೆಲ್ಲ ಸ್ವತಂತ್ರ ಭಾರತದ ಮಕ್ಕಳು. ನಾವು ಆ ಭಾರತೀಯ ರಾಷ್ಟ್ರೀಯತೆಯ, ಭಾರತೀಯ ರಾಷ್ಟ್ರವಾದದ ವಾರಸುದಾರರು. ಅ ಐದು ವರ್ಷಗಳಲ್ಲಿ ಭಾರತದ ವಿಭಜನೆಯನ್ನೂ ಕಂಡೆವು. ಈ ದುರದೃಷ್ಟಕರ ವಿಭಜನೆಗೆ ಕಾರಣವಾದ, ಕೋಮುಧ್ರುವೀಕರಣವನ್ನು, ಅದಕ್ಕೆ ಬ್ರಿಟಿಶರ ನೆರವನ್ನೂ ಕಂಡೆವು. ಹಾಗಾಗಿ, ನೀವು ಆ ಐದು ವರ್ಷಗಳೊಂದಿಗೆ ಹೋಲಿಸುವುದಾದರೆ ಒಂದು ಅನಿಷ್ಟದ ಸಂಕೇತ ಇದೆ. ಅದೊಂದು ಕಾರ್ಮೋಡ. ಒಂದು ಬೆಳ್ಳಿಕಿರಣ ಇಲ್ಲಿದೆ. ಒಂದು ಕಾರ್ಮೋಡವಿದೆ, ......ಗೌರವಾನ್ವಿತ ಪ್ರಧಾನಮಂತ್ರಿಗಳೇ ಹೇಳಿದ್ದು-ಕೋಮುವಾದ ಭಾರತದಿಂದ ತೊಲಗಬೇಕು ಎಂದು. ನಾನು ಆ ಕೋಮುವಾದದ ಬಗ್ಗೆ ಮಾತಾಡುತ್ತಿದ್ದೇನೆ. ಕೋಮುವಾದ ಭಾರತವನ್ನು ಬಿಟ್ಟು ತೊಲಗಬೇಕು ಎಂದು ಭಾರತದ ಪ್ರಧಾನ ಮಂತ್ರಿಗಳು, ನಿಮ್ಮ ಮುಖಂಡರೇ ಹೇಳಿದ್ದು. ನಾನು ಕೇಳುತ್ತೇನೆ, ಅದು ತೊಲಗುವಂತೆ ನಾವೇನಾದರೂ ಮಾಡುತ್ತಿದ್ದೇವೆಯೇ?

ನಾನು ಮಾತಾಡುತ್ತಿರುವುದು ಆ ದೃಢನಿರ್ಧಾರದ ಬಗ್ಗೆ. ಆ ಐದು ವರ್ಷಗಳ ಬಗ್ಗೆ ಮಾತಾಡುವಾಗ, ಈ ಉಪಖಂಡದ ಆ ದುರದೃಷ್ಟಕರ ವಿಭಜನೆಯ ಮತ್ತೊಂದು ಆಂಶವನ್ನು ನಾನೇಕೆ ನಿಮಗೆ ನೆನಪಿಸುತ್ತಿದ್ದೇನೆ? ಇಂದು ಭಾರತದಿಂದ ತೊಲಗ ಬೇಕಾದ್ದು  ಭಾರತದಿಂದ ತೊಲಗುತ್ತಿಲ್ಲವಾದರೆ, ‘ಭಾರತದಿಂದ ತೊಲಗಿ’ ಚಳುವಳಿಯ 75ನೇ ವಾರ್ಷಿಕೋತ್ಸವ ಆಚರಿಸುವುದರಲ್ಲಿ ಏನು ಅರ್ಥವಿದೆ? ನಿರುದ್ಯೋಗವನ್ನು ಹೆಚ್ಚಿಸುತ್ತಿರುವ, ಬಡತನವನ್ನು ಹೆಚ್ಚಿಸುತ್ತಿರುವ, ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಹೆಚ್ಚಿಸುತ್ತಿರುವ, ಈ ಎರಡು ಭಾರತಗಳನ್ನು ಸೃಷ್ಟಿಸುತ್ತಿರುವ ಈ ಆರ್ಥಿಕ ಧೋರಣೆಗಳನ್ನು ನೀವು ತೊಲಗಿಸಬೇಕಾಗುತ್ತದೆ. ಡಾ.ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಗಳಾಗಿದ್ದ ಕೊನೆಯ ಮೂರು ವರ್ಷಗಳಲ್ಲಿ ಇಲ್ಲಿ ಬಹಳಷ್ಟು ಚರ್ಚೆಗಳನ್ನು ನಡೆಸಿದ್ದೆವು,

ಎರಡು ಭಾರತಗಳನ್ನು ಸೃಷ್ಟಿಸುತ್ತಿದ್ದೇವೆ, ಒಂದು ಬಡವರಿಗೆ, ಒಂದು ಶ್ರೀಮಂತರಿಗೆ ಎಂದು, 2014ರಲ್ಲಿ ಜಿಡಿಪಿಯ 49ಶೇಕಡಾವನ್ನು ಭಾರತದ ಜನಸಂಖ್ಯೆಯ ಒಂದು ಶೇಕಡಾ ಮಂದಿ ಹೊಂದಿದ್ದಾರೆ ಎಂದು. ಇಂದು ಎಂತಹ ಸನ್ನಿವೇಶ ಇದೆ? ಸುಮಾರು 60 ಶೇಕಡಾ, 58.4 ಶೇಕಡಾದಷ್ಟು ಜಿಡಿಪಿ -ಅದು ಕಳೆದ ವರ್ಷದ ಅಂಕೆ, ಈಗ ಇನ್ನೂ ಮೇಲೆ ಹೋಗಿರಬಹುದು- ನಮ್ಮ ಜನಸಂಖ್ಯೆಯ ಒಂದು ಶೇಕಡಾ ಮಂದಿಯ ಕೈಗಳಲ್ಲಿದೆ.

1947ರಲ್ಲಿ ಸ್ವತಂತ್ರರಾದಾಗ ಇದ್ದ ನಮ್ಮ ಕನಸಿನ ಭಾರತ ಇದೇನಾ? ಇಂದು ಜಗತ್ತಿನಲ್ಲೇ ಅತಿ ದೊಡ್ಡ ಯುವಶಕ್ತಿಯನ್ನು ಹೊಂದಿರುವ ಭಾರತ ಇದೇನಾ? ನಾವು ಅತ್ಯಂತ ಯುವ ದೇಶ. ಇಂದು ಭಾರತದಿಂದ ತೊಲಗಿ ಎಂದ ಕ್ವಿಟ್ ಇಂಡಿಯಾದ 75ನೇ ವಾಷಿಕೋತ್ಸವದ ಸಂದರ್ಭದಲ್ಲಿ ಭಾರತದಿಂದ ತೊಲಗಬೇಕಾದ್ದು ಏನಾದರೂ ಇದ್ದರೆ, ಅದು ನನ್ನ ಜನಕೋಟಿಯನ್ನು ದರಿದ್ರರನ್ನಾಗಿಸಿರುವ ನವ-ಉದಾರವಾದಿ ಧೋರಣೆಗಳು; ನನ್ನ ದೇಶವನ್ನು ಒಡೆಯುತ್ತಿರುವ, ಒಂದು ಉತ್ತಮ ಭಾರತವನ್ನು ನಿರ್ಮಿಸುವ ಹೋರಾಟದಲ್ಲಿ ನಮ್ಮ  ಜನಗಳ ಐಕ್ಯತೆಯನ್ನು ಒಡೆಯುತ್ತಿರುವ ಈ ಕೋಮುವಾದ.

ದೃಢನಿರ್ಧಾರ ಏನಿರಬೇಕು ಎಂಬುದನ್ನು ನೀವು ದಯವಿಟ್ಟು ಅರ್ಥ ಮಾಡಿಕೊಳ್ಳಿ. ಅದು ಅಂದಿನ ದಿನಗಳನ್ನು ನೆನಪಿಸಿಕೊಳ್ಳುವುದಷ್ಟೇನಾ- ಒಳ್ಳೇದು, ನೆನಪಿಸಿಕೊಳ್ಳೋಣ- ದೂಷಣೆಗಳನ್ನು ಹಂಚೋಣ; ಯಾರು ಏನು ತಪ್ಪು ಮಾಡಿದರು ಎಂದೂ ಹೇಳಬಹುದು. ಆದರೆ ಪ್ರಶ್ನೆ- ನಾವು ಮುನ್ನಡೆಯುತ್ತೀವೋ ಅಥವ ಹಿಂದೆ ನೋಡುತ್ತೇವೋ?

ನಾನು ಮುಗಿಸುತ್ತಿದ್ದೇನೆ. ನೀವು ಆಝಾದ್ ಹಿಂದ್ ಸೇನೆಯ ಪ್ರಸ್ತಾಪ ಮಾಡಿದಿರಿ, ಈಎಲ್ಲವನ್ನು ಮತ್ತು ರಾಯಲ್ ಇಂಡಿಯನ್ ನೇವಿಯ ಬಗ್ಗೆ ಪ್ರಸ್ತಾಪಿಸಿದ್ದೀರಿ. ಆ ಆವದಿಯ ಒಂದು ಹಾಡು ಇದೆ, ಅದನ್ನು ಹಾಡುತ್ತಲೇ ನಾವೆಲ್ಲ ಬೆಳೆದಿದ್ದೇವೆ. ಅದನ್ನು ನಾವಿಂದ ಮತ್ತೆ ಹಾಡಬೇಕು, ಅದನ್ನು ನಮ್ಮ ನಿರ್ಧಾರವಾಗಿ ಮಾಡಬೇಕು ಎಂದು ನನ್ನ ಭಾವನೆ. ಆ ಹಾಡು ಹೀಗಿತ್ತು:

ಮಂದಿರ್, ಮಸ್ಜಿದ್, ಗಿರ್ಜಾಘರ್ ಮೇಂ
ಬಾಂಟ್ ದಿಯಾ ಭಗ್‍ವಾನ್ ಕೊ
ಧರ್‍ತೀ ಬಾಂಟೀ, ಸಾಗರ ಬಾಂಟಾ,
ಮತ್ ಬಾಂಟೋ ಇನ್‍ಸಾನ್ ಕೊ
    (ಗುಡಿ, ಚರ್ಚು, ಮಸೀದಿಗಳಲ್ಲಿ
     ದೇವರುಗಳ ಹರಿದು ಹಂಚಿದಿರಿ
     ಭೂಮಿ, ಆಗಸ  ಹರಿದು ಹಂಚಿದಿರಿ,
     ಮನುಜನ ಮಾತ್ರ ಹರಿದು ಹಂಚದಿರಿ)

ಆದ್ದರಿಂದಲೇ, ಮುನ್ನಡೆ ಭಾರತದ ಜಾತ್ಯತೀತ ಪ್ರಜಾಸತ್ತಾತ್ಮಕ ಗಣತಂತ್ರವನ್ನು ಬಲಪಡಿಸುವುದಕ್ಕೆ ಇರಬೇಕೇ ವಿನಹ, ಭಾರತದಲ್ಲಿ ಒಂದು ಹಿಂದು-ಪಾಕಿಸ್ತಾನನವನ್ನು ಸೃಷ್ಟಿಸಲು ಅಲ್ಲ.

ಹಾಗಾಗಿ ‘ಕ್ವಿಟ್ ಇಂಡಿಯಾ’ವನ್ನು ನವ-ಉದಾರವಾದಿ ಸುಧಾರಣೆಗಳನ್ನು ತೊಲಗಿಸಿ, ಕೋಮುವಾದವನ್ನು ತೊಲಗಿಸಿ ಎಂದು ಹೇಳುವುದರೊಂದಿಗೆ ಆಚರಿಸೋಣ.