Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಸ್ವಾತಂತ್ರ್ಯ ಸಮರದಲ್ಲಿ ಮಹಾನ್ ದೇಶಪ್ರೇಮಿಗಳು ಎಲ್ಲಿ? ಎಲ್ಲಿ?

ಸಂಪುಟ: 
11
ಸಂಚಿಕೆ: 
34
date: 
Sunday, 13 August 2017

- ಜಿ. ಎನ್. ನಾಗರಾಜ್

(ಅಗಸ್ಟ್ 9ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾದ “ತೊಲಗು ತೊಲಗಾಚೆ ಪರದೇಶಿ ಸುಲಿಗೆಗಾರ” ಪುಸ್ತಿಕೆಯ ಒಂದು ಆಯ್ದ ಭಾಗ)

ದೇಶದ ಸ್ವಾತಂತ್ರ್ಯ ಸಮರದಲ್ಲಿ ಹಲವು ತತ್ವ, ಸಿದ್ಧಾಂತದ ಜನರು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಮೊದಲಾದ ಸಮಾಜದ ಹಲವು ವಿಭಾಗದ ಜನರು ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಹಲವು ತ್ಯಾಗ ಬಲಿದಾನಗಳನ್ನು ಮಾಡಿದರು. ಆದರೆ ಇಂದು ತಾವೇ ರಾಷ್ಟ ಪ್ರೇಮಿಗಳೆಂದು ಬೇರೆಯವರು ದೇಶದ್ರೋಹಿಗಳೆಂದು ಪ್ರಮಾಣಪತ್ರಗಳನ್ನು ನೀಡುವ ಅಧಿಕಾರವನ್ನು ತಮ್ಮಷ್ಟಕ್ಕೆ ತಾವೇ ಕೈಗೆತ್ತಿಕೊಂಡವರು ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಯಾವ ಹೋರಾಟಗಳಲ್ಲಿಯೂ ಕಾಣೆಯಾಗಿದ್ದಾರಲ್ಲಾ, ಅವರ ದೇಶಪ್ರೇಮದ ಮಹಾತ್ಮೆ ಎಂತಹುದು?

ಈ ದೇಶಪ್ರೇಮಿಗಳು ತಮಗೆ ಸ್ವಾತಂತ್ರ್ಯ ಚಳುವಳಿಯಲ್ಲಿ ಇಲ್ಲದ ಇತಿಹಾಸವನ್ನು ಸೃಷ್ಠಿ ಮಾಡಿಕೊಳ್ಳಲು ಅಸಂಖ್ಯ ಸುಳ್ಳುಗಳನ್ನು ದಿನನಿತ್ಯ ಹೆಣೆಯುತ್ತಿದ್ದಾರೆ ಮತ್ತು ತಮ್ಮ ನಾಯಕ ಶಿರೋಮಣಿಗಳೆಲ್ಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬಗೆದ ದ್ರೋಹವನ್ನು ಮುಚ್ಛಿ ಹಾಕಲು ಕೂಡ ಬಹಳ ಶ್ರಮ ಪಡುತ್ತಿದ್ದಾರೆ. ಆದ್ದರಿಂದ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಇಂದು ತುರ್ತಿನ ವಿಷಯವಾಗಿದೆ.

ಆರೆಸ್ಸೆಸ್ ಬಗ್ಗೆ ಆರು ಪ್ರಶ್ನೆಗಳು

ಇಂದು ದೇಶಪ್ರೇಮದ ಪಾಠ ಹೇಳುತ್ತಿರುವ ಬಿಜೆಪಿಯ ಮೂಲಾಧಾರ ಸಂಸ್ಥೆಯಾದ  ಆರೆಸ್ಸೆಸ್ ಸ್ವಾತಂತ್ರ್ಯ ಪೂರ್ವದಲ್ಲಿಯೇ 1925 ರಲ್ಲಿಯೇ ಅಸ್ತಿತ್ವ ಪಡೆಯಿತು. ಹೀಗಾಗಿ ಮುಖ್ಯ ಚಳುವಳಿಗಳು ನಡೆದಾಗ ಆರೆಸ್ಸೆಸ್ ಅಸ್ತಿತ್ವದಲ್ಲಿತ್ತು. ಆದ್ದರಿಂದ ಸ್ವಾತಂತ್ರ್ಯ ಚಳುವಳಿಯಲ್ಲಿ ಆರೆಸ್ಸೆಸ್ ಪಾತ್ರದ ಬಗ್ಗೆ ಹಲವು ಆಯಾಮಗಳ ವಿಶ್ಲೇಷಣೆ ಬೇಕಾಗಿದೆ.

ಒಂದನೆಯದು - ದೇಶದ ಜನರು ಉತ್ಸಾಹದಿಂದ ಹೋರಾಟಗಳಲ್ಲಿ ಧುಮುಕುವುದು ಕಣ್ಣೆದುರಿಗೇ ಕಂಡರೂ ಆರೆಸ್ಸೆಸ್ ಸ್ವ ತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿತೇ? ಭಾಗವಹಿಸಲಿಲ್ಲವೇಕೆ ಎಂಬುದು.

ಎರಡನೆಯದು - ನಿರಾಸಕ್ತಿ ಇರಲಿ, ಸಂಘ ಪರಿವಾರದ ಪೂಜನೀಯರು ಸ್ವಾತಂತ್ರ್ಯ ಚಳುವಳಿಗೆ ವೈಯುಕ್ತಿಕವಾಗಿ ಬಗೆದ ದ್ರೋಹ.

ಮೂರನೆಯದು - ಸಂಘ ಒಂದು ಸಂಘಟನೆಯಾಗಿ ಸ್ವಾತಂತ್ರ್ಯ ಚಳುವಳಿಯ ಹಿನ್ನಡೆಗೆ ಕಾರಣವಾದದ್ದು.

ನಾಲ್ಕನೆಯದು - ದೇಶದ ವಿಭಜನೆಗೆ ಕಾರಣವಾದ ಸ್ಥಿತಿಗೆ ಆರೆಸ್ಸೆಸ್ ನ ಕೊಡುಗೆ

ಐದನೆಯದು - ಸ್ವಾತಂತ್ರ್ಯ ಬಂದ ಮೇಲೆ ದೇಶ ಕಟ್ಟುವ ಕೆಲಸಕ್ಕೆ ಕೋಮು ದಂಗೆಗಳ ಮೂಲಕ ಮತ್ತು ಗಾಂಧೀಜಿಯವರ ಕೊಲೆಯ ಮೂಲಕ ಬಗೆದ ದ್ರೋಹ.

ಆರನೆಯದು - ಸ್ವಾತಂತ್ರ್ಯದ ಆಶಯಗಳನ್ನು ತಿರುವು ಮುರುವು ಮಾಡುವ ಮೂಲಕ ಸ್ವಾತಂತ್ರ್ಯಕ್ಕೆ ಮತ್ತು ಜನತೆಗೆ ಬಗೆದ ದ್ರೋಹ.

ಆರೆಸ್ಸೆಸ್ ಸುತ್ತೋಲೆ – ಉಪ್ಪಿನ ಸತ್ಯಾಗ್ರಹದಲ್ಲಿ ಪಾಲುಗೊಳ್ಳುವುದಿಲ್ಲ

ಈ ಸಂಸ್ಥೆಯ ಮೂಲಪುರುಷರಾದ ಡಾ ಹೆಡ್ಗೆವಾರ್ ಈ ಮೊದಲು ಕೆಲ ಕಾಲ ಕಾಂಗ್ರೆಸ್ ನ ಸದಸ್ಯರಾಗಿದ್ದರು. ಒಂದು ಏಐಸಿಸಿ ಮಹಾಧಿವೇಶನಕ್ಕೆ ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದರು. 1920 ರ ಅಸಹಕಾರ-ಖಿಲಾಫತ್ ಚಳುವಳಿಯಲ್ಲಿ ಪಾಲ್ಗೊಂಡು ಜೈಲು ವಾಸವನ್ನೂ ಅನುಭವಿಸಿದರು. ಆದರೆ ಜೈಲಿನಿಂದ ಬಿಡುಗಡೆಗೊಂಡ ನಂತರ ಅವರು ಕಕ್ಕಿದ ವಿಷ ಅವರು ಜೈಲಿಗೆ ಹೋದದ್ದನ್ನೆ ಮರೆಸುವಂತಿದೆ. “ಯವನರೆಂಬ (ಮುಸ್ಲಿಮರು) ಹಾವುಗಳಿಗೆ ಗಾಂಧೀಜಿ ಅಸಹಕಾರ ಚಳುವಳಿಯ ಮೂಲಕ ಹಾಲನ್ನೆರೆದು ಬೆಳೆಸಿದ್ದಾರೆ. ಈಗ ಅವು ಕಚ್ಚುತ್ತಿವೆ” ಎಂದು ಅವರು ಆ ಚಳುವಳಿಯಲ್ಲಿ ಮುಸ್ಲಿಮರು ಭಾಗವಹಿಸಿದುದನ್ನೇ ತೀವ್ರವಾಗಿ ಟೀಕೆ ಮಾಡಿದರು. 1930 ರ ಸಮಯದಲ್ಲಿ ದೇಶದ ಪೂರ್ಣ ಸ್ವಾತಂತ್ರ್ಯಕ್ಕಾಗಿ ಶಪಥ ತೊಡುವ ಕರೆಯನ್ನು ನೀಡಿದಾಗ ಅವರು ಆರೆಸ್ಸೆಸ್ ಶಾಖೆಗಳಿಗೆ ಒಂದು ಸುತ್ತೋಲೆಯನ್ನು ಕಳುಹಿಸುತ್ತಾರೆ.

ಅದರಲ್ಲಿ ಆ ದಿನವನ್ನು ಆರೆಸ್ಸೆಸ್ ಭಗವಾ ಧ್ವಜ ಏರಿಸುವ ಮೂಲಕ ಆಚರಿಸಬೇಕು ಎನ್ನುತ್ತಾರೆ. ಅದೇ ಸಮಯದಲ್ಲಿ ಆಗ ನೀಡಿದ್ದ ಉಪ್ಪಿನ ಸತ್ಯಾಗ್ರಹದ ಕರೆಯ ಬಗ್ಗೆ ಆರೆಸ್ಸೆಸ್ ಒಂದು ಸಂಘಟನೆಯಾಗಿ ಅದರಲ್ಲಿ ಭಾಗವಹಿಸುವುದಿಲ್ಲ. ಯಾರಾದರೂ ವೈಯುಕ್ತಿಕವಾಗಿ ಭಾಗವಹಿಸಬಹುದು ಎನ್ನುತ್ತಾರೆ. ಸ್ವತ: ಅವರು ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸುವುದಿಲ್ಲ. ಆದರೆ ಬ್ರಿಟಿಷ್ ಸರ್ಕಾರದ ರಾಜಕೀಯ ನೀತಿಗಳಿಗೆ ಹೆಚ್ಚು ಸಂಬಂಧವಿಲ್ಲದ ಅರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸುತ್ತಾರೆ. ಆರೆಸ್ಸೆಸ್ ಒಪ್ಪಿದ ಹೆಗ್ಡೇವಾರ್ ಜೀವನ ಚರಿತ್ರೆಯಲ್ಲಿ ಅವರು ಭಾಗವಹಿಸಿದ ಉದ್ದೇಶವನ್ನು ಸ್ಪಷ್ಟಪಡಿಸಲಾಗಿದೆ. ಅವರು ಸ್ವಾತಂತ್ರ್ಯ ಚಳುವಳಿಗಾರ ಜೈಲುವಾಸಿಗಳ ನಡುವೆ ಆರೆಸ್ಸೆಸ್ ವಿಚಾರಗಳ ಪ್ರಚಾರ ಮಾಡಲೆಂದೇ ಈ ಚಳುವಳಿಯಲ್ಲಿ ಭಾಗವಹಿಸಿ ಜೈಲು ಸೇರಿದ್ದರಂತೆ. ಸ್ವಾತಂತ್ರ್ಯಕ್ಕಾಗಿ ಅಲ್ಲ.

ಆರೆಸ್ಸೆಸ್ ನ ಸಾಮಾನ್ಯ ಕಾರ್ಯಕರ್ತರಲ್ಲಿಯೇ ಆರೆಸ್ಸೆಸ್ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುತ್ತಿಲ್ಲ ಎಂಬ ಬಗ್ಗೆ ಟೀಕೆ, ಅಸಮಾಧಾನಗಳು ವ್ಯಾಪಕವಾಗಿದ್ದುವು. ಒಬ್ಬ ಕಾರ್ಯಕರ್ತ ಹೆಗ್ಡೆವಾರ್ ರವರ ಬಳಿ ತಾನು ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ಜೈಲಿಗೆ ಹೋಗಲು ತಯಾರಾಗಿದ್ದೇನೆ. ಅದಕ್ಕೆ ಅನುಮತಿ ಕೊಡಬೇಕು ಎಂದು ಕೇಳಿದಾಗ ನೀನು ಜೈಲಿಗೆ ಸೇರಿದರೆ ನಿನ್ನ ಕುಟುಂಬದವರ ಗತಿ ಏನು ಎಂದು ಕೇಳಿದರು. ಆಗ ಅದಕ್ಕೆಲ್ಲಾ ವ್ಯವಸ್ಥೆ ಮಾಡಿದ್ದೇನೆ ಎನ್ನಲು ಆಗ ಜೈಲಿಗೆ ಹೋಗುವುದರ ಬದಲು ನೀನು ಅದೇ ಅವಧಿಯಲ್ಲಿ ಸಂಘದ ಕೆಲಸಕ್ಕೆ ನಿನ್ನ ಎಲ್ಲಾ ಸಮಯ ಕೊಡು ಎಂದರಂತೆ. ಹೀಗೆ ಸಂಘಟನೆಯಾಗಿ ಭಾಗವಹಿಸುವುದಿಲ್ಲ, ವೈಯುಕ್ತಿವಾಗಿ ಭಾಗವಹಿಸಬಹುದು ಎಂದು ಸಾರ್ವಜನಿಕ ನಿಲುಮೆ ತೆಗೆದುಕೊಂಡರೂ ಸಂಘದ ಒಳಗಿನ ನಿಲುವೆ ಬೇರೆಯಾಗಿತ್ತು. ಸಂಘದವರು ಯಾರೂ ಭಾಗವಹಿಸಬಾರದು ಎಂಬುದೇ ಅವರ ನಿಲುವಾಗಿತ್ತು.

ಚಳುವಳಿಗಳು ಕಾರ್ಯಕರ್ತರ ಮನಸ್ಸು ಕೆಡಿಸುತ್ತವೆ!

ಈ ನಿಲುಮೆ ಕೇವಲ ಹೆಗ್ಡೇವಾರ ರವರಿಗೆ ಸೀಮಿತವಾಗಿರಲಿಲ್ಲ. ಅವರ ನಂತರ ಆರೆಸ್ಸೆಸ್ ನ ಮುಖ್ಯಸ್ತರಾದ ಗೋಲ್ವಾಲ್ಕರ್ ರವರು ಜನ ಉತ್ಸಾಹದಿಂದ ಧುಮುಕುತ್ತಿದ್ದ ಯಾವುದೇ ಸ್ವಾತಂತ್ರ್ಯ ಚಳುವಳಿಯ ಹೋರಾಟಗಳಲ್ಲಿ ವೈಯುಕ್ತಿಕವಾಗಿಯೂ ಭಾಗವಹಿಸಲಿಲ್ಲ. ಮಾತ್ರವಲ್ಲ ಬೇರೆ ಯಾರೇ ಭಾಗವಹಿಸಬೇಕೆಂದು ಬಯಸಿದರೂ ಕೂಡ ಅದಕ್ಕೆ ಒಪ್ಪಿಗೆ ನೀಡುತ್ತಿರಲಿಲ್ಲ. ಅವರೇ ಹೆಗ್ಡೇವಾರ್ ರವರೊಡನೆ ಕಾರ್ಯಕರ್ತನೊಬ್ಬನ ಸಂಭಾಷಣೆ ಬಗ್ಗೆ ಪದೇ ಪದೇ ಉಲ್ಲೇಖ ಮಾಡುವುದರ ಮೂಲಕ ಸಂಘದ ಕಾರ್ಯಕರ್ತರಿಗೆ ತಿಳಿಸಿದವರು. ಅಷ್ಟೇ ಅಲ್ಲ ಈ ಚಳುವಳಿಗಳು ಒಂದು ಬೇಡದ ಉಪದ್ವಾಪ. ಸಂಘದ ಕಾರ್ಯಕರ್ತರ ಮನಸ್ಸನ್ನು ಕೆಡಿಸುತ್ತವೆ. ಅನಿವಾರ್ಯ ಸಹಿಸಬೇಕಷ್ಟೆ ಎಂಬಂತೆ ಹಲವು ಬಾರಿ ಮಾತಾಡಿದ್ದಾರೆ.

ಏಕೆ ಹೀಗೆ ಎಂಬ ಬಗ್ಗೆ ಈ ಸಂಭಾಷಣೆಗಳು ಮತ್ತು ಭಾಷಣಗಳಲ್ಲಿ ವ್ಯಕ್ತವಾಗಿರುವುದು ಸಂಘದ ದಿನನಿತ್ಯದ ಕೆಲಸಗಳು ಸ್ವಾತಂತ್ರ್ಯ ಚಳುವಳಿಗಿಂತ ಮುಖ್ಯವಾದುದು ಎಂಬ ಭಾವ. ಚಳುವಳಿಯಲ್ಲಿ ಭಾಗವಹಿಸುವುದು ಸಂಘದ ಶಿಸ್ತನ್ನು ಕೆಡಿಸುತ್ತದೆ. ಎಂಬುದು ಮತ್ತೊಂದು. ಇದರ ಅಂತರಾಳದಲ್ಲಿರುವುದೇನು ಎಂಬುದು ಯೋಚಿಸಬೇಕಾದ ಸಂಗತಿ. ಆದರೆ ಅವ್ಯಕ್ತವಾದ ಕಾರಣಗಳೆಂದರೆ ಬ್ರಿಟಿಷರು ನಮ್ಮ ದೇಶದ ಶತ್ರುಗಳಲ್ಲ ಮುಸ್ಲಿಮರೇ ದೇಶದ ಶತ್ರುಗಳು. ಆ ನಮ್ಮ ದೇಶ ಹಿಂದೂ ರಾಷ್ಟ್ರ. ಈ ರಾಷ್ಟ್ರದೊಳಗೇ ಹಿಂದೂ ರಾಷ್ಟ್ರ ಸೃಷ್ಟಿಯಾಗುವವರೆಗೂ ಬ್ರಿಟಿಷರೇ ಆಳುತ್ತಿರಲಿ ಎಂಬುದು ಆರೆಸ್ಸೆಸ್ ಸರಸಂಘಚಾಲಕರು ಬೇರೆ ಬೇರೆ ಹಲವು ಸಂದರ್ಭಗಳಲ್ಲಿ ಹೇಳಿರುವ ಮಾತಿನ ತಾತ್ಪರ್ಯ.

ಇಲ್ಲದಿದ್ದರೆ ಆರೆಸ್ಸೆಸ್‍ನ ಪೂರ್ಣ ಶಕ್ತಿಯನ್ನು ಎಲ್ಲರೊಡನೆ ಸೇರಿಯೋ, ಪ್ರತ್ಯೇಕವಾಗಿಯೋ ಸ್ವಾತಂತ್ರ್ಯ ಸಾಧನೆಗೆ ತೊಡಗಿಸಬೇಕಾಗಿತ್ತಲ್ಲವೇ ! 

ಸ್ವಾತಂತ್ರ್ಯದ ಪ್ರಭಾವಳಿಗಾಗಿ ತಹತಹ

ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದಿದ್ದರೂ, ಭಾಗವಹಿಸುವುದನ್ನು ನಿಷೇಧಿಸಿದರೂ ಕೂಡ ಸ್ವಾತಂತ್ರ್ಯ ಚಳುವಳಿಯ ಪ್ರಭಾವಳಿಯನ್ನು ಸೃಷ್ಟಿಸಿಕೊಳ್ಳುವ ಪ್ರಯತ್ನವೇಕೆ ? ನಮ್ಮ ನಿಲುವು ಹೀಗೆ. ಆದರಂತೆ ನಾವು ಭಾಗವಹಿಸಲಿಲ್ಲ ಎಂದು ಬಹಿರಂಗವಾಗಿ ಜನರ ಮುಂದೆ ಒಪ್ಪಿಸಬಾರದೇಕೆ?

ಈ ವಿಷಯದಲ್ಲಿ ಒಂದು ವಿಶೇಷ ಇಲ್ಲಿಯವರೆಗಿನ ಚರ್ಚೆಯಲ್ಲಿ ಹೆಚ್ಚಾಗಿ ಗಮನಕ್ಕೆ ಬಾರದೆ ಹೊಗಿದೆ. ಸ್ವಾತಂತ್ರ್ಯ ಚಳುವಳಿಯ ಪ್ರಭಾವಳಿ ಬೇಕಾಗಿರುವುದು ಬಿಜೆಪಿಗೇ ಹೊರತು ಆರೆಸ್ಸೆಸ್‍ಗಲ್ಲ. ಆರೆಸ್ಸೆಸ್ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವ ಬಗ್ಗೆ ಕ್ಲೇಮುಗಳನ್ನು ಮಾಡಿರುವುದು ಹೆಚ್ಚೇನೂ ಕಂಡುಬಂದಿಲ್ಲ. ನಿಜವಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಅಷ್ಟಿಷ್ಟಾದರೂ ಭಾಗವಹಿಸಿರುವ ಹೆಗ್ಡೇವರ್ ರವರನ್ನು ಸ್ವಾತಂತ್ರ್ಯ ವೀರ ಎಂದೇಕೆ ಇಲ್ಲಿಯವರೆಗೆ ಬಿಂಬಿಸಿಲ್ಲ ಎಂಬುದು ಇದಕ್ಕೆ ಸಾಕ್ಷಿಯಾಗಿದೆ. ಚುನಾವಣೆಗಳಲ್ಲಿನ ಮತಗಳಿಕೆಯ ಲಾಭಕ್ಕಾಗಿ ಹೊರತು ಈ ಪ್ರಭಾವಳಿಗೆ ಬೇರೆ ಪ್ರಯೋಜನವೇನಿಲ್ಲ.

ಬಿಜೆಪಿಯ ಮತ್ತು ಸಂಘ ಪರಿವಾರದ ಇತರ ಸಾರ್ವಜನಿಕ ಮುಖಗಳಿಗೆ ಮಾತ್ರ ಈ ಪ್ರಭಾವಳಿ ಅಗತ್ಯವಾಗಿದೆ. ಸ್ವಾತಂತ್ರ್ಯ ಚಳುವಳಿಯ ಪ್ರಭಾವಳಿ ಆರೆಸ್ಸೆಸ್ ನ ಈ ಮುಖವಾಡಗಳಿಗೆ ಏಕೆ ಬೇಕಾಗಿದೆಯೆಂದರೆ ನಮ್ಮ ಜನರ ನಡುವೆ ಸ್ವಾತಂತ್ರ್ಯ ಆಶಯಗಳು, ಮೌಲ್ಯಗಳಿಗೆ ಇನ್ನೂ ಬೆಲೆಯಿದೆ. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಅವರ ತ್ಯಾಗ ಬಲಿದಾನಗಳ ಬಗ್ಗೆ ಅಪಾರ ಗೌರವವಿದೆ. ಬಿಜೆಪಿಯ ದಿನನಿತ್ಯದ ಕೋಮುವಾದೀ ಕರಾಳತೆಯ ಮೇಲೆ ಪ್ರಜಾಸತ್ತಾತ್ಮಕ ಮೌಲ್ಯಗಳ ಮುಸುಕು ಹೊದಿಸಿ ಜನರ ಕಣ್ಣಿಗೆ ಮಣ್ಣು ತೂರಬೇಕಾಗಿದೆ. ಅದಕ್ಕಾಗಿ ಈ ಪ್ರಭಾವಳಿಯನ್ನು ಗಳಿಸಲು ಇನ್ನಿಲ್ಲದ ಪ್ರಯತ್ನ ನಡೆದಿದೆ.

ತಮ್ಮ ಬಳಿಯಲ್ಲಿಲ್ಲದ ಈ ಪ್ರಭಾವಳಿಯನ್ನು ಕದಿಯಲು ಬಿಜೆಪಿ ಮತ್ತು ಇತರರು ಎರಡು ರೀತಿಯಲ್ಲಿ ಪ್ರಯತ್ನ ನಡೆಸಿದ್ದಾರೆ. ಒಂದು - ಸ್ವಾತಂತ್ರ್ಯ ವೀರರೆಂದು ಜನಮನದಲ್ಲಿ ಸ್ಥಾಪಿತವಾಗಿರುವ ಸರ್ದಾರ್ ಪಟೇಲ್, ಭಗತ್ ಸಿಂಗ್, ಅಜಾದ್ ಚಂದ್ರಶೇಖರ್, ಗಾಂಧೀಜಿ, ಇತ್ತೀಚೆಗೆ ಡಾ. ಅಂಬೇಡ್ಕರ್ ರವರು ಕೂಡಾ. (ಬಹುಕಾಲ ಬಿಜೆಪಿ ತಮ್ಮ ಸಿದ್ಧಾಂತ ಗಾಂಧಿ ಸಮಾಜವಾದವೆಂದು ಹೇಳಿಕೊಳ್ಳುತ್ತಿದ್ದರು. ಈಗಲೂ ಮೋದಿಯವರ ಚರಕದಿಂದ ನೂಲುವ ಚಿತ್ರ, ಸಬರಮತಿ ಆಶ್ರಮಕ್ಕೆ ಭೇಟಿ ಇತ್ಯಾದಿ) ಮೊದಲಾದವರನ್ನು ತಮ್ಮವರನ್ನಾಗಿ ಬಿಂಬಿಸಲು ಪ್ರಯತ್ನಿಸುವುದು.

ಮತ್ತೊಂದು ರೀತಿಯೆಂದರೆ ತಮ್ಮ ನಾಯಕರೆಂದು ಬಿಂಬಿಸಬಹುದಾದವರಲ್ಲಿ ಸ್ವಾತಂತ್ರ್ಯದ ಲೇಪ ಅಂಟಿಸಲು ಸಾಧ್ಯವಾದವರನ್ನು ಹುಡುಕಾಡಿ ಬಣ್ಣ ಹೊಡೆಯಲು ಪ್ರಯತ್ನಿಸುವುದು.  ವಾಜಪೇಯೀ, ಸಾವರ್ಕರ್, ಶ್ಯಾಮ ಪ್ರಸಾದ ಮುಖರ್ಜಿ ಮುಂತಾದವರು.

ಭಗತ್ ಸಿಂಗ್‍ರವರನ್ನು ಕದಿಯಲು ಮಾಡಿದ ಪ್ರಯತ್ನ ಇನ್ನೇನು ಯಶಸ್ವಿಯಾಗುವುದರಲ್ಲಿತ್ತು . ಈ ಬಗ್ಗೆ ಕಮ್ಯೂನಿಸ್ಟ್ ಪಕ್ಷಗಳು ಎಚ್ಚತ್ತು ಭಗತ್ ಸಿಂಗ್ ರವರ ಮಾರ್ಕ್ಸ್‍ವಾದಿ ಒಲವು, ನಾಸ್ತಿಕತೆ, ಕೋಮುವಾದ ವಿರೋಧಿ ನಿಲುವು ಮೊದಲಾದ ವಿಚಾರಗಳ ಬಗ್ಗೆ ಜನರ ಮುಂದಿಡುವ ಕೆಲಸ ಮಾಡಿದ ಮೇಲೆ ಅದರಿಂದ ಹೆಚ್ಚು ಪ್ರಯೋಜನವಾಗುವುದಿಲ್ಲವೆಂದು ಕಂಡುಕೊಂಡಿದ್ದಾರೆ. ಗಾಂಧೀಜಿಯವರ ಕೊಲೆಗಾರನನ್ನು ಆರಾಧಿಸುವ ಕಾರಣದಿಂದ ಈ ಬಿಂಬದ ಪ್ರಯೋಜನ ಸೀಮಿತ. ಪಟೇಲ್ ರವರನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಅವರು ಆರೆಸ್ಸೆಸ್ ಅನ್ನು ನಿಷೇಧ ಮಾಡಿದ ಬಗ್ಗೆ ಜನರ ನಡುವೆ ಪ್ರಚಾರ ಮಾಡಲು ಕಾಂಗ್ರೆಸ್ ಆಸಕ್ತಿ ತೋರದಿರುವುದು ಒಂದು ಮುಖ್ಯ ಕಾರಣ.

ಸ್ವಾತಂತ್ರ್ಯ ಚಳುವಳಿಗಾರರಿಗೆ ದ್ರೋಹ ಬಗೆದ ವಾಜಪೇಯಿ

ವಾಜಪೇಯಿಯವರನ್ನು ಪ್ರಧಾನಿ ಪಟ್ಟಕ್ಕೆ ಅಭ್ಯರ್ಥಿಯಾಗಿ ಬಿಂಬಿಸುತ್ತಿರುವ ಸಂದರ್ಭದಲ್ಲಿ ವಾಜಪೇಯಿಯವರು ಚಲೇಜಾವ್ ಚಳುವಳಿಯಲ್ಲಿ ಭಾಗವಹಿಸುವ ಮೂಲಕ ಜೈಲಿಗೆ ಹೋಗಿದ್ದರು, ಆ ಮೂಲಕ ರಾಜಕೀಯವನ್ನು ಪ್ರವೇಶಿಸಿದರು ಎಂಬ ಬಗ್ಗೆ ಅವರ ಜೀವನ ಚಿತ್ರ, ಪತ್ರಿಕಾ ಲೇಖನಗಳಲ್ಲಿ ನಮೂದಿಸಲಾಯಿತು. ಆದರೆ ಫ್ರಂಟ್ ಲೈನ್ ಪತ್ರಿಕೆ ತನಿಖಾ ವರದಿ ಪ್ರಕಟಿಸಿ ಅದರೊಂದಿಗೆ ವಾಜಪೇಯಿಯವರ ಸಂದರ್ಶನ ನಡೆಸಿ ಅವರೇ ಸ್ವತಃ ಅದನ್ನು ಅಲ್ಲಗಳೆಯಲು ಹಚ್ಚಿದಾಗ ಅದಕ್ಕೆ ಪೂರ್ಣ ವಿರಾಮ ಬಿತ್ತು.

ವಾಜಪೇಯಿಯವರು ಹದಿನಾರು ವರ್ಷದವರಿದ್ದಾಗ ಅವರ ಊರಿನಲ್ಲಿ ಚಲೇಜಾವ್ ಚಳುವಳಿಯ ಭಾಗವಾಗಿ ಕೆಲ ಚಳುವಳಿಗಾರರು ಊರವರ ನೆರವಿನೊಡನೆ ಅರಣ್ಯ ಇಲಾಖೆಯ ಕಛೇರಿ ನಾಶಪಡಿಸಿದರು. ಆ ಗುಂಪಿನಲ್ಲಿ ವಾಜಪೇಯಿಯವರೂ ಇದ್ದರು, ಜೈಲು ವಾಸವನ್ನೂ ಅನುಭವಿಸಿದರು ಎಂಬ ಪುರಾಣವನ್ನು ಸೃಷ್ಟಿಸಲಾಯಿತು. ಆದರೆ ಫ್ರಂಟ್ ಲೈನ್ ಪತ್ರಿಕೆಯ ತನಿಖೆ ವಾಜಪೇಯಿಯವರೇ ಕೋರ್ಟ್‍ನಲ್ಲಿ ನೀಡಿದ ಪ್ರಮಾಣ ಪತ್ರದಲ್ಲಿ ನಾನು ಆ ಸಂದರ್ಭದಲ್ಲಿ ಕೇವಲ ದೂರ ನಿಂತು ನೋಡುವ ಕುತೂಹಲಿಯಾಗಿದ್ದನೆ ಹೊರತು ಭಾಗಿಯಲ್ಲ, ಅರಣ್ಯ ಇಲಾಖೆ ಕಛೇರಿಯ ಒಳಕ್ಕೆ ಹೋಗಲೇ ಇಲ್ಲ ಎಂದು ಹೇಳಿಕೆ ನೀಡಿರುವುದನ್ನು ಪತ್ತೆ ಹಚ್ಚಿತು. ಆ ಬಗ್ಗೆ ವಾಜಪೇಯಿಯವರನ್ನು ಪ್ರಶ್ನಿಸಲಾಗಿ ಅವರೂ ಅದನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಯಿತು. ಅದೇ ಸಮಯದಲ್ಲಿ ಬೆಳಕಿಗೆ ಬಂದ ವಿಚಾರವೆಂದರೆ ವಾಜಪೇಯಿಯವರು ಆ ಚಳುವಳಿಯ ಭಾಗವಹಿಸಲಿಲ್ಲ ಸರಿ. ಆದರೆ ಅದರ ನೇತೃತ್ವ ವಹಿಸಿದ ಇಬ್ಬರು ಮುಖ್ಯಸ್ಥರ ಹೆಸರನ್ನು ಮತ್ತು ಅವರೆಲ್ಲ ಹೇಗೆ ಅ ಕಛೇರಿ ನಾಶ ಮಾಡಿದರೆಂಬ ಬಗ್ಗೆ ವಿವರವಾಗಿ ಕೋರ್ಟ ಮುಂದೆ ನೀಡಿದ ಹೇಳಿಕೆ ಆ ಚಳುವಳಿಗಾರರನ್ನು ಜೈಲಿಗಟ್ಟಲು ಸಹಾಯಕವಾಯಿತು. ಇಡೀ ಊರಿಗೆ ಪುಂಡುಗಂದಾಯ ವಿಧಿಸಲು ಕಾರಣವಾಗಿದೆ ಎಂದು. ಇದು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸದಿದ್ದರೆ ಹೋಗಲಿ, ಆದರೆ ಸ್ವಾತಂತ್ರ್ಯ ಚಳುವಳಿಗೆ ದ್ರೋಹ ಬಗೆದಂತಾಗಲಿಲ್ಲವೆ ಎಂಬ ಪ್ರಶ್ನೆ ಹುಟ್ಟಿತು.

ಬ್ರ್ರಿಟಿಶರಿಗೆ ಸಾವರ್ಕರ್ ಅವರ “ವೀರ” ಶರಣಾಗತಿ !

ಇನ್ನು ಬಿಜೆಪಿ ಮತ್ತು ಆರೆಸ್ಸೆಸ್ ನ “ವೀರ” ಸಾವರ್ಕರ್ ರವರ ಹೆಸರನ್ನು ಪದೇ ಪದೇ ಬಳಸಲಾಗುತ್ತಿದೆ. ವಿವಿಧ ನಗರಗಳ ರಸ್ತೆ, ಸೇತುವೆಗಳಿಗೆ ಹೆಸರಿಡಲು ಕೂಡಾ ಜನ ಒಪ್ಪುವ ಹೆಸರುಗಳು ಇಲ್ಲದಿರುವುದು ಬಿಜೆಪಿಗೆ ದೊಡ್ಡ ಕೊರತೆಯಾಗಿದೆ. ಆದ್ದರಿಂದ ಸಾವರ್ಕರ್ ರವರ ಹೆಸರನ್ನು ಉಪಯೋಗಿಸುವ ಅನಿವಾರ್ಯತೆ ಇದೆ. ದೇಶದಲ್ಲಿ ಮೊತ್ತಮೊದಲು ಹಿಂದೂ ರಾಷ್ಟ್ರದ ಪರಿಕಲ್ಪನೆಗೆ ತಾತ್ವಿಕವಾಗಿ ವಿವರಣೆ ನೀಡಿದವರು ಎಂಬ ಹೆಗ್ಗಳಿಕೆಯೂ ಬಿಜೆಪಿಗೆ ಅವಶ್ಯವಾದ ಗುಣವೇ. ಆದರೆ ಇವರನ್ನು “ವೀರ” ಎಂದು ಕರೆಯುವುದು ವೀರ ಎಂಬ ಹೆಸರಿಗೆ ಅಪಮಾನ. ಆದರೆ ಇವರ ಹೆಸರನ್ನು ಅಂಡಮಾನ್ ವಿಮಾನ ನಿಲ್ದಾಣಕ್ಕೆ ಇಡಲಾಗಿದೆ. ನೂರಾರು ಮಂದಿ ಕ್ರಾಂತಿಕಾರಿಗಳು ಸೆರೆಯಾಗಿದ್ದ ಆ ಜಾಗಕ್ಕೆ ಸಾವರ್ಕರ್ ರವರ ಹೆಸರನ್ನಿಟ್ಟಿರುವುದು ದೊಡ್ಡ ಅಪಹಾಸ್ಯ. ಏಕೆಂದರೆ ಸೆರೆಯಿಂದ ಹೇಗಾದರೂ ಮಾಡಿ ಹೊರಗೆ ಬರಬೇಕೆನ್ನುವ ತವಕದಲ್ಲಿ 1913 ರಲ್ಲಿ ಶರಣಾಗತಿ ಪತ್ರ ಬರೆದುಕೊಡುವ ಮತ್ತು ಆ ಪತ್ರದಲ್ಲಿ “ನೀವು ಏನು ಹೇಳಿದರೂ ಶಿರಸಾವಹಿಸಿ ಮಾಡುತ್ತೇನೆ. ನನ್ನ ಅನುಯಾಯಿಗಳನ್ನೆಲ್ಲ ಸ್ವತಂತ್ರ್ಯ ಚಳುವಳಿಯ ಹಾದಿಯಿಂದ ಬಿಡಿಸುತ್ತೇನೆ” ಎಂದು ಬರೆದಿರುವುದು ಚಳುವಳಿಗೆ ಬಗೆದ ದ್ರೋಹದ ಮತ್ತೊಂದು ಮಾದರಿ. ಇದನ್ನು ಆಗು ಮಾಡಲೋ ಎಂಬಂತೆ ಮುಂದೆ 1942ರ ಚಲೇಜಾವ್ ಚಳುವಳಿಗೆ ಬಗೆದ ದ್ರೋಹ ಇನ್ನೂ ಒಂದು ಮಾದರಿಯದು.

ಆ ಸಮಯದಲ್ಲಿ ಕಾನ್ಪುರದಲ್ಲಿ ಹಿಂದೂ ಮಹಾಸಭೆಯ ಸಮಾವೇಶವೊಂದನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ ಸಾವರ್ಕರ್ ರವರು ಚಲೇಜಾವ್ ಚಳುವಳಿಯ ನಿರ್ಣಯದಲ್ಲಿ ಚುನಾಯಿತ ಸದಸ್ಯರೆಲ್ಲ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು, ಪ್ರಾಂತಗಳಲ್ಲಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರಗಳಿಗೂ ರಾಜೀನಾಮೆ ನೀಡಿ ಹೊರಬರಬೇಕು ಎಂಬ ಕರೆಯನ್ನು ತಿರಸ್ಕರಿಸಲು ಸಲಹೆ ಮಾಡಿದರು. ಅದಕ್ಕೊಂದು ತಾತ್ವಿಕ ರೂಪ ನೀಡಿ ಸಮರ್ಥಿಸಿಕೊಂಡರು ‘ನಮ್ಮ ತತ್ವ ಜವಾಬ್ದಾರಿಯುತ ಸಹಕಾರ. ವಿವಿಧ ಸ್ಥಾನಗಳಿಗೆ ಚುನಾಯಿತರಾಗಿರುವವರೆಲ್ಲರೂ ಅವರವರ ಸ್ಥಾನಗಳಲ್ಲಿ ಮುಂದುವರೆಯಬೇಕು. ಆ ಅಧಿüಕಾರ ಕೇಂದ್ರಗಳನ್ನು ಹಿಂದೂಗಳ ನ್ಯಾಯಬದ್ಧವಾದ ಹಕ್ಕುಗಳನ್ನು ರಕ್ಷಿಸಲು ಮತ್ತು ಉತ್ತೇಜನ ನೀಡಲು ಬಳಸಿಕೊಳ್ಳಬೇಕು ನಮ್ಮ ಗುರಿಗಳನ್ನು ಸಾಧಿಸಲು ಸಕಾರಣವಾದ ರಾಜಿಗಳನ್ನು ಮಾಡಿಕೊಳ್ಳುವುದು ಅನಿವಾರ್ಯ ‘ದೇಶದ ಸ್ವಾತಂತ್ರ್ಯದ ಚಳುವಳಿ  ಬೆಳೆಯುತ್ತಿಉವ ಸಂದರ್ಭದಲ್ಲಿ ಇಂತಹ ಅವಕಾಶವಾದಿ ಸಲಹೆ ನೀಡುವವರು ಮತ್ತು ಅದನ್ನು ತಾತ್ವೀಕರಿಸುವವರು ಸ್ವಾತಂತ್ರ್ಯ ಹೋರಾಟಗಾರರು!!  ಅ ಸಂದರ್ಭದಲ್ಲಿ ಹಿಂದೂ ಮಹಾಸಭಾ ಮೂರು ಪ್ರಾಂತಗಳಲ್ಲಿ ಮುಸ್ಲಿಂ ಲೀಗಿನ ಜೊತೆಗೆ ಮೈತ್ರಿ ಸರ್ಕಾರಗಳನ್ನು ನಡೆಸುತ್ತಿತ್ತು. ಬಂಗಾಲ, ಸಿಂದ್ ಮತ್ತು ವಾಯುವ್ಯ ಪ್ರದೇಶ. ಸಿಂದ್ ನ ವಿಧಾನಸಭೆ ಪಾಕಿಸ್ತಾನಕ್ಕೆ ಸೇರಬೇಕೆಂದು ನಿರ್ಣಯ ಪಾಸು ಮಾಡಿದಾಗಲೂ ಕೂಡ ಪ್ರತಿಭಟನೆ ಇಲ್ಲ.

ಬ್ರಿಟಿಶರಲ್ಲಿ ನಂಬಿಕೆಯಿಡಿ : ಶ್ಯಾಮ ಪ್ರಸಾದ್ ಮುಖರ್ಜಿ

ಇನ್ನು ಸಂಘ ಪರಿವಾರದ ಮತ್ತೊಬ್ಬ ಹೀರೋ, ಜನಸಂಘದ ಸ್ಥಾಪಕರಲ್ಲೊಬ್ಬರಾದ ಶ್ಯಾಮಪ್ರಸಾದ ಮುಖರ್ಜಿಯವರ ಅಣಿ ಮುತ್ತುಗಳನ್ನು ನೋಡೋಣ. ಚಲೇಜಾವ್ ಚಳುವಳಿಯ ಸಂದರ್ಭದಲ್ಲಿ ಅವರು ಬಂಗಾಲದಲ್ಲಿ ಮುಸ್ಲಿಂ ಲೀಗಿನ ಜೊತೆ ಮೈತ್ರಿ ಸರಕಾರದಲ್ಲಿ ಅರ್ಥ ಮಂತ್ರಿ.

“ಬಂಗಾಲದಲ್ಲಿ ಚಲೇಜಾವ್ ಚಳುವಳಿಯನ್ನು ಎದುರಿಸುವುದು ಹೇಗೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ನಮ್ಮ ಪ್ರಾಂತದ ಆಡಳಿತವನ್ನು ನಾವು ಹೇಗೆ ನಡೆಸಬೇಕೆಂದರೆ, ಕಾಂಗ್ರೆಸ್ ತನ್ನ ಅತ್ಯುತ್ತಮ ಪ್ರಯತ್ನ ಮಾಡಿದರೂ ಈ ಚಳುವಳಿ ನಮ್ಮ ಪ್ರಾಂತದಲ್ಲಿ ಬೇರು ಬಿಡಲು ಸಾಧ್ಯವಾಗಬಾರದು. ಜನರಿಗೆ ನಾವು ಹೇಳಬೇಕು, ಕಾಂಗ್ರೆಸ್ ಬಯಸುವಂತಹ ಸ್ವಾತಂತ್ರ್ಯ ನಮಗೆ ಚುನಾಯಿತ ಪ್ರತಿನಿಧಿಗಳಿಗೆ ಈಗಾಗಲೇ ಸಿಕ್ಕಿದೆ. ಕೆಲ ಮಿತಿಗಳಿರಬಹುದಷ್ಟೆ.  ಭಾರತೀಯರು ಬ್ರಿಟಿಷರಲ್ಲಿ ನಂಬಿಕೆಯಿಡಬೇಕು”

ಹಲವಾರು ದಶಕಗಳ ಕಾಲದ ಅನುಭವ ಬ್ರಿಟಿಷರನ್ನು ನಂಬುವುದು ಸಾಧ್ಯವಿಲ್ಲ, ನಮಗೆ ಅವರು ಸ್ವಾತಂತ್ರ್ಯ ಕೊಡಲು ಸಿದ್ದವಿಲ್ಲ ಎಂದು ಸಾಬೀತಾಗಿರುವಾಗ, ದೇಶಪ್ರೇಮೀ ಹೋರಾಟವೊಂದು ಬಿರುಸಾಗಿ ನಡೆಯುತ್ತಿರುವಾಗ ಅದನ್ನು ತುಳಿಯುವ ಮಾತನಾಡುವವರು ದೇಶಪ್ರೇಮಿಗಳು?!. ಇವರು ಬೇರೆಯವರ ದೇಶಪ್ರೇಮದ ಬಗ್ಗೆ ಪ್ರಮಾಣ ಪತ್ರ ನೀಡುವ ಅರ್ಹತೆ ತಮಗೆ ಮಾತ್ರ ಇದೆ ಎಂದು ಘೋಷಿಸಿಕೊಳ್ಳುತ್ತಿದ್ದಾರೆ.

ಪಾಕಿಸ್ತಾನದ ಜನಕ ಸಾವರ್ಕರ್ “ಎರಡು-ರಾಷ್ಟ್ರ ಸಿದ್ಧಾಂತ”

ಆರೆಸ್ಸೆಸ್ ಸ್ವಾತಂತ್ರ್ಯ ಸಾಧನೆಗೆ ಉಂಟು ಮಾಡಿದ ತೊಡಕುಗಳು ಅವರ ಭಾಗವಹಿಸುವಿಕೆಗೆ/ಭಾಗವಹಿಸದಿರುವಿಕೆಗಷ್ಟೇ ಸೀಮಿತವಾಗಿಲ್ಲ. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿಯೆ ಕೋಮು ಗಲಭೆ ಎಬ್ಬಿಸುವುದು, ಎದ್ದ ಕೋಮು ಗಲಭೆಗಳಿಗೆ ತುಪ್ಪ. ಎಣ್ಣೆ ಹೊಯ್ದು ಅದನ್ನು ಮತ್ತಷ್ಟು ಹಬ್ಬುವಂತೆ ಮಾಡುವುದು, ಕೋಮು ದ್ವೇಷ ಹಬ್ಬಿಸಲು ನಿರಂತರ ಪ್ರಯತ್ನ. ಇಂತಹವುಗಳ ಮೂಲಕ ಮುಸ್ಲಿಮರಲ್ಲಿ ಈ ದೇಶದಲ್ಲಿ ತಮಗೆ ಸುರಕ್ಷತೆ ಸಾಧ್ಯವಿಲ್ಲ. ಆದ್ದರಿಂದ ಬೇರೆ ದೇಶಕ್ಕಾಗಿ ಹೋರಾಟ ಮಾಡಿ ಪಡೆಯಲೇಬೇಕು ಎಂಬ ಹಠ ಮುಸ್ಲಿಮ್ ಜನ ಸಾಮಾನ್ಯರಲ್ಲಿ ಮೂಡುವಂತಾಯಿತು. ನಮಗೆ ಪಾಕಿಸ್ತಾನ ಬೇಕೆ ಬೇಕು ಎಂದು ಮುಸ್ಲಿಂ ಲೀಗ್ ಹೋರಾಟಕ್ಕೆ ಇಳಿಯಿತು. ಈ ಎರಡು ರಾಷ್ಟ್ರ ಸಿದ್ಧಾಂತವನ್ನು ನಮ್ಮ ದೇಶದಲ್ಲಿ ಎಲ್ಲರಿಗಿಂತ ಮೊದಲು ಮಂಡಿಸಿದ್ದೇ ಇವರ ವೀರ ಸಾವರ್ಕರ್. ಹೀಗೊಂದು ವಿಶಾಲ ಭಾರತದ ಬದಲಾಗಿ ವಿಭಜಿತ ಭಾರತವಾಗಿ ಇಂದು ಕೂಡ ಹಲವು ಸಮಸ್ಯೆಗಳಿಗೆ ಬೀಜ ಬಿತ್ತಿದ್ದೇ ಹಿಂದೂ ರಾಷ್ಟ್ರವಾದಿಗಳು. ದೇಶ ವಿಭಜನೆಯಾಗುವ ಸಮಯದಲ್ಲಿನ ಗಲಭೆಗಳು ಸಾವಿರಾರು ಸಾವು ನೋವುಗಳು, ಲಕ್ಷಾಂತರ ಜನರು ಇಲ್ಲಿಂದ ಅಲ್ಲಿಗೆ ಕರುಳು ಕಿತ್ತುಕೊಂಡು ನಿರಾಶ್ರಿತರಾಗಿ ವಲಸೆ ಬರುವ ಸಂಕಟಗಳು ಒಂದೇ ಎರಡೇ!! ಈ ಎಲ್ಲದರಲ್ಲಿ ಆರೆಸ್ಸೆಸ್ ನ ಪಾತ್ರ ಅನೇಕ ಅಧ್ಯಯನಗಳಲ್ಲಿ, ತನಿಖಾ ವರದಿಗಳಲ್ಲಿ ದಾಖಲಾಗಿದೆ. ಅಂದಿನ ಬಹು ಘೋರ ಕೋಮು ಗಲಭೆಗಳು ಸಂಭವಿಸಿದ್ದೇ ರಾಜರ ಆಡಳಿತದಲ್ಲಿದ್ದ ಸಂಸ್ಥಾನಗಳಲ್ಲಿ. ಹೈದರಾಬಾದ್, ಜಮ್ಮು, ಆಲ್ವಾರ್, ಭರತ್‍ಪುರ್, ಮೇವತ್, ಪಾಟಿಯಾಲ ಹೆಸರಿಸಬಹುದಾದ ಕೆಲವು. ಇನ್ನು ದೆಹಲಿಯಲ್ಲಿ ಮತ್ತು ಸುತ್ತ ಮುತ್ತ ಇದ್ದ, ಭಾರತದಲ್ಲಿಯೇ ತಮ್ಮ ಬದುಕು ಕಂಡುಕೊಳ್ಳಬೇಕೆಂದು ನಿಶ್ಚಯ ಮಾಡಿದ್ದ ಮುಸ್ಲಿಮರನ್ನು ಕೋಮು ಗಲಭೆಗಳನ್ನು ಸೃಷ್ಟಿಸಿ ಪಾಕಿಸ್ತಾನಕ್ಕೆ ಓಡಿಸಿದ್ದರಲ್ಲಿ ಆರೆಸ್ಸೆಸ್ ನ ಪಾತ್ರವೇ ಪ್ರಧಾನ. ಸ್ವತಂತ್ರ ಭಾರತದಲ್ಲಿ ಉಂಟು ಮಾಡಿದ ನೂರಾರು ಕೋಮುಗಲಭೆಗಳ ಬಗ್ಗೆ ವಿವರಿಸಲು ಇಲ್ಲಿ ಸಾಧ್ಯವಿಲ್ಲ.

ಈ ಕೋಮು ದಂಗೆಗಳನ್ನು ಹುಟ್ಟು ಹಾಕುವುದರಲ್ಲಿ ಭಾರತ ಸ್ವತಂತ್ರವಾಗುವ ಹೊಸ್ತಿಲಲ್ಲಿರುವಾಗ ನೀಡಿದ ಡೈರೆಕ್ಟ್ ಆಕ್ಷನ್ ಎಂಬ ಕರೆಯ ಮತ್ತು ಮುಸ್ಲಿಂ ಲೀಗಿನ ಪಾತ್ರವನ್ನು ಕೂಡ ನೆನಪಿನಲ್ಲಿಟ್ಟುಕೊಳ್ಳಬೇಕು. ಕಲಕತ್ತಾ ಒಂದೇ ನಗರದಲ್ಲಿ 5,000ಕ್ಕಿಂತ ಹೆಚ್ಚು ಕೊಲೆಗಳು ನಡೆದವು.

ಆರೆಸ್ಸೆಸನ “ರಾಷ್ಟ್ರಪ್ರೇಮ”ದ ಚರಿತ್ರೆಗೆ ಈ ಅಂಶಗಳೂ ಸೇರದಿದ್ದರೆ ಪೂರ್ತಿಯಾಗುತ್ತದೆಯೇ? ಇದಕ್ಕೆ ಸರಿಯಾದ ಹೆಸರು ರಾಷ್ಟ್ರದ್ರೋಹವಲ್ಲವೇ? ಭಾರತದ ನೈಜ ರಾಷ್ಟ್ರಪ್ರೇಮಿ ಪ್ರಜೆಗಳು ತೀರ್ಮಾನ ಮಾಡಬೇಕು.