Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ರಾಜಕೀಯ ಎಂಬುದು ವಿಚಾರಗಳ ಸಂಘರ್ಷವಾಗಲಿ, ಆಯುಧಗಳದ್ದಲ್ಲ, ಕೀಳು ತಂತ್ರಗಳದ್ದಲ್ಲ

ಸಂಪುಟ: 
11
ಸಂಚಿಕೆ: 
34
Tuesday, 15 August 2017

ಕೇಂದ್ರದ ಹಿರಿಯ ಬಿಜೆಪಿ ಮಂತ್ರಿಗಳಿಗೆ ಕೇರಳದ ಯುವ ಸಿಪಿಐ(ಎಂ) ಸಂಸದನ ಬಹಿರಂಗ ಪತ್ರ

ಜುಲೈ 29 ರಂದು ತಿರುವನಂತಪುರದಲ್ಲಿ ಆರೆಸ್ಸೆಸ್ ‘ಕಾರ್ಯವಾಹ’ ರಾಜೇಶ್ ಎಂಬಾತನ ಹತ್ಯೆಯನ್ನು ಬಳಸಿಕೊಂಡು ಕೇರಳದ ಎಲ್‍ಡಿಎಫ್ ಸರಕಾರದ ಮೇಲೆ ಕೇಂದ್ರ ಸರಕಾರದ ಹೊಸ ದಾಳಿ ಆರಂಭಿಸಿತು. ಕೊಲೆ ಮಾಡಿದವರನ್ನು 12 ಗಂಟೆಗಳೊಳಗೆ ಬಂಧಿಸಿದರೂ ರಾಜ್ಯಪಾಲರು ಈ ಬಗ್ಗೆ ಮುಖ್ಯಮಂತ್ರಿಗಳಿಗೆ ‘ಸಮನ್ಸ್’ ಕಳಿಸುವ ಮಟ್ಟಕ್ಕೆ ಹೋದರು. ಕೇಂದ್ರ ಗೃಹ ಮಂತ್ರಿಗಳು ಮುಖ್ಯಮಂತ್ರಿಗಳಿಗೆ ಸೂಕ್ತ ಕ್ರಮ ವಹಿಸುವಂತೆ ಹೇಳಿದರು. ಬಿಜೆಪಿ ಹಿಂಸಾತ್ಮಕ ಬಂದ್ ನಡೆಸಿತು. ಮುಖ್ಯಮಂತ್ರಿಗಳು ಬಿಜೆಪಿ ಮತ್ತು ಸಿಪಿಐ(ಎಂ) ಮುಖಂಡರ ಸಭೆ ಕರೆದರೂ ಅದರಿಂದೇನೂ ಪ್ರಯೋಜನವಿಲ್ಲ, ರಾಷ್ಟ್ರಪತಿ ಆಳ್ವಿಕೆ ಹಾಕಬೇಕು ಎಂಬ ಬಿಪೆಪಿ-ಆರೆಸ್ಸೆಸ್ ಮುಖಂಡರ ಕೂಗಾಟದ ನಡುವೆ, ಸರಕಾರದ ವತಿಯಿಂದ ತನ್ನ ಜವಾಬ್ದಾರಿ ಕ್ಷೇತ್ರಗಳಾದ ಹಣಕಾಸು ಅಥವ ರಕ್ಷಣಾ ಇಲಾಖೆಗೆ ಏನೇನೂ  ಸಂಬಂಧಪಡದ ವಿಷಯಕ್ಕೆ ಕೇಂದ್ರ ಸಂಪುಟದ ಅತಿ ಹಿರಿಯ ಮಂತ್ರಿಗಳಲ್ಲೊಬ್ಬರಾದ ಅರುಣ್ ಜೇಟ್ಲಿಯವರು ತಿರುವನಂತಪುರಕ್ಕೆ ಧಾವಿಸಿದರು., ರಾಜೇಶ್ ಮನೆಗೆ ಭೇಟಿ ನೀಡಲು, ಎಲ್‍ಡಿಎಫ್ ಸರಕಾರಕ್ಕೆ ‘ಎಚ್ಚರಿಕೆ’ ನೀಡಲು. ಆದರೆ ಬಿಜೆಪಿ-ಆರೆಸ್ಸೆಸ್‍ನ ಈ ಯೋಜಿತ ತಂತ್ರವೇ ಅವರ ಕುತಂತ್ರವನ್ನು ದೇಶದ ಪ್ರಜಾಪ್ರಭುತ್ವವಾದಿಗಳ ಮುಂದೆ ಬಯಲು ಮಾಡಿದೆ.

ಯುವ ಸಂಸದ ಎಂ.ಬಿ.ರಾಜೇಶ್ ಸೂಚಿಸಿದಂತೆ ಬಿಜೆಪಿಯ ಈ ಹಿರಿಯ ಅನುಭವೀ ಮಂತ್ರಿಗಳು ಅಲ್ಪ ರಾಜಕೀಯ ಪರಿಗಣನೆಗಳನ್ನು ಮೀರಿ ನಿಲ್ಲುವ ಪರಿಪಕ್ವತೆಯನ್ನು ತೋರಲಿಲ್ಲ. ಅವರು ರಾಜಭವನದಲಿದ್ದಾಗ ಅಲ್ಲಿಯೇ ಹೊರಗೆ ಪ್ರತಿಭಟನೆಗೆ ನೆರೆದಿದ್ದ ನೂರಾರು ಮಂದಿಯಲ್ಲಿ ಬಿಜೆಪಿ-ಆರೆಸ್ಸೆಸ್ ಕೊಂದಿರುವ 21 ಯುವಜನರ ಕುಟುಂಬದ ಸದಸ್ಯರೂ ಇದ್ದರು. ಜೇಟ್ಲಿಯವರು ಅವರನ್ನು ಭೇಟಿಯಾಗಲಿಲ್ಲ. ರಕ್ಷಣಾ ಮಂತ್ರಿ ಗಳಾಗಿದ್ದರೂ, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಗಡಿಗಳಲ್ಲಿ ಪ್ರಾಣತ್ಯಾಗ ಮಾಡಿದ ರಾಜ್ಯದ ಸೈನಿಕರ ಕುಟುಂಬಗಳನ್ನೂ ಭೇಟಿಯಾಗಲಿಲ್ಲ.

ಇದರೊಂದಿಗೆ ಇದೇ ವೇಳೆಯಲ್ಲಿ ದಿಲ್ಲಿ ಮತ್ತು ಉತ್ತರ ಭಾರತದ ಇತರೆಡೆಗಳ ಪತ್ರಿಕೆಗಳಲ್ಲಿ ಪ್ರಕಟವಾದ ಕೇರಳ ರಾಜ್ಯ ಸರಕಾರದ ಜಾಹೀರಾತು ಸಂಘ ಪರಿವಾರದ ಅಪಪ್ರಚಾರವನ್ನು ಬಯಲಿಗೆಳೆಯಿತು. ಕೇರಳ ಏಕೆ ದೇಶದಲ್ಲಿ ನಂ..1 ರಾಜ್ಯವಾಗಿದೆ ಎಂಬುದನ್ನು ಬಿಂಬಿಸುವ ಈ ಜಾಹೀರಾತು ಈ ಏಳು ಅಂಶಗಳನ್ನು ಮುಖ್ಯವಾಗಿ ಪಟ್ಟಿ ಮಾಡಿದೆ: *ಕಾನೂನು-ಸುವ್ಯವಸ್ಥೆಯಲ್ಲಿ ಅತ್ಯುತ್ತಮ-ಅತ್ಯಂತ ಶಾಂತಿಯುತ ರಾಜ್ಯ *ಅತ್ಯುತ್ತಮ ಕೋಮು ಸೌಹಾರ್ದ *ಆಳ್ವಿಕೆಯಲ್ಲಿ ಅತ್ಯುತ್ತಮ *ಕನಿಷ್ಟ ಭ್ರಷ್ಟಾಚಾರದ ರಾಜ್ಯ *ಅತ್ಯುತ್ತಮ ಮಾನವ ಅಭಿವೃದ್ಧಿ ಸೂಚ್ಯಂಕಗಳು *ಅತಿ ಹೆಚ್ಚು ಸಾಕ್ಷರತೆ ಮತ್ತು ತಲಾ ಆದಾಯ *ಅತ್ಯಂತ ಸುರಕ್ಷಿತ, ಆರೋಗ್ಯವಂತ ಮತ್ತು ಪರಿಸರ ಸ್ನೇಹಿ ರಾಜ್ಯ

ಇತರ ಸಂಘ ಪರಿವಾರದ ಮುಖಂಡರಂತೆ ‘ಭಂಡತನ ಮತ್ತು ಕಳಪೆ ಗುಣಮಟ್ಟವೇ ಪ್ರಮುಖ ಲಕ್ಷಣ’ವಾಗಿರುವ ಮುಖಂಡರ ಸಾಲಿಗೆ ಸೇರಿರದ ಹಿರಿಯ ಮುಖಂಡ ಜೇಟ್ಲಿಯವರು ‘ಅಲ್ಪ ರಾಜಕೀಯ ಪರಿಗಣನೆಗಳಿಂದ ಮೇಲೆದ್ದು ನಿಂತು ಪ್ರಶ್ನೆಗಳನ್ನು ಪರಿಹರಿಸುವಲ್ಲಿ ಒಂದು ಜವಾಬ್ದಾರಿಯುತ ಪಾತ್ರವನ್ನು’ ವಹಿಸುತ್ತಾರೆ ಎಂದು ಆಶಿಸುತ್ತ ಅವರಿಗೆ ತಿರುವನಂತಪುರದ ಭೇಟಿಗೆ ಹೊರಡುವ ಮೊದಲು ಒಂದು ಬಹಿರಂಗ ಪತ್ರವನ್ನು ಸಿಪಿಐ(ಎಂ)ನ ಯುವ ಲೋಕಸಭಾಸದಸ್ಯ ಎಂ.ಬಿ.ರಾಜೇಶ್ ಬರೆದರು. ಸಂಘ ಪರಿವಾರ ಹಣೆಯುತ್ತಿರುವ ಸುಳ್ಳುಗಳನ್ನು ಬಯಲು ಮಾಡಿರುವ ಈ ಪತ್ರದ ಪೂರ್ಣಪಾಠ ಇಲ್ಲಿದೆ. (ಇಲ್ಲಿರುವ ಒತ್ತುಗಳು ನಮ್ಮವು)

ಮಾನ್ಯ ಶ್ರೀ ಅರುಣ್ ಜೇಟ್ಲಿ ಜಿ,

ಉಪರಾಷ್ಟ್ರಪತಿ ಚುನಾವಣೆಯಲ್ಲಿ ನಿಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದಕ್ಕಾಗಿ ನನ್ನ ಅಭಿನಂದನೆಗಳು. ನೀವು ಎರಡು ಪ್ರಮುಖ ವಿಷಯಗಳ-ಹಣಕಾಸು ಮತ್ತು ರಕ್ಷಣಾ ಇಲಾಖೆಗಳ-ಉಸ್ತುವಾರಿ ನೋಡಿಕೊಳ್ಳುವ ಒಬ್ಬ ಹಿರಿಯ ಸಂಪುಟ ಮಂತ್ರಿಯಾಗಿದ್ದೀರಿ. ಜಿ ಎಸ್ ಟಿ ತಂದೊಡ್ಡಿರುವ ಸಮಸ್ಯೆಗಳನ್ನು ಪರಿಹರಿಸುವುದೂ ಸೇರಿದಂತೆ ಆರ್ಥಿಕ ನಿಧಾನಗತಿ, ಕಡಿಮೆಯಾಗುತ್ತಿರುವ ಉದ್ಯೋಗ ಮೊದಲಾದ ವಿಚಾರಗಳ ಬಗ್ಗೆ ಗಂಭೀರ ಚಿಂತನೆ ನಡೆಸುವ ತುರ್ತು ಇರುವ ಈ ಸಂದರ್ಭದಲ್ಲಿಯೂ ನೀವು ದಕ್ಷಿಣ ಭಾರತದ ತುದಿಯಲ್ಲಿರುವ ನಮ್ಮ ರಾಜ್ಯಕ್ಕೆ ಭೇಟಿ ನೀಡುವ ಶ್ರಮ ವಹಿಸಿದ್ದು ಕೇರಳ ಕುರಿತಾದ ತಮ್ಮ ಕಾಳಜಿಯನ್ನು ಎತ್ತಿ ತೋರುತ್ತದೆ.

ನಿಮಗೆ ನಮ್ಮ  ದೇಶಕ್ಕಾಗಿ ಸೇವೆ ಸಲ್ಲಿಸುತ್ತ ಪ್ರಾಣ ತ್ಯಾಗ ಮಾಡಿದ ಧೀರ ಸೈನಿಕರ ಕುಟುಂಬಗಳನ್ನು ಭೇಟಿಯಾಗಲು ನಿಮ್ಮ ಭಾರೀ ಜವಾಬ್ದಾರಿಗಳು ಮತ್ತು  ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ ಸಮಯ ಎಂದಾದರೂ ಸಿಕ್ಕೀತೋ ಗೊತ್ತಿಲ್ಲ. ಆದರೂ ಸರ್, ಕಳೆದ ವಾರ ಗೂಂಡಾಗಳ ಜಿದ್ದಾಜಿದ್ದಿನಲ್ಲಿ ಪ್ರಾಣ ಕಳೆದುಕೊಂಡ ಒಬ್ಬ ಆರೆಸ್ಸೆಸ್ ಕಾರ್ಯಕರ್ತನ ಮನೆಗೆ ಭೇಟಿ ಕೊಡಲು ಸಮಯ ಹೊಂದಿಸಿಕೊಂಡಿದ್ದೀರಿ.  ನಿಮ್ಮ ತತ್ವಸಿದ್ಧಾಂತಗಳು ನನಗೆ ತದ್ವಿರುದ್ಧವಾಗಿದ್ದರೂ, ಅದರೆಡೆಗಿನ ನಿಮ್ಮ ಬದ್ಧತೆಯನ್ನು ಮೆಚ್ಚುತ್ತೇನೆ.

ನಾವು ಕೇರಳೀಯರು ಅತಿಥಿ ಸತ್ಕಾರಕ್ಕೆ ಹೆಸರಾವರಾದ್ದರಿಂದ ಉತ್ತಮ ಆತಿಥೇಯರಾಗಿ  ನಮ್ಮ ಅತಿಥಿಗಳನ್ನು ಉನ್ನತ ಗೌರವದಿಂದ ಸ್ವಾಗತಿಸುತ್ತೇವೆ ಹೊರತು ಕಲ್ಲುಗಳಿಂದಲ್ಲ. ಅದು ಪ್ರತಿಪಕ್ಷಗಳ ನಾಯಕರೇ ಆಗಿರಲಿ ಅಥವಾ ರಾಜಕೀಯ ಪ್ರವಾಸಕ್ಕಾಗಿ ಭೇಟಿ ಕೊಡುವ ಸಚಿವರಾಗಿರಲಿ, ನಮ್ಮ ಸುಂದರವಾದ ರಾಜ್ಯಕ್ಕೆ ನಾವು ಆದರದಿಂದ ಬರಮಾಡಿಕೊಳ್ಳುತ್ತೇವೆ. ನಮ್ಮ ಗೌರವಾನ್ವಿತ ಮುಖ್ಯಮಂತ್ರಿ ಕಾಮ್ರೇಡ್ ಪಿಣರಾಯಿ ವಿಜಯನ್ ಬೇರೆ ರಾಜ್ಯಗಳಲ್ಲಿ, ನಿಮ್ಮದೇ ಸರಕಾರ ಇರುವ ಮಧ್ಯಪ್ರದೇಶದಲ್ಲಿ ಮತ್ತು ಕರ್ನಾಟಕದಲ್ಲಿ ನಿಮ್ಮ ಪಕ್ಷದ ಕಾರ್ಯಕರ್ತರಿಂದ ಕಹಿ ಅನುಭವವಾಗಿರುವುದನ್ನು ಇಲ್ಲಿ ನೆನಪಿಸುವುದು ಸೂಕ್ತವಾದೀತು ಎಂದು ನಾನು ಭಾವಿಸುತ್ತೇನೆ. .

ನಿಮ್ಮನ್ನು  ಭಂಡತನ ಮತ್ತು ಕಳಪೆ ಗುಣಮಟ್ಟವೇ ಪ್ರಮುಖ ಪಕ್ಷಣವಾಗಿರುವ  ಎಂದಿನ ಸಂಘಪರಿವಾರದ ಮುಖಂಡನೆಂದು ಕಾಣಲಾಗುತ್ತಿಲ್ಲ, ಬದಲಾಗಿ ಆಧುನಿಕ ಕಣ್ಣೋಟ ಇರುವ, ಪ್ರಜ್ಞೆ ಇರುವ ದನಿಯೆಂದು ಪರಿಗಣಿಸಲಾಗುತ್ತಿದೆ. ವಿಶಾಲ ಮನೋಭಾವದ ಮತ್ತು ಉನ್ನತ ರಾಜಕೀಯ ಪರಿಜ್ಞಾನವಿರುವ ಸುಶಿಕ್ಷಿತ ಸಮಾಜವಾಗಿರುವ ಕೇರಳ ಇಂಥಾ ನಾಯಕರನ್ನು ಅವರು ಯಾವ ರಾಜಕೀಯ ಪಕ್ಷಕ್ಕೆ ಸೇರಿದ್ದರೂ ಗೌರವದಿಂದ ಕಾಣುತ್ತದೆ. ಆದ್ದರಿಂದ ಅದೇ ಗೌರವ ಹಾಗೂ ಉನ್ನತ ನಿರೀಕ್ಷೆಯೊಂದಿಗೆ, ನಾನು ನಿಮ್ಮೆದುರು ಕೆಲವು ಸರಳ ಸತ್ಯಗಳನ್ನು ತೆರೆದಿಡಲು ಬಯಸುತ್ತೇನೆ.

ನೀವು ನಮ್ಮ ರಾಜ್ಯದ ರಾಜಧಾನಿ ತಿರುವನಂತಪುರಕ್ಕೆ ಮುಖ್ಯಮಂತ್ರಿಗಳು ಒಂದು ಸರ್ವಪಕ್ಷ ಸಭೆಯನ್ನು ಕರೆದಿರುವ ದಿನವೇ ಭೇಟಿ ನೀಡುತ್ತಿದ್ದೀರಿ. ರಾಜಕೀಯ ಹಿಂಸಾಚಾರವನ್ನು ನಿಲ್ಲಿಸಿ ಶಾಂತಿಯನ್ನು  ತರಲು ಮತ್ತು ಸೆಳೆತಗಳನ್ನು ನಿವಾರಿಸಲು ಈ ಸಭೆ ಕರೆಯಲಾಗಿದೆ. ಆದ್ದರಿಂದ ಕೆಲವು ಸದ್ಭಾವನೆಯ ಸಂಕೇತಗಳ ಮೂಲಕ ಶಾಂತಿ ಸ್ಥಾಪನೆಯ ಮುತುವರ್ಜಿಗಳಿಗೆ ನಿಮ್ಮ ದೂ ಕಾಣಿಕೆ ನೀಡುವ ಒಂದು ಐತಿಹಾಸಿಕ ಅವಕಾಶವನ್ನು ಪಡೆದಿದ್ದೀರಿ.  ರಾಜಧಾನಿಯೊಂದರಲ್ಲೇ  ಯಾವುದೇ ಪ್ರಚೋದನೆಯಿಲ್ಲದೆ ಬಿಜೆಪಿ-ಆರೆಸ್ಸೆಸ್ ಯೋಜಿಸಿ, ಕಾರ್ಯರೂಪಕ್ಕಿಳಿಸಿದ ಇತ್ತೀಚಿನ ಹಿಂಸಾತ್ಮಕ ಅತ್ಯಾಚಾರಗಳ ಸರಣಿಯಲ್ಲಿ 120 ಸಿಪಿಐ(ಎಂ) ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ, ನಮ್ಮ  ರಾಜ್ಯ ಕಾರ್ಯದರ್ಶಿ ಮತ್ತು ಹಿಂದೆ ರಾಜ್ಯದ ಗೃಹಮಂತ್ರಿಯೂ ಆಗಿದ್ದ ಕಾಂ.ಕೊಡಿಯೇರಿ ಬಾಲಕೃಷ್ಣನ್ ಸೇರಿದಂತೆ ಸಿಪಿಐ(ಎಂ) ಕಾರ್ಯಕರ್ತರು ಮತ್ತು ಮುಖಂಡರ 36 ಮನೆಗಳ ಮೇಲೆ ಹಲ್ಲೆ ಮಾಡಲಾಗಿದೆ ಮತ್ತು ತೀವ್ರ ಹಾನಿಗಳನ್ನುಂಟು ಮಾಡಲಾಗಿದೆ.

ಈ ವೇಳೆಗಾಗಲೇ ನಿಮಗೆ ಕಣ್ಣೂರು ಜಿಲ್ಲೆಯ ಒಬ್ಬ ಯುವತಿ ರಮ್ಯಾಳಿಂದ ಒಂದು ಪತ್ರ ಬಂದಿರಬೇಕು ಎಂದು ಭಾವಿಸುತ್ತೇನೆ. ಈಕೆ ಯಾರೂ ಊಹಿಸಲಾಗದ  ಮಾನಸಿಕ ಯಾತನೆಯ ಮೂಲಕ ಹಾದು ಹೋಗುತ್ತಿದ್ದಾಳೆ. ಆಕೆಯ ಗಂಡ , ಶ್ರೀಜನ್ ಬಾಬು, ಒಬ್ಬ ಆಟೋ ರಿಕ್ಷಾ ಡ್ರೈವರ್, ಆತನ ದುಡಿಮೆಯೇ ಅ ಬಡಕುಟುಂಬಕ್ಕೆ ಏಕೈಕ ಆಧಾರ. ನಿಮ್ಮ ಸಂಘ ಪರಿವಾರದ ಸದಸ್ಯರು  ಆತನ ಮೇಲೆ ಅತ್ಯಂತ ಬರ್ಬರ ಹಲ್ಲೆ ಮಾಡಿದರು.  ಕಳೆದ 33 ದಿನಗಳಿಂದ ಆತ ಆಸ್ಪತ್ರೆಯಲ್ಲಿದ್ದಾನೆ, ಹತ್ತಾರು ಸರ್ಜರಿಗಳ ಮೂಲಕ ಆತನ ದೇಹವನ್ನು ಹೊಲೆದಿಡಲಾಗಿದೆ. ಆತ ಇನ್ನೆಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕಾದೀತು, ಅಥವ ಜೀವನವಿಡೀ ಹಾಸಿಗೆಯಲ್ಲೆ ಕಳೆಯಬೇಕಾದೀತೇ ಎಂದು ಹೇಳುವ ಸ್ಥಿತಿಯಲ್ಲಿ ಡಾಕ್ಟರುಗಳು ಈಗಲೂ ಇಲ್ಲ. ಇದು ಕೇವಲ ಶ್ರೀಜನ ಬಾಬುವಿನ ಕತೆಯಷ್ಟೇ ಅಲ್ಲ. ಕಳೆದ ಒಂದು ವರ್ಷದಲ್ಲೇ ಆರೆಸ್ಸೆಸ್-ಬಿಜೆಪಿ ಶಕ್ತಿಗಳಿಂದ 400ಕ್ಕೂ ಹೆಚ್ಚು ಸಿಪಿಐ(ಎಂ) ಕಾರ್ಯಕರ್ತರು ಗಂಭೀರ ಪರಿಸ್ತಿತಿಯಲ್ಲಿದ್ದಾರೆ. ಈ ಅವಧಿಯ;ಲ್ಲಿ ಆರೆಸ್ಸೆಸ್ ಮಂದಿಯಿಂದ 13 ಸಿಪಿಐ(ಎಂ) ಕಾರ್ಯಕರ್ತರು ಮತ್ತು ಇತರರು ಹತರಾಗಿದ್ದಾರೆ.

ಕೆಲವಾದರೂ ರಾಷ್ಟ್ರೀಯ ಟೆಲಿವಿಶನ್ ಚಾನೆಲ್‍ಗಳ ವರದಿಗಾರರು ರಾಜಕೀಯ ಕೊಲೆಗಳ ಕುರಿತು ಸತ್ಯವನ್ನು ಹೊರ ತರುವ ಧೈರ್ಯ ಮಾಡಿದ್ದಾರೆ, ಇದು ಸಂಘ ಪರಿವಾರ ಹೆಣೆದು ಹರಡಿರುವ ಸುಳ್ಳುಗಳನ್ನು ಕೆಡವಿ ಹಾಕಿವೆ. ಅವುಗಳಲ್ಲಿ ಒಂದರತ್ತ ನಿಮ್ಮ ಗಮನ ಸೆಳೆಯ ಬಯಸುತ್ತೇನೆ. 2000 ಮತ್ತು 2017ರ ನಡುವಿನ ಅಪರಾಧ ಮಾಹಿತಿಗಳನ್ನು ಆಧರಿಸಿದ ಈ ವರದಿ 86 ಸಿಪಿಐ(ಎಂ) ಮತ್ತು 65 ಆರೆಸ್ಸೆಸ್-ಬಿಜೆಪಿ ಕಾರ್ಯಕರ್ತರು ಜೀವ ಕಳಕೊಂಡಿದ್ದಾರೆ ಎಂದಿದೆ.

ಈ ನೈಜ ಅಂಕಿ-ಅಂಶಗಳು ಕೇರಳದಲ್ಲಿ ಏಕಪಕ್ಷೀಯವಾಗಿ ಆರೆಸ್ಸೆಸ್ ಮೇಲಷ್ಟೇ ಗುರಿಯಟ್ಟ ದಾಳಿಗಳು ನಡೆಯುತ್ತಿವೆ ಎಂಬ ಮಿಥ್ಯೆಯನ್ನು ಸ್ಫೋಟಗೊಳಿಸುತ್ತದೆ, ಇಲ್ಲಿನ ರಾಜಕೀಯ ಹಿಂಸಾಚಾರದ ಸತ್ಯವನ್ನು ಹೊರಗೆಡಹುತ್ತದೆ. ಆರೆಸ್ಸೆಸ್‍ನ ಅತಿ ಹೆಚ್ಚು ಶಾಖೆಗಳು ಇರುವುದು ಮೋದೀಜೀಯವರ ಗುಜರಾತಿನಲ್ಲೂ ಅಲ್ಲ, ಯೋಗೀಜೀಯವರ ಉತ್ತರಪ್ರದೇಶದಲ್ಲೂ ಅಲ್ಲ, ಎಡ ಆಳ್ವಿಕೆಯ ಕೇರಳದಲ್ಲೇ ಅತಿ ಹೆಚ್ಚು. ಅವರೇ ಒಪ್ಪಿಕೊಂಡಿರುವ ಈ ಒಂದು ಸಂಗತಿಯೇ ಅವರ ಪ್ರಜಾಪ್ರಭುತ್ವ ಹಕ್ಕನ್ನು ಉಲ್ಲಂಘಿಸಲಾಗುತ್ತಿದೆ ಎಂಬ  ತರ್ಕವನ್ನು ಬಯಲಿಗೆಳೆಯಲು  ಸಾಕು.

ವಿವಿಧ ಅಪರಾಧಗಳ ಅಂಕಿ-ಅಂಶಗಳು ಕೇರಳ ಉತ್ತಮವೇ,ಅಥವ ನಿಮ್ಮ ಪಕ್ಷ ಅಧಿಕಾರದಲ್ಲಿರುವ ಉತ್ತರ ಪ್ರದೇಶ, ಅಥವ ಮಧ್ಯಪ್ರದೇಶ ಅಥವ ಗುಜರಾತ್ ಉತ್ತಮವೇ ಎಂಬುದನ್ನು ಹೇಳುತ್ತವೆ. ಈ ರಾಜ್ಯಗಳಲ್ಲಿನ ಅಪರಾಧಗಳು ಮತ್ತು ಅತ್ಯಾಚಾರಗಳು ರಾಷ್ಟ್ರೀಯ ಟೆಲಿವಿಶನ್‍ಗಳಲ್ಲಿ ಪ್ರೈಮ್‍ಟೈಮ್ ಚರ್ಚೆಗಳ ವಿಷಯಗಳಾಗಿಲ್ಲ. ಉತ್ತರ ಪ್ರದೇಶ  ವಿಧಾನಸಭೆಯಲ್ಲಿ  18.07.2017ರಂದು ನೀಡಿದ ಒಂದು ಅಧಿಕೃತ ಉತ್ತರ ಯೋಗೀಜೀ ಅಧಿಕಾರಕ್ಕೆ ಬಂದ ನಂತರ ಎರಡೇ ತಿಂಗಳಲ್ಲಿ 729 ಕೊಲೆಗಳು ಮತ್ತು 803 ಮಾನಭಂಗಗಳು ನಡೆದಿವೆ ಎಂಬ ಆಘಾತಕಾರಿ ಅಂಕಿ-ಅಂಶ ಮಾಧ್ಯಮಗಳಲ್ಲಿ ಯಾವುದೇ  ಆರ್ಭಟವನ್ನು ಉಂಟು ಮಾಡಲಿಲ್ಲ! ವಿಫಲಗೊಂಡಿರುವ ರಾಜ್ಯಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನಾನು ಹೇಳಬೇಕಾಗುತ್ತದೆ. ಆದರೆ ಕೇರಳದಂತಹ ನೂರಕ್ಕೆ ನೂರು ಸಾಕ್ಷರ ಮತ್ತು ಸದಾ ದೇಶದಲ್ಲಿ ಬೆಳಗುವ ರಾಜ್ಯದಲ್ಲಿ ಆಗೊಮ್ಮೆ ಈಗೊಮ್ಮೆ ನಡೆಯುವ ಮತ್ತು ಸಣ್ಣ ಪುಟ್ಟ ಘಟನೆಗಳು ಗಂಭೀರ ಆತಂಕವನ್ನು ಉಂಟು ಮಾಡುತ್ತವೆ. ನಮಗೂ ಈ ಬಗ್ಗೆ ಬಹಳಷ್ಟು ಪ್ರಜ್ಞೆಯಿದೆ, ಆರೆಸ್ಸೆಸ್‍ನಂತಲ್ಲದೆ, ಸಿಪಿಐ(ಎಂ) ಒಂದು ಜವಾಬ್ದಾರಿಯುತ ರಾಜಕೀಯ ಪಕ್ಷ, ನಮ್ಮ ಸರಕಾರ ಈಗಾಗಲೇ ಹಿಂಸಾಚಾರವನ್ನು ಶಾಶ್ವತವಾಗಿ ಕೊನೆಗೊಳಿಸಲು ಅಗತ್ಯ ಹೆಜ್ಜೆಗಳನ್ನು ಇಟ್ಟಿದೆ.

ನಾನು ಈ ಮಾಹಿತಿಗಳನ್ನು ಉದ್ಧರಿಸುತ್ತಿರುವುದು  ಕೊಲೆಗಳನ್ನು ಸಮರ್ಥಿಸಲು ಅಲ್ಲ, ಅಥವ ಹೊಲಸು ಆಟವೊಂದರಲ್ಲಿ ತೊಡಗಲು ಅಲ್ಲ, ಬದಲಿಗೆ, ‘ಕೆಂಪು ಭಯೋತ್ಪಾದನೆ’ ಎಂಬ ಕಥನವನ್ನು ಹೆಣೆಯುವ ಮತ್ತು ಆರೆಸ್ಸೆಸ್-ಬಿಜೆಪಿಯ ಮುಗ್ಧತೆಯ ನಟನೆಯ ಗೋಸುಂಬೆತನವನ್ನು ನಿಮಗೆ ಮನವರಿಕೆ ಮಾಡಿಕೊಡುವುದಕ್ಕಷ್ಟೇ. gಕ್ತದಿಂದ ತೊಯ್ದ ಕೈಗಳನ್ನು ಹಿಡಿದುಕೊಂಡು ನಾವು ಪೀಡಿತರಷ್ಟೇ ಎಂದು ಹೇಳಿ ಕೊಳ್ಳಲು ಸಾಧ್ಯವಿಲ್ಲ.

ನೀವು ಆರೆಸ್ಸೆಸ್ ಹಲ್ಲೆಗೊಳಗಾಗಿರುವ ಈ ಎಲ್ಲ ಕುಟುಂಬಗಳನ್ನು ಅಥವ ಸ್ಥಳಗಳಿಗೆ ಭೇಟಿ ನೀಡಬೇಕೆಂದೇನೂ ನಾನು ನಿರೀಕ್ಷಿಸುವುದಿಲ್ಲ. ಅದು ಸಾಧ್ಯವೂ ಇಲ್ಲ. ಆದರೆ ಕೇರಳ ಸರಕಾರ ಮುತುವರ್ಜಿ ವಹಿಸಿರುವ ಶಾಂತಿ ಮಾತುಕತೆಗಳ ಮೊದಲು ಒಂದು ಸಕಾರಾತ್ಮಕ ಸಂದೇಶ ನೀಡಬೇಕೆಂಬ ಪ್ರಾಮಣಿಕ ಇಚ್ಛೆ ನಿಮಗಿದ್ದರೆ ಕಾಂ. ವಿಷ್ಣು ಅವರನ್ನು ಕಳಕೊಂಡ ಕುಟುಂಬವನ್ನಾದರೂ ಭೇಟಿ ಮಾಡಿ. ಆತನನು ಹಾಡುಹಗಲೇ, ನಗರದ ಮಧ್ಯದಲ್ಲೇ ಆರೆಸ್ಸೆಸ್ ಮಂದಿ ಅಮಾನುಷವಾಗಿ ಕೊಚ್ಚಿ ಸಾಯಿಸಿದರು. ಇಂತಹ ಇನ್ನೂ ಹಲವಾರು ಉದಾಹರಣೆಗಳನ್ನು ನಿಮಗೆ ನೀಡಬಲ್ಲೆ.

ನಿಮ್ಮ ಆರೆಸ್ಸೆಸ್ ಯಜಮಾನರುಗಳು ಅವರು ಕೊಂದಿರುವ ಯಾವುದೇ ಸಿಪಿಐ(ಎಂ) ಕಾರ್ಯಕರ್ತರ ಕುಟಂಬವನ್ನು ಭೇಟಿ ಮಾಡಲು ನಿಮಗೆ ಬಿಡುವುದಿಲ್ಲ ಎಂಬುದು ಖಂಡಿತವಾಗಿ ನನಗೆ ಗೊತ್ತು. ಆದರೆ ನನ್ನದೊಂದು ಸವಿನಯ ಸೂಚನೆ. ನಿಮಗೆ ಸಾಧ್ಯವಿದ್ದರೆ, ಇಬ್ಬರು ಹದಿಹರೆಯದ ಆರೆಸ್ಸೆಸ್ ಕಾರ್ಯಕರ್ತರ ಕುಟುಂಬಗಳಿಗೆ ಸಾಂತ್ವನ ಹೇಳಲು ಸ್ವಲ್ಪ ಪುರುಸೊತ್ತು ಮಾಡಿÀಕೊಳ್ಳಿ. ಈ ಇಬ್ಬರು, ಅಲೆಪ್ಪಿ ಜಿಲ್ಲೆಯ ಅನಂತು ಮತ್ತು ತ್ರಿಶೂರ್ ಜಿಲ್ಲೆಯ ನಿರ್ಮಲ್ ನಿಯಮಿತವಾಗಿ ಶಾಖೆಗಳಿಗೆ ಹೋಗುತ್ತಿದ್ದರು. ಅವರಿಬ್ಬರನ್ನೂ ಅವರ ಆರೆಸ್ಸೆಸ್ ಸಹಯೋಗಿಗಳೇ ಅಮಾನುಷವಾಗಿ ಮುಗಿಸಿ ಬಿಟ್ಟರು! ಈ ಇಬ್ಬರ ಹೆಸರುಗಳು ನಿಮ್ಮ ಪಕ್ಷದ ಎಂಪಿಗಳು ಸಂಸತ್ತಿನಲ್ಲಿ ಓದಿ ಹೇಳಿದ ಪಟ್ಟಿಯಲ್ಲಿ ಏಕೆ ಕಂಡಿಲ್ಲ ಎಂದು ಅವರನ್ನು ದಯವಿಟ್ಟು ಕೇಳಬಲ್ಲಿರಾ? ತಮ್ಮ ಸಹಯೋಗಿಗಳನ್ನೇ ಕೊಂದುದಕ್ಕಾಗಿ ಬಂಧಿತರಾಗಿರುವ ಯಾವುದೇ ಆರೆಸ್ಸೆಸ್ ಅಥವ ಬಿಜೆಪಿ ಕಾರ್ಯಕರ್ತರ ವಿರುದ್ಧ ಶಿಸ್ತು ಕ್ರಮವನ್ನು ಏಕೆ ಕೈಗೊಂಡಿಲ್ಲ?

ಈ ಪತ್ರವನ್ನು ಮುಗಿಸುವ ಮೊದಲು ಆರೆಸ್ಸೆಸ್ ನಮ್ಮ ರಾಜ್ಯದ ವಿರುದ್ಧ ಬಹಳ ಚಾಕಚಕ್ಯತೆಯಿಂದ ಯೋಜಿಸಿ ಹರಿಯ ಬಿಟ್ಟಿರುವ ಪ್ರಚಾರದತ್ತ ನಿಮ್ಮ ಗಮನ ಸೆಳೆಯ ಬಯಸುತ್ತೇನೆ. ಇಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕೆಂಬ ಅವರ ಬೇಡಿಕೆಯಿಂದ ಅವರ ಆಶಯಗಳು ಈಗ ಸ್ಪಷ್ವವಾಗಿ ಕಾಣುತ್ತವೆ. ಆದರೆ ಈ ಸಂಕುಚಿತ ರಾಜಕೀಯ ಉದ್ದೇಶವನ್ನು ಸಾಧಿಸಲು ಅವರು ಕೇರಳದ ಇತಿಹಾಸವನ್ನು ಮಾತ್ರವಲ್ಲ, ಸಾಮಾಜಿಕ-ಆರ್ಥಿಕ ಸಾಧನೆಗಳ ಭವ್ಯ ಮತ್ತು ಅತ್ಯುತ್ತಮ ದಾಖಲೆಗಳನ್ನೂ ಹೀಗಳೆದಿದ್ದಾರೆ.

ರಾಜಕೀಯ ಹತಾಶೆಯಿಂದ ಈ ರಾಜ್ಯವನ್ನು ಹೀಯಾಳಿಸುವ ತಂತ್ರಗಳನ್ನು ಮೊದಲು ಹರಿಬಿಟ್ಟವರು  ಬೇರಾರೂ ಅಲ್ಲ, ಸ್ವತಃ ಪ್ರಧಾನ ಮಂತ್ರಿಗಳೇ, ಕಳೆದ ವಿಧಾನಸಭಾ ಚುನಾವಣೆಗಳ ವೇಳೆಯ ಭಾಷಣದಲ್ಲಿ ಕೇರಳವನ್ನು ಸೊಮಾಲಿಯಾದೊಂದಿಗೆ ಹೋಲಿಸುವುದರೊಂದಿಗೆ. ಈ ಹೇಳಿಕೆಗೆ ವಿಶ್ವಾದ್ಯಂತದಿಂದ ಕೇರಳೀಯರು ಬೃಹತ್ ಪ್ರಮಾಣದಲ್ಲಿ ಪ್ರತಕ್ರಿಯಿಸಿದ್ದನ್ನು ಕಂಡಾದರೂ ನೀವೇಕೆ ಪಾಟ ಕಲಿತಿಲ್ಲ ಎಂದು ನನಗೆ ಆಶ್ಚರ್ಯವಾಗುತ್ತದೆ. ಆನಂತರ ನಿಮ್ಮ ತುತ್ತೂರಿಯಂತೆ ವರ್ತಿಸುತ್ತಿರುವ ಟೆಲಿವಿಶನ್ ವಾಹಿನಿಯೊಂದು ಕೇರಳವನ್ನು ಪಾಕಿಸ್ತಾನದೊಂದಿಗೆ ಸಮೀಕರಿಸಿದಾಗಲೂ ಮತ್ತೊಮ್ಮೆ ಆಕ್ರೋಶದ ಬಿಸಿಯನ್ನು ಎದುರಿಸಬೇಕಾಯಿತು. ಅದು ಬೇಗನೇ ತಮ್ಮ ಟಿಪ್ಪಣಿಯನ್ನು ಹಿಂತೆಗೆದುಕೊಂಡು ಬೇಷರತ್ ಕ್ಷಮೇ ಕೇಳಬೇಕಾಗಿ ಬಂತು.

ಕೇರಳದ ಜನತೆ, ರಾಜಕೀಯ ಭಿನ್ನಾಭಿಪ್ರಾಯಗಳೇನೇ ಇದ್ದರೂ, ತಮ್ಮ ಆತ್ಮಗೌರವಕ್ಕೆ  ಚ್ಯುತಿ ಬರಲು ಎಂದೂ ಬಿಡುವುದಿಲ್ಲ. ನಮ್ಮ ಆತ್ಮಗೌರವದ ಬೇರುಗಳು ಬ್ರಿಟಿಶ್ ಸಾಮ್ರಾಜ್ಯಶಾಹಿಯ ವಿರುದ್ಧ ಮತ್ತು ಪಾಳೆಯಗಾರೀ ಭೂಮಾಲಕರ ವಿರುದ್ಧ ಹೋರಾಟದ ನಮ್ಮ ಇತಿಹಾಸದಲ್ಲಿ ಕಾಣುತ್ತವೆ. ನಿಮಗೆ  ಇದು ಚೆನ್ನಾಗಿ ತಿಳಿದಿದೆ ಎಂದು ನನಗೆ ಗೊತ್ತಿದೆ. ಇಂತಹ ಹೆಮ್ಮೆಯ ಇತಿಹಾಸವನ್ನು ಹೊಂದಿರದವರು ಇದನ್ನು ಸುಲಭವಾಗಿ ಅರಗಿಸಿಕೊಳ್ಳಲಾರರು. ಸಂಘ ಪರಿವಾರದ ಅಳತೆಗೋಲು ಈ ರಾಜ್ಯ ಮತ್ತು ನಮ್ಮ ಪ್ರಗತಿಶೀಲ ಸಮಾಜವನ್ನು ಅಳೆಯಲು ಏನೇನೂ ಸಾಲದು. ಈ ರಾಜ್ಯ ಎಲ್ಲ ರಂಗಗಳಲ್ಲೂ ಭಾರತದಲ್ಲಿ ಇತರೆಲ್ಲರಿಗಿಂತ ಬಹಳ ಮುಂದಿದೆ ಎಂದು ಹೆಮ್ಮೆಯಿಂದ ಹೇಳಬಲ್ಲೆ. ಈ ಅಂಶವನ್ನು ಸಾಬೀತು ಮಾಡಲು ಎನ್‍ಸಿಆರ್‍ಬಿ(ರಾಷ್ಟ್ರೀಯ ಅಪರಾಧ ದಾಖಲೆಗಳ ಮಂಡಳಿ) ಮತ್ತು ಎನ್‍ಎಫ್‍ಹೆಚ್‍ಎಸ್( ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆ) ಮಾಹಿತಿಗಳನ್ನು ಲಗತ್ತಿಸಿದ್ದೇನೆ.

ಅಂತಿಮವಾಗಿ, ನಮ್ಮ ದೇಶದ ಒಬ್ಬ ಅತಿ ಹಿರಿಯ ಮುಖಂಡರಾಗಿ ನೀವು ಅಲ್ಪ ರಾಜಕೀಯ ಪರಿಗಣನೆಗಳಿಂದ ಮೇಲೆದ್ದು ನಿಂತು ಪ್ರಶ್ನೆಗಳನ್ನು ಪರಿಹರಿಸುವಲ್ಲಿ ಒಂದು ಜವಾಬ್ದಾರಿಯುತ ಪಾತ್ರವನ್ನು ವಹಿಸುತ್ತೀರಿ ಎಂದು ಆಶಿಸುತ್ತೇನೆ. ಶಾಂತಿ ಪ್ರಕ್ರಿಯೆಯಲ್ಲಿ ಹೃದಯಾಂತರಾಳದಿಂದ ಭಾಗವಹಿಸಿ ಎಂದು ನಿಮ್ಮ ಸಹಯೋಗಿಗಳಿಗೆ ಸಲಹೆ ನೀಡಿ ಎಂಬುದು ನನ್ನ ಕೋರಿಕೆ.  ಪ್ರತಿಯೊಂದು ಮಾನವ ಜೀವದ ಹಾನಿ-ಅವರು ಯಾವುದೇ ಪಕ್ಷಕ್ಕೆ ಸೇರಿದ್ದರೂ- ಖೇದಕರ ಸಂಗತಿ. ರಾಜಕೀಯ ವಿಚಾರಗಳ ಸಂಘರ್ಷವಾಗಲಿ, ಆಯುಧಗಳದ್ದಲ್ಲ. ಅದನ್ನು ಖಾತ್ರಿಪಡಿಸಲು ಒಟ್ಟಾಗಿ ಶ್ರಮಿಸೋಣ.

ಸಂಸತ್ತಿನಲ್ಲಿ ಆಗಸ್ಟ್ 8, 2017ರಂದು ಅಧಿವೇಶನದ ಪುನರಾರಂಭದಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ.

ನಿಮ್ಮ ವಿಶ್ವಾಸಿ

ಎಂ ಬಿ ರಾಜೇಶ್, ಸಂಸತ್ ಸದಸ್ಯ.